ವಿಜಯಪುರ:ನಿಂತ ನೀರಾಗಿದ್ದ ರಾಜ್ಯದ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ರೂಪ ಹಾಗೂ ಚೈತನ್ಯವನ್ನು ನೀಡಿದವರು ವಿಆರ್ಎಲ್ ಸಮೂಹ ಸಂಸ್ಥೆಯ ಚೇರ್ಮನ್ರಾದ ಡಾ. ವಿಜಯ ಸಂಕೇಶ್ವರ ಅವರು ಎಂದು ಸದಲಗಾ ಗೀತಾಶ್ರಮ ಶಿವಾನಂದಮಠದ ಡಾ. ಶ್ರದ್ಧಾನಂದ ಸ್ವಾಮೀಜಿ ಹೇಳಿದರು.
ನಗರದ ಜ್ಞಾನ ಯೋಗಾಶ್ರಮದ ಮಹಿಳಾ ಸಾಧಕಿಯರೊಂದಿಗೆ ವಿಜಯವಾಣಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಶ್ರೀಗಳು, ಪತ್ರಿಕೆಯ ಸ್ವರೂಪ ಬದಲಾಯಿಸುವುದರ ಜತೆ ಸಹಸ್ರಾರು ಯುವಕರಿಗೆ ಉದ್ಯೋಗ ನೀಡಿದ ಕೀರ್ತಿ ಸಂಕೇಶ್ವರರಿಗೆ ಸಲ್ಲುತ್ತದೆ ಎಂದರು.
ಪ್ರಪಂಚದಲ್ಲಿ ಟಿಸಿದ ವಿದ್ಯಮಾನಗಳನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸುವ ಪವಿತ್ರ ಕಾರ್ಯದಲ್ಲಿ ಪತ್ರಿಕೆಗಳು ನಿರತವಾಗಿದೆ. ಪತ್ರಿಕೆಯನ್ನು ಹೊರತರುವಲ್ಲಿ ಇರುವ ಶ್ರಮ, ಖರ್ಚು ಎಲ್ಲವನ್ನು ಗಮನಿಸಿದರೆ ಇದೊಂದು ಕ್ಲಿಷ್ಟಕರವಾದ ಅಪರೂಪದ ಸಮಾಜಮುಖಿ ಕೆಲಸ ಎಂದು ಶ್ಲಾಘಿಸಿದರು.
ಜನ ಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ವಿಜಯವಾಣಿ ದರ್ಶನ ವಿನೂತನ ಕಾರ್ಯಕ್ರಮದ ಮೂಲಕ ಪ್ರತಿ ಶುಕ್ರವಾರ ಪತ್ರಿಕೆ ಕಚೇರಿಗೆ ವಿಆರ್ಎಲ್ ಸೂಪರ್ ಬಸ್ನಲ್ಲಿ ಕರೆಸಿಕೊಂಡು, ಅವರಿಗೆ ಪತ್ರಿಕೆ ರೂಪುಗೊಳ್ಳುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಇಂದಿನ ಯುವ ಪೀಳಿಗೆಯಲ್ಲಿ ಓದುವ ಅಭಿರುಚಿ ಹೆಚ್ಚಿಸುತ್ತಿರುವುದು ಸಂತಸದಾಯಕ. ವಿಜಯವಾಣಿ ಪತ್ರಿಕಾಲಯ ಭೇಟಿ ನೀಡಿದ್ದು ನಮ್ಮೆಲ್ಲರ ಜ್ಞಾನ ವೃದ್ಧಿಗೆ ಸಹಕಾರಿಯಾಯಿತು ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ ಮಾತನಾಡಿ, ವಿಜಯವಾಣಿಯ ಇತಿಹಾಸ, ಸಮಾಜಮುಖಿ ಕಾರ್ಯಗಳು, ಶ್ರೀಸಾಮಾನ್ಯನ ಧ್ವನಿಯಾಗಿ ನಿರ್ವಹಿಸುತ್ತಿರುವ ಕಾರ್ಯಗಳು, ಸಮಾಜದ ಅಂಕುಡೊಂಕನ್ನು ತಿದ್ದುವ ವಿಧಾನಗಳನ್ನು ಎಳೆಎಳೆಯಾಗಿ ವಿವರಿಸಿ, ಒಂದು ಪತ್ರಿಕೆ ಹೊರ ತರುವಲ್ಲಿ ಇರುವ ಶ್ರಮದ ಪೂರ್ಣ ಪರಿಚಯ ಮಾಡಿಕೊಟ್ಟರು.
ಹಲವಾರು ಮಹಿಳೆಯರು ಪತ್ರಿಕಾ ಕ್ಷೇತ್ರದ ಹಲವು ಸವಾಲುಗಳು, ನಿರ್ವಹಿಸುವ ಬಗ್ಗೆ ಎಲ್ಲವನ್ನೂ ಸಂವಾದ ನಡೆಸಿ ಉತ್ತರ ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು. ವಿಆರ್ಎಲ್ ಸೂಪರ್ ಬಸ್ನಲ್ಲಿ ಆರಾಮವಾಗಿ ಬಂದದ್ದು ಯಾವುದೋ ಪಿಕ್ನಿಕ್ಗೆ ಹೋಗುವಷ್ಟು ಸಂತಸವಾಗಿತ್ತು ಎಂದರು.
ನಂತರ ವಿಜಯವಾಣಿ ಪತ್ರಿಕೆಯ ಮುದ್ರಣ ವಿಭಾಗದಕ್ಕೆ ಕರೆದೊಯ್ದು ಸಿಟಿಪಿ ವಿಭಾಗದಲ್ಲಿ ಪ್ಲೇಟ್ ಮೇಕಿಂಗ್, ಕಲರ್ ಕಾಂಬಿನೇಷನ್, ಪಂಚಿಂಗ್ ಮುಂತಾದ ಮಾಹಿತಿಯನ್ನು ತಿಳಿಸಿಕೊಡಲಾಯಿತು. ವಿಜಯವಾಣಿ ವಿದ್ಯಾರ್ಥಿಮಿತ್ರ ಮುದ್ರಣ ಆಗುವುದನ್ನು ಕಂಡು ಎಲ್ಲರೂ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಇಂತಹ ಅವಕಾಶ ಒದಗಿಸಿದ ವಿಜಯವಾಣಿ ಬಳಗಕ್ಕೆ ಎಲ್ಲರೂ ಕೃತಜ್ಞತೆ ಸಲ್ಲಿಸಿದರು.
ಶ್ರೀ ಜ್ಞಾನಯೋಗಾಶ್ರಮದ ಶ್ರೀ ಗುರುಲಿಂಗ ಸ್ವಾಮೀಜಿ, ಹಿರಿಯರಾದ ಎಂ.ಎಂ. ಅಂಗಡಿ ಹಾಗೂ ಐವತ್ತಕ್ಕೂ ಅಧಿಕ ಮಹಿಳಾ ಯೋಗ ಸಾಧಕಿಯರು ಉಪಸ್ಥಿತರಿದ್ದರು. ಜಾಹೀರಾತು ವಿಭಾಗದ ಮುಖ್ಯಸ್ಥ ಶ್ರೀಧರ ಜಾಧವ್, ನಿಖಿಲ್ ಹೊಳ್ದೂರು, ಮುದ್ರಣ ವಿಭಾಗದ ಮುಖ್ಯಸ್ಥ ಮಂಜುನಾಥ ಬಿ., ಪ್ರಸರಣ ವಿಭಾಗದ ಈರಣ್ಣ ಅವಟಿ, ಸಂತೋಷ ಗೋಡಿಕಟ್ಟಿ, ಈರಣ್ಣ ಹುಲ್ಲೂರು ಇತರರಿದ್ದರು.