| ಪಂಕಜ ಕೆ.ಎಂ. ಬೆಂಗಳೂರು
ಇಡೀ ವಿಶ್ವವನ್ನೇ ನಲುಗಿಸಿದ ಕೋವಿಡ್ ಸಾಂಕ್ರಾಮಿಕದ ನಂತರ ದೇಶದಲ್ಲಿ ಆರೋಗ್ಯ ವಿಮೆಗೆ ಬೇಡಿಕೆ ಹೆಚ್ಚಿದ್ದು, ಆಪತ್ಕಾಲದಲ್ಲಿ ಉಪಯೋಗಕ್ಕೆ ಬರಲಿದೆ ಎಂದು ಚಿನ್ನಾಭರಣಗಳ ಖರೀದಿಯತ್ತ ಒಲವು ತೋರುತ್ತಿದ್ದ ಮಂದಿ ಇದೀಗ, ಆರೋಗ್ಯ ವಿಮೆ ಮಾಡಿಸುವತ್ತ ಆಸಕ್ತರಾಗಿದ್ದಾರೆ. ಬೆಂಗಳೂರು, ನವದೆಹಲಿ, ಅಹಮದಬಾದ್, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ, ಮುಂಬಯಿ, ಪುಣೆ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಖಾಸಗಿ ವಿಮಾ ಕಂಪನಿ ನಡೆಸಿರುವ ಸಮೀಕ್ಷೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಕೋವಿಡ್ ನಂತರದಲ್ಲಿ ವೈಯಕ್ತಿಕವಾಗಿ ಮಾತ್ರವಲ್ಲ, ಕಂಪನಿಗಳು ಸಹ ತಮ್ಮ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಒದಗಿಸಲು ಮುಂದಾಗಿವೆ. ಅಪಘಾತ, ಹೃದಯಾಘಾತದಂತಹ ತುರ್ತು ಸಂದರ್ಭ ಸೇರಿ ಯಾವುದೇ ಆರೋಗ್ಯ ಸೇವೆ ಪಡೆಯಲು ಬಹಳ ಹಣ ಖರ್ಚಾಗುತ್ತದೆ. ಮಾತ್ರವಲ್ಲ ವರ್ಷದಿಂದ ವರ್ಷಕ್ಕೆ ಆರೋಗ್ಯ ಸೇವೆ ದುಬಾರಿಯಾಗುತ್ತಿದೆ. ತುರ್ತು ಸಮಸ್ಯೆಗಳು ಎದುರಾದಾಗ ಜನರು ಗುಣಮುಟ್ಟದ ಚಿಕಿತ್ಸೆ ಪಡೆಯಲು ಕಷ್ಟ ಪಡುತ್ತಿದ್ದಾರೆ. ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಚಿಕಿತ್ಸೆಗಾಗಿ ಜನರು ಎದುರಿಸಿದ ಸಮಸ್ಯೆಗಳು ಆರೋಗ್ಯ ವಿಮೆಯ ಮಹತ್ವವನ್ನು ಅರಿಯುವಂತೆ ಮಾಡಿದೆ. ಹಾಗಾಗಿ ಜನರು ಆರೋಗ್ಯ ವಿಮೆ ಮಾಡಿಸುವತ್ತ ಹೆಚ್ಚು ಒಲವು ತೋರುತ್ತಿದ್ದಾರೆ ಎನ್ನುತ್ತಾರೆ ವಿಮಾ ಕಂಪನಿಯವರು.
ಶೇ.98 ಹೆಚ್ಚಳ: ದೇಶದಲ್ಲಿರುವ ಖಾಸಗಿ ವಿಮಾ ಕಂಪನಿಗಳಲ್ಲಿ ಡಿಜಿಟ್ ಇನ್ಯೂರೆನ್ಸ್ ಕೂಡ ಒಂದಾಗಿದ್ದು, ಇವರು ನಡೆಸಿರುವ ಅಧ್ಯಯನ ವರದಿಯಲ್ಲಿ ಕೋವಿಡ್ ನಂತರ ಆರೋಗ್ಯ ವಿಮೆ ಬೇಡಿಕೆಯಲ್ಲಿ ಶೇ.98 ಹೆಚ್ಚಳವಾಗಿರುವುದನ್ನು ಬಹಿರಂಗಪಡಿಸಿದೆ. 2020ರ ಡಿ.1ರಿಂದ 2021ರ ನವೆಂಬರ್ 1ರವರೆಗಿನ ಡಿಜಿಟ್ ಹೆಲ್ತ್ ಉತ್ಪನ್ನಗಳ ಮಾಹಿತಿ ಹೋಲಿಕೆ ಮಾಡಿದಾಗ ಆರೋಗ್ಯ ವಿಮೆಗೆ ಬೇಡಿಕೆ ಹೆಚ್ಚಿರುವುದು ತಿಳಿದುಬಂದಿತು. ಗುಂಪು ಆರೋಗ್ಯ ವಿಮೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಇದಲ್ಲದೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಪೋರೇಟ್ಗಳು ತಮ್ಮ ನೌಕರರ ಒಳಿತಿಗಾಗಿ ಆರೋಗ್ಯ ವಿಮೆ ಮಾಡಿಸಿರುವುದು ತಿಳಿದುಬಂದಿದೆ. 2020ರ ನವೆಂಬರ್-ಡಿಸೆಂಬರ್ನಲ್ಲಿ 1,52,000 ಮಂದಿ ವಿಮೆ ಖರೀದಿಸಿದ್ದರೆ. 2021ರ ನವೆಂಬರ್-ಡಿಸೆಂಬರ್ನಲ್ಲಿ 4,15,000 ಮಂದಿ ಆರೋಗ್ಯ ವಿಮೆ ಮಾಡಿಸಿದ್ದಾರೆ. ಅಂದರೆ ಇದು ಶೇ.170ಕ್ಕೂ ಅಧಿಕ!
ಕೋವಿಡ್ ಜನರಲ್ಲಿ ಆರೋಗ್ಯ ವಿಮೆಯ ಅವಶ್ಯಕತೆ ಅರಿಯು ವಂತೆ ಮಾಡಿದ್ದು, ಜನರು ಹೆಚ್ಚು ಒಲವು ತೋರುತ್ತಿದ್ದಾರೆ. ಇಂದಿನ ವೈದ್ಯಕೀಯ ಸೇವೆಗಳ ಅಗತ್ಯತೆ ಹಾಗೂ ಅದರ ವೆಚ್ಚದ ಬಗ್ಗೆ ಜನರು ಜಾಗೃತರಾಗಿದ್ದಾರೆ. ಕುಟುಂಬದ ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಮೂಹ ವಿಮೆಯತ್ತ ಗಮನ ಹರಿಸುತ್ತಿದ್ದಾರೆ. ಮತ್ತೊಂದೆಡೆ ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಹೆಚ್ಚಿನ ವಿಮೆಗಳನ್ನು ಖರೀದಿಸುತ್ತಿದ್ದಾರೆ. | ವಿವೇಕ್ ಚತುರ್ವೇದಿ ಮುಖ್ಯ ಮಾರುಕಟ್ಟೆ ಅಧಿಕಾರಿ ಹಾಗೂ ವ್ಯಾಪಾರ ವಿಭಾಗದ ಮುಖ್ಯಸ್ಥ, ಡಿಜಿಟ್ ಇನ್ಶೂರೆನ್ಸ್ ಕೋವಿಡ್ಗೂ ಮೊದಲು ನೂರು ಮಂದಿಯಲ್ಲಿ ಕೇವಲ 1-2 ವಿಮೆ ಖರೀದಿಸುತ್ತಿದ್ದರು. ಆದರೀಗ ನೂರಲ್ಲಿ 35 ಮಂದಿ ಆರೋಗ್ಯ ವಿಮೆ ಮಾಡಿಸುತ್ತಿದ್ದಾರೆ. ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟರೆ ಅದಕ್ಕೂ ವಿಮೆಯಲ್ಲಿ 600 ರೂ. ಲಭ್ಯವಾಗಲಿದೆ. ಮನೆ ಆರೈಕೆಗೆ ಒಳಗಾದಲ್ಲಿ ಅದಕ್ಕೂ 7 ದಿನಗಳ ಅವಧಿಗೆ ನೆರವು ದೊರೆಯಲಿದೆ. | ವಿ.ಕಿರಣ್ಕುಮಾರ್ ತಂಡದ ಮುಖ್ಯಸ್ಥ, ಜೆ.ಪಿ.ನಗರ ವಿಭಾಗ, ಸ್ಟಾರ್ ಇನ್ಶೂರೆನ್ಸ್