ಅಂಕಣ

ಎಕ್ಸಾಂ ಟೈಮ್​​ನಲ್ಲಿ ಗುರಿ ತಪ್ಪದಿರಲಿ ಗುಂಪು ಓದು

lakshmihegde

ಈಗ ಮಕ್ಕಳಲ್ಲಿ ಪರೀಕ್ಷೆಯ ಕಾವು. ವಿದ್ಯಾರ್ಥಿಗಳು ಓದಿನ ಬೇರೆ ಬೇರೆ ಕೌಶಲಗಳ ಮೊರೆ ಹೋಗುತ್ತಿದ್ದು, ಅದರಲ್ಲಿ ಗುಂಪು ಅಧ್ಯಯನ ಕೂಡ ಒಂದು. ಗುಂಪು ಓದಿನ ಪರಿಕಲ್ಪನೆ ವಿದ್ಯಾರ್ಥಿಗಳಲ್ಲಿ ಇರದಿದ್ದರೆ ಅಮೂಲ್ಯವಾದ ಓದು ದಾರಿತಪ್ಪುತ್ತೆ. ಹೇಗಿರಬೇಕು ಗ್ರೂಪ್ ಸ್ಟಡಿ. ಇಲ್ಲಿದೆ ಮಾಹಿತಿ.

ಗುಂಪು ಓದು ಅಥವಾ ಗ್ರುಪ್ ಸ್ಟಡಿ ಎಂಬುದು ಓದಿನ ಕೌಶಲ. ಕೆಲ ವಿದ್ಯಾರ್ಥಿಗಳು ಸೇರಿ ಗುಂಪಿನಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಅವುಗಳನ್ನು ತೂಗಿ ನೋಡುವುದು ಮತ್ತು ಸ್ವೀಕರಿಸುವುದಾಗಿದೆ.

ಪರೀಕ್ಷಾ ಸಮಯದಲ್ಲಿ ಇಂಥ ಓದು ಹೆಚ್ಚು ಚುರುಕು ಪಡೆಯುತ್ತದೆ. ಅನಿವಾರ್ಯ ಕಾರಣಗಳಿಂದ ತರಗತಿಗೆ ಗೈರಾದ ವಿದ್ಯಾರ್ಥಿಗಳಿಗೆ ಇದೊಂದು ಸದವಕಾಶವಾಗಿದ್ದು, ಕಲಿಕೆಯ ಕೊರತೆಯನ್ನೂ ತುಂಬುತ್ತದೆ. ಒಬ್ಬರೇ ಓದುವುದಾದರೆ ತಲೆ ಬೇರೆಲ್ಲೋ ಓಡಾಡುವುದು ಸಾಮಾನ್ಯ. ಸ್ವಲ್ಪ ಹೊತ್ತು ಮೊಬೈಲ್ ನೋಡೋಣ ಎಂದೋ, ನಿದ್ದೆ ಮಾಡಿ ಓದೋಣ ಎಂದೋ... ಹೀಗೆ ಏನೇನೋ ಯೋಚನೆಗಳು ಹೊಳೆಯುತ್ತವೆ. ಅಂಥ ಸಮಸ್ಯೆಗಳಿಗೆ ಪರಿಹಾರ ಗುಂಪು ಓದು. ಆದರೆ ಈ ಓದಿನಲ್ಲಿ ಅನುಕೂಲಗಳ ಜತೆ ಅಪಾಯವೂ ಇದೆ.

ಅನುಕೂಲಗಳು: 1)ಗುಂಪು ಓದಿನಿಂದ ಕಲಿಕೆಯ ವೇಗ ಹೆಚ್ಚುತ್ತದೆ 2)ಹೊಸ ಹೊಸ ಐಡಿಯಾಗಳು ಹೊಳೆಯುತ್ತವೆ. 3)ಅಭ್ಯಾಸದ ಏಕಾಂಗಿತನವನ್ನು ದೂರ ಮಾಡುತ್ತದೆ.

ಇವೆಲ್ಲವನ್ನೂ ಗಮನಿಸಿ:ಯೋಜನೆ ರೂಪಿಸಿ: ಒಬ್ಬರಿಗಿಂತ ಇಬ್ಬರು ಲೇಸು ಇಬ್ಬರಿಗಿಂತ ಮೂವರು ಲೇಸು, ಎಂಬ ತತ್ವದ ಹಿನ್ನೆಲೆಯಲ್ಲಿ ರೂಪಗೊಂಡಿರುವ ವಿದ್ಯಾರ್ಥಿಗಳ ಅಭ್ಯಾಸ ಕ್ರಮ. ಈ ಓದು ಅಥವಾ ಅಭ್ಯಾಸದ ಕ್ರಮಕ್ಕೆ ಒಂದು ಯೋಜನೆ ಇರಬೇಕು. ಈ ಯೋಜನೆಯಲ್ಲಿ ಎಷ್ಟು ವಿದ್ಯಾರ್ಥಿಗಳು, ಯಾವ ಸ್ಥಳ , ಎಷ್ಟು ಸಮಯಕ್ಕೆ, ಎಷ್ಟು ಸಮಯ ಸೇರಬೇಕು ಎಂಬಿತ್ಯಾದಿ ಗುಂಪು ಓದಿಗೆ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕು.

ಗುರಿ ಇರಲಿ: ಗುಂಪು ಓದಿಗೆ ನಿರ್ದಿಷ್ಟ ಗುರಿ ಇರಬೇಕು. ಆ ಗುರಿಯ ಕಡೆಗೆ ತೆಗೆದುಕೊಂಡು ಹೋಗಬಲ್ಲ ಒಬ್ಬ ಮುಖಂಡನಿರಬೇಕು. ಯಾವ ವಿಷಯ, ಯಾವ ಘಟಕ, ನಾವು ಯಾವ ಕಲಿಕೆಯನ್ನು ಗಳಿಸಬೇಕೆಂಬ ಗುರಿಯತ್ತ ಅವರು ಆ ದಿಕ್ಕಿನಲ್ಲಿ ಸಾಗುತ್ತಿರಬೇಕು. ಸಾಮಾನ್ಯವಾಗಿ 4-6 ವಿದ್ಯಾರ್ಥಿಗಳು ಗುಂಪು ಸೇರಿದರೆ ಮೊಬೈಲ್, ಸಿನಿಮಾ, ಬಟ್ಟೆ, ಹುಡುಗರು- ಹುಡುಗಿಯರ ಸುತ್ತ ಚರ್ಚೆಗಳು ಗಿರಕಿ ಹೊಡೆಯುತ್ತಿರುತ್ತವೆ. ಹೀಗಾಗಿ ಓದಿಗೆ ಗಂಭೀರತೆ ಬೇಕಾಗುತ್ತದೆ.

ಇಂಥ ಓದಿಗೆ ಬೇಕಾದ ಗಂಭೀರತೆಯ ಕೊರತೆಯಿಂದ ವಿದ್ಯಾರ್ಥಿಗಳು ಹರಟೆ ಮಲ್ಲರಾಗುತ್ತಾರೆ. ಪರೀಕ್ಷೆ ಹೊತ್ತಲ್ಲಿ ಒಂದೊಂದು ನಿಮಿಷವೂ ಅಮೂಲ್ಯ. ಅಂತಹ ಅಮೂಲ್ಯವಾದ ಕ್ಷಣಗಳನ್ನು ಹಾಳು ಮಾಡದಂತೆ ಶಿಕ್ಷಕರು, ಪಾಲಕರು ಅವರನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲದಿದ್ದರೆ ಅಮೂಲ್ಯವಾದ ಸಮಯ ಹರಟೆ ಮಲ್ಲರ ಪಾಲಾಗುವುದು.

ಗುಂಪು ಓದಿನಲ್ಲಿಯ ಒಬ್ಬೊಬ್ಬರು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಪ್ರತಿಯೊಬ್ಬರು ಸಕ್ರಿಯವಾಗಿ ಭಾಗಿಯಾಗಿ, ಕನಿಷ್ಠ 4 ಪ್ರಶ್ನೆಗಳ ತಯಾರಿಯೊಂದಿಗೆ ಬರುವುದು. ಈ ಸಂದರ್ಭದಲ್ಲಿ ಮಾತನಾಡುವವರ ಕಡೆಗೆ ಗಮನಕೊಟ್ಟು ಆಲಿಸುವುದು ಪ್ರತಿ ಸದಸ್ಯರು ಜೋರಾಗಿ, ಸ್ಪಷ್ಟವಾಗಿ, ವ್ಯಾಕರಣ ಬದ್ಧವಾಗಿ ಮಾತನಾಡುವುದು, ಮಾತನಾಡುವಾಗ ಒಬ್ಬರ ನಂತರ ಒಬ್ಬರು ಸರದಿಯಂತೆ ಪ್ರತಿಕ್ರಿಯಿಸುವುದು. ಅನೇಕ ವಿಷಯಗಳ ಟಿಪ್ಪಣಿಗಳನ್ನು ಹಿಗ್ಗಿಸಿಕೊಂಡು, ಒತ್ತಡವಿಲ್ಲದ ಈ ಕಲಿಕೆ ವಿದ್ಯಾರ್ಥಿಗಳಿಗೆ ಸಂತಸವನ್ನು ನೀಡುತ್ತದೆ. ಇದು ಸಂತಸದ ಕಲಿಕೆಯಾದುದರಿಂದ ಕಲಿಕೆ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ.ಆದರೆ ದಾರಿ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ವಾಟ್ಸ್​ ಆ್ಯಪ್​ ಸ್ಟಡಿ

ವಾಟ್ಸ್​ಆಪ್​ನಿಂದ ಇಂದಿನ ಯುವಜನರು ಹಾಳಾಗುತ್ತಿದ್ದಾರೆ ಎಂಬ ಮಾತಿದೆ. ಆದರೆ ಅದರ ಸದ್ವಿನಿಯೋಗ ಮಾಡಿಕೊಂಡರೆ ಅದು ಗುಂಪು ಅಧ್ಯಯನಕ್ಕೂ ಒಳ್ಳೆಯ ಮಾಧ್ಯಮವಾಗಲಿದೆ. ಅದಕ್ಕಾಗಿ ನೀವು ಮೊದಲು ನಿಮ್ಮದೇ ಗೆಳೆಯರ (ಎಲ್ಲರಿಗೂ ಅಧ್ಯಯನದಲ್ಲಿ ನಿಜವಾದ ಆಸಕ್ತಿ ಇರಬೇಕು) ವಾಟ್ಸ್​ಆಪ್ ಗುಂಪು ಮಾಡಿಕೊಳ್ಳಿ. ನೆನಪಿರಲಿ. ಇಲ್ಲಿ ತಲೆಹರಟೆ ಮೆಸೇಜ್​ಗಳು, ಫಾರ್ವರ್ಡ್ ಮೆಸೇಜ್​ಗಳು ಸಲ್ಲ. ಈ ಗುಂಪು ಕೇವಲ ನಿಮ್ಮ ಪರೀಕ್ಷೆಗೆ ಸಂಬಂಧಿಸಿದ ಗಂಭೀರ ವಿಷಯಗಳಿಗೆ ವೇದಿಕೆ ಆಗಬೇಕು. ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಶಕ್ಯರಾಗುವಂಥ ಹಿರಿಯರನ್ನು (ಅವರು ಶಿಕ್ಷಕರೇ ಆಗಿರಬಹುದು ಅಥವಾ ಸಂಬಂಧಿತ ವಿಷಯದಲ್ಲಿ ತಜ್ಞರಾಗಿರಬಹುದು) ಗುಂಪಿಗೆ ಸೇರಿಸಿಕೊಂಡರೆ ಉತ್ತಮ. ದಿನನಿತ್ಯ ನಿಮ್ಮ ಪಠ್ಯಕ್ಕೆ ಸಂಬಂಧಿಸಿದ ಒಂದು ಪಾಠವನ್ನೋ ಅಥವಾ ಒಂದು ಚಾಪ್ಟರ್ ಅನ್ನು ಚರ್ಚೆ ಮಾಡುತ್ತಾ ಬನ್ನಿ. ಒಂದೇ ದಿನಕ್ಕೆ ಅದು ಸಾಧ್ಯವಾಗದೇ ಹೋದರೆ, ಪರೀಕ್ಷೆಗೆ ಇನ್ನೂ ಟೈಂ ಇದ್ದುದಾದರೆ, ಒಂದು ವಿಷಯವನ್ನು ಅನೇಕ ದಿನಗಳವರೆಗೆ ರ್ಚಚಿಸಬಹುದು. ವಾಟ್ಸ್​ಆಪ್​ನ ಇನ್ನೊಂದು ಪ್ರಯೋಜನವೆಂದರೆ ನೀವು ಇಲ್ಲಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಕುಳಿತಲ್ಲಿಯೇ ಬಿಡಿಸಬಹುದಾಗಿದೆ. ಎಲ್ಲರೂ ಪತ್ರಿಕೆಗಳಲ್ಲಿನ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅದನ್ನು ವಾಟ್ಸ್​ಆಪ್​ನಲ್ಲಿ ಶೇರ್ ಮಾಡಿಕೊಂಡು ಪರಸ್ಪರ ತಮ್ಮ ಉತ್ತರಗಳನ್ನು ತಾಳೆ ಹಾಕಬಹುದು. ಅಲ್ಲಿಯೇ ಗೊಂದಲಗಳಿದ್ದರೆ ಚರ್ಚೆ ಮಾಡಲೂ ಸಹಾಯವಾಗುತ್ತದೆ.

| ಜಿ.ಕೆ.ತಳವಾರ ಶಿಕ್ಷಕ