ಅಂಕಣ

ಅನಿಸಿಕೆ: ಆರೋಗ್ಯ, ಆರ್ಥಿಕತೆ ಮತ್ತು ಕರೊನಾ ಸೋಂಕು

ಲಾಕ್​ಡೌನ್ ಸಡಿಲಗೊಳಿಸಿದ ಮಾತ್ರಕ್ಕೆ ಕರೊನಾ ನಮ್ಮನ್ನೆಲ್ಲ ಬಿಟ್ಟು ಹೋಗಿಲ್ಲ. ನಮ್ಮೆಲ್ಲರ ಕೆಲಸ ಕಾರ್ಯ, ವೃತ್ತಿ, ವ್ಯಾಪಾರ, ಅತ್ಯಾವಶ್ಯಕವಾದ ಓಡಾಟಕ್ಕೆ, ಆರ್ಥಿಕ ವ್ಯವಹಾರಗಳಿಗೆ ಅನುವು ಮಾಡಿಕೊಡಲಾಗಿದೆ. ದಿಗ್ಬಂಧನದ ಸಂದರ್ಭದಲ್ಲಿ ಎಲ್ಲರೂ ಸುರಕ್ಷಿತವಾಗಿ ಮನೆಗಳಲ್ಲಿ ಇದ್ದೆವು, ಗೆದ್ದೆವು. ಆದರೆ ಈಗ ಹಾಗಲ್ಲ, ವಿಧಿ ಇಲ್ಲದೆ ಜೀವನ ನಿರ್ವಹಣೆಗೋಸ್ಕರವಾದರೂ ಮನೆಗಳಿಂದ ಹೊರಗೆ ಬರಬೇಕು. ಹಾಗೆ ಬಂದವರ ಮೇಲೆ ಜವಾಬ್ದಾರಿಯೂ ಹೆಚ್ಚಾಗಿದೆ. ಏಕೆಂದರೆ ಕರೊನಾಗೆ ಔಷಧ ಅಥವಾ ಲಸಿಕೆಯನ್ನು ಪ್ರಪಂಚದ ಯಾವುದೇ ದೇಶವು ಸದ್ಯಕ್ಕೆ ಕಂಡುಹಿಡಿಯಲು ಯಶಸ್ವಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸೋಂಕು ತಗುಲಿಸಿಕೊಳ್ಳದೆ ಯಶಸ್ವಿಯಾಗಿ ಹೇಗೆ ಬದುಕಬಲ್ಲೆವು ಎನ್ನುವ ಸವಾಲು ಸ್ವೀಕರಿಸಿ ಗೆಲ್ಲಬೇಕಾಗಿರುವುದು ಅಗತ್ಯ. ‘ಎಲ್ಲ ಜವಾಬ್ದಾರಿಗಳನ್ನು ಸರ್ಕಾರವೇ ತೆಗೆದುಕೊಳ್ಳಲಿ. ನಮ್ಮನ್ನು ರಕ್ಷಿಸಲಿ, ನನ್ನಿಂದ ಏನೂ ಆಗುವುದಿಲ್ಲ’ ಎನ್ನುವ ಧೋರಣೆ ಬೇಡ. ಸರ್ಕಾರದ ಆದೇಶಗಳನ್ನು ಅಗತ್ಯವಾಗಿ ಅನುಸರಿಸುವುದು ಅಲ್ಲದೆ ವೈಯಕ್ತಿಕವಾಗಿ ಶಿಸ್ತುಬದ್ಧ ಜೀವನಶೈಲಿಯಲ್ಲಿ ಬದುಕುವುದನ್ನು ರೂಢಿಸಿಕೊಂಡರೆ ತಕ್ಕಮಟ್ಟಿಗೆ ಗೆಲುವು ನಮ್ಮದೇ. ಮುಖಗವಸು ಧರಿಸುವುದು, ದೈಹಿಕ ಅಂತರ (ಸಾಮಾಜಿಕ ಅಂತರ) ಪಾಲಿಸುವುದು, ಪದೇಪದೇ ಕೈತೊಳೆಯುವುದು ಇತ್ಯಾದಿ ಎಲ್ಲರಿಗೂ ಈಗಾಗಲೇ ತಿಳಿದಿರುವ ವಿಷಯ. ದಿಗ್ಬಂಧನ ಸಡಿಲಿಕೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಈ ಪಟ್ಟಿಗೆ ಇನ್ನೊಂದಷ್ಟು ಸೇರಿಸಬಹುದಾದರೆ, ದಿನಬಳಕೆಯ ವಸ್ತುಗಳನ್ನು ನಿಮಗೆ ತಿಳಿದಿರುವ ಅಥವಾ ನಿಯಮಿತವಾಗಿ ಕೊಳ್ಳುವಲ್ಲಿಯೇ ಖರೀದಿಸಿ. ಅನವಶ್ಯಕವಾಗಿ ಬೇರೆಡೆಗೆ ಎಲ್ಲೂ ತೆರಳದಿರಿ, ದೊಡ್ಡ ಗುಂಪುಗಳು ಇರುವೆಡೆ ಹೋಗಬೇಡಿ. ಹೊರಗೆ ಹೋಗಿದ್ದರೆ ಸಂಜೆ 7ರ ಒಳಗೆ ಮನೆಗೆ ಬಂದು ಸೇರಿ. ಮನೆಯಿಂದ ಹೊರಗೆ ಹೋಗುವಾಗ ಕೆಲಸಕಾರ್ಯಗಳ ಪಟ್ಟಿ ಮಾಡಿಕೊಂಡು, ಅದರಂತೆ ಮುಗಿಸಿಕೊಂಡು ಹಿಂತಿರುಗಿ. ಮತ್ತು ಮುಖ್ಯವಾಗಿ ದಿಗ್ಬಂಧನ ಸಡಿಲಗೊಳಿಸಿದ್ದೇ ತಡ ಅನಗತ್ಯ ಊರೂರು ತಿರುಗಾಟಕ್ಕೆ ಹೊರಟುನಿಲ್ಲಬೇಡಿ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕಷಾಯಗಳನ್ನು ಸೇವಿಸಿ.

ಇದಿಷ್ಟು ವೈಯಕ್ತಿಕ ಆರೋಗ್ಯಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳಾದರೆ, ಆರ್ಥಿಕ ಆರೋಗ್ಯದ ಕಡೆಗೂ ಗಮನ ಹರಿಸುವುದು ಅವಶ್ಯಕ ಸಂಗತಿ. ಈ ಆರ್ಥಿಕ ಸಂಕಷ್ಟದಿಂದ ಪಾರುಮಾಡಲು ಸರ್ಕಾರ ಇಪ್ಪತ್ತು ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಿಸಿ, ತನ್ನ ಕೈಲಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ, ಈ ಕ್ರಮಗಳಿಗೆ ತಕ್ಕ ಫಲಿತಾಂಶ ದೊರಕುವುದಕ್ಕೆ ಸಮಯವಂತೂ ಬೇಕು. ಕೊಂಚ ವಿಳಂಬವೂ ಆಗಬಹುದು. ಆದರೆ ಮನಸ್ಸಿಗೆ ಒತ್ತಡ ತಂದುಕೊಂಡು ಹೆದರುವ ಅಗತ್ಯವಿಲ್ಲ. ಏನೇ ಆದರೂ ಎದುರಿಸುವ ಛಲದ ಮನೋಭಾವನೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳುವುದು ಸೂಕ್ತ. ಈಗಾಗಲೇ ಎಷ್ಟೋ ಮಂದಿ ನೌಕರಿ ಕಳೆದುಕೊಂಡಿದ್ದರೆ, ಉದ್ಯೋಗದಾತರು ಲಾಕ್​ಡೌನ್​ನಿಂದ ವ್ಯಾಪಾರವಿಲ್ಲದೆ ಒಂದು ಕಡೆ ಸಂಬಳ ಕಡಿತ ಮಾಡಿದ್ದರೆ ಇನ್ನೊಂದು ಕಡೆ ಎರಡು ಅಥವಾ ಮೂರು ತಿಂಗಳ ಅವಧಿಯೊಳಗೆ ಬೇರೆ ಉದ್ಯೋಗವನ್ನು ನೋಡಿಕೊಳ್ಳುವಂತೆ ನೌಕರರಿಗೆ ಹೇಳುತ್ತಿದ್ದಾರೆ. ಒಂದಂತೂ ಸತ್ಯ-ಕಷ್ಟ ಎದುರಾಗಿರುವುದು ನಮ್ಮಂತೆಯೇ ಲಕ್ಷಾಂತರ ಮಂದಿಗೆ ಎನ್ನುವುದನ್ನು ಮರೆಯಬಾರದು, ಅರಿವಿನಿಂದ ಇರುವಷ್ಟರಲ್ಲಿ ಜೀವನ ನಡೆಸುವುದಕ್ಕೆ ಪ್ರಯತ್ನಿಸಬೇಕು.

* ವರಮಾನ ಕಡಿಮೆ, ಖರ್ಚು ಜಾಸ್ತಿ ಎಂಬ ಸ್ಥಿತಿಗೆ ತಲುಪಬಾರದು. * ಅನಗತ್ಯ ಖರ್ಚುಗಳಿಂದ ದೂರವಿರುವುದು ಸರಿ, ಕೈಯಲ್ಲಿರುವ ಸಂಪನ್ಮೂಲಗಳನ್ನು ಜಾಣ್ಮೆಯಿಂದ, ಮಿತವಾಗಿ ಹೆಚ್ಚುದಿನಗಳವರೆಗೆ ಬಳಸುವುದು ಒಳಿತು. * ಈಗಿರುವ ಪ್ರತಿಕೂಲ ವಾತಾವಣವನ್ನು ಮನೆಮಂದಿ, ಮಕ್ಕಳನ್ನು ಕೂಡಿಸಿಕೊಂಡು ವಿವರವಾಗಿ ತಿಳಿಸಿ. ಅವರ ಸಹಭಾಗಿತ್ವದೊಂದಿಗೆ ಖರ್ಚು-ವೆಚ್ಚದ ಬಜೆಟ್ ಮಾಡುವುದರಿಂದ ಕುಟುಂಬಕ್ಕೂ ಒಳಿತು. * ಅವಶ್ಯಕವಾಗಿರುವ ವಸ್ತುಗಳು, ವೈದ್ಯಕೀಯ ಚಿಕಿತ್ಸೆ, ಇತರ ಸೌಕರ್ಯಗಳಿಗೆ ರಾಜಿ ಮಾಡಿಕೊಳ್ಳದೆ ಸರ್ವಸಮ್ಮತದ ಬಜೆಟ್ಟಿನಲ್ಲೇ ಪರಿಸ್ಥಿತಿ ತಿಳಿಯಾಗುವವರೆಗೆ ನಡೆಯಬೇಕೆಂದು ತೀರ್ವನಿಸಿ ಅದರಂತೆಯೇ ನಡೆದುಕೊಳ್ಳಿ. * ಮನೆಯಲ್ಲಿ ಹಿರಿಯರು ಮತ್ತು ಜೀವನಾನುಭವ ಇರುವವರ ಸಲಹೆ, ಸಹಾಯ ಅತ್ಯಮೂಲ್ಯ. ಅದನ್ನು ಬಳಸಿಕೊಳ್ಳುವುದು ಕಲಿಯಬೇಕು. * ಶಾಲಾ-ಕಾಲೇಜುಗಳಲ್ಲಿ ಓದುವ ಮಕ್ಕಳು ಮನೆಯಲ್ಲಿದ್ದರೆ ಅವರ ಓದಿಗೆ ಬೇಕಾದ ಹಣವನ್ನು ಮೊದಲು ತೆಗೆದಿರಿಸಿ, ಫೀಸನ್ನು ಕಂತುಗಳಲ್ಲಿ ಪಾವತಿಸುವ ಅವಕಾಶವಿದ್ದರೆ ಮೊದಲು ಅದನ್ನೇ ಆಯ್ಕೆ ಮಾಡಿಕೊಳ್ಳಿ. ಫೀಸು ತುಂಬಲು ಹಣವಿಲ್ಲದೆ ಶಾಲೆ ಅಥವಾ ಕಾಲೇಜಿಗೆ ಹೋಗಲಾರದ ಸ್ಥಿತಿ ಎಂದೂ ಸೃಷ್ಟಿಯಾಗಬಾರದು. * ಮನೆಯಲ್ಲಿ ಹಿತ ಮತ್ತು ಮಿತವಾದ ಭೋಜನ ತಯಾರಿಸಿ, ಸ್ವೀಕರಿಸುವುದು ಸೂಕ್ತ. ಎಂದಿಗೂ ಆಹಾರವನ್ನು ಬಿಸಾಡುವಷ್ಟು ತಯಾರಿಸಬೇಡಿ. * ವಿಶೇಷವಾಗಿ ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ. * ಸಾಲವಿದ್ದರೆ ಅದನ್ನು ತೀರಿಸುವುದಕ್ಕೂ ಬಜೆಟ್ಟಿನಲ್ಲಿ ಒಂದು ಸ್ಥಾನ ಕಲ್ಪಿಸಿ. * ಹಣಕಾಸಿನ ಬಾಧ್ಯತೆ ಮತ್ತು ಬದ್ಧತೆಯಿಂದ ಎಂದೂ ವಿಮುಖರಾಗದಿರಿ, ಗೊತ್ತಿರಲಿ ನಿಮಗೆ ಸಾಲ ಕೊಟ್ಟವನಿಗೆ ಅಥವಾ ಸಂಸ್ಥೆಗೆ ನೀವು ಹಿಂದಿರುಗಿಸುವ ಹಣವೆ ಅವನ ಜೀವನ/ವ್ಯಾಪಾರಕ್ಕೆ ಆಧಾರ. * ಕೋವಿಡ್​ನಂಥ ಸಮಯದಲ್ಲಿ ಅನಗತ್ಯವಾದ ಹೊಸ ಸಾಲವನ್ನು ಮಾಡಬೇಡಿ, ಈಗಿರುವ ಬಾಧ್ಯತೆಗಳನ್ನಷ್ಟೆ ಅಲ್ಲದೆ ಹೊಸ ಸಾಲವನ್ನು ತೀರಿಸಲಾಗದೆ ಪೇಚಿಗೆ ಸಿಲುಕಬೇಕಾದೀತು. * ಈಗಿರುವ ಸಾಲವನ್ನೇನಾದರೂ ಹೆಚ್ಚುವರಿ ಬಡ್ಡಿ ಅಥವಾ ಶುಲ್ಕವಿಲ್ಲದೆ ಮುಂದೂಡಬಹುದಾದರೆ ಅದರ ಸಾಧಕ-ಬಾಧಕಗಳನ್ನು ಆರ್ಥಿಕವಾಗಿ ವಿಮರ್ಶಿಸಿ.

ವೃತ್ತಿ, ಉದ್ದಿಮೆಯ ವ್ಯವಹಾರದ ಸಮೀಕರಣವೇ ಭಿನ್ನ. ಕೊವಿಡ್ ಲಾಕ್​ಡೌನ್​ನಿಂದ ವ್ಯಾಪಾರವು ಹೊಡೆತ ತಿಂದಿರುವುದು ಸರಿಯೆ, ಉದ್ದಿಮೆಗೆ ಅನುಗುಣವಾದ ನೌಕರರು, ಅವರಿಗೆ ಕೊಡಬೇಕಾದ ಸಂಬಳ, ಆಫೀಸು, ಫ್ಯಾಕ್ಟರಿಯ ಬಾಡಿಗೆ, ಇತರೆ ಖರ್ಚಿಗೂ ಪರದಾಡುವಂತಾಗಿರುವುದು ಬಹಿರಂಗ ರಹಸ್ಯ. ಬ್ಯಾಂಕಿನಿಂದ ಸಾಲ ತೆಗೆದು ಉದ್ದಿಮೆ ನಡೆಸುತ್ತಿದ್ದರಂತೂ ವಾಣಿಜ್ಯೋದ್ಯಮಿಯದು ನರಕಯಾತನೆಯ ಸ್ಥಿತಿ. ಹಣ ಪಾವತಿಸಬೇಕಾದ ಕಡೆ ಸಾಧ್ಯವಾದರೆ ಸ್ವಲ್ಪ ಕಾಲಾವಕಾಶ ಪಡೆದುಕೊಳ್ಳಿ. ಲಾಕ್​ಡೌನ್ ಸಡಿಲಿಸಿದ ನಂತರ (ಈಗ ಸ್ವಲ್ಪ ಮಟ್ಟಿಗೆ ಸಡಿಲಿಕೆಯಾಗಿದೆ) ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಉದ್ದಿಮೆ ಮುಂದುವರಿಸಬಹುದು. ಪೂರೈಕೆದಾರ ಮತ್ತು ಗ್ರಾಹಕ ಸಂಪೂರ್ಣ ಚೇತರಿಸಿಕೊಳ್ಳುವವರೆಗೂ ತಾಳ್ಮೆ, ಸಹನೆಯಿಂದ ಕಾಯಬೇಕಾಗುತ್ತದೆ. ವ್ಯಾಪಾರ ಮುಂದುವರಿಸಲು ಅನಗತ್ಯವಾದ ಎಲ್ಲ ಖರ್ಚುವೆಚ್ಚಗಳನ್ನು ಬದಿಗೊತ್ತುವುದರಿಂದ ಬೇಗ ಚೇತರಿಕೆ ಕಾಣಬಹುದು. ಈ ಮಧ್ಯೆ ಸರ್ಕಾರ ಮತ್ತು ಕಾನೂನಿನ್ವಯ ದೊರಕುವ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳುವುದರಿಂದ ಶೀಘ್ರವೇ ಕಾರ್ಯೋನ್ಮುಖವಾಗಬಹುದು. ಕುಂದಿದ ವ್ಯಾಪಾರ ಮುಂದುವರಿಸುವ ಮನಸ್ಸಿಲ್ಲದವರು, ಮಿತಿಮೀರಿ ಸಾಲಮಾಡಿ ಕೈಚೆಲ್ಲಿ ಕುಳಿತವರು ಶೋಚನೀಯವಾಗಿರುವುದು ನಿಜ. ವೃತ್ತಿಪರ ಆಪ್ತಸಮಾಲೋಚನೆಯೊಂದಿಗೆ, ಸರ್ಕಾರ ಕೊಟ್ಟಿರುವ ಆರ್ಥಿಕ ಉತ್ತೇಜನ ಪ್ಯಾಕೇಜನ್ನು ದಕ್ಷವಾಗಿ ಬಳಸಿಕೊಂಡು ವ್ಯವಹಾರಗಳನ್ನು ಪುನಶ್ಚೇತನ ಮಾಡಿಕೊಳ್ಳುವವನೇ ಜಾಣ.

ಹೀನಾಯವಾದ ಆರ್ಥಿಕ ಪರಿಸ್ಥಿತಿ ಶ್ರೀಸಾಮಾನ್ಯನದ್ದೇ ಇರಬಹುದು ಅಥವಾ ದೊಡ್ಡ ಉದ್ಯಮಿಯದ್ದೇ ಇರಬಹುದು, ವರಮಾನಕ್ಕೆ ತಕ್ಕ ಖರ್ಚುವೆಚ್ಚ ತೂಗಿಸುವ ಮಾನಸಿಕ ಚೌಕಟ್ಟನ್ನು ಅವಶ್ಯಕವಾಗಿ ಹಾಕಿಕೊಳ್ಳಿ, ಹಾಸಿಗೆ ಇದ್ದಷ್ಟೆ ಕಾಲು ಚಾಚಿ. ಸರ್ಕಾರ ಕೊಡುವ ಮತ್ತು ಅಗತ್ಯವಿರುವ ಎಲ್ಲ ಸೇವೆ, ಸವಲತ್ತುಗಳನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಸಶಕ್ತವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸಿ. ‘ಒಂದು ರೂಪಾಯಿಯ ಉಳಿತಾಯ ಒಂದು ರೂಪಾಯಿಯ ಗಳಿಕೆಗೆ ಸಮ’ ಎನ್ನುವ ಸಾರ್ವಕಾಲಿಕ ಅರ್ಥಶಾಸ್ತ್ರ ನೀತಿಯನ್ನು ಮರೆಯಬೇಡಿ. ಕಷ್ಟಗಳು ಶಾಶ್ವತವೇನಲ್ಲ, ಬೆಳಕು ಹರಿದು ಕತ್ತಲನ್ನೊಡಿಸುವ ಸಮಯಕ್ಕೆ ಕಾಯಬೇಕು. ಕರೊನಾ ಸಾಂಕ್ರಾಮಿಕ ಪಿಡುಗು ಈ ಶತಮಾನದ ಬಹುದೊಡ್ಡ ಅವಕಾಶವನ್ನು ಮಾನವ ಜನಾಂಗದ ಎಲ್ಲ ರಂಗಗಳಿಗೂ ಕಲ್ಪಿಸಿಕೊಟ್ಟಿದೆ ಧೈರ್ಯವಾಗಿ ಎದುರಿಸುವುದೊಂದೇ ನಮಗಿರುವ ಮಾರ್ಗ. ಸೋಂಕು ತಾಗಿಸಿಕೊಳ್ಳದೆ ಆರೋಗ್ಯವಾಗಿ ಇರಲು ಬೇಕಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೀವನ ನಡೆಸಿ.

(ಲೇಖಕರು ಲೆಕ್ಕಪರಿಶೋಧಕರು, ಹವ್ಯಾಸಿ ಬರಹಗಾರರು)