ಅಂಕಣ

ನಮ್ಮ ಆಹಾರ ದಿನಚರಿ ಹೇಗಿದ್ದರೆ ಆರೋಗ್ಯಕ್ಕೆ ಉತ್ತಮ?

ಒಂದು ದಿನದ ಆಹಾರ ಪಟ್ಟಿ ಹೇಗಿರಬೇಕು ಎಂಬುದನ್ನು ಇಂದು ನೋಡೋಣ. ಬೆಳಗ್ಗೆ ಬೇಗ ಎದ್ದು ಪ್ರಾತರ್ವಿಧಿ ಮುಗಿಸಿ ಏನಾದರೂ ಒಂದನ್ನು ಕುಡಿಯಬೇಕು ಎಂಬುದು ಇತ್ತೀಚೆಗೆ ಚಾಲ್ತಿಗೆ ಬಂದಿದೆ. ನಮಗಿರುವ ಸಮಸ್ಯೆಗೆ ಅನುಗುಣವಾಗಿ ನಾವು ಯಾವುದೋ ಒಂದು ಜ್ಯೂಸ್ ಅಥವಾ ಕಷಾಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಒಂದು ಮಟ್ಟಿಗೆ ಸರಿಯಾದದ್ದೇ. ಆದರೆ ಬೆಳಿಗ್ಗೆ ಸ್ವಲ್ಪಮಟ್ಟಿಗಾದರೂ ಹಸಿವಾದ ನಂತರ ನಾವು ಇಂಥವುಗಳ ಸೇವನೆ ಮಾಡುವುದು ಒಳ್ಳೆಯದು. ಆದರೆ ಇದನ್ನು ಸೇವಿಸಿ ಅದು ಜೀರ್ಣವಾದ ನಂತರವೇ ಉಪಾಹಾರ ಸೇವಿಸಬೇಕು.

ಬೆಳಿಗ್ಗೆಯ ತಿಂಡಿಯನ್ನು ಸೇವಿಸದೇ ಇರುವುದು ದೊಡ್ಡ ಅಪರಾಧವಲ್ಲ. ಹಸಿವಾದರೂ ಕೆಲಸದ ಒತ್ತಡದ ಕಾರಣದಿಂದ ಉಪಾಹಾರ ತೆಗೆದುಕೊಳ್ಳದೇ ಹೋದರೆ ಅದು ನಿಜವಾಗಿಯೂ ಅಪರಾಧ. ಮಧ್ಯಾಹ್ನ ಊಟದ ಸಮಯಕ್ಕೆ ಹಸಿವಾಗುವಷ್ಟು ಮಾತ್ರ ಬೆಳಗ್ಗೆಯ ಉಪಾಹಾರ ಸೇವಿಸಬೇಕು. ಅತಿಯಾದ ಹಸಿವು ಮತ್ತು ಬೊಜ್ಜಿನಿಂದ ಬಳಲುತ್ತಿರುವವರು ಹಸಿ ತರಕಾರಿಗಳು, ಬೇಳೆ ಕಾಳುಗಳು ಮುಂತಾದವುಗಳನ್ನು ಮಾಮೂಲಿ ತಿಂಡಿಯ ಜೊತೆಗೆ ಸೇವಿಸಿದರೆ ಒಳ್ಳೆಯದು. ಮಧುಮೇಹ, ಬೊಜ್ಜು ಇತ್ಯಾದಿ ತೊಂದರೆ ಇರುವವರು ದೋಸೆ, ಉಪ್ಪಿಟ್ಟು, ರೊಟ್ಟಿಗಳನ್ನು ಮಾತ್ರ ಸೇವಿಸಿ ಉಪಹಾರ ಮುಗಿಸುವುದು ಸರಿಯಲ್ಲ. ಇಂಥವುಗಳನ್ನು ಅರ್ಧ ಪ್ರಮಾಣಕ್ಕೆ ಇಳಿಸಿ ಉಳಿದ ಅರ್ಧ ಭಾಗದಲ್ಲಿ ಪೋ›ಟೀನ್, ಕೊಬ್ಬು, ನಾರಿನ ಅಂಶ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.

ಬೆಳಿಗ್ಗೆ ಹೊಟ್ಟೆ ತುಂಬ ಊಟ ಮಾಡಬೇಕು ಎಂಬ ಕಲ್ಪನೆ ತುಂಬಾ ಜನರಿಗೆ ಇದೆ. ಅದು ಯಾವುದೇ ಕಾಲವಾಗಲಿ ಹೊಟ್ಟೆಯ ಮುಕ್ಕಾಲು ಭಾಗ ಮಾತ್ರ ಆಹಾರ ಸೇವಿಸುವುದು ಒಳ್ಳೆಯದು. ಮೂರು ಹೊತ್ತು ಊಟ ಮಾಡುವವರಾದರೆ ಮಧ್ಯಾಹ್ನದ ಊಟವನ್ನು 12 ರಿಂದ ಒಂದು ಗಂಟೆಯ ಮಧ್ಯದಲ್ಲಿ ಮಾಡಿದರೆ ಒಳ್ಳೆಯದು. ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವಿಸಿ ಇಂಟರ್ವಿುಟೆಂಟ್ ಫಾಸ್ಟಿಂಗ್ ಮಾಡುವ ರೂಢಿ ಇರುವವರಾದರೆ ಬೆಳಿಗ್ಗೆ 10 ರಿಂದ 11ರ ವರೆಗೆ ಮತ್ತು ಸಂಜೆ ಆರರಿಂದ ಏಳರ ಬಳಗೆ ಊಟ ಮಾಡುವ ರೂಢಿ ಇಟ್ಟುಕೊಳ್ಳಬಹುದು. ಕಾಬೋಹೈಡ್ರೇಟ್ಸ್, ಪೊ›ಟೀನ್, ಕೊಬ್ಬು, ನಾರಿನ ಅಂಶ ಹೀಗೆ ಎಲ್ಲ ರೀತಿಯ ಪದಾರ್ಥಗಳು ಇರುವ ಆಹಾರವನ್ನು ಸೇವಿಸಬೇಕು.

ಕರಿದ ಪದಾರ್ಥಗಳು, ಪಾಯಸ, ಸಿಹಿ ತಿಂಡಿಗಳು ಮುಂತಾದ ಜೀರ್ಣಕ್ಕೆ ಕಷ್ಟಕರವಾದ ಆಹಾರವನ್ನು ಸೇವಿಸುವುದಾದರೆ ಅಪರೂಪಕ್ಕೊಮ್ಮೆ ಮಧ್ಯಾಹ್ನದ ಅವಧಿಯಲ್ಲಿಯೇ ಸೇವಿಸುವುದು ಒಳ್ಳೆಯದು. ಬೆಳಿಗ್ಗೆ ಮತ್ತು ಮಧ್ಯಾಹ್ನದ ಆಹಾರ ಸೇವನೆಯ ಮಧ್ಯದಲ್ಲಿ ಕೆಲವರಿಗೆ ಹಸಿವಾಗುತ್ತದೆ. ಅಂತಹ ಸಂದರ್ಭದಲ್ಲಿ ಎಳನೀರು, ಹಣ್ಣಿನ ಜ್ಯೂಸ್​ಅಥವಾ ಗ್ರೀನ್ ಜ್ಯೂಸ್ ತೆಗೆದುಕೊಳ್ಳಬಹುದು. ಟೀ ಅಥವಾ ಕಾಫಿಯನ್ನು ಕುಡಿಯಲೇಬೇಕು ಎನ್ನುವಂಥವರು ಬೆಳಿಗ್ಗೆಯ ತಿಂಡಿ ಅಥವಾ ಮಧ್ಯಾಹ್ನದ ಊಟವಾದ ನಂತರ ಕೆಲ ಸಮಯದ ಒಳಗೆ ಸೇವಿಸಬೇಕು. ಸಂಜೆ ಆರು ಅಥವಾ ಏಳು ಗಂಟೆಯ ಹೊತ್ತಿಗೆ ಏನಾ ದರೂ ಸ್ನಾಕ್ಸ್ ತಿನ್ನಬೇಕು ಎಂಬ ಆಸೆ ತುಂಬಾ ಜನರಿಗೆ ಬರುತ್ತದೆ. ಆ ಸಮಯದಲ್ಲಿ ಊಟವನ್ನೇ ಮಾಡಿಬಿಡುವುದು ಒಳ್ಳೆಯದು.

ಸೂರ್ಯೋದಯದ ನಂತರ ಸೂರ್ಯಾಸ್ತದ ಒಳಗೆ ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಹಿತಕರ. ಸೂರ್ಯಾಸ್ತದ ನಂತರ ಊಟ ಮಾಡಲೇಬೇಕೆಂದರೆ ಹೆಚ್ಚೆಂದರೆ ಒಂದು ತಾಸಿನ ಒಳಗೆ ಊಟ ಮಾಡಿಬಿಡಬೇಕು. ರಾತ್ರಿ 9- 10 ಗಂಟೆಯ ಹೊತ್ತಿಗೆ ಊಟ ಮಾಡುವುದು ಬೊಜ್ಜು, ಮಧುಮೇಹ, ಗ್ಯಾಸ್ಟ್ರೈಟಿಸ್ ಮುಂತಾದ ಹಲವಾರು ಕಾಯಿಲೆಗಳನ್ನು ಕರೆದಂತೆಯೇ ಸರಿ. ಜೊತೆಗೆ ರಾತ್ರಿಯ ಊಟ ಸಾಧ್ಯವಾದಷ್ಟು ಲಘುವಾಗಿರಬೇಕು. ಏಕೆಂದರೆ ರಾತ್ರಿ ಊಟ ತಡವಾದರೆ ಮತ್ತು ಜೀರ್ಣಕ್ಕೆ ಭಾರವಾದರೆ ಆ ಸಮಯದಂತೆ ನೈಸರ್ಗಿಕವಾಗಿ ಕಡಿಮೆಯಾಗಿರುವ ಇನ್ಸುಲಿನ್ ಬಿಡುಗಡೆಯನ್ನು ನಾವು ಬಲವಂತವಾಗಿ ಹೆಚ್ಚಿಸಿದಂತೆ ಆಗುತ್ತದೆ. ಪದೇ ಪದೇ ಹೀಗೆ ಮಾಡುವುದರಿಂದ ಇನ್ಸುಲಿನ್ ರೆಜಿಸ್ಟನ್ಸ್ ಉಂಟಾಗಿ

ಡಯಾಬಿಟಿಸ್, ಪಿಸಿಓಡಿ, ಬೊಜ್ಜಿನಂತಹ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ಯಾವ ಊಟದಲ್ಲಿ ವ್ಯತ್ಯಾಸವಾದರೂ ರಾತ್ರಿಯ ಊಟವನ್ನು ಮಾತ್ರ ಸಾಧ್ಯವಾದಷ್ಟು ಬೇಗ ಮುಗಿಸಿಬಿಡಬೇಕು. ರಾತ್ರಿಯ ಊಟದಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪ, ಕರಿದ ಪದಾರ್ಥಗಳು ಮತ್ತು ಮಾಂಸಾಹಾರಗಳಂತಹ ಜೀರ್ಣಕ್ಕೆ ಕಷ್ಟಕರವಾದ ಆಹಾರಗಳ ಸೇವನೆ ಮಾಡದೇ ಇದ್ದರೆ ಒಳ್ಳೆಯದು. ಇವುಗಳ ಸೇವನೆ ಹೆಚ್ಚಾದಷ್ಟೂ ಅಜೀರ್ಣ, ಮಲಬದ್ಧತೆ, ಅಲರ್ಜಿಯಂಥ ತೊಂದರೆಗಳು ಉಂಟಾಗುತ್ತವೆ.