ಅಂಕಣ

ಇಂದು ಆಹಾರ ದಿನ: ಉತ್ತಮ ಆಹಾರದಿಂದ ಒಳ್ಳೆಯ ಆರೋಗ್ಯ

| ಡಾ.ಬನು ದೇಶಪಾಂಡೆ

ಆಹಾರ ಮಾನವನ ಮೂಲಭೂತ ಹಕ್ಕು, ಇದು ಸಾರ್ವಕಾಲಿಕ ಸತ್ಯ. ಪ್ರತಿಯೊಬ್ಬ ಪುರುಷ, ಮಹಿಳೆ, ಮಗುವಿಗೆ ಎಲ್ಲಕಾಲಕ್ಕೂ ಗುಣಮಟ್ಟದ ರುಚಿಕರ ಹಾಗೂ ವೈವಿಧ್ಯಮಯವಾದ ಆಹಾರ ದೊರೆಯಬೇಕು. ಆಹಾರ ಶುಚಿ-ರುಚಿಯಾಗಿರಬೇಕು. ಅದು ಪೌಷ್ಟಿಕವಾಗಿಯೂ ಇರಬೇಕು. ಪ್ರಾಕೃತಿಕ ವಿಕೋಪ, ಶೋಷಣೆ, ಆರ್ಥಿಕ ದುರ್ಬಲತೆ, ಅಂಗವಿಕಲತೆಯಿಂದ ಯಾರಿಗಾದರೂ ಆಹಾರದ ಕೊರತೆಯಾದಲ್ಲಿ ಸರ್ಕಾರ ಅವರಿಗೆ ಸೂಕ್ತ ಕಾರ್ಯಕ್ರಮಗಳಿಂದ ಸಾಕಷ್ಟು ಆಹಾರ ಒದಗಿಸಲು ಸಹಾಯ ಮಾಡುತ್ತದೆ. ಹಸಿವು, ಅಪೌಷ್ಟಿಕತೆ ಕೇವಲ ಆಹಾರದ ಕೊರತೆಯಿಂದ ಉಂಟಾಗುವುದಲ್ಲ. ಅದರ ಕಾರಣ ಅನೇಕ. ಬಡತನ, ಅಜ್ಞಾನ, ನಿರಕ್ಷರತೆ, ಆರ್ಥಿಕ ಅಸಮತೋಲನ, ಆರೋಗ್ಯ ಸೌಲಭ್ಯದ ಕೊರತೆ, ಮುಂತಾದವು.

ವಿಶ್ವ ಆಹಾರ ದಿನದ ಉದ್ದೇಶ ಜಗತ್ತಿನೆಲ್ಲೆಡೆ ಆಹಾರ ಸುಭದ್ರತೆಯನ್ನು ಒದಗಿಸುವಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಪೋಷಣಾ ಖಾತ್ರಿಯನ್ನು ಪ್ರತಿ ವ್ಯಕ್ತಿಗೂ ಒದಗಿಸುವ ಸೂಕ್ತ ಮಾಹಿತಿ-ತಂತ್ರಜ್ಞಾನಗಳ ಅನುಷ್ಠಾನ ಹಾಗೂ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದು. ಇತ್ತೀಚೆಗೆ ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ, ಕುಗ್ಗುತ್ತಿರುವ ಕೃಷಿಭೂಮಿ, ನಶಿಸುತ್ತಿರುವ ಕಾಡು, ಬದಲಾಗುತ್ತಿರುವ ಜೀವನಶೈಲಿಯಿಂದ ಆಹಾರ ಸೇವನೆ ಹಾಗೂ ಪೋಷಣಾ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತಿವೆ. ಇಂತಹ ಸನ್ನಿವೇಶದಲ್ಲಿ ಜಗವನ್ನು ಹಸಿರನ್ನಾಗಿಸುವ ಸಂಕಲ್ಪ ಸಾಮಯಿಕವಾಗಿದೆ. ಈ ನಿಟ್ಟಿನಲ್ಲಿ ‘ಒಂದುಗೂಡಿ ಬೆಳೆಯಿರಿ, ಪೋಷಿಸಿರಿ, ಸುಸ್ಥಿರತೆ ಕಾಪಾಡಿರಿ: ನಮ್ಮ ಕ್ರಿಯೆಗಳು- ನಮ್ಮ ಭವಿಷ್ಯ’ (Grow, nourish, sustain. Together. Our actions are our future.) ಎನ್ನುವ ಈ ವರ್ಷದ ವಿಶ್ವ ಆಹಾರ ದಿನಾಚರಣೆಯ ಸಂಕಲ್ಪ ಸೂಕ್ತವಾಗಿದೆ.

ತೋಟಗಾರಿಕಾ ಬೆಳೆಗಳ ಉತ್ಪಾದನೆ ಹೆಚ್ಚಾಗುತ್ತಿದ್ದರೂ ಹಣ್ಣು ಮತ್ತು ತರಕಾರಿಗಳ ಸೇವನೆಯ ಪ್ರಮಾಣ ಮಧ್ಯಮ ಹಾಗೂ ಬಡವರ್ಗದ ಜನರಲ್ಲಿ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಇದರಿಂದ ಅಪೌಷ್ಟಿಕತೆಯ ಸಮಸ್ಯೆ ಅಧಿಕಗೊಂಡು ಸೂಕ್ಷ್ಮ ಪೋಷಕಾಂಶಗಳಾದ ಜೀವಸತ್ವ ಹಾಗೂ ಖನಿಜಾಂಶಗಳ ಕೊರತೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಆದ್ದರಿಂದ ಹಣ್ಣು, ತರಕಾರಿಗಳನ್ನೊಳಗೊಂಡ ಆಹಾರ ಬೆಳೆಗಳ ಸುಸ್ಥಿರ ಕೃಷಿ ಈ ಸಮಸ್ಯೆಗೆ ಪರಿಹಾರವಾಗಬಹುದು. ಈ ನಿಟ್ಟಿನಲ್ಲಿ ಮನೆಯ ಬಳಿ ಲಭ್ಯವಿರುವ ಸ್ಥಳದಲ್ಲಿ ಚಿಕ್ಕ ಕೈತೋಟಗಳನ್ನು ಬೆಳೆಯಲು ಮನಸ್ಸು ಮಾಡಿದರೆ ಆಹಾರ ಸುಭದ್ರತೆಗೆ ನಾಂದಿ ಹಾಡಿದಂತಾಗುತ್ತದೆ.

ಕೈತೋಟದ ನಿರ್ವಹಣೆ ಸ್ವಲ್ಪ ಕಷ್ಟವೆನಿಸಿದರೂ ಶ್ರಮದಾಯಕವಲ್ಲ. ಬದಲಿಗೆ ಪ್ರಯೋಜನಕಾರಿಯೇ ಹೌದು. ಏಕೆಂದರೆ ಒಮ್ಮೆ ರೂಢಿಸಿಕೊಂಡರೆ ವರ್ಷಪೂರ್ತಿ ವಿವಿಧ ಬೆಳೆಗಳನ್ನು ಬೆಳೆದು ಪುಷ್ಟಿಕರ ಹಾಗೂ ವೈವಿಧ್ಯಮಯ ಆಹಾರ ತಯಾರಿಸಿ, ಕುಟುಂಬದ ಆರೋಗ್ಯವನ್ನು ಕಾಪಾಡಬಹುದು. ವರ್ಷಪೂರ್ತಿ ವಿವಿಧ ಬಗೆಯ ಹಣ್ಣು ಹಾಗೂ ತರಕಾರಿಗಳನ್ನು ಪಡೆಯಬಹುದು.

ಪೌಷ್ಟಿಕ ಆಹಾರದ ಕುರಿತು
ನಮ್ಮಆಹಾರದಲ್ಲಿ ಇರುವ ಮುಖ್ಯ ಪೋಷಕಾಂಶಗಳಾದ ಶಕ್ತಿ, ಸಾರಜನಕ ಹಾಗೂ ಶರ್ಕರಪಿಷ್ಟ ಇವು ದೈನಂದಿನ ಚಟುವಟಿಕೆಗಳಿಗೆ ಶಕ್ತಿ ನೀಡಿ, ಉತ್ತಮ ಬೆಳವಣಿಗೆಗೆ ಅನುವು ಮಾಡಿಕೊಡುತ್ತವೆ. ಜೀವಸತ್ವ ಮತ್ತು ಖನಿಜಾಂಶಗಳು ರೋಗ ನಿರೋಧಕ ಶಕ್ತಿ ಮತ್ತು ಆರೋಗ್ಯದ ನಿರ್ವಹಣೆಗೆ ಸಹಾಯ ಮಾಡುತ್ತವೆ. ಹಣ್ಣು ಮತ್ತು ತರಕಾರಿಗಳಲ್ಲಿ ಇವು ಅಧಿಕ ಪ್ರಮಾಣದಲ್ಲಿರುತ್ತವೆ. ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವುದು ನಮ್ಮ ಹಿರಿಯರು ಮಾಡಿರುವ ಗಾದೆ. ಸರ್ವೇಸಾಮಾನ್ಯವಾಗಿ ಎಲ್ಲರೂ ತಿಳಿದಿರಬೇಕಾದ ಮೂಲಭೂತ ಸಂಗತಿ ಎಂದರೆ ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯಕ್ಕೆ ಕಾರಣ. ಪೌಷ್ಟಿಕ ಆಹಾರವು ಸ್ವಾಸ್ಥ್ಯ ಮತ್ತು ಬೆಳವಣಿಗೆಗೆ ಅತ್ಯವಶ್ಯಕ.
ಪೋಷಕಾಂಶ ಭರಿತ ಆಹಾರಗಳು
  • ಶಕ್ತಿ ಹಾಗೂ ಸಸಾರಜನಕ: ಧಾನ್ಯಗಳು, ಬೇಳೆಕಾಳುಗಳು, ಒಣಹಣ್ಣುಗಳು, ಮೀನು, ಮಾಂಸ ಮತ್ತು ಮೊಟ್ಟೆ
  • ಕಬ್ಬಿಣ: ಸೊಪ್ಪು ತರಕಾರಿಗಳು, ಹಣ್ಣುಗಳು, ಬೆಲ್ಲ, ಮಾಂಸ
  • ವಿಟಮಿನ್ ಎ : ಹಸಿರು ಸೊಪ್ಪುಗಳು, ಹಳದಿ ಮತ್ತು ಕೇಸರಿ ಬಣ್ಣದ ಹಣ್ಣು ತರಕಾರಿಗಳು, ಹೈನು ಉತ್ಪನ್ನಗಳು, ಮೀನು, ಮೊಟ್ಟೆ
  • ಸತು: ಧಾನ್ಯಗಳು, ಬೇಳೆಕಾಳು ಮತ್ತು ಎಣ್ಣೆಬೀಜಗಳು, ಮೀನು, ಮಾಂಸ ಮತ್ತು ಮೊಟ್ಟೆ
  • ವಿಟಮಿನ್ ಸಿ: ನಿಂಬೆ, ಕಿತ್ತಳೆಯಂತಹ ಜಂಬೀರ ಫಲಗಳು, ನೆಲ್ಲಿಕಾಯಿ, ಟೊಮ್ಯಾಟೊ, ಅನಾನಸ್.
ಆರೋಗ್ಯ ನಿರ್ವಹಣೆಗೆ ಸಲಹೆಗಳು
  • ದಿನವೂ ಸಮತೋಲಿತ ಆಹಾರ ಸೇವಿಸಿ.
  • ಪೋಷಕಾಂಶ ಭರಿತ ಆಹಾರಗಳಾದ ತರಕಾರಿ, ಸೊಪ್ಪುಗಳು, ಹಣ್ಣು ಹಾಗೂ ಮೊಳಕೆಯೊಡೆದ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ.
  • ಕಿರು ಧಾನ್ಯಗಳನ್ನೊಳಗೊಂಡ ಆಹಾರಗಳನ್ನು ಯಥೇಚ್ಛವಾಗಿ ಬಳಸಿ.
  • ನಿತ್ಯವೂ ವ್ಯಾಯಾಮ/ಯೋಗ/ಬಿರುಸಿನ ನಡಿಗೆಯುಳ್ಳ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳಿ.
  • ಆಹಾರಕ್ರಮ ತಪ್ಪಿಸಬೇಡಿ, ಹಸಿವಿನಿಂದಿರಬೇಡಿ, ಭಾರಿ ಭೋಜನ ಮಾಡಬೇಡಿ.

(ಲೇಖಕರು ಆಹಾರ ವಿಜ್ಞಾನ ಮತ್ತು ಪೋಷಣೆ ವಿಷಯದ ಸಹ ಪ್ರಾಧ್ಯಾಪಕರು)