ಅಂಕಣ

ವಿಶ್ವಮಾನವತೆಯ ಬೆಳಕು; ಇಂದು ಗುರು ನಾನಕ್ ಜಯಂತಿ

| ಆದರ್ಶ ಗೋಖಲೆ

ವಿಶ್ವಭ್ರಾತೃತ್ವ, ಸಮಾನತೆ, ಭಗವತ್ಪ್ರೇಮದ ಅನುಭೂತಿಯ ಕುರಿತು ಜನಸಾಮಾನ್ಯರ ಗೊಂದಲಗಳನ್ನು ಪರಿಹರಿಸಿ, ಸರಳಸುಂದರ ಪದಗಳಿಂದ ಸಕಲರಿಗೂ ಅರ್ಥವಾಗುವಂತೆ ವೇದಸುಧಾರಸವನ್ನು ಉಣಬಡಿಸಿದ ಸಿಖ್ ಪಂಥದ ಪ್ರಥಮ ಗುರು ಮಹಾತ್ಮ ಗುರುನಾನಕರು ಸತ್ಯಧರ್ವಧಿಷ್ಠಿತ ಸಮಾಜನಿರ್ವಣಕ್ಕೆ ಚಾಲನೆಯಿತ್ತ ಯುಗಪುರುಷ. 1469ರ ಕಾರ್ತಿಕ ಪೌರ್ಣಮಿಯಂದು ಅಖಂಡ ಪಂಜಾಬಿನ ತಳವಂಡಿಯ ಕಲ್ಯಾಣದಾಸ್-ತೃಪ್ತಾ ದಂಪತಿಗೆ ಜನಿಸಿದ ಗುರುನಾನಕರು ಬಾಲ್ಯದಿಂದಲೂ ಅಧ್ಯಾತ್ಮ ಜಿಜ್ಞಾಸು. ಪ್ರತಿಯೊಂದು ಆಚರಣೆಯನ್ನೂ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ಶಾಲಾಶಿಕ್ಷಣದಿಂದ ಆತ್ಮವಿಕಾಸ ಅಸಾಧ್ಯವೆಂದು ಬಹುಬೇಗ ಅರಿತರು. ಮದುವೆ, ಮಕ್ಕಳೆಂಬ ಸಂಸಾರವಾರಿಧಿಯಲ್ಲಿ ಕಮಲಪತ್ರದಂತಿದ್ದು, ಆತ್ಮಜ್ಞಾನ ಪ್ರಾಪ್ತಿಯ ಸದುದ್ದೇಶದಿಂದ ಭಾರತವನ್ನು ಕೇಂದ್ರವಾಗಿ ಏಷ್ಯಾ ಖಂಡವನ್ನು ಸುತ್ತಿದರು. ಸಂಗೀತ, ಕವನ, ಹಾಡಿನ ಮೂಲಕ ಭಗವಂತನ ಸಂದೇಶವನ್ನು ಊರೂರಿಗೆ ಪಸರಿಸಿದ ಗುರುನಾನಕರು ಪ್ರೀತಿಮೈತ್ರಿ, ಸಹನೆ, ಕಾರುಣ್ಯಗಳ ಹುಡುಕಾಟದಲ್ಲಿ ಯಶಸ್ವಿಯಾದರು.

ಪ್ರಾಮಾಣಿಕವಾಗಿ ದುಡಿಯುವುದು ಒಂದು ಭಾಗವಾದರೆ, ದುಡಿಮೆಯ ಸಣ್ಣ ಪಾಲನ್ನು ಆರ್ತರ ಸಮುನ್ನತಿಗಾಗಿ ಬಳಸುವುದೇ ನರ ನಾರಾಯಣನಾಗಲು ಲಭ್ಯವಿರುವ ಸೋಪಾನ. ತನ್ನಂತೆಯೇ ಇರುವ ಇನ್ನೊಂದು ಜೀವಕ್ಕೆ ಆಸರೆಯಾಗದ ಮನೋಸ್ಥಿತಿಯುಳ್ಳವನು ಎಂದೆಂದಿಗೂ ಮಾನವನಾಗಲಾರನೆಂಬ ಸತ್ಯದರ್ಶನಗೈದ ಕೀರ್ತಿ ಗುರುನಾನಕರದು.

‘ಏಕಂ ಸದ್ವಿಪ್ರಾಃ ಬಹುಧಾ ವದಂತಿ’ ಎಂಬ ಮಾತಿನಂತೆ ಜೀವನದ ಆದರ್ಶಗಳನ್ನು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸಮಾನತೆಯ ಕಣ್ಣಿನಿಂದ ನೋಡಲು ಪ್ರೇರೇಪಿಸಿದರು. ಜಾತಿವ್ಯವಸ್ಥೆ, ಅಸ್ಪ ೃ್ಯತೆಯನ್ನು ಖಂಡಿಸಿ, ಸದ್ವರ್ತನೆಯ ಬದುಕಿನಿಂದ ಉತ್ತಮ ಜಾತಿಯೇ ಹೊರತು ಹುಟ್ಟಿನಿಂದಲ್ಲ ಎಂದು ಸಾರಿದರು. ಮಹಿಳಾಪ್ರಧಾನ ಕುಟುಂಬ ವ್ಯವಸ್ಥೆಯನ್ನು ರೂಪಿಸಿ, ಲಿಂಗ ಅಸಮಾನತೆಯನ್ನು ವಿರೋಧಿಸಿದ ಗುರುನಾನಕರು ಶ್ರೀಮಂತಿಕೆಯ ತೋರ್ಪಡಿಕೆಯ ಆಡಂಬರವನ್ನು ಪಾಪವೆಂದೇ ಗುರುತಿಸಿದರು. ನೊಂದವರ ಕಣ್ಣೀರೊರೆಸಲು ಉಪಯೋಗವಾಗದ ಸಂಪತ್ತಿಗೆ ಬೆಲೆ ನೀಡದೆ ವ್ಯಕ್ತಿಯೊಳಗೆ ಸುಪ್ತವಾಗಿರುವ ಭಗವತ್​ತತ್ತ್ವದ ಅನಾವರಣಕ್ಕೆ ಒತ್ತು ನೀಡಿದರು. ಸದಾಕಾಲ ಜನರ ನಡುವಿದ್ದು ಸರಳಜೀವನದ ಮಾರ್ಗದರ್ಶಿ ಸೂತ್ರಗಳನ್ನು ಪೋಣಿಸಿದ ಅವರು ಮೊಘಲರ ದೌರ್ಜನ್ಯವನ್ನು ಖಂಡಿಸಿದರು. ಸತ್ಯದ ಹುಡುಕಾಟದಲ್ಲೇ ನಿರಂತರವಾಗಿ ತೊಡಗಿಸಿಕೊಂಡು ಸಮಾನತೆ ಹಾಗೂ ಸಹಬಾಳ್ವೆಯ ಮಂತ್ರದೊಂದಿಗೆ ಸುಗಮ ಜೀವನ ನಡೆಸುವ ಪಥವನ್ನು ಐದು ಶತಮಾನಗಳ ಹಿಂದೆಯೇ ಸೋದಾಹರಣ ವಿವರಿಸಿದ ರೀತಿ ಅನನ್ಯ. ಸಂತ, ಚಿಂತಕ, ದಾರ್ಶನಿಕ, ಕವಿ, ವಸುಧಾ ಕುಟುಂಬದ ಕನಸುಗಾರ, ನವಮನ್ವಂತರ ಶಿಲ್ಪಿ, ಮತಾಂತರಗೊಂಡ ಸ್ವಜನರನ್ನು ತನ್ನ ಪ್ರೇಮಪೂರ್ಣ ಮನದಿಂದ ಸ್ವಾಗತಿಸಿದ ಯುಗಾಚಾರ್ಯ ಹೀಗೆ ವಿವಿಧ ಮುಖಗಳಿಂದ ಸನಾತನತೆಯ ಆದರ್ಶಗಳ ಜಗದ್ವಾ್ಯಪ್ತತೆಗೆ ತನ್ನ ಬಾಳನ್ನೇ ಮುಡಿಪಿಟ್ಟ ಗುರುನಾನಕರ ಧನ್ಯ ಬದುಕು ವಿಶ್ವಕ್ಕೆ ಮಾದರಿ.

ಮಾನವಸಂಬಂಧಗಳು ಶಿಥಿಲವಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಗುರುನಾನಕರು ಉಲ್ಲೇಖಿಸಿದ ವ್ಯಕ್ತಿಗೌರವ ಹಾಗೂ ಜೀವಸೇವೆ ಅವಶ್ಯ ಅನುಕರಣೀಯ ಆದರ್ಶಗಳಲ್ಲೊಂದು. ಧರ್ಮ ಮತ್ತು ರಾಷ್ಟ್ರದ ಅಭಿನ್ನತೆಯನ್ನು ಉಚ್ಚಕಂಠದಿಂದ ಘೊಷಿಸಿದ ಪರಿಣಾಮ ನಾನಕರಿಂದ ಗೋವಿಂದಸಿಂಹರವರೆಗೆ ಹರಿದು ಬಂದ ಗುರುಪರಂಪರೆ ಹಾಗೂ ಗುರುಗ್ರಂಥ ಸಾಹೇಬದ ತತ್ತ್ವದಡಿ ಹೊರಹೊಮ್ಮಿದ ಸಿಖ್ ಅನುಯಾಯಿಗಳಿಂದ ಗಡಿಗುಡಿಗಳ ರಕ್ಷೆಗಾಗಿಯೇ ಸರ್ವಸ್ವ ಸಮರ್ಪಣೆ ಸಾಧ್ಯವಾಯಿತು. ಮಾನವೀಯತೆಯ ಕಲ್ಪವೃಕ್ಷ, ವಿಶ್ವಕಲ್ಯಾಣದ ಮಹೋದಧಿ, ಪ್ರೇಮಪೂರ್ಣ ಭಾವದ ಹಿಮಾಲಯದಂತೆ ಬದುಕಿ ಭಕ್ತಜನರ ಬಾಳು ಬೆಳಗಿದ ಗುರುನಾನಕರ ಪುಣ್ಯಜಯಂತಿ ನಮ್ಮೊಳಗೆ ಅಡಗಿರುವ ವಿಶ್ವಮಾನವತೆಯನ್ನು ಜಾಗೃತಗೊಳಿಸಲಿ.

(ಲೇಖಕರು ಯುವ ವಾಗ್ಮಿ, ಉಪನ್ಯಾಸಕರು)