ಆದರೆ, ಇತ್ತೀಚೆಗೆ ಹುಟ್ಟಿನಿಂದಲೇ ಆನುವಂಶೀಯತೆಯಿಂದಾಗಿ 10-12 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತ (Heart Attack) ಸಂಭವಿಸುತ್ತಿರುವುದು ಹೃದಯತಜ್ಞ ವೈದ್ಯರ ಹೆಚ್ಚಿನ ಗಮನ ಸೆಳೆದಿದೆ. ಇದಕ್ಕೆ ‘ಕೌಟುಂಬಿಕ ಹೆಚ್ಚಿದ ಕೊಲೆಸ್ಟರಾಲ್ ಬೇನೆ’ ಎನ್ನುವರು. (Familiar Hypercholesterolemia, FH). ಈ ಬೇನೆಯಲ್ಲಿ ದೇಹದಲ್ಲಿಯ ಕೊಬ್ಬಿನಾಂಶ (LDL- Cholesterol) ತೀವ್ರತರದಲ್ಲಿ ಹೆಚ್ಚಿದ್ದು, ಕೊರೊನರಿ ಹೃದಯ ರಕ್ತನಾಳಗಳನ್ನು, ಕೊಲೆಸ್ಟರಾಲ್ ಶೇಖರಣೆಯಿಂದ ಕಿರಿದಾಗಿಸಿ, ಗಟ್ಟಿಯಾಗಿಸಿ, ಹೃದಯಾಘಾತಕ್ಕೆ ಕಾರಣವಾಗುತ್ತದೆ. ಈ ಎಫ್ಎಚ್ ಬೇನೆ ಪ್ರತಿ 250 ಜನರಲ್ಲಿ ಒಬ್ಬರಿಗೆ ಇರುವ ಸಾಧ್ಯತೆ ಇದೆ. ಭಾರತದಲ್ಲಿ ಈ ಹೃದಯಬೇನೆಯ ಬಗ್ಗೆ ಸಾಕಷ್ಟು ಅಧ್ಯಯನಗಳಿಲ್ಲ. ಹೀಗಾಗಿ, ಇದು ಪತ್ತೆಯಾಗದೆ ಹೋಗುವ ಸಾಧ್ಯತೆ ಹೆಚ್ಚು. ಈ ಆನುವಂಶೀಯತೆಯಲ್ಲಿ ತಂದೆ ಅಥವಾ ತಾಯಿಗೆ ಈ ಜೀನ್ (gene) ತೊಂದರೆ ಇದ್ದಲ್ಲಿ, ಹುಟ್ಟುವ ಮಕ್ಕಳಲ್ಲಿ ನೂರಕ್ಕೆ ಐವತ್ತರಷ್ಟು ಮಕ್ಕಳಿಗೆ ಈ ಬೇನೆ ಮುಂದುವರಿಯುವುದು.
ಎಫ್ಎಚ್ ಬೇನೆಯು ಯಾವುದೇ ಮಕ್ಕಳಲ್ಲಿ, ತಂದೆ-ತಾಯಿಗಳಲ್ಲಿ, ಯುವಕರಲ್ಲಿ ಕಂಡುಬಂದರೆ ಕೊಲೆಸ್ಟರಾಲ್, ರಕ್ತ ಪರೀಕ್ಷೆಯ ಜೊತೆಗೆ ಕುಟುಂಬದ ಎಲ್ಲ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಸಾಮಾನ್ಯವಾಗಿ ಎಲ್ಡಿಎಲ್-ಕೊಲೆಸ್ಟರಾಲ್ 120 ಮಿಲಿಗ್ರಾಂ ಇದ್ದರೆ, ಈ ಮಕ್ಕಳಲ್ಲಿ 500 ಮಿಲಿಗ್ರಾಂಗಿಂತ ಹೆಚ್ಚು ಇರುವುದು!
ಎಫ್ಎಚ್ ಬೇನೆಯಲ್ಲಿ ಎರಡು ನಮೂನೆಗಳಿದ್ದು, ತೀವ್ರ ತರದ ಎಫ್ಎಚ್ 7-8 ವರ್ಷಗಳಲ್ಲಿ ಕಂಡುಬರುವುದು (Homozygous). ತೀವ್ರತರವಲ್ಲದ ಎಫ್ಎಚ್ (Heterozygous) 20-30 ವರ್ಷಗಳಲ್ಲಿ ಹೃದಯಾಘಾತವಾಗಿ ಕಂಡುಬರುವುದು. ಅದಕ್ಕೆಂದೇ ಯುವಕರಲ್ಲಿ ಹೃದಯಾಘಾತವಾದರೆ, ಎಲ್ಲ ಹೃದಯತಜ್ಞರು ಹೆಚ್ಚಿದ್ದ ಕೊಲೆಸ್ಟರಾಲ್ (LDL) ಬಗ್ಗೆ ವಿಶೇಷ ಗಮನ ಕೊಡಬೇಕು ಮತ್ತು ಇಡೀ ಕುಟುಂಬದ ಜನರನ್ನು ಕೊಲೆಸ್ಟರಾಲ್ ರಕ್ತಪರೀಕ್ಷೆಗೆ ಒಳಪಡಿಸಬೇಕು. ಎಫ್ ಎಚ್ ಬೇನೆ ಇದ್ದವರಲ್ಲಿ ಚರ್ಮದ ಮೇಲೆ, ನೋವಿಲ್ಲದ ಚಿಕ್ಕ ಗಂಟುಗಳು ಕಂಡುಬರುವವು. ಕಣ್ಣಿನ ಸುತ್ತಲೂ ಹಳದಿ ವರ್ಣದ ಕಲೆಗಳು ಕಾಣುವವು (Xanthelasma).
ಚಿಕಿತ್ಸೆಗಾಗಿ ಕೊಲೆಸ್ಟರಾಲ್ ಕಡಿಮೆ ಮಾಡುವ ಸ್ಟ್ಯಾಟಿನ್ (Statins) ಮತ್ತು ಇತ್ತೀಚೆಗೆ ಲಭ್ಯವಿರುವ PCSK9i ಇಂಜಕ್ಷನ್ ಉಪಯೋಗಿಸಲ್ಪಡುವುದು. ನಮ್ಮ ಲಿಪಿಡ್ ಅಸೋಸಿಯೇಷನ್ನಲ್ಲಿ (Lipid Association of India, LAI) 56ಕ್ಕೂ ಮೇಲ್ಪಟ್ಟು ಹೆಚ್ಚು ತೀವ್ರತೆಯ (Homozygous) ರೋಗಿಗಳಿದ್ದು, ಅವರನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುತ್ತೇವೆ. ಬಡವರಿದ್ದಲ್ಲಿ ನಮ್ಮ ಶಾಖೆಗೆ ತಿಳಿಸಿದಲ್ಲಿ, ಜೀನ್ (gene) ಪರೀಕ್ಷೆಯನ್ನು ಕೂಡ ಉಚಿತವಾಗಿ ಮಾಡಲಾಗುವುದು ಹಾಗೂ ಸ್ಟ್ಯಾಟಿನ್ ಕೂಡ ಪೂರೈಸಲಾಗುವುದು. ಔಈಔಇ ಕೊಲೆಸ್ಟರಾಲ್ 160 ಎಂ.ಜಿ.ಗಿಂತ ಹೆಚ್ಚಿದ್ದಲ್ಲಿ, ಯುವಕರಲ್ಲಿ ಹೃದಯಾಘಾತವಾದಲ್ಲಿ ಎಫ್ಎಚ್ ಬೇನೆಯನ್ನು ಧ್ಯಾನದಲ್ಲಿಡಬೇಕು.
ಕವಾಸಾಕಿ ಬೇನೆ: (Kawasaki Disease): ಕೋವಿಡ್ ಸೋಂಕಿನಿಂದಾಗಿ ಈ ಬೇನೆಯು ಮಕ್ಕಳಲ್ಲಿ ಹೆಚ್ಚು ಬೆಳಕಿಗೆ ಬಂದಿದೆ. ಐದು ವರ್ಷದ ಒಳಗಿನ ಮಕ್ಕಳಲ್ಲಿ ತೀವ್ರತರ ಜ್ವರದಿಂದ ಪ್ರಾರಂಭವಾಗಿ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಕೊರೊನರಿ ರಕ್ತನಾಳಗಳು ಹಾನಿಗೊಳಗಾದಾಗ ಹೃದಯವು ಕೂಡ ತೊಂದರೆ ಅನುಭವಿಸುತ್ತದೆ. ಈ ಬೇನೆಯಿಂದ ಗುಣವಾಗುವ ಸಾಧ್ಯತೆ ಬಹಳ ಇದ್ದು, ಎಂಟು ವಾರಗಳಲ್ಲಿ ಹೃದಯ ಮೊದಲಿನ ಸ್ಥಿತಿಗೆ ಬರುತ್ತದೆ. ಮಕ್ಕಳಲ್ಲಿಯ ಜ್ವರವನ್ನು ಅಲಕ್ಷಿಸಕೂಡದು.