ಅಂಕಣ

ಸಮುದಾಯದಿಂದ ದೂರ ಭವನಗಳು

ರಾಜ್ಯದಲ್ಲಿ ಸಮುದಾಯ ಭವನಗಳಿಗೆ ಕೊರತೆ ಇಲ್ಲ. ಆದರೆ, ದೊಡ್ಡಮೊತ್ತದ ಅನುದಾನ ಖರ್ಚು ಮಾಡಿ ನಿರ್ವಿುಸಲಾದ ಈ ಭವನಗಳು ಸ್ಥಳೀಯ ಆಡಳಿತ ಮತ್ತು ಸರ್ಕಾರದ ನಿರ್ಲಕ್ಷ್ಯದ ಪರಿಣಾಮವಾಗಿ ಜನರ ಬಳಕೆಗೆ ಲಭ್ಯವಾಗುತ್ತಿಲ್ಲ. ಎಷ್ಟೋ ಕಡೆ ಸಮುದಾಯ ಭವನಗಳು ಶಿಥಿಲಾವಸ್ಥೆ ತಲುಪಿದರೂ, ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಜನರ ಉಪಯೋಗಕ್ಕೆ ಲಭ್ಯವಾಗಬೇಕಿದ್ದ ಸಮುದಾಯ ಭವನಗಳ ಸ್ಥಿತಿ ನಿಜಕ್ಕೂ ಶೋಚನೀಯ.

| ಮೃತ್ಯುಂಜಯ ಕಪಗಲ್ ಬೆಂಗಳೂರು

ಯೋಜನೆ, ಕಾರ್ಯಕ್ರಮ, ಅನುದಾನ ಯಾವುದೇ ಇರಲಿ. ರಸ್ತೆ, ಸೇತುವೆಗಳ ಸುಧಾರಣೆ ಕಾಮಗಾರಿಗೆ ಮೊದಲ ಹಾಗೂ ಸಮುದಾಯ ಭವನಗಳ ನಿರ್ವಣಕ್ಕೆ ಎರಡನೇ ಸ್ಥಾನ. ಆದರೆ ಬಳಕೆ, ನಿರ್ವಹಣೆ ವಿಚಾರದಲ್ಲಿ ಇದೇ ಮಾತನ್ನು ಹೇಳಲು ಸಾಧ್ಯವಿಲ್ಲ. ಶಾಸಕರ ವಿವೇಚನಾ ನಿಧಿಯಿಂದ ಹಿಡಿದು ವಿವಿಧ ಅಭಿವೃದ್ಧಿ ನಿಗಮಗಳ ಅನುದಾನ ಕೋರಿದ ಪ್ರಸ್ತಾವನೆಗಳಲ್ಲಿ ಸಮುದಾಯ ಭವನಗಳದ್ದೇ ಸಿಂಹಪಾಲು. ಸರಿಯಾಗಿ ಬಳಕೆಯಾಗದೆ ಬೀಳು ಬಿದ್ದಿರುವುದು ಬಹುಪಾಲು ಎಂಬ ಆಕ್ಷೇಪಕ್ಕೂ ಗುರಿಯಾಗಿವೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರವೃತ್ತಿ ಹೆಚ್ಚಿರುವುದನ್ನು ಆರ್ಥಿಕ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸಮುದಾಯ ಭವನ ನಿರ್ಮಾಣ ಪ್ರಸ್ತಾವನೆಗಳಿಗೆ ಕತ್ತರಿ ಪ್ರಯೋಗಿಸಲು ಮುಂದಾಯಿತು.

ಇದು, ಹಲವು ಶಾಸಕರ ಕೆಂಗಣ್ಣಿಗೂ ಗುರಿಯಾಯಿತು. ಆಡಳಿತ ಪಕ್ಷದ ಹಲವು ಶಾಸಕರ ಅಪಸ್ವರ, ಬಹಿರಂಗ ಅಸಮಾಧಾನಕ್ಕೆ ಕಾರಣವಾದ ಅಂಶಗಳಲ್ಲಿ ‘ಸಮುದಾಯ ಭವನ’ಕ್ಕೆ ನಿರ್ಬಂಧವೂ ಸೇರಿತ್ತು ಎನ್ನಲಾಗಿದೆ. ಸಮುದಾಯ ಭವನಗಳ ನಿರ್ವಣವೆಂದರೆ ಎಲ್ಲರಿಗೂ ಇಷ್ಟ. ನಂತರದ ನಿರ್ವಹಣೆಯೇ ಕಷ್ಟ ಎಂಬ ಕಟುವಾಸ್ತವ ಅರಿತು, ಮುಖ್ಯಮಂತ್ರಿ ಸೂಚನೆಯಂತೆ ಹೆಚ್ಚಿನ ಆದ್ಯತೆ ಬೇಡವೆಂದು ತಿಳಿಸಲಾಗಿತ್ತು ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

ಸಿಎಂ ಮೂಗುದಾರ

ಯಾವೆಲ್ಲ ಕಾಮಗಾರಿಗಳಿಗೆ ಆದ್ಯತೆ ನೀಡಬೇಕೆಂದು ಹಣಕಾಸು ಇಲಾಖೆ ಸೂಚನೆಗೆ ಬಹಳಷ್ಟು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಕ್ಷೇತ್ರದ ಜನರಿಗೆ ಉತ್ತರಿಸುವುದು ಕಷ್ಟವಾಗುತ್ತದೆ ಎಂಬ ತಕರಾರು ಹೆಚ್ಚಾಯಿತು. ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ವಿಷಯ ತಿಳಿದು, ಸಾರ್ವಜನಿಕ ಆಸ್ತಿ ಸೃಜನೆ ಜತೆಗೆ ಅನುದಾನದ ಸದ್ಬಳಕೆಗೆ ಮಾರ್ಗಸೂಚಿ ಸಿದ್ಧಪಡಿಸಲು ಸೂಚಿಸಿದರು. ಇದರಿಂದಾಗಿ ‘ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ’ ಅನುದಾನ ಬಳಕೆಗೆ ಮೂಗುದಾರ ಬಿಗಿಯಲು ಸಾಧ್ಯವಾಯಿತು ಎಂದು ಮೂಲಗಳು ಹೇಳಿವೆ.

ಯೋಜನೆಯಡಿ ಒಟ್ಟು ಎಂಟು ಸಾವಿರ ಕೋಟಿ ರೂ. ಕಾದಿರಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರು ಮಾಡುವ ಅನುದಾನದಲ್ಲಿ ಲೋಕೋಪಯೋಗಿ, ಆರ್​ಡಿಪಿಆರ್ ರಸ್ತೆ, ಸೇತುವೆಗಳ ಕಾಮಗಾರಿಗೆ ಶೇ.75 ಕಾದಿಡುವುದು ಕಡ್ಡಾಯ. ಉಳಿದ ಶೇ.25 ಅನುದಾನವನ್ನು ಆಯಾ ಶಾಸಕರ ವಿವೇಚನೆಗೆ ಬಿಡಲಾಗಿದೆ. ಸದ್ಯ ಆಡಳಿತ ಶಾಸಕರಿಗೆ ತಲಾ 50 ಕೋಟಿ ರೂ., ಈ ಪೈಕಿ ಬೆಂಗಳೂರಿನ ಶಾಸಕರಿಗೆ ತಲಾ 100 ಕೋಟಿ ರೂ. ಅನುದಾನದ ಭರವಸೆ ದೊರೆತಿದೆ. ಸಚಿವ, ಶಾಸಕರ ಜತೆಗೆ ಸಿಎಂ ಸ್ವತಃ ರ್ಚಚಿಸಿ ನೀಡಿದ ಸಲಹೆ ಪ್ರಕಾರ ಪ್ರಸ್ತಾವನೆಗಳು ಆರ್ಥಿಕ ಇಲಾಖೆಗೆ ಸಲ್ಲಿಕೆಯಾಗಿವೆ. ವಿಪಕ್ಷ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಎಷ್ಟೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅರ್ಜಿಗಳು ತಿರಸ್ಕೃತ

ಶಾಸಕರ ಶಿಫಾರಸಿನ ಪ್ರಕಾರ ಸಮುದಾಯ ಭವನಗಳ ನಿರ್ವಣಕ್ಕೆ ಮಂಜೂರು ಕೋರಿ ಹಲವು ಸಂಘ-ಸಂಸ್ಥೆಗಳು ಪೂರಕ ದಾಖಲೆ, ವಿವರಗಳೊಂದಿಗೆ ಅರ್ಜಿ ಸಲ್ಲಿಸುತ್ತವೆ. ಹೀಗೆ ಬಂದ 1,400 ಅರ್ಜಿಗಳು, ಪೂರಕ ದಾಖಲೆಗಳು ಇಲ್ಲವೆಂಬ ಕಾರಣಕ್ಕೆ (ಎರಡೂ ಕಾಲು ವರ್ಷಗಳಲ್ಲಿ) ತಿರಸ್ಕೃತವಾಗಿವೆ. ಈ ಪೈಕಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳೂ ಸೇರಿವೆ. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಡಿ ಅಭಿವೃದ್ಧಿ ನಿಗಮಗಳ ಅನುದಾನದಲ್ಲಿ ಸಮುದಾಯ ಭವನ/ಶಾದಿ ಮಹಲ್ ನಿರ್ವಣಕ್ಕೆ ಆದ್ಯತೆ ಏಕೆ? ಎಂಬ ಪ್ರಶ್ನೆಗೆ ಶಾಸಕರ ಬಳಿ ಸುಲಭ ಉತ್ತರವಿದೆ.

ಸಂಘ-ಸಂಸ್ಥೆಗಳು, ಜಾತಿ-ಮತಗಳ ಸಮುದಾಯಗಳ ಬೇಡಿಕೆ ಪರಿಗಣಿಸಲೇಬೇಕಾಗುತ್ತದೆ ಎಂಬ ಸಮಜಾಯಿಷಿ ನೀಡುತ್ತಾರೆ. ಮಠ-ಮಂದಿರಗಳಿಗೆ ಹೊಂದಿಕೊಂಡಂತೆ ಕಲ್ಯಾಣ ಮಂಟಪಗಳು ನಿರ್ವಣವಾಗುತ್ತವೆ. ಅಷ್ಟೇ ಏಕೆ ಮಂಗಳೂರು ತುಳು, ಕೊಂಕಣಿ, ಬ್ಯಾರಿ ಸಹಿತ ನಾಲ್ಕು ಅಕಾಡೆಮಿಗಳಿಗೆ ಒಂದೇ ಸೂರಿನಡಿ ಹೊಂದುವಂತಹ ಸಮುದಾಯ ಭವನ ಕಟ್ಟುವ ಅವಕಾಶ ಕೈಚೆಲ್ಲಿ, ಪ್ರತ್ಯೇಕವಾಗಿ ನಿರ್ವಿುಸಿಕೊಂಡಿವೆ. ಬೇಡಿಕೆ, ನಿರ್ವಿುಸಿದ ಹೊಸತರಲ್ಲಿ ಇರುವ ಉತ್ಸಾಹ ನಂತರ ಇಲ್ಲವಾಗಿ ಕ್ರಮೇಣ ಪಾಳು ಕೊಂಪೆ, ಅಕ್ರಮ ಅಡ್ಡೆಗಳ ತಾಣವಾದ ದೂರುಗಳಿವೆ. ಪ್ರಾದೇಶಿಕ ಅಸಮತೋಲನ ಕುರಿತು ಅಧ್ಯಯನ ನಡೆಸಿದ ಡಾ.ಡಿ.ಎಂ.ನಂಜುಂಡಪ್ಪ ವರದಿ ಸೇರಿ ಇಲಾಖೆಗಳು ಆಂತರಿಕವಾಗಿ ಸಮುದಾಯ ಭವನಗಳು ಬೀಳು ಬಿದ್ದಿರುವ ಮಾಹಿತಿ ಪಡೆದಿದ್ದು, ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ.

ಪರಿಹಾರಕ್ಕೆ ಚಿಂತನೆ

ಜನಸಂಖ್ಯೆ ಹೆಚ್ಚಿದಂತೆ ಸಮುದಾಯ ಭವನಗಳಿಗೆ ಬೇಡಿಕೆ ಸಹಜ. ಭವನಗಳ ಸದ್ಬಳಕೆ, ವಿನಿಯೋಗಿಸಿದ ಅನುದಾನವೂ ಸಾರ್ಥಕವಾಗಬೇಕು. ಸೂಕ್ತ, ಶಾಶ್ವತ ಪರಿಹಾರ ಕ್ರಮವೊಂದರ ಬಗ್ಗೆ ವಿವಿಧ ಇಲಾಖೆಗಳು ಗಂಭೀರ ಚಿಂತನೆ ನಡೆಸಿದ್ದು, ಪ್ರಸ್ತಾವನೆಯನ್ನು ಸಿಎಂ ಮುಂದಿಡಲು ಯೋಚಿಸಿವೆ.

ಅಕ್ರಮ ಚಟುವಟಿಕೆಗಳ ತಾಣ

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲಾದ್ಯಂತ 235 ಸಮುದಾಯ ಭವನಗಳು ಮಂಜೂರಾಗಿವೆ. ಈ ಪೈಕಿ 112 ಭವನಗಳ ಕಾಮಗಾರಿ ಮುಗಿದಿದ್ದು, 123 ಭವನಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇತ್ತೀಚೆಗೆ ಮತ್ತೆ 45 ಹೊಸ ಭವನಗಳು ಮಂಜೂರಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮಂಜೂರಾದ ಈ ಭವನಗಳಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಕೊರತೆಯಿಂದಾಗಿ ಅನೇಕ ಭವನಗಳ ಕಾಮಗಾರಿ ಅವಧಿಯೊಳಗೆ ಪೂರ್ಣಗೊಂಡಿಲ್ಲ. ಪೂರ್ಣಗೊಂಡಿರುವ ಅನೇಕ ಭವನಗಳು ಕೂಡ ಸರಿಯಾದ ನಿರ್ವಹಣೆಯಿಲ್ಲದೆ ಹಾಳಾಗುತ್ತಿವೆ. ಕೆಲವು ಭವನಗಳ ಆವರಣದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ.

ಅನ್ಯ ಉದ್ದೇಶಕ್ಕೆ ಬಳಕೆ

ರಾಮನಗರ ಜಿಲ್ಲೆಯ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲೂಕುಗಳಲ್ಲಿ ಹಲವು ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಯಾವ ಉದ್ದೇಶಕ್ಕಾಗಿ ನಿರ್ಮಾಣ ಮಾಡಲಾಗಿತ್ತೋ, ಆ ಉದ್ದೇಶಕ್ಕೆ ಬಳಕೆ ಆಗುತ್ತಿಲ್ಲ. ಹುಲಿಕೆರೆ ಗುನ್ನೂರು ಗ್ರಾಪಂ ವ್ಯಾಪ್ತಿಯ ಅಮ್ಮನಪುರದೊಡ್ಡಿ ಗ್ರಾಮದಲ್ಲಿ ಕಳೆದ 10 ವರ್ಷದ ಹಿಂದೆ ನಿರ್ಮಾಣ ಮಾಡಿರುವ ಸೇವಾಲಾಲ್ ಸಮುದಾಯ ಭವನ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ಲಕ್ಕೋಜನಹಳ್ಳಿ ಶಿವನಹಳ್ಳಿ ದೇವಸ್ಥಾನ ಬಳಿ ನಿರ್ಮಾಣ ಮಾಡಿರುವ ಸಮುದಾಯ ಭವನ ಹಾಳಾಗಿ ಶಿಥಿಲಾವಸ್ಥೆ ತಲುಪಿದೆ. ಹಾಗಲಹಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ಕಟ್ಟಡದ ನಿರ್ವಹಣೆ ಇಲ್ಲ.

ಪೂರ್ಣಗೊಳ್ಳದ ಕೆಲಸ

ರಾಯಚೂರು ಜಿಲ್ಲೆಯಲ್ಲಿ 2017ರಿಂದ 2025ರವರೆಗೆ ಒಟ್ಟು 26 ಸಮುದಾಯ ಭವನಗಳನ್ನು ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಜಿಲ್ಲೆಯ ಮಸ್ಕಿ, ಲಿಂಗಸುಗೂರು ಮತ್ತು ದೇವದುರ್ಗ ತಾಲೂಕುಗಳಲ್ಲಿ ಕಳೆದ ಐದು ವರ್ಷಗಳಿಂದ ಕೇವಲ ಕಂಬಗಳನ್ನು ಹಾಕಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇಷ್ಟಾದರೂ, ಅಧಿಕಾರಿಗಳು ಎಲ್ಲ ಭವನಗಳ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ವರದಿ ಸಲ್ಲಿಸಿದ್ದಾರೆ. ಉದಾಹರಣೆಗೆ, ಮಸ್ಕಿಯಲ್ಲಿ ಕುರುಬ ಸಮಾಜದ ಸಮುದಾಯ ಭವನಕ್ಕಾಗಿ ಕೇವಲ ಕಂಬಗಳನ್ನು ಹಾಕಿದ್ದು, ಕಾಮಗಾರಿ ನನೆಗುದಿಗೆ ಬಿದ್ದಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಕಳೆದ ಎರಡೂವರೆ ದಶಕದಲ್ಲಿ ಹತ್ತಾರು ಸಮುದಾಯ ಭವನ ನಿರ್ವಿುಸಲಾಗಿದೆ. ಇದರಲ್ಲಿ ಹಲವು ಸಮುದಾಯ ಭವನಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿವೆ. ಹಲವು ಕಟ್ಟಡಗಳ ಕಾಮಗಾರಿ ಗುಣಮಟ್ಟದ್ದಾಗಿಲ್ಲ. ಇನ್ನೂ ಹಲವು ಭವನಗಳು ಶಿಥಿಲಗೊಂಡಿವೆ. ಮತ್ತೆ ಕೆಲವು ಬಳಕೆಗೆ ಬಾರದೇ ಪಾಳು ಬಿದ್ದಿವೆ. ಹಾವೇರಿ ನಗರದಲ್ಲಿ ವಾಲ್ಮೀಕಿ ಭವನ ಹಲವು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇದೆ. ದೇವಗಿರಿ ಯಲ್ಲಾಪುರದಲ್ಲಿರುವ ಬಂಜಾರ ಭವನ, ಸೇರಿ ಹಲವು ಭವನಗಳು ಜನವಸತಿ ಬಿಟ್ಟು ದೂರದಲ್ಲಿ ನಿರ್ವಿುಸಿದ ಪರಿಣಾಮ ಜನಬಳಕೆಗೆ ಲಭ್ಯವಾಗುತ್ತಿಲ್ಲ.

ಭವನಗಳ ಸ್ಥಿತಿ ಹೀಗಿದೆ

1.ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಹತ್ತು ವರ್ಷದ ಅವಧಿಯಲ್ಲಿ 340ಕ್ಕೂ ಅಧಿಕ ಸಮುದಾಯ ಭವನ ನಿರ್ವಣಗೊಂಡಿವೆ. ಪಟ್ಟಣ ಪ್ರದೇಶಗಳಲ್ಲಿ ಸಮುದಾಯ ಭವನಗಳು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ.

2.ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗೂರ (ಎಂ) ಗ್ರಾಮದಲ್ಲಿ ಸಮುದಾಯ ಭವನ ಪಾಳು ಬಿದ್ದಿದೆ. ಐದು ಲಕ್ಷ ರೂ. ವೆಚ್ಚದಲ್ಲಿ 2015-16ರಲ್ಲಿ ಈ ಭವನ ನಿರ್ವಿುಸಲಾಗಿದ್ದು, ನಿರ್ವಹಣೆ ಇಲ್ಲದೆ ಹಾಳಾಗಿದೆ.

3.ಬೆಂಗಳೂರು ಗ್ರಾಮಾಂತರದ ತೂಬಗೆರೆ ಸಮುದಾಯ ಭವನ ಸೌಲಭ್ಯಗಳಿಂದ ವಂಚಿತವಾಗಿದೆ. ಕೊಠಡಿಗಳು ಹಾಳಾಗಿ ಹಲವು ವರ್ಷಗಳೇ ಕಳೆದಿದೆ. ಮದುವೆ ಸಮಾರಂಭಗಳು ನಡೆದರೆ ಶೌಚಗೃಹವೇ ಇಲ್ಲದಂತಾಗಿದೆ. ಸಮುದಾಯ ಭವನ ರಿಪೇರಿ ಮಾಡಿಸಿ ವರ್ಷಗಳೇ ಕಳೆದಿವೆ.

4.ವಿಜಯನಗರ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಯಿಂದ 5 ಸೇವಾಲಾಲ್ ಭವನ, 15 ಜಗಜೀವನ ರಾಮ್ ಭವನ ಮತ್ತು 33 ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ. ಇನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 4 ವಾಲ್ಮೀಕಿ ಭವನಗಳು ಪೂರ್ಣಗೊಂಡಿವೆ. ಆದರೆ, ಇವುಗಳ ಬಳಕೆ ತೀರಾ ಕಡಿಮೆಯಾಗಿದೆ.

5.ಮೈಸೂರಿನ ವಿಜಯನಗರದಲ್ಲಿ ದಶಕದ ಹಿಂದೆ ವಾಲ್ಮೀಕಿ ಭವನ ಭವ್ಯವಾಗಿ ನಿರ್ವಣಗೊಂಡಿದ್ದರೂ ಸೂಕ್ತ ಸೌಲಭ್ಯಗಳು ನೀಡದ ಹಿನ್ನೆಲೆಯಲ್ಲಿ ಸಮುದಾಯದವರು ಈ ಭವನವನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ.

6.ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬ ಳಿಯ ಬಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಠಲಾಪುರ ಗ್ರಾಮದಲ್ಲಿ ಬಳಕೆ ಇಲ್ಲದೆ ವಾಲ್ಮೀಕಿ ಸಮು ದಾಯ ಭವನ ಪಾಳು ಬಿದ್ದಿದೆ. ಮಳೆ ನೀರು ಮೇಲ್ಛಾವಣಿ ಯಲ್ಲಿ ನಿಂತು ಗೋಡೆಗಳು ಹಾಳಾಗುವ ಸ್ಥಿತಿ ತಲುಪಿವೆ.

7.ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ಭವನ ನಿರ್ವಣದ ಕಾಮಗಾರಿ ಕಳೆದ ಏಳು ವರ್ಷಗಳಿಂದಲೂ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ.

8.ಕಲಬುರಗಿ ನಗರದ ಧರಿಯಾಪುರ ಕೋಟನೂರ ಜಿಡಿಎ ಲೇಔಟ್​ನಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ನಿಜಶರಣ ಅಂಬಿಗರ ಚೌಡಯ್ಯ ಸ್ಮಾರಕ ಭವನ ಲೋಕಾರ್ಪಣೆ ವಿಷಯದ ಗೊಂದಲದಿಂದಾಗಿ ಬಳಕೆ ಇಲ್ಲದೆ ವ್ಯರ್ಥವಾಗಿದೆ.

ಸಮುದಾಯಗಳ ಬೇಡಿಕೆಯಂತೆ ಸಮು ದಾಯ ಭವನಗಳ ಮಂಜೂರು ಅನಿ ವಾರ್ಯ. ಆದರೆ ಪೂರಕ ದಾಖಲೆ ಗಳಿಲ್ಲದೆ ಸಲ್ಲಿಕೆಯಾದ ಅರ್ಜಿಗಳನ್ನು ತಿರಸ್ಕರಿಸಿದ ನಿದರ್ಶನಗಳಿವೆ. | ಶಿವರಾಜ್ ತಂಗಡಗಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಜಾತಿಗೊಂದರ ಬದಲು ಗ್ರಾಮ ಕ್ಕೊಂದು ಸಮುದಾಯ ನಿರ್ಮಾಣ ಸೂಕ್ತ, ಸಾರ್ಥಕ. ಇದರಿಂದ ಸಮುದಾಯ ಭವನಗಳ ನಿರ್ವಹಣೆ, ಹಣ ಬಳಕೆಯೂ ಸಮರ್ಪಕ. | ವಿ.ಸುನಿಲ್ ಕುಮಾರ್ ಶಾಸಕ