ಅಂಕಣ

ಗಡ್ಡ ಬೆಳೆಸಿದ ಮಾತ್ರಕ್ಕೆ, ಗುಡ್ಡವೇರಿ ಕೂರುವವನಲ್ಲ!

ಜನವರಿ 16 ಅನ್ನು ಭಾರತ ಸ್ಟಾರ್ಟಪ್ ದಿನವನ್ನಾಗಿ ಆಚರಿಸಿದೆ. ಕಳೆದ ಆರೇಳು ವರ್ಷಗಳ ನಿರಂತರ ಶ್ರಮದ ನಂತರ ಈ ದೇಶ ಇಂದು ಸ್ಟಾರ್ಟಪ್​ಗಳ ಲೋಕದಲ್ಲಿ ತನ್ನದ್ದೇ ಆದ ಛಾಪು ಮೂಡಿಸಿದೆ. ಒಂದು ಕಾಲದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರಕ್ಕಾಗಿ ಹಾತೊರೆಯುತ್ತಿದ್ದ ತರುಣರು ನಂತರದ ದಿನಗಳಲ್ಲಿ ಐಎಎಸ್, ಕೆಎಎಸ್​ಗಳತ್ತ ಮುಖ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಪ್ರಯತ್ನದಿಂದಾಗಿ ಇಂದು ತರುಣರು ಸ್ಟಾರ್ಟಪ್​ಗಳತ್ತ ಮುಖಮಾಡಿ ನಿಂತಿದ್ದಾರೆ. ಒಂದು ದಶಕದ ಹಿಂದೆ ಈ ಪದದ ಅರ್ಥವೂ ಬಹುತೇಕ ತರುಣರಿಗೆ ಗೊತ್ತಿರಲಿಲ್ಲ. ಇಂದು ಹಳ್ಳಿ-ಹಳ್ಳಿಯಲ್ಲಿಯೂ ಸ್ಟಾರ್ಟಪ್​ಗಳ ಕುರಿತಂತೆ ಜನ ಮಾತನಾಡಲಾರಂಭಿಸಿದ್ದಾರೆ.

ಇತ್ತೀಚೆಗೆ ಕೇಂದ್ರಮಂತ್ರಿ ಪಿಯುಷ್ ಗೊಯೆಲ್ ಮಾತನಾಡುತ್ತ ನೀಡಿರುವ ದಾಖಲೆಗಳೇ ಇದಕ್ಕೆ ಸಾಕ್ಷಿ. ಈ ದೇಶದ ಒಟ್ಟಾರೆ ಸ್ಟಾರ್ಟಪ್​ಗಳಲ್ಲಿ ಶೇಕಡ 45 ಎರಡನೇ ಮತ್ತು ಮೂರನೇ ಹಂತದ ನಗರಗಳಿಂದಲೇ ಬಂದಿವೆ. ದೇಶದ 623 ಜಿಲ್ಲೆಗಳು ಕನಿಷ್ಠ ಒಂದಾದರೂ ಅಧಿಕೃತವಾದ ಸ್ಟಾರ್ಟಪ್ ಹೊಂದಿವೆ. 2018ರಿಂದ 21ರ ನಡುವಿನ ಮೂರು ವರ್ಷಗಳಲ್ಲಿ ಸುಮಾರು ಆರು ಲಕ್ಷ ಉದ್ಯೋಗವನ್ನು ಇವು ಸೃಷ್ಟಿಸಿವೆಯಲ್ಲದೆ ಕಳೆದೊಂದೇ ವರ್ಷದಲ್ಲಿ ಎರಡು ಲಕ್ಷ ಉದ್ಯೋಗಗಳಿಗೆ ಜನನಿಯಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲಿ ಕಟ್ಟಿದ ಕನಸು ಈಗ ಫಲ ಕೊಡುತ್ತಿದೆ. ಹೀಗಾಗಿಯೇ ಜನವರಿ 16ನ್ನು ಸ್ಟಾರ್ಟಪ್​ಗಳ ದಿನವನ್ನಾಗಿ ಆಚರಿಸುವ ಮೂಲಕ ಅವರು ಭವಿಷ್ಯದ ಇಪ್ಪತ್ತು ವರ್ಷಗಳಿಗೆ ಬೇಕಾದ ನೀಲಿನಕಾಶೆಯನ್ನು ರಾಷ್ಟ್ರದ ಮುಂದಿರಿಸಿದ್ದಾರೆ. ನಾಯಕನ ದೂರದೃಷ್ಟಿ ಎಷ್ಟು ಅಗತ್ಯ ಎನ್ನುವುದಕ್ಕೆ ನರೇಂದ್ರ ಮೋದಿ ಸ್ಪಷ್ಟ ಉದಾಹರಣೆಯಾಗಬಲ್ಲರು.

ಸ್ಟಾರ್ಟಪ್ ಜಿನೋಮ್ ಎಂಬ ಸಂಸ್ಥೆ ತನ್ನ 2021ರ ವರದಿಯಲ್ಲಿ ಲಂಡನ್, ಮುಂಬೈ ಮತ್ತು ಬೆಂಗಳೂರುಗಳನ್ನು ಜಾಗತಿಕ ಮಟ್ಟದ ಸ್ಟಾರ್ಟಪ್ ಕೇಂದ್ರಗಳಾಗಿ ಗುರುತಿಸಿದೆ. ಬೆಂಗಳೂರು ಪ್ರಮುಖ 30 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆಯಲ್ಲದೆ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟಪ್ ಕೇಂದ್ರಗಳಲ್ಲಿ ಅಗ್ರಣಿಯಾಗಿದೆ. 2021ರ ಮೊದಲಾರ್ಧದಲ್ಲಿಯೇ 12 ಬಿಲಿಯನ್ ಡಾಲರ್​ಗಳಷ್ಟನ್ನು ಆಕರ್ಷಿಸಿ ಅಚ್ಚರಿ ಮೂಡಿಸಿದೆ. ಕಳೆದ ವರ್ಷ 24 ಯುನಿಕಾರ್ನ್​ಗಳನ್ನು ನಿರ್ವಿುಸಿದ ಭಾರತ ಏಪ್ರಿಲ್ ತಿಂಗಳ ನಾಲ್ಕು ದಿನದಲ್ಲಿ ಆರು ಯುನಿಕಾರ್ನ್​ಗಳನ್ನು ಸೃಷ್ಟಿಸಿ ಅಚ್ಚರಿ ಮೂಡಿಸಿದ್ದನ್ನು ಮರೆಯುವಂತಿಲ್ಲ. ಬೆಂಗಳೂರಿನ ಓಟವಂತೂ ಅಬಾಧಿತವಾಗಿಯೇ ಇದೆ. 2018ರಲ್ಲಿಯೇ ಜಗತ್ತಿನ ಸ್ಟಾರ್ಟಪ್ ನಕಾಶೆಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ನಾವು 40 ಸಾವಿರ ನೇರ ಉದ್ಯೋಗ ಸೃಷ್ಟಿಸಿದ್ದೆವು. ಬೈಜೂಸ್, ಉಡಾನ್, ಸ್ವಿಗ್ಗಿ, ಫೋನ್​ಪೇಯಂಥ ಪ್ರಮುಖ ಸ್ಟಾರ್ಟಪ್​ಗಳಿಗೆ ನೆಲೆವೀಡಾದ ಬೆಂಗಳೂರು ಈಗಲೂ ಅದೇ ಸಾಧ್ಯತೆಯನ್ನು ಪ್ರದರ್ಶಿಸುತ್ತಿದೆ.

ಒಟ್ಟಾರೆ ಭಾರತದ ವಿಚಾರಕ್ಕೆ ಬರುವುದಾದರೆ 2020ರಲ್ಲಿ 11.5 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಿದ್ದ ಸ್ಟಾರ್ಟಪ್​ಗಳು ಮರುವರ್ಷ 42 ಬಿಲಿಯನ್ ಡಾಲರ್​ಗಳಿಗೆ ಅದನ್ನೇರಿಸಿದವು. 2021ರಲ್ಲಿ 46 ಯುನಿಕಾರ್ನ್ (ಶತಕೋಟಿ ಡಾಲರ್​ಗಿಂತಲೂ ಹೆಚ್ಚು ಹೂಡಿಕೆಯನ್ನು ಆಕರ್ಷಿಸುವ ಸ್ಟಾರ್ಟ್​ಅಪ್)ಗಳಿಗೆ ಜನ್ಮವಿತ್ತ ಈ ದೇಶ ಒಟ್ಟು 90 ಯುನಿಕಾರ್ನ್​ಗಳೊಂದಿಗೆ ಅಮೆರಿಕ, ಚೀನಾಗಳ ಹಿಂದೆ ನಿಂತಿದೆ. ಸ್ವಾತಂತ್ರ್ಯ ನೀಡುವಾಗ ಭಾರತದ ಕುರಿತಂತೆ ಅಸಡ್ಡೆಯ ಮಾತುಗಳನ್ನಾಡುತ್ತಿದ್ದ ಇಂಗ್ಲೆಂಡು 39 ಯುನಿಕಾರ್ನ್​ಗಳೊಂದಿಗೆ ನಮ್ಮನ್ನು ಹಿಂಬಾಲಿಸುತ್ತಿದೆ. ಫ್ಲಿಪ್​ಕಾರ್ಟ್, ಪೇಟಿಎಮ್ ಬೈಜೂ ಮತ್ತು ಓರೊಗಳು ಹತ್ತು ಶತಕೋಟಿ ಡಾಲರ್​ಗಳಿಗಿಂತಲೂ ಹೆಚ್ಚು ಹೂಡಿಕೆಯನ್ನು ಸೆಳೆದು ಡೆಕಾಕಾರ್ನ್​ಗಳಾಗಿ ಜಾಗತಿಕ ಮಟ್ಟದಲ್ಲಿ ಮೆರೆಯುತ್ತಿವೆ. ಜೊಮಾಟೊ, ನಾಯ್ಕಾ, ಫ್ರೆಶ್ ವರ್ಕ್​ಗಳು ಮಾರುಕಟ್ಟೆಯಲ್ಲಿ ಸಿಂಹಪಾಲನ್ನು ತಮ್ಮದಾಗಿಸಿಕೊಂಡಿವೆ. ಇನ್ನೂ ಒಂದು ಮಾಹಿತಿಯನ್ನು ಇದಕ್ಕೆ ಸೇರಿಸಬೇಕು ಎನ್ನುವುದಾದರೆ ಈ ಯುನಿಕಾರ್ನ್​ಗಳ ಕಟ್ಟಿದ ಶೇಕಡ 20ರಷ್ಟು ಮಂದಿ ಇಂಜಿನಿಯರ್​ಗಳೇ ಅಲ್ಲ.

ಇದೆಲ್ಲ ಸಾಧ್ಯವಾಗಿದ್ದು ಹೇಗೆ? ಆರಂಭದಿಂದಲೂ ನರೇಂದ್ರ ಮೋದಿ ತಂತ್ರಜ್ಞಾನದೆಡೆಗೆ ಒಲವು ತೋರಿಸಿದಂಥವರೇ. ಅಚ್ಚರಿ ಎಂದರೆ ಅವರನ್ನು ಸಂಪ್ರದಾಯವಾದಿ ಎಂತಲೂ ಹಿಂದುತ್ವದ ಆಧಾರದ ಮೇಲೆ ವೋಟು ಕೇಳುವವರೆಂತಲೂ ಮೂದಲಿಸುತ್ತಾರೆ. ಆದರೆ ಇದುವರೆಗೂ ತಮ್ಮ ಆಚರಣೆಯಲ್ಲಿ ಅವರೆಂದಿಗೂ ವೈಜ್ಞಾನಿಕ ಮನೋಭಾವ ಬಿಟ್ಟು ದೂರ ಸರಿದಿದ್ದನ್ನು ಯಾರೂ ಗಮನಿಸಿಯೇ ಇಲ್ಲ. ಅದಕ್ಕೆ ವಿರುದ್ಧವಾಗಿ ಪ್ರತಿಷ್ಠಿತ ಸಂಸ್ಥೆಯಿಂದ ಡಿಗ್ರಿ ಪಡೆದ ಅರವಿಂದ್ ಕೇಜ್ರಿವಾಲ್ ವೋಟು ಪಡೆಯಲು ಇಂದಿಗೂ ಉಚಿತ ನೀರು, ವಿದ್ಯುತ್ತು, ತಿಂಗಳಿಗೆ ಸಾವಿರ ರೂಪಾಯಿ ಇಂಥದ್ದೇ ಮಾತನಾಡುತ್ತಾರೆ. ಈ ದೇಶದ ದುರಂತವೆಂದರೆ ಜನ ಮಧ್ಯಯುಗಕ್ಕೆ ಕರೆದೊಯ್ಯಬಲ್ಲ ಇಂಥ ಮಂದಿಯನ್ನೇ ಹೆಚ್ಚು ನಂಬುತ್ತಾರೆ ಅನ್ನೋದು. ಉದ್ಯೋಗವಿಲ್ಲವೆಂಬ ಕಾಂಗ್ರೆಸ್ಸಿನ ಪ್ರಚಾರಕ್ಕೆ ಮರುಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅರಚಾಡುವ ಮಂದಿಗೆ ಮೋದಿ ಉದ್ಯೋಗ ನಿರ್ಮಾಣ ಮಾಡುವ ತಾಕತ್ತನ್ನೇ ತುಂಬುತ್ತಿದ್ದಾರೆ ಎಂಬುದು ಅರಿವಾಗುತ್ತಿಲ್ಲ. ವಾಸ್ತವವಾಗಿ ಮೋದಿ ಭಾರತೀಯರ ಬೌದ್ಧಿಕ ಸಾಮರ್ಥ್ಯವನ್ನು ಚೆನ್ನಾಗಿ ಅರಿತವರೇ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಮಿತಿಯ ವರದಿಯಂತೆ ಜಗತ್ತಿನ ಒಟ್ಟಾರೆ ಪ್ರತಿಭೆಯ ನಿಧಿಗೆ ಭಾರತದ ಕೊಡುಗೆಯೇ ದೊಡ್ಡದು. ಸುಮಾರು ಒಂದು ಮುಕ್ಕಾಲು ಕೋಟಿಯಷ್ಟು ಪ್ರತಿಭಾವಂತ ಭಾರತೀಯರು ಜಗತ್ತಿನ ಬೇರೆ-ಬೇರೆ ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇಲ್ಲಿನ ಐಐಟಿ, ಐಐಎಸ್​ಸಿಗಳಲ್ಲಿ ಅಧ್ಯಯನ ಮಾಡಿರುವ ಈ ಮಂದಿಯ ಚುರುಕುಮತಿ ಮತ್ತು ಕಡಿಮೆ ವೆಚ್ಚ ಇದು ಜಗತ್ತನ್ನು ಆಕರ್ಷಿಸುವಂಥದ್ದು. ಪುರುಷರಲ್ಲಿನ ಶೇ.79, ಮಹಿಳೆಯರಲ್ಲಿನ ಶೇ.60ರಷ್ಟು ಸಾಕ್ಷರತೆ ನಮ್ಮ ಬೌದ್ಧಿಕ ಸಾಮರ್ಥ್ಯಕ್ಕೆ ಇನ್ನಷ್ಟು ಶಕ್ತಿ ತುಂಬಿದೆಯಷ್ಟೆ. ಗೂಗಲ್​ನ ಸುಂದರ್ ಪಿಚ್ಚೆ ೖ, ಮೈಕ್ರೊಸಾಫ್ಟ್​ನ ಸತ್ಯ ನಾಡೆಲ್ಲ, ಅಡೋಬ್​ನ ಶಂತನು, ಹರ್ಮನ್​ನ ದಿನೇಶ್ ಪಾಲಿವಾಲ್, ಟ್ವಿಟರ್​ನ ಪರಾಗ್ ಅಗರ್​ವಾಲ್, ನೊವಾರ್ಟಿಸ್​ನ ವಸಂತ್ ನರಸಿಂಹನ್ ಮುಂತಾದವರೆಲ್ಲ ಭಾರತದ ಸಾಮರ್ಥ್ಯದ ಪ್ರದರ್ಶಕರೇ. ಮೇಲ್ನೋಟಕ್ಕೆ ಕಂಡುಬರುವ ಈ ಮಂದಿಗಿಂತಲೂ ದೊಡ್ಡ ಪ್ರಮಾಣದ ಪ್ರತಿಭೆ ಇನ್ನೂ ಉಳಿದುಕೊಂಡಿದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕೆಂದರೆ ಸೂಕ್ತವಾದ ವಾತಾವರಣ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿತ್ತು. ಹೀಗಾಗಿಯೇ ಭಾರತ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಲಾರಂಭಿಸಿತು. 2002-03ರ ವೇಳೆಗೆ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತ ಮೀಸಲಿಟ್ಟ ಹಣ ಸುಮಾರು 3.7 ಶತಕೋಟಿ ಡಾಲರ್. ಆ ವೇಳೆಗೆ ಚೀನಾ ನಮಗಿಂತ ನಾಲ್ಕುಪಟ್ಟು ಹೆಚ್ಚು ಹಣ ಹೂಡಿದ್ದರೆ ಅಮೆರಿಕ 75 ಪಟ್ಟು ಹೆಚ್ಚು ಹಣವನ್ನು ಹೂಡಿತ್ತು. 2004ರಿಂದ 14ರ ನಡುವೆ ಸಂಶೋಧನಾ ಕ್ಷೇತ್ರಕ್ಕೆ ನಾವು ಮೀಸಲಿಟ್ಟ ಹಣ ಜಿಡಿಪಿಯ ಶೇಕಡ ಒಂದಕ್ಕಿಂತಲೂ ಕಡಿಮೆಯಿತ್ತು. ಇವೆಲ್ಲದರ ಪರಿಣಾಮ ಹತ್ತು ಲಕ್ಷ ಜನರಿಗೆ ಭಾರತ 140 ಸಂಶೋಧಕರನ್ನು ಹೊಂದಿದ್ದರೆ, ಅಮೆರಿಕ 4500ಕ್ಕಿಂತಲೂ ಹೆಚ್ಚು ಜನರನ್ನು ಹೊಂದಿದೆ.

ಅಪಾರ ಸಂಖ್ಯೆಯ ಪ್ರತಿಭಾವಂತರನ್ನು ಹೊಂದಿದ್ದರೂ ಅವರನ್ನು ಸೂಕ್ತವಾಗಿ ಬಳಸಿಕೊಳ್ಳಲಾಗದ ಕೆಟ್ಟ ಸ್ಥಿತಿ ನಮ್ಮದು. ಮೋದಿ ಗಮನ ಹರಿಸಿದ್ದು ಈ ವಿಚಾರದ ಮೇಲೆಯೇ. 2020ರಲ್ಲಿ ಸಂಶೋಧನಾ ಕ್ಷೇತ್ರಕ್ಕೆ 96 ಶತಕೋಟಿ ಡಾಲರ್ ವ್ಯಯಿಸಲಾಯಿತು. ಈ ವರ್ಷ ಕಳೆಯುವುದರ ವೇಳೆಗೆ ಈ ವೆಚ್ಚ ನಮ್ಮ ಜಿಡಿಪಿಯ ಶೇಕಡ ಎರಡನ್ನು ಮುಟ್ಟಲಿದೆ ಎಂಬ ಅಂದಾಜು ಮಾಡಲಾಗುತ್ತಿದೆ. ಈ ಹಿಂದಿನ ಸರ್ಕಾರಗಳ ಮತ್ತು ಮೋದಿ ಸರ್ಕಾರದ ಆದ್ಯತೆ ಏನು ಎಂಬುದನ್ನು ನಿಸ್ಸಂಶಯವಾಗಿ ನಾವು ಗುರುತಿಸಬಹುದು. ಇದರ ಫಲ ಇಲ್ಲದೇ ಇಲ್ಲ. ಆರೋಗ್ಯ, ಸರಕು, ಮಾಹಿತಿ-ತಂತ್ರಜ್ಞಾನ, ಪ್ರವಾಸ, ಸಾಗಾಣಿಕೆ, ಬಾಹ್ಯಾಕಾಶ ಮೊದಲಾದ ಸೇವಾ ಕ್ಷೇತ್ರಗಳಲ್ಲಿ ಕಳೆದ ವರ್ಷಕ್ಕಿಂತಲೂ ಶೇ.20 ಅಧಿಕ ರಫ್ತು ದಾಖಲಿಸಿದ್ದು ಒಟ್ಟು ರಫ್ತಿನ ಶೇ.37 ಸಿಂಹಪಾಲನ್ನು ಇದೇ ಪಡೆದುಕೊಂಡಿದೆ. 2030ರ ವೇಳೆಗೆ ಈ ಕ್ಷೇತ್ರದಲ್ಲಿ ನಾವು ಒಂದು ಟ್ರಿಲಿಯನ್ ಡಾಲರ್​ಗಳಷ್ಟು ರಫ್ತು ವಹಿವಾಟು ನಡೆಸಲಿದ್ದೇವೆ ಎಂಬ ಅಂದಾಜಿದೆ. ಅತ್ತ ಸ್ಟಾರ್ಟಪ್​ಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವುದರೊಂದಿಗೆ ಭಾರತೀಯ ಮಲ್ಟಿ ನ್ಯಾಷನಲ್ ಕಂಪನಿಗಳೂ ಕೂಡ ಮುಲಾಜಿಲ್ಲದೆ ಅಂತಾರಾಷ್ಟ್ರೀಯ ಪಥದಲ್ಲಿ ಮುನ್ನುಗ್ಗುತ್ತಿವೆ. ಭಾರತಿ ಏರಟೆಲ್, ಫೋರ್ಟಿಸ್ ಹೆಲ್ತ್​ಕೇರ್, ಜಿಎಮ್​ರ್, ಮಹೀಂದ್ರಾ, ಟಾಟಾ ಇವೆಲ್ಲವೂ ಪ್ರಬಲವಾಗಿಯೇ ತಮ್ಮ ಛಾಪನ್ನೊತ್ತಿವೆ. ಒಂದು ಕಾಲದಲ್ಲಿ ಟಾಟಾ ಅಂತಾರಾಷ್ಟ್ರೀಯ ಮಟ್ಟಕ್ಕೇರಲು ಜಾಗ್ವಾರ್ ಲ್ಯಾಂಡ್ ರೋವರ್​ಗಳಂಥ ಕಂಪನಿಗಳನ್ನು ಆಸರೆಯಾಗಿಸಿಕೊಳ್ಳಬೇಕಾಗಿತ್ತು. ಈಗ ಹಾಗಿಲ್ಲ. ನಮ್ಮದೇ ಆದ ಹೆಸರು ಎಲ್ಲೆಡೆ ಕೇಳಿ ಬರುತ್ತಿದೆ. ಮಹೀಂದ್ರಾ ಟ್ರಾಕ್ಟರ್​ಗಳು ಅಮೆರಿಕದ ಹೊಲಗಳಲ್ಲಿ, ಬಜಾಜ್​ನ ದ್ವಿಚಕ್ರ ವಾಹನಗಳು 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸ್ವಚ್ಛಂದವಾಗಿ ಉಸಿರಾಡುತ್ತಿವೆ. ಇವೆಲ್ಲವೂ ಕಳೆದ ಒಂದು ದಶಕದಿಂದೀಚೆಗೆ ಆದ ಬದಲಾವಣೆಗಳು.

ಪಿಯುಷ್ ಗೊಯೆಲ್ ಸ್ಟಾರ್ಟ್​ಅಪ್ ಸಲಹಾ ಸಮಿತಿಯ ಸದಸ್ಯರೊಂದಿಗೆ ಮಾತನಾಡುತ್ತ, ‘ಕರೊನಾ ಸವಾಲನ್ನು ಭಾರತೀಯರು ಅವಕಾಶವಾಗಿ ಬದಲಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದಿದ್ದು ಒಪ್ಪಿಕೊಳ್ಳಬೇಕಾದ್ದೇ. ಚೀನಾದ 200 ಮೊಬೈಲ್ ಅಪ್ಲಿಕೇಶನ್​ಗಳನ್ನು ಭಾರತ ನಿಷೇಧಿಸಿದಾಗ ಅದರಿಂದೇನು ಸಾಧಿಸಿಕೊಳ್ಳಲಾಗುವುದು ಎಂದು ಅನೇಕರು ಪ್ರಶ್ನಿಸಿದ್ದರು. ಅನೇಕ ರಾಷ್ಟ್ರಗಳು ಈ ಅಪ್ಲಿಕೇಶನ್​ಗಳ ಬಳಕೆದಾರರು ಮಾತ್ರ. ಆದರೆ ಭಾರತ ಇವುಗಳನ್ನು ನಿರ್ಮಾಣ ಮಾಡುವ ರಾಷ್ಟ್ರವೂ ಆಗಿದ್ದರಿಂದ ನಮ್ಮ ವ್ಯಾಪ್ತಿ, ವಿಸ್ತಾರಗಳೇ ಬೇರೆ. ಈ ನಿರ್ವಾತ ಭಾರತೀಯ ಇಂಜಿನಿಯರ್​ಗಳಲ್ಲಿ ಸೃಷ್ಟಿಸಿದ ಆಕಾಂಕ್ಷೆಯನ್ನು ಸಾಧಾರಣ ಪದಗಳಲ್ಲಿ ಬಣ್ಣಿಸುವುದು ಅಸಾಧ್ಯ. ನಾಯಕನಾದವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತಾನೆ ಎಂಬುದಕ್ಕೆ ಇದಕ್ಕಿಂತಲೂ ಸಮರ್ಥ ಉದಾಹರಣೆ ಬೇಕಿಲ್ಲ. ಕರೊನಾಕ್ಕೆ ಭಾರತ ವ್ಯಾಕ್ಸಿನ್ ಕಂಡು ಹಿಡಿಯುವಲ್ಲಿಯೂ ಇಂಥದ್ದೇ ಪ್ರೇರಣೆ ಕೆಲಸ ಮಾಡಿದ್ದು. ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ಪ್ರತಿಭೆ ಸೂಕ್ತವಾಗಿ ಉಪಯೋಗಿಸಲ್ಪಡುತ್ತಿದೆ ಎಂಬುದು ಅರಿವಿಗೆ ಬಂದಿದ್ದೇ ವ್ಯಾಕ್ಸಿನ್​ಗಳ ಸಂಶೋಧನೆಯ ನಂತರ. ಕೈಬೆರಳೆಣಿಕೆಯಷ್ಟು ರಾಷ್ಟ್ರಗಳು ಮಾತ್ರ ಇವುಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿವೆ. ಅದರಲ್ಲಿ ಭಾರತವೂ ಒಂದು. ಭಾರತ ವ್ಯಾಕ್ಸಿನ್​ಗಳನ್ನು ಕಂಡುಹಿಡಿದು ಸುಮ್ಮನಾಗಲಿಲ್ಲ. ಅವುಗಳನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಶಕ್ತಿಯನ್ನೂ ಪಡೆದುಕೊಂಡಿದೆ. ಭಾರತ್ ಬಯೋಟೆಕ್, ಸೀರಮ್ ಜೈಡಸ್ ಕ್ಯಾಡಿಲ, ಡಾ.ರೆಡ್ಡಿಸ್, ಅರಬಿಂದೋ ಫಾಮ್ರ್ ಮೊದಲಾದವುಗಳು ಸೇರಿ ಪ್ರತಿ ವರ್ಷ ಮೂರು ಬಿಲಿಯನ್​ಗಳಿಗಿಂತಲೂ ಹೆಚ್ಚು ವ್ಯಾಕ್ಸಿನ್​ಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಪಡೆದುಕೊಂಡಿವೆ. ಸಿರಿವಂತ ರಾಷ್ಟ್ರಗಳು ತಮ್ಮ ಜನತೆಗೋಸ್ಕರ ವ್ಯಾಕ್ಸಿನ್​ಗಳನ್ನು ತಯಾರಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಿವೆ ಎಂಬ ಆರೋಪದ ನಡುವೆ ಭಾರತಕ್ಕೆ ಅಪಾರವಾದ ಬೆಲೆ ಬಂದಿದೆ. ಸರ್ಕಾರವೂ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸಿ, ಸರಿಯಾದ ಸಂದರ್ಭದಲ್ಲಿ ಸರಿಯಾದ ಹೂಡಿಕೆಯನ್ನು ಮಾಡಿ ಸಾಮರ್ಥ್ಯವನ್ನು ವೃದ್ಧಿಸುವ ಯತ್ನಮಾಡಿ ಗೆದ್ದಿದೆ. ಅದಾಗಲೇ ಸುಮಾರು 40 ರಾಷ್ಟ್ರಗಳಿಗೆ ವ್ಯಾಕ್ಸಿನ್​ಗಳನ್ನು ತಲುಪಿಸುವ ಜವಾಬ್ದಾರಿ ಹೊತ್ತಿರುವ ಭಾರತ ನಿಸ್ಸಂಶಯವಾಗಿ ಬಡ, ಮಧ್ಯಮವರ್ಗದ ರಾಷ್ಟ್ರಗಳ ಆಶಾಕಿರಣವೇ ಆಗಿಬಿಟ್ಟಿದೆ.

ಇನ್ನು ಸೆಮಿಕಂಡಕ್ಟರ್​ಗಳ ಲೋಕವನ್ನಷ್ಟೇ ನಾವು ಆಳಬೇಕಿರೋದು. ಅದಾಗಲೇ ಮೋದಿ ಈ ಕುರಿತಂತೆಯೂ ಆಲೋಚಿಸಿ 76 ಸಾವಿರ ಕೋಟಿ ರೂಪಾಯಿಯ ಯೋಜನೆಯನ್ನು ರೂಪಿಸಿದ್ದಾರೆ. ಚಿಪ್ಸ್ ಟು ಸ್ಟಾರ್ಟ್​ಅಪ್ ಎಂಬ ಈ ಯೋಜನೆಯಡಿಯಲ್ಲಿ 85,000 ಪ್ರತಿಭಾವಂತ, ಕೌಶಲಪೂರ್ಣ ಇಂಜಿನಿಯರ್​ಗಳ ಕೋಶವನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಭಾರತದಲ್ಲಿ ಚಿಪ್ಪುಗಳನ್ನು ತಯಾರು ಮಾಡುವ ಮೂಲಕ ಹೊಸ ಭಾಷ್ಯವನ್ನು ಬರೆಯುವ ಪ್ರಯತ್ನವನ್ನು ಮೋದಿ ಮಾಡುತ್ತಿದ್ದಾರೆ. ಗಡ್ಡ ಬೆಳೆಸಿಕೊಂಡ ಮಾತ್ರಕ್ಕೆ ಆ ಮನುಷ್ಯ ಗುಡ್ಡವೇರಿ ಸಂನ್ಯಾಸಿಯಾಗಿಬಿಡುತ್ತಾನೆ ಎಂದು ಭಾವಿಸಿಬಿಡಬೇಡಿ. ಅವರ ಸಂಕಲ್ಪ ಗಟ್ಟಿಯಾಗಿದೆ. ಕನಸು ಬಲುದೊಡ್ಡದಾಗಿದೆ. ಈಗ ಅವರು ಕೈಗೆತ್ತಿಕೊಳ್ಳುತ್ತಿರುವ ಯೋಜನೆಗಳೆಲ್ಲವೂ ಮುಂದಿನ ಹದಿನೈದಿಪ್ಪತ್ತು ವರ್ಷಗಳ ನಂತರ ಫಲ ಕೊಡುವಂಥವು. ಅವರು ಮುಂದಿನ ಚುನಾವಣೆ ಕುರಿತಂತೆ ಯೋಚಿಸಿದವರೇ ಅಲ್ಲ. ಪ್ರತಿಯೊಬ್ಬ ಭಾರತೀಯನ ಭವಿಷ್ಯದ ಕನಸು ಕಟ್ಟಿದವರು. ಅವರಿಡುವ ಪ್ರತಿ ಹೆಜ್ಜೆಯೂ ಭಾರತದ ಭವ್ಯ ಭವಿಷ್ಯವನ್ನು ರೂಪಿಸುವಂಥವು. ನಮ್ಮ ಕಾಲದಲ್ಲಿ ಇಂಥ ಒಬ್ಬ ಪ್ರಧಾನಿಯನ್ನು ನೋಡುವ ಅವಕಾಶ ಸಿಕ್ಕಿದೆ ಎಂಬುದಷ್ಟೇ ನಮ್ಮ ಭಾಗ್ಯ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)