ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಕಡಿಮೆ ಮಾಡಿದೆ. ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದು, ಸರ್ಕಾರದ ‘ಉಚಿತ ಕೊಡುಗೆ’ಗಳಿಗೆ ಜಿಎಸ್ಟಿ ಪರಿಷ್ಕರಣೆಯಿಂದ ಧಕ್ಕೆ ಆಗುವ ಸಾಧ್ಯತೆ ಇದೆ. ಇದೆಲ್ಲದರ ಜೊತೆಗೆ ಅಮೆರಿಕದ ತೆರಿಗೆಯೂ ಬರಸಿಡಿಲಿನಂತೆ ಬಂದೆರಗಿದೆ. ಜಾಗತಿಕ ಬದಲಾವಣೆಯೂ ಜಾರಿಯಲ್ಲಿದೆ. ಹೀಗಾಗಿ ‘ನಿಂಗೂ ಫ್ರೀ, ನಂಗೂ ಫ್ರೀ, ಅವನಿಗೂ ಫ್ರೀ...’ ಎಂಬ ನೀತಿಯ ಬಗ್ಗೆ ಸ್ವಲ್ಪ ಯೋಚಿಸಿ ನಿರ್ಧರಿಸುವ ಕಾಲ ಬಂದಿದೆ.
ಆರು ಕೋಟಿಗಿಂತ ಹೆಚ್ಚು ಕನ್ನಡಿಗರು ಸುಮಾರು 51 ಸಾವಿರ ಕೋಟಿ ರೂ.ಗಳಷ್ಟು ಮೊತ್ತದ ಉಚಿತ ಯೋಜನೆಗಳ ನೇರ ಅಥವಾ ಪರೋಕ್ಷ ಫಲಾನುಭವಿಗಳಾಗಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ಸುಮಾರು 6.5 ಲಕ್ಷ ಕೋಟಿ ರೂ.ಗಳಿಗೂ ಮೀರಿದ ಸಾಲ ಇದೆ. ಇದರ ಸರಿ- ತಪ್ಪುಗಳು, ರಾಜಕೀಯ ಹೆಸರಾಟ-ಕೆಸರಾಟದ ಲೆಕ್ಕಾಚಾರಗಳು ಇಲ್ಲಿ ಮುಖ್ಯವಲ್ಲ. ಒಂದು ರಾಜ್ಯದ ಬೆಳವಣಿಗೆಗೆ ಆಡಳಿತ ನಿರ್ವಹಣೆಯ ಲೆಕ್ಕಾಚಾರ ಅತಿ ಅಗತ್ಯ ಎನ್ನುವುದಂತೂ ಸತ್ಯ.
ಲೆಕ್ಕದ ಪ್ರಕಾರ 4+4=8 ಅಲ್ಲವೇ...? ಆದರೆ ನಮ್ಮಂತಹ ವ್ಯವಹಾರಿಗಳಿಗೆ ಇದು 4+4=16 ಕೂಡ ಆಗಬಹುದು. ರಾಜಕೀಯ ಲೆಕ್ಕಾಚಾರಗಳೂ ಅಷ್ಟೆ. ಅದು ಬೇಕಾದಂತೆ, ಬೇಕಾದ ಹಾಗೆ, ಪಕ್ಷದ ಆಧಾರದಲ್ಲಿ, ಆ ಪಕ್ಷದ ಚಿಂತೆ-ಚಿಂತನೆಯಂತೆ ವಿಶ್ಲೇಷಿಸಲ್ಪಡುತ್ತದೆ. ಆದರೆ ಸರ್ಕಾರಿ ಬೊಕ್ಕಸದ ಲೆಕ್ಕಾಚಾರ ಒಂದು ಜವಾಬ್ದಾರಿಯುತ ನಡೆ. ಇದರ ಬಗ್ಗೆ ನ್ಯಾಯಾಲಯವೂ ಎಚ್ಚರಿಕೆ ನೀಡಿ ಸರ್ಕಾರಗಳಿಗೆ ತಿಳಿ ಹೇಳಿದೆ.
ಮುಂದಿನ 2-3 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಆದಾಯ ಮತ್ತು ಖರ್ಚಿನ ಯೋಜನೆಗಳನ್ನು ಸರ್ಕಾರ ತಯಾರಿಸುತ್ತದೆ. ಅದಕ್ಕೆ ನೀತಿ ಆಯೋಗ ಅಥವಾ ಪ್ಲ್ಯಾನಿಂಗ್ ತಂಡ ಇರುತ್ತದೆ. ಹಣಕಾಸಿನ ಬಗ್ಗೆ ತಿಳಿವಳಿಕೆ ಇರುವ ಜವಾಬ್ದಾರಿಯುತ ಅಧಿಕಾರಿಗಳೇ ಅದರಲ್ಲಿ ಇರುತ್ತಾರೆ ಮತ್ತು ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡುತ್ತಾರೆ. ಸಾಮಾಜಿಕ ಜವಾಬ್ದಾರಿ ಮತ್ತು ದೇಶದ ಆರ್ಥಿಕ ಸ್ಥಿತಿಗತಿಗಳ ಪರಾಮರ್ಶೆಗೆ ಒಳಪಟ್ಟು ಯೋಜನೆಗಳನ್ನು ನಿರ್ಧರಿಸಲಾಗುತ್ತದೆ. ಒಂದಷ್ಟು ಜಾಗತಿಕ ವಿಷಯಗಳನ್ನೂ ಗಮನಿಸಿಯೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಜಿಎಸ್ಟಿ ದರಗಳ ಪರಿಷ್ಕರಣೆಯಿಂದ ರಾಜ್ಯಕ್ಕೆ ನೇರವಾಗಿ ವರ್ಷಕ್ಕೆ 15,000 ಕೋಟಿ ರೂ.ಗಿಂತಲೂ ಹೆಚ್ಚಿನ ಕೊರತೆ ಕಾಡಲಿದೆ. ಹಾಗೆಯೇ, ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳಿಂದಲೂ ಇಡೀ ದೇಶಕ್ಕೆ ಆರ್ಥಿಕ ಹೊಡೆತ ಬಿದ್ದರೆ ಅದರಲ್ಲಿ ಒಂದಷ್ಟು ಹೊಡೆತ ಕರ್ನಾಟಕದ ಆರ್ಥಿಕತೆಯ ಮೇಲೆಯೂ ಬೀಳಲಿದೆ. ಯಾಕೆಂದರೆ ಇಡೀ ದೇಶದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕದ ಜಿಎಸ್ಟಿ ಪಾಲು ದೊಡ್ಡದು. ಗುಜರಾತ್ ಕೂಡ ಹತ್ತಿರದಲ್ಲಿದೆ. ಕರ್ನಾಟಕದ ಒಟ್ಟು ಆದಾಯದಲ್ಲಿ ಸುಮಾರು ಶೇಕಡ 15ರಿಂದ 20ರಷ್ಟು ಹಣವು ಈಗ ಚಾಲ್ತಿಯಲ್ಲಿರುವ ಐದು ಉಚಿತ ಯೋಜನೆಗಳಿಗೆ ಖರ್ಚಾಗುತ್ತಿದೆ. ರಾಜ್ಯದ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮತ್ತು ಹೆಚ್ಚುವರಿ ತೆರಿಗೆ ಆಕರಣೆ- ಈ ಕ್ರಮಗಳಿಂದ ಮಾತ್ರ ಎಲ್ಲವನ್ನು ಸರಿದೂಗಿಸಬಹುದು.
ಬೆಂಗಳೂರಿನ ಫಾರ್ವಸೂಟಿಕಲ್, ಸಿಮೆಂಟ್, ಫುಡ್, ಪಾನೀಯ (ಮದ್ಯ), ವಾಹನ ಮಾರಾಟ ಇತ್ಯಾದಿ ವಲಯಗಳಿಂದ ಬರುವ ಜಿಎಸ್ಟಿ ಪ್ರಮಾಣ ಹೆಚ್ಚು. ಹಾಗೆಯೇ ಕರ್ನಾಟಕದ ಆದಾಯ ಹೆಚ್ಚಾಗಿ ಅವಲಂಬಿತವಾಗಿರುವುದು ಸಾಫ್ಟ್ ವೇರ್ ಉದ್ಯಮದ ಮೇಲೆ. ಜಿಎಸ್ಟಿ ಇಳಿಕೆಯಿಂದಾಗಿ ದಿನಬಳಕೆ ವಸ್ತುಗಳ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಒಟ್ಟಾರೆ ಸರಿದೂಗುವ ವಾತಾವರಣ ಬರಲಿದೆ ಎನ್ನುವುದು ಒಂದು ಆಯಾಮ. ಆದರೆ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಿದ್ದಾಗ ಅದು ಸಿಜಿಎಸ್ಟಿ (ಕೇಂದ್ರದ ಪಾಲು) ಹೆಚ್ಚಿನ ಶೇಕಡವಾರು ಆಗಿರುತ್ತದೆ. ಅದೇ ರೀತಿ ಕೇಂದ್ರದ ಜಿಎಸ್ಟಿ ಹಂಚಿಕೆಯ ತಾರತಮ್ಯದ ರಾಜಕೀಯ ಉಲ್ಲೇಖವೂ ಇಲ್ಲಿ ಗಮನಾರ್ಹ. ಹೀಗಾಗಿ ಹೊಡೆತವಂತೂ ಖಚಿತ!
ಜಿಎಸ್ಟಿ ಸ್ಲ್ಯಾಬ್ ಶೇಕಡ 12ರಿಂದ ಶೇ. 5ಕ್ಕೆ ಇಳಿದುದರಿಂದ ಮತ್ತು ಅಮೆರಿಕದ ಶೇ. 50ರಷ್ಟು ತೆರಿಗೆಯಿಂದ ಕರ್ನಾಟಕದ ವ್ಯಾಪಾರೋದ್ಯಮಿಗಳಿಗೆ ಆಗಲಿರುವ ಲಾಭ-ನಷ್ಟ ತಿಳಿಯಬೇಕಾದರೆ ಕನಿಷ್ಠ ಒಂದೆರಡು ವರ್ಷಗಳು ಬೇಕು. ಆದರೆ ಸರ್ಕಾರಕ್ಕೆ ಬರುವ ಜಿಎಸ್ಟಿ ಮತ್ತು ಉದ್ಯಮ ಕುಸಿತದಿಂದಾಗಿ ಬರಬೇಕಾದ ತೆರಿಗೆಯ ಲೆಕ್ಕಾಚಾರ ಮುಂದಿನ 2-3 ತಿಂಗಳಲ್ಲೇ ತಿಳಿಯಲಿದೆ. ಜಿಎಸ್ಟಿ ದರ ಬದಲಾವಣೆ ಜನಸಾಮಾನ್ಯರಿಗೆ ಒಳ್ಳೆಯದು ಎಂದೆನಿಸಿದರೂ ಉದ್ಯಮಿಗಳು ಇದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದನ್ನು ಮುಂದಿನ ದಿನಗಳಲ್ಲಿ ನೋಡಬಹುದು.
ಮುಂದಿನ ತ್ರೖೆಮಾಸಿಕದ ಕೊನೆಯಲ್ಲಿ (ಡಿಸೆಂಬರ್) ಕರ್ನಾಟಕ ಸೇರಿದಂತೆ ಎಲ್ಲ ಸರ್ಕಾರಗಳ ಆದಾಯ ಮತ್ತು ಶೇಕಡವಾರು ಉತ್ಪಾದನೆಯ ಲೆಕ್ಕ, ಹೆಚ್ಚು ಪಕ್ಕಾ ಆಗಿ ಸಿಗಲಿದೆ. ಆಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಸಮರ್ಥವಾಗಿ ನಿಭಾಯಿಸುವುದು ಅಗತ್ಯ. ಆಗ ‘ಉಚಿತ’ಗಳಿಗೊಂದು ಚೌಕಟ್ಟು ತರುವುದೂ ಅನಿವಾರ್ಯವಾದೀತು.
ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಒಂದು, ರಾಜಕೀಯ ಆಧಾರಿತ. ಇನ್ನೊಂದು, ನೈಜ ಪರಿಣಾಮ. ಅಮೆರಿಕದಲ್ಲಿ ಕಲಿತ ಕೃಷ್ಣ ಭೈರೇಗೌಡ ರಾಜ್ಯ ಕಂಡ ಪ್ರಬುದ್ಧ ಮಂತ್ರಿಗಳಲ್ಲಿ ಒಬ್ಬರು. ಒಟ್ಟು ಜಿಎಸ್ಟಿ ಆದಾಯ ಕಡಿಮೆಯಾದಾಗ ಕರ್ನಾಟಕಕ್ಕೆ ಸಿಗುವ ಪಾಲು ಮತ್ತು ಕೇಂದ್ರ ನೀಡುವ ಶೇಕಡವಾರು ಕೂಡ ಬದಲಾಗಿ ಕಡಿಮೆಯಾಗುತ್ತದೆ. ಅಂದಾಜಿನ ಪ್ರಕಾರ ತಿಂಗಳಿಗೆ 2,500 ಕೋಟಿ ರೂ.ಗಿಂತ ಹೆಚ್ಚು ಹೊರೆ ಬೀಳಲಿದೆ ಎನ್ನುತ್ತದೆ ಒಂದು ಲೆಕ್ಕಾಚಾರ. ಈ ಕುರಿತಂತೆ ಕೇಂದ್ರದ ಮೊರೆ ಹೋಗುವುದು ಅಗತ್ಯವಿದ್ದರೆ ಕಾನೂನಾತ್ಮಕ ಅಡೆತಡೆಗಳನ್ನು ಸರಿಪಡಿಸುವುದರ ಕುರಿತಂತೆ ಸದ್ಯ ಸರ್ಕಾರ ಮತ್ತು ಹಣಕಾಸು ಇಲಾಖೆ ತಯಾರಿ ಮಾಡುತ್ತಿದೆ. ಅಮೆರಿಕದ ತೆರಿಗೆಯಿಂದ ಮತ್ತು ಕೃತಕ ಬುದ್ಧಿಮತ್ತೆಯಿಂದ (ಎಐ) ಬೆಂಗಳೂರಿನ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮಕ್ಕೆ ಬೀಳುವ ಹೊಡೆತ ವರ್ಷಾಂತ್ಯಕ್ಕೆ ಸಂಚಲನವನ್ನು ಸೃಷ್ಟಿಸುವುದಂತೂ ಖಚಿತ.
ತ್ಪನ್ನಗಳ ಮೇಲೆ ವಿಧಿಸಿರುವ ಶೇ. 50 ತೆರಿಗೆಯಿಂದ ಕರ್ನಾಟಕಕ್ಕೂ ಪ್ರಬಲ ಹೊಡೆತ ಬೀಳಲಿದೆ. ಬೆಂಗಳೂರು, ಬೆಳಗಾವಿ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರದಲ್ಲಿ ಕೇಂದ್ರೀಕೃತವಾಗಿರುವ ಬಟ್ಟೆಯ ಉದ್ಯಮ, ಎಲೆಕ್ಟ್ರಾನಿಕ್ಸ್ ಉಪಕರಣಗಳು, ವಾಹನದ ಬಿಡಿ ಭಾಗಗಳ ಉದ್ಯಮದ ಮೇಲೆ ದೊಡ್ಡ ಪರಿಣಾಮವಾಗಲಿದೆ. ತಜ್ಞರ ಪ್ರಕಾರ ಕರ್ನಾಟಕದ ಉದ್ಯಮಗಳಿಗೆ ಸುಮಾರು 40,000 ಕೋಟಿ ರೂ.ಗಿಂತಲೂ ಹೆಚ್ಚಿನ ಪೆಟ್ಟು ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಗಾರ್ವೆಂಟ್ ಉದ್ಯಮದಲ್ಲಿ ಸುಮಾರು 6 ಲಕ್ಷ ಜನ ಉದ್ಯೋಗಿಗಳಿದ್ದಾರೆ. ಹಾಗೆಯೇ ರೇಷ್ಮೆ, ಆಟೋಮೊಬೈಲ್ ಮತ್ತು ಸಣ್ಣ ಎಲೆಕ್ಟ್ರಾನಿಕ್ಸ್ ಘಟಕಗಳಲ್ಲಿ ಇನ್ನೂ 3 ಲಕ್ಷ ಜನ ಉದ್ಯೋಗಿಗಳಿದ್ದಾರೆ. ಗುಜರಾತಿನಲ್ಲಿ (ಸೂರತ್) ವಜ್ರಾಭರಣಗಳನ್ನು ತಯಾರಿಸುವ ಕೆಲಸಗಾರರಿಗೆ ಈಗಾಗಲೇ ಟ್ರಂಪ್ ತೆರಿಗೆಯಿಂದಾಗುವ ಪರಿಣಾಮದ ಕುರಿತು ಎಚ್ಚರಿಕೆ ನೀಡಲಾಗಿದೆ.
ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳುವವರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗಿದೆ. ಸಾಫ್ಟ್ವೇರ್ ಉದ್ಯೋಗಿಗಳು ಅಮೆರಿಕಕ್ಕೆ ಹೋಗಲು ಬಯಸುವುದೂ ಇಲ್ಲಿ ಉಲ್ಲೇಖನೀಯ. ಐಟಿ ಉದ್ಯಮವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಆಘಾತಕ್ಕೆ ಸಿಕ್ಕಿದೆ. ಅದಕ್ಕೆ ಅಮೆರಿಕದ ತೆರಿಗೆ ಮತ್ತೊಂದು ಪೆಟ್ಟು ನೀಡುವ ದಿನಗಳು ದೂರವಿಲ್ಲ.
ಕಳೆದ ವರ್ಷ ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ಗೆ ನಿಲ್ಲಿಸಿದಾಗ ಅದನ್ನು ಕ್ರಾಂತಿಕಾರಕ ಬದಲಾವಣೆ ಎನ್ನಲಾಯಿತು. ಈಗ ಜಿಎಸ್ಟಿ ಕಡಿತವನ್ನೂ ಸಾಮಾನ್ಯ ವರ್ಗಕ್ಕೆ ಬಂಪರ್ ಕೊಡುಗೆ ಎಂದೇ ಪರಿಗಣಿಸಬೇಕಾಗುತ್ತದೆ. ಜನಸಾಮಾನ್ಯನಿಗೆ ಸರ್ಕಾರಗಳು ಕೊಡುವ ಉಚಿತ ಭಾಗ್ಯಕ್ಕಿಂತ ಹೆಚ್ಚು ಲಾಭ ಈ ಜಿಎಸ್ಟಿ ಇಳಿಕೆಯಿಂದ ಆಗುತ್ತದೆ. ಕಂಪನಿಗಳು ತಮ್ಮ ಲಾಭವನ್ನು ಅಥವಾ ಎಂಆರ್ಪಿಯನ್ನು ಏರಿಸದೆ ಇದ್ದರೆ ಮಾತ್ರ ಇದು ಸಾಕಾರವಾಗುತ್ತದೆ. ಸೂಕ್ಷವಾಗಿ ಗಮನಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಎಸ್ಟಿ ಇಳಿಕೆ ತಮ್ಮ ಉಚಿತ ಕೊಡುಗೆಗಳ ಮೇಲೆ ನೇರ ಪರಿಣಾಮ ಬೀರಬಹುದು ಎಂಬ ಭಯ ಇರುವಂತೆ ಕಾಣುತ್ತದೆ. ಮುಂದಿನ ಕೆಲವು ತಿಂಗಳಲ್ಲಿ ಎಲ್ಲವೂ ಎಳೆಎಳೆಯಾಗಿ ಅರ್ಥವಾಗುತ್ತ ಸ್ಪಷ್ಟವಾಗಿ ನಮ್ಮೆದುರು ಬೃಹದಾಕಾರವಾಗಿ ನಿಲ್ಲಲಿದೆ. ರಾಜಕೀಯ ಪಕ್ಷಗಳು ಆಗಲೂ ಹೊಸ ಹೇಳಿಕೆಗಳನ್ನು ನೀಡುತ್ತವೆ. ಉಚಿತ ಫಲಾನುಭವಿಗಳು ಇದನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಉದ್ಯಮಿಗಳು ಮಾತ್ರ ಇದಕ್ಕೆಲ್ಲ ಹೊಂದಿಕೊಳ್ಳುವುದು ಅನಿವಾರ್ಯ.
ಬದಲಾವಣೆ ಜಗದ ನಿಯಮ. ಬದಲಾಗೋಣ ಅಂದುಕೊಳ್ಳೋಣ. ಇದೆಲ್ಲದರ ಜೊತೆಗೆ ಹಾಳು ಬಿದ್ದ ರಸ್ತೆಗಳು ರಿಪೇರಿ ಆಗಬೇಕಾಗಿದೆ. ಅರ್ಧದಲ್ಲಿ ನಿಂತ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕಾಗಿವೆ. ಗುತ್ತಿಗೆದಾರರ ಬಾಕಿ ಹಣ ಕೊಡಬೇಕಾಗಿದೆ. ಅಂತೂ ಕರ್ನಾಟಕದ ಆರ್ಥಿಕ ಸ್ಥಿತಿಯನ್ನು ಹೆಚ್ಚು ಕೂಲಂಕಷವಾಗಿ ಪರಿಶೀಲಿಸಿ ಮತ್ತು ಸಣ್ಣ ಸಣ್ಣ ವಿಷಯಕ್ಕೆ ಒತ್ತು ನೀಡಿ ಮುಂದಿನ ಬಜೆಟ್ ಮತ್ತು ಬ್ಲೂಪ್ರಿಂಟ್ ರೂಪಿಸುವುದು ಇಂದಿನ ತುರ್ತು ಅಗತ್ಯ.