ಅಂಕಣ

ಹೇ ಹನುಮ! ಸೀಮೋಲ್ಲಂಘನದ ಶಕ್ತಿ ನೀಡೆಮಗೆ...

ಮಿತಿಯನ್ನು ಮೀರುವುದು ಅಥವಾ ಸೀಮೆಯನ್ನು ಉಲ್ಲಂಘಿಸಿ ಕಾರ್ಯಸಾಧನೆಗೈಯುವುದು ಮಹಾಶಕ್ತಿವಂತ, ರಾಮಭಕ್ತ ಹನುಮಂತನಿಗೆ ಸ್ವಭಾವತಃ ಬಂದಿರಬೇಕು. ಏಕೆಂದರೆ, ಜನಿಸುತ್ತಲೇ ಸೂರ್ಯನನ್ನು ನೋಡಿ ಹಣ್ಣು ಎಂದು ಬಗೆದು ಹಿಡಿಯಲು ಆಗಸಕ್ಕೆ ನೆಗೆದವನೀತ. ಎಲ್ಲ ಮಕ್ಕಳೂ ಜನಿಸುವಾಗ ಅಳುತ್ತಿದ್ದರೆ ಈತ ಹಾಗಲ್ಲ. ನಂತರದಲ್ಲಿ ಕೂಡ ಮಾರುತಿಯ ಜೀವನದಲ್ಲಿ ಹೀಗೆ ನೆಗೆಯುವ, ಸೀಮೋಲ್ಲಂಘನದ ಹಲವು ಸಾಹಸಗಳು ಕಂಡುಬರುತ್ತವೆ. ಹಾಗಿಲ್ಲವಾದಲ್ಲಿ ನೂರು ಯೋಜನಗಳ ಸಮುದ್ರವನ್ನು ದಾಟಿ ಸೀತಾಮಾತೆಯನ್ನು ಅನ್ವೇಷಿಸುವುದು ಸಾಧ್ಯವಿತ್ತೇ? ಸೀತಾಮಾತೆ ಸಾಗರದ ಆಚೆಗೆ, ರಾವಣನ ವಶದಲ್ಲಿ ಇದ್ದಾಳೆ ಎಂಬ ಮಾಹಿತಿಯೇನೋ ಲಭಿಸಿತ್ತು. ಆದರೆ ಆ ಮಹಾಸಾಗರವನ್ನು ದಾಟುವ ಬಗೆಯಾದರೂ ಹೇಗೆ? ಉಳಿದ ಕಪಿವೀರರೆಲ್ಲ ಸಾಗರವನ್ನು ಲಂಘಿಸುವ ನಿಟ್ಟಿನಲ್ಲಿ ತಂತಮ್ಮ ಸಾಮರ್ಥ್ಯ ಏನು ಎಂದೆಲ್ಲ ಮಾತಾಡುತ್ತಿರುವಾಗ ಮಾರುತಿ ಮಾತ್ರ ಒಂದು ಬಂಡೆಯ ಮೇಲೆ ಸುಮ್ಮನೆ ಕೂತು, ತನ್ನ ಶಕ್ತಿ, ಸಾಗರದ ಆಳ ಅಗಲ ಮುಂತಾದ ಚಿಂತನೆಯಲ್ಲಿ ಇದ್ದನಂತೆ. ಸಮುದ್ರವನ್ನು ಲಂಘಿಸುವ ಸವಾಲು ಎದುರಾದಾಗ, ಜಾಂಬವಂತನು ಈ ಮಹಾಕಾರ್ಯಕ್ಕೆ ಮಾರುತಿಯೇ ಸೂಕ್ತ ಎಂದು ಹೇಳುತ್ತಾನೆ. ಅಷ್ಟೇ ಅಲ್ಲ, ಜಾಂಬವಂತನು ಅಂಜನಾಪುತ್ರನ ಅಸೀಮ ಸಾಹಸವನ್ನೂ ನೆನಪಿಸುತ್ತಾನೆ. ಸುಗ್ರೀವ ಸಹ ಆಂಜನೇಯನ ಸಾಹಸ, ಸಾಮರ್ಥ್ಯವನ್ನು ಕೊಂಡಾಡಿ, ಸೀತಾನ್ವೇಷಣೆಗೆ ಒಡಂಬಡಿಸುತ್ತಾನೆ. ಮಾರುತಿಗೆ ಅಣಿಮಾದಿ ಸಿದ್ಧಿಗಳು ಒಲಿದಿದ್ದವು. ತಾನು ಇಚ್ಛಿಸಿದ ರೂಪವನ್ನು ಆತ ತಳೆಯಬಲ್ಲವನಾಗಿದ್ದ. ಇಷ್ಟೆಲ್ಲ ಶಕ್ತಿ ಇದ್ದರೂ ಅಹಂಕಾರ ಇನಿತೂ ಸುಳಿಯದ ಮಹಾವಿನೀತ. ತನ್ನ ಯೋಗಶಕ್ತಿಯ ಮೂಲಕ, ಸಮುದ್ರೋಲ್ಲಂಘನ ಮಾಡುವಾಗ ನೆಲ-ಬಾನು ಒಂದಾಗಿ ನಿಂತನಂತೆ. ಅದೋ! ಹನುಮ ನೆಗೆದೇಬಿಟ್ಟ! ಆ ಮಹಾವೀರನಿಗೆ ಸಾಗರವೂ ಸಣ್ಣದಾಯಿತೇನೋ... ‘ಆಗಸದಲ್ಲಿ ಹಾರುತ್ತಿದ್ದ ಹನುಮಂತ, ಆಕಾಶಕ್ಕೆ ಸಿಡಿದ ಪರ್ವತದಂತೆ ಗೋಚರಿಸುತ್ತಿದ್ದ’ ಎಂದು ಕವಿ ವರ್ಣಿಸುತ್ತಾನೆ.

ಇಂಥ ಮಹಾಮಹಿಮ ಮಾರುತಿಗೂ, ನಮ್ಮ ಕರ್ನಾಟಕ ನೆಲಕ್ಕೂ ಒಂದು ವಿಶೇಷ ಸಂಬಂಧವಿದೆ. ಗಂಗಾವತಿ ತಾಲೂಕಿನಲ್ಲಿ ಬರುವ ಅಂಜನಾದ್ರಿಯಲ್ಲಿ ಹನುಮಂತನ ಜನನವಾಯಿತು ಎಂಬುದು ಅನಾದಿ ಕಾಲದಿಂದ ಇರುವ ನಂಬಿಕೆ. ಆದರೆ, ಹನುಮಂತ ಜನಿಸಿದ್ದು ತಿರುಪತಿಯ ಅಂಜನಾದ್ರಿ ಬೆಟ್ಟದಲ್ಲಿ ಎಂದು ಈಚೆಗೆ ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಪ್ರತಿಪಾದಿಸುವ ಮೂಲಕ ಹೊಸ ವಿವಾದ ಹುಟ್ಟುಹಾಕಿತ್ತು. ಟಿಟಿಡಿ ನೇಮಿಸಿದ್ದ ತಜ್ಞರ ಸಮಿತಿ ತನ್ನ ವರದಿಯಲ್ಲಿ ಈ ಸಂಬಂಧ ಕೆಲ ಉಲ್ಲೇಖಗಳನ್ನು ಮಾಡಿತ್ತು. ಆದರೆ ಕರ್ನಾಟಕದ ತಜ್ಞರು ಈ ವಾದವನ್ನು ಸಾರಾಸಗಟಾಗಿ ಅಲ್ಲಗಳೆಯುತ್ತಾರೆ. ರಾಮಾಯಣ ರಚನೆಯ ಕಾಲದಲ್ಲಿ ತಿರುಪತಿ ಇತ್ತೇ ಎಂದು ಕಂಡುಕೊಂಡರೆ ಈ ಜಿಜ್ಞಾಸೆಗೆ ಸುಲಭದಲ್ಲಿ ಉತ್ತರ ದೊರೆಯುತ್ತದೆ ಎಂದು ಇವರು ಪ್ರತಿಪಾದಿಸುತ್ತಾರೆ. ‘ರಾಮಾಯಣದಲ್ಲಿ ಉಕ್ತವಾಗಿರುವ ಭೌಗೋಲಿಕ ತಾಣಗಳ ವರ್ಣನೆ ಇಂದಿಗೂ ಸತ್ಯ. ದಕ್ಷಿಣ ಭಾರತ, ವಿಶೇಷವಾಗಿ, ಕಲ್ಯಾಣ ಕರ್ನಾಟಕದ ಕಿಷ್ಕಿಂಧಾ, ಪಂಪಾ ಸರೋವರ, ಶಬರಿ ಆಶ್ರಮ, ಅಂಜನಾದ್ರಿ, ವಾಲಿ-ಸುಗ್ರೀವರ ಸ್ಥಳಗಳು ರಾಮಾಯಣದಲ್ಲಿ ಉಲ್ಲೇಖವಾಗಿದೆ. ಆದರೆ ತಿರುಪತಿಯ ಹೆಸರು ಎಲ್ಲೂ ಉಲ್ಲೇಖಿಸಲ್ಪಟ್ಟಿಲ್ಲ’ಎಂದು ಸಂಶೋಧಕ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಅಭಿಪ್ರಾಯಪಡುತ್ತಾರೆ. ತಿರುಪತಿ ದೇವಸ್ಥಾನದ ವಾದ ಏನೇ ಇರಲಿ, ಅಂಜನಾದ್ರಿಯಲ್ಲಿ ಹನುಮನುದಿಸಿದ ಎಂಬ ಜನರ ನಂಬಿಕೆ ಗಾಢವಾಗಿಯೇ ಇದೆ, ಇರುತ್ತದೆ. ಹಂಪಿ ಪ್ರದೇಶದಲ್ಲಿ ಬರುವ ಕಿಷ್ಕಿಂಧೆಯಲ್ಲಿಯೇ ರಾಮಲಕ್ಷ್ಮಣರು ಮತ್ತು ಹನುಮಂತನ ಮೊದಲ ಭೇಟಿಯಾಗುತ್ತದೆ. ಸುಗ್ರೀವನಿಗೆ ರಾಮನ ಪರಿಚಯವನ್ನು ಮಾಡಿಸಿ ಅವರ ನಡುವೆ ಸಖ್ಯ ಉಂಟಾಗುವಂತೆ ಮಾಡಿದವನು ಹನುಮಂತನೇ. ಎಂಥ ಪರಮಪಾವನ ನೆಲ! ರಾಮ-ಹನುಮರ ಈ ಮಹಾಮಿಲನದಿಂದಾಗಿ ರಾಮಾಯಣಕ್ಕೆ ಹೊಸತೊಂದೇ ತಿರುವು ಸಿಕ್ಕಿತಲ್ಲದೆ, ಈ ಇಬ್ಬರು ಮಹಾಮಹಿಮರ ಜೀವನ ಕೋಟ್ಯಂತರ ಶ್ರದ್ಧಾಳುಗಳಿಗೆ ಅನಾದಿಕಾಲದಿಂದ ಬೆಳಕು ತೋರುತ್ತಲೇ ಇದೆ. ಲಂಕೆಯ ಯುದ್ಧದಲ್ಲಿ ಲಕ್ಷ್ಮಣ ಮೂರ್ಛೆತಪ್ಪಿಬಿದ್ದಾಗ, ಅವನಿಗೆ ಉಪಚರಿಸಲು ಸಂಜೀವಿನಿ ಸಸ್ಯ ತರಲು ಹೋದಾಗ, ಆ ಸಸ್ಯ ಯಾವುದೆಂದು ಗುರುತಿಸಲಾಗದೆ ಇಡೀ ಬೆಟ್ಟವನ್ನೇ ಹೊತ್ತು ತಂದುದು ಸಹ ಹನುಮಂತನ ಮತ್ತೊಂದು ಸಾಹಸ.

=========

ಹಾಗೆ ನೋಡಿದರೆ, ಸೀಮಿತ ಪರಿಧಿಯನ್ನು ಮೀರಬೇಕು ಎಂಬುದು ಮನುಜನ ಸಹಜ ಬಯಕೆಯೇ ಆಗಿದೆ. ಮಾನವನಿಗೆ ಸಂಕೋಲೆ ತೊಡಿಸಿದರೆ ಹೇಗಾದರೂ ಬಿಡಿಸಿಕೊಳ್ಳಲು ಯತ್ನಿಸುತ್ತಾನೆ. ಈ ಕಾರಣಕ್ಕೇ ಕ್ರಾಂತಿಗಳು ಸಹ ನಡೆದುಹೋಗಿವೆ. ಏನಾದರೂ ಅಪಾಯವಾದೀತು ಎಂಬ ಕಾಳಜಿಯಿಂದ ತಾಯಿಯು ಪುಟ್ಟ ಮಗುವಿಗೆ, ಅಲ್ಲಿಇಲ್ಲಿ ಹೋಗಬೇಡ ಎಂದು ತಾಕೀತು ಮಾಡಿದರೆ ಆ ಮಗು ಅಲ್ಲಿಗೆ ಮುದ್ದಾಂ ಹೋಗುತ್ತದೆ. ಆಗ ತಾಯಿ ಎರಡೇಟು ಬಿಗಿದರೂ ಸರಿಯೇ, ಮಗುವಿನ ಮುಖದಲ್ಲಿ ಏನೋ ಸಾಧಿಸಿದ ಹೆಮ್ಮೆ ಲಾಸ್ಯವಾಡುತ್ತಿರುತ್ತದೆ. ಮಗುವೇನಾದರೂ ರಿಸ್ಕ್ ತೆಗೆದುಕೊಳ್ಳಲು ಹಿಂಜರಿದರೆ ಅದರ ಬೆಳವಣಿಗೆ ನಿಂತಂತೆಯೇ ಸರಿ.

ಹಾಗೇ, ಈ ಭೂಮಿಯ ಮೇಲೆ ಬದುಕಿಬಾಳುತ್ತಿರುವ ಮನುಜನಿಗೆ, ಇದರಾಚೆ ಏನಿದೆ, ಮೇಲೆ ಏನಿದೆ ಎಂದು ಅರಿಯುವ ಕುತೂಹಲ ಆದಿಯಿಂದಲೂ ಇದೆ. ಈ ಆಸಕ್ತಿ ಇಲ್ಲದಿದ್ದರೆ ಮನುಕುಲ ಈ ಮಟ್ಟಕ್ಕೆ ಬರುತ್ತಲೇ ಇರಲಿಲ್ಲ. ಇದಕ್ಕೆಂದೇ, ಭೂಮಿಯಾಚೆ ಇಣುಕಲು ಶುರುಮಾಡಿದ್ದು. ನಮ್ಮ ಭಾರತೀಯ ಪರಂಪರೆಯಲ್ಲಿ ಗಣಿತ, ಜ್ಯೋತಿಷದ ಆಧಾರದ ಮೇಲೆಯೇ ಆಗಸದ ಚಟುವಟಿಕೆಗಳನ್ನು ಅರಿಯುವ-ವಿವರಿಸುವ ಕ್ರಮ ರೂಢಿಯಲ್ಲಿದೆ. ಅಂದರೆ, ಗ್ರಹಗಳ ಚಲನೆ, ಗ್ರಹಣ ಇತ್ಯಾದಿ ವಿದ್ಯಮಾನಗಳನ್ನು ನಮ್ಮವರು ಹೇಳಬಲ್ಲದು.

ಗಗನ ಕುತೂಹಲ ತಣಿಸುವ ನಿಟ್ಟಿನಲ್ಲಿ, ಕ್ರಮೇಣ ಬೇರೆ ಬೇರೆ ದೇಶಗಳಲ್ಲಿ ದೂರದರ್ಶಕದ ಮುಖಾಂತರ ಆಗಸದ ಮೇಲೆ ಕಣ್ಣುಹಾಯಿಸುವ ಕೆಲಸ ಶುರುವಾಯಿತು. ಈ ಕುತೂಹಲ ಇಷ್ಟಕ್ಕೇ ನಿಲ್ಲದೆ, ತಾನೇ ಏಕೆ ಆಗಸಕ್ಕೆ ಹೋಗಬಾರದು ಎಂಬ ಪ್ರಶ್ನೆ ಮಾನವನಲ್ಲಿ ಮೂಡಿತು. ಒಂದು ವಿಷಯ ತಲೆಯಲ್ಲಿ ಹೊಕ್ಕರೆ ಮನುಷ್ಯ ಸುಮ್ಮನೆ ಕೂರುವವನಲ್ಲ. ಗಗನನೌಕೆಯ ತಯಾರಿ ಯತ್ನಗಳು ಸಾಗಿದವು. ಆ ದಿನ ಬಂದೇಬಿಟ್ಟಿತು. 1961ರ ಏಪ್ರಿಲ್ 12ರಂದು ವೋಸ್ಟಾಕ್ ನೌಕೆಯ ಮೂಲಕ ಗಗನಕ್ಕೆ ಹಾರಿದ ರಷ್ಯಾದ ಯೂರಿ ಗಗಾರಿನ್ ವಿಶ್ವದ ಮೊದಲ ಗಗನಯಾನಿ ಎನಿಸಿಕೊಂಡರು. ಮಾನವನ ಇತಿಹಾಸದಲ್ಲಿ ಮತ್ತೊಂದು ನೆಗೆತ. ತದನಂತರದಲ್ಲಿ ಅನೇಕರು ಗಗನಯಾನ ನಡೆಸಿದರು. ಅಂದಿನಿಂದ ಇಂದಿನವರೆಗೆ ಎಷ್ಟು ಉಪಗ್ರಹಗಳು ಗಗನಶೋಧ ನಡೆಸಿವೆಯೋ! ಈ ನಡುವೆ, ಅಮೆರಿಕದ ನೀಲ್ ಆರ್ಮಸ್ಟ್ರಾಂಗ್ ಅವರು, 1969ರ ಜುಲೈ 20ರಂದು ಚಂದ್ರನ ಅಂಗಳದಲ್ಲಿ ಇಳಿಯುವ ಮೂಲಕ ಮನುಕುಲದ ಮತ್ತೊಂದು ಮಹಾಜಿಗಿತ ದಾಖಲಾಯಿತು. ಆಗ ಆರ್ಮಸ್ಟ್ರಾಂಗ್ ಉದ್ಗರಿಸಿದ್ದು ಹೀಗೆ:"That's one small step for man. One giant leap for mankind.' ಈ ನಡುವೆ, ಅಮೆರಿಕ ಮತ್ತು ರಷ್ಯಾಗಳು ತಮ್ಮ ಶೀತಲಸಮರವನ್ನು, ಪ್ರತಿಷ್ಠೆಯ ಪೈಪೋಟಿಯನ್ನು ಬಾಹ್ಯಾಕಾಶದಲ್ಲಿಯೂ ಮುಂದುವರಿಸಿದ್ದು ಬೇರೆಯದೇ ಕಥೆ.

ಗಗನಯಾನವೆಂದರೆ ಹುಡುಗಾಟಿಕೆಯಲ್ಲ, ಕಠಿಣ ಪರಿಶ್ರಮ ಅಗತ್ಯ, ಕಟ್ಟುನಿಟ್ಟು ತರಬೇತಿಯೂ ಬೇಕು. ಅಲ್ಲದೆ, ವಿಪರೀತ ಖರ್ಚಾಗುತ್ತದೆ. ಹೀಗಾಗಿ ಸರ್ಕಾರಗಳ ವತಿಯಿಂದ ಹೇಗೋ ಗಗನಯಾನ ಮಾಡಬಹುದು. ಅದೇ ರೀತಿ, ಗಗನಾಸಕ್ತಿಯುಳ್ಳ ಇತರರೂ ಆಗಸಕ್ಕೆ ತೆರಳುವಂತಾದರೆ?

ಟಿವಿ ಪತ್ರಕರ್ತ ಚಾರ್ಲಿ ರೋಸ್ ಅವರು 2000ನೇ ಇಸವಿಯಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸಂದರ್ಶನ ಮಾಡಿದ್ದರು. ‘ನೀವು ಅಮೆಜಾನ್ ಸಿಇಒ ಪಟ್ಟದಿಂದ ನಿರ್ಗಮಿಸಿದ ಬಳಿಕ ಏನನ್ನು ಮಾಡಲು ಬಯಸುವಿರಿ?’ ಎಂದು ಲೋಕಾಭಿರಾಮವಾಗಿ ಪ್ರಶ್ನೆ ಕೇಳಿದ್ದರು. ಆಗ ಬೆಜೋಸ್ ಸಹ ಅಷ್ಟೇ ಲೋಕಾಭಿರಾಮವಾಗಿ, ‘ಆಗಸದ ಅನ್ವೇಷಣೆಗೆ ಕೈಲಾದಷ್ಟು ನೆರವೀಯುವ ಉದ್ದೇಶ ಹೊಂದಿದ್ದೇನೆ’ ಎಂದು ಉತ್ತರಿಸಿದರು. ಈ ಮಾತು ಕೇಳಿ ಆಗ ಅಲ್ಲಿದ್ದವರೆಲ್ಲ ಗೊಳ್ಳೆಂದು ನಕ್ಕಿದ್ದರಂತೆ. ಆದರೆ ಬೆಜೋಸ್ ಸುಖಾಸುಮ್ಮನೆ ಹೇಳಿದ್ದಲ್ಲ ಎಂಬುದು ಈಗ ಸಾಬೀತಾಗಿದೆ. ಅವರು ತಮ್ಮ ಉದ್ದೇಶದಲ್ಲಿ ಎಷ್ಟು ಗಂಭೀರರಾಗಿದ್ದರು ಎಂದರೆ, ಬಾಹ್ಯಾಕಾಶ ಯೋಜನೆಗಳು ಮತ್ತು ಇತರ ಸಾಹಸ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ 2000ರಲ್ಲಿಯೇ ಬ್ಲ್ಯೂ ಒರಿಜಿನ್ ಎಂಬ ಸಂಸ್ಥೆ ಸ್ಥಾಪಿಸಿದ್ದರು. ಕೃತಕ ಗುರುತ್ವಾಕರ್ಷಣದಲ್ಲಿ ತೇಲುವ ವ್ಯೋಮ ಕಾಲನಿಗಳನ್ನು ಸ್ಥಾಪಿಸುವುದು ಅವರ ಕನಸು. ಇಂತಿಪ್ಪ ಬೆಜೋಸ್, ಈಚೆಗೆ ಅಂದರೆ, ಜುಲೈ 20ರಂದು ತಮ್ಮದೇ ಸಂಸ್ಥೆ ತಯಾರಿಸಿದ ನ್ಯೂ ಶೆಪರ್ಡ್ ಎಂಬ ಕ್ಯಾಪ್ಸೂಲ್​ನಲ್ಲಿ (ಸಣ್ಣ ಗಗನನೌಕೆ) ಗಗನಕ್ಕೆ ಪಯಣಿಸಿ, 10 ನಿಮಿಷ 10 ಸೆಕೆಂಡ್​ನಲ್ಲಿ ವಾಪಸಾದರು. ಈ ಪಯಣದಲ್ಲಿ ಬೆಜೋಸ್ ಹಾಗೂ ಅವರ ಸೋದರ ವ್ಯಾಲಿ ಫ್ರಾಂಕ್, 82 ವರ್ಷದ ವೃದ್ಧ ಮತ್ತು ವಿದ್ಯಾರ್ಥಿ ಹೀಗೆ ಒಟ್ಟು ನಾಲ್ವರು ಇದ್ದರು. ಇನ್ನೋರ್ವ ಸಾಹಸಿ ಉದ್ಯಮಿ ರಿಚರ್ಡ್ ಬ್ರಾನ್ಸನ್ (ಇಂಗ್ಲೆಂಡ್​ನ ವರ್ಜಿನ್ ಕಂಪನಿ ಸ್ಥಾಪಕ) ಕೂಡ ಆಗಸದ ಮೇಲೆ ಕಣ್ಣಿಟ್ಟಿದ್ದಾರೆ. ಇವರು ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಗುರಿಯಾಗಿಸಿಕೊಂಡು 2004ರಲ್ಲಿ ವರ್ಜಿನ್ ಗ್ಯಾಲಕ್ಟಿಕ್ ಕಂಪನಿಯನ್ನು ಸ್ಥಾಪಿಸಿದ್ದಾರೆ. ಬೆಜೋಸ್​ಗಿಂತ ಒಂಬತ್ತು ದಿನ ಮೊದಲು, ಅಂದರೆ ಜುಲೈ 11ರಂದು ಬ್ರಾನ್ಸನ್ ಅವರು ಗಗನಕ್ಕೆ ಪಯಣಿಸಿದ್ದರು. ಇವರದೇ ಸಂಸ್ಥೆ ತಯಾರಿಸಿದ ವಿಎಸ್​ಎಸ್ ಯುನಿಟಿ ಗಗನನೌಕೆಯ ಮೂಲಕ ಈ ಯಾನ ನಡೆದಿತ್ತು. ಇದರಲ್ಲಿ ಬ್ರಾನ್ಸನ್ ಸೇರಿ ಆರು ಜನರಿದ್ದರು. ಈ ಯಾನದಲ್ಲಿ ಆಂಧ್ರಪ್ರದೇಶದ ಗುಂಟೂರು ಮೂಲದ, ಏರೊನಾಟಿಕಲ್ ಇಂಜಿನಿಯರ್ ಸಿರೀಶಾ ಬಾಂಡ್ಲಾ ಎಂಬ ಯುವತಿ ಕೂಡ ಇದ್ದುದು ವಿಶೇಷ. ಈ ನಡುವೆ, ಉದ್ಯಮಿ ಎಲನ್ ಮಸ್ಕ್ ಅವರ ಸ್ಪೇಸ್​ಎಕ್ಸ್ ಬಾಹ್ಯಾಕಾಶ ಯೋಜನೆ ಕೂಡ ಸದ್ದುಮಾಡುತ್ತಿದೆ.

ಬಾಹ್ಯಾಕಾಶ ಪ್ರವಾಸೋದ್ಯಮ ಪರಿಕಲ್ಪನೆಗೆ ರಿಚರ್ಡ್ ಬ್ರಾನ್ಸನ್ ಮತ್ತು ಜೆಫ್ ಬೆಜೋಸ್ ಅವರಿಂದಲೇ ಚಾಲನೆ ಸಿಕ್ಕಿತು ಎನ್ನುವಂತಿಲ್ಲ. ಇದರಲ್ಲಿ ಆರ್ಬಿಟಲ್, ಸಬ್​ಆರ್ಬಿಟಲ್ ಮತ್ತು ಲೂನಾರ್ ಸ್ಪೇಸ್ ಟೂರಿಸಂ ಇತ್ಯಾದಿ ವಿಧಗಳಿವೆ. ಬ್ಲ್ಯೂ ಒರಿಜಿನ್ ಮತ್ತು ವರ್ಜಿನ್ ಗ್ಯಾಲಾಕ್ಟಿಕ್ ಸಬ್​ಆರ್ಬಿಟಲ್ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿವೆ. 2001ರಿಂದ 2009ರ ಅವಧಿಯಲ್ಲಿ, ರಷ್ಯಾದ ಸುಯೆಜ್ ನೌಕೆಯ ಮೂಲಕ ಏಳು ಬಾಹ್ಯಾಕಾಶ ಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್​ಎಸ್) ತೆರಳಿದ್ದರು. 2004 ರ ಅಕ್ಟೋಬರ್​ನಲ್ಲಿ ಸ್ಕೇಲ್ಡ್ ಕಂಪೊಸಿಟ್ಸ್ ಎಂಬ ಕಂಪನಿಯ ಸ್ಪೇಸ್ ಶಿಪ್​ಒನ್ ಎಂಬ ಗಗನನೌಕೆ ಪ್ರಥಮ ಬಾರಿಗೆ 100 ಕಿಮೀ ಕಕ್ಷೆಯ ಎತ್ತರ ತಲುಪಿದ ದಾಖಲೆ ನಿರ್ವಿುಸಿತ್ತು.

ಜೆಫ್ ಬೆಜೋಸ್ ಮತ್ತು ರಿಚರ್ಡ್ ಬ್ರಾನ್ಸನ್ ಅವರು ಲಕ್ಷ ಕೋಟಿ ಸಂಪತ್ತಿನ ಒಡೆಯರಾಗಿರುವುದರಿಂದ ಇಂಥ ಸಾಹಸಕ್ಕೆಲ್ಲ ಕೈಹಾಕಬಹುದು. ಈಗ ಪರೀಕ್ಷಾರ್ಥ ಪ್ರಯೋಗಗಳು ನಡೆದಿರುವುದರಿಂದ, ಮುಂದಿನ ವರ್ಷಗಳಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ (space tourism) ಗರಿಗೆದರಬಹುದು. ಗಗನಯಾನದ ಆಸಕ್ತಿಯುಳ್ಳ ಜನರು ಸಹ ಆಗಸದಲ್ಲಿ ಶೂನ್ಯ ಗುರುತ್ವಾಕರ್ಷಣದ ಅನುಭವ ಪಡೆಯಬಹುದು. ಆದರೆ ಈ ಯಾನ ಲಕ್ಷಾಂತರ ಡಾಲರ್ ಖರ್ಚಿನ ಬಾಬತ್ತಾದುದರಿಂದ, ಜನಸಾಮಾನ್ಯರಿಗೆ ಇದು ಗಗನಕುಸುಮವೇ ಆಗಬಹುದು. ಅದೂ ಅಲ್ಲದೆ, ಎಲ್ಲ ದೇಶಗಳಲ್ಲಿ ಈ ಸವಲತ್ತು ಸಿಗುವುದು ಅನುಮಾನ.

ಕೊನೇ ಮಾತು: ಈಗಾಗಲೇ ಹಲವು ದೇಶಗಳ ಸಾವಿರಾರು ಉಪಗ್ರಹಗಳು ಆಗಸದಲ್ಲಿ ತಂತಮ್ಮ ಕೆಲಸ ಮುಗಿಸಿ ಕಕ್ಷೆಯಲ್ಲಿ ಗಿರಕಿ ಹೊಡೆಯುತ್ತಿವೆ. ಇದರಿಂದ ಬಾಹ್ಯಾಕಾಶದಲ್ಲಿ ಅಪಾರ ಪ್ರಮಾಣದ ಕಸವೂ (space debri) ಉತ್ಪತ್ತಿಯಾಗಿದೆ. ಇನ್ನುಮುಂದೆ, ಬಾಹ್ಯಾಕಾಶ ಪ್ರವಾಸೋದ್ಯಮ ಜನಪ್ರಿಯವಾಗುವ ಸಾಧ್ಯತೆ ಇರುವುದರಿಂದ, ಆಗಸದಲ್ಲಿ ಮತ್ತಷ್ಟು ಕಸ ಆಗದಿರಲಿ ಎಂದಷ್ಟೆ ಹಾರೈಸಬಹುದು. ಏಕೆಂದರೆ, ಪ್ರವಾಸೋದ್ಯಮದ ಹೆಸರಲ್ಲಿ ಮನುಜ ಭೂಮಿಯ ಮೇಲೆ ಏನೆಲ್ಲ ಅಧ್ವಾನ ಮಾಡಿದ್ದಾನೆ ಎಂಬುದು ಗೊತ್ತೇ ಇದೆಯಲ್ಲ...

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)