ಅಂಕಣ

ಗೂಗಲ್​ನಿಂದ ಪೀಡಕ ಪತ್ತೆ

Webdesk - Mallikarjun K R
 ತಮಿಳುನಾಡಿನ ತಂಜಾವೂರು ಪಟ್ಟಣದಿಂದ 15 ಕಿ.ಮೀ. ದೂರದಲ್ಲಿರುವ ಗ್ರಾಮವೇ ಸಾಲಿಯಮಂಗಲಂ. ಈ ಗ್ರಾಮದ ಪ್ರಗತಿಪರ ರೈತ ವಿಕ್ಟರ್ ಜೇಮ್ಸ್​ ರಾಜ. ತಂಜಾವೂರಿನಿಂದಲೇ ಎಂ.ಎಸ್​ಸಿ. ಕಾಮರ್ಸ್ ಪದವಿ ಗಳಿಸಿದ ಆತ ಸೂಕ್ತ ನೌಕರಿ ದೊರೆಯದ ಕಾರಣ ತನ್ನ ಜಮೀನಿನಲ್ಲಿ ಸಾವಯವ ಕೃಷಿ ಮಾಡತೊಡಗಿದ. ಅವನಿಗೆ ಈ ಕೃಷಿಯಲ್ಲಿ ಲಾಭವೂ ಬಂತು, ಹೆಸರೂ ಬಂತು. ತಾನು ಸಾವಯವ ಕೃಷಿಕ ಎಂದು ಹೇಳಿಕೊಂಡು ಫೇಸ್​ಬುಕ್​ನಲ್ಲಿ ಸಾಕಷ್ಟು ಬೆಂಬಲಿಗರನ್ನು ಗಳಿಸಿದ.

32 ವರ್ಷದ ವಿಕ್ಟರ್ ತನ್ನ ಗ್ರಾಮದ ಬಡಜನರ ಸಮಸ್ಯೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳ ಬಳಿಗೆ ಹೋಗಿ ದೂರು ನೀಡಿ ಅವುಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದ. ಮಂತ್ರಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ಅರ್ಜಿಗಳನ್ನು ಗುಜರಾಯಿಸುತ್ತಿದ್ದ. ಹೀಗಾಗಿ ಆತ ಎಲ್ಲರಿಗೂ ಸಹಾಯ ಮಾಡುವ ವ್ಯಕ್ತಿ ಎಂದು ಹೆಸರು ಗಳಿಸಿದ. ಸ್ಥಳೀಯ ವಾಹಿನಿಗಳು ಹಾಗೂ ಪತ್ರಿಕೆಗಳು ಅವನ ಸಂದರ್ಶನಗಳನ್ನು ಮಾಡಿದವು. ಇಡೀ ಜಿಲ್ಲೆಯಲ್ಲಿಯೇ ವಿಕ್ಟರ್ ಹೆಸರುವಾಸಿಯಾದ.

ತಾನು ಪರಿಸರ ವಿಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನ ಗಳಿಸಬೇಕೆಂದು ನಿರ್ಧರಿಸಿದ ವಿಕ್ಟರ್, ಇಕೋ ಟೂರಿಸಂ ವಿಷಯದಲ್ಲಿ ಸ್ಥಳೀಯ ವಿಶ್ವವಿದ್ಯಾಲಯವೊಂದರಲ್ಲಿ ಪಿ.ಎಚ್​ಡಿ.ಗೆ ನೊಂದಾಯಿಸಿದ. ಆಗ ಆತ ಸಾಮಾಜಿಕ ಮತ್ತು ಕೃಷಿ ಚಟುವಟಿಕೆಗಳನ್ನು ಕಡಿಮೆ ಮಾಡಿದ. ಅವನಿಗೆ ಬರುತ್ತಿದ್ದ ಶಿಷ್ಯವೇತನ ತಿಂಗಳ ಖರ್ಚಿಗೆ ಸಾಲುತ್ತಿರಲಿಲ್ಲ. ಹೀಗಾಗಿ ವಿಕ್ಟರ್ ಆಸುಪಾಸಿನ ಮಕ್ಕಳಿಗೆ ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಟ್ಯೂಷನ್ ಹೇಳಲು ಆರಂಭಿಸಿದ. 8 ವರ್ಷದಿಂದ 13 ವರ್ಷ ವಯಸ್ಸಿನ 12 ಮಕ್ಕಳು ಅವನ ಮನೆಗೆ ಪ್ರತಿದಿನವೂ ಪಾಠಕ್ಕೆ ಬರಲಾರಂಭಿಸಿದರು.

ಹೀಗಿರುವಾಗ 2023ರ ಜನವರಿಯಲ್ಲಿ ವಿಕ್ಟರ್​ಗೆ ಗೂಗಲ್ ಸಂಸ್ಥೆಯಿಂದ ಒಂದು ಮೇಲ್ ಬಂತು. ಅದರಲ್ಲಿ ಹೀಗೆ ಬರೆದಿತ್ತು. ‘ಪ್ರಿಯ ವಿಕ್ಟರ್, ನಿಮ್ಮ ಗೂಗಲ್ ಮೇಲ್ ಅಕೌಂಟ್ ಮೂಲಕ ಕಾನೂನುಬಾಹಿರವಾದ ವಿಷಯಗಳನ್ನು ಕಳುಹಿಸಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಗೂಗಲ್ ಸಂಸ್ಥೆಯ ನೀತಿ, ನಿಯಮಗಳಿಗೆ ವಿರುದ್ಧವಾಗಿದೆ. ಈ ಕಾರಣಕ್ಕಾಗಿ ನಾವು ನಿಮ್ಮ ಅಕೌಂಟ್​ನ್ನು ತಕ್ಷಣದಿಂದ ಸ್ಥಗಿತಗೊಳಿಸುತ್ತಿದ್ದೇವೆ. ಈ ಬಗ್ಗೆ ಒಂದು ವೇಳೆ ನಿಮಗೇನಾದರೂ ತಕರಾರಿದ್ದರೆ ನೀವು ನಮಗೆ ಮೇಲ್ಮನವಿ ಸಲ್ಲಿಸಬಹುದು’.

ಅದನ್ನು ನೋಡಿದ ಕೂಡಲೇ ಗಾಬರಿಯಾದ ವಿಕ್ಟರ್ ಮೊಬೈಲ್ ಫೋನ್​ಗೆ ಅಳವಡಿಸಿದ್ದ ಎಲ್ಲ ಮೇಲ್ ಅಕೌಂಟ್​ಗಳನ್ನೂ ಡಿಸೇಬಲ್ ಮಾಡಿದ. ನಂತರ ಫೋನನ್ನು ತಂಜಾವೂರಿನ ಮೊಬೈಲ್ ಅಂಗಡಿಗೆ ತೆಗೆದುಕೊಂಡು ಹೋಗಿ ಆ ಫೋನಿನಲ್ಲಿದ್ದ ಎಲ್ಲ ಹಳೆಯ ಡೇಟಾವನ್ನು ಅಳಿಸಿ ಫಾರ್ವಟ್ ಮಾಡಿಸಿದ. ಈ ನಡುವೆ ಗೂಗಲ್ ಸಂಸ್ಥೆಯು ವಿಕ್ಟರ್ ಬಳಸುತ್ತಿದ್ದ ಮೇಲ್ ಅಕೌಂಟ್​ನ ಮೂಲಕ ಅಪ್ರಾಪ್ತ ಹಾಗೂ ಸಣ್ಣ ವಯಸ್ಸಿನ ಮಕ್ಕಳ ಬೆತ್ತಲೆ ಫೋಟೋಗಳು ಮತ್ತು ಲೈಂಗಿಕ ಕೃತ್ಯಗಳನ್ನೊಳಗೊಂಡ ವಿಡಿಯೋಗಳು ಹಂಚಿಕೆಯಾಗಿವೆ ಎಂದು ಅಂತಾರಾಷ್ಟ್ರೀಯ ಪೊಲೀಸ್ ಸಂಘಟನೆ ಇಂಟರ್​ಪೋಲ್​ಗೆ ಮಾಹಿತಿ ನೀಡಿತು. ಪುರುಷರು-ಸ್ತ್ರೀಯರು ಪರಸ್ಪರ ಭೇಟಿಯಾಗುವ ಸಾಮಾಜಿಕ ಜಾಲತಾಣ ‘ಗ್ರೈಂಡರ್’ ಸಹ ಇದೇ ಸಮಯಕ್ಕೆ ವಿಕ್ಟರ್​ನ ಇ-ಮೇಲ್​ಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆಯ ಕಂಟೆಂಟ್ ಇರುವ ಬಗ್ಗೆ ಇಂಟರ್​ಪೋಲ್​ಗೆ ಮಾಹಿತಿ ನೀಡಿತು. ಈ ಎರಡೂ ಮಾಹಿತಿಗಳನ್ನು ಇಂಟರ್​ಪೋಲ್ ತನ್ನ ಚೈಲ್ಡ್ ಸೆಕ್ಷುಯಲ್ ಅಬ್ಯೂಸ್ ಮೆಟೀರಿಯಲ್ (ಸಿಎಸ್​ಎಎಂ- ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಚಿತ್ರಗಳು, ವಿಡಿಯೋಗಳು ಮತ್ತಿತರ ಮಾಹಿತಿಯ ಹಂಚಿಕೆ) ವಿಶೇಷ ಘಟಕಕ್ಕೆ ತನಿಖೆಗಾಗಿ ಕಳುಹಿಸಿತು.

ಸಿಎಸ್​ಎಎಂ ಅಧಿಕಾರಿಗಳು ವಿಕ್ಟರ್​ನ ಗೂಗಲ್ ಅಕೌಂಟ್​ನಿಂದ ಬೇರೆ ಬೇರೆ ಮೇಲ್​ಗಳಿಗೆ ಮತ್ತು ಜಾಲತಾಣಗಳಿಗೆ ಮಕ್ಕಳ ಶೋಷಣೆಯ ಫೋಟೋಗಳು ರವಾನೆಯಾಗಿವೆ ಎಂದು ಖಾತ್ರಿಪಡಿಸಿಕೊಂಡ ನಂತರ ಆತನ ಅಕೌಂಟ್ ಭಾರತದಲ್ಲಿದೆ ಎಂದು ಪತ್ತೆ ಮಾಡಿದರು. ಭಾರತದಲ್ಲಿ ಸಿಬಿಐ ಸಂಸ್ಥೆಯು ಇಂಟರ್​ಪೋಲ್​ನ ಸದಸ್ಯತ್ವ ಹೊಂದಿರುವ ಕಾರಣ 2023ರ ಆದಿಭಾಗದಲ್ಲಿ ಇಂಟರ್​ಪೋಲ್ ಸಿಬಿಐಗೆ ಈ ಬಗ್ಗೆ ಮಾಹಿತಿ ನೀಡಿತು. ಸಿಬಿಐ ಅಧಿಕಾರಿಗಳು ಆರಂಭಿಕ ತನಿಖೆ ಮಾಡಿದಾಗ ಎಲ್ಲ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ವಿಕ್ಟರ್​ನ ಮೊಬೈಲ್ ಫೋನಿನಿಂದಲೇ ಬಂದಿದೆ ಎಂದು ಖಾತ್ರಿಯಾಯಿತು. ವಿಕ್ಟರ್ ಯಾರೆಂದು ವಿಚಾರಿಸಿದಾಗ ಆತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪತ್ರವನ್ನು ತನ್ನ ಇ-ಮೇಲ್ ಅಕೌಂಟ್​ನಿಂದ ಈ ಹಿಂದೆ ಬರೆದಿದ್ದು, ಅವನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿತ್ತು ಎಂದೂ ತಿಳಿಯಿತು. ಆನಂತರ ಸಿಬಿಐ ವಿಶೇಷ ಘಟಕದ ಎಸ್.ಪಿ ವಿಕಾಸ್ ಕುಮಾರ್, ವಿಕ್ಟರ್​ನ ವಿರುದ್ಧ ಮಕ್ಕಳ ಲೈಂಗಿಕ ದೌರ್ಜನ್ಯದ ಮಾಹಿತಿಯನ್ನು ಹಂಚಿಕೊಂಡ ಅರೋಪದ ಮೇರೆಗೆ ಐಟಿ ಆಕ್ಟ್ ಮತ್ತು ಇಂಡಿಯನ್ ಪೀನಲ್ ಕೋಡ್ ಅನ್ವಯ ಪ್ರಕರಣ ದಾಖಲಿಸಿದರು. ಗೂಗಲ್ ಸಂಸ್ಥೆಯನ್ನು ಸಂರ್ಪಸಿ ಆತ ಹಂಚಿಕೊಂಡಿದ್ದ ಮೇಲ್​ಗಳು ಮತ್ತು ಅವುಗಳಿಗೆ ಅಟ್ಯಾಚ್ ಮಾಡಿದ್ದ ಫೋಟೋಗಳು ಮತ್ತು ವಿಡಿಯೋಗಳನ್ನು ತರಿಸಿಕೊಂಡರು. ಎಂಟರಿಂದ ಹತ್ತು ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರ ಬೆತ್ತಲೆ ಚಿತ್ರಗಳಲ್ಲದೆ ಮಕ್ಕಳ ಮೇಲೆ ತಾನೇ ಲೈಂಗಿಕ ದೌರ್ಜನ್ಯ ಮಾಡುತ್ತಿರುವ ಚಿತ್ರಗಳನ್ನು ವಿಕ್ಟರ್ ಹಂಚಿಕೊಂಡಿದ್ದ. ಇದು ಸಾಲದೆಂಬಂತೆ ಇಬ್ಬರು ಮಕ್ಕಳ ನಡುವಿನ ಲೈಂಗಿಕ ಕೃತ್ಯದ ವಿಡಿಯೋಗಳನ್ನು ಮಾಡಿ ಅದನ್ನು ಆತ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಪ್ರಕಟಿಸುವ ಒಂದು ವಿದೇಶಿ ವೆಬ್​ಸೈಟ್​ಗೆ ಮಾರಿದ್ದ. ಅದೇ ವೆಬ್​ಸೈಟ್ ತಾನು ವಿಕ್ಟರ್​ನಿಂದ ಪಡೆದ ಪ್ರತಿಯೊಂದು ಫೋಟೋ ಮತ್ತು ವಿಡಿಯೋಗಳಿಗಾಗಿ ಅವನಿಗೆ ಅಪಾರ ಪ್ರಮಾಣದ ಹಣವನ್ನು ನೀಡಿದ್ದೂ ಮೇಲ್​ಗಳಿಂದ ತಿಳಿಯಿತು.

2023ರ ಮಾರ್ಚ್ 15ರಂದು ಸಿಬಿಐ ಅಧಿಕಾರಿಗಳು ತಮಿಳುನಾಡು ಪೊಲೀಸರ ಸಹಕಾರ ಪಡೆದು ವಿಕ್ಟರ್​ನ ಮನೆಯನ್ನು ಶೋಧಿಸಿದರು. ಆಗ ಆತ ಮನೆಯಲ್ಲಿಯೇ ಇದ್ದ. ತನಿಖೆಗೆ ಬೇಕಾದ ವಸ್ತುಗಳನ್ನು ಅವನ ಮನೆಯಿಂದ ಜಪ್ತಿ ಮಾಡಲಾಯಿತು. ಆನಂತರ ವಿಕ್ಟರ್​ನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ತಾನು ಸುಮಾರು 4 ವರ್ಷ ‘ಎ’ ಎನ್ನುವ 12 ವರ್ಷದ ಬಾಲಕನನ್ನು ಲೈಂಗಿಕವಾಗಿ ಶೋಷಿಸಿದ್ದನೆಂದು ತಿಳಿಸಿದ. ಆ ಮೇರೆಗೆ ತನಿಖಾಧಿಕಾರಿ ಸಂತ್ರಸ್ತ ‘ಎ’ನನ್ನು ಆತನ ತಂದೆ-ತಾಯಿ ಮತ್ತು ಮಕ್ಕಳ ರಕ್ಷಣಾ ಸಮಿತಿ ಸದಸ್ಯರ ಮುಂದೆ ವಿಚಾರಿಸಿದರು. ವಿಕ್ಟರ್ ತನ್ನನ್ನು ಬೆದರಿಸಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ತನ್ನ ನಗ್ನ ಪೋಟೋಗಳನ್ನೂ, ವಿಡಿಯೋಗಳನ್ನೂ ಮೊಬೈಲಿನಲ್ಲಿ ತೆಗೆದುಕೊಂಡ ಎಂದು ಆ ಬಾಲಕ ಹೇಳಿ, ಯಾರಿಗಾದರೂ ಈ ವಿಷಯ ತಿಳಿಸಿದರೆ ಫೋಟೋಗಳನ್ನು ಜಾಹೀರು ಮಾಡುವುದಾಗಿ ಬೆದರಿಸಿದ ಎಂದ. ಇದಲ್ಲದೆ ಟ್ಯೂಷನ್​ಗೆ ಬರುತ್ತಿದ್ದ 14 ವರ್ಷದ ಒಬ್ಬ ಬಾಲಕಿ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ತನ್ನನ್ನು ವಿಕ್ಟರ್ ಬಲವಂತ ಮಾಡಿದ ಎಂದೂ ಆತ ತಿಳಿಸಿದ.

ಈ ಮಾಹಿತಿ ಮೇರೆಗೆ ಆ ಬಾಲಕಿಯನ್ನೂ ವಿಚಾರಿಸಲಾಯಿತು. ಆಕೆ ಬಾಲಕ ‘ಎ’ ಕೊಟ್ಟ ಹೇಳಿಕೆಯನ್ನು ಸಮರ್ಥಿಸಿದಳಲ್ಲದೆ ಬಾಲಕ ‘ಎ’ ಜತೆ ಲೈಂಗಿಕ ಕೃತ್ಯದಲ್ಲಿ ತೊಡಗಲು ವಿಕ್ಟರ್ ತನ್ನನ್ನು ಬಲವಂತ ಮಾಡಿದ್ದಲ್ಲದೆ ತನ್ನ ಮೇಲೆಯೂ ಅತ್ಯಾಚಾರ ನಡೆಸಿದ ಎಂದು ತಿಳಿಸಿದಳು. ತನ್ನ ಬಗ್ಗೆ ದೂರಿತ್ತರೆ ಆ ವಿಡಿಯೋವನ್ನು ತಂದೆ-ತಾಯಿಗೆ ತೋರಿಸುವುದಾಗಿ ವಿಕ್ಟರ್ ಬೆದರಿಸಿದ ಎಂದಳು. ವಿಕ್ಟರ್ ಇನ್ನೂ ನಾಲ್ಕು ಮಕ್ಕಳನ್ನು ಶೋಷಿಸಿದ ಬಗ್ಗೆ ಮುಂದಿನ ತನಿಖೆಯಲ್ಲಿ ತಿಳಿಯಿತು. ಇಬ್ಬರೂ ಮಕ್ಕಳ ವೈದ್ಯಕೀಯ ಪರೀಕ್ಷೆ ನಂತರ ವಿಕ್ಟರ್​ನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಯಿತು.

ತಾನು ಸ್ಥಳೀಯ ರಾಜಕೀಯ ಪಕ್ಷದ ಬೆಂಬಲಿಗನಾಗಿರುವ ಕಾರಣ ಸಿಬಿಐ ಸುಖಾಸುಮ್ಮನೆ ತನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು ಲ್ಯಾಪ್​ಟಾಪ್ ಮತ್ತು ಮೊಬೈಲ್ ಫೋನುಗಳಲ್ಲಿ ಪೊಲೀಸರೇ ಅಶ್ಲೀಲ ಫೋಟೋಗಳು ಮತ್ತು ವಿಡಿಯೋ ಕ್ಲಿಪ್​ಗಳನ್ನು ಹಾಕಿ ತೊಂದರೆಗೆ ಸಿಕ್ಕಿಸಿದ್ದಾರೆಂದು ವಿಕ್ಟರ್ ಹೇಳಿದ. ಇದನ್ನು ಅಲ್ಲಗಳೆದ ತನಿಖಾಧಿಕಾರಿಗಳು ಪ್ರಕರಣಕ್ಕೆ ಬೇಕಾದ ಎಲ್ಲ ದಾಖಲೆಗಳನ್ನೂ ಕಾನೂನುಬದ್ಧವಾಗಿಯೇ ಕಲೆಹಾಕಿರುವುದಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ತನಿಖೆ ಮುಗಿದ ನಂತರ ವಿಕ್ಟರ್​ನ ವಿರುದ್ಧ ತಂಜಾವೂರಿನ ವಿಶೇಷ ಪೋಕ್ಸೋ ನ್ಯಾಯಾಲಯದಲ್ಲಿ ಸಿಬಿಐನ ತನಿಖಾಧಿಕಾರಿ ಆರೋಪಪಟ್ಟಿ ಸಲ್ಲಿಸಿದರು.

ತನ್ನ ಬಳಿಗೆ ಟ್ಯೂಷನ್​ಗೆ ಬರುತ್ತಿದ್ದ ಅಮಾಯಕ ಮಕ್ಕಳನ್ನು ವಿಕ್ಟರ್ ಬೆದರಿಸಿ ಅವರನ್ನು ನಗ್ನರನ್ನಾಗಿ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಒಟ್ಟು ಐದು ಆರೋಪಗಳ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ನಂತರ ನ್ಯಾಯಾಲಯವು ವಿಕ್ಟರ್​ಗೆ ಜೀವಿತಾವಧಿವರೆಗೆ ಕಾರಾಗೃಹವಾಸ ವಿಧಿಸಿತು. ಇದಲ್ಲದೆ 6.50 ಲಕ್ಷ ರೂ.ಗಳ ದಂಡವನ್ನು ಹಾಕಿ ಅದನ್ನು ಸಂತ್ರಸ್ತರಿಗೆ ಪರಿಹಾರವೆಂದು ಕೊಡಲು ಆದೇಶಿಸಿತು. ಮಕ್ಕಳಾಗಲೀ ಅವರ ಪಾಲಕರಾಗಲೀ ದೂರದಿದ್ದರೂ ಇಂಟರ್​ಪೋಲ್, ಸಿಬಿಐ, ಸ್ಥಳೀಯ ಪೊಲೀಸರು, ಗೂಗಲ್ ಮತ್ತಿತರ ಅಂತಾರಾಷ್ಟ್ರೀಯ ಸಂಸ್ಥೆಗಳು ಸೇರಿ ತಾವಾಗಿಯೇ ಇಂತಹ ಪ್ರಕರಣ ಬಯಲಿಗೆಳೆದು ಪೀಡಕನಿಗೆ ಕಠಿಣ ಸಜೆ ಕೊಡಿಸಿರುವ ಈ ಪ್ರಕರಣ ಭಾರತದ ಅಪರಾಧ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಗಿದೆ.

‘ಯಾವ ವಿಷಯದ ಬಗ್ಗೆ ನಾವು ಧ್ವನಿಯೆತ್ತಬೇಕೋ ಆ ಬಗ್ಗೆ ನಾವು ಸುಮ್ಮನಾದರೆ ಅಂದಿಗೇ ನಮ್ಮ ಜೀವನ ಅಂತ್ಯವಾದಂತೆ’ ಎಂದ ಮಾರ್ಟಿನ್ ಲೂಥರ್ ಕಿಂಗ್ (ಜ್ಯೂ). ಪಾಲಕರು ತಮ್ಮ ಮಕ್ಕಳ ಭದ್ರತೆ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿರುವುದು ಅನಿವಾರ್ಯ. ಬಾಲಕರಾಗಲೀ, ಬಾಲಕಿಯರಾಗಲೀ ಶಾಲೆ ಮತ್ತು ಟ್ಯೂಷನ್​ಗಳಿಂದ ಮನೆಗೆ ಮರಳಿದ ಮೇಲೆ ಅವರ ನಡವಳಿಕೆಯನ್ನು ಪಾಲಕರು ಸೂಕ್ಷ್ಮವಾಗಿ ಗಮನಿಸಿ ಎಂತಹದೇ ಅನುಮಾನ ಬಂದರೂ ಅದನ್ನು ಕೂಡಲೇ ಪರಿಹರಿಸಿಕೊಳ್ಳಬೇಕು. ನಿಮ್ಮ ಮಗು ಶೋಷಣೆಗೆ ಒಳಗಾದರೆ ಸುಮ್ಮನಿರದೆ ಹೋರಾಡಲೇ ಬೇಕು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)