ಅಂಕಣ

ಗುರುವೆಂಬ ಅರಿವಿಗೆ ದಕ್ಷಿಣೆ ಎಂಬ ಕೃತಜ್ಞತೆ

ನಮ್ಮ ಸನಾತನ ಧರ್ಮ, ಪರಂಪರೆಯಲ್ಲಿ ಗುರುಗಳಿಗೆ ಮಹತ್ವದ ಸ್ಥಾನವಿದೆ. ಅವರನ್ನು ದೇವರಿಗೆ ಸಮನಾಗಿ ಭಕ್ತಿ, ಗೌರವದಿಂದ ಕಾಣಲಾಗುತ್ತದೆ. ಬಾಳಿನಲ್ಲಿ ತಂದೆ-ತಾಯಿಗಿರುವಷ್ಟು ಗೌರವವನ್ನೇ ಗುರುಗಳಿಗೆ ನೀಡಲಾಗುತ್ತದೆ. ನಮ್ಮೆಲ್ಲರ ಬದುಕು ನಿರ್ಮಾಣ ಮಾಡುವಲ್ಲಿ ತಂದೆ- ತಾಯಿಯರ ಪಾಲು ಎಷ್ಟು ಇದೆಯೋ ಅಷ್ಟೇ ಪಾಲು ಗುರುಗಳದ್ದೂ ಇದೆ. ಗುರುಗಳು ಶ್ರೇಷ್ಠ ವ್ಯಕ್ತಿತ್ವಗಳ ನಿರ್ವತೃಗಳು.

ಗುರುಗಳು ಎಂದಾಕ್ಷಣ ಮನದಲ್ಲಿ ಗೌರವ, ಪ್ರೀತಿಯ ಭಾವ ಒಡಮೂಡುತ್ತದೆ. ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ಗುರುಗಳ ಪಾತ್ರ ಬಹಳಷ್ಟಿರುತ್ತದೆ. ತನ್ನ ಪ್ರಯತ್ನ, ಪರಿಶ್ರಮದ ಜೊತೆಗೆ ಗುರುಗಳ ಮಾರ್ಗದರ್ಶನದಿಂದ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮುಂದೆ ಗುರಿ, ಹಿಂದೆ ಗುರು ಇದ್ದಾಗ ಯಶಸ್ಸು ಬೆನ್ನು ಹತ್ತುತ್ತದೆ. ಅತ್ತ ಬದುಕಿಗೊಂದು ಗುರಿಯೂ ಇಲ್ಲ, ಇತ್ತ ಬದುಕಿಗೆ ಪಥ ತೋರುವ ಗುರುವೂ ಇಲ್ಲದಿದ್ದರೆ ವ್ಯಕ್ತಿಯ ಜೀವನ ವ್ಯರ್ಥವೆನಿಸುತ್ತದೆ. ಅಂತಹ ಜೀವನವು ಸೂತ್ರವಿಲ್ಲದ ಗಾಳಿಪಟದಂತೆ, ನಾವಿಕನಿಲ್ಲದ ದೋಣಿಯಂತೆ ಆಗುವುದು ನಿಶ್ಚಿತ.

ಹಾಗಾದರೆ ಗುರು ಎಂದರೆ ಯಾರು? ನಮ್ಮ ಜೀವನದ ಪಯಣದಲ್ಲಿ ಅನೇಕರನ್ನು ನಾವು ಗುರುಗಳೆಂದು ಕರೆಯುತ್ತೇವೆ. ಅತ್ಯಂತ ಪ್ರಮುಖವಾದ ಮೊದಲು ಗುರು ಎಂದರೆ ತಾಯಿ. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು. ಹೆತ್ತವರು ಮಕ್ಕಳನ್ನು ಆರೈಕೆ ಮಾಡಿ ಸಲಹುವ ಜೊತೆ-ಜೊತೆಗೆ ಸಂಸ್ಕಾರವನ್ನು ನೀಡುತ್ತಾರೆ. ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕಾಗಿ ಗುರುಕುಲ ಪದ್ಧತಿಯಿತ್ತು. ಮಕ್ಕಳನ್ನು ಅಲ್ಲಿಗೆ ಕಳುಹಿಸಿ, ಅಲ್ಲಿ ಗುರು ಪತ್ನಿ ಸಮೇತರಾಗಿ ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಜೀವನ ಕೌಶಲ, ಮೌಲ್ಯ ಶಿಕ್ಷಣಗಳನ್ನೆಲ್ಲ ಧಾರೆಯೆರೆಯುತ್ತಿದ್ದರು. ಕಾಲ ಕ್ರಮೇಣ ಶಿಕ್ಷಣ ವ್ಯವಸ್ಥೆಯಲ್ಲೂ ಸಾಕಷ್ಟು ಮಾರ್ಪಾಡುಗಳಾಗಿ ಇಂದು ಆಧುನಿಕ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ.

ಶಾಲಾ ಜೀವನದಲ್ಲಿ ಮಾತ್ರವಲ್ಲದೆ ಬದುಕಿನ ವಿವಿಧ ಘಟ್ಟಗಳಲ್ಲಿ ಅನೇಕರು ಗುರುಗಳಾಗಿ ದಾರಿ ತೋರುತ್ತಾರೆ. ಒಂದಲ್ಲ ಒಂದು ವಿಚಾರವನ್ನು ಹೇಳಿಕೊಟ್ಟು, ತಪ್ಪನ್ನು ತಿದ್ದಿ, ಸರಿದಾರಿಯಲ್ಲಿ ಮುನ್ನಡೆಯಲು ಪ್ರೇರಣೆಯಾಗುತ್ತಾರೆ. ಹೀಗೆ ಅನೇಕರು ಗುರುಗಳ ಪಾತ್ರ ವಹಿಸಿದರೂ ನೆನಪಿನಲ್ಲಿ ಉಳಿಯುವವರು ಕೆಲವೇ ಕೆಲವು ಗುರುಗಳು ಮಾತ್ರ. ಬದುಕಿನಲ್ಲಿ ಉತ್ತಮ ಗುರುಗಳು ಸಿಕ್ಕಿದರಷ್ಟೇ ಮಾತ್ರವಲ್ಲ ಗುರುಗಳಿಗೆ ಯೋಗ್ಯ ಶಿಷ್ಯನೂ ದೊರೆಯುವುದು ಅಷ್ಟೇ ಮುಖ್ಯ.

ಮಹಾಭಾರತದಲ್ಲಿ ಅರ್ಜುನನಿಗೆ ದ್ರೋಣಾಚಾರ್ಯರು ಗುರುಗಳು. ಹಾಗೆಯೇ ಭಗವದ್ಗೀತೆ ಬೋಧಿಸಿ ಮಾರ್ಗದರ್ಶನ ನೀಡಿದ ಕೃಷ್ಣನೂ ಗುರುವೇ ಆಗಿದ್ದಾನೆ. ಒಟ್ಟಿನಲ್ಲಿ ಗುರು ಎಂದರೆ ಅಂಧಕಾರವನ್ನು ಹೋಗಲಾಡಿಸಿ ಸನ್ಮಾರ್ಗದ ದೀವಿಗೆ ಹಿಡಿಯುವವನು. ಇಂತಹ ಗುರುಗಳಿಗೆ ಶಿಷ್ಯಂದಿರು ಪ್ರೀತಿ ಅಥವಾ ಗೌರವಪೂರ್ವಕವಾಗಿ ಗುರುದಕ್ಷಿಣೆ ನೀಡುವುದೂ ಇದೆ.

ಹಿಂದಿನ ಕಾಲದಲ್ಲಿ ರಾಜ ಮಹಾರಾಜರ ಮಕ್ಕಳು ಗುರುದಕ್ಷಿಣೆಯಾಗಿ ಒಂದಷ್ಟು ಭೂಮಿಯನ್ನು, ಗೋವು, ಸಂಪತ್ತುಗಳನ್ನು ನೀಡುತ್ತಿದ್ದರು. ಇತರರು ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಏನಾದರೊಂದನ್ನು ಕೊಡುತ್ತಿದ್ದರು. ಈಗಲೂ ಗುರುದಕ್ಷಿಣೆಯ ಪರಿಪಾಠ ಇಲ್ಲದಿದ್ದರೂ ಮಕ್ಕಳೆಲ್ಲ ತಮ್ಮ ಪ್ರೀತಿಯ ಗುರುಗಳಿಗೆ ಉಡುಗೊರೆಯನ್ನು ನೀಡುವುದುಂಟು. ಶಾಲೆ-ಕಾಲೇಜು ಮುಗಿಸಿ ಬೀಳ್ಕೊಡುವಾಗ ಎಲ್ಲರೂ ಅಥವಾ ವೈಯಕ್ತಿಕವಾಗಿ ಗುರುಗಳಿಗೆ ಅಥವಾ ಶಾಲೆಗಳಿಗೆ ನೆನಪಿನ ಕಾಣಿಕೆ ನೀಡಿ ತಾವು ಕಳೆದ ಸಮಯವನ್ನು ಅವಿಸ್ಮರಣೀಯವಾಗಿಸುತ್ತಾರೆ.

ಮಹಾಭಾರತದಲ್ಲಿ ದ್ರೋಣಾಚಾರ್ಯರು ತಮ್ಮ ಶಿಷ್ಯರಾದ ಕೌರವ ಮತ್ತು ಪಾಂಡವರಲ್ಲಿ ಒಂದು ವಿಶೇಷವಾದ ಗುರುದಕ್ಷಿಣೆಯನ್ನು ಕೇಳುತ್ತಾರೆ. ಆ ಕಥೆಯ ಹಿನ್ನೆಲೆ ರೋಚಕವಾಗಿದೆ. ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ದ್ರುಪದ ಮತ್ತು ದ್ರೋಣರು ಇಬ್ಬರೂ ಉತ್ತಮ ಸ್ನೇಹಿತರು. ಒಮ್ಮೆ ದ್ರುಪದನು ದ್ರೋಣಾಚಾರ್ಯರ ಬಳಿ ನಾನು ರಾಜನಾದಾಗ ನನ್ನೊಂದಿಗೆ ನೀನು ಇರಬೇಕು ಎಂದು ಕೇಳಿಕೊಂಡನು. ನಿನಗೂ ನನ್ನ ರಾಜ್ಯದಲ್ಲಿ ಸಮಾನ ಹಕ್ಕು ಇದೆ ಎಂದು ಹೇಳುತ್ತಾನೆ. ದ್ರೋಣರೂ ಒಪ್ಪಿಕೊಂಡರು. ಮುಂದೆ ದ್ರುಪದ ಪಾಂಚಾಲ ದೇಶದ ರಾಜನಾದ.

ಇತ್ತ ದ್ರೋಣಾಚಾರ್ಯರು ತಂದೆಯ ಆಶ್ರಮದಲ್ಲಿ ಇದ್ದರು. ಮುಂದೆ ಅವರು ಕೃಪಿಯನ್ನು ವಿವಾಹವಾಗಿ ಅಶ್ವತ್ಥಾಮನನ್ನು ಪುತ್ರನನ್ನಾಗಿ ಪಡೆದರು. ಆ ಹೊತ್ತಿಗೆ ದ್ರೋಣಾಚಾರ್ಯರಿಗೆ ತೀರಾ ಬಡತನವಿತ್ತು. ಆಶ್ರಮದಲ್ಲಿ ಹಸುಗಳು ಇರಲಿಲ್ಲ. ಪುತ್ರನಿಗೆ ಹಾಲು ಕೊಡುವುದಕ್ಕೂ ಪರದಾಡುವ ಸ್ಥಿತಿ ಇತ್ತು. ಬಾಲ್ಯದಲ್ಲಿ ಮಾಡಿದ ವಾಗ್ದಾನ ಮನಸ್ಸಿನಲ್ಲಿಟ್ಟುಕೊಂಡು ಸಹಾಯಕ್ಕಾಗಿ ರಾಜನಾದ ದ್ರುಪದನನ್ನು ಭೇಟಿಯಾಗಲು ಹೋದರು. ಆದರೆ ದ್ರುಪದ ಗೆಳೆಯನೆಂದೂ ನೋಡದೆ ಅವಮಾನಿಸಿ ಕಳುಹಿಸಿದ. ದ್ರುಪದನಿಂದ ತನಗೆ ಆದ ಅವಮಾನದ ಸೇಡು ತೀರಿಸಿಕೊಳ್ಳಲು ಹಾಗೂ ಆತನ ಅಹಂಕಾರಕ್ಕೆ ತಕ್ಕ ಪಾಠ ಕಲಿಸಲು ಸೂಕ್ತ ಕಾಲ ತನಗೆ ಒದಗಿ ಬರುವುದೆಂದು ನಿಶ್ಚಯಿಸಿದ ದ್ರೋಣರು, ಅಲ್ಲಿಂದ ಹಸ್ತಿನಾಪುರಕ್ಕೆ ಬಂದರು.

ಅಲ್ಲಿ ಅವರಿಗೆ ರಾಜಾತಿಥ್ಯ ದೊರೆತು ಕೌರವರ ಮತ್ತು ಪಾಂಡವರ ಗುರುಗಳಾಗಿ ನೇಮಿಸಲ್ಪಟ್ಟರು ಹಾಗೂ ಅವರಿಗೆ ವಿದ್ಯೆಯನ್ನು ಕಲಿಸಿಕೊಟ್ಟರು. ವರ್ಷಗಳು ಉರುಳಿದವು. ಕೌರವ ಪಾಂಡವರ ವಿದ್ಯಾಭ್ಯಾಸ ಪೂರ್ಣಗೊಂಡ ಅಂಗವಾಗಿ ಗುರುಗಳಿಗೆ ಗುರುದಕ್ಷಿಣೆ ಕೊಡುವ ಸಂಪ್ರದಾಯ. ಆಗ ದ್ರೋಣಾಚಾರ್ಯರು ತನಗೆ ಗುರುದಕ್ಷಿಣೆಯಾಗಿ ರಾಜ ದ್ರುಪದನನ್ನು ಸೆರೆಯಾಳಾಗಿ ಕರೆತರಲು ಹೇಳಿದರು. ಅದರಂತೆ ಪಾಂಡವರು ರಾಜ ದ್ರುಪದನನ್ನು ಸೆರೆಹಿಡಿದು ಗುರು ದ್ರೋಣಾಚಾರ್ಯರ ಬಳಿ ಕರೆತಂದರು. ದ್ರೋಣಾಚಾರ್ಯರು ದ್ರುಪದನ ರಾಜ್ಯದಲ್ಲಿ ಅರ್ಧ ರಾಜ್ಯವನ್ನು ಆತನಿಗೆ ಹಿಂದಿರುಗಿಸಿ ಉಳಿದರ್ಧವನ್ನು ತಮಗಾಗಿ ಇಟ್ಟುಕೊಂಡರು. ಹೀಗೆ ಗುರು ದ್ರೋಣರು ವಿಶೇಷ ರೀತಿಯಲ್ಲಿ ಗುರುದಕ್ಷಿಣೆ ಪಡೆದರು ಮತ್ತು ದ್ರುಪದನ ಅಹಂಕಾರಕ್ಕೆ ತಕ್ಕ ಶಾಸ್ತಿ ಮಾಡಿದರು.

ಏಕಲವ್ಯನ ಕಥೆಯಲ್ಲೂ ಗುರು ದ್ರೋಣರು ಏಕಲವ್ಯನ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ಪಡೆದ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಈ ಸಂದರ್ಭಗಳಲ್ಲಿ ಗುರುಗಳು ಅಧಿಕಾರಯುತವಾಗಿ ಗುರು ದಕ್ಷಿಣೆಯನ್ನು ಪಡೆದಿದ್ದರೆ ಇನ್ನೂ ಅನೇಕ ಸಂದರ್ಭಗಳಲ್ಲಿ ಗುರುವರ್ಯರು ಗುರುದಕ್ಷಿಣೆಯನ್ನು ನಿರಾಕರಿಸಿದ ಸಾಕಷ್ಟು ಉದಾಹರಣೆಗಳಿವೆ. ಒಬ್ಬ ಯುವಕ ಗುರುಗಳಿಂದ ಅಪಾರ ಜ್ಞಾನ ಪಡೆದುಕೊಂಡ. ತನಗೆ ಜ್ಞಾನ ಒದಗಿಸಿದ ಗುರುಗಳಿಗೆ ಗುರುದಕ್ಷಿಣೆ ನೀಡಬೇಕು ಎಂದುಕೊಂಡ. ‘ಗುರುಗಳೇ ನಾನು ನಿಮಗೆ ಯಾರೂ ನೀಡದ ಬೆಲೆ ಬಾಳುವ ವಸ್ತುವನ್ನು ಗುರುದಕ್ಷಿಣೆಯಾಗಿ ನೀಡುವೆ ಸ್ವೀಕರಿಸಬೇಕು’ ಎಂದು ವಿನಂತಿಸಿದ.

ಆತನ ಮಾತಿನಿಂದ ಗುರುಗಳಿಗೆ ಆತನೊಳಗೆ ಅಡಗಿದ್ದ ಅಹಂಕಾರದ ಅರಿವಾಯಿತು. ತಕ್ಷಣ ಗುರುಗಳು ತನಗೆ ಬೆಲೆ ಬಾಳುವ ಯಾವುದೇ ವಸ್ತುಗಳೂ ಬೇಡ, ಯಾವುದಕ್ಕೂ ಪ್ರಯೋಜನವಿಲ್ಲದ ವಸ್ತುವೊಂದನ್ನು ಗುರುದಕ್ಷಿಣೆಯಾಗಿ ನೀಡಬೇಕು. ಅದೇ ನನಗೆ ದೊಡ್ಡ ಗುರುದಕ್ಷಿಣೆ ಎಂದರು.

ಆತನಿಗೆ ಏನು ಮಾಡಬೇಕು ಎಂದು ತೋಚದೆ ಗುರುಗಳು ಹೇಳಿದಂತೆ ಪ್ರಯೋಜನವಿಲ್ಲದ ವಸ್ತುವನ್ನು ಹುಡುಕಲು ಪ್ರಾರಂಭ ಮಾಡಿದ. ಕೆಲವು ದಿನ ಕಳೆದವು. ನಿಷ್ಪ›ಯೋಜಕ ವಸ್ತುವಿನ ಹುಡುಕಾಟ ತೀವ್ರವಾಗಿ ನಡೆಯಿತು. ಕಲ್ಲುಗಳನ್ನು ಕಂಡ, ಮುಂದೆ ಶಿಲೆಯಾಗುತ್ತವೆ, ಅವು ನಿಷ್ಪ›ಯೋಜಕವಲ್ಲ ಎಂದು ಅರಿವಾಯಿತು. ಹೀಗೆ ಅನೇಕ ವಸ್ತುಗಳು ಅವನಿಗೆ ಕಾಣಸಿಕ್ಕವು. ಎಲ್ಲದರಲ್ಲೂ ಒಂದೊಂದು ವಿಶೇಷವನ್ನು ಕಂಡ. ನಿಷ್ಪ›ಯೋಜಕ ವಸ್ತು ಒಂದೂ ಸಿಗಲಿಲ್ಲ.

ಪ್ರಕೃತಿಯ ಎಲ್ಲ ವಸ್ತುಗಳಲ್ಲೂ ಒಂದೊಂದು ವಿಶೇಷಗಳನ್ನು ಆತ ಕಂಡ. ಎಲ್ಲವೂ ಅವುಗಳ ವ್ಯಾಪ್ತಿಯಲ್ಲಿ ಪ್ರಯೋಜನಕಾರಿಯಾಗಿದ್ದವು. ‘ಗುರುಗಳು ಪ್ರಯೋಜನಕ್ಕೆ ಬಾರದ ವಸ್ತು ಬೇಕೆಂದಿದ್ದಾರೆ ಏನು ಮಾಡುವುದು? ಹೇಗೆ? ಎಲ್ಲಿಂದ ತಂದುಕೊಡುವುದು’ ಎಂದು ಚಿಂತಿಸತೊಡಗಿದ. ಮುಂದೇನು ಮಾಡುವುದು ಎಂದು ತಿಳಿಯದೆ, ಗುರಗಳ ಬಳಿ ಹೋಗಿ, ತಾನು ಸೋತು ಹೋದೆ ಎಂದ. ಎಷ್ಟೇ ಹುಡುಕಿದರೂ, ಪ್ರಯೋಜನವಿರದ ವಸ್ತು ದೊರೆಯಲಿಲ್ಲ, ಹಾಗಾಗಿ ತನ್ನಿಂದ ಗುರುಗಳ ಇಚ್ಛೆಯ ದಕ್ಷಿಣೆ ನೀಡಲು ಸಾಧ್ಯವಾಗಲಿಲ್ಲ ಕ್ಷಮಿಸಿ ಎಂದ. ಆಗ ಗುರುಗಳು ಮುಗುಳ್ನಕ್ಕರು.

ಶಿಷ್ಯನನ್ನು ತನ್ನ ಬಳಿ ಕರೆದು ‘ನಿಷ್ಪ›ಯೋಜಕ ವಸ್ತುಗಳು ಎಂದರೆ ಯಾವುದು ಯಾರಿಗೂ ಒಳ್ಳೆಯದನ್ನು ಮಾಡದ ವಸ್ತುವಾಗಿದೆ. ನಿನ್ನಲ್ಲಿ ಗುರುದಕ್ಷಿಣೆ ನೀಡುವ ಬಗ್ಗೆ ಪ್ರೀತಿ ಇರಲಿಲ್ಲ, ಆದರೆ ಎಲ್ಲರಿಗಿಂತ ಶ್ರೇಷ್ಠವಾದ ಗುರುದಕ್ಷಿಣೆ ನೀಡಬೇಕು ಎಂಬ ಅಹಂಕಾರವಿತ್ತು. ಇತರರನ್ನು ಕೀಳಾಗಿ ಅತ್ಯಲ್ಪ ಎಂದು ಪರಿಗಣಿಸುವ ಅಹಂಕಾರವೇ ನಿಷ್ಪ›ಯೋಜಕ. ಅಹಂಕಾರವನ್ನು ಬಿಟ್ಟು ಬಿಡು. ಆಗ ನೀನು ಶ್ರೇಷ್ಠನಾಗುತ್ತೀಯ’ ಎಂದರು. ಆತನಲ್ಲಿ ತಪ್ಪಿತಸ್ಥ ಭಾವನೆ ಉಂಟಾಯಿತು. ಗುರುಗಳ ಮಾತಿನಂತೆ ಅಹಂಕಾರ ಬಿಟ್ಟು ಮುನ್ನಡೆದ.

ಇಂದಿನ ಕಾಲದಲ್ಲಿ ಶಿಕ್ಷಣದ ಪದ್ಧತಿ ಸಾಕಷ್ಟು ಬದಲಾಗಿದೆ. ಅಭಿವೃದ್ಧಿಯನ್ನು ಕಂಡಿದೆ. ಶಾಲೆಗೆ ಹೋಗಿ ಶಿಕ್ಷಣ ಕಲಿತು ಒಳ್ಳೆಯ ಅಂಕ ಗಳಿಸಿ ಉತ್ತಮ ಕೆಲಸ ಗಿಟ್ಟಿಸಿಕೊಳ್ಳುವುದು, ತಮ್ಮ ಶಾಲೆ ಉತ್ತಮ ಹೆಸರು ಪಡೆಯುವುದು, ರ್ಯಾಂಕ್ ಗಳಿಸುವುದಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರ ಜೊತೆಗೆ ಮಕ್ಕಳು ಮತ್ತು ಗುರುಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಕಾರ್ಯವು ನಿರಂತರವಾಗಿ ನಡೆದೇ ಇದೆ. ಗುರು ಶಿಷ್ಯರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಬಾರದು. ಜಾತಿ, ಮತ, ಪಂಥ, ಕುಲ, ಅಂತಸ್ತು ಹೀಗೆ ಯಾವುದೇ ರೀತಿಯಲ್ಲೂ ಭೇದಭಾವ ಇರಲೇಬಾರದು. ಪಠ್ಯ ಶಿಕ್ಷಣದ ಜೊತೆಗೆ ಮೌಲ್ಯ, ಜೀವನ ಶಿಕ್ಷಣವೂ ಶಾಲಾ-ಕಾಲೇಜುಗಳಲ್ಲಿ ದೊರಕಿದಾಗ ಅದು ಮಕ್ಕಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.

ಆದರೆ ಕೆಲವೊಂದು ಅಹಿತಕರ ಘಟನೆಗಳು ಮನಸ್ಸಿಗೆ ಬೇಸರವನ್ನು ಉಂಟು ಮಾಡುತ್ತವೆ. ಶಾಲಾ ಮಕ್ಕಳನ್ನು ಕ್ರೂರವಾಗಿ ಹಿಂಸಿಸುವ ಕೆಲವು ಪ್ರವೃತ್ತಿಗಳು ಕೆಲವೆಡೆಯಾದರೆ, ತಮಗೆ ಪಾಠ ಮಾಡುವ ಶಿಕ್ಷಕರ ಮೇಲೆಯೇ ಹಲ್ಲೆ ಮಾಡುವ ಘಟನೆಗಳು ಅಲ್ಲಲ್ಲಿ ನಡೆಯುವ ಬಗ್ಗೆ ವರದಿಯಾಗುತ್ತದೆ. ಇಂತಹ ಸನ್ನಿವೇಶಗಳು ಗುರು- ಶಿಷ್ಯರ ನಡುವಿನ ಬಾಂಧವ್ಯಕ್ಕೆ ಮಸಿ ಎರಚಿದಂತಾಗುತ್ತದೆ.

ಆದರೆ ತಮ್ಮ ಗುರುಗಳಿಂದಾಗಿಯೇ ಜಗದ್ವಿಖ್ಯಾತರಾದ ಅನೇಕರು ನಮ್ಮ-ನಿಮ್ಮ ನಡುವೆ ಇದ್ದಾರೆ. ಸ್ವಾಮಿ ವಿವೇಕಾನಂದರು ಗುರುಗಳಾದ ರಾಮಕೃಷ್ಣರಿಂದ ಮಾರ್ಗದರ್ಶನ ಪಡೆದಿದ್ದರು. ಅನೇಕ ಮಹನಿಯರು ತಮ್ಮ ಗುರುಗಳ ನೆರವಿನಿಂದ ಅತ್ಯದ್ಭುತ ಸಾಧನೆಗಳನ್ನು ಮಾಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಂತಹ ಸಾಧಕರುಗಳಿಂದ ಗುರುಗಳೂ ಖ್ಯಾತರಾಗಿದ್ದಾರೆ.

ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಶಿಕ್ಷಣವನ್ನು ಹಾಗೂ ಶಿಕ್ಷಕರನ್ನು ಉತ್ತಮವಾಗಿ ರೂಪಿಸಬೇಕು. ಆಗ ದೇಶ ತನ್ನಿಂದ ತಾನೇ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಣಲು ಸಾಧ್ಯ. ಯಾಕೆಂದರೆ ಇಂಜಿನಿಯರ್, ಡಾಕ್ಟರ್, ಕಾರ್ವಿುಕ ಹೀಗೆ ಎಲ್ಲರೂ ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಬಲ್ಲರು. ಆದರೆ ಅಂತಹ ವ್ಯಕ್ತಿಗಳನ್ನು ನಿಜವಾಗಿ ರೂಪಿಸುವವರು ಶಿಕ್ಷಕರೇ ಎಂಬುದನ್ನು ಮರೆಯಬಾರದು.

ಗುರುಗಳಿಗೆ ನೀಡುವ ಅತ್ಯಮೂಲ್ಯ ಸ್ಮರಣಿಕೆ, ಉಡುಗೊರೆಗಳು ಮಾತ್ರ ಗುರುಕಾಣಿಕೆಯಲ್ಲ. ಗುರುಗಳು ಕಲಿಸಿದ ಪಾಠವನ್ನು ಸರಿಯಾಗಿ ಅರ್ಥೈಸಿಕೊಂಡು ಒಳ್ಳೆಯ ಸಂಸ್ಕಾರ ಕಲಿತು ಸಮಾಜದ ಅಭ್ಯುದಯಕ್ಕೆ ಶ್ರಮಿಸಿ, ಉತ್ತಮ ಜೀವನ ಸಾಗಿಸುವುದೇ ಗುರುಗಳಿಗೆ ಶಿಷ್ಯರು ನೀಡುವ ನಿಜವಾದ ಗುರುದಕ್ಷಿಣೆ. ಗುರುವು ತನ್ನ ಶಿಷ್ಯನಿಂದ ಬಯಸುವುದು ಅದನ್ನೇ. (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)