ಅವರಿದ್ದ ಕ್ಯಾಂಪಿನಲ್ಲಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು ಕಠಿಣವಾಗಿದ್ದವು. ಯಾವ ಸ್ತ್ರೀಯೂ ಸಾರ್ವಜನಿಕ ಸ್ಥಳದಲ್ಲಿ ದೇಹದ ಯಾವುದೇ ಭಾಗವನ್ನೂ ತೋರಿಸುವಂತಿಲ್ಲ. 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ತ್ರೀಯರು (ವಯಸ್ಸಿಗೆ ಬಂದಿಲ್ಲದ ಬಾಲಕಿಯರ ಹೊರತಾಗಿ) ಕರಿಯ ಬಣ್ಣದ ಬುರಖಾಗಳನ್ನು ಧರಿಸಿ ಮುಖಕ್ಕೆ ನಕಾಬ್ ಧರಿಸಿ, ಕಣ್ಣುಗಳು ಹೊರಗೆ ಕಾಣದಂತೆ ಅವಕ್ಕೆ ವೇಲ್ ಧರಿಸಿರಬೇಕು, ಹಸ್ತಗಳು ಕಾಣದಂತೆ ಕೈಗವಸುಗಳನ್ನು ಧರಿಸಬೇಕು, ಎಲ್ಲರೂ ತಮ್ಮ ಪುರುಷ ಸಂಗಾತಿಯ ಜತೆಯಲ್ಲಿಯೇ ಅಡ್ಡಾಡಬೇಕು, ಯಾವುದೇ ಸ್ತ್ರೀ ಮನೆಯಿಂದ ಹೊರಗೆ ಬರಬೇಕಾದರೆ ಆಕೆ ಧರ್ಮವನ್ನು ಕಲಿಯಲು ಹೋಗುತ್ತಿರಬೇಕು, ಇಲ್ಲವೇ ವೈದ್ಯೆಯಾಗಿರಬೇಕು, ಇಲ್ಲವೇ ಶಿಕ್ಷಕಿಯಾಗಿರಬೇಕು ಎನ್ನುವ ನಿಯಮಗಳಿದ್ದವು.
ಈ ನಿಯಮಗಳ ಜಾರಿಯ ಬಗ್ಗೆ ಸ್ತ್ರೀಯರನ್ನೇ ಹೊಂದಿದ್ದ ಅಲ್ ಖಾನ್ಸಾ ಬ್ರಿಗೇಡ್ ಎಂಬ ವಿಶೇಷ ದಳವಿತ್ತು. ಈ ಸಶಸ್ತ್ರ ದಳವು ನಿಯಮ ಪಾಲಿಸದ ಸ್ತ್ರೀಯರಿಗೆ ಕಠಿಣ ಶಿಕ್ಷೆ ನೀಡುತ್ತಿತ್ತು. ಈ ದಳದ ಕ್ರೌರ್ಯದ ಬಗ್ಗೆ ಹಲವಾರು ಜನರು ಅಯೇಷಾ ಹಾಗೂ ಮರಿಯಂಗೆ ಮಾಹಿತಿ ಕೊಟ್ಟರು. ನಕಾಬ್ ಅನ್ನು ಸಾರ್ವಜನಿಕ ಸ್ಥಳದಲ್ಲಿ ತೆಗೆದಿದ್ದ 19 ವರ್ಷದ ಯುವತಿಗೆ ಈ ದಳವು ಎಷ್ಟು ಭೀಕರವಾಗಿ ಛಡಿಯೇಟುಗಳನ್ನು ನೀಡಿತ್ತೆಂದರೆ ಆಕೆ ಸ್ಥಳದಲ್ಲಿಯೇ ಅಸುನೀಗಿದ್ದಳು. ಇನ್ನೊಬ್ಬ 24 ವರ್ಷ ವಯಸ್ಸಿನ ಮಾತೆ ತನ್ನ ಶಿಶುವಿಗೆ ಸಾರ್ವಜನಿಕ ಸ್ಥಳದಲ್ಲಿ ಮೊಲೆಯೂಡಿಸಿದಾಗ ಅಲ್ ಖಾನ್ಸಾದ ಸೈನ್ಯ ಅವಳ ಮೊಲೆಗಳನ್ನೇ ಕತ್ತರಿಸಿ ಹತ್ಯೆ ಮಾಡಿತ್ತು. ಸಾರ್ವಜನಿಕವಾಗಿ ಚಾಟಿಯೇಟು ಕೊಡುವುದು, ಗುಂಡು ಹೊಡೆದು ಸಾಯಿಸುವುದು ಸರ್ವೆ ಸಾಧಾರಣವಾಗಿತ್ತು. ಈ ಕಥೆಗಳನ್ನು ಕೇಳಿದ ಅಯೇಷಾ ಮತ್ತು ಮರಿಯಂ ತಾವು ಎಂತಹ ಜಾಗಕ್ಕೆ ಬಂದೆವೆಂದು ಚಿಂತೆಗೊಳಗಾದಾಗ ರಷೀದ್ ಸಮಾಧಾನಗೊಳಿಸಿದ್ದ.
ಕೆಲವು ದಿನಗಳ ತರಬೇತಿಯ ನಂತರ ರಷೀದ್ ಮತ್ತು ಅಯೇಷಾರನ್ನು ಅಲ್ಲಿನ ಕಂಪ್ಯೂಟರ್ ಕೇಂದ್ರವೊಂದಕ್ಕೆ ಕರೆದೊಯ್ಯಲಾಯಿತು. ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ವದ ವಿವಿದ ಭಾಗಗಳಲ್ಲಿರುವ ಯುವಕ ಯುವತಿಯರನ್ನು ಸಂರ್ಪಸಿ ಅವರನ್ನು ಇಸ್ಲಾಮಿಕ್ ಸ್ಟೇಟ್ಗೆ ಸೇರುವಂತೆ ಮನಪರಿವರ್ತಿಸಬೇಕೆಂದು ತಿಳಿಸಲಾಯಿತು. ಏತನ್ಮಧ್ಯೆ ಅಯೇಷಾ ಗರ್ಭ ಧರಿಸಿದಳು. ಐಸಿಸ್ ಶಿಬಿರಗಳಲ್ಲಿ ಇದ್ದ ಇನ್ನೊಂದು ನಿಯಮದಂತೆ 9 ವರ್ಷದಿಂದ ಹಿಡಿದು 16 ವರ್ಷ ತುಂಬುವುದರೊಳಗೆ ಎಲ್ಲ ಕನ್ಯೆಯರೂ ಲಗ್ನವಾಗಲೇಬೇಕಿತ್ತು. ಈ ನಿಯಮದ ಫಲವಾಗಿ ಫಾತಿಮಾ ಆತಂಕಗೊಂಡಳು. ಆಕೆಗಾಗಲೇ 24 ವರ್ಷ ವಯಸ್ಸಾಗಿತ್ತು. ಶಿಬಿರಗಳಲ್ಲಿ ಗಂಡುಗಳಿಗೇನೂ ಕೊರತೆಯಿರಲಿಲ್ಲ. ಹಲವಾರು ಐಸಿಸ್ ಯೋಧರು ವಿಧವೆಯರು, ಮೈನೆರೆದ ಬಾಲಕಿಯರನ್ನೂ ಸೇರಿದಂತೆ ಯಾರನ್ನಾದರೂ ಮದುವೆಯಾಗಲು ಹಾತೊರೆಯುತ್ತಿದ್ದರು. ಆದರೆ, ಫಾತಿಮಾಳ ಪುಣ್ಯಕ್ಕೆ ಕೇರಳ ರಾಜ್ಯದಿಂದಲೇ ಐಸಿಸ್ಗೆ ಸೇರಲು ಎರಡನೆಯ ತಂಡ ಆಗಷ್ಟೇ ಬಂದಿತು. ಈ ತಂಡವನ್ನು ಐಸಿಸ್ನತ್ತ ಸೆಳೆಯಲು ರಷೀದನೇ ಕಾರಣೀಭೂತನಾಗಿದ್ದ ಕಾರಣ ಆತ ಒಬ್ಬಂಟಿಯಾಗಿದ್ದ ಈಸಾ ಎನ್ನುವವನಿಗೆ ಫಾತಿಮಾಳ ಜೋಡಿ ಮಾಡಿಕೊಟ್ಟ. ಇಬ್ಬರೂ ಅದೇ ಪಟ್ಟಣದಲ್ಲಿ ಲಗ್ನವಾದರು.
ಅಯೇಷಾ ಆರು ತಿಂಗಳ ಗರ್ಭಿಣಿಯಾದಾಗ ರಷೀದ್ನನ್ನು ಯುದ್ಧ ಮಾಡಲು ಗಡಿ ಭಾಗಕ್ಕೆ ಐಸಿಸ್ ನಾಯಕರು ಕಳುಹಿಸಿದರು. ಅವನೊಡನೆ ಕೇರಳದ ಶಿಹಾಸ್ ಪುರಾಯಿಲ್ ಎನ್ನುವವನನ್ನೂ ಕಳುಹಿಸಲಾಯಿತು. ಇಷ್ಟರಲ್ಲಿ ರಷೀದ್ಗೆ ಐಸಿಸ್ನ ಬಗ್ಗೆ ಭ್ರಮನಿರಸನವಾಗಿತ್ತು. ಐಸಿಸ್ಗೆ ಸೇರಿ ತಪ್ಪುಮಾಡಿದೆ ಎಂದು ಹೇಳುತ್ತಲೇ ಆತ ಯುದ್ಧಭೂಮಿಗೆ ತೆರಳಿದ. ಅಫ್ಘಾನಿಸ್ತಾನದ ಸೈನ್ಯದೊಡನೆ ಯುದ್ಧ ಮಾಡುತ್ತಾ ಆತ ಹಾಗೂ ಶಿಹಾಜ್ ಅಸುನೀಗಿದರು. ರಷೀದನ ಮರಣ ಅಯೇಷಾಳಿಗಷ್ಟೇ ಅಲ್ಲದೆ ಅವರ ತಂಡಕ್ಕೂ ಆಘಾತ ತಂದಿತ್ತು. ಎರಡು ತಿಂಗಳ ನಂತರ ಅಯೇಷಾ ಹೆಣ್ಣುಮಗುವಿಗೆ ಜನ್ಮಕೊಟ್ಟಳು. ಇದಾದ ಆರು ತಿಂಗಳ ನಂತರ ಅವಳನ್ನು 30 ಕಿ.ಮೀ ದೂರದಲ್ಲಿದ್ದ ಇನ್ನೊಂದು ಊರಿಗೆ ಕಳುಹಿಸಲಾಯಿತು. ಆ ಊರಿನ ಐಸಿಸ್ ಶಿಬಿರದಲ್ಲಿ ಕೇವಲ ವಿಧವೆಯರೇ ಇದ್ದರು. ಸುಮಾರು 40 ಜನರಿದ್ದ ಆ ಶಿಬಿರದಲ್ಲಿಯೂ ಅಯೇಷಾಳಿಗೆ ಕಂಪ್ಯೂಟರ್ಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನೇ ಕೊಡಲಾಗಿತ್ತು. ಶಿಬಿರದಲ್ಲಿ ಆರು ತಿಂಗಳಿಂದ ಹಿಡಿದು 14 ವರ್ಷ ವಯಸ್ಸಿನವರೆಗಿನ ಮಕ್ಕಳಿದ್ದರು.
ಈ ಶಿಬಿರದಲ್ಲಿ ದೊಡ್ಡ ಸಮಸ್ಯೆಯೊಂದು ಅಯೇಷಾಳಿಗೆ ಎದುರಾಯಿತು. ಐಸಿಸ್ ನಿಯಮದಂತೆ ಸ್ತ್ರೀಯೊಬ್ಬಳು ಪುರುಷನ ಜತೆಯಿಲ್ಲದೆ ಹೊರಗೆ ಹೋಗುವ ಹಾಗಿರಲಿಲ್ಲವಾದ ಕಾರಣ ಅಯೇಷಾ ಮನೆಯಲ್ಲಿಯೇ ಬಂದಿಯಂತೆ ಕಾಲ ಕಳೆಯಬೇಕಾಗಿತ್ತು. ಆ ಶಿಬಿರದಲ್ಲಿ ಕೇರಳ ಮೂಲದ ಯಾರೂ ಇರದಿದ್ದುದು ಅವಳ ಬೇಸರವನ್ನು ಇಮ್ಮಡಿಗೊಳಿಸಿತ್ತು. ಐಸಿಸ್ನ ಮುಖಂಡರು ಅವಳಿಗೆ ಮರುಮದುವೆಯಾಗಲು ಒತ್ತಡ ಹಾಕತೊಡಗಿದರು. ಮರುಮದುವೆಯಾಗದ ಸುಮಾರು 250 ವಿಧವೆಯರಿಗೆ ಅಲ್ ಖಾನ್ಸಾ ಬ್ರಿಗೇಡ್ ಗಲ್ಲುಶಿಕ್ಷೆ ಕೊಟ್ಟಿರುವುದಾಗಿ ತಿಳಿದಾಗ ಅಯೇಷಾಳಿಗೆ ತನ್ನ ಮಗಳ ಭವಿಷ್ಯದ ಚಿಂತೆ ಕಾಡತೊಡಗಿತು. ಆದರೆ, ಇಸ್ಲಾಮಿಕ್ ಸ್ಟೇಟ್ನ ಶಿಬಿರಗಳಲ್ಲಿದ್ದ ಐಸಿಸ್ ಉಗ್ರರು ಹಲವಾರು ಹೆಂಡಿರನ್ನು ಹೊಂದಲು ಆಸಕ್ತರಾಗಿದ್ದರಿಂದಲೂ, ಅಯೇಷಾ ನೋಡಲು ಸುಂದರಳಾಗಿದ್ದರಿಂದಲೂ ಅವಳ ಕೈಹಿಡಿಯಲು ನೂರಾರು ಜನರು ಮುಂದೆಬಂದರು. ಆದರೆ, ಅವರೆಲ್ಲರೂ ಯೂರೋಪಿಯನ್ನರಾಗಿದ್ದರು. ಅಲ್ಲಿನ ಸಂಪ್ರದಾಯದಂತೆ ಕೇವಲ ಒಂದು ಡಾಲರ್ನಷ್ಟು ಮೆಹರ್ (ವಧು ಶುಲ್ಕ) ನೀಡಿದರೆ ಯಾರಾದರೂ ಐಸಿಸ್ ವಿಧವೆಯರನ್ನು ವರಿಸಬಹುದಾಗಿತ್ತು. ಅಯೇಷಾಗೆ ಭಾರತೀಯ ಮೂಲದ ವ್ಯಕ್ತಿಯೇ ಬೇಕಾಗಿದ್ದ ಕಾರಣ ಮರುಮದುವೆಗೆ ಒಪ್ಪಲು ಹಿಂದೇಟು ಹಾಕುತ್ತಿದ್ದಳು. ಕೆಲ ವಾರಗಳ ನಂತರ ಕಾಸರಗೋಡಿನ ಮೂಲದ ಇಬ್ರಾಹಿಂ ಎನ್ನುವವನು ಅವಳನ್ನು ವರಿಸಲು ಮುಂದೆ ಬಂದ. ಆತ ಕೇವಲ ಮೆಟ್ರಿಕ್ ಪರೀಕ್ಷೆ ಪಾಸಾಗಿದ್ದು ಅವನಿಗಾಗಲೇ ಹೆಂಡತಿ ಮತ್ತು ಮಗಳಿದ್ದರು. ಬೇರೆ ದಾರಿ ಇರದಿದ್ದ ಕಾರಣ ಅಯೇಷಾ ಅವನನ್ನು ಮದುವೆಯಾದಳು.
ನಂತರ ಇಬ್ರಾಹಿಂನನ್ನು ಅವನ ಇಬ್ಬರೂ ಪತ್ನಿ ಪುತ್ರಿಯರ ಜತೆಗೆ ಅಫ್ಘಾನಿಸ್ತಾನದ ಸರಹದ್ದಿನಲ್ಲಿರುವ ಇನ್ನೊಂದು ಶಿಬಿರಕ್ಕೆ ಕಳುಹಿಸಲಾಯಿತು. ಅಲ್ಲಿ ಕೇರಳದಿಂದ ಬಂದಿದ್ದ ಇನ್ನಿತರ ಜನರೂ ಇದ್ದರು. ಅಯೇಷಾ ನಿರಾತಂಕದ ಜೀವನ ನಡೆಸತೊಡಗಿದೆ ಎಂದು ಭಾವಿಸುತ್ತಿರುವಂತೆಯೇ 2020ರ ಆದಿಭಾಗದಲ್ಲಿ ಅಫ್ಘನ್ ಸೈನಿಕರು ಆ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿ ಸುಮಾರು ನೂರು ಐಸಿಸ್ ಉಗ್ರರು ಸತ್ತರು. ಅವರಲ್ಲಿ ಅಯೇಷಾಳ ಗಂಡ ಇಬ್ರಾಹಿಂ ಒಬ್ಬನಾಗಿದ್ದ. ಅಯೇಷಾಗೂ ತೀವ್ರ ಗಾಯಗಳಾದವು. ಶಿಬಿರದಲ್ಲಿ ಬದುಕುಳಿದವರು ಓಡಿಹೋಗಿ ಪರ್ವತವೊಂದರಲ್ಲಿದ್ದ ಗುಹೆಯಲ್ಲಿ ಅಡಗಿಕೊಂಡರು. ಅಫ್ಘಾನ್ ಸೈನಿಕರು ಅಲ್ಲಿಯೂ ಬಾಂಬ್ ಮಳೆಗರೆದರು. ಮುಂದೇನೂ ದಾರಿ ಕಾಣದಾದಾಗ ಅಲ್ಲಿನ ಐಸಿಸ್ ಮುಖಂಡರು ಆಫ್ಘನ್ ಸೈನ್ಯಕ್ಕೆ ಶರಣಾಗಲು ತೀರ್ವನಿಸಿ ಅಡಗುತಾಣದಿಂದ ಹೊರಬಂದರು.
ಸುಮಾರು 500 ಜನರು ಶರಣಾದಾಗ ಆಫ್ಘನ್ನರು ಅವರಲ್ಲಿ ಹೆಂಗಸರು, ಗಂಡಸರು ಮತ್ತು ಬಾಲಕ ಬಾಲಕಿಯರನ್ನು ವಿಂಗಡಿಸಿ ಪ್ರತಿಯೊಬ್ಬರನ್ನೂ ಬೇರೆ ಬೇರೆ ಜೈಲಿಗೆ ಕಳುಹಿಸಿದರು. ಅಯೇಷಾ ಸೇರಿದಂತೆ ಕೇರಳದಿಂದ ಬಂದಿದ್ದ ಎಲ್ಲ ಸ್ತ್ರೀಯರನ್ನೂ ಅವರವರ ಮಕ್ಕಳ ಜತೆ ಕಾಬೂಲ್ ನಗರದ ಬಳಿಯಿರುವ ಜೈಲಿನಲ್ಲಿ ಬಂದಿಗಳನ್ನಾಗಿ ಮಾಡಲಾಯಿತು.
ಅಯೇಷಾಳ ಐದು ವರ್ಷದ ಮಗಳೂ ಅವಳ ಜೊತೆಯಲ್ಲಿಯೇ ಇದ್ದಾಳೆ. ಅದೇ ಜೈಲಿನಲ್ಲಿ ಹಲವಾರು ದೇಶಗಳ ಐಸಿಸ್ ಸ್ತ್ರೀ ಸದಸ್ಯರಿದ್ದಾರೆ. ಬಹುತೇಕರು ಅಮೆರಿಕ, ಇಂಗ್ಲೆಂಡ್, ಯೂರೋಪ್ ದೇಶದಿಂದ ಬಂದಿರುವವರಾದರೂ ಇಂಡೋನೇಷಿಯಾ ಮತ್ತು ಮಲೇಷ್ಯಾ ಮೂಲದ ಕೆಲವು ಹೆಣ್ಣು ಮಕ್ಕಳೂ ಅಲ್ಲಿದ್ದಾರೆ.
ಎಂದಾದರೂ ಒಂದು ದಿನ ತಾನು ಬಿಡುಗಡೆಯಾಗುವೆ ಎಂದು ಭಾವಿಸಿರುವ ಅಯೇಷಾ ಬಿಡುಗಡೆಯಾದರೆ ರಷೀದ್ನ ಮಾತಾಪಿತರ ಜತೆ ಕೇರಳದಲ್ಲಿ ವಾಸಿಸುವೆ ಎನ್ನುತ್ತಾಳೆ. ತಾನು ಯಾವ ತಪ್ಪನ್ನೂ ಮಾಡಿಲ್ಲವೆಂದೇ ಆಕೆ ಸಾಧಿಸುತ್ತಾಳೆ. ಆದರೆ, ಅವಳ ಜತೆಗೆ ಬಂದಿಯಾಗಿರುವ ಇಬ್ಬರು ಮಲೆಯಾಳಿ ಹೆಣ್ಣುಮಕ್ಕಳು ತಾವು ಐಸಿಸ್ಗೆ ಸೇರಿ ತಪ್ಪುಮಾಡಿದ್ದೇವೆ ಎಂದು ಮನಗಂಡಿದ್ದಾರೆ. ಅವರು ತಾಯ್ನಾಡಿಗೆ ಬರಲು ಹಾತೊರೆಯುತ್ತಿದ್ದಾರೆ.
ಇಷ್ಟರಲ್ಲಿ ಎನ್ಐಎ ದಾಖಲಿಸಿರುವ ಪ್ರಕರಣದಲ್ಲಿ ಮೌಲಾನಾ ಹನೀಫಾ, ರಿಜ್ವಾನ್ ಖಾನ್ ಮತ್ತು ಅರ್ಷಿ ಖುರೇಷಿ ಇವರನ್ನು ಐಸಿಸ್ ಉಗ್ರ ಸಂಘಟನೆಗಾಗಿ ಯುವಕ, ಯುವತಿಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಜಾಲದ ಆರೋಪಿಗಳೆಂದು ಬಂಧಿಸಿ ಆರೋಪಪಟ್ಟಿ ಸಲ್ಲಿಸಿದೆ. ಅವರು ಜೈಲಿನಲ್ಲಿದ್ದಾರೆ. ಸದ್ಯಕ್ಕೆ ಅಯೇಷಾ ಸೇರಿದಂತೆ ಅಫ್ಘಾನಿಸ್ತಾನದ ಜೈಲಿನಲ್ಲಿರುವ ಭಾರತೀಯ ಐಸಿಸ್ ಸದಸ್ಯರ ಭವಿಷ್ಯವೇನು ಎಂದು ಯಾರಿಗೂ ತಿಳಿದಿಲ್ಲ. ಬ್ರಿಟನ್ ತನ್ನಲ್ಲಿಂದ ಐಸಿಸ್ ಸೇರಿದ್ದ ಉಗ್ರರನ್ನು ಸ್ವದೇಶಕ್ಕೆ ಮರಳಲು ಬಿಡುವುದಿಲ್ಲ ಎಂದಿದೆ. ಭಾರತವೂ ಇದೇ ನಿಲುವನ್ನು ತೆಗೆದುಕೊಂಡರೆ ಅಯೇಷಾ ಮಗಳೊಡನೆ ಜೈಲಿನಲ್ಲಿಯೇ ಇರಬೇಕಾಗುತ್ತದೆ. ಒಂದು ವೇಳೆ ತಾಲಿಬಾನ್ ಸರ್ಕಾರವೇನಾದರೂ ಅಯೇಷಾ ಮತ್ತಿತರ ಭಾರತೀಯರನ್ನು ಬಲವಂತವಾಗಿ ಸ್ವದೇಶಕ್ಕೆ ಮರಳಿಸಿದರೆ ಈಗಾಗಲೇ ಎನ್ಐಎ ಸಲ್ಲಿಸಿರುವ ಆರೋಪಪಟ್ಟಿಯನ್ವಯ ಅವರು ನ್ಯಾಯಾಲಯದ ವಿಚಾರಣೆಯನ್ನೆದುರಿಸಿ ಶಿಕ್ಷೆಗೊಳಪಟ್ಟು ಭಾರತದ ಜೈಲುಗಳಲ್ಲಿ ಬಂದಿಗಳಾಗುವುದು ನಿಶ್ಚಿತ.
‘ಧರ್ಮ ಸಂಕಟದಿ ಮನ ತಲ್ಲಣಿಸತಿರುವಂದು, ನಿರ್ಮಥಿಸು ನಿನ್ನಾತ್ಮವನೆ ಮಮತೆ ಬಿಟ್ಟು. ನಿರ್ಮಮದ ಸದ್ವಿವೇಕದ ದೀಪಕಿಂತ ನೀಂ ನೆಮ್ಮಲಿನ್ನೇನಿಹುದೋ? ಮಂಕುತಿಮ್ಮ’ ಎಂದಂತೆ ಈ ಪ್ರಕರಣದಿಂದ ಯುವಕ ಯುವತಿಯರು ಎಚ್ಚರಗೊಳ್ಳಬೇಕಾಗಿದೆ. ದ್ವೇಷ ಭಾಷಣಗಳಿಗೆ ಮತ್ತು ಪ್ರಚೋದನೆಗಳಿಗೆ ಮರುಳಾಗದೆ ವಿವೇಕದ ದೀಪದ ಮೂಲಕ ಐಸಿಸ್ನ ನಿಜ ಸ್ವರೂಪವನ್ನು ಅರಿಯದಿದ್ದರೆ ಅವರ ಭವಿಷ್ಯ ಕರಾಳವಾಗುವುದು ಖಚಿತ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)