ಬೇಸಿಗೆ ಕಾಲಿಟ್ಟೊಡನೆ ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಬಿಸಿ. ನೀರಿಲ್ಲದ ಬಿಸಿ ಒಂದೆಡೆಯಾದರೆ ಪವರ್ ಕಟ್ಟಿನ ಬಿಸಿ ಇನ್ನೊಂದೆಡೆ. ಮಕ್ಕಳಿಗೆ ಪರೀಕ್ಷೆಗಳ ಬಿಸಿ ಕಳೆದು ಅದರ ರಿಸಲ್ಟಿಗಾಗಿ ‘ಕಾಯು’ವ ಬಿಸಿ, ಪೋಷಕರಿಗೆ ಶಾಲೆ-ಕಾಲೇಜುಗಳ ಫೀ ಹೊಂಚುವ ಬಿಸಿ, ತಾಯಂದಿರಿಗೆ ಮನೆಗಳಲ್ಲಿ ಮಕ್ಕಳ ಹಠ ತಾಳಲಾರದೇ ಕುಂತಲ್ಲಿ ನಿಂತಲ್ಲಿ ಬಿಸಿ. ಈ ಸಲ ಬೇಸಿಗೆ ಕಾಲಿಡುತ್ತಿದ್ದಂತೆಯೇ ಕಾಲರಾ ಜತೆ ಕರೊನಾ ಬಿಸಿ!
ಸೂರ್ಯನ ಕರುಣೆಯಿಂದ ಮಳೆ ಬಂತು ಅನ್ನಿ... ಅದರ ಮರುದಿನದ ಬಿಸಿ ಇದೆಯಲ್ಲ ಅದು ನೀರ್ಗೆಜ್ಜಿಗೆ ಒಗ್ಗರಣೆ ಕೊಟ್ಟ ಹಾಗೆ. ಮಲೆನಾಡಿನವರಿಗೆ ಸೆಖೆ ತಡೆಯುವುದೇ ಕಷ್ಟ. ಅವರು ಸುಖ ಪುರುಷರು. ಯಾವಾಗಲೂ ಗುಡ್ಡ ಬೆಟ್ಟಗಳ ಕಾಡಿನ ಮರೆಯಲ್ಲಿ ತಣ್ಣಗೆ ಇರುವವರು. ಆಗೆಲ್ಲಾ ಬೇಸಿಗೆಯಲ್ಲೂ ಕಂಬಳಿ ಇಲ್ಲದೆ ಮಲಗಲಾರದಷ್ಟು ತಣ್ಣತಣ್ಣಗೆ. ಈಗ ಹಾಗೇನಿಲ್ಲ. ಕಾಲ ಬಿಸಿಯಾಗಿದೆ. ಹೊಸ ಹೊಸ ಆವಿಷ್ಕಾರಗಳೊಂದಿಗೆ ಸಂಪನ್ಮೂಲಗಳನ್ನೆಲ್ಲಾ ಬೇಕಾಬಿಟ್ಟಿ ಬಳಸಿ ಭೂತಾಯಿಗೆ ಇನ್ಪೆಕ್ಷನ್ ಆಗಿ ಫ್ಲೂ ಜ್ವರ ಬಂದಂತೆ ಆಗುವುದುಂಟು. ಹಾಗಾಗಿ ಚಳಿಗಾಲ, ಬೇಸಿಗೆಗಾಲ, ಮಳೆಗಾಲ ಎಲ್ಲಾ ಒಂದೇ ದಿನದಲ್ಲಿ ಬಂದರೂ ಆಶ್ಚರ್ಯವಿಲ್ಲ! ಘಟ್ಟದ ಕೆಳಗೆ ಹೋದರೆ ಅಲ್ಲಿ ಸೆಖೆಯನ್ನು ವರ್ಣಿಸುವುದೇ ಬೇಡ. ಬೇಸಿಗೆಯಲ್ಲಿ ಒಮ್ಮೆಅಲ್ಲೊಂದು ಉಪನಯನದ ಮನೆಗೆ ಹೋಗಿ ನಮ್ಮಅವಸ್ಥೆ ಯಾರಿಗಂತ ಹೇಳುವುದು? ಬೆವರನ್ನು ಒರೆಸಿ ಒರೆಸಿ ಕರವಸ್ತ್ರ ಹಿಂಡಿ ಹಿಂಡಿ ಅದು ಹನಿಯಾಗಿ, ಹೊಳೆಯಾಗಿ... ಅಬ್ಬಬ್ಬಾ!
ಬಿಸಿಲುಮಳೆಯ ಸುಖ: ಬೇಸಿಗೆಯಲ್ಲಿ ಹಳೆ ಮಳೆ ಬಂದರೆ ಒಮ್ಮೆ ಸುಖ ಹೌದು. ಮೊದಲ ಮಳೆಗೆ ಪಸರಿಸುವ ಮಣ್ಣಿನ ಘಮ ಹೀರಿದಷ್ಟೂ ಮತ್ತೆ ಮತ್ತೆ ಹೀರುವ ಆಸೆ. ಆದರೆ, ಅಲ್ಲಲ್ಲಿ ನಿಂತ ಮಳೆ ನೀರಲ್ಲಿ ಇನ್ನಿಲ್ಲದ ಖುಷಿಯಲ್ಲಿ ಸಂಸಾರ ಹೂಡಿ ರಕ್ತಬೀಜಾಸುರರಂತೆ ಹುಟ್ಟಿಕೊಂಡು ನಮಗೆ ವೈವಿಧ್ಯಮಯ ರೋಗಗಳನ್ನು ದಾನ ಮಾಡುವ ಸೊಳ್ಳೆಗಳು? ಅವುಗಳನ್ನು ಕಂಡರೆ ಭಯಪಡದವರಾರು?
ಇದು ಬೇಸಿಗೆಯ ಲೌಕಿಕ ಸತ್ಯವೇ ಹೌದು. ಎರಡು ದಿನ ಜೋರು ಮಳೆ ಬಂದರೆ ಮತ್ತೆ ರೆಕ್ಕೆಗೆ ಥಂಡಿಯಾಗಿ ಸೊಳ್ಳೆಗಳೆಲ್ಲಾ ಸತ್ತು ಹೋಗುವುದು ಅಲೌಕಿಕ ಸತ್ಯ. ಬಹುಶಃ ರಾಮನಿಂದ ಹತರಾದ ರಾಕ್ಷಸರೆಲ್ಲಾ ಸೊಳ್ಳೆಗಳಾಗಿ ಹುಟ್ಟಿ ಮನುಷ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತಿವೆಯೋ? ಅಥವಾ ಮಹಾಭಾರತದ ಹದಿನೆಂಟಕ್ಷೋಹಿಣಿ ಸೈನಿಕರ ಅತೃಪ್ತ ಆತ್ಮಗಳು ಸೊಳ್ಳೆಗಳಾಗಿ ಅವತಾರ ಎತ್ತಿವೆಯೋ? ಸೊಳ್ಳೆ ಕಾಟ ವಿಪರೀತವಾದಾಗ, ನನಗಂತೂ ಹೀಗೆಯೇ ಇರಬಹುದು ಅಂತ ಅನ್ನಿಸುತ್ತದೆ.
ಮತ್ತೊಂದಿದೆ ಈ ಬೇಸಿಗೆಯ ರಾಮಾಯಣ. ನೀರು ತಳ ಸೇರಿರುತ್ತದೆ. ನೀರಿಗೆ ಬಣ್ಣ, ರುಚಿ, ಎರಡೂ ಬಂದಿರುತ್ತದೆ. ಆದರೆ ಶಕ್ತಿಯಿಲ್ಲ. ಜತೆಗೆ ಬಿಸಿಲ ಝುಳದ ಹಠ ಬೇರೆ. ಗಂಟಲು ತಣ್ಣಗೆ ಮಾಡಲು ಸಿಕ್ಕದ್ದನ್ನೆಲ್ಲ ಕುಡಿದು, ಐಸ್ಕ್ರೀಮ್ ತಿಂದು ಲೂಸ್ವೋಶನ್ನಿಂದ ತೂರಾಡುವುದು ಅವರವರ ಪ್ರಕೃತಿ ಮತ್ತು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ! ಶಾಲೆಗೆ ಹೋಗುವ ಮಕ್ಕಳಂತೂ ‘ಅಮ್ಮ ಬಂದಿದೆ’ ಎಂದು ನಪುಂಸಕೋಚ್ಛಾರದಲ್ಲಿ ಹೇಳಿದವೆಂದರೆ ಪರೀಕ್ಷೆ ಬಂತು ಮತ್ತು ಬೇಸಿಗೆಯೂ ಬಂತು ಎಂದೇ ತೀರ್ವನಿಸಬೇಕು. ಸುಂದರವಾದ ಫ್ರಾಕಿನ ಫ್ರಿಲ್ಲುಗಳನ್ನು ನೆನಪಿಗೆ ತರುವಂತಹ ಚಿಕನ್ಪಾಕ್ಸ್ ಎನ್ನುವ ಹೆಸರಿಟ್ಟುಕೊಂಡು ಮಕ್ಕಳ ಮುಖ ಸೌಂದರ್ಯವನ್ನೆಲ್ಲಾ ಹಾಳು ಮಾಡಲು ಬರುವವಳು ಅಮ್ಮಆಗಲು ಹೇಗೆ ಸಾಧ್ಯ ಎಂದೇ ನನಗೆ ತಿಳಿಯುತ್ತಿಲ್ಲ!
ಕ್ಯೂನಲ್ಲಿ ನಿಲ್ಲುವ ಜ್ವರಗಳು:
ಆಮಶಂಕೆ, ಡೆಂಗು, ಕೋಳಿಜ್ವರ, ಹಂದಿ ಜ್ವರ, ಇಲಿಜ್ವರ, ಹುಲಿಜ್ವರ, ಕರೊನಾಜ್ವರಗಳೆಲ್ಲಾ ಒಂದರ ಹಿಂದೊಂದು ಕ್ಯೂನಲ್ಲಿ ನಿಂತಿರುತ್ತವೆ. ಇವುಗಳನ್ನು ಉಂಟು ಮಾಡುವ ವೈರಸ್ಸುಗಳ ಹೆಸರುಗಳು ಮಾತ್ರ ಅದೆಷ್ಟು ಮೋಹಕವಾಗಿರುತ್ತವೆ! ಎಂಟಮೀಬಾ ಹಿಸ್ಟಲಿಟಿಕ, ಇನ್ಫ್ಲುಯೆಂಜಾ, ಆಂಥ್ರಾಕ್ಸ್, ಕೋವಿಡ್-19... ಇವೆಲ್ಲ ಕೇಳಿದಾಗ ಯಾರೋ ಹೊರದೇಶದವರು ಬಂದರು ಅನ್ನಿಸುತ್ತೆ... ಸರಿಯೇ ಇದೆಯಲ್ಲ... ಇವೆೆಲ್ಲ ಫಾರಿನ್ ಬಾಡಿಗಳು!
ಅಂತೂ ಜ್ಯೂಸ್ ಅಂಗಡಿಗಳವರಿಗೆ ಮತ್ತು ಡಾಕ್ಟರುಗಳಿಗೆ ಒಳ್ಳೆ ವ್ಯಾಪಾರ. ಆದರೆ ಬೇಸಿಗೆಯಲ್ಲಿ ಆಗುವ ಥಂಡಿ ಇದೆಯಲ್ಲ, ಅದನ್ನು ಅನುಭವಿಸುವ ಕರ್ಮ ಯಾರಿಗೂ ಬೇಡ. ಹೊರಗೆ ಬೆವರು ಮತ್ತು ಒಳಗೆ ಜೌಗು... ಇದಪ್ಪ ಶೀತದ ಬಿಸಿ.
ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು
ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಅಂತ ಕೆ.ಎಸ್. ನರಸಿಂಹಸ್ವಾಮಿಯವರು ಸುಮ್ಮನೆ ಕವನ ಬರೆದಿದ್ದಾರೆಯೇ? ಇದ್ದಿದ್ದನ್ನು ಇದ್ದಂತೆ ಮೆಚ್ಚಿದರೆ ನಾಲ್ಕು ಜನರ ನಡುವೆ ಬೆಲೆಯುಂಟೆ?
ಅಲ್ಲದೇ ‘ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ನಾವು ತಾಳಕ್ಕೆ ತಕ್ಕಂತೆ ಕುಣಿಯಬೇಕು’ ಎಂದು ರಾಜ್ಕುಮಾರ್ ಥರವೇ ಹಾಡುತ್ತಾ, ಅವರ ‘ಮುತ್ತಿನಂಥಾ ಮಾತಿ’ಗೆ ಗೌರವ ಕೊಟ್ಟು ಬಿಸಿಲಲ್ಲಿ ಚಪ್ಪಲಿಯಿಲ್ಲದೆ ಬರಿಗಾಲಲ್ಲಿ ಟಾರ್ ರಸ್ತೆಯ ಮೇಲೆ ಕಾಲಿಟ್ಟರೆ ರಸ್ತೆಯ ಬಿಸಿಗೆ ‘ಕಾಲ’ ಮತ್ತು ‘ತಾಳ’ಕ್ಕೆ ತಕ್ಕಂತೆ ಕುಣಿಯುತ್ತಾ ಸಾಗಬಹುದು.
ಆದರೆ ಬೇಸಿಗೆಯ ಕೆಲವು ಬೆನಿಫಿಟ್ಗಳು ‘ಬರಲಿ ಬೇಸಿಗೆ’ ಅಂತ ಕರೆಯುವಂತೆ ಮಾಡಿಲ್ಲ ಅಂದರೆ ಕೇಳಿ. ಕಲ್ಲಂಗಡಿ ಹಣ್ಣು, ಮಾವಿನ ಹಣ್ಣು, ಹಲಸಿನ ಹಣ್ಣು ಇವೆಲ್ಲಾ ಬಿರು ಬೇಸಿಗೆಯಲ್ಲಿಯೇ ಸವಿಯಲು ಹಿತ. ಕಾರ್ಯದ ಮನೆಗಳಲ್ಲಿನ ಕಜ್ಜಾಯಗಳೂ, ನೀರುಗೊಜ್ಜೂ ಬಾಯಿಯಲ್ಲಿ ಸುನಾಮಿಯನ್ನೇ ಸೃಷ್ಟಿ ಮಾಡುತ್ತವೆ. ಆದರೆ ಈ ವೈಶಾಖದ ಶಾಖದ ನಡುವೆ ಒಂದೆರಡು ಹಳೆ ಮಳೆ ಬಂತೆಂದರೆ ಸಾಕು, ಮಾವಿನ ಹಣ್ಣು ಹುಳ, ಹಲಸಿನ ಹಣ್ಣು ಗುಳ ಆಗಿಬಿಡುತ್ತದೆ ನೀರು ಸೇರಿ. ಮಳೆಯೊಂದು ಬರದಿದ್ದರೆ ಸಾಕು ಅಂತ ಮಳೆ ದೇವರಿಗೆ ಕಾಯಿ ಒಡೆಸುವುದರಿಂದ ಹಿಡಿದು ಕೆಸವಿನ ಸೊಪ್ಪಿನ ಆವಾರಿ ಮುದ್ದೆ ಮಾಡಿಕೊಡುತ್ತೇನೆ ಎನ್ನುವ ಹರಕೆಗಳವರೆಗೆ ನಂಬುಗೆಯ ಜೀವ ಬರಿಸುತ್ತಾರೆ. ಕಜ್ಜಾಯ ತಿಂದು ಕೆಟ್ಟ ನಾಲಿಗೆಗೆ ಹೊಸದೊಂದು ರುಚಿಯ ವ್ಯವಸ್ಥೆ ಬೇಕಲ್ಲ, ಅದಕ್ಕೊಂದು ನೆವ. ಮಾವಿನ ಮಿಡಿ ಉಪ್ಪಿನ ಕಾಯಿ ಹಾಕಲು ಬೇಸಿಗೆ ಇರದಿದ್ದರೆ ಚೆನ್ನವೆ..? ನಮ್ಮ ಹಳ್ಳಿ ಮನೆಗಳಲ್ಲಿ ವರ್ಷಾವಧಿಗಾಗುವಷ್ಟು ಕಾಳು ಕಡಿ ಒಣಗಿಸಿಟ್ಟು ಒಬ್ಬಜ್ಜಿ ಮಾಡಲು ಬೇಸಿಗೆಯ ಗಟ್ಟಿ ಬಿಸಿಲೇ ಬೇಕು.
ಈ ಸಲವೂ ಬಿರುಬೇಸಿಗೆ
ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಭಾರತದೆಲ್ಲೆಡೆ ವಾಡಿಕೆಗಿಂತ ಹೆಚ್ಚೇ ಬಿಸಿಲು ಇರಲಿದೆ ಎಂದು ಮಾನ್ಸೂನ್ ಮಿಷನ್ ಕಪಲ್ಡ್ ಫೋರ್ಕಾಸ್ಟಿಂಗ್ ಸಿಸ್ಟೆಂ (ಎಂಎಂಸಿಎಫ್ಎಸ್) ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ತಾಪಮಾನ ಈ ಸಲ ಸರಾಸರಿಗಿಂತ ಒಂದು ಅಥವಾ ಅರ್ಧ ಡಿಗ್ರಿ ಸೆಲ್ಷಿಯಸ್ನಷ್ಟು ಜಾಸ್ತಿ ಇರಲಿದೆ. ಉಳಿದಂತೆ ಉತ್ತರ ಭಾರತದ ರಾಜ್ಯಗಳು ಮತ್ತು ಆಂಧ್ರ-ಮಹಾರಾಷ್ಟ್ರದಲ್ಲಿ ಬಿಸಿಲು ಹೆಚ್ಚಿರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬೇಸಿಗೆಯ ರೋಗಗಳು
ಕಾಲರಾ, ವಾಂತಿಭೇದಿ, ಅತಿಸಾರ, ಕಾಮಾಲೆ ಇತ್ಯಾದಿ. ಇವೆಲ್ಲವೂ ಕಲುಷಿತ ನೀರಿನಿಂದಲೇ ಹರಡುತ್ತವೆ. ಹಾಗಾಗಿ ಎಲ್ಲೆಂದರಲ್ಲಿ ನೀರು ಕುಡಿಯಬೇಡಿ. ರಸ್ತೆಬದಿಯ ತಿಂಡಿತಿನಿಸು, ಪಾನೀಯಗಳನ್ನು ಸೇವಿಸಬೇಡಿ. ಆಫೀಸಿಗೆ ಮನೆಯಿಂದಲೇ ಕುದಿಸಿ ಆರಿಸಿದ ನೀರು ಒಯ್ಯಿರಿ. ಕುಡಿಯುವ ನೀರಿನ ಟ್ಯಾಂಕನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಎಲ್ಲ ಕಡೆ ಶುಚಿತ್ವಕ್ಕೆ ಹೆಚ್ಚು ಗಮನ ಕೊಡಿ.
ಡ್ರೖೆವ್ ಮಾಡುವಾಗ ಹುಷಾರು
ತಾಪಮಾನ 26 ಡಿಗ್ರಿಗಿಂತ ಹೆಚ್ಚಿದ್ದರೆ ಚಾಲಕರಿಗೆ ನಿದ್ದೆ ಆವರಿಸುವುದು, ಸುಸ್ತಾಗುವುದು ಸಹಜ. ಎ.ಸಿ. ಆನ್ ಇಟ್ಟರೆ ಸ್ವಲ್ಪಮಟ್ಟಿಗೆ ಮಂಪರು ತಪ್ಪಿಸಬಹುದು. ಕಾರು, ಬಸ್ಸು, ಆಟೋರಿಕ್ಷಾ ಮುಂತಾದ ವಾಹನಗಳನ್ನು ನಿರಂತರವಾಗಿ ಚಲಾಯಿಸುವವರು ಪ್ರತಿ 2 ಗಂಟೆಗೊಮ್ಮೆ ವಾಹನ ಪಾರ್ಕ್ ಮಾಡಿ, ಕೈಕಾಲುಗಳಿಗೆ ಕೆಲವು ನಿಮಿಷಗಳ ಕಾಲ ವಿಶ್ರಾಂತಿ ನೀಡುವುದು ಉತ್ತಮ. ದೀರ್ಘ ಪ್ರಯಾಣ ಖಚಿತವಿದ್ದರೆ ಇಬ್ಬರು ಚಾಲಕರನ್ನು ನಿಯೋಜಿಸಿಕೊಳ್ಳಿ. ವಾಹನದ ಚಕ್ರಗಳನ್ನು ನಿಯಮಿತವಾಗಿ ತಪಾಸಣೆಗೆ ಒಳಪಡಿಸಿ.
ಎಳನೀರು, ಕಲ್ಲಂಗಡಿ, ಕರ್ಬೂಜ ಅಥವಾ ಶರೀರಕ್ಕೆ ತಂಪನ್ನುಂಟು ಮಾಡುವ ಇನ್ನಿತರ ಪದಾರ್ಥಗಳನ್ನು ಸೇವಿಸಿ. ಮಾವು, ಹಲಸು ಮತ್ತಿತರ ತಂಪನ್ನುಂಟು ಮಾಡುವ ಹಣ್ಣು ಗಳನ್ನು ಸೇವಿಸಿ
ಆಹಾರ ವಿಹಾರ
| ಡಾ. ಪ್ರಸನ್ನ ವೆಂಕಟೇಶ್ ಶ್ರೀರಂಗ ಆಯುರ್ವೆದ ಚಿಕಿತ್ಸಾ ಮಂದಿರ, ಮೈಸೂರು | ವಿಜಯಶ್ರೀ ನಟರಾಜ್ (ಲೇಖಕರು ವೃತ್ತಿಪರ ಚಿತ್ರ ಕಲಾವಿದೆ, ಹವ್ಯಾಸಿ ಬ್ಲಾಗರ್ ಮತ್ತು ಬರಹಗಾರ್ತಿ)