ಆದರೆ ಆಕೆಯ ಕುಟುಂಬ ಮತ್ತು ಸ್ನೇಹಿತರು ‘ನೀನು ಮತ್ತೊಂದು ಮದುವೆ ಮಾಡಿಕೋ’ ಎಂದು ಆಕೆಯನ್ನು ಒತ್ತಾಯಿಸತೊಡಗಿದರು. ವಿವಾಹ ವಿಚ್ಛೇದನ ಪಡೆದವರು ಮತ್ತು ಎರಡನೆಯ ವಿವಾಹ ಮಾಡಿಕೊಳ್ಳಲು ಉದ್ದೇಶಿಸಿರುವವರಿಗಾಗಿಯೇ ಇರುವ ಕೆಲವು ವಿಶೇಷ ಮಾಟ್ರಿಮೊನಿಯಲ್ ವೆಬ್ಸೈಟ್ಗಳನ್ನು ರಾಧಾ ಸಂರ್ಪಸಿದಳು. ಅಂತಹ ಒಂದು ವೆಬ್ಸೈಟ್ನಲ್ಲಿ ಆಕೆಗೆ ಒಬ್ಬ ವ್ಯಕ್ತಿ ಇಷ್ಟವಾದ. ಆತ ತನ್ನ ಹೆಸರನ್ನು ವಿಕ್ರಮ್ ಎಂದು ಹೇಳಿಕೊಂಡು, ಮರೀನ್ ಇಂಜಿನಿಯರ್ ಎಂದು ತಿಳಿಸಿದ್ದ. ಪತ್ನಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದು, ಎರಡನೆಯ ಮದುವೆಗೆ ಮುಂದಾಗಿರುವೆನೆಂದು ಆತ ಬರೆದುಕೊಂಡಿದ್ದ. ವರ್ಷಕ್ಕೆ ಆರು ತಿಂಗಳು ಸಮುದ್ರದ ಮೇಲೆಯೇ ಇರಬೇಕಾದ ಕಾರಣ ಮದುವೆಯಾಗುವವಳು ಒಬ್ಬಂಟಿಯಾಗಿರಲು ತಯಾರಾಗಿರಬೇಕು ಎಂಬ ನಿಬಂಧನೆ ಹಾಕಿದ್ದ.
ವಿಕ್ರಮ್ ತನಗೆ ಸೂಕ್ತ ಪತಿಯಾಗಬಹುದೆಂದು ಭಾವಿಸಿದ ರಾಧಾ ಅವನನ್ನು ಸಂರ್ಪಸಿದಳು. ‘ನನ್ನ ನಿಬಂಧನೆಗಳೆಲ್ಲ ನಿನಗೊಪ್ಪಿಗೆಯೇ?’ ಎಂದು ಆತ ಕೇಳಿದಾಗ ತನ್ನ ಸಮ್ಮತಿಯನ್ನು ರಾಧಾ ತಿಳಿಸಿದಳು. ಕೆಲ ದಿನಗಳ ಕಾಲ ಫೋನ್ ಮೂಲಕ ಅವರಿಬ್ಬರೂ ಸಂಪರ್ಕದಲ್ಲಿದ್ದರು. ನಂತರ ವಿಕ್ರಮ್ ರಾಧಾಳಿದ್ದ ಊರಿಗೆ ಬಂದ, ಇಬ್ಬರೂ ಎರಡು-ಮೂರು ಬಾರಿ ಭೇಟಿಯಾದರು, ಮದುವೆಯಾಗಲು ಒಪ್ಪಿದರು. ‘ಮುಂದಿನ ಆರು ತಿಂಗಳ ಕಾಲ ಸಮುದ್ರದಲ್ಲಿ ಡ್ಯೂಟಿಯ ಮೇಲೆ ಇರಬೇಕಾಗುತ್ತದೆ. ಹೀಗಾಗಿ ನಾವು ಆರು ತಿಂಗಳ ನಂತರವೇ ಲಗ್ನವಾಗಲು ಸಾಧ್ಯ’ ಎಂದು ಆತ ಹೇಳಿದ. ಇದಕ್ಕೆ ರಾಧಾ ಒಪ್ಪಿದಳು.
‘ಹಡಗಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ಟೆಲಿಫೋನ್ ಸಂಪರ್ಕವೇ ಸಿಗುವುದಿಲ್ಲ. ಯಾವುದಾದರೂ ಬಂದರಿನಲ್ಲಿ ಲಂಗರು ಹಾಕಿದ ನಂತರವೇ ಸಂಪರ್ಕಕ್ಕೆ ಬರಲು ಸಾಧ್ಯ. ಹೀಗಾಗಿ ಇನ್ನು ಮುಂದೆ ನಾನೇ ನಿನಗೆ ಕಾಲ್ ಮಾಡುತ್ತೇನೆ’ ಎಂದು ತಿಳಿಸಿದ. ಎರಡು ತಿಂಗಳ ನಂತರ ರಾಧಾಳಿಗೆ ಕರೆ ಮಾಡಿ ತಾನು ಕೈರೋನಲ್ಲಿರುವುದಾಗಿ ತಿಳಿಸಿದ. ಅದಾದ ಒಂದು ತಿಂಗಳ ಬಳಿಕ ಲಂಡನ್ಗೆ ಬಂದಿರುವುದಾಗಿ ತಿಳಿಸಿ, ಕೆಲಸದ ನಿಮಿತ್ತ ಆ ಊರಿನಲ್ಲಿ ಒಂದು ವಾರ ಉಳಿದಿರುವುದಾಗಿಯೂ ಹಡಗು ಪ್ಯಾರಿಸ್ಗೆ ಹೋಗಿರುವುದಾಗಿಯೂ ತಿಳಿಸಿದ. ಹೋಟೆಲಿನಲ್ಲಿ ಉಳಿದುಕೊಂಡಾಗ ಪಾಸ್ಪೋರ್ಟ್ ಮತ್ತು ಪರ್ಸ್ ಕಳವಾಗಿದ್ದು, ತೊಂದರೆಯಲ್ಲಿರುವುದಾಗಿ ತಿಳಿಸಿದ. ತುರ್ತಾಗಿ ಹಣ ಬೇಕೆಂದು ಕೋರಿದ. ಎಷ್ಟು ಹಣಬೇಕೆಂದು ರಾಧಾ ಕೇಳಿದಾಗ, ಹತ್ತು ಲಕ್ಷ ರೂಪಾಯಿ ಬೇಕಾಗಿವೆಯೆಂದ. ‘ನನ್ನ ಬಳಿ ಅಷ್ಟೊಂದು ಹಣವಿಲ್ಲ, ನಾಲ್ಕು ಲಕ್ಷ ರೂಪಾಯಿ ಮಾತ್ರ ಇದೆ. ಬೇಕಾದರೆ ಅದನ್ನು ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿ ವೆಸ್ಟರ್ನ್ ಎಕ್ಸಪ್ರೆಸ್ ಮನಿ ಟ್ರಾನ್ಸ್ಫರ್ ಎನ್ನುವ ಹಣ ಕಳಿಸುವ ಸಂಸ್ಥೆ ಮೂಲಕ ವಿಕ್ರಮ್ ಕೊಟ್ಟ ವಿಳಾಸಕ್ಕೆ ಹಣವನ್ನು ಕಳುಹಿಸಿದಳು.
ಹಣ ಮುಟ್ಟಿದ ತಕ್ಷಣ ವಿಕ್ರಮ್ ಆಕೆಗೆ ಕರೆ ಮಾಡಿ, ಧನ್ಯವಾದ ತಿಳಿಸಿದ. ‘ಉಳಿದ ಹಣಕ್ಕಾಗಿ ಕೆಲವು ಗೆಳೆಯರನ್ನು ಸಂರ್ಪಸಿರುವೆ. ಅವರು ಹಣ ಕೊಡಲು ತಯಾರಾಗಿದ್ದಾರೆ, ಆದರೆ ಅವರಿಗೆ ಹಲವಾರು ಕಾರಣಗಳಿಂದ ಹಣವನ್ನು ನೇರವಾಗಿ ಲಂಡನ್ಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಆ ಹಣವನ್ನು ಭಾರತದಲ್ಲಿನ ನಿನ್ನ ಬ್ಯಾಂಕಿಗೆ ಜಮಾ ಮಾಡುತ್ತಾರೆ. ಆ ಹಣ ನಿನಗೆ ಮುಟ್ಟಿದ ನಂತರ ನೀನು ಅದನ್ನು ನನಗೆ ವೆಸ್ಟರ್ನ್ ಎಕ್ಸ್ಪ್ರೆಸ್ ಮೂಲಕ ಕಳುಹಿಸು’ ಎಂದ. ‘ನನ್ನ ಸ್ನೇಹಿತರು ಕಳುಹಿಸುವ ಹಣ ನಿನ್ನ ಒಂದೇ ಬ್ಯಾಂಕ್ ಅಕೌಂಟಿಗೆ ಜಮಾ ಆದರೆ ನಿನಗೆ ಆದಾಯ ತೆರಿಗೆ ಅಧಿಕಾರಿಗಳಿಂದ ತೊಂದರೆ ಆಗಬಹುದು. ಹೀಗಾಗಿ ನಿನ್ನ ಊರಿನಲ್ಲಿರುವ ಎರಡು ಬೇರೆ ಬ್ಯಾಂಕುಗಳಲ್ಲಿ ನಿನ್ನ ಹೆಸರಲ್ಲಿ ಎಸ್ಬಿ ಅಕೌಂಟ್ ತೆರೆದು ಅದರ ವಿವರಗಳನ್ನು ನನಗೆ ಕಳುಹಿಸು. ಅವನ್ನು ನನ್ನ ಸ್ನೇಹಿತರಿಗೆ ಕೊಡುವೆ. ಅವರು ಅಕೌಂಟ್ಗೆ ಹಣ ಹಾಕಿದ ನಂತರ ನೀನು ಆ ಹಣವನ್ನು ವಿತ್ಡ್ರಾ ಮಾಡಿ ನನಗೆ ಕಳುಹಿಸು’ ಎಂದು ಹೇಳಿದ. ರಾಧಾ ಒಪ್ಪಿ ಎರಡು ಬ್ಯಾಂಕುಗಳಲ್ಲಿ ಅಕೌಂಟ್ ತೆರೆದಳು.
ಇದಾದ ಒಂದು ತಿಂಗಳ ನಂತರ ರಾಧಾಳ ಹೊಸ ಅಕೌಂಟ್ಗಳಿಗೆ ದೇಶದ ಬೇರೆ-ಬೇರೆ ಊರುಗಳಿಂದ ನಾಲ್ಕು ಜನರು ಒಟ್ಟು ಆರೂವರೆ ಲಕ್ಷ ರೂಪಾಯಿ ಜಮೆ ಮಾಡಿದರು. ಏತನ್ಮಧ್ಯೆ, ವಿಕ್ರಮ್ ಆಕೆಗೆ ಪದೇಪದೆ ಕರೆ ಮಾಡುತ್ತ ಎಷ್ಟು ಹಣ ಬಂದಿತು ಎಂದು ವಿಚಾರಿಸುತ್ತಿದ್ದ. ಆರೂವರೆ ಲಕ್ಷ ರೂ. ಬಂದ ಮಾಹಿತಿ ಪಡೆದ ಕೂಡಲೇ ಆತ ಅದನ್ನು ಬೇಗನೇ ವಿತ್ಡ್ರಾ ಮಾಡಿ ತನಗೆ ಕಳುಹಿಸಲು ಸೂಚಿಸಿದ. ಅದರಂತೆ ರಾಧಾ ಅಷ್ಟೂ ಹಣವನ್ನು ವಿಕ್ರಮನಿಗೆ ಕಳುಹಿಸಿದಳು. ಇದಾದ ಒಂದೇ ವಾರದ ನಂತರ ವಿಕ್ರಮ್ಂದ ರಾಧಾಳಿಗೆ ಕರೆಗಳು ಬರುವುದು ನಿಂತು ಹೋಯಿತು. ಆತ ತನ್ನ ಹಡಗಿನಲ್ಲಿ ಸಮುದ್ರದ ಮೇಲಿರಬೇಕು, ಬಂದರಿಗೆ ಹೋದ ಕೂಡಲೇ ತನ್ನನ್ನು ಸಂರ್ಪಸಬಹುದೆಂದು ಊಹಿಸಿದ ರಾಧಾ ಸುಮ್ಮನಾದಳು.
ಕೆಲವು ವಾರಗಳ ನಂತರ ರಾಧಾಳ ಮನೆಗೆ ಹರಿಯಾಣ ರಾಜ್ಯದ ಪೊಲೀಸ್ ತಂಡ ಬಂದಾಗ ಆಕೆ ಗಾಬರಿಯಾದಳು. ‘ನಿಮಗೆ ಪರಂವೀರ್ ಎನ್ನುವವನ ಪರಿಚಯವಿದೆಯೇ?’ ಎಂದವರು ಕೇಳಿದಾಗ ರಾಧಾ ಇಲ್ಲವೆಂದಳು. ‘ನೀವು ಇಲ್ಲಿನ ಐಸಿಐಸಿಐ ಬ್ಯಾಂಕಿನಲ್ಲಿ ನಿಮ್ಮ ಹೆಸರಿನಲ್ಲಿ ಖಾತೆ ಇಟ್ಟುಕೊಂಡಿರುವಿರಲ್ಲವೇ?’ ಎಂದಾಗ ಆಕೆ ‘ಹೌದು’ ಎಂದಳು.
‘ಪರಂವೀರ್ ಸೂಚನೆ ಮೇರೆಗೆ ನಿಮ್ಮ ಖಾತೆಗೆ ನಮ್ಮ ರಾಜ್ಯದ ಕರ್ನಾಲಿನ ನಿವಾಸಿ ಅರ್ಚನಾ, ಒಂದು ಲಕ್ಷ ರೂ. ಜಮಾ ಮಾಡಿದ್ದಾಳೆ, ಆ ಹಣ ಜಮಾ ಆದ ಎರಡೇ ದಿನಗಳ ನಂತರ ನೀವು ವಿತ್ಡ್ರಾ ಮಾಡಿದ್ದೀರಿ, ಪರಂವೀರ್ಗೂ ನಿಮಗೂ ಎಲ್ಲಿಯ ಸಂಬಂಧ?’ ಎಂದು ಪೊಲೀಸರು ಕೇಳಿದಾಗ ರಾಧಾ ಕಕ್ಕಾಬಿಕ್ಕಿಯಾದಳು. ‘ನನ್ನ ಈ ಖಾತೆ ನಾನು ಮದುವೆಯಾಗುತ್ತಿರುವ ವಿಕ್ರಮ್ ಎನ್ನುವವನ ಸೂಚನೆ ಮೇರೆಗೆ ತೆರೆದಿದ್ದೆ. ಅದನ್ನು ಒಂದು ಬಾರಿ ಮಾತ್ರ ಉಪಯೋಗಿಸಿರುವೆ’ ಎಂದಳು. ‘ನೀವು ಪಡೆದಿರುವ ಹಣವು ಪರಂವೀರ್ ಅರ್ಚನಾಳಿಗೆ ಲಗ್ನವಾಗುತ್ತೇನೆಂದು ಹೇಳಿ ಮೋಸಮಾಡಿ ಪಡೆದಿರುವ ಹಣ, ಮೋಸದಲ್ಲಿ ನೀವೂ ಶಾಮೀಲಾಗಿರುವ ಕಾರಣ ನೀವೂ ಈ ಪ್ರಕರಣದ ಆರೋಪಿಯಾಗುವಿರಿ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದಾಗ ರಾಧಾ ಬೆವೆತಳು. ‘ನಾನು ವ್ಯೆದ್ಯೆ, ನನಗೆ ಪರಂವೀರ್ ಯಾರೆಂದು ತಿಳಿದೇ ಇಲ್ಲ’ ಎಂದಾಕೆ ಹೇಳಿದಾಗ ಪೊಲೀಸರು ಆ ವ್ಯಕ್ತಿಯ ಫೋಟೋ ತೋರಿಸಿದರು. ಅದು ವಿಕ್ರಮ್ ಫೋಟೋವೇ ಆಗಿತ್ತು. ‘ಈತನೇ ನಾನು ಲಗ್ನವಾಗುತ್ತಿರುವ ವಿಕ್ರಮ್ ಈಗ ಆತ ತನ್ನ ಹಡಗಿನಲ್ಲಿ ಯಾವುದೋ ಸಮುದ್ರದಲ್ಲಿದ್ದಾನೆ’ ಎಂದಳು. ಅಷ್ಟರಲ್ಲಿ ರಾಧಾಳ ಮನೆಗೆ ಪಶ್ಚಿಮ ಬಂಗಾಳದ ಪೊಲೀಸ್ ತಂಡವೂ ಬಂದಿತು. ಸತ್ಯಜಿತ್ ಎನ್ನುವವನು ಮುಕೇಶ್ ಎನ್ನುವವನಿಗೆ ಕಾರ್ ಕೊಡಿಸುತ್ತೇನೆಂದು ಹೇಳಿ ಅವನಿಗೆ ಒಂದೂವರೆ ಲಕ್ಷ ರೂ. ಮೋಸಮಾಡಿದ ಪ್ರಕರಣ ಅದಾಗಿತ್ತು. ಸತ್ಯಜೀತ್ನ ವಿವರಗಳೂ ವಿಕ್ರಮ್ನನ್ನೇ ಹೋಲುತ್ತಿದ್ದವು.
ಗಾಬರಿಯಾದ ರಾಧಾ ಅಳುತ್ತ ಎರಡೂ ರಾಜ್ಯಗಳ ಪೊಲೀಸರಿಗೆ ನಡೆದ ವಿಷಯವನ್ನು ಸವಿಸ್ತಾರವಾಗಿ ತಿಳಿಸಿದಳು. ತಾನೂ ವಿಕ್ರಮ್ಗೆ ನಾಲ್ಕು ಲಕ್ಷ ರೂ.ಗಳನ್ನು ಕೊಟ್ಟಿರುವ ವಿವರಗಳನ್ನು ಅವರಿಗೆ ತೋರಿಸಿದಳು. ಅವಳ ಮಾತುಗಳನ್ನು ನಂಬಿದ ಪೊಲೀಸರು ಅಲ್ಲಿಂದ ಹೊರಟುಹೋದರು. ರಾಧಾ ಸ್ಥಳೀಯ ಸೈಬರ್ ಪೊಲೀಸ್ ಠಾಣೆಗೆ ಹೋಗಿ ವಿಕ್ರಮ್ ತನಗೆ ಮೋಸ ಮಾಡಿರುವ ಬಗ್ಗೆ ದೂರನ್ನು ದಾಖಲಿಸಿದಳು. ಇಲ್ಲಿಯವರೆಗೂ ವಿಕ್ರಮ್ ನಾಪತ್ತೆಯಾಗಿದ್ದಾನೆ.
ಆನ್ಲೈನ್ ಮೂಲಕ ಯಾರನ್ನಾದರೂ ಪರಿಚಯ ಮಾಡಿಕೊಂಡು ಅವರೊಡನೆ ವೈವಾಹಿಕ ಇಲ್ಲವೆ ಹಣಕಾಸಿನ ವ್ಯವಹಾರಗಳನ್ನು ಮಾಡಲು ಹೊರಡುವಾಗ ಅಂಥವರ ಬಗ್ಗೆ ಸೂಕ್ತ ಮಾಹಿತಿ ಕಲೆಹಾಕುವುದು ಅವಶ್ಯ. ಬೇರೊಬ್ಬರಿಗಾಗಿ ನಿಮ್ಮ ಹೆಸರಿನ ಖಾತೆಯಲ್ಲಿ ಹಣ ಜಮಾ ಮಾಡಲೇ ಬಾರದೆಂದು ಅರಿಯಿರಿ. ‘ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ಮೈಸವರಿ ಕಾಲನೆಡವಿಸಿ ಗುಟ್ಟಿನಲಿ ನಗುವ ಮೋಸದಾಟವೋ ದೈವ ಮಂಕುತಿಮ್ಮ’ ಎಂಬ ನುಡಿಯನ್ನು ಮರೆಯದಿರಿ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)