ಅಂಕಣ

ಕಿಡ್ನಿ ಸ್ಟೋನ್ ಇದೆ ಅಂತ ಗೊತ್ತಾಗುವುದು ಹೇಗೆ? ಅದನ್ನು ಗುಣಪಡಿಸಲು ಇರುವ ಮನೆಮದ್ದು ಏನು?

ಇತ್ತೀಚೆಗೆ ಕಿಡ್ನಿ ಸ್ಟೋನ್ ಎಂಬುದು ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಮೊದಲೆಲ್ಲ ವಯಸ್ಕರಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಸಮಸ್ಯೆ ಪ್ರಸ್ತುತ ನವಜಾತ ಶಿಶುವಿನ ಆದಿಯಾಗಿ ಎಲ್ಲ ವಯೋಮಾನದವರಲ್ಲಿ ಕಾಣಿಸಿಕೊಳ್ಳತೊಡಗಿದೆ. ಆದರೆ ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲು ಹೇಗೆ ಕಾಣಿಸಿಕೊಳ್ಳುತ್ತದೆ? ಇದಕ್ಕೆ ಕಾರಣವೇನು? ಲಕ್ಷಣಗಳೇನು? ಇದನ್ನು ಗುಣಪಡಿಸಿಕೊಳ್ಳಲು ಮನೆಯಲ್ಲೇ ಮಾಡಿಕೊಳ್ಳಬಹುದಾದ ಸುಲಭ ಪರಿಹಾರೋಪಾಯಗಳೇನು ಎಂಬುದರ ಬಗ್ಗೆ ಇಲ್ಲಿದೆ ವಿಸ್ತೃತ ಮಾಹಿತಿ.

ಕಿಡ್ನಿ ಸ್ಟೋನ್ ಎಂದರೇನು?:

ಇತ್ತೀಚೆಗೆ ಕಿಡ್ನಿ ಸ್ಟೋನ್ ಎಂಬುದು ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಮೊದಲೆಲ್ಲ ವಯಸ್ಕರಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಸಮಸ್ಯೆ ಪ್ರಸ್ತುತ ನವಜಾತ ಶಿಶುವಿನ ಆದಿಯಾಗಿ ಎಲ್ಲ ವಯೋಮಾನದವರಲ್ಲಿ ಕಾಣಿಸಿಕೊಳ್ಳತೊಡಗಿದೆ. ಆದರೆ ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲು ಹೇಗೆ ಕಾಣಿಸಿಕೊಳ್ಳುತ್ತದೆ? ಇದಕ್ಕೆ ಕಾರಣವೇನು? ಲಕ್ಷಣಗಳೇನು? ಇದನ್ನು ಗುಣಪಡಿಸಿಕೊಳ್ಳಲು ಮನೆಯಲ್ಲೇ ಮಾಡಿಕೊಳ್ಳಬಹುದಾದ ಸುಲಭ ಪರಿಹಾರೋಪಾಯಗಳೇನು ಎಂಬುದರ ಬಗ್ಗೆ ಇಲ್ಲಿದೆ ವಿಸ್ತೃತ ಮಾಹಿತಿ.

ಕಿಡ್ನಿ ಸ್ಟೋನ್ ಎಂದರೇನು?:

ಕಿಡ್ನಿಯಲ್ಲಿ ಕಲ್ಲು ಶೇಖರಗೊಳ್ಳಲು ಆರಂಭಿಸಿದಾಗ ಆರಂಭದಲ್ಲಿ ಯಾವ ಮುನ್ಸೂಚನೆ ಕಾಣಿಸಿಕೊಳ್ಳದಿದ್ದರೂ, ನಂತರದ ದಿನಗಳಲ್ಲಿ ಬೆನ್ನಿನ ಕೆಳಭಾಗದಲ್ಲಿ ಹೇಳಲಾಗದ ಅಸಹನೀಯ ನೋವು ಉಂಟಾಗುತ್ತದೆ. ಮೂತ್ರದಲ್ಲಿ ಖನಿಜಗಳು ಮತ್ತು ಇತರ ವಸ್ತುಗಳ ಗಟ್ಟಿಯಾದ ಪದಾರ್ಥಗಳು ಕಿಡ್ನಿಯಲ್ಲಿ ಸೇರಲಾರಂಭಿಸಿದಾಗ ಈ ನೋವು ಕಾಣಿಸುತ್ತದೆ. ಈ ಕಲ್ಲುಗಳು ಶೇಕಡಾ 75ರಷ್ಟು ಕ್ಯಾಲ್ಸಿಯಂನಿಂದ ಸಂಯೋಜನೆಗೊಂಡಿರುತ್ತವೆ. ಇವು ವಿಭಿನ್ನ ಆಕಾರ, ಗಾತ್ರ ಮತ್ತು ಬಣ್ಣಗಳನ್ನು ಹೊಂದಿರುತ್ತವೆ. ಇವುಗಳ ರಾಸಾಯನಿಕ ಸಂಯೋಜನೆಯ ಆಧಾರದ ಮೇಲೆ ಮೂತ್ರಪಿಂಡದ ಕಲ್ಲುಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಬಹುದು. 1. ಕ್ಯಾಲ್ಸಿಯಂ ಆಕ್ಸಲೇಟ್; 2. ಯೂರಿಕ್ ಆಮ್ಲ; 3. ಸ್ಟ್ರುವೈಟ್ 4. ಸಿಸ್ಟೀನ್.

ಮಹಿಳೆಯರಿಗೆ ಹೋಲಿಸಿದರೆ ಕಿಡ್ನಿ ಸ್ಟೋನ್ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸುಮಾರು 10 ಜನರಲ್ಲಿ ಒಬ್ಬರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕಿಡ್ನಿ ಸ್ಟೋನ್ ಸಮಸ್ಯೆಯಿದ್ದಲ್ಲಿ ತಜ್ಞ ವೈದ್ಯರಿಂದ ಸೂಕ್ತ ರೀತಿಯಲ್ಲಿ ತಪಾಸಣೆಗೊಳಪಟ್ಟು, ಪತ್ತೆಯಾದ ಕಲ್ಲುಗಳಿಗೆ ಅನುಗುಣವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು.

ಕಿಡ್ನಿ ಸ್ಟೋನ್‌ಗೆ ಕಾರಣವೇನು?:

* ತುಂಬಾ ಕಡಿಮೆ ನೀರು ಕುಡಿಯುವುದು

* ಪ್ರಾಣಿ ಪ್ರೊಟೀನ್ ಅಥವಾ ಸೋಡಿಯಂ ಹೆಚ್ಚಿರುವ ಆಹಾರ ಸೇವನೆ

* ಕ್ಯಾಲ್ಸಿಯಂ ಕಡಿಮೆ ಇರುವ ಆಹಾರ ಪದಾರ್ಥ ಸೇವನೆ

* ಕ್ಯಾಲ್ಸಿಯಂ ಆಧಾರಿತ ಆಂಟಾಸಿಡ್‌ಗಳಂತಹ ಕೆಲವು ಔಷಧಿಗಳ ಸೇವನೆಯಿಂದಾಗಿ

ಮೂತ್ರದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳಬಹುದು

* ಬೊಜ್ಜು, ಕರುಳಿನ ಉರಿಯೂತದ ಕಾಯಿಲೆ, ಹೈಪರ್‌ಥೈರಾಯಿಡ್, ಟೈಪ್ 2 ಮಧುಮೇಹ, ಮರುಕಳಿಸುವ ಮೂತ್ರದ ಸೋಂಕು ಹೊಂದಿರುವವರಲ್ಲಿ, ತೂಕ ಕಡಿಮೆ ಮಾಡಿಕೊಳ್ಳುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವವರಲ್ಲಿ ಹಾಗೂ ಅನುವಂಶಿಕವಾಗಿಯೂ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಕಿಡ್ನಿ ಸ್ಟೋನ್ ಲಕ್ಷಣಗಳು:

ಮೂತ್ರಪಿಂಡದಲ್ಲಿನ ಕಲ್ಲುಗಳು ವಿವಿಧ ಆಕಾರಗಳಲ್ಲಿ ಮತ್ತು ಗಾತ್ರಗಳಲ್ಲಿ ಕಂಡುಬರುತ್ತವೆ. ಕೆಲವು ಮರಳಿನ ಕಣಗಳಂತೆ ಚಿಕ್ಕದಾಗಿರಬಹುದು; ಮತ್ತೆ ಕೆಲವು ಕಲ್ಲುಗಳು ಬರಿಗಣ್ಣಿಗೆ ಕಾಣಿಸುವಷ್ಟು ದೊಡ್ಡವಾಗಿರಬಹುದು. ಕಿಡ್ನಿ ಸ್ಟೋನ್ ಇದೆ ಎಂಬುದರ ಲಕ್ಷಣಗಳೆಂದರೆ -

* ಬೆನ್ನು ಕೆಳಗಿನ ಎರಡೂ ಬದಿಯಲ್ಲಿ ತೀವ್ರ ನೋವು

* ತಾನಾಗಿಯೇ ಕಡಿಮೆಯಾಗದ ಅಸ್ಪಷ್ಟ ನೋವು

* ಅಸಹನೀಯ ಹೊಟ್ಟೆ ನೋವು

* ಶೀತ ಮತ್ತು ಜ್ವರ ಕಾಣಿಸಿಕೊಳ್ಳುವುದು

* ಮೂತ್ರದಲ್ಲಿ ರಕ್ತ ಕಂಡುಬರುವುದು

* ವಾಂತಿಯಾಗುವುದು ಅಥವಾ ವಾಕರಿಕೆ ಉಂಟಾಗುವುದು

* ಮೂತ್ರವು ವಾಸನೆಯಿಂದ ಕೂಡಿರುವುದು

ಕಿಡ್ನಿ ಕಲ್ಲುಗಳಿಗೆ ಮನೆ ಮದ್ದು

1. ಹೈಡ್ರೇಟ್ ಆಗಿರುವುದು: ದೇಹವು ನಿರ್ಜಲೀಕರಣವಾಗದಂತೆ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದಿರಿಸಿಕೊಳ್ಳುವುದು ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಮೂತ್ರ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದಾಗಿ ಮೂತ್ರಪಿಂಡದ ಚಿಕ್ಕ ಚಿಕ್ಕ ಕಲ್ಲುಗಳನ್ನು ಹೊರಹಾಕಲು ಸಹಾಯವಾಗುತ್ತದೆ. ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುವುದು ತ್ಯಾಜ್ಯದ ಸಾಂದ್ರತೆಯನ್ನು ತಡೆಯುತ್ತದೆ. ಇದರಿಂದಾಗಿ ಮೂತ್ರಪಿಂಡದ ಕಲ್ಲುಗಳ ರಚನೆ ಕಡಿಮೆಯಾಗುತ್ತದೆ.

2. ಗ್ರೀನ್ ಟೀ ಸೇವನೆ: ಮೂತ್ರಪಿಂಡದ ಕಲ್ಲುಗಳಿಗೆ ಗ್ರೀನ್ ಟೀ ಸೇವನೆ ಪರಿಣಾಮಕಾರಿ ಮನೆ ಮದ್ದು. ಇದು ಮೂತ್ರ ಪಿಂಡದಲ್ಲಿ ಕ್ಯಾಲ್ಸಿಯಂ ಶೇಖರಣೆಯನ್ನು ಕಡಿಮೆ ಮಾಡುತ್ತದೆ.

3. ರಾಸ್‌ಬೆರ‌್ರಿ ಸೇವನೆ: ರಾಸ್‌ಬೆರ‌್ರಿ ಹಣ್ಣುಗಳ ಸೇವನೆ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳುವುದನ್ನು ತಡೆಯುತ್ತದೆ. ಮೂತ್ರದ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ಮೂತ್ರನಾಳದಿಂದ ಕಲ್ಲುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಕಿಡ್ನಿ ಸ್ಟೋನ್ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.

4. ದಾಳಿಂಬೆ ಸೇವನೆ: ದಾಳಿಂಬೆಯು ಸಕ್ರಿಯ ಫೈಟೊಕೆಮಿಕಲ್‌ಗಳ ಸಮೃದ್ಧ ಮೂಲ. ಇದು ಉಷ್ಣ ಮೂತ್ರ ಸಂವೇದನೆಯನ್ನು ಕಡಿಮೆ ಮಾಡುತ್ತದೆ. ಫೈಟೊಕೆಮಿಕಲ್ಸ್ ಸ್ನಾಯು ಸಡಿಲಗೊಳಿಸುವ ಲಕ್ಷಣ ಹೊಂದಿರುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ತಾಜಾ ದಾಳಿಂಬೆ ಜ್ಯೂಸ್ ಸೇವನೆಯು ಕಿಡ್ನಿ ಸ್ಟೋನ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

5. ಹುರುಳಿ ಕಾಳು: ಹೆಚ್ಚು ಔಷಧೀಯ ಮೌಲ್ಯ ಹೊಂದಿರುವ ಆಹಾರ ಪದಾರ್ಥ ಹುರುಳಿ ಕಾಳು. ಇದು ಕಿಡ್ನಿ ಸ್ಟೋನ್ ನಿರ್ವಹಣೆಯಲ್ಲಿ ಉತ್ತಮ ಪಾತ್ರ ವಹಿಸುತ್ತದೆ. ಒಂದು ಕುಕ್ಕರ್‌ಗೆ ಹುರುಳಿ ಕಾಳು ಹಾಗೂ ನೀರು ಸೇರಿಸಿ ಚೆನ್ನಾಗಿ ಬೇಯಿಸಿ, ಸೂಪ್ ಮಾಡಿಕೊಂಡು ಸೇವಿಸಬೇಕು. ಇದು ಕಿಡ್ನಿ ಸ್ಟೋನ್ ರಚನೆ ಹಾಗೂ ದೇಹದಿಂದ ಸ್ಟೋನ್‌ಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ.

6. ಎಳನೀರು ಸೇವಿಸುವುದು: ಎಳನೀರು ದಾಹವನ್ನು ಹೋಗಲಾಡಿಸಿ ಉಲ್ಲಾಸ ಮತ್ತು ಚೈತನ್ಯವನ್ನು ನೀಡುವುದಲ್ಲದೆ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಎಳನೀರು ಮೂತ್ರವರ್ಧಕ ಗುಣಲಕ್ಷಣ ಹೊಂದಿರುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

7. ಕೊತ್ತಂಬರಿ ಸೊಪ್ಪು: ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪನ್ನು ನಿಯಮಿತವಾಗಿ ಬಳಸಿ. ತರಕಾರಿ ಸಲಾಡ್ ಮತ್ತು ಸೂಪ್‌ಗಳಲ್ಲಿಯೂ ಕೊತ್ತಂಬರಿ ಸೊಪ್ಪು ಬಳಸುವುದರಿಂದ ಕಿಡ್ನಿ ಸ್ಟೋನ್ ಅಪಾಯವನ್ನು ಕೊಂಚ ಮಟ್ಟಿಗೆ ತಗ್ಗಿಸಬಹುದು.

8. ಆಹಾರಕ್ರಮ ಬದಲಾವಣೆ: ಹಣ್ಣಿನ ರಸಗಳು ಸೇರಿದಂತೆ ದ್ರವಪದಾರ್ಥ ಸೇವನೆಯನ್ನು ಹೆಚ್ಚಿಸಿ. ತಂಪುಪಾನೀಯಗಳ ಸೇವನೆ ತಪ್ಪಿಸಿ. ಆಹಾರದಲ್ಲಿ ಹೆಚ್ಚು ಉಪ್ಪು ಬಳಸದಂತೆ ಎಚ್ಚರವಹಿಸಿ. ಕುಡಿಯುವ ನೀರಿಗೆ ಕೆಲವು ಹನಿ ನಿಂಬೆ ರಸ ಸೇರಿಸಿ ಕುಡಿಯಿರಿ.

9. ಅಂಜೂರದ ಬಳಕೆ: ಐದರಿಂದ ಹತ್ತು ನಿಮಿಷಗಳ ಕಾಲ ಸ್ವಲ್ಪ ನೀರಿನೊಂದಿಗೆ ಅಂಜೂರದ ಹಣ್ಣುಗಳನ್ನು ಕುದಿಸಬೇಕು. ಬಳಿಕ ಒಂದು ಕಪ್‌ಗೆ ನೀರನ್ನು ಸುರಿದುಕೊಂಡು, ಆ ನೀರನ್ನು ಸೇವಿಸಬೇಕು. ಇದು ಕಿಡ್ನಿ ಸ್ಟೋನ್‌ಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

10. ಲವಂಗದ ಎಲೆ: ಮೂತ್ರಪಿಂಡದ ಕಲ್ಲುಗಳ ನಿವಾರಣೆಗೆ ಲವಂಗದ ಎಲೆಯ ಚಹಾ ತಯಾರಿಸಿ ಕುಡಿಯಬಹುದು. ಕೆಲವು ಲವಂಗದ ಎಲೆಗಳ ಜತೆಗೆ ಏಲಕ್ಕಿಯನ್ನು ಸೇರಿಸಿ ನೀರಿನಲ್ಲಿ ಕುದಿಸಬೇಕು. ಈ ನೀರನ್ನು ಮೂರನೇ ಒಂದು ಭಾಗಕ್ಕೆ ತಗ್ಗಿಸಿ ಕುಡಿಯುವುದರಿಂದ ಕಿಡ್ನಿ ಸ್ಟೋನ್ ರೂಪುಗೊಳ್ಳುವುದನ್ನು ತಡೆಯಬಹುದು.

ಕಿಡ್ನಿ ಸ್ಟೋನ್ ನಿವಾರಣೆಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರ ಜತೆಗೆ ಮನೆಯಲ್ಲೇ ಇಂತಹ ಕೆಲವು ಮದ್ದುಗಳನ್ನು ಕೂಡ ಸೇರಿಸಿಕೊಳ್ಳಬಹುದೇ ಹೊರತು ಇವುಗಳೇ ಅಂತಿಮ ಪರಿಹಾರವಲ್ಲ ಎಂಬುದು ಗಮನದಲ್ಲಿರಲಿ.