ಅಂಕಣ

ಇಸ್ಲಾಮಿಕ್ ಸ್ಟೇಟ್ ಮತ್ತು ತಾಲಿಬಾನ್ ಸಾಮ್ಯತೆ ಎಲ್ಲಿಯವರೆಗೆ?

ಅಮೆರಿಕ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹೊರತೆಗೆಯಲಾರಂಭಿಸಿದ ಈ ನಾಲ್ಕು ತಿಂಗಳುಗಳಲ್ಲಿ ತಾಲಿಬಾನ್ ಅತಿ ವೇಗದಲ್ಲಿ ಹೆಚ್ಚುಹೆಚ್ಚು ಪ್ರದೇಶಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಪ್ರದೇಶದ ಮೇಲೆ ಹಿಡಿತ ಸ್ಥಾಪಿಸುವುದೆಂದರೆ ಅಲ್ಲಿನ ಸಂಪನ್ಮೂಲಗಳ ಮೇಲೆ ಹತೋಟಿ ಸ್ಥಾಪಿಸುವುದು ಹಾಗೂ ಅಲ್ಲಿನ ನಿವಾಸಿಗಳಿಂದ ತೆರಿಗೆ ಸಂಗ್ರಹಿಸುವ ಅಧಿಕಾರ ಪಡೆದುಕೊಳ್ಳುವುದು ಎಂದರ್ಥ. ಹೀಗೆ ತಾಲಿಬಾನ್​ನ ಆದಾಯ, ಅದಕ್ಕನುಗುಣವಾಗಿ ಸೇನಾಶಕ್ತಿಯೂ ಏಕಪ್ರಕಾರವಾಗಿ ವೃದ್ಧಿಯಾಗುತ್ತಿದೆ ಮತ್ತದು ಇತರ ಪ್ರದೇಶಗಳ ಮೇಲೆ ಅಧಿಕಾರ ಸ್ಥಾಪಿಸಲು ಆ ಭಯೋತ್ಪಾದಕ ಸಂಘಟನೆಗೆ ಸಹಕಾರಿಯಾಗುತ್ತಿದೆ. ಇದು ಸ್ಪಷ್ಟವಾಗುವುದು ಕಳೆದ ಶುಕ್ರವಾರದಿಂದೀಚೆಗೇ ಐದು ಪ್ರಾಂತೀಯ ರಾಜಧಾನಿಗಳು ತಾಲಿಬಾನ್ ಹಿಡಿತಕ್ಕೆ ಬಿದ್ದಿರುವುದರಲ್ಲಿ. ಅವುಗಳಲ್ಲಿ ‘ನವ ಅಫ್ಘಾನಿಸ್ತಾನದ ಮಾದರಿ ನಗರ’ ಎಂದು ಅಧ್ಯಕ್ಷ ಅಶ್ರಫ್ ಘನಿ ಐದು ವರ್ಷಗಳ ಹಿಂದೆ ಹೆಮ್ಮೆಯಿಂದ ಘೊಷಿಸಿದ್ದ ಉತ್ತರದ ಕುಂದೂಜ್ ನಗರವೂ ಸೇರಿರುವುದು ತಾಲಿಬಾನ್​ಗೆ ಪ್ರತಿಷ್ಠೆಯ ಸಂಗತಿಯಾಗಿದೆ.

ಸೈನಿಕರು, ಸೇನಾ ವಾಹನಗಳು ಮತ್ತು ಶಸ್ತ್ರಾಸ್ತ್ರಗಳ ವಿಷಯದಲ್ಲಿ ತಾಲಿಬಾನ್ ಸರ್ಕಾರಿ ಸೇನೆಯನ್ನು ಸರಿಗಟ್ಟಿರುವುದಾದರೂ, ವಾಯುದಳ ಇಲ್ಲದಿರುವುದು ಅದರ ದೊಡ್ಡ ಕೊರತೆ. ಇದನ್ನು ಸರಿತೂಗಿಸಿಕೊಳ್ಳಲು ತಾಲಿಬಾನ್ ಅನುಸರಿಸುತ್ತಿರುವ ತಂತ್ರವೆಂದರೆ ಕೇವಲ 330ರಷ್ಟು ಸೀಮಿತ ಸಂಖ್ಯೆಯ ಅಫ್ಘನ್ ವಾಯುದಳದ ಪೈಲಟ್​ಗಳನ್ನು ಹುಡುಕಿ ಹುಡುಕಿ ಕೊಲ್ಲುವುದು. ತನ್ನ ಹತೊಟಿಗೆ ಬಂದ ಈಶಾನ್ಯ ಗಡಿಯ ಬದಕ್ಷಾನ್ ಪ್ರಾಂತ್ಯದ ಮೇಲೆ ತಿಂಗಳ ಹಿಂದೆ ಅಫ್ಘನ್ ವಾಯುದಳ ದಾಳಿಯೆಸಗಿ ಅಪಾರ ಹಾನಿಯೆಸಗಿದ ಮೇಲೆ ತಾಲಿಬಾನ್​ನ ಈ ಕೃತ್ಯ ತೀವ್ರಗತಿ ಪಡೆದುಕೊಂಡಿದೆ. ಹೀಗೆ ಪೈಲಟ್​ಗಳನ್ನು ಕೊಲ್ಲುವುದರ ಮೂಲಕ ಯುದ್ಧವಿಮಾನಗಳು ಗಗನಕ್ಕೇರದಂತೆ ಮಾಡುವುದು ತಾಲಿಬಾನ್​ನ ರಣತಂತ್ರ.

ಇದೆಲ್ಲದರ ಪರಿಣಾಮವಾಗಿ ತಾಲಿಬಾನ್​ನ ಕಾದುವ ಸಾಮರ್ಥ್ಯ ಗಣನೀಯವಾಗಿ ವೃದ್ಧಿಯಾಗುತ್ತಿದೆ ಮತ್ತು ಪರಿಸ್ಥಿತಿ ಹೀಗೇ ಮುಂದುವರಿದರೆ ಆಗಸ್ಟ್ 31ರಂದು ಅಮೆರಿಕದ ಸೇನಾ ವಾಪಸಾತಿ ಪೂರ್ಣಗೊಂಡ ನಂತರ ಅಶ್ರಫ್ ಘನಿ ಸರ್ಕಾರ ಹೆಚ್ಚುಕಾಲ ಉಳಿಯಲಾರದು ಎಂಬ ಆತಂಕ ಸಹಜವಾಗಿಯೇ ಮೂಡಿದೆ. ಭಯೋತ್ಪಾದಕ ಸಂಘಟನೆಯೊಂದು ನಿರ್ದಿಷ್ಟ ಭೂಪ್ರದೇಶವೊಂದರ ಮೇಲೆ ರಾಜಕೀಯ ಅಧಿಕಾರ ಸ್ಥಾಪಿಸಿದರೆ ಏನಾಗಬಹುದೆಂಬುದನ್ನು 1996-2001 ಅವಧಿಯಲ್ಲಿ ಜಗತ್ತು ಇದೇ ಅಫ್ಘಾನಿಸ್ತಾನದಲ್ಲಿ ನೋಡಿದೆ. ಅಂತಹ ದಿನಗಳು ಮರುಕಳಿಸಬಾರದೆಂದು ನಾಗರಿಕ ಜಗತ್ತು, ಬಹುಪಾಲು ಅಫ್ಘನ್ ನಾಗರಿಕರು ಬಯಸಿದರೂ ಅದನ್ನು ತಡೆಗಟ್ಟುವ ಪರಿಣಾಮಕಾರಿ ವಿಧಾನ ಮಾತ್ರ ಯಾರಿಗೂ ಕಾಣುತ್ತಿಲ್ಲ. ಅಶ್ರಫ್ ಘನಿ ಸರ್ಕಾರದ ಹೊರತಾಗಿ ಮತ್ತಾರೂ ಈ ಪ್ರಯತ್ನವನ್ನು ಗಂಭೀರವಾಗಿ ಮಾಡುತ್ತಿಲ್ಲ ಎನ್ನುವುದೇ ಸತ್ಯಕ್ಕೆ ಹೆಚ್ಚು ಹತ್ತಿರ.

ಈಗ ಇತಿಹಾಸದ ಅವಲೋಕನದ ಆಧಾರದ ಮೇಲೆ ಭವಿಷ್ಯವನ್ನು ಊಹಿಸಲು ಪ್ರಯತ್ನಿಸೋಣ. ಅದಕ್ಕಾಗಿ ಹೆಚ್ಚೇನೂ ಹಿಂದೆ ಹೋಗಬೇಕಾಗಿಲ್ಲ, ಹೆಚ್ಚು ದೂರವೂ ಸಾಗಬೇಕಾಗಿಲ್ಲ. ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ’ (ಐಎಸ್​ಐಎಸ್, ಚಿಕ್ಕದಾಗಿ ‘ಐಎಸ್’) ಎಂಬ ಸುನ್ನಿ ಜಿಹಾದಿ ಸಂಘಟನೆ ಏಳುವರ್ಷಗಳ ಹಿಂದೆ ಇರಾಕ್ ಮತ್ತು ಸಿರಿಯಾಗಳ ಗಡಿಯ ಆಚೀಚೆ ಬಹುದೊಡ್ಡ ಪ್ರದೇಶದ ಮೇಲೆ ಸೇನಾ-ರಾಜಕೀಯ ಹಿಡಿತ ಸ್ಥಾಪಿಸಿದ್ದನ್ನು ಮತ್ತು ಆ ಬೆಳವಣಿಗೆ ಅತೀ ವೇಗದಲ್ಲಿ ಘಟಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿ. ಅಶಾಂತಿಯಲ್ಲಿ ಬೇಯುತ್ತಿದ್ದ ಇರಾಕ್​ನ ಪಶ್ಚಿಮೋತ್ತರದಲ್ಲಿ ಏಕಾಏಕಿ ಕಾಮೋಡಗಳಂತೆ ಕಾಣಿಸಿಕೊಂಡ ಐಎಸ್ 2014ರ ಜೂನ್ 10ರಂದು ದೇಶದ ಎರಡನೆಯ ದೊಡ್ಡ ನಗರ ಮೊಸುಲ್ ಅನ್ನು ಆಕ್ರಮಿಸಿಕೊಂಡುಬಿಟ್ಟಿತು. ಪರಿಣಾಮವಾಗಿ ಅಲ್ಲಿದ್ದ ಸರ್ಕಾರಿ ಸೇನೆಯ ಭಾರೀ ಶಸ್ತ್ರಾಸ್ತ್ರ ಭಂಡಾರ ಐಎಸ್​ನ ವಶಕ್ಕೆ ಬಿತ್ತು. ಹೀಗೆ ಬಲ ವೃದ್ಧಿಸಿಕೊಳ್ಳುವುದರ ಜತೆಗೆ ಐಎಸ್ ಜಿಹಾದಿಗಳು ಸ್ಥಳೀಯ ಬ್ಯಾಂಕ್​ಗಳು ಮತ್ತು ಸರ್ಕಾರಿ ಖಜಾನೆಗಳಿಂದ ಸುಮಾರು ನಾನೂರು ಮಿಲಿಯನ್ ಡಾಲರ್​ಗಳನ್ನೂ ಕೈವಶ ಮಾಡಿಕೊಂಡು ಆರ್ಥಿಕ ಸಾಮರ್ಥ್ಯವನ್ನೂ ಅಗಾಧವಾಗಿ ವೃದ್ಧಿಸಿಕೊಂಡರು. ಅದಾದ ಒಂದೇವಾರದಲ್ಲಿ ಐಎಸ್​ನ ಹಿಡಿತ ಸುನ್ನಿ ಬಹುಸಂಖ್ಯಾತ ಪಶ್ಚಿಮೋತ್ತರ ಪ್ರದೇಶಗಳ ಉದ್ದಗಲಕ್ಕೂ ಹರಡಿಹೋಗಿ ಜೂನ್ 19ರಂದು ಅದು ತನ್ನ ಗುರಿಯಾದ ‘ಇಸ್ಲಾಮಿಕ್ ಖಿಲಾಫತ್’ ಅನ್ನು ತನ್ನ ಹಿಡಿತದ ಪಶ್ಚಿಮೋತ್ತರ ಇರಾಕ್​ನಲ್ಲಿ ಸ್ಥಾಪಿಸಿಯೇಬಿಟ್ಟಿತು. ಅನತಿಕಾಲದಲ್ಲೇ ಐಎಸ್ ಅಧಿಕಾರ ಪೂವೋತ್ತರ ಸಿರಿಯಾದಲ್ಲೂ ಬಲಗೊಂಡಿತು. ನಂತರದ ಎರಡು ವರ್ಷಗಳಲ್ಲಿ ಆ ತಥಾಕಥಿತ ‘ಇಸ್ಲಾಮಿಕ್ ಖಿಲಾಫತ್’ನಲ್ಲಿ ಜಗತ್ತು ಕಂಡದ್ದು ಹೊಟ್ಟೆಗೆ ಅನ್ನ ತಿನ್ನುವ ಮನುಷ್ಯರು ಸಹಜೀವಿಗಳ ಬಗ್ಗೆ ಈ ಬಗೆಯ ಕ್ರೌರ್ಯ ತೋರಬಹುದೇ ಎಂದು ನಾಗರಿಕ ಮನಸ್ಸುಗಳು ಕಂಗೆಡುವ

ಮಟ್ಟಿಗಿನ ರಕ್ತಪಾತ. ಸುನ್ನಿಗಳಲ್ಲದವರನ್ನು, ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಐಎಸ್ ಜಿಹಾದಿಗಳು ಸಹಸ್ರಸಹಸ್ರ ಸಂಖ್ಯೆಯಲ್ಲಿ ಕೊಂದರು. ತಾನು ಪ್ರತಿಪಾದಿಸುವ ಇಸ್ಲಾಮಿಕ್ ಜೀವನವಿಧಾನಕ್ಕೆ ಬದ್ಧಳಾಗಿಲ್ಲ ವೆಂದು ಆರೋಪಿಸಿ ಯುವ ಐಎಸ್ ಕಿರಾತಕನೊಬ್ಬ ಹೆತ್ತ ತಾಯಿಯನ್ನೇ ಸಾರ್ವಜನಿಕವಾಗಿ ಕೊಂದದ್ದೂ ನಡೆದು ಹೋಯಿತು. ವರದಿಯಾಗದ ಅಂತಹ ರಾಕ್ಷಸೀ ಕೃತ್ಯಗಳು ಅದೆಷ್ಟಿವೆಯೋ. ಈ ಬಗೆಯ ರಕ್ತಪಿಪಾಸೆಯ ಜತೆಗೆ, ಐಎಸ್ ಬರ್ಬರರು ಮೊಸುಲ್ ಮ್ಯೂಸಿಯಂ ಸೇರಿದಂತೆ ತಮ್ಮ ಹಿಡಿತದ ಪ್ರದೇಶದಲ್ಲಿದ್ದ ಪ್ರಾಚೀನ ಮೆಸೊಪೊಟೇಮಿಯನ್ ನಾಗರಿಕತೆಗಳ ಶಿಲ್ಪಕಲೆಯ ಮತ್ತು ವಾಸ್ತುಶಿಲ್ಪದ ಅಗಣಿತ ಕೃತಿಗಳನ್ನೂ ನಿರ್ನಾಮ ಮಾಡಿದರು.

ಐಎಸ್​ನ ಉತ್ಕರ್ಷ ಮತ್ತು ಅದರ ಕೃತ್ಯಗಳು ಇರಾಕ್​ನ ಪ್ರಾದೇಶಿಕ ಸಮಗ್ರತೆಗೆ ಭಂಗ ತರುವುದಲ್ಲದೇ ಇಡೀ ಅರಬ್ ಕ್ರೆಸೆಂಟ್​ನಲ್ಲಿ ಅರಾಜಕತೆ ಹಬ್ಬಿಸಿ ಪಶ್ಚಿಮ ಏಶಿಯಾದ ಭೂ-ರಾಜಕೀಯ ಪರಿಸ್ಥಿತಿಯನ್ನು ಸರಿಪಡಿಸಲಾಗದ ಮಟ್ಟಿಗೆ ಹಾಳುಗೆಡವಬಹುದೆಂಬ ಆತಂಕ ಸಹಜವಾಗಿಯೇ ಎಲ್ಲೆಡೆ ಮೂಡತೊಡಗಿತು. ಆದರೆ ಮೂರೇ ವರ್ಷಗಳಲ್ಲಿ ಪರಿಸ್ಥಿತಿ ಅನೂಹ್ಯ ಬಗೆಯಲ್ಲಿ ಬದಲಾಗತೊಡಗಿತು. ಐಎಸ್ ಏರಿದ್ದಷ್ಟೇ ವೇಗವಾಗಿ ಕೆಳಗಿಳಿಯತೊಡಗಿತು. ಪ್ರಾರಂಭದ ದಿನಗಳಲ್ಲಿ ಐಎಸ್ ದಾಳಿಗೆ ತತ್ತರಿಸಿ ದಿಕ್ಕಾಪಾಲಾಗಿ ಚದುರಿಹೋಗಿದ್ದ ಇರಾಕಿ ಸೇನೆ ಕಾದುವ ಸಾಮರ್ಥ್ಯವನ್ನೂ, ಸ್ಥೈರ್ಯವನ್ನೂ ಮರುಗೂಡಿಸಿಕೊಂಡು ಸಮರ್ಥವಾಗಿ ಪ್ರತಿದಾಳಿ ನಡೆಸತೊಡಗಿತು. ಇದಕ್ಕೆ ಹೊರಜಗತ್ತೂ ಸಹಕರಿಸತೊಡಗಿತು. ವಿಶೇಷವೆಂದರೆ ಬೇರೆಲ್ಲ ವಿಷಯಗಳಲ್ಲಿ ಪರಸ್ಪರ ಮುಖ ತಿರುಗಿಸಿಕೊಳ್ಳುತ್ತಿದ್ದ ಜಾಗತಿಕ ಮತ್ತು ಪ್ರಾದೇಶಿಕ ಶಕ್ತಿಗಳು ಐಎಸ್ ವಿರುದ್ಧದಲ್ಲಿ ಮಾತ್ರ ಜತೆಗೂಡಿಬಿಟ್ಟವು. ಇರಾಕಿ ಸರ್ಕಾರ ಕುಸಿದರೆ ಒಂದೂವರೆ ದಶಕದಿಂದ ಅಲ್ಲಿ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ತಾನು ಮಾಡಿದ್ದ ಪ್ರಯತ್ನಗಳು ವ್ಯರ್ಥವಾಗಿಬಿಡಬಹುದೆಂದು ಅಮೆರಿಕ ಎಚ್ಚೆತ್ತುಕೊಂಡಿತು. ಹಾಗೆಯೇ, ಇರಾಕ್​ನಲ್ಲಿ ಐಎಸ್ ಉತ್ಕರ್ಷ ಅಮೆರಿಕದ ಹಿತಾಸಕ್ತಿಗಳಿಗೆ ಹಾನಿಯೆಸಗುತ್ತಿದೆಯೆಂದು ಮೊದಮೊದಲು ಸಂಭ್ರಮಿಸಿದ್ದ, ಐಎಸ್​ಗೆ ಒಳಗೊಳಗೇ ಕುಮ್ಮಕ್ಕನ್ನೂ ಕೊಟ್ಟಿದ್ದ ರಶಿಯಾದ ಕಣ್ಣೂ ಬೇಗನೇ ತೆರೆಯಿತು. ಐಎಸ್​ನ ಉಗ್ರ ಮೂಲಭೂತವಾದಿ ಮುಖ ಅನಾವರಣಗೊಳ್ಳತೊಡಗಿದಂತೇ ಅದು ತನಗೇ ಮುಳುವಾಗಿ, ದಾಘಸ್ತಾನ್​ನಂತಹ ತನ್ನ ಮುಸ್ಲಿಂಬಾಹುಳ್ಯ ಪ್ರದೇಶಗಳಲ್ಲಿ ಭಯೋತ್ಪಾದನೆ ಹೆಚ್ಚಬಹುದೆಂದು ಮಾಸ್ಕೋ ಆತಂಕಗೊಂಡಿತು.

ಪ್ರಾದೇಶಿಕ ಶಕ್ತಿಗಳಾದ ಇರಾನ್ ಮತ್ತು ಸೌದಿ ಅರೇಬಿಯಾಗಳಿಗಾದದ್ದು ಇನ್ನೊಂದು ಬಗೆಯ ಜ್ಞಾನೋದಯ. ಇರಾಕ್ ಛಿದ್ರಗೊಂಡರೆ ತನಗೆ ಲಾಭ ಎಂದು ಇರಾನ್ ಬಾಯಿ ಬಿಟ್ಟುಕೊಂಡು ಕಾಯುತ್ತಾ ಕೂತಿತ್ತಷ್ಟೇ. ಆದರೆ ಪಕ್ಕದಲ್ಲಿ ಸುನ್ನಿ ಮೂಲಭೂತವಾದ ಹೆಮ್ಮರವಾಗಿ ಬೆಳೆದರೆ ತನಗೇ ಕುತ್ತು ಎಂದು ಶಿಯಾ ಇರಾನ್​ಗೆ ಅರಿವಾಗಲು ಹೆಚ್ಚುಕಾಲವೇನೂ ಬೇಕಾಗಲಿಲ್ಲ. ಸೌದಿ ಅರೇಬಿಯಾದ್ದು ಇನ್ನೂ ದೊಡ್ಡ ಕಥೆ. ತನ್ನದೇ ವಹಾಬಿ ಪಂಥದ ಹೊಸ ಟಿಸಿಲಾದ ಐಎಸ್​ನ ಉತ್ಕರ್ಷ ಸೌದಿ ರಾಜಮನೆತನದಲ್ಲಿ ಸಂಭ್ರಮವನ್ನು ಉಂಟುಮಾಡಿದ್ದು ನಿಜ. ಆ ಕಾರಣದಿಂದಲೇ ಅದು ಅಮೆರಿಕಾದ ಮೂಗಿನ ಕೆಳಗೇ ರಶಿಯಾ ಜತೆ ಸರಸ ಆರಂಭಿಸಿ, ಅದರ ಜತೆಗೂಡಿ ಐಸ್​ಗೆ ಒಳಗೊಳಗೇ ಕುಮ್ಮಕ್ಕು, ಹಣಕಾಸಿನ ಸಹಕಾರ ನೀಡುತ್ತಿದ್ದುದೂ ನಿಜ. ಆದರೆ ಯಾವಾಗ ಐಎಸ್ ನೇತಾರರು ಸೌದಿ ಅರೇಬಿಯಾ ಮೂಲ ವಹಾಬಿ ತತ್ತ್ವಗಳಿಂದ ದೂರವಾಗಿದೆಯೆಂದೂ, ಅದನ್ನು ಸರಿಪಡಿಸಲು ತಾವು ಅವತರಿಸಿದ್ದೇವೆಂದೂ ಹೇಳತೊಡಗಿದರೋ ಆಗ ತನ್ನ ಬುಡಕ್ಕೇ ಬೆಂಕಿ ಬೀಳುತ್ತಿದೆಯೆಂದರಿತು ಸೌದಿ ರಾಜಮನೆತನ ಧಿಗ್ಗನೆದ್ದು ಕೂತಿತು. ಕಳ್ಳರಿಗೆ ಪಾಠ ಕಲಿಸಲು ಕಳ್ಳರೇ ಬರಬೇಕು! ಸಭ್ಯರಿಂದ ಆಗುವ ಕೆಲಸವಲ್ಲ ಅದು.

ಹೀಗೆ ಜ್ಞಾನೋದಯವಾದದ್ದೇ ಆ ನಾಲ್ಕೂ ದೇಶಗಳು ಐಎಸ್ ಅನ್ನು ಮಟ್ಟಹಾಕಲು ಏಕಪಕ್ಷೀಯವಾಗಿ, ದ್ವಿಪಕ್ಷೀಯವಾಗಿ, ಬಹುಪಕ್ಷೀಯವಾಗಿ ಕಾರ್ಯಯೋಜನೆ ರೂಪಿಸಿದವು. ಪರಿಣಾಮವಾಗಿ ಐಎಸ್​ಗೆ ಸಿಗುತ್ತಿದ್ದ ಕಳ್ಳಹಣ, ಮದ್ದುಗುಂಡು ನಿಂತುಹೋದವು. ಆದಾಯ ಕುಗ್ಗಿದ್ದರಿಂದಾಗಿ ಕಂಗಾಲಾದ ಐಎಸ್ ಮೇಲೆ ಅಮೆರಿಕಾ ಮತ್ತು ರಶಿಯಾಗಳೆರಡೂ ಎರಗಿ ಅದು ಮೇಲೇಳದಂತೆ ಬಡಿಯತೊಡಗಿದವು ಮತ್ತದಕ್ಕೆ ಇರಾನ್ ಮತ್ತು ಸೌದಿ ಅರೇಬಿಯಾಗಳೂ ಒಳಗೊಳಗೇ ಸಹಕರಿಸತೊಡಗಿದವು. ಐಎಸ್ ತನ್ನೆಲ್ಲಾ ಹರಕತ್​ಗಳನ್ನು ಬದಿಗಿಟ್ಟು ಜೀವ ಉಳಿಸಿಕೊಳ್ಳಲು ಮರೆಯರಸಿ ಓಡಲಾರಂಭಿಸಿ ಮೂರು ವರ್ಷಗಳೇ ಆಗಿಹೋದವು.

ಈಗ ಐಎಸ್ ಹಣೆಬರಹವನ್ನು ತಾಲಿಬಾನ್​ಗೆ ಹೋಲಿಸೋಣ. ಭಾರತವೇನಾದರೂ ಪಾಕಿಸ್ತಾನದ ಹೃದಯಭಾಗವಾದ ಪಂಜಾಬನ್ನು ಆಕ್ರಮಿಸಿಕೊಂಡು ಬಿಟ್ಟರೆ ತಾವು ಅಫ್ಘಾನಿಸ್ತಾನದಲ್ಲಿ ನೆಲೆ ಗಳಿಸಿಕೊಂಡು ಶಕ್ತಿವರ್ಧನೆ ಮಾಡಿಕೊಂಡು ಭಾರತೀಯ ಸೇನೆಯ ಮೇಲೆ ಎರಗಿ ಕಳೆದುಹೋದ ಪ್ರದೇಶಗಳನ್ನು ಮರುಗಳಿಸಿಕೊಳ್ಳಬೇಕೆನ್ನುವುದು ಪಾಕಿಸ್ತಾನೀ ಸೇನೆಯ ಲೆಕ್ಕಾಚಾರವಾಗಿತ್ತು. ಹೀಗಾಗಿಯೇ, ಅಫ್ಘಾನಿಸ್ತಾನವನ್ನು ತನ್ನ ‘ಸಾಮರಿಕ ಹಿತ್ತಲು’ ಮಾಡಿಕೊಳ್ಳಲು ಪಾಕಿಸ್ತಾನ ತಾಲಿಬಾನ್ ಅನ್ನು ಸೃಷ್ಟಿಸಿ ಉಪಯೋಗಿಸತೊಡಗಿತಷ್ಟೇ. ತನ್ನ ಯೋಜನೆ ಯಶಸ್ವಿಯಾಯಿತೆಂದು ಅದು ಶತಮಾನದ ತಿರುವಿನ ಹೊತ್ತಿನಲ್ಲಿ ಸಂಭ್ರಮಿಸಿದ್ದೂ ಆಯಿತು. ಆದರೆ ಯಾವಾಗ ಅಮೆರಿಕನ್ನರು ಬಂದು ತಾಲಿಬಾನ್ ಅನ್ನು ಬಡಿದೋಡಿಸಿದರೋ ಆಗ ತಾಲಿಬಾನಿಗಳು ಆಶ್ರಯ ಪಡೆದದ್ದು ಪಾಕಿಸ್ತಾನದಲ್ಲಿ. ಅಂದರೆ ಇತಿಹಾಸದ ಒಂದು ವ್ಯಂಗ್ಯ ವಿಪರ್ಯಾಸದಂತೆ ತಾಲಿಬಾನ್​ಗೆ ಪಾಕಿಸ್ತಾನವೇ ‘ಸಾಮರಿಕ ಹಿತ್ತಲು’ ಆಗಿಬಿಟ್ಟಿತು! ಪಾಕ್ ನೆಲದಲ್ಲಿ ಸಾಮರ್ಥ್ಯವನ್ನು ವೃದ್ಧಿಸಿಕೊಂಡ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಕಳೆದುಹೋಗಿದ್ದ ಅಧಿಕಾರವನ್ನು ಮರಳಿ ಗಳಿಸುವ ಹಂತಕ್ಕೆ ಈಗ ಬಂದಿದ್ದಾರೆ. ಇದು ಇಷ್ಟಕ್ಕೇ ನಿಲ್ಲುತ್ತದೆಯೇ?

ಅಫ್ಘನ್ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಪ್ರಭಾವಶಾಲಿಯಾಗುತ್ತಿದ್ದಂತೇ ಪಾಕ್ ತಾಲಿಬಾನಿಗಳು ಪಾಕಿಸ್ತಾನದಲ್ಲಿ ದಾಂಧಲೆ ಎಬ್ಬಿಸತೊಡಗಿದ್ದಾರೆ; ಕಾಶ್ಮೀರದ ಹತೋಟಿ ರೇಖೆ ಸರಿಸುಮಾರು ಶಾಂತವಾಗಿಬಿಟ್ಟಿದೆ ಮತ್ತು ಖೈಬರ್-ಪಕ್ತೂನ್​ಖ್ವಾ ಪ್ರಾಂತ್ಯದಲ್ಲಿ ಅಶಾಂತಿ ಹೆಚ್ಚಿದೆ. ತಾಲಿಬಾನಿಗಳ ಮುಖ್ಯ ಗುರಿ ಪಾಕಿಸ್ತಾನದಲ್ಲಿರುವ ಚೀನೀಯರು! ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಚೀನೀ ಪ್ರಭಾವವನ್ನು ವಿರೋಧಿಸುವ ಪಾಕ್ ತಾಲಿಬಾನಿಗಳು ಎರಡೂ ದೇಶಗಳ ಮಹತ್ವಾಕಾಂಕ್ಷಿ ಜಂಟಿ ಯೋಜನೆ ‘ಚೀನಾ-ಪಾಕಿಸ್ತಾನ್ ಇಕನಾಮಿಕ್ ಕಾರಿಡಾರ್’ (ಸಿಪಿಇಸಿ) ಅನ್ನೇ ಹಾಳುಗೆಡವಲು ನೋಡುತ್ತಿದ್ದಾರೆ. ಅಂತಹದೊಂದು ದೊಡ್ಡ ಪ್ರಕರಣ ಜುಲೈ 14ರಂದು ಕೊಹಿಸ್ತಾನ್​ನಲ್ಲಿ ಘಟಿಸಿದೆ. ತಾಲಿಬಾನಿಗಳು ಸಿಪಿಇಸಿ ಯೋಜನೆಯ ಪ್ರಮುಖ ಅಂಗವಾದ ಬೃಹತ್ ದಾಸು ಜಲವಿದ್ಯುತ್ ಯೋಜನೆಗೆ ಸೇರಿದ ಬಸ್ ಮೇಲೆ ಆಕ್ರಮಣವೆಸಗಿ ಒಂಬತ್ತು ಚೀನೀ ತಂತ್ರಜ್ಞರನ್ನು ಕೊಂದಿದ್ದಾರೆ. ಪರಿಣಾಮವಾಗಿ, ಪಾಕಿಸ್ತಾನದಲ್ಲಿ ತನ್ನವರಿಗೆ ಸುರಕ್ಷೆಯಿಲ್ಲ ಎಂದು ಆಪಾದಿಸಿ ಚೀನಾ ದಾಸು ಯೋಜನೆಯನ್ನೇ ನಿಲುಗಡೆಗೆ ತಂದಿದೆ! ಚೀನೀ ಸಹಕಾರದಿಂದ ತನ್ನೆಲ್ಲಾ ಆರ್ಥಿಕ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಬಹುದೆಂದು ಕನಸು ಕಾಣುತ್ತಿದ್ದ ಪಾಕ್ ಸರ್ಕಾರಕ್ಕಿದು ಭಾರಿ ಆಘಾತ. ಪರಿಸ್ಥಿತಿ ಹೀಗೇ ಮುಂದುವರಿದರೆ ಖೈಬರ್-ಪಕ್ತೂನ್​ಖ್ವಾದಿಂದ ಚೀನೀಯರಷ್ಟೇ ಹೊರಹೋಗುವುದಿಲ್ಲ, ಪಾಕಿಸ್ತಾನೀಯರನ್ನೂ ಅಲ್ಲಿಂದ ಹೊರಗಟ್ಟುವ ಪ್ರಯತ್ನಗಳು ಆರಂಭವಾಗಬಹುದು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಗಳಿಸುತ್ತಿದ್ದಂತೇ ಪಾಕ್ ತಾಲಿಬಾನಿಗಳು ಖೈಬರ್-ಪಕ್ತೂನ್​ಖ್ವಾ ಮತ್ತು ಉತ್ತರ ಬಲೂಚಿಸ್ತಾನಗಳನ್ನು ಪಾಕಿಸ್ತಾನದಿಂದ ಪ್ರತ್ಯೇಕಿಸಿ ಅಫ್ಘಾನಿಸ್ತಾನಕ್ಕೆ ಸೇರಿಸುವ ಪಕ್ತೂನಿಗಳ ಐತಿಹಾಸಿಕ ಬಯಕೆಯನ್ನು ಪೂರ್ಣಗೊಳಿಸಲು ಮುಂದಾಗಬಹುದು ಎಂಬ ಚರ್ಚೆ ಈಗ ಪಾಕಿಸ್ತಾನೀ ವೈಚಾರಿಕ ವರ್ಗದಲ್ಲೇ ಆರಂಭವಾಗಿದೆ. ‘ನೀವು ನಿಮ್ಮ ಹಿತ್ತಲಿನಲ್ಲಿ ಹಾವುಗಳನ್ನು ಸಾಕಿ, ಅವು ನಿಮ್ಮ ನೆರೆಯವರನ್ನು ಮಾತ್ರ ಕಚ್ಚುತ್ತವೆ ಎಂದು ನಂಬಿ ನೆಮ್ಮದಿಯಾಗಿರಲಾಗದು’ ಎಂದು ಹದಿಮೂರು ವರ್ಷಗಳ ಹಿಂದೆ ಅಮೆರಿಕನ್ ರಾಜಕಾರಣಿ ಹಿಲರಿ ಕ್ಲಿಂಟನ್ ಹೇಳಿದ್ದನ್ನು ಈಗ ಪಾಕಿಸ್ತಾನದಲ್ಲಿ ದೊಡ್ಡದಾಗಿ ನೆನಪಿಸಿಕೊಳ್ಳಲಾಗುತ್ತಿದೆ.ಇಂತಹ ಸನ್ನಿವೇಶದಲ್ಲಿ, ಅಫ್ಘನ್ ತಾಲಿಬಾನ್ ಬಗ್ಗೆ ಪಾಕ್ ಸೇನೆ ಮತ್ತು ಸರ್ಕಾರ ಯಾವ ನಿಲುವು ತಳೆಯಬಹುದು ಎನ್ನುವುದರ ಆಧಾರದ ಮೇಲೆ ಆ ಭಯೋತ್ಪಾದಕ ಸಂಘಟನೆಯ ಭವಿಷ್ಯ ನಿರ್ಧಾರವಾಗಲಿದೆ; ಜತೆಗೆ ಅಫ್ಘಾನಿಸ್ತಾನದ ರಾಜಕೀಯ ಭವಿಷ್ಯ, ಪಾಕಿಸ್ತಾನದ ಭೌಗೋಳಿಕ ಭವಿಷ್ಯ, ಭಾರತೀಯ ಉಪಖಂಡದ ಭೂ-ರಾಜಕೀಯ ಭವಿಷ್ಯ ಸಹ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)