ಅಂಕಣ

ಸವಾಲುಗಳ ನಡುವೆ ಮೇಲೇರುವುದೇ ಸಂಭ್ರಮ; ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. 1911ರಿಂದ ಆಚರಿಸಿಕೊಂಡು ಬರಲಾಗುತ್ತಿರುವ ಈ ದಿನಕ್ಕೀಗ 110ರ ಹರೆಯ. ಮಹಿಳೆಯರಿಗೆ ವಿವಿಧ ಕ್ಷೇತ್ರಗಳಲ್ಲಿ ಪುರುಷರಂತೆಯೇ ಸಮಾನ ಹಕ್ಕು ನೀಡಬೇಕೆಂದು ಕೋರಿ ಡೆನ್ಮಾರ್ಕ್​ನ ಕೋಪನ್​ಹೇಗನ್​ನಲ್ಲಿ ಶುರು ಮಾಡಲಾಗಿದ್ದ ಈ ದಿನದ ಆಶಯವು ಶತಮಾನದ ನಂತರ ಇಂದಿನ ದಿನಗಳಲ್ಲಿ ಈಡೇರಿದೆಯೆ? ಯಾವ ಮಟ್ಟಿಗೆ ಇದೆ ಇಂದಿನ ಮಹಿಳಾ ಸ್ಥಿತಿ? ಆಡಳಿತ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ಉನ್ನತ ಸ್ಥಾನವನ್ನು ಅಲಂಕರಿಸಿರುವುದು ನಿಜವಾದರೂ ವಸ್ತುಸ್ಥಿತಿ ಹೇಗಿದೆ? ಸಾಧಿಸಿದ್ದೇನು? ಸಾಧಿಸಬೇಕಿರುವುದು ಏನು? ಸಾಧಿಸಲು ಹೊರಟಾದ ಮೇಲೆ ಬರುವ ಸವಾಲುಗಳೇನು? ಇದನ್ನೆಲ್ಲಾ ತಿಳಿದುಕೊಳ್ಳುವ ಉದ್ದೇಶದಿಂದ ಆಡಳಿತ, ರಾಜಕೀಯ ಹಾಗೂ ಸಿನಿಮಾ ಈ ಮೂರು ಕ್ಷೇತ್ರಗಳ ಸಾಧಕಿಯರ ಜತೆ ನಡೆದ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ 24*7’ ಸಂವಾದದ ಸಂಪೂರ್ಣ ನೋಟ ಇಲ್ಲಿದೆ. ಆಡಳಿತ ವಿಭಾಗದಿಂದ ಆಡಳಿತ ಕ್ಷೇತ್ರದಿಂದ ಐಎಎಸ್ ಅಧಿಕಾರಿ ಡಾ. ಬಿ.ಆರ್. ಮಮತಾ, ರಾಜಕೀಯ ಕ್ಷೇತ್ರದಿಂದ ಶಾಸಕಿ ರೂಪಕಲಾ ಶಶಿಧರ್ ಹಾಗೂ ನಟನಾ ಕ್ಷೇತ್ರದಿಂದ ನಟಿ-ನಿರ್ದೇಶಕಿ ರೂಪಾ ಅಯ್ಯರ್ ಇಲ್ಲಿ ತಮ್ಮ ತಮ್ಮ ಕ್ಷೇತ್ರಗಳ ಮಹಿಳೆಯರ ಸ್ಥೂಲ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ. ವಿಜಯವಾಣಿ-ದಿಗ್ವಿಜಯದ ಮಹಿಳಾ ಸಿಬ್ಬಂದಿ ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಈ ಮೂವರು ಸಾಧಕಿಯರು.

ಸಾಧಕಿಯರ ಪರಿಚಯ

ರೂಪಕಲಾ ಶಶಿಧರ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪನವರ ಪುತ್ರಿ ರೂಪಕಲಾ ಶಶಿಧರ ಅವರು ಸಮಾಜ ಸೇವೆ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿ, 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಕೆಜಿಎಫ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯ ಏಕೈಕ ಮಹಿಳಾ ಶಾಸಕಿ ಆಗಿರುವ ಇವರು ಸುಮಾರು 15 ವರ್ಷಗಳಿಂದ ಆಶಾದೀಪ ಎಂಬ ಸಂಸ್ಥೆಯ ಮೂಲಕ ಗ್ರಾಮೀಣ ಪ್ರದೇಶದ ಬಡ ಮಹಿಳೆಯರ ಸಬಲೀಕರಣಕ್ಕೆ ಸಹಕರಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಹಠವಾದಿ, ಛಲವಾದಿ ಎಂದರೆ ಅತಿಶಯೋಕ್ತಿಯಾಗಲಾರದು. ರಾಜಕೀಯದ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಎಲ್ಲಾ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಕೆಜಿಎಫ್ ಸಮಗ್ರ ಅಭಿವೃದ್ಧಿಗೆ ವಿಶೇಷವಾಗಿ ಕೈಗಾರಿಕೆಗಳ ಸ್ಥಾಪನೆ ಮತ್ತು ಬಿಮೆಲ್ ಕಾರ್ಖಾನೆ ಖಾಸಗೀಕರಣದ ವಿರುದ್ಧ ಧ್ವನಿ ಎತ್ತಿದ್ದಾರೆ. ಪ್ರಗತಿಪರ ಚಿಂತಕರು, ಮಹಿಳೆಯರ ಸ್ವಾಭಿಮಾನದ ಬದುಕಿಗೆ ಸಂವಿಧಾನದ ಅಡಿಯಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲು ಆಸಕ್ತಿ ಹೊಂದಿದ್ದಾರೆ.

ಡಾ. ಬಿ.ಆರ್. ಮಮತಾ: ಸಕಾಲದ ಮಿಷನ್ ಡೈರೆಕ್ಟರ್ ಆಗಿರುವ ಡಾ.ಬಿ.ಆರ್. ಮಮತಾ, ಬೆಂಗಳೂರು ವಿವಿ ಯಿಂದ ಮಾಸ್ ಕಮ್ಯುನಿಕೇಷನ್ ಪದವಿ ಹಾಗೂ ಪಿಎಚ್​ಡಿ ಪಡೆದವರು. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿದ ಅವರು, ನಂತರ ವಾರ್ತಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇರ್ಪಡೆಯಾಗಿ ನಂತರದ ದಿನಗಳಲ್ಲಿ ಬಿಬಿಎಂಪಿ, ಕೆಯುಐಡಿಎಫ್, ಚುನಾವಣಾ ಆಯೋಗದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು. ಹತ್ತು ವರ್ಷ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿ, ನಂತರ ಐಎಎಸ್​ಗೆ ಬಡ್ತಿ ಪಡೆದ ಅವರು, ತುಮಕೂರು ಸಿಇಒ, ರಾಮನಗರ ಡಿಸಿ, ಜೀವನೋಪಾಯ ಮಿಷನ್​ನಲ್ಲಿ ಮಿಷನ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಜೀವನೋಪಾಯ ಮಿಷನ್​ನಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿರುವ ಅವರು ಈಗ ಸಕಾಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ರೂಪಾ ಅಯ್ಯರ್: ನೃತ್ಯ ಗುರುವಾಗಿ, ನಟಿಯಾಗಿ, ನಿರ್ದೇಶಕಿಯಾಗಿ, ಅಂಕಣಕಾರ್ತಿಯಾಗಿ, ಆಧ್ಯಾತ್ಮಿಕ ಚಿಂತಕಿಯಾಗಿ ಹೆಸರು ಮಾಡಿದವರು. ಇಂಡಿಯನ್ ಕ್ಲಾಸಿಕ್ ಆರ್ಟ್ಸ್ ಎಂಬ ಸಂಸ್ಥೆ ಹುಟ್ಟುಹಾಕಿ ಭರತನಾಟ್ಯ, ಕಥಕ್, ಒಡಿಸ್ಸಿ ಮುಂತಾದ ನೃತ್ಯ ಪ್ರಕಾರಗಳನ್ನು ಪಸರಿಸಿದ ಅವರು, ‘ದಾಟು’ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿ, ತಮ್ಮ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಏಡ್ಸ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅವರು ನಿರ್ದೇಶಿಸಿದ ‘ಮುಖಪುಟ’ ಚಿತ್ರವು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದರ ಜತೆಗೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ‘ಚಂದ್ರ’, ’ಕಲರ್ಸ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ರೂಪಾ, ಇತ್ತೀಚಿನ ದಿನಗಳಲ್ಲಿ ಹಲವು ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ‘ಆದರ್ಶ ರತ್ನ’, ‘ನಾಟ್ಯ ಸರಸ್ವತಿ’, ‘ಪದ್ಮಕಲಾಶ್ರೀ’ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಅನುಕಂಪ ಬೇಕಿಲ್ಲ, ಉತ್ತೇಜನ ಸಿಗಲಿ...

| ಡಾ. ಬಿ.ಆರ್. ಮಮತಾ ಐಎಎಸ್ ಅಧಿಕಾರಿ

ಮಹಿಳೆಯಾಗಿ ಹುಟ್ಟಿರುವುದೇ ಸಂಭ್ರಮ. ಜೀವನದಲ್ಲಿ ನೋವಾಗಲಿ, ನಲಿವಾಗಲಿ ಮಹಿಳೆಯರು ಪ್ರತಿ ದಿನ ಅದನ್ನು ಆಚರಣೆ ಮಾಡಿ ಸಂಭ್ರಮಿಸಬೇಕು. ಮಹಿಳೆಯರಿಗೆ ಅನುಕಂಪ ಬೇಕಿಲ್ಲ. ಪ್ರೋತ್ಸಾಹ ಮತ್ತು ಅವಕಾಶಗಳ ಅಗತ್ಯವಿದೆ. ಆಗ ಅವರೇ ಸ್ವಾವಲಂಬಿಗಳಾಗುತ್ತಾರೆ. ಅದಕ್ಕೇನು ನಾಯಕತ್ವದ ಹಿನ್ನೆಲೆ ಬೇಕೆಂದು ಇಲ್ಲ. ಕೋವಿಡ್ ಸಂದರ್ಭದಲ್ಲಿ ಕುಗ್ರಾಮಗಳಲ್ಲಿನ ಮಹಿಳೆಯರ ಸುಪ್ತಮನಸ್ಸಿನಲ್ಲಿದ್ದ ನಾಯಕತ್ವ ಜಾಗೃತಗೊಳ್ಳಲು ಸಹಕಾರಿಯಾಯಿತು. ಹುಣಸೂರು ಬಳಿಯ ಕಲ್ಲಹಳ್ಳಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನ ಅಭಿಯಾನದಡಿ ಸಂಜೀವಿನಿ ಕಾರ್ಯಕ್ರಮದ ಮೂಲಕ ನೀಡಿದ ತರಬೇತಿ ಹಾಗೂ ಆರ್ಥಿಕ ನೆರವು ಪಡೆದುಕೊಂಡ ಮಹಿಳೆಯರು ಸ್ವತಃ ಸಂಪನ್ಮೂಲಗಳನ್ನು ಸಂಗ್ರಹಿಸಿ ಸಂಕಷ್ಟದಲ್ಲಿರುವವರ ನೆರವಿಗಾದೆವು. ಕೋವಿಡ್ ಸಂದರ್ಭದಲ್ಲಿ ವ್ಯಕ್ತವಾದ ಹೊಗಳಿಕೆ ಹಾಗೂ ಪ್ರಶಂಸೆಗಳ ಶೇ. 50 ಪಾಲು ಗ್ರಾಮೀಣ ಪ್ರದೇಶಗಳ ಹಾಗೂ ಕುಗ್ರಾಮಗಳ ಕಡು ಬಡ ಮಹಿಳೆಯರಿಗೆ ಸಲ್ಲಬೇಕು. ಸಂಜೀವಿನಿ ಕಾರ್ಯಕ್ರಮದಡಿ 1.68 ಲಕ್ಷ ಸ್ವಸಹಾಯ ಗುಂಪುಗಳ ಮೂಲಕ 11 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕೋವಿಡ್ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸೋಂಕು ಪತ್ತೆ ಹಚ್ಚುವಲ್ಲಿ, ಸೋಂಕಿತರಿಗೆ ಚಿಕಿತ್ಸೆ ಒದಗಿಸುವಲ್ಲಿ, ಕ್ವಾರಂಟೈನ್​ಗೆ ಒಳಗಾದವರಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವರ್ಗಾವಣೆಯನ್ನು ಶಿಕ್ಷೆ ಎಂದು ಭಾವಿಸಬೇಡಿ: ವರ್ಗಾವಣೆಯನ್ನು ನಾನು ಸ್ವಾಗತಿಸುತ್ತೇನೆ. ಅದರಿಂದ ಹೊಸ ಹೊಸ ಹುದ್ದೆಗಳಿಗೆ ಹೋಗುವ ಹಾಗೂ ಹೊಸ ವಿಚಾರಗಳನ್ನು ತಿಳಿಯುವ ಅವಕಾಶ ದೊರೆಯುತ್ತದೆ. ಹಾಗಾಗಿ ವರ್ಗಾವಣೆಯನ್ನು ಯಾರೂ ಶಿಕ್ಷೆ ಎಂದು ಭಾವಿಸಬಾರದು. ಒಂದು ಹುದ್ದೆಯಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವಾಗ ವರ್ಗಾವಣೆ ಮಾಡಿದರೆ ಬಹಳ ಬೇಸರ ಆಗುತ್ತದೆ. ಆದರೆ ಮರುಕ್ಷಣವೇ ಹೊಸದೊಂದಕ್ಕೆ ಮುನ್ನಡಿ ಇಡಬೇಕಾಗುತ್ತದೆ. ಕೆಲ ಸಣ್ಣ ಪುಟ್ಟ ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ. ಕುಟುಂಬದವರಿಂದ ಕೆಲ ಸಮಯ ದೂರ ಉಳಿಯಬೇಕಾಗುತ್ತದೆ. ಅದನ್ನು ರಜೆ ದಿನಗಳಲ್ಲಿ ಸಂಭಾಳಿಸಿಕೊಂಡು ಹೋಗಬೇಕಾಗುತ್ತದೆ. ಯಾವುದೇ ಕೆಲಸದಲ್ಲಿ ನೂರಕ್ಕೆ ನೂರು ತೃಪ್ತಿ ಹೊಂದಲು ಸಾಧ್ಯವಿಲ್ಲ. ಅದನ್ನು ಸರಿದೂಗಿಸಿಕೊಂಡು ಹೋಗುವ ಗುಣ ಬೆಳಸಿಕೊಳ್ಳಬೇಕು.

  • ಪತ್ರಕರ್ತೆ ಹುದ್ದೆಯಿಂದ ಐಎಎಸ್ ಅಧಿಕಾರಿ ಮಟ್ಟಕ್ಕೆ ಹೋಗಿದ್ದೀರಿ. ಇಷ್ಟು ಉನ್ನತ ಹುದ್ದೆ ಏರಿದ ಮೇಲೆ ನಿಮಗೆ ಸಮಾನತೆ ಎನ್ನುವುದು ಸಿಕ್ಕಿದೆೆ ಎನಿಸುತ್ತದಾ?

ಒಳ್ಳೆಯ ಕುಟುಂಬದಿಂದ ಬಂದಿರುವ ಇವರು ರಾತ್ರಿಪಾಳಿಯಲ್ಲಿ ಕೆಲಸ ಮಾಡುವುದಿಲ್ಲ. ಇವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆ ಎಂದು ನಾನು ಪತ್ರಿಕೋದ್ಯಮಕ್ಕೆ ಮೊದಲು ಕಾಲಿಟ್ಟಾಗ ಕೇಳಿ ಬಂದ ಮಾತು. ನಾನು ಮಾಡುತ್ತೇನೆ ಎಂದು ಹೇಳಿದ್ದರೂ ಅವರಲ್ಲಿ ಅನುಮಾನ ಹಾಗೇ ಇತ್ತು. ಆದರೆ ನನಗೆ ದೊರೆತ ಎಲ್ಲಾ ಕೆಲಸಗಳನ್ನು ಇಷ್ಟ ಪಟ್ಟು ಮಾಡಿದ್ದೇನೆ. ವಾರ್ತಾ ಇಲಾಖೆಗೆ ಸೇರಿಕೊಂಡಾಗ ನೀವು ಇಲ್ಲಿ ಏಕೆ ಬಂದಿರಿ ಒಳ್ಳೆಯ ನಿಮಗೆ ಉನ್ನತ ಹುದ್ದೆ ಸಿಗುವುದಿಲ್ಲ ಎಂದಿದ್ದರು. ಆದರೆ ಅದೇ ವರ್ಷ ಒಂದು ಜಿಲ್ಲೆಯ ನಿರ್ವಹಣೆ ಮಾಡುವ ಅವಕಾಶ ದೊರೆಯಿತು. ಅವಕಾಶ ಸಿಗುವುದಿಲ್ಲ ಎಂದಿದ್ದ ವ್ಯಕ್ತಿಗೆ ಅದು ಸಿಗಲಿಲ್ಲ. ಇದಕ್ಕೆ ಕಾರಣ ನಾನು ಯಾವುದೇ ಕೆಲಸವಾದರೂ ಶೇ. 100ರಷ್ಟು ಸೇವೆ ನೀಡುತ್ತೇನೆ. ಹಾಗಾಗಿ ನಾನು ಯಾವುದೇ ಹುದ್ದೆ ಬಯಸಲಿಲ್ಲ, ಬದಲಿಗೆ ನನ್ನ ಕೆಲಸ ನಿಷ್ಠೆ ಪರಿಗಣಿಸಿ ಕರೆದು ಕೆಲಸ ಕೊಟ್ಟಿರುವುದೇ ಎಲ್ಲ. ತುಮಕೂರಿನಂತಹ ಅತೀ ದೊಡ್ಡ ಜಿಲ್ಲೆಯಲ್ಲಿ ಸಿಡಿಒ ಆಗಿ ಕಾರ್ಯನಿರ್ವಹಿಸಿದ್ದು, ಏಷ್ಯನ್ ಡೆವಲೆಪ್ಮೆಂಟ್ ಬ್ಯಾಂಕ್​ನಲ್ಲಿ ಕಾರ್ಯನಿರ್ವಹಣೆ ಅತೀ ತೃಪ್ತಿ ತಂದಿದೆ.

  • ನಿಮ್ಮ ದೃಷ್ಟಿಯಲ್ಲಿ ಸಬಲೀಕರಣ ಎಂದರೇನು?

ಮಹಿಳೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸ್ವಾತಂತ್ರ್ಯರಾದರೆ ಅದು ಸಬಲೀಕರಣವೇ? ನಿಜ ಅರ್ಥದಲ್ಲಿ ಹೇಳುವುದಾದರೆ ಸರಿ ತಪು್ಪಗಳನ್ನು ಅರ್ಥಮಾಡಿಕೊಂಡು ವೈಯಕ್ತಿಕ ಜೀವನ ಮತ್ತು ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಸರಿಯಾದ ಮಾರ್ಗದಲ್ಲಿ ನಡೆಸುವುದಾಗಿದೆ. ಆದರೆ ಸಮಾಜಸೇವೆ ಹೆಸರಿನಲ್ಲಿ ಬಹಳಷ್ಟು ಮಂದಿ ಮನೆಯಲ್ಲಿ ಮಕ್ಕಳಿಗೆ ಒಪ್ಪತ್ತು ಊಟವನ್ನೂ ಮಾಡಿ ಹಾಕದೆ ನಿರ್ಲಕ್ಷಿಸಿ ಜನರ ಸೇವೆ ಎಂದು ಹೊರಗೆ ಬಂದಿರುತ್ತಾರೆ. ಅದು ನಿಜವಾದ ಸಬಲೀಕರಣವಲ್ಲ. ಮೊದಲು ನಮ್ಮ ಕುಟುಂಬ ಚೆನ್ನಾಗಿರಬೇಕು. ನಂತರ ಸಮಾಜ ಸುಧಾರಿಸುವ ಕಾರ್ಯ ಮಾಡಬೇಕು. ಆಗ ಅದು ಸಬಲೀಕರಣ ಎನ್ನಿಸಿಕೊಳ್ಳುತ್ತದೆ. ಮುಂದುವರೆದ ದೇಶದಲ್ಲೂ ಸಬಲೀಕರಣದ ಅರ್ಥ ತಿಳಿದಿಲ್ಲ . ಸ್ವಿಜರ್ಲೆಂಡ್ ನಂತಹ ಮುಂದುವರೆದ ದೇಶದಲ್ಲೂ ಅತೀ ಹೆಚ್ಚು ವಿಚ್ಛೇದನ ಪ್ರಕರಣಗಳು ದಾಖಲಾಗಿವೆ. ಹೀಗೆ ವಿಚ್ಛೇದನ ಪಡೆದವರು ತಮ್ಮ ಸ್ವಾತಂತ್ರ್ಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ. ಕಾರಣ ವಿಚ್ಛೇದಿತ ಮಹಿಳೆಯರು ಪತಿಯೊಂದಿಗೆ ಮಕ್ಕಳನ್ನೂ ಬಿಟ್ಟು ಹೋಗುತ್ತಾರೆ. ಹಾಗಾದರೆ ಆ ಮಕ್ಕಳ ಜವಾಬ್ದಾರಿ ಕುರಿತು ತಾಯಿಗೆ ಯಾವುದೇ ಪಾತ್ರ ಇರುವುದಿಲ್ಲವೆ ಎಂಬ ಪ್ರಶ್ನೆ ಮೂಡುತ್ತದೆ. ಆ ದೇಶದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಪ್ರತಿನಿಧಿಯಾಗಿ ಹೋಗಿದ್ದೆ. ಉಳಿದಂತೆ ಇತರೆ ದೇಶಗಳಿಂದ ಪುರುಷ ಪ್ರತಿನಿಧಿಗಳು ಆಗಮಿಸಿದ್ದರು. ಆರಂಭದಲ್ಲಿ ಸಭಿಕರ ಸಂಖ್ಯೆ ಕಡಿಮೆ ಇತ್ತು. ನಾನು ಮಾತನಾಡಲು ಪ್ರಾರಂಭಿಸಿದ ಬಳಿಕೆ ಹೆಚ್ಚಾಯಿತು. ಆಗ ಅಲ್ಲಿನ ಪ್ರೊ. ನಗುತ್ತಲೇ ನನಗೆ ಹೇಳಿದರು ನೀವು ಮಾತನಾಡುತ್ತಿದ್ದೀರಲ್ಲ ನೋಡಲು ಬಂದಿದ್ದಾರೆ. ಅಂತಹ ದೇಶದಲ್ಲೂ ಮಹಿಳೆಗೆ ಸ್ವಾತಂತ್ರ್ಯವಿದೆಯಾದರೂ ನಿರ್ದಿಷ್ಟ ಗಡಿ ದಾಟಿ ಆಚೆ ಬರುವಂತಿಲ್ಲ. ಹಾಗಾದರೆ ಇನ್ನೂ ಹೇಗೆ ಸಬಲೀಕರಣ ಎಂದು ಹೇಳಲು ಸಾಧ್ಯ?

  • ಮಹಿಳೆಯರಿಗೆ ಸವಾಲು ಅಧಿಕ; ಹೇಗೆ ನಿಭಾಯಿಸುತ್ತಿದ್ದೀರಿ?

ಯಾವುದೇ ಒಂದು ಹುದ್ದೆಯಲ್ಲಿ ವಿಭಿನ್ನ ಅಭಿಪ್ರಾಯಗಳು ಸಹಜ. ಗಂಡಸರು ಎಲ್ಲೋ ಒಂದೆಡೆ ಸೇರಿ ಮಾತನಾಡಿಕೊಂಡು ಅದನ್ನು ಸರಿಪಡಿಸಿಕೊಳ್ಳುತ್ತಾರೆ. ಆದರೆ ಮಹಿಳೆಯರಿಗೆ ಅದು ಸಾಧ್ಯವಾಗುವುದಿಲ್ಲ. ತಮ್ಮ ಮೇಲಧಿಕಾರಿಯೊಂದಿಗೆ, ಜನಪ್ರತಿನಿಧಿಯೊಂದಿಗೆ ವಿಭಿನ್ನ ಅಭಿಪ್ರಾಯಗಳು ಬರುವುದು ಸಹಜ. ಆದರೆ ಅದನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಆಗುವುದಿಲ್ಲ. ಇನ್ನು ಮಹಿಳೆ ಎಂದ ಕೂಡಲೇ ಜನರಲ್ಲಿ ಮೂಡುವ ಭಾವನೆಯೇ ಬೇರೆ. ಇವರಿಂದ ಕೆಲಸ ಆಗುತ್ತದೋ ಇಲ್ಲವೋ ಎಂದು ಯೋಚಿಸಲು ಪ್ರಾರಂಭಿಸುತ್ತಾರೆ. ನಾನು ಡಿಸಿ ಆಗಿದ್ದಾಗ ಗ್ರಾಮವೊಂದರಲ್ಲಿ ನೀರಿನ ಸಮಸ್ಯೆ ದೂರು ಬಂತು. ಆಗ ನಿಂತು ಕೆಲಸ ಮಾಡಿಸಿದೆ. ಆಗ ಇವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ಭಾವನೆ ಜನರಲ್ಲಿ ಮೂಡಿತು. ಹಾಗೆಂದು ಮಹಿಳೆಯರಲಿಗೆ ಸವಾಲುಗಳೇ ಇಲ್ಲ ಎಂದಲ್ಲ. ಹಾಗೆಯೇ ಮಹಿಳೆಯರಿಗೆ ಇರುವಷ್ಟೇ ಸಮಸ್ಯೆ ಪರುಷರಿಗೂ ಇರುತ್ತದೆ. ಹಾಗಾಗಿ ಅವೆಲ್ಲವನ್ನೂ ಹೊರತುಪಡಿಸಿ ಧೈರ್ಯದಿಂದ ಕಾರ್ಯ ನಿರ್ವಹಿಸಬೇಕು.

ಆತ್ಮಕ್ಕೆ ಲಿಂಗವಿಲ್ಲ, ಅಸಹಾಯಕತೆ ಬೇಕಿಲ್ಲ

| ರೂಪಾ ಅಯ್ಯರ್ ನಿರ್ದೇಶಕಿ-ನಟಿ

ಹೆಣ್ಣು ಮಕ್ಕಳಿಲ್ಲದೆ ಜೀವನವಿಲ್ಲ. ಇದನ್ನು ಗಂಡು ಮಕ್ಕಳೂ ಒಪ್ಪಿಕೊಳ್ಳುತ್ತಾರೆ. ಆಕೆ ಮನೆಯಲ್ಲಿ ತಾಯಿಯಾಗಿ, ಹೆಂಡತಿಯಾಗಿ ಕೆಲಸ ಮಾಡ್ತಾಳೆ. ಹೊರಗಡೆ ಬಂದರೆ ಉತ್ತಮ ಸ್ನೇಹಿತೆಯಾಗಿ ಸಿಗ್ತಾಳೆ. ಆಫೀಸಿಗೆ ಬಂದರೆ ಅಷ್ಟೇ ಪರಿಪೂರ್ಣವಾಗಿ ಕೆಲಸ ಮಾಡ್ತಾಳೆ. ಆಕೆಗೆ ಏನೇ ಸಮಸ್ಯೆಯಿದ್ದರೂ ಅದನ್ನು ಲೆಕ್ಕಿಸದೆ ಎಲ್ಲರ ಮಧ್ಯೆ ಸ್ವಾವಲಂಬಿಯಾಗಿ ನಿಂತು ಕೆಲಸ ಮಾಡ್ತಾಳೆ. ಇದು ಈ ಹಿಂದಿನ ವೇದಗಳ ಕಾಲದಲ್ಲೂ ನಾವು ಕಾಣಬಹುದು. ಮೈತ್ರೇಯಿ, ಗಾರ್ಗಿಯಿ ಕೂಡ ಪುರುಷರ ಮಧ್ಯೆ ಕುಳಿತು ಬ್ರಹ್ಮವಾದಿನಿಯರಾಗಿದ್ದರು. ಎಲ್ಲರ ಮುಂದೆ ವಾದ ಮಾಡಿದ್ದರು. ಮಹಿಳೆ ಸೌಮ್ಯವಾಗಿದ್ದಾಗ ಲಕ್ಷ್ಮೀ ಆಗಿರ್ತಾಳೆ, ಅದೇ ಉಗ್ರ ರೂಪ ತಾಳಿದ್ರೆ ಕಾಳಿ ಆಗ್ತಾಳೆ. ಆಧ್ಯಾತ್ಮಿಕವಾಗಿ ನೋಡಿದರೆ ಆತ್ಮಕ್ಕೆ ಲಿಂಗವಿಲ್ಲ. ದೇವರು ಕೊಟ್ಟಿರುವ ದೇಹದಲ್ಲಿ ಕೆಲವು ವ್ಯತ್ಯಾಸಗಳಿವೆಯಷ್ಟೇ. ನಮಗೆ ಸಮಾನತೆ ಕೊಡಿ ಎಂದು ಕೇಳುವ ಅವಶ್ಯಕತೆ ಯಾವ ಮಹಿಳೆಗೂ ಇಲ್ಲ. ಪ್ರತಿ ಹೆಣ್ಣೂ ಸ್ಪೆಷಲ್. ಮಹಿಳೆಗೆ ಬೇಕಾಗಿರುವುದು ಜ್ಞಾನ ಮತ್ತು ಅಧ್ಯಾತ್ಮ. ಅವೆರಡು ಇದ್ದರೆ ಆಕೆ ಯಾವುದೇ ಕ್ಷೇತ್ರದಲ್ಲಾದರೂ ತನ್ನ ವ್ಯಕ್ತಿತ್ವವನ್ನು ಎತ್ತಿ ತೋರಿಸಬಹುದು. ಯಾರದ್ದೋ ವೀಕ್​ನೆಸ್​ಗೆ ನಮ್ಮನ್ನ ಬಳಸಿಕೊಳ್ಳುತ್ತಾರೆ ಅಥವಾ ನಮ್ಮ ವೀಕ್​ನೆಸ್​ಗೆ ನಾವು ಬೇರೆಯವರನ್ನ ಬಳಸಿಕೊಳ್ತೇವೆ ಎನ್ನೋದಿಲ್ಲ. ವಿ ಆರ್ ಸ್ಪೆಷಲ್ ಅಷ್ಟೇ.
  • ಮಹಿಳಾ ಪ್ರಧಾನ ಸಿನಿಮಾಗಳನ್ನು ಮಹಿಳೆಯರೇ ಒಪ್ಪಿಕೊಳ್ಳುವುದಿಲ್ಲ ಏಕೆ?

ಸಿನಿಮಾ ಕ್ಷೇತ್ರದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಅತ್ಯಂತ ಕಡಿಮೆಯಾಗುತ್ತಿರುವುದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ಕೊರತೆಯಿಲ್ಲ. ಅಂಥ ಸಾಕಷ್ಟು ಸಿನಿಮಾಗಳು ಸೆನ್ಸಾರ್ ಮಂಡಳಿಗೆ ಬರುತ್ತವೆ. ಆದರೆ ಅಂತಹ ಸಿನಿಮಾಗಳನ್ನು ಜನರು ಒಪು್ಪವುದಿಲ್ಲ. ಹೆಣ್ಣು ಮಕ್ಕಳೇ ಅಂತಹ ಸಿನಿಮಾಗಳನ್ನು ನೋಡುವುದಕ್ಕೆ ಹಿಂಜರಿಯುತ್ತಾರೆ. ನಾವು ಸಿನಿಮಾ ನೋಡುವುದೇ ಮನೋರಂಜನೆಗಾಗಿ, ಹಾಗಿದ್ದ ಮೇಲೆ ಸೀರಿಯಸ್ ವಿಷಯವನ್ನಿಟ್ಟುಕೊಂಡು ಮಾಡಿರುವ ಸಿನಿಮಾ ನೋಡುವುದೇಕೆ ಎಂದು ಪ್ರಶ್ನಿಸುತ್ತಾರೆ. ಎಲ್ಲರೂ ಸಿನಿಮಾದಲ್ಲಿ ಪೆಪ್ಪಿ ಸಾಂಗ್ ಬಯಸುತ್ತಾರೆ, ಅದೇ ಸಿನಿಮಾದಲ್ಲಿ ಭರತನಾಟ್ಯವೋ ಅಥವಾ ಯಾವುದೋ ಮೆಲೋಡಿ ಸಾಂಗ್ ಬಳಸಿದರೆ ಅದನ್ನೇಕೆ ನೋಡಬೇಕು ಎನ್ನುತ್ತಾರೆ. ಹೀಗಿರುವಾಗ ಎಲ್ಲ ಸಿನಿಮಾ ನಿರ್ವಪಕರು ಒಂದು ಸೇಫ್ ಸೈಡಿನಲ್ಲಿ ನಿಂತು ಸಿನಿಮಾ ಮಾಡೋದಕ್ಕೆ ಬಯಸುತ್ತಾರೆ. ಕೆಲವೊಂದಿಷ್ಟು ಕಾದಂಬರಿ ಆಧಾರಿತ ಸಿನಿಮಾಗಳನ್ನು ಕಮರ್ಷಿಯಲ್ ಆಗಿ ಮಾಡುವುದಕ್ಕೆ ಅವಕಾಶವಿರುತ್ತದೆ. ಆದರೆ ಅಂತಹ ಕಾದಂಬರಿಗಳನ್ನು ಬರೆದವರು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.

  • ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಣ್ಣೆಂದರೆ ಗೋಳಿನ ಕಥೆಯೇ ಏಕೆ?

ನಾನೂ ಒಬ್ಬ ಪ್ರೇಕ್ಷಕಿಯಾಗಿ ನೋಡಿದರೆ, ತೀರಾ ಭಾವನಾತ್ಮಕ ಸಿನಿಮಾ ನೋಡಿ ನಾನೂ ಭಾವುಕಳಾಗಿದ್ದೇನೆ. ಅಂತಹ ಸಿನಿಮಾಗಳು ಪ್ರೇಕ್ಷಕರಿಗೆ ಹೆಚ್ಚು ರುಚಿಸುತ್ತವೆ. ಇತ್ತೀಚೆಗೆ ಕೆಲ ಯುವ ನಿರ್ದೇಶಕರು ಬೇರೆ ರೀತಿಯ ಪ್ರಾಯೋಗಿಕ ಸಿನಿಮಾಗಳಿಗೂ ಕೈ ಹಾಕಿದ್ದಾರೆ. ಪ್ರೇಕ್ಷಕರಿಗಾಗಿ ಸಿನಿಮಾ ಈ ರೀತಿ ಬದಲಾಗಿದೆಯೋ ಅಥವಾ ಸಿನಿಮಾದಿಂದಲೇ ಪ್ರೇಕ್ಷಕರು ಬದಲಾಗಿದ್ದಾರೋ ಎನ್ನುವುದು ಬಗೆಹರಿಯದ ಪ್ರಶ್ನೆ.

  • ಸಾಮಾಜಿಕ ಕಾರ್ಯಕರ್ತೆಯಾಗಿ ಹೆಣ್ಣು ತರುವ ಬದಲಾವಣೆಯನ್ನು ಪುರುಷರು ಸ್ವೀಕರಿಸುತ್ತಾರೆ?

ಹೆಣ್ಣೊಬ್ಬಳು ಸಾಮಾಜಿಕವಾಗಿ ಮುಂದೆ ನಿಂತು ಬದಲಾವಣೆ ತಂದರೆ ಅದನ್ನು ಜನರು ಸ್ವೀಕರಿಸುವುದಿಲ್ಲ. ಮಂಡ್ಯದಲ್ಲಿ ಹಳ್ಳಿಯ ಜನರು ಸ್ವಾವಲಂಬಿಗಳಾಗಿ ಬದುಕಲಿ ಎನ್ನುವ ಕಾರಣ ಬೆಲ್ಲ ತಯಾರಿಸುವ ಫ್ಯಾಕ್ಟರಿ ತೆರೆದೆ. ಆದರೆ ಅದು ಓಪನ್ ಆಗಿ ಕೆಲವೇ ದಿನಗಳಲ್ಲಿ ಅಲ್ಲಿದ್ದ ಜನರೇಟರ್​ನ್ನು ಕದ್ದುಕೊಂಡು ಹೋದರು. ಆ ಫ್ಯಾಕ್ಟರಿಯಲ್ಲಿ ಎಲ್ಲರಿಗೂ ತಲೆಗೆ, ಕೈಗೆ ಗ್ಲೌಸ್ ಹಾಕಿಕೊಂಡು ಶುದ್ಧವಾಗಿ ಬೆಲ್ಲ ತಯಾರಿಸಬೇಕೆಂದು ಹೇಳಿ ವ್ಯವಸ್ಥೆ ಮಾಡಿದೆ. ನಾನು ಎದುರಿಗಿದ್ದಾಗ ಎಲ್ಲ ಪಾಲಿಸುತ್ತಿದ್ದರು, ಅಲ್ಲಿಂದ ಹೊರಟೆ ಎಂದ ತಕ್ಷಣ ಕಾಲಿನಲ್ಲೆಲ್ಲ ಕೆಲಸ ಮಾಡಲು ಆರಂಭಿಸಿದರು, ಅದೇ ಬೆಲ್ಲವನ್ನು ನನಗೂ ಕಳಿಸಿಕೊಡುತ್ತಿದ್ದರು. ಅದಾದ ಮೇಲೆ 100 ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಶೌಚಗೃಹ ಕಟ್ಟಿಸುತ್ತಾ ಬಂದೆವು. ನಾವು ಒಂದು ಕಡೆಯಿಂದ ಶೌಚಗೃಹ ಕಟ್ಟಿಸುತ್ತಿದ್ದರೆ ಇನ್ನೊಂದು ಕಡೆಯಿಂದ ಅದನ್ನು ಒಡೆಯುತ್ತಾ ಬಂದರು. ಜನರಿಗೆ ಅವರ ಮನಸ್ಥಿತಿಯನ್ನು ಮನೆಯಿಂದಲೇ ಬದಲಾಯಿಸಬೇಕಿದೆ.

ಹೆಣ್ಣಿನ ಜನ್ಮವೇ ದೇವರು ಕೊಟ್ಟಿರುವ ವರ

| ಎಂ. ರೂಪಕಲಾ ಶಶಿಧರ್ ಶಾಸಕಿ, ಕೆಜಿಎಫ್ ಕ್ಷೇತ್ರ

ದೇವರು ನಮಗೆ ಹೆಣ್ಣಿನ ಜನ್ಮ ಕೊಟ್ಟಿರುವುದೇ ವರವಾಗಿದೆ. ಮಹಿಳೆಯರಿಗೆ ನಾವು ಎಷ್ಟು ಶಿಕ್ಷಣ ನೀಡುತ್ತೇವೆಯೋ ಅದನ್ನು, ಒಂದಲ್ಲಾ ಒಂದು ರೀತಿಯಲ್ಲಿ ಸಮಾಜದ ಅಭಿವೃದ್ಧಿಗಾಗಿ ವಿನಿಯೋಗಿಸುತ್ತಾಳೆ. ಇತ್ತೀಚಿನ ಕೆಲವು ವರ್ಷಗಳಿಂದ ಮಾತ್ರ ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ. ಈಗ ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರಿದ್ದು, ತಾನು ಇಟ್ಟುಕೊಂಡ ಗುರಿಗಳನ್ನು ತಲುಪುವಲ್ಲಿ ನಿರಂತರ ಶ್ರಮವಹಿಸುತ್ತಿದ್ದಾಳೆ. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ಪುರುಷರಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ನಗರ ಪ್ರದೇಶದ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವಷ್ಟು ಅವಕಾಶಗಳು ಗ್ರಾಮೀಣ ಮಹಿಳೆಯರಿಗೆ ಸಿಗುವುದಿಲ್ಲ. ಆದರೂ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ರಹಿತ ಜ್ಞಾನದಿಂದ ಪುತ್ರಿ, ಅಕ್ಕ, ತಂಗಿ, ಪತ್ನಿ ಹಾಗೂ ತಾಯಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ನಗರದಲ್ಲಿಯೂ ಮಹಿಳೆಯರು ಉದ್ಯೋಗಿಯಾಗಿದ್ದರೂ, ಮನೆಯಲ್ಲಿಯೂ ಕುಟುಂಬದ ಜವಾಬ್ದಾರಿ ನಿರ್ವಹಿಸುವ ಮೂಲಕ ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
  • ಸಾಮಾನ್ಯವಾಗಿ ಪುರುಷರು ಹೋಂ ಮಿನಿಸ್ಟರ್ ಅನ್ನ ಕೇಳಬೇಕಪ್ಪ ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ರಾಜ್ಯದಲ್ಲಿ ಮಹಿಳೆ ಗೃಹಮಂತ್ರಿ ಆಗಿಲ್ವಲ್ಲಾ?

ಮಹಿಳೆಯರು ಗೃಹ ನಿರ್ವಹಣೆಯಲ್ಲಿ ಯಶಸ್ಸು ಸಾಧಿಸಿದ್ದರೂ, ರಾಜ್ಯದ ರಾಜಕೀಯದಲ್ಲೇಕೆ ಗೃಹಮಂತ್ರಿ ಆಗಿಲ್ಲ. ಮಹಿಳೆಗೆ ಗೃಹಮಂತ್ರಿ ಸ್ಥಾನ ನೀಡಿದರೆ, ಉತ್ತಮವಾಗಿ ನಿರ್ವಹಿಸಿ ಮಾದರಿಯಾಗುತ್ತಾರೆ ಎಂಬ ಭಯದಿಂದ ಸಮರ್ಥರಿದ್ದರೂ ಇಂತಹ ಸಚಿವ ಸ್ಥಾನ ಕೊಟ್ಟಿಲ್ಲ. ಆದರೆ, ಹೊರ ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಸೇರಿ ಅನೇಕರು ಮುಖ್ಯಮಂತ್ರಿಗಳಾಗಿ ಅಧಿಕಾರ ಮಾಡಿದ್ದಾರೆ. ಪ್ರಸ್ತುತ ವಿಧಾನಸಭೆ, ಲೋಕಸಭೆಗಳಲ್ಲಿಯೂ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ.

  • ಸಂಸತ್ತಿನಲ್ಲಿಯೂ ಮಹಿಳಾ ಮೀಸಲಾತಿ ಬೇಕು ಎನಿಸುವುದಿಲ್ಲವೆ?

ರಾಜ್ಯದಲ್ಲಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಶೇ.50 ಮಹಿಳಾ ಮೀಸಲಾತಿ ನೀಡಲಾಗಿದೆ. ಚುನಾಯಿತ ಮಹಿಳೆಯರ ಪತಿ ಅಥವಾ ಗಂಡು ಮಕ್ಕಳೇ ರಾಜಕೀಯ ಮಾಡುತ್ತಾರೆ. ಆದರೆ, ಇತ್ತೀಚಿಗೆ ವಾಸ್ತವ ಸ್ಥಿತಿ ಬದಲಾಗುತ್ತಿದ್ದು, ಮಹಿಳೆ ಕೂಡ ಸಕ್ರಿಯ ರಾಜಕಾರಣ ಮಾಡುವ ಮೂಲಕ ಕೆಲವು ತೀರ್ಮಾನ ಸ್ವತಂತ್ರವಾಗಿ ತೆಗೆದುಕೊಳ್ಳುತ್ತಿದ್ದಾಳೆ. ಮೀಸಲಾತಿ ಆಧಾರದಲ್ಲಿ ಗೆದ್ದು ಬಂದರೂ, ಅಧಿಕಾರಿಗಳಿಂದ ತಮ್ಮ ಅಧಿಕಾರ ವ್ಯಾಪ್ತಿಯ ಬಗ್ಗೆ ತರಬೇತಿ ಪಡೆದು ಅಧಿಕಾರ ಚಲಾಯಿಸಬೇಕು. ಇನ್ನು ವಿಧಾನಸಭಾ ಕ್ಷೇತ್ರ ಮತ್ತು ಲೋಕ ಸಭಾ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ರಾಜಕೀಯ ಮೀಸಲಾತಿ ದೊರೆತಾಗ ಸಬಲೀಕರಣ ಯಶಸ್ವಿಯಾಗುತ್ತದೆ.

  • ಮಹಿಳಾ ಕೋವಿಡ್ ವಾರಿಯರ್ಸ್​ನ್ನು ಹತ್ತಿರದಿಂದ ಕಂಡವರು ನೀವು, ಅದರ ಅನುಭವ ಹೇಳಿ.

ಕಳೆದ ವರ್ಷ ಕರೊನಾ ಸೋಂಕು ಕಾಣಿಸಿಕೊಂಡ ದಿನಗಳಲ್ಲಿ ಸೋಂಕಿತ ವ್ಯಕ್ತಿಗಳನ್ನು ತಮ್ಮ ಕುಟುಂಬಸ್ಥರೂ ಮುಟ್ಟಲು ಹೆದರುತ್ತಿದ್ದರು. ಈ ವೇಳೆ ಶೇ.50ಕ್ಕಿಂತ ಅಧಿಕ ಮಹಿಳೆಯರು ವೈದ್ಯೆಯಾಗಿ, ನರ್ಸ್ ಆಗಿ, ಆಶಾ ಕಾರ್ಯಕರ್ತೆಯಾಗಿ ಸೇವೆ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಗಳು ಕೋವಿಡ್ ವೇಳೆ ಬಾಗಿಲು ಮುಚ್ಚಿದರೂ, ಸರ್ಕಾರಿ ಸೇವಕರಾಗಿ ಕುಟುಂಬದಿಂದ ದೂರವಿದ್ದು ಶ್ರಮಿಸಿದ್ದಾರೆ. ಕೋವಿಡ್ ಲಾಕ್​ಡೌನ್ ವೇಳೆ ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಘದ ಮಹಿಳೆಯರು ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯ, ಮಾಸ್ಕ್ ಇಲ್ಲದಿದ್ದರೂ ಧೈರ್ಯವಾಗಿ ಕರೊನಾ ಯೋಧರಾಗಿ ಕಾರ್ಯ ನಿರ್ವಹಿಸುವ ಮೂಲಕ ನಿಜವಾದ ಯೋಧರಾಗಿದ್ದಾರೆ.

ಹೆಣ್ಣಿನ ತಪ್ಪಿನ ಹಿಂದೆ...

ಹೆಣ್ಣಿಗೆ ಉಪಯುಕ್ತವಾಗುವ ಕಾನೂನಿನ ದುರ್ಬಳಕೆಯೂ ಹೆಚ್ಚಾಗಿದೆ ಎನ್ನುವ ವಿಚಾರದಲ್ಲೂ ಚರ್ಚೆ ನಡೆಯಿತು. ಹೆಂಡತಿ ಜಗಳ ಮಾಡಿಕೊಂಡು ತವರು ಮನೆಗೆ ಬಂದಾಗ ತಂದೆಯೇ ಮಗಳನ್ನು ಬೆಂಬಲಿಸಿ ಆಕೆಗೆ ವಿಚ್ಛೇದನ ನೀಡಿಸುವ ಪ್ರಕರಣಗಳು ಆಗುತ್ತಿವೆ ಎಂದು ರೂಪಾ ಅಯ್ಯರ್ ಹೇಳಿದರು. ಇದಕ್ಕೆ ದನಿಗೂಡಿಸಿದ ಮಮತಾ, ಒಮ್ಮೆ ಒಬ್ಬ ಮಗಳು ಗಂಡನಿಂದ ದೂರಾಗಿ ಬಂದಿದ್ದಳು. ಮನೆಯಲ್ಲಿ ಮಾವನಿಲ್ಲ, ಅನಾರೋಗ್ಯದಿಂದ ಬಳಲುತ್ತಿರುವ ಅತ್ತೆ ಇದ್ದಾಳೆ. ಆದರೆ ಮಗ ಬೇರೆ ಮನೆ ಮಾಡಬೇಕು, ಹಾಗೆ ಮಾಡಿದರೆ ಮಾತ್ರ ಮಗಳನ್ನು ಕಳಿಸ್ತೀನಿ ಅಂತ ಆಕೆಯ ಅಪ್ಪ ಹೇಳುತ್ತಿದ್ದ. ಈ ರೀತಿಯ ಪ್ರಕರಣಗಳು ಹಲವಿವೆ ಎಂದರು.

ಹನಿಟ್ರ್ಯಾಪ್ ಎಂಬ ಮೀನಿನ ಗಾಳ...

ಹನಿಟ್ರ್ಯಾಪ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೆಲವು ಮಹಿಳೆಯರು ಮಾಡುವ ಇಂಥ ಕೃತ್ಯದಿಂದ ಹಲವು ಪ್ರಕರಣಗಳಲ್ಲಿ ಸಂತ್ರಸ್ತರಾಗಿರುವ ಮಹಿಳೆಯರಿಗೆ ಅನ್ಯಾಯ ಆಗುತ್ತದೆ ಎಂದು ಅನಿಸುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಮತಾ, ಮೀನುಗಾರ ಮೀನು ಹಿಡಿಯುವುದಕ್ಕಾಗಿ ಗಾಳ ಹಾಕುತ್ತಾನೆ. ಆಗ ಮೀನು ಬಂದು ಗಾಳಕ್ಕೆ ಸಿಕ್ಕಿ ಹಾಕಿಕೊಳ್ಳುತ್ತದೆ. ಇದರಲ್ಲಿ ಮೀನಿನ ತಪ್ಪಿದೆಯೋ ಅಥವಾ ಮೀನುಗಾರನ ತಪ್ಪೋ? ಎಂದು ಕೇಳಿದರು. ಇದೇ ವಿಚಾರವಾಗಿ ಮಾತು ಮುಂದುವರಿಸಿದ ರೂಪಾ ಅಯ್ಯರ್, ಈ ರೀತಿಯ ಪ್ರಕರಣಗಳು ಕೇವಲ ರಾಜಕೀಯದಲ್ಲಿ ಮಾತ್ರವಲ್ಲ, ಪ್ರತಿಯೊಂದು ಕ್ಷೇತ್ರದಲ್ಲೂ ಇದೆ. ಕೆಲಸದ ಆಸೆಗೋ ಅಥವಾ ದುಡ್ಡಿನ ಮೋಹಕ್ಕೋ ಹೆಣ್ಣು ಮಕ್ಕಳು ಇಂತಹ ಕೆಲಸ ಮಾಡುವುದುಂಟು. ಅದಕ್ಕೆ ಸ್ನೇಹಿತರೂ ಉತ್ತೇಜನ ಕೊಟ್ಟುಬಿಡುತ್ತಾರೆ. ಆದರೆ ಒಬ್ಬ ಹೆಣ್ಣಾಗಿ ಆಕೆಗೆ ಯಾವುದು ಸರಿ ಯಾವುದು ತಪು್ಪ ಎನ್ನುವುದು ಗೊತ್ತಿರಬೇಕು. ಆಕೆಯ ದಾರಿಯನ್ನು ಆಕೆಯೇ ನಿರ್ಧರಿಸಬೇಕು. ಐದು ವರ್ಷಗಳ ನಂತರ ಹಿಂತಿರುಗಿ ನೋಡಿದರೆ ಪಶ್ಚಾತ್ತಾಪ ಪಡುವಂತಹ ಕೆಲಸ ನಮ್ಮಿಂದಾಗಿರಬಾರದು. ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಜ್ಞಾನ, ಸತ್ಯ, ಧರ್ಮದಿಂದ ಮುನ್ನುಗ್ಗಬೇಕು. ಸದ್ಯದ ಮಟ್ಟಿಗೆ ಈ ರೀತಿಯ ಪ್ರಕರಣಗಳು ಆಚೆಗೆ ಬರುವುದು ಒಳ್ಳೆಯದೇ. ಇದರಿಂದ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆ ಎಂದರು. ಇದಕ್ಕೆ ದನಿಗೂಡಿಸಿದ ರೂಪಾಕಲಾ ಶಶಿಧರ್, ಯಾವುದೇ ಆಮಿಷಕ್ಕೆ ತಲೆ ಕೊಟ್ಟು ಹೆಣ್ಣು ತನ್ನ ಅಸ್ತಿತ್ವವನ್ನೇ ಮಾರಾಟ ಮಾಡಿಕೊಳ್ಳಬಾರದು. ಒಬ್ಬರೋ ಇಬ್ಬರೋ ಮಾಡುವ ತಪು್ಪ ಕೆಲಸಕ್ಕೆ ಎಲ್ಲ ಹೆಣ್ಣು ಮಕ್ಕಳು ತಲೆ ತಗ್ಗಿಸುವ ಅವಶ್ಯಕತೆ ಇಲ್ಲವೆಂದು ಹೇಳಿದರು.

ಪಿಂಕ್ ಸೀರೆ ಉಡ್ತೀರಾ ಅಂತಾರೆ...

ವಿದ್ಯಾವಂತ, ಪ್ರಶ್ನೆ ಮಾಡುವ, ಸಮರ್ಥವಾಗಿ ಕೆಲ ನಿರ್ವಹಿಸುವ ಮಹಿಳೆಯರು ರಾಜಕೀಯಕ್ಕೆ ಬೇಕಾಗಿಲ್ಲ. ಅವರು, ಪುರುಷರನ್ನೇ ಹಿಂದೆ ತಳ್ಳುತ್ತಾರೆ ಎಂಬ ಭಯ ಕಾಡುತ್ತಿರುತ್ತದೆ. ಹೀಗಾಗಿ, ಯಾವಾಗಲೂ ಯಾವುದೇ ಮಾತು ಹೇಳಿದರೂ ಅಣ್ಣ ಎಂದು ಬಗ್ಗಿ ನಮಸ್ಕಾರ ಮಾಡುವ ಮಹಿಳೆಯರನ್ನೇ ಆರಿಸಿಕೊಳ್ಳುತ್ತಾರೆ ಎಂದು ರೂಪಕಲಾ ಹೇಳಿದರು. ಇದಕ್ಕೆ ದನಿಗೂಡಿಸಿದ ರೂಪಾ ಅಯ್ಯರ್, ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೇ ಮಹಿಳೆ ಸ್ವಂತ ಹೋರಾಟದಿಂದ ಮುನ್ನೆಲೆಗೆ ಬರುತ್ತಾರೆಂದರೆ ಹಲವು ಸಮಸ್ಯೆ ಅಡ್ಡಿ ಬರುತ್ತವೆ. ಸ್ವ ಪಕ್ಷೀಯರೇ ರಾತ್ರಿ ವೇಳೆ 10ಕ್ಕೂ ಹೆಚ್ಚು ಬದಲಿ ಸಂಖ್ಯೆಗಳಿಂದ ಕರೆ ಮಾಡಿ ಅನಗತ್ಯವಾಗಿ ಮಾತನಾಡುತ್ತಾರೆ. ನಾಳೆಯಿಂದ ಪಿಂಕ್ ಸೀರೆ ಉಟ್ಟುಕೊಂಡು ಬನ್ನಿ ಎಂದು ಛೇಡಿಸುತ್ತಾ, ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಇವರಿಗೆ ಕೆಲಸ ಬೇಡ, ಈ ರೀತಿ ಅಸಭ್ಯ ವರ್ತನೆಗಳೇ ಬೇಕು ಎಂದರು.

ಸ್ವ ಪಕ್ಷೀಯರಿಂದಲೇ ಕಿರುಕುಳ

ರಾಜಕೀಯ ಕ್ಷೇತ್ರದಲ್ಲಿ ಮಹಿಳೆ ಮುಂದೆ ಬರುತ್ತಾಳೆ ಎಂದರೆ, ಸ್ವಪಕ್ಷೀಯರೇ ಸಹಿಸುವುದಿಲ್ಲ. ನಾವೆಷ್ಟೇ ಪ್ರಾಮಾಣಿಕ ಕೆಲಸ ಮಾಡಲು ಮುಂದಾದರೂ, ಅದನ್ನು ಜನರಿಗೆ ತಲುಪದಂತೆ ವಿಪಕ್ಷ ನಾಯಕರು ಡೈವರ್ಟ್ ಮಾಡುತ್ತಾರೆ ಎಂದರು ರೂಪಕಲಾ. ವಿರೋಧ ಪಕ್ಷದವರ ಮುಂದಿನ ಕಾರ್ಯಗಳೇನು ಎಂಬುದರ ಅರಿವೂ ನಮಗಿರಬೇಕು. ಸತತ 10 ವರ್ಷಗಳಿಂದ ಏಳು-ಬೀಳು ಅನುಭವಿಸಿ ಬಂದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ. ಕೆಲವು ವೇಳೆ ಮತದಾರರು ಮೂಲ ಸೌಕರ್ಯ ಈಡೇರಿಸುವಂತೆ ಬೇಡಿಕೆ ಇಡುತ್ತಾರೆ. ಆದರೆ, ಶೇ.30 ಮಂದಿ ಸಮಸ್ಯೆಗಳನ್ನೇ ಸೃಷ್ಟಿಸುವವರಿದ್ದು, ಅವರ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದರು.