ಅಂಕಣ

ಆಧುನಿಕ ಜೀವನಶೈಲಿಯಿಂದ ಬರುವ ಕಾಯಿಲೆ ದೂರವಿಡುವ ಮೆಂತೆ

ಒಂದು ಕಾಲದಲ್ಲಿ ಮೆಂತೆ ಎಂದರೆ ಅದು ಕೇವಲ ಒಂದು ಸಾಂಬಾರ ಪದಾರ್ಥ ಎಂಬ ಭಾವನೆಯಿತ್ತು. ಇಂದು ಬಹುತೇಕ ಮನೆಗಳಲ್ಲಿ ಅದನ್ನು ಸಾಂಬಾರ ಪದಾರ್ಥವಾಗಿ ಬಳಸುವುದಕ್ಕಿಂತ ಔಷಧವಾಗಿ ಬಳಸುವುದೇ ಹೆಚ್ಚಾಗಿದೆ, ಕಾರಣ ಅದರಲ್ಲಿರುವ ಅದ್ಭುತ ಔಷಧೀಯ ಗುಣಗಳು. ಅದರಲ್ಲಿಯೂ ಆಧುನಿಕ ಜೀವನಶೈಲಿಗೆ ಬರುವ ಕಾಯಿಲೆಗಳನ್ನು ದೂರವಿಡುವ ಶಕ್ತಿ ಮೆಂತೆಗಿದೆ.

ಕಾಯಿಲೆಗಳಿಗೆ ಮದ್ದು: ಮಂಡಿನೋವು, ಸಂಧಿ ನೋವು, ಅಸ್ತಮಾ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು,ಪುರುಷರ ಲೈಂಗಿಕ ಸಮಸ್ಯೆಗಳು, ಚರ್ಮದ ತೊಂದರೆಗಳು, ಅಸಿಡಿಟಿ, ಡಯಾಬಿಟಿಸ್ ಹೀಗೆ ಹಲವಾರು ಕಾಯಿಲೆಗಳಿಗೆ ಮೆಂತೆ ಮದ್ದು. ಮೆಂತೆಯಲ್ಲಿರುವ ಅಮೈನೋ ಆಸಿಡ್​ನಿಂದಾಗಿ ಮಧುಮೇಹದಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ದಿನಕ್ಕೊಮ್ಮೆ 5 ಗ್ರಾಂನಷ್ಟು ಮೆಂತೆಯನ್ನು ಸೇವಿಸಿದರೂ ಅದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹತೋಟಿಗೆ ತರಬಲ್ಲುದು. ಒಂದೆರಡು ಚಮಚದಷ್ಟು ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಆಯುರ್ವೆದದಲ್ಲಿ ಮೆಂತೆಯು ವಾತ ಮತ್ತು ಕಫ ದೋಷಗಳನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗಿದೆ. ಹಾಗಾಗಿ ಹೊಟ್ಟೆಯುಬ್ಬರ, ಮಲಬದ್ಧತೆ, ಗಂಟುನೋವು, ಕಫ, ಕೆಮ್ಮು, ಅಸ್ತಮಾದಂತಹ ಸಮಸ್ಯೆಗಳಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.

ಕೆಟ್ಟ ಕೊಲೆಸ್ಟ್ರಾಲ್ ಕರಗಿಸುತ್ತದೆ: ಮೆಂತೆಗೆ ಬೊಜ್ಜು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣವಿದೆ. ದಿನಕ್ಕೊಮ್ಮೆ ಅಥವಾ ಎರಡು ಬಾರಿ 5 ಗ್ರಾಂನಷ್ಟು ಮೆಂತೆ ಪುಡಿಯನ್ನು ಬೆಣ್ಣೆ ತೆಗೆದ ಮಜ್ಜಿಗೆಯಲ್ಲಿ ಹಾಕಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅಂಶವು ಒಳ್ಳೆಯ ರೀತಿಯಲ್ಲಿ ಹತೋಟಿಗೆ ಬರುತ್ತದೆ. ಒಂದರಿಂದ ಒಂದೂವರೆ ತಿಂಗಳು ಈ ರೀತಿ ಸೇವನೆ ಮಾಡಬೇಕಾಗುತ್ತದೆ. ಮೆಂತೆ ಮತ್ತು ಅರಿಶಿನವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣನೆಯ ಪುಡಿ ಮಾಡಿಟ್ಟುಕೊಳ್ಳಬೇಕು.10 ಗ್ರಾಂನಷ್ಟು ಈ ಮಿಶ್ರಣವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ಹಾಕಿ ಸೇವಿಸುವುದರಿಂದ ಡಯಾಬಿಟಿಸ್ ಸಮಸ್ಯೆ ಇರುವವರಿಗೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಡಲು ಅನುಕೂಲವಾಗುತ್ತದೆ.

ಎದೆಹಾಲು ವೃದ್ಧಿ: ಎದೆಹಾಲು ಉಣಿಸುವ ತಾಯಂದಿರಿಗೆ ಮೆಂತೆಯು ಒಂದು ವರದಾನದಂತೆ ಕೆಲಸ ಮಾಡುತ್ತದೆ. ನೆನೆಸಿದ ಮೆಂತೆಯನ್ನು ರುಬ್ಬಿ ಬೆಲ್ಲ ಹಾಕಿ ಪಾಕ ಬರಿಸಿ ತುಪ್ಪ ಹಾಕಿ ಇಟ್ಟುಕೊಳ್ಳಬೇಕು. ಇದನ್ನು ಬಾಣಂತಿಯು ನಿತ್ಯವೂ ಸೇವಿಸಿದರೆ ಎದೆಹಾಲು ವೃದ್ಧಿಯಾಗುತ್ತದೆ. ಮೆಂತೆಯು ಮಲಬದ್ಧತೆಯಲ್ಲಿಯೂ ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತೆಯನ್ನು ಎರಡು ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟಕ್ಕೆ ಬತ್ತಿಸಿ ಇದು ಬಿಸಿ ಇರುವಾಗಲೇ ಅರ್ಧದಿಂದ ಒಂದು ಚಮಚ ತುಪ್ಪ ಹಾಕಿ ಸಂಜೆಯ ಸಮಯದಲ್ಲಿ ಸೇವಿಸುವುದರಿಂದ ಮಲಬದ್ಧತೆ ಮತ್ತು ಮೂಲವ್ಯಾಧಿಗಳಲ್ಲಿ ಸಹಾಯವಾಗುತ್ತದೆ.

ಕೂದಲು ಉದುರುವಿಕೆ ನಿಯಂತ್ರಣಕ್ಕೆ ಮೆಂತೆಯ ಎಣ್ಣೆಯನ್ನು ಮಾಡಿಟ್ಟುಕೊಂಡು ಅದನ್ನು ನಿತ್ಯವೂ ತಲೆಗೆ ಹಚ್ಚಿದರೆ ಕೂದಲು ಉದುರುವುದು ನಿಲ್ಲುತ್ತದೆ. ಬಹಳಷ್ಟು ಮನೆಗಳಲ್ಲಿ ತಾಯಂದಿರು ಎಣ್ಣೆಯನ್ನು ಬಳಸಿ ಈ ಸಮಸ್ಯೆಯಿಂದ ಹೊರ ಬಂದಿದ್ದಾರೆ. 30 ಗ್ರಾಂನಷ್ಟು ಮೆಂತೆಯನ್ನು ಪುಡಿ ಮಾಡಿ ಒಂದು ಪಾತ್ರೆಗೆ ಹಾಕಿ ಅದಕ್ಕೆ 100 ರಿಂದ 150 ಮಿ.ಲೀ. ಕೊಬ್ಬರಿ ಎಣ್ಣೆಯನ್ನು ಹಾಕಿ ಐದಾರು ದಿನಗಳ ಕಾಲ ಬಿಸಿಲಿಗೆ ಇಡಬೇಕು. ನಂತರ ಸೋಸಿ ಇಟ್ಟುಕೊಂಡು ರಾತ್ರಿ ಮಲಗುವಾಗ ತಲೆಗೆ ಹಚ್ಚಿದರೆ ಕೂದಲು ಉದುರುವುದು ನಿಲ್ಲುತ್ತದೆ.

ಹೇರ್ ಕಂಡೀಷನರ್: ಮೆಂತೆಯನ್ನು ಹೇರ್ ಕಂಡಿಷನರ್ ಆಗಿಯೂ ಬಳಸಬಹುದು. ಒಂದಿಷ್ಟು ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅದನ್ನು ರುಬ್ಬಿ ಹೆಡ್ ಪ್ಯಾಕ್ ಮಾಡಿಕೊಂಡರೆ ಅದು ಉತ್ತಮವಾದ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಕೂದಲು ನಯವಾಗಿ ಒಳ್ಳೆಯ ಹೊಳಪು ಬರುತ್ತದೆ.

ರಕ್ತಸ್ರಾವವಾಗುವ ಸಮಸ್ಯೆ ಇರುವವರು ಮೆಂತೆಯನ್ನು ಹೆಚ್ಚಾಗಿ ಬಳಸಬಾರದು. ಉದಾಹರಣೆಗೆ ಮೂಗಿನಲ್ಲಿ ರಕ್ತ ಬರುವುದು ಅಥವಾ ಅತಿಯಾದ ಮುಟ್ಟಿನ ಸಮಯದ ರಕ್ತಸ್ರಾವ ಇರುವವರು. ಗರ್ಭಿಣಿಯರು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಮೆಂತೆಯನ್ನು ಬಳಸಬಹುದು. ಅಂಥವರು ಅತಿಯಾಗಿ ಮೆಂತೆಯನ್ನು ಬಳಸುವುದು ಸರಿಯಲ್ಲ.