ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವೇ ಹಾಗೆ. ಅವರ ಹೆಸರೇ ಅಜ್ಞಾನ, ಅಂಧಕಾರಗಳಿಗೆ ಕೊಡಲಿ ಪೆಟ್ಟು. ವಿವೇಕಾನಂದರು ಎಂದಿಗೂ ಕೇವಲ ಭಾಷಣಕಾರರಾಗಿರಲಿಲ್ಲ. ತಮ್ಮ ಮಾತುಗಳ ಮೂಲಕ ಒಬ್ಬ ವ್ಯಕ್ತಿಯ ಸುಪ್ತ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸುತ್ತಿದ್ದರು. ಧರ್ಮಜ್ಯೋತಿಯನ್ನು ಬೆಳಗುತ್ತಿದ್ದರು.
ಕಾರಣ ಸ್ಪಷ್ಟವಾಗಿಯೇ ಇತ್ತು. ಏಕೆಂದರೆ 16 ವರ್ಷಗಳ ಹಿಂದೆ ಅಮೆರಿಕದಲ್ಲಿ ಆದ ಅವಮಾನದಿಂದಲೇ ಅವರಿನ್ನೂ ಚೇತರಿಸಿಕೊಂಡಿರಲಿಲ್ಲ. ಕ್ರೖೆಸ್ತ ಧರ್ಮವೇ ಸರ್ವಶ್ರೇಷ್ಠವಾದ ಹಾಗೂ ವಿಶ್ವಧರ್ಮವೆನಿಸಬಲ್ಲ ಏಕೈಕ ಧರ್ಮವೆಂದು ಮಂಡಿಸಿ ಜಗತ್ಪ್ರಸಿದ್ಧವನ್ನಾಗಿ ಮಾಡಬೇಕೆಂದು ಷಿಕಾಗೋದ ಆ ಸಮ್ಮೇಳನವನ್ನು ಭಾರಿ ಕಷ್ಟಪಟ್ಟು ಸಂಯೋಜಿಸಿದ್ದರೆ, ಮೂಢನಂಬಿಕೆಗಳ ನಾಡಾದ ಭಾರತದಿಂದ ಯಾವನೋ ಸಂನ್ಯಾಸಿಯೊಬ್ಬ ಬಂದು, ಹಿಂದೂ ಧರ್ಮವೇ ಸರ್ವಶ್ರೇಷ್ಠವೆಂದು ಜಗದ್ವಿಖ್ಯಾತಗೊಳಿಸಿಬಿಡಬೇಕೇ? ಆದ್ದರಿಂದ ಇನ್ನೊಮ್ಮೆ ಅಂಥದ್ದೇ ಸಮ್ಮೇಳನ ಮಾಡಿ ಅವಮಾನಿತರಾಗುವುದು ಬೇಡ ಎಂದು ತೀರ್ವನಿಸಿದ್ದರು. ಅಲ್ಲದೆ ಷಿಕಾಗೋ ಸಮ್ಮೇಳನದ ಬಳಿಕ ಕ್ರಿಶ್ಚಿಯನ್ ಮಿಷನರಿಗಳಿಗೆ ಬರುತ್ತಿದ್ದ ಆದಾಯದಲ್ಲಿ ಲಕ್ಷಗಟ್ಟಲೇ ಡಾಲರಿನಷ್ಟು ಇಳಿಮುಖವಾಗಿಬಿಟ್ಟಿತ್ತು (ಸ್ವಾಮೀಜಿಯವರ ಅತಿಥೇಯರಾದ ಫ್ರಾನ್ಸಿಸ್ ಲೆಗೆಟ್ ಕೂಡ ವರ್ಷಕ್ಕೆ ಹತ್ತು ಸಾವಿರ ಡಾಲರ್ ಕೊಡುತ್ತಿದ್ದುದನ್ನು ನಿಲ್ಲಿಸಿಬಿಟ್ಟಿದ್ದರಂತೆ. ಸ್ವಾಮೀಜಿ ಈ ವಿಷಯವಾಗಿ ಕ್ಯಾಲಿಫೋರ್ನಿಯಾದ ತಮ್ಮ ಪ್ರಿಯ ಶಿಷ್ಯೆ ಹ್ಯಾನ್ಸ್ಬ್ರೋಗೆ ನಗುತ್ತ ಹೇಳುತ್ತಾರೆ, ‘ಆದರೆ ಅವರು ಆ ಹಣವನ್ನು ನನಗೇನೂ ಕೊಡಲಿಲ್ಲ!’ ಎಂದು).
ಸ್ವಾಮೀಜಿಯವರು ಈ ಸಮ್ಮೇಳನದ ಹಲವಾರು ಸಭೆಗಳಲ್ಲಿ ಭಾಗವಹಿಸಿದರು. ಆದರೆ, ಅನಾರೋಗ್ಯದ ಕಾರಣ ಎರಡು ಸಭೆಗಳಲ್ಲಿ ಮಾತ್ರ ಮಾತನಾಡಿದರು. ‘ಪ್ರಕೃತಿ ಪೂಜೆಯೇ ಹಿಂದೂ ಧರ್ಮದ ಮೂಲ’ ಎಂಬುದರ ಸತ್ಯಾಸತ್ಯತೆಯನ್ನು ಪಾಶ್ಚಾತ್ಯ ವಿದ್ವಾಂಸರೊಂದಿಗೆ ರ್ಚಚಿಸುವಂತೆ ಅವರಿಗೆ ಸಮ್ಮೇಳನಾಧ್ಯಕ್ಷರು ಸೂಚಿಸಿದ್ದರು. ಅದನ್ನವರು ಪರಿಣಾಮಕಾರಿಯಾಗಿ ಮಾಡಿದ್ದರೂ ಕೂಡ. ಜೊತೆಗೆ ಈ ಸಮ್ಮೇಳನದ ಸಭೆಗಳಲ್ಲಿ ಭಾರತದ ಧಾರ್ವಿುಕ ಚಿಂತನೆಗಳ ಬೆಳವಣಿಗೆಯ ಬಗ್ಗೆ ಮಾತನಾಡಿದರು. ಇಲ್ಲೇ ಅವರ ಪ್ರಮುಖಪಾತ್ರವಿದ್ದುದ್ದು. ಹಿಂದೂ ಧರ್ಮದ ಎಲ್ಲ ಹಂತಗಳಿಗೂ ವೇದಗಳೇ ಮೂಲ, ಆಧಾರ ಎಂದು ಹೇಳಿದ ಅವರು ಬೌದ್ಧ ಧರ್ಮವೂ ಸೇರಿ ಭಾರತದ ಪ್ರತಿಯೊಂದು ಧಾರ್ವಿುಕ ನಂಬಿಕೆಯ ಆಧಾರವೂ ವೇದಗಳೇ ಎಂದು ಪ್ರತಿಪಾದಿಸಿದರು.
ಬುದ್ಧನಿಗಿಂತ ಶ್ರೀಕೃಷ್ಣನು ಹೇಗೆ ಶ್ರೇಷ್ಠನಾದವನು ಎಂಬುದನ್ನು ವಿಶ್ಲೇಷಿಸಿ ಶ್ರೀಕೃಷ್ಣನ ಪೂಜೆಯು ಬುದ್ಧನ ಕಾಲಕ್ಕಿಂತ ಪುರಾತನವಾದುದು, ಅದನ್ನು ಬೇರೆಡೆಯಿಂದ ತಂದು ಮಹಾಭಾರತದೊಳಕ್ಕೆ ತುರುಕಲಾಗಿದೆ ಎಂಬ ಕೆಲವರ ವಾದವನ್ನು ತಮ್ಮ ತರ್ಕಸರಣಿಯಿಂದ ಖಂಡಿಸಿದರು. ಈ ಸಂದರ್ಭದಲ್ಲಿ ಅವರು ಭಾರತದ ಬಗ್ಗೆ ಪಾಶ್ಚಾತ್ಯ ಸಂಶೋಧಕರ ತೀರ್ವನಗಳ ಪೊಳ್ಳುತನವನ್ನು ಬಯಲಿಗೆಳೆದರು. ಪುರಾತನ ಭಾರತದ ವಿಜ್ಞಾನ, ಕಲೆ, ಗಣಿತ ಎಲ್ಲವೂ ಗ್ರೀಕ್ ಸಂಸ್ಕೃತಿಯ ಪ್ರತಿಫಲನವಷ್ಟೇ ಎಂಬ ಅಲ್ಲಿಯ ಕೆಲವರ ತರ್ಕವನ್ನು ಮುರಿದುಹಾಕಿದರು. ಗ್ರೀಕ್ ಭಾಷೆಯ ಒಂದೊಂದು ಪದವನ್ನೂ ಕುರಿತು ಆಳವಾದ ಸಂಶೋಧನೆ ಮಾಡುವ ಪಾಶ್ಚಾತ್ಯ ವಿಜ್ಞಾನಿಗಳಿಗೆ ಸಂಸ್ಕೃತ ಭಾಷೆಯ ಕುರಿತಾಗಿಯೂ ಅಷ್ಟೇ ಪರಿಶ್ರಮ ವಹಿಸಿ ಸಂಶೋಧನೆ ಮಾಡುವಂತೆ ಕರೆ ಕೊಟ್ಟರು.
ಹೀಗೆ, ಅಜ್ಞಾನದಿಂದಲೂ, ಉದ್ದೇಶಪೂರ್ವಕವಾಗಿಯೂ ಭಾರತದ ಭವ್ಯ ಸಂಸ್ಕೃತಿಯನ್ನು ವಿಚಿತ್ರವಾಗಿ ತಿರುಚುವ ಪಾಶ್ಚಾತ್ಯ ಪಂಡಿತರ ಪ್ರಯತ್ನವನ್ನು ಬಯಲಿಗೆಳೆಯುವಲ್ಲಿ ಈ ಧರ್ಮಚರಿತ ಮೇಳ ನೆರವಾಯಿತು. ಆದರೆ ಅವರ ಈ ಕೆಲಸವೇನೂ ನಿಂತುಬಿಟ್ಟಿಲ್ಲ. ಈಗಲೂ ಷಿಕಾಗೋ ವಿಶ್ವವಿದ್ಯಾಲಯದ ಪ್ರೊ.ಡೋನಿಗರ್ ಮತ್ತು ಅವರ ವಿಧೇಯ ಶಿಷ್ಯರಾದ ಕೆಲ ಭಾರತೀಯ ವಿದ್ವಾಂಸರೂ ಈ ದೇಶದ ಅಧ್ಯಯನಹೀನ, ಪೂರ್ವಗ್ರಹ ವರ್ಗಗಳು ಮುಂದುವರಿಸಿಕೊಂಡು ಬರುತ್ತಿವೆ ಎನ್ನುವುದು ಬೇರೆ ಮಾತು. ಸಮ್ಮೇಳನದಲ್ಲಿ ಭಾಗವಹಿಸಿದ ಹಲವಾರು ವಿದ್ವಾಂಸರು ಸ್ವಾಮೀಜಿಯವರ ವಾದಗಳನ್ನು ಅನುಮೋದಿಸಿದರು. ಒಟ್ಟಿನಲ್ಲಿ ಈ ಸಮ್ಮೇಳನದಿಂದ ಸ್ವಾಮೀಜಿಯವರ ಅಸಾಮಾನ್ಯ ಪಾಂಡಿತ್ಯವೂ, ಹಿಂದೂ ಹಾಗೂ ಇತರ ಧರ್ಮಗಳ ಬಗೆಗಿನ ಅವರ ಜ್ಞಾನವೂ ಸ್ವಂತಿಕೆಯೂ ಮತ್ತಷ್ಟು ಪ್ರಕಾಶಕ್ಕೆ ಬಂದವಲ್ಲದೆ ಹಿಂದೂ ಧರ್ಮ, ಸಂಸ್ಕೃತಿಗಳ ಬಗ್ಗೆ ಇನ್ನಷ್ಟು ಆಳವಾಗಿ, ಹೊಸದಾಗಿ ಸಂಶೋಧನೆ ನಡೆಯಬೇಕಾದ ಮತ್ತು ಅದರ ಚರಿತ್ರೆಯನ್ನು ಭಾರತೀಯರೇ ಪುನರ್ರಚಿಸಬೇಕಾದ ಅವಶ್ಯಕತೆಯೂ ಸ್ಪಷ್ಟವಾಗಿ ಎದ್ದುಕಂಡಿತು.
ವಿವೇಕಾನಂದರ ವ್ಯಕ್ತಿತ್ವವೇ ಹಾಗೆ. ಅವರ ಹೆಸರೇ ಅಜ್ಞಾನ, ಅಂಧಕಾರಗಳಿಗೆ ಕೊಡಲಿ ಪೆಟ್ಟು. ಅವರ ಸೋದರ ಸಂನ್ಯಾಸಿಗಳು, ದಕ್ಷಿಣ ಭಾರತದಲ್ಲಿ ರಾಮಕೃಷ್ಣ ಮಠಗಳ ಸಂಸ್ಥಾಪನಾಚಾರ್ಯರೂ ಆದ ಸ್ವಾಮಿ ರಾಮಕೃಷ್ಣಾನಂದರು ಅವರ ಕುರಿತು ರಚಿಸಿದ ಸ್ತೋತ್ರದಲ್ಲಿ ‘ಸೂರ್ಯನ ಮುಂದೆ ಕತ್ತಲೆಗೆ ನೆಲೆಯಿಲ್ಲದಂತೆ, ವಿವೇಕಾನಂದರು ಇರುವೆಡೆ ಅಂಧಕಾರಕ್ಕೆ ಜಾಗವಿಲ್ಲ’ ಎನ್ನುತ್ತಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಪೊ›ಫೆಸರ್ ಕೂಡ ಅವರನ್ನು ಹೋಲಿಸಿದ್ದು ಸೂರ್ಯನಿಗೇ. ಆದರೆ ವಿವೇಕಾನಂದರು ಭಾರತವನ್ನು ಬಿಟ್ಟು ಹೊರಟಾಗ ಇಂಥದ್ದೊಂದು ಸಮ್ಮೇಳನ ನಡೆಯಲಿದೆ ಎಂಬ ಕುರುಹು ಕೂಡ ಅವರಿಗೆ ಸಿಕ್ಕಿರಲಿಲ್ಲ. ಅದು ಅವರಿಗೆ ಗೊತ್ತಾಗಿದ್ದು ಅಮೆರಿಕೆಯಲ್ಲಿ ಉಪನ್ಯಾಸಗಳಲ್ಲಿ ನಿರತರಾಗಿದ್ದಾಗ. ಭಾರತದಿಂದ ಸ್ವಾಮಿ ತುರೀಯಾನಂದರು ಮತ್ತು ಸೋದರಿ ನಿವೇದಿತೆಯೊಡನೆ ಜೂನ್ 20ರಂದು ಹೊರಟ ಅವರು ಲಂಡನ್ ಸಮೀಪದ ವಿಂಬಲ್ಡನ್ನಲ್ಲಿ ನಿವೇದಿತೆಯನ್ನು ಬಿಟ್ಟು (ಅವಳ ತಂಗಿಯ ಮದುವೆ ಕೆಲವೇ ದಿನಗಳಲ್ಲಿ ನಡೆಯುವುದಿತ್ತು). ತುರೀಯಾನಂದರು ಮತ್ತು ಡೆಟ್ರಾಯ್್ಟ ಪ್ರಿಯ ಶಿಷ್ಯೆಯರಾದ ಕ್ರಿಸ್ಟೀನ್ ಮತ್ತು ಮೇರಿಫಂಕೆಯೊಡನೆ ನ್ಯೂಯಾರ್ಕ್ಗೆ ಹೊರಟರು. ನ್ಯೂಯಾರ್ಕ್ನಲ್ಲಿ ಈಗಾಗಲೇ ವೇದಾಂತ ಪ್ರಚಾರದಲ್ಲಿ ತೊಡಗಿದ್ದ ಸ್ವಾಮಿ ಅಭೇದಾನಂದರೊಂದಿಗೆ ತುರೀಯಾನಂದರನ್ನು ಬಿಟ್ಟು ಅಮೆರಿಕದ ಪಶ್ಚಿಮ ತೀರದುದ್ದಕ್ಕೂ ತಮ್ಮನ್ನು ಉಪನ್ಯಾಸಗಳಲ್ಲಿ ತೊಡಗಿಸಿಕೊಂಡರು. ನಿಜಕ್ಕೂ ಹೇಳಬೇಕೆಂದರೆ ಇಂದು ಅಮೆರಿಕನ್ ಪಶ್ಚಿಮ ತೀರ ಒಂದು ರೀತಿಯಲ್ಲಿ ದೂರದ ಭಾರತ (ಣ್ಠಠಿಟಟಠಠಿ ಟ್ಛ ಐಛಜಿಚ) ದಂತೆಯೇ ಕಾಣುತ್ತದೆ. ಅಲ್ಲಿನ ಹವಾಗುಣ, ಸಂಸ್ಕೃತಿ, ದಿನೇದಿನೇ ಬೆಳೆಯುತ್ತಿರುವ ಭಾರತೀಯರ ಸಂಖ್ಯೆ ಇವೆಲ್ಲವೂ ಕ್ಯಾಲಿಫೋರ್ನಿಯಾ ಮತ್ತಿತರ ಭಾಗಗಳನ್ನು ವಿನೂತನ ಭಾರತದಂತೆ ಮಾಡಿಬಿಟ್ಟಿದೆ. ಇವನ್ನೆಲ್ಲ ಕಂಡೇ ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷರಾದ ಬರಾಕ್ ಒಬಾಮ, ‘ವಿವೇಕಾನಂದರನ್ನು ಅಮೆರಿಕದ ಮೊದಲ ಗುರು’ ಎಂದು ಕರೆಯುತ್ತಿರುವುದು. ಈ ಭಾಗದಲ್ಲಿ ಸ್ವಾಮೀಜಿ ನೀಡಿದ ಉಪನ್ಯಾಸಗಳು ಪ್ರಹ್ಲಾದ, ಧ್ರುವ ಮುಂತಾದವರ ಕಥೆಗಳಿಂದ ಹಿಡಿದು ಅದ್ವೆ ೖತದ ಅತ್ಯುನ್ನತ ತತ್ವಗಳವರೆಗೂ ವ್ಯಾಪಿಸಿವೆ. ‘ಕ್ರಿಸ್ವುಸ್ ದಿನದಂದು ಜಗತ್ತಿಗೆ ಕ್ರಿಸ್ತನ ಸಂದೇಶ’ ಎಂಬ ವಿಷಯದ ಬಗ್ಗೆ ಲಾಸ್ ಏಂಜಲೀಸ್ ನಗರದಲ್ಲಿ ಮಾತನಾಡುತ್ತಿದ್ದಾಗ ಕ್ರಿಸ್ತನ ಅದ್ಭುತ ಲೀಲೆಯಲ್ಲಿ ಅದೆಷ್ಟು ತನ್ಮಯರಾಗಿದ್ದರೆಂದರೆ ನಖಶಿಖಾಂತ ಅವರ ಶರೀರವು ಶ್ವೇತಜ್ಯೋತಿಯಿಂದ ಪ್ರಜ್ವಲಿಸುತ್ತಿತ್ತು ಎಂದು ಅವರ ಪ್ರಿಯ ಶಿಷ್ಯೆ ಜೋಸೆಫಿನ್ ಹೇಳುತ್ತಾಳೆ. ಶ್ರೀರಾಮಕೃಷ್ಣರ ಪ್ರಿಯಶಿಷ್ಯರಲ್ಲವೇ ಅವರು. ವಿವೇಕಾನಂದರು ಎಂದಿಗೂ ಕೇವಲ ಭಾಷಣಕಾರರಾಗಿರಲಿಲ್ಲ. ತಮ್ಮ ಮಾತುಗಳ ಮೂಲಕ ಒಬ್ಬ ವ್ಯಕ್ತಿಯ ಸುಪ್ತ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸುತ್ತಿದ್ದರು.
ನ್ಯೂಯಾರ್ಕ್ನಲ್ಲಿ ಅವರ ಉಪನ್ಯಾಸಗಳನ್ನು ಕೇಳಿದ ನಿವೇದಿತೆ ತನ್ನ ಸ್ನೇಹತೆ ಜೋಸೆಫಿನ್ನಳಿಗೆ ಬರೆಯುತ್ತಾಳೆ, ‘ನಾನು ಸ್ವಾಮೀಜಿಯವರ ಉಪನ್ಯಾಸವನ್ನು ಆಲಿಸಲು ಕಾತರಳಾಗಿ ನನ್ನ ಎಂದಿನ ಜಾಗದಲ್ಲಿ ಕುಳಿತಿದ್ದೆ. ಅವರು ಪ್ರವೇಶಿಸಿದರು. ಅವರು ಪ್ರವೇಶಿಸಿದ್ದು, ಬಂದು ಮೌನವಾಗಿ ನಿಂತದ್ದು. ಮಾತನಾಡುವ ಮುನ್ನ ಒಂದು ಕ್ಷಣ ತಡೆದದ್ದು-ಆಹ್! ಅದೇ ಒಂದು ಮಂತ್ರ, ಅದೇ ಒಂದು ಪೂಜೆ! ಅಂತೂ ಕಡೆಗೆ ಅವರು ಪ್ರಾರಂಭಿಸಿದರು, ಇದ್ದಕ್ಕಿದ್ದಂತೆ ಅವರ ಮುಖದಲ್ಲಿ ಪ್ರಕಾಶ ಹೊಮ್ಮಿತು. ಇಂದಿನ ಭಾಷಣದ ವಿಷಯವೇನು? ಎಂದು ಕೇಳಿದರು. ವೇದಾಂತ ತತ್ವ ಎಂದು ಯಾರೋ ಸಲಹೆ ಮಾಡಿದರು. ಸರಿ, ಸ್ವಾಮೀಜಿ ಪ್ರಾರಂಭಿಸಿದರು.
ಆ ಅದ್ಭುತ ವಾಕ್ಯಗಳು ಒಂದಾದ ಮೇಲೊಂದು ಉರುಳಿದವು. ಅನಂತತೆಗೆ ಮೇಲೆತ್ತಲ್ಪಟ್ಟಿದ್ದ ನಾವು, ನಮ್ಮ ಎಂದಿನ ನಾನುಗಳ ಬಗ್ಗೆ ಆಲೋಚಿಸಿದಾಗ, ಸೂರ್ಯನ ಕಡೆಗೋ ಚಂದ್ರನ ಕಡೆಗೋ ಅವುಗಳನ್ನು ಆಟಿಕೆಗಳೆಂದು ಭಾವಿಸಿ ಕೈಚಾಚುವ ಮಕ್ಕಳು ನಾವೆಂಬಂತೆ ತೋರಿತು. ಸ್ವಾಮೀಜಿಯವರ ಆ ಆಶ್ಚರ್ಯಕರ ಧ್ವನಿ ಹಾಗೆಯೇ ಮುಂದುವರಿಯಿತು’.
ಈ ಅನುಭವ ನಿವೇದಿತೆಗೆ ಮಾತ್ರವೇ ಆದದ್ದಾಗಿರಲಿಲ್ಲ. ಇತರ ಜನಸಾಮಾನ್ಯರಿರಲಿ ; ಸ್ವತಃ ಸ್ವಾಮೀಜಿಯವರ ಗುರುಭಾಯಿಗಳಿಗೂ ಇಂತಹ ಅನುಭವವಾಗಿತ್ತು. ಒಮ್ಮೆ ನ್ಯೂಯಾರ್ಕ್ನ ತರಗತಿಯೊಂದರಲ್ಲಿ ಅವರು ಮಾತನಾಡುವುದನ್ನು ಕೇಳುತ್ತಿದ್ದ ತುರೀಯಾನಂದರು ಅದರ ಅದ್ಭುತ ಪರಿಣಾಮವನ್ನು ಕಂಡು ಅತ್ಯಾಶ್ಚರ್ಯಪಟ್ಟರು. ಮತ್ತೊಮ್ಮೆ ಅಭೇದಾನಂದರೆನ್ನುತ್ತಾರೆ: ‘ಅವರ ಭಾಷಣವನ್ನು ಕೇಳುತ್ತಿದ್ದಂತೆ, ಧ್ಯಾನ ಮಾಡುವಾಗ ಹೇಗೋ ಹಾಗೆಯೇ ಯಾವುದೋ ಒಂದು ಶಕ್ತಿ ನನ್ನ ಕುಂಡಲಿನಿಯನ್ನು ಮೇಲೆತ್ತುತ್ತಿರುವಂತೆ ಭಾಸವಾಯಿತು’. ಸ್ವತಃ ಸ್ವಾಮೀಜಿಯವರಿಗೂ ತಮ್ಮ ಮಾತಿನ ಶಕ್ತಿಯ ಅರಿವಿತ್ತು. ಅವರೊಮ್ಮೆ ತುರೀಯಾನಂದರೊಡನೆ ಹೇಳುತ್ತಾರೆ, ‘ಏನು, ನಾನು ಸುಮ್ಮನೆ ಭಾಷಣ ಮಾಡುತ್ತೇನೆಂದು ಭಾವಿಸಿದೆಯಾ? ನಾನು ಅವರಿಗೆ ಘನ ವಾದದ್ದೇನನ್ನೋ ಕೊಡುತ್ತೇನೆ. ಅದನ್ನು ಪಡೆಯುವಂತಹ ಅವರಿಗೂ ಅದು ಗೊತ್ತಿದೆ’.
ಭಾರತ ಎಂದೋ ವಿಶ್ವಗುರುವಾಗಿದೆ. ಪೈಥಾಗೊರಸ್ ಭಾರತಕ್ಕೆ ಬಂದು ಇಲ್ಲಿ ಅಧ್ಯಯನ ಮಾಡುವ ಉದ್ದೇಶ ಏನಿತ್ತು ಎಂಬುದನ್ನು ವಾಲ್ಟೇರ್ ವರ್ಣಿಸುವಾಗಲೇ ಈ ವಿಷಯ ಸ್ಪಷ್ಟವಾಗುತ್ತದೆ. ಇಡೀ ಪಾಶ್ಚಾತ್ಯ ಪಂಡಿತರ ಪರಂಪರೆಯೇ ಇದನ್ನು ಮುಂದುವರಿಸಿದೆ ಎನ್ನುವುದನ್ನು ಮ್ಯಾಕ್ಸ್ ಮುಲ್ಲರ್ ಪ್ರಣೀತ ಸಾಕ್ರಟೀಸನ ವಿಚಾರಗಳ ತಿದ್ದುಪಡಿಗಳ ಮೂಲವೇನು ಎನ್ನುವ ಚರ್ಚೆಯಲ್ಲಿ ನೋಡುತ್ತೇವೆ. ಭಾರತದ ಅಸ್ತಿತ್ವವೇ ಜಗತ್ತಿಗೆ ಗುರುವಾಗುವುದಕ್ಕಾಗಿ ಇದೆ. ಯಾವಾಗೆಲ್ಲ ಪ್ರಪಂಚದ ರಾಷ್ಟ್ರಗಳು ಯಾವುದೋ ಒಂದು ರಾಜಕೀಯ ಸೂತ್ರದಲ್ಲಿ ಪೋಣಿಸಲ್ಪಟ್ಟಿವೆಯೋ ಆಗೆಲ್ಲ ಭಾರತ ಎದ್ದು ನಿಂತು ದಿವ್ಯಜ್ಞಾನವನ್ನು ಎಲ್ಲೆಡೆ ಹರಡಿ ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸಿಯೇಬಿಡುತ್ತದೆ. ಇದೊಂದು ಚಾರಿತ್ರಿಕ ಅವಶ್ಯಕತೆ ಮತ್ತು ಅನಿವಾರ್ಯತೆ. ತನ್ನ ಈ ಕರ್ತವ್ಯಶೀಲತೆ ಮತ್ತು ಬದ್ಧತೆಯಲ್ಲಿ ಭಾರತ ಎಂದೂ ಸೋತಿಲ್ಲ. ಅದಕ್ಕಾಗಿಯೇ ಆ ಜಗನ್ನಿಯಾಮಕ ಸಾವಿರ ತೊಂದರೆಗಳ ನಡುವೆಯೂ ಭಾರತವನ್ನು ಸಂರಕ್ಷಿಸುತ್ತಿದ್ದಾನೆ. ಅಲೆಗ್ಸಾಂಡರ್ ಪ್ರಪಂಚವನ್ನು ಒಗ್ಗೂಡಿಸಿದಾಗ ಇದು ಬೃಹತ್ ಪ್ರಮಾಣದಲ್ಲಿ ನಡೆಯಿತು. ಇಂದು ಇಂಗ್ಲಿಷರು ಅದೇ ಕೆಲಸ ಮಾಡಿದಾಗ ಭಾರತದ ಅಂತಃಸತ್ವವೇ ರಾಮಕೃಷ್ಣ-ವಿವೇಕಾನಂದ ಎಂಬ ಗಂಗೆ-ಯಮುನೆಯರ ಮೂಲಕ ಜಗತ್ತನ್ನು ಶುದ್ಧೀಕರಿಸಹೊರಟಿತು.
ಇದು ಕೇವಲ ವೇದಾಂತಕ್ಕೆ, ಆಧ್ಯಾತ್ಮಿಕತೆಗೆ ಮಾತ್ರ ಸೀಮಿತವಾದದ್ದೇನೂ ಅಲ್ಲ. ಹಾಗೆ ನೋಡಿದರೆ ಭಾರತೀಯ ದೃಷ್ಟಿಯಲ್ಲಿ ಲೌಕಿಕ ಮತ್ತು ಅಧ್ಯಾತ್ಮ ಎಂಬ ಎರಡು ವಿಭಿನ್ನ ಕ್ಷೇತ್ರಗಳೇ ಇಲ್ಲ. ಲೌಕಿಕ ಆಧ್ಯಾತ್ಮಿಕಕ್ಕೆ ಪೂರಕ ಮೆಟ್ಟಿಲು. ಒಂದು ಅಪರ ಮತ್ತು ಇನ್ನೊಂದು ಪರ. ಆಧ್ಯಾತ್ಮಿಕ ಅಥವಾ ಪರಾ ವಿದ್ಯೆಯಲ್ಲಿ ನುರಿತವನಿಗೆ ಲೌಕಿಕವೆನ್ನುವುದು ಮಕ್ಕಳಾಟ. ಗಮನವೆಲ್ಲ ಪರಾವಿದ್ಯೆಯ ಕಡೆಗಿದ್ದಾಗ ಅಪರ ವಿದ್ಯೆಯ ಫಲಗಳಾದ ಅಧಿಕಾರ, ಶಕ್ತಿ, ಪ್ರೌಢಿಮೆ, ದಕ್ಷತೆಗಳು ಸಹಜವಾಗಿಯೇ ಉದ್ಭವಿಸುತ್ತವೆ ಎಂಬುದು ವಿಶ್ವಾಮಿತ್ರ ಮೊದಲಾದ ಆರ್ಯಋಷಿಗಳ ಸರ್ತಾಕ ದೃಷ್ಟಿಯಿಂದಾಗಿ ಇಲ್ಲಿ ಹೆಚ್ಚು ಒತ್ತು ಪರಮಾರ್ಥದೆಡೆಗಿದೆ. ಮನುಷ್ಯನ ವಿಕಾಸ ಮತ್ತು ಅಭಿವೃದ್ಧಿಗಳ ರಾಜಪಥ ಇರಬೇಕಾದ್ದೂ ಹೀಗೆಯೇ. ಇದನ್ನು ಅನುಸರಿಸದ ನಾಗರಿಕತೆಗಳು ಎಷ್ಟೇ ಪ್ರಬಲವಾಗಿದ್ದರೂ ಕೊನೆಗೆ ನಿರ್ನಾಮವಾದವು. ಭಾರತ ಆ ತಪ್ಪು ಮಾಡಲಿಲ್ಲ. ಹೀಗೆ ಭಾರತದಿಂದ ಪ್ರಪಂಚ ಕಲಿಯಬೇಕಾದ್ದು ಒಂದೆರೆಡಲ್ಲ. ಇದನ್ನು ಇತ್ತೀಚೆಗೆ ಪಾಶ್ಚಿಮಾತ್ಯರು ಅರಿಯಲು ಪ್ರಾರಂಭಿಸಿದ್ದರೆ ಅದಕ್ಕೆ ಸಂಪೂರ್ಣವಾಗಿ ಕಾರಣೀಭೂತರಾದವರು ಮಹಾನ್ ಸ್ವಾಮಿ ವಿವೇಕಾನಂದರು. ‘ಪೌರ್ವಾತ್ಯರಿಗೆ ಬುದ್ಧ ಸಂದೇಶ ಕೊಟ್ಟಂತೆ ಪಶ್ಚಿಮಕ್ಕೆ ನನ್ನದೊಂದು ಸಂದೇಶವಿದೆ’ ಎಂಬ ಅವರ ಮಾತನ್ನು ವ್ಯಾಖ್ಯಾನಿಸಿದಾಗ ಅಲ್ಲೊಂದು ಅರಿವಿನ ಖನಿಯೇ ಕಂಡು ಬರುತ್ತದೆ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)