ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯವು ಎಂಬುದು ನಮಗೆಲ್ಲಾ ಗೊತ್ತಿದ್ದರೂ ನಾವು ಅವುಗಳನ್ನು ಸೇವಿಸುವಾಗ ಎಷ್ಟು ಕ್ರಿಮಿನಾಶಕಗಳನ್ನು ಬಳಸಿದ್ದಾರೋ ಎಂದು ಹೆದರುತ್ತೇವೆ. ಕ್ರಿಮಿನಾಶಕಗಳಿಂದ ನಮ್ಮ ದೇಹಕ್ಕೆ ಕೆಟ್ಟದಾಗುತ್ತದೆ ಎಂಬುದು ನಿಜವಾದರೂ ತರಕಾರಿಗಳ ಸೇವನೆಯಿಂದ ಅಷ್ಟೇ ಪ್ರಯೋಜನವೂ ಆಗುತ್ತದೆ. ಇರುವುದರಲ್ಲಿ ಅತೀ ಕಡಿಮೆ ರಾಸಾಯನಿಕಗಳನ್ನು ಬಯಸುವ ತನ್ಮೂಲಕ ನಮ್ಮ ದೇಹಕ್ಕೆ ಅತಿ ಕಡಿಮೆ ವಿಷ ಹೋಗುವಂತೆ ಮಾಡುವ ತೊಂಡೆಕಾಯಿಯ ಬಗ್ಗೆ ಇಂದು ತಿಳಿದುಕೊಳ್ಳೋಣ. ಬಹುಶಃ ತೊಂಡೆಕಾಯಿಯಷ್ಟು ಮೂಲೆಗುಂಪಾಗಿರುವ ತರಕಾರಿ ಇನ್ನೊಂದಿಲ್ಲ.
ಅದರ ಗುಣಗಳು ಮತ್ತು ಪ್ರಯೋಜನಗಳ ಬಗ್ಗೆ ಮಾತಾಡುವವರೇ ಇಲ್ಲ. ಆದರೆ ನಿಜವಾಗಿ ಹೇಳಬೇಕೆಂದರೆ ತೊಂಡೆಕಾಯಿಯಲ್ಲಿ ಈ ಕಾಲಕ್ಕೆ ಬೇಕಾದ ಎಷ್ಟೋ ಪ್ರಯೋಜನ ಗಳು ಅಡಗಿ ಕುಳಿತಿವೆ. ತೊಂಡೆಕಾಯಿಯಲ್ಲಿ ಒಳ್ಳೆಯ ಪ್ರಮಾಣ ದಲ್ಲಿ ವಿಟಮಿನ್ಗಳು ಮತ್ತು ಖನಿಜಾಂಶಗಳು ಇವೆ. ವಿಶೇಷವಾಗಿ ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಂ ಇವೆ. ಹೇರಳವಾಗಿ ನಾರಿನಂಶ ನಮಗೆ ತೊಂಡೆಕಾಯಿಯಿಂದ ಸಿಗುತ್ತದೆ. ಆಯುರ್ವೆದ ಗ್ರಂಥಗಳಲ್ಲಿ ಕೂಡಾ ತೊಂಡೆಕಾಯಿಯಿಂದ ವಾತ ಮತ್ತು ಪಿತ್ತ ದೋಷಕ್ಕೆ ಸಂಬಂಧಪಟ್ಟ ಹಲವಾರು ತೊಂದರೆಗಳು ಹತೋಟಿಗೆ ಬರಲು ಸಹಾಯವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಅದರಲ್ಲೂ ವಿಶೇಷವಾಗಿ ತೊಂಡೆಬಳ್ಳಿಯ ಎಲೆಗಳು ಮತ್ತು ಬೇರನ್ನು ಔಷಧವಾಗಿ ಬಳಸಲಾಗುತ್ತದೆ.
ಹಾಸಿಗೆಯಲ್ಲಿ ಮೂತ್ರ ಮಾಡುವ ಮಕ್ಕಳಿಗೆ ತೊಂಡೆಬಳ್ಳಿಯ ಬೇರನ್ನು ತೇಯ್ದು ಪ್ರತಿದಿನ 3 ಗ್ರಾಂ ನಷ್ಟು ಕೊಟ್ಟರೆ ತುಂಬಾ ಅನುಕೂಲವಾಗುತ್ತದೆ. ಎಳೆ ಎಲೆಗಳನ್ನು ಬಾಯಿಯಲ್ಲಿಟ್ಟು ಅಗಿದರೆ ವೇಗವಾಗಿ ಬಾಯಿ ಹುಣ್ಣು ಗುಣವಾಗಲು ಸಹಾಯವಾಗುತ್ತದೆ. ಚರ್ಮಕ್ಕೆ ಶಕ್ತಿಯನ್ನು ಕೊಡುವ ಮತ್ತು ಚರ್ಮದ ಸಮಸ್ಯೆಗಳನ್ನು ಕಡಿಮೆಮಾಡುವ, ಕ್ರಿಮಿ, ಕೆಟ್ಟ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ದೂರಮಾಡುವ ಶಕ್ತಿ ಇರುವ ಕಾರಣ 10 ಮಿಲಿಯಷ್ಟು ಇದರ ರಸವನ್ನು ನಿತ್ಯವೂ ಸೇವಿಸಿದರೆ ಗಾಯಗಳು ಬೇಗ ಗುಣವಾಗಲು ಸಹಾಯವಾಗುತ್ತದೆ. ಎಲೆಗಳನ್ನು ರುಬ್ಬಿ ಪೇಸ್ಟ್ಮಾಡಿ ಅದನ್ನು ಫಂಗಲ್ ಇನ್ಪೆಕ್ಷನ್ ಅಥವಾ ಎಕ್ಸಿಮಾದಂತಹ ತೊಂದರೆಗಳ ಮೇಲೆ ಹಚ್ಚಿದರೆ ಅನುಕೂಲವಾಗುತ್ತದೆ. ಇನ್ನು ಆಧುನಿಕ ಸಂಶೋಧನೆಗಳು ಕೂಡ ತೊಂಡೆಕಾಯಿಯನ್ನು ತುಂಬಾ ಹೊಗಳಿವೆ. ಸಂಶೋಧನೆಗಳಲ್ಲಿ ಅತ್ಯಂತ ಪ್ರಮುಖವಾದದ್ದೆಂದರೆ ಇದು ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯ ಅಂಶ ಕಡಿಮೆ ಯಾಗಲು ತುಂಬಾ ಸಹಾಯಮಾಡುತ್ತದೆ ಎಂಬುದು. ಇನ್ಸುಲಿನ್ ಅನ್ನು ದೇಹ ಬಳಸುವ ಕ್ಷಮತೆಯನ್ನು ಹೆಚ್ಚಿಸಿ ರಕ್ತದಲ್ಲಿ ಗ್ಲುಕೋಸ್ನ ಪ್ರಮಾಣ ಹೆಚ್ಚದಂತೆ ನೋಡಿಕೊಳ್ಳುತ್ತದೆ. 2017 ರಲ್ಲಿ ನಡೆದ ಒಂದು ವೈಜ್ಞಾನಿಕ ಅಧ್ಯಯನದ ಪ್ರಕಾರ ಡಯಾಬಿಟೀಸ್ಗೆ ಇದು ಅತ್ಯುತ್ತಮ ಔಷಧಿಯಾಗಬಲ್ಲದು ಎಂಬುದು ಸಾಬೀತಾಗಿದೆ.
2017 ರಲ್ಲಿಯೇ ನಡೆದ ಇನ್ನೊಂದು ಸಂಶೋಧನೆಯ ಪ್ರಕಾರ ತೊಂಡೆಕಾಯಿಗೆ ಸೂಕ್ಷ್ಮಾಣು ನಿರೋಧಕ, ಫಂಗಸ್ ನಿರೋಧಕ ಮತ್ತು ವಿಶೇಷವಾಗಿ ಕ್ಯಾನ್ಸರ್ ನಿರೋಧಕ ಗುಣವಿದೆ ಎಂಬುದು ಸಾಬೀತಾಗಿದೆ. ಬೀಟಾ ಕೆರೋಟಿನ್ ಮತ್ತು ವಿಟಮಿನ್ ಸಿ ಯಂತಹ ಆಂಟಿ ಆಕ್ಸಿಡೆಂಟ್ಗಳು ಹೇರಳವಾಗಿರುವ ಕಾರಣ ಕ್ಯಾನ್ಸರ್ ನಿರೋಧಕವಾಗುವುದರ ಜೊತೆಗೆ ಬೇಗ ಮುಪ್ಪು ಬರುವುದು ಮತ್ತು ಸುಲಭವಾಗಿ ನಮ್ಮ ದೇಹ ರೋಗಗಳಿಗೆ ತುತ್ತಾಗುವುದನ್ನು ಇದು ತಪ್ಪಿಸುತ್ತದೆ. ಅತಿಯಾದ ತೂಕ ಇರುವವರಿಗೆ ಕೂಡ ಇದು ಪ್ರಯೋಜಕ. ಏಕೆಂದರೆ ಇದರಲ್ಲಿ ಕ್ಯಾಲೋರಿ ತುಂಬಾ ಕಡಿಮೆಯಿದೆ. ನಾರಿನ ಅಂಶ ಹೆಚ್ಚಿರುವ ಕಾರಣ ಇದು ಜೀರ್ಣಕ್ರಿಯೆ ಚೆನ್ನಾಗಿ ಆಗಿ ಮಲವಿಸರ್ಜನೆ ಸುಲಭವಾಗಿ ಆಗಲು ಸಹಾಯ ಮಾಡುತ್ತದೆ. ಜೊತೆಗೆ ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಿ ಒಳ್ಳೆಯ ಬ್ಯಾಕ್ಟೀರಿಯಾ ಹೆಚ್ಚಲು ಅನುಕೂಲ ಮಾಡಿಕೊಡುತ್ತದೆ. ತೊಂಡೆಕಾಯಿಯ ಸೇವನೆಯಿಂದ ಬುದ್ಧಿ ಮಂದವಾಗುತ್ತದೆ ಎಂಬ ಭಾವನೆ ನಮ್ಮ ಹಿರಿಯರಲ್ಲಿದೆ. ಆಯುರ್ವೆದದ ಗ್ರಂಥಗಳಲ್ಲಿ ಕೈಯ್ಯದೇವ ನಿಘಂಟು ಎಂಬ ಗ್ರಂಥದಲ್ಲಿ ತೊಂಡೆಕಾಯಿಯನ್ನು ವಿವರಿಸುವಾಗ ನ ಮೇಧ್ಯಂ ಎಂದು ಹೇಳಿದ್ದಾರೆ. ಅಂದರೆ ಇದು ಮೇಧಾಶಕ್ತಿಗೆ ಅಷ್ಟು ಒಳ್ಳೆಯದಲ್ಲ ಎಂದು ಅರ್ಥ ಬರುತ್ತದೆ. ಇದು ಸತ್ಯವಾದರೂ ಇದನ್ನು ನಿತ್ಯ ಸೇವಿಸಿದಾಗ ಮಾತ್ರ ಇದರ ಈ ಕೆಟ್ಟ ಪರಿಣಾಮ ಉಂಟಾಗಲು ಸಾಧ್ಯ. ವಾರಕ್ಕೆ ಎರಡು ಬಾರಿ ಇದನ್ನು ಸೇವಿಸುವುದು ಒಳ್ಳೆಯದೇ. ಹಾಗಾಗಿ ಇದರ ಬಗ್ಗೆ ಯೋಚನೆಯಿಲ್ಲದೇ ನಾವು ತೊಂಡೆಕಾಯಿಯನ್ನು ಬಳಸಿದರೆ ನಮ್ಮ ಆರೋಗ್ಯ ವೃದ್ಧಿ ಚೆನ್ನಾಗಿ ಆಗುತ್ತದೆ.
(ಪ್ರತಿಕ್ರಿಯಿಸಿ: vvsudina@gmail.com)