ಅಂಕಣ

ಕಸಾಪ ಚುನಾವಣೆ, ಹೇಗಿದರ ಸುಧಾರಣೆ?; ವಾಮಮಾರ್ಗ, ಜಾತಿ-ಹಣ ಬಳಕೆಗೆ ಇಲ್ಲವೇ ಕೊನೆ?

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆ ಮೇ 9ರಂದು ನಡೆಯಲಿದೆ. ಯಾವುದೇ ಸಾರ್ವತ್ರಿಕ ರಾಜಕೀಯ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೆಯುತ್ತಿದೆ ಇದರ ಪ್ರಚಾರ ಭರಾಟೆ. ಸಾಮಾನ್ಯ ರಾಜಕೀಯದಲ್ಲಿ ಕಂಡುಬರುವ ಎಲ್ಲ ಅಂಶಗಳು ಇದರಲ್ಲೂ ಕಂಡುಬರುತ್ತಿವೆ. ಸಾರಸ್ವತ ಲೋಕದ ಸಂಸ್ಥೆಯೊಂದಕ್ಕೆ ಇಷ್ಟೆಲ್ಲ ಅಬ್ಬರ ಬೇಕೆ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.

| ರಮೇಶ ದೊಡ್ಡಪುರ

ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಮೈಸೂರು ರಾಜ್ಯವನ್ನು ವಶಪಡಿಸಿಕೊಂಡ ಮೇಲೆ 1881ರಲ್ಲಿ ಚಾಮರಾಜೇಂದ್ರ ಒಡೆಯರ್ ಪಟ್ಟಕ್ಕೆ ಬಂದರು. ಆಗಿನಿಂದ ದಿವಾನರ ಆಡಳಿತ ಪ್ರಾರಂಭವಾಯಿತು. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಕಾಲದಲ್ಲಿ ಅಂದರೆ 1912ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ದಿವಾನರಾದರು. ಇದಕ್ಕೂ ಮುನ್ನ ಚೀಫ್ ಇಂಜಿನಿಯರ್ ಆಗಿದ್ದಾಗ, ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮೈಸೂರು ಸಂಪದಭಿವೃದ್ಧಿ ಸಮಾಜ (ಮೈಸೂರು ಎಕನಾಮಿಕ್ ಕಾನ್ಪರನ್ಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ಕೊಟ್ಟರು. ಅದನ್ನು ಮಹಾರಾಜರು ಒಪ್ಪಿದರು. ಅದರ ಅಂಗಗಳಾಗಿ ರಚನೆಯಾದ 3 ಸಮಿತಿಗಳಲ್ಲಿ ವಿದ್ಯಾಸಮಿತಿಯೂ ಒಂದು. ಅದಕ್ಕೆ ಎಚ್.ವಿ. ನಂಜುಂಡಯ್ಯ ಅಧ್ಯಕ್ಷರಾದರು. ಆ ಸಮಿತಿ ರೂಪಿಸಿದ 2 ಯೋಜನೆಗಳಲ್ಲಿ ಕನ್ನಡ ಅಕಾಡೆಮಿ ಅರ್ಥಾತ್ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಒಂದು. ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಯ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ 1915ರ ಮೇ 5ರಂದು ಈ ಸಂಸ್ಥೆ ಆರಂಭಗೊಂಡು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದೇ ಪ್ರಸಿದ್ಧಿಯಾಯಿತು. ಅಂತಹ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದೆ. ಚುನಾವಣೆ ಎಂದ ಕೂಡಲೇ ಗುಂಪುಗಾರಿಕೆ, ಆರೋಪ-ಪ್ರತ್ಯಾರೋಪ, ಪ್ರಚಾರದ ಭರಾಟೆ ಇರಬೇಕಾದ್ದೆ. ಆದರೆ ಇತ್ತೀಚಿನ ಒಂದೆರಡು ದಶಕಗಳಲ್ಲಿ ಕಸಾಪ ಚುನಾವಣೆ ಹೇಗೆ ನಡೆಯುತ್ತಿದೆ ಎಂದು ಗಮನಿಸಿದರೆ ಇದು ಕೂಡ ರಾಜಕೀಯ ಮೇಲಾಟದಂತಿದೆಯಲ್ಲ ಎನ್ನಿಸದೇ ಇರದು. ಸಾಹಿತ್ಯ ಪರಿಷತ್ತಿನ ಕೇಂದ್ರ ಹಾಗೂ ಜಿಲ್ಲಾ ಘಟಕಗಳ ಚುನಾವಣೆಗೆ ನಡೆಯುವ ಸಿದ್ಧತೆಯೇ ಹಾಗಿದೆ. ಗಾತ್ರದಲ್ಲಿ ಚಿಕ್ಕದಾದರೂ ಸ್ವರೂಪದಲ್ಲಿ ರಾಜಕೀಯ ಚುನಾವಣೆಗಳನ್ನು ಹೋಲುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಹಣದ ಹೊಳೆ: ಇತ್ತೀಚಿನ ವರ್ಷಗಳಲ್ಲಿ ಕಸಾಪ ಚುನಾವಣೆಯನ್ನು ಗಮನಿಸಿರುವ ಬಹುತೇಕರು ಹೇಳುವ ಮಾತಿದು. 2008ರ ಚುನಾವಣೆಯಲ್ಲಿ ಸುಮಾರು 68,000ದಷ್ಟಿದ್ದ ಸದಸ್ಯರ ಸಂಖ್ಯೆ 2012ರ ಚುನಾವಣೆ ವೇಳೆಗೆ ಶೇ. 58ರಷ್ಟು ಹೆಚ್ಚಳಗೊಂಡು 1.08 ಲಕ್ಷವಾಗಿತ್ತು. 2016ರ ಚುನಾವಣೆ ವೇಳೆಗೆ ಶೇ. 74ರಷ್ಟು ಏರಿಕೆ ಕಂಡು 1.88 ಲಕ್ಷವಾಗಿತ್ತು. ಈಗ ಶೇ. 75 ಹೆಚ್ಚಳವಾಗಿ 3.1 ಲಕ್ಷ ಆಗಿದೆ. ಕಸಾಪ ವ್ಯಾಪ್ತಿ ಹೆಚ್ಚುತ್ತಿದೆ ಎಂಬುದು ಸಂತಸದ ವಿಷಯವಾದರೂ, ಚುನಾವಣೆ ವೆಚ್ಚದ ದೃಷ್ಟಿಯಿಂದ ದುಬಾರಿಯಾಗಿ ಪರಿಣಮಿಸಿದೆ. ಪ್ರತಿ ಸದಸ್ಯರಿಗೆ ಕನಿಷ್ಠ ಒಮ್ಮೆ ಅಂಚೆ ಮೂಲಕ ಮನವಿ ಕಳಿಸಿದರೂ ಕವರ್​ಗೆ 1 ರೂ., ಸ್ಟಾ್ಯಂಪ್​ಗೆ 4 ರೂ.ನಂತೆ ಒಂದು ಸಲದ ಒಟ್ಟು ಅಂಚೆ ವೆಚ್ಚವೇ 15 ಲಕ್ಷ ರೂ. ಮೀರುತ್ತದೆ! ವಿವಿಧ ಜಿಲ್ಲೆ, ತಾಲ್ಲೂಕುಗಳಲ್ಲಿ ಪ್ರವಾಸ, ಸಭೆಗಳು, ಕಾರ್ಯಕ್ರಮ ಪ್ರಾಯೋಜನೆ, ಪ್ರಚಾರ ಸಾಮಗ್ರಿಗಳ ಮುದ್ರಣಕ್ಕೆ 10-15 ಲಕ್ಷ ರೂ. ವೆಚ್ಚವಾಗುತ್ತದೆ. ಚುನಾವಣೆ ದಿನ ಪ್ರತಿ ಮತಗಟ್ಟೆಯಲ್ಲಿ ಬೆಂಬಲಿಗರ ಗುಂಪು, ಶಾಮಿಯಾನ ಹಾಕಿಕೊಂಡು ಕೂರುತ್ತದೆ. ರಾಜ್ಯದಲ್ಲಿರುವ 200ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಈ ವ್ಯವಸ್ಥೆಗೆ 10-15 ಲಕ್ಷ ರೂ. ವೆಚ್ಚವಾಗುತ್ತದೆ. ಹಾಗಾದರೆ, ಒಟ್ಟಾರೆ 45-50 ಲಕ್ಷ ರೂ. ವೆಚ್ಚ ಮಾಡಿ ಈ ಹುದ್ದೆಗೆ ಯಾರಾದರೂ ಏಕೆ ಸ್ಪರ್ಧೆ ಮಾಡುತ್ತಾರೆ? ಅಷ್ಟು ವೆಚ್ಚ ಮಾಡಿದ ಮೇಲೆ ಅದನ್ನು ಪುನಃ ಗಳಿಸುವ ಗುರಿಯೂ ಇರಬೇಕಲ್ಲವೇ?

ಜಾತಿಕಾರಣ: ಕನ್ನಡಿಗರೆಲ್ಲರ ಪ್ರಾತಿನಿಧಿಕ ಸಂಸ್ಥೆಯಾದರೂ ಅಧ್ಯಕ್ಷರ ಆಯ್ಕೆಯಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತೀಯ ಸಮಾಜದಲ್ಲೇ ಕೆಲವೊಮ್ಮೆ ಅಸಹನೆ ಹುಟ್ಟಿಸುವಷ್ಟು ಮಟ್ಟಿಗೆ ಜಾತಿ ವ್ಯವಸ್ಥೆ ಹಾಸುಹೊಕ್ಕಾಗಿರುವಾಗ ಕಸಾಪ ಚುನಾವಣೆ ಮಾತ್ರ ಅದಕ್ಕೆ ಹೊರತಾಗಿರಬೇಕೆಂದು ಅಪೇಕ್ಷಿಸುವುದೂ ಕಷ್ಟ. ಆದರೆ ಅಭ್ಯರ್ಥಿಯ ಆಯ್ಕೆ ಮಾಡುವಾಗ ಈ ಅಂಶವೇ ಪ್ರಮುಖ ಪಾತ್ರ ವಹಿಸುತ್ತಿದೆ. ‘ಕಳೆದ ಬಾರಿ ಅಧ್ಯಕ್ಷರಾಗಿದ್ದವರು ಇಂತಹ ಜಾತಿಯವರಾದ್ದರಿಂದ ಈ ಬಾರಿ ಮತ್ತೊಂದು ಜಾತಿಗೆ ಅವಕಾಶ ನೀಡೋಣ’ ಎಂಬ ಮಾತುಗಳು ಕೇಳಿಬರುತ್ತವೆ. ‘ಈ’ ಅಭ್ಯರ್ಥಿ ನಮ್ಮ ಪ್ರದೇಶದವನಾದರೂ ‘ನಮ್ಮವನಿಗೆ’ ಮತ ನೀಡೋಣ ಎಂದು ಗುಂಪುಗಳಲ್ಲಿ ನಿರ್ಧಾರವಾಗುತ್ತದೆ! ಕಳೆದ ಬಾರಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಎಂ. ಪಟೇಲ್ ಪಾಂಡು ಅವರ ಅಭಿಪ್ರಾಯ ಹೀಗಿದೆ. ಪರಿಷತ್ತಿನ ಉದ್ದೇಶಗಳನ್ನು ಒಪ್ಪಿ ಸಹಕರಿಸಲು ಬದ್ಧರಾಗುವ ಕನ್ನಡ ಸಂಸ್ಥೆಗಳು ಮತ್ತು 18 ವರ್ಷ ಮೇಲ್ಪಟ್ಟ, ಕನ್ನಡ ಓದು ಬರಹ ಬಲ್ಲ ಎಲ್ಲರೂ ಸದಸ್ಯತ್ವ ಪಡೆಯಬಹುದು ಎಂಬುದು ನಿಬಂಧನೆಯಲ್ಲಿದೆ. ಈ ಹಿಂದೆ ಕನ್ನಡಾಭಿಮಾನ, ಕನ್ನಡ ಅಭಿವೃದ್ಧಿ ಆಧಾರದಲ್ಲಿ ಸ್ವಯಂಪ್ರೇರಿತರಾಗಿ ಸದಸ್ಯರಾಗಿದ್ದವರು ಅದೇ ಭಾವನೆಯಲ್ಲಿ ಮತದಾನ ಮಾಡುತ್ತಿದ್ದರು. ಆದರೆ ಕೆಲವು ಅಧ್ಯಕ್ಷರ ಸಮಯದಲ್ಲಿ ತಮ್ಮ ಪ್ರದೇಶ, ಜಾತಿಗಳವರನ್ನು ಬೃಹತ್ ಸಂಖ್ಯೆಯಲ್ಲಿ ಸದಸ್ಯರಾಗಿಸಲಾಗಿದೆ. ಕೆಲವು ಪ್ರದೇಶಗಳಲ್ಲಂತೂ ಸಮುದಾಯಗಳ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಮಠ ಮಾನ್ಯಗಳು ಮತದಾನ ಪ್ರಕ್ರಿಯೆಯನ್ನು ಪ್ರಭಾವಿಸುತ್ತವೆ. ಇದು ಸರಿಯಲ್ಲ.

ಮತ ತುಂಡರಿಸುವ ಮಾರ್ಗ: ಚುನಾವಣೆ ಎಂದ ಕೂಡಲೇ ಬಿರುಸು, ತೀಕ್ಷ್ಣತೆ ಇದ್ದೇ ಇರುತ್ತದೆ. ಈ ಕುರಿತು ಹಳೆಯ ವಿಚಾರವನ್ನು ಮೆಲುಕು ಹಾಕುವ ವಚನಜ್ಯೋತಿ ಬಳಗದ ಪಿನಾಕಪಾಣಿ ಹೇಳುವುದು ಹೀಗೆ... ಕಸಾಪ ಅಧ್ಯಕ್ಷ ಹುದ್ದೆಗೆ ಚುನಾವಣೆಯಲ್ಲಿ ಬಿರುಸು ಕಂಡಿದ್ದು ಮೊದಲಿಗೆ 1960ರಲ್ಲಿ, ಕನ್ನಡ ಕೇಸರಿ ಬಿ. ಶಿವಮೂರ್ತಿ ಶಾಸ್ತ್ರಿ ಹಾಗೂ ಅ.ನ.ಕೃ ಅವರ ನಡುವಿನ ಚುನಾವಣೆಯಲ್ಲಿ. ಇಬ್ಬರೂ ಅಖಂಡ ಕರ್ನಾಟಕಕ್ಕೆ ಹೋರಾಡಿದವರು, ಇಬ್ಬರೂ ಅತ್ಯಾಪ್ತ ಸ್ನೇಹಿತರು. ಆದರೆ ಚುನಾವಣೆ ವಿಚಾರ ದ್ವೇಷಕ್ಕೆ ತಿರುಗಿ ಜಾತಿ ವಿಚಾರವೂ ತಳುಕುಹಾಕಿಕೊಂಡಿತು. ಮುಖ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯೆಂದರೆ, ಪ್ರತಿಸ್ಪರ್ಧಿಯ ಮತ ತುಂಡರಿಸುವ ತಂತ್ರ. ಪ್ರತಿಸ್ಪರ್ಧಿಯ ಜಾತಿ ಹಾಗೂ ಪ್ರದೇಶದಿಂದಲೇ ಮತ್ತೊಬ್ಬರನ್ನು ‘ಪ್ರಾಯೋಜನೆ’ ಮಾಡಿ ಕಣಕ್ಕಿಳಿಸುವುದು. ಪ್ರತಿಸ್ಪರ್ಧಿಗೆ ಹೆಚ್ಚು ಮತ ಲಭಿಸಬಹುದು ಎಂಬ ನಿರೀಕ್ಷೆಯಿರುವ ಜಿಲ್ಲೆಯಲ್ಲಿ ಅದೇ ಜಾತಿಯ ಮತ್ತೊಬ್ಬರನ್ನು ಕಣಕ್ಕಿಳಿಸುವುದು. ಈ ಮೂಲಕ ಪ್ರತಿಸ್ಪರ್ಧಿಯ ಮತಗಳಿಕೆಯನ್ನು ಆದಷ್ಟೂ ಕಡಿಮೆ ಮಾಡಿ ತಾವು ಜಯ ಗಳಿಸುವುದು. ಇದಂತೂ ಅಕ್ಷರಶಃ ರಾಜಕೀಯ ಚುನಾವಣೆಯ ತಂತ್ರವೇ.

ಪರಿಹಾರಗಳೇನು?: ಕಸಾಪ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳು ವಾಮಮಾರ್ಗ ಹಿಡಿಯುತ್ತಾರೆ ಎಂಬುದನ್ನು ಬಹುತೇಕರು ಒಪು್ಪತ್ತಾರೆ. ಆದರೆ ಈ ಕುರಿತು ಮಾತನಾಡಲು ಸಾರಸ್ವತ ಲೋಕ ಹಿಂಜರಿಯುತ್ತದೆ. ತಮಗೇಕೆ ಈ ವಿಚಾರ ಎಂಬ ನಿರ್ಲಕ್ಷ್ಯ ಒಂದೆಡೆಯಾದರೆ, ತಾವು ವಿರೋಧಿಸಿದವರು ನಾಳೆ ಜಯಿಸಿಬಿಟ್ಟರೆ ಮುಂದಿನ ಐದು ವರ್ಷ ತಮ್ಮನ್ನು ಕಸಾಪ ಚಟುವಟಿಕೆಯಿಂದ ದೂರವಿಡುತ್ತಾರೆ ಎಂಬ ಭಯವೂ ಇದೆ. ಕಸಾಪ ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆಯಾದರೆ ಮಾತ್ರ ಹಣವಿಲ್ಲದಿದ್ದರೂ ಕನ್ನಡ ಕಾಳಜಿಯಿರುವವರು, ಚಿಂತಕರು ಆಯ್ಕೆಯಾಗಬಲ್ಲರು. ಆದರೆ ಯಾವ ಸುಧಾರಣೆಗಳು ಆಗಬೇಕು ಎಂಬುದರ ಕುರಿತು ಸ್ಪಷ್ಟತೆ ಯಾರಿಗೂ ಇಲ್ಲ. ಈ ಕುರಿತು ಮತ್ತಷ್ಟು ಚಿಂತನ ಮಂಥನ ನಡೆಯುವ ಅವಶ್ಯಕತೆ ಇದೆ.