| ಉಜ್ಜಿನಿ ರುದ್ರಪ್ಪ
ಒಬ್ಬ ಋಷಿ ದಟ್ಟಕಾಡಿನಲ್ಲಿ ದಾರಿ ತಪ್ಪಿದರು. ನಡೆದು, ನಡೆದು ಅವರ ಕಾಲು ಸೋತಿವೆ. ಕುಡಿಯಲು ನೀರಿಲ್ಲ. ತಿನ್ನಲು ಏನಿಲ್ಲ. ಹಸಿವು ಕ್ಷಣ-ಕ್ಷಣಕ್ಕೂ ಹೆಚ್ಚಾಗುತ್ತಿದೆ. ಇನ್ನು ಸಾವೇ ಗತಿ ಎಂದು ಚಿಂತಿಸುತ್ತಿರುವಾಗ ದೂರದಲ್ಲಿ ಬೇಟೆಗಾರ ಹುಡುಗನೊಬ್ಬ ಬರುತ್ತಿರುವುದು ಕಾಣಿಸಿತು. ಆತ ಹತ್ತಿರ ಬಂದವನೇ, ‘ನಿಮ್ಮನ್ನು ಕ್ಷಿಪ್ರ ನದಿತೀರದ ಗುರುಕುಲದಲ್ಲಿ ನೋಡಿದ್ದೆ. ತಾವು ರಾಜರು, ಮಂತ್ರಿಗಳ ಮಕ್ಕಳಿಗೆ ಶಸ್ತ್ರ, ಶಾಸ್ತ್ರ ವಿದ್ಯೆಗಳನ್ನು ಕಲಿಸಿಕೊಡುವ ತ್ರಿಮೂರ್ತಿ ಋಷಿಗಳಲ್ಲವೆ?’ ಎಂದು ಪ್ರಶ್ನಿಸಿದ. ‘ಹೌದು ನಾನೇ. ನನಗೆ ತಕ್ಷಣ ಕುಡಿಯಲು ನೀರು, ತಿನ್ನಲು ಏನಾದರೂ ತಂದು ಕೊಟ್ಟು ಜೀವ ಉಳಿಸು’ ಎಂದರು ಋಷಿಗಳು. ಆತ ಕಾಡಿನೊಳಗೆ ಹೋಗಿ ಕೆಲವೇ ನಿಮಿಷಗಳಲ್ಲಿ ಮಡಿಕೆಯಲ್ಲಿ ನೀರು, ಬಾಳೆಗೊನೆ, ಹಣ್ಣುಗಳನ್ನು ತಂದ. ಬೇಗನೆ ನೀರು, ಹಣ್ಣುಗಳನ್ನು ಕೊಡುವಂತೆ ಋಷಿಗಳು ಕೈಚಾಚಿದರು.
ಬೇಟೆಗಾರ, ‘ಗುರುಗಳೇ, ನಾನು ನೀಚಕುಲದವನು. ತಾವು ರಾಜರು, ಮಂತ್ರಿಗಳ ಮಕ್ಕಳಿಗೆ ವಿದ್ಯೆ ಕಲಿಸುವ ಶ್ರೇಷ್ಠರು. ಸಕಲ ವಿದ್ಯಾಪಂಡಿತರು. ನನಗೆ ಸಂಸ್ಕಾರವಿಲ್ಲ. ವಿದ್ಯೆಯ ಗಂಧಗಾಳಿಯೂ ಇಲ್ಲ. ನಾನೇನಾದರೂ ತಮಗೆ ನೀರು, ಹಣ್ಣುಗಳನ್ನು ಕೊಟ್ಟರೆ ನಿಮ್ಮ ಜಾತಿಗೆ ಕಳಂಕ ಬರುತ್ತದೆ. ನಾನು ಪರಮಪಾಪಿಯಾಗುತ್ತೇನೆ. ಅಂದು ನಾನು ನಿಮ್ಮಲ್ಲಿ ವಿದ್ಯೆ ಕಲಿಯಲು ಬಂದಾಗ, ‘ನಿನ್ನಂಥ ಸಂಸ್ಕಾರಹೀನನಿಗೆ ಶಿಕ್ಷಣ ಹೇಳಿಕೊಡುವುದಿಲ್ಲ’ ಎಂದು ಗುರುಕುಲದಿಂದ ಹೊರದಬ್ಬಿದ್ದಿರಿ. ಹಾಗಂತ ತಮ್ಮ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ನನ್ನಿಂದ ನಿಮಗೆ ಅಪಚಾರವಾಗಬಾರದು. ತಾವು ಕಲಿತ ವಿದ್ಯೆಯಿಂದ ನೀರು, ಹಣ್ಣುಗಳನ್ನು ಸೃಷ್ಟಿಸುವುದಿದ್ದರೆ ಸೃಷ್ಟಿಸಿಕೊಳ್ಳಿ’ ಎಂದ.
‘ನಿನ್ನ ಕಣ್ಮುಂದೆ ನನ್ನ ಜೀವಹೋದರೆ ಆ ಪಾಪವೂ ನಿನಗೆ ಬರುತ್ತದೆ, ಎಚ್ಚರವಿರಲಿ. ಅಷ್ಟಕ್ಕೂ, ಇದು ತರ್ಕ, ವಾದ ಮಾಡುವ ಸಮಯವಲ್ಲ’ ಎಂದರು ಋಷಿಗಳು. ಆಗ ಮರು ಮಾತನಾಡದೆ ನೀರು, ಹಣ್ಣುಗಳನ್ನು ಕೊಟ್ಟ ಬೇಟೆಗಾರ ಯುವಕ. ಸುಧಾರಿಸಿಕೊಂಡ ಬಳಿಕ ಋಷಿಗಳು ಆತನನ್ನು ಹತ್ತಿರಕ್ಕೆ ಕರೆದು, ಪಕ್ಕದಲ್ಲಿ ಕೂರಿಸಿಕೊಂಡು- ‘ನಾನು ಹಲವಾರು ವಿದ್ಯೆಗಳನ್ನು ಕಲಿತಿದ್ದೇನೆ, ನಿಜ. ಈ ದಿನ ನಿನ್ನಿಂದ ಮತ್ತೊಂದು ವಿದ್ಯೆ ಕಲಿತೆ ಕಣಪ್ಪ’ ಎಂದರು. ಈತನಿಗೆ ಅಚ್ಚರಿ. ‘ನನ್ನಿಂದ ಅದೇನು ವಿದ್ಯೆ ಕಲಿತಿರಿ ಗುರುಗಳೇ?’ ಎಂದಾಗ ತ್ರಿಮೂರ್ತಿ ಋಷಿಗಳು, ‘ಎಷ್ಟು ವಿದ್ಯೆ ಕಲಿತರೇನು ಮಾನವೀಯತೆ ದೊಡ್ಡದು. ಅದನ್ನು ಈ ದಿನ ನಿನ್ನಿಂದ ಕಲಿತೆ. ನನ್ನೊಂದಿಗೆ ನಮ್ಮ ಆಶ್ರಮಕ್ಕೆ ಬಾ. ಎಲ್ಲ ವಿದ್ಯೆಯನ್ನು ಧಾರೆ ಎರೆಯುವೆ’ ಎಂದಾಗ ಆ ಯುವಕ ಋಷಿಗಳ ಹಿಂದೆ ಹೆಜ್ಜೆ ಹಾಕಿದ. ಮನುಷ್ಯ ಎಷ್ಟೇ ವಿದ್ಯೆಗಳನ್ನು ಕಲಿತರೂ ಮಾನವೀಯತೆ ಮುಖ್ಯ. ವಿದ್ಯೆ ಎಂಬುದು ಅರಿವು, ಜ್ಞಾನ. ಆದರಲ್ಲಿ ಮೇಲು-ಕೀಳೆಂಬುದಿರಬಾರದು. ಆಗಲೇ ಕಲಿತ ವಿದ್ಯೆಗೆ ಶೋಭೆ.
(ಲೇಖಕರು ಪತ್ರಕರ್ತರು)
(ಪ್ರತಿಕ್ರಿಯಿಸಿ: manollasavv@gmail.com)