ವಂಶವಾಹಿ ಪರೀಕ್ಷೆ ಇದೀಗ ಜಾಗತಿಕವಾಗಿ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಸದ್ಯಕ್ಕೆ ಹನ್ನೆರಡು ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಈ ಮಾರುಕಟ್ಟೆ ಮುಂದಿನ ಹತ್ತು ವರ್ಷಗಳಲ್ಲಿ ಪ್ರತಿವರ್ಷ ಶೇಕಡ ಇಪ್ಪತ್ತೆರಡರ ವೃದ್ಧಿಯನ್ನು ಕಂಡು ಸಾಂಪ್ರದಾಯಿಕ ರೋಗನಿರ್ಣಯ ಪರೀಕ್ಷೆಗಳಲ್ಲಿ ಒಂದಾಗಲಿದೆ ಎಂಬುದು ಮಾರುಕಟ್ಟೆ ವಿಶ್ಲೇಷಕರ ಅಂಬೋಣ.
ವಿಜ್ಞಾನಿಗಳ ತಂಡವೊಂದು ಸಾವಿರಾರು ವರ್ಷಗಳ ಹಿಂದೆ ದಕ್ಷಿಣ ಧ್ರುವದಲ್ಲಿ ಆರಾಮಾಗಿ ಓಡಾಡಿಕೊಂಡಿದ್ದ ದೈತ್ಯ ಹಿಮಗಜವನ್ನು ಪುನಸೃಷ್ಟಿ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರ ಕುರಿತು ಇದೇ ಅಂಕಣದಲ್ಲಿ ಈ ಮೊದಲು ಓದಿದ್ದೀರಿ. ಅದೇ ಕಂಪನಿಯು ಕಳೆದ ವಾರ ಮತ್ತದೇ ತಂತ್ರಜ್ಞಾನ ಅಂದರೆ ವಂಶವಾಹಿಯನ್ನು ತಿದ್ದುಪಡಿ ಮಾಡುವ ಮೂಲಕ ಬಿಳಿಯ ತೋಳ ದೈರ್ ವೂಲ್ಪ್ ಅನ್ನು ಮರುಸೃಷ್ಟಿ ಮಾಡಿರುವ ಕುರಿತು ಹೇಳಿಕೊಂಡಿದೆ.
ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಉತ್ತರ ಅಮೆರಿಕದಲ್ಲಿ ಕಂಡುಬರುತ್ತಿದ್ದ ಬಿಳಿಯ ತೋಳ ದೈರ್ ವೂಲ್ಪ್ ಆನಂತರ ಕಣ್ಮರೆಯಾಗಿತ್ತು. ಹೀಗಾಗಿ ಹಲವು ಕಾರಣಗಳಿಗಾಗಿ ಕಳೆದ ಕೆಲ ದಿನಗಳಿಂದ ವಿಜ್ಞಾನ ಕ್ಷೇತ್ರದಲ್ಲಿ ವಂಶವಾಹಿ, ಡಿಎನ್ಎ ಕುರಿತಾದ ವಿಷಯಗಳೇ ಹೆಚ್ಚು ಸದ್ದು ಮಾಡುತ್ತಿವೆ.
ಇತ್ತೀಚೆಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕಂಪನಿ ‘23 ಆಂಡ್ ಮೀ’ ತಾನು ದೀವಾಳಿಯಾಗಿದ್ದನ್ನು ಘೊಷಿಸಿಕೊಂಡಿತು. ಈ ಕುರಿತು ಅಲ್ಲಿನ ಮಾಧ್ಯಮಗಳಲ್ಲಿ ಬರುತ್ತಿರುವ ತರಹೇವಾರಿ ಸುದ್ದಿಗಳು ಆ ಕಂಪನಿಯ ಸುಮಾರು ಒಂದೂವರೆ ಕೋಟಿ ಗ್ರಾಹಕರ ನಿದ್ದೆಕೆಡಿಸಿದೆ. ಅಷ್ಟಕ್ಕೂ ‘23 ಆಂಡ್ ಮೀ’ ಕಂಪನಿಯ ಗ್ರಾಹಕರು ಆತಂಕಗೊಳ್ಳಲು ಸಕಾರಣವೂ ಇದೆ. ಈ ಕಂಪನಿಯು ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ತನ್ನ ಗ್ರಾಹಕರಿಗೆ ವಂಶವಾಹಿ ಪರೀಕ್ಷೆಯ ಸೇವೆಯನ್ನು ನೀಡುತ್ತಿದೆ. ಹಲವು ವರ್ಷಗಳಿಂದ ಸೇವೆಯನ್ನು ನೀಡುತ್ತ ತನ್ನ ಕಾರ್ಯಕ್ಷಮತೆಯಿಂದ ಗ್ರಾಹಕರ ಮನ ಗೆದ್ದಿದ್ದ ಈ ಕಂಪನಿಯು ಆ ಕ್ಷೇತ್ರದ ಮುಂಚೂಣಿ ಸಂಸ್ಥೆಯೂ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ಕಂಪನಿ ದಿವಾಳಿಯಾಗಿದ್ದನ್ನು ಘೊಷಿಸುತ್ತಿದ್ದಂತೆ ಡಿಜಿಟಲ್ ಸ್ವರೂಪದಲ್ಲಿರುವ ಅದರ ಗ್ರಾಹಕರ ಅತಿಸೂಕ್ಷ ವಂಶವಾಹಿ ವಿವರಗಳು ಬಹಿರಂಗವಾಗಲಿವೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಂಪನಿಯು ಹರಾಜು ಪ್ರಕ್ರಿಯೆಯಲ್ಲಿ ಬೇರೆಯವರ ಪಾಲಾಗುವುದು ನಿಚ್ಚಳವಾಗಿರುವ ಕಾರಣ ‘23 ಆಂಡ್ ಮೀ’ ಕಂಪನಿಯ ಗ್ರಾಹಕರು ಅದರ ಜಾಲತಾಣದಿಂದ ತಮ್ಮ ವಂಶವಾಹಿ ವಿವರಗಳನ್ನು ಡಿಲೀಟ್ ಮಾಡುತ್ತಿದ್ದಾರೆ.
‘23 ಆಂಡ್ ಮೀ’ ಕಂಪನಿಯ ದಿವಾಳಿ ಪ್ರಕ್ರಿಯೆ ಕೊಂಚ ಮಟ್ಟಿಗೆ ಅಚ್ಚರಿಯೆಂದೆನಿಸಿದರೂ ವಂಶವಾಹಿ ಪರೀಕ್ಷೆಯ ಸೇವೆಯನ್ನು ನೀಡುತ್ತಿರುವ ಸಂಸ್ಥೆಗಳ ದತ್ತಾಂಶದ ಸುರಕ್ಷೆ ಕುರಿತಾದ ಆತಂಕ ಮೊದಲಿನಿಂದಲೂ ಇದೆ. ಇತ್ತೀಚೆಗಷ್ಟೇ ‘ಸೈಬರ್ ನ್ಯೂಸ್’ ಎಂಬ ಖಾಸಗಿ ಕಂಪನಿಯೊಂದು ಇಂತಹ ಕಂಪನಿಗಳ ಗುಣಮಟ್ಟ ಪರೀಕ್ಷೆಯನ್ನು ನಡೆಸಿ ಅವುಗಳ ಸೈಬರ್ ಸುರಕ್ಷತೆಯ ಮಟ್ಟ ಸಾಧಾರಣವಾಗಿದೆ ಎಂಬ ವರದಿಯನ್ನು ನೀಡಿತ್ತು. ವ್ಯಕಿಯೊಬ್ಬನ ವಂಶವಾಹಿ ವಿವರಗಳು ಖಾಸಗಿ ವಿಷಯವಾಗಿದ್ದು, ಅದು ಆರೋಗ್ಯ ಮತ್ತು ಜೀವವಿಮಾ ಕಂಪನಿಗಳಿಗೆ ಅಮೂಲ್ಯ ಮತ್ತು ಆಸಕ್ತಿಯ ವಿಷಯ. ಜೊತೆಗೆ ಇದು ಅಪರಾಧ ಪತ್ತೆಗೂ ಅತ್ಯವಶ್ಯ ಮಾಹಿತಿಯಾಗಿರುವ ಕಾರಣಕ್ಕೆ ಇದರ ಹಿಂದೆ ಸೈಬರ್ ಮಾಹಿತಿ ಚೋರರು ಯಾವತ್ತೂ ಬಿದ್ದಿರುತ್ತಾರೆ. ಈ ಕಾರಣಕ್ಕೇನೆ ವಂಶವಾಹಿ ಪರೀಕ್ಷೆಯ ಸೇವಾಸಂಸ್ಥೆಗಳ ಸೈಬರ್ ಸುರಕ್ಷತೆ ಕೂಡ ಅಷ್ಟೇ ಉನ್ನತ ದರ್ಜೆಯಲ್ಲಿರಬೇಕಾದ್ದುದು ಅಪೇಕ್ಷಣೀಯ. ಇದೀಗ ‘23 ಆಂಡ್ ಮೀ’ ದೀವಾಳಿಯಾಗಿರುವ ಹಿನ್ನೆಲೆಯಲ್ಲಿ ಅದರ ಒಂದೂವರೆ ಕೋಟಿ ಗ್ರಾಹಕರು ಆತಂಕಗೊಂಡಿರುವುದು ಇದಕ್ಕೇನೆ.
ಜೆನಿಟಿಕ್ಸ್ ಅಂದರೆ ತಳಿ ವಿಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಸಾಧ್ಯತೆಗಳಿರುವ ಕುತೂಹಲಕಾರಿ ವಿಭಾಗ. ನಮ್ಮ ಜೀನ್ಸ್ ಅಂದರೆ ವಂಶವಾಹಿಗಳ ಅಧ್ಯಯನದ ಈ ಕ್ಷೇತ್ರದಲ್ಲಿ ಜೆನೆಟಿಕ್ ಟೆಸ್ಟಿಂಗ್ ಅರ್ಥಾತ್ ವಂಶವಾಹಿ ಪರೀಕ್ಷೆ ಮುಖ್ಯಪಾತ್ರವನ್ನು ವಹಿಸುತ್ತದೆ. ಈ ಮೊದಲು ತಳಿ ವಿಜ್ಞಾನವೆಂದರೆ ನಾವುಗಳು ನಮ್ಮ ಪೂರ್ವಜರಿಂದ ಆನುವಂಶವಾಗಿ ಪಡೆದ ಬಳುವಳಿಯ ಕುರಿತಾದ ಅಧ್ಯಯನ ಎಂಬ ಭಾವನೆ ಹಲವರಲ್ಲಿತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ವಂಶವಾಹಿ ಪರೀಕ್ಷೆ ಭಾರಿ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ. ಅಷ್ಟಕ್ಕೂ ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದ ಈ ವೈದ್ಯಕೀಯ ವಿಭಾಗಕ್ಕೆ ಅಚಾನಕ್ಕಾಗಿ ಅದ್ಯಾಕೆ ಇಷ್ಟೊಂದು ಮನ್ನಣೆಯೆಂಬ ಕಾರಣಗಳನ್ನು ತಿಳಿದುಕೊಳ್ಳುವ ಮುನ್ನ ಅದರ ಬಗ್ಗೆ ಇನ್ನಷ್ಟು ವಿವರಗಳನ್ನು ಅರಿತುಕೊಳ್ಳುವುದು ಸೂಕ್ತ.
ಡಿಎನ್ಎ ಪರೀಕ್ಷೆ ಮತ್ತು ವಂಶವಾಹಿ ಪರೀಕ್ಷೆಯ ಕುರಿತಾಗಿ ಮೊದಲಿನಿಂದಲೂ ಹಲವರಲ್ಲಿ ಗೊಂದಲವಿದೆ. ಅಸಲಿಗೆ ಡಿಎನ್ಎ ಪರೀಕ್ಷೆಯೆಂಬುದು ಡಿಎನ್ಎಯೊಂದರ ವಿಶ್ಲೇಷಣೆಯಾಗಿದ್ದರೆ ವಂಶವಾಹಿ ಪರೀಕ್ಷೆಯು ಡಿಎನ್ಎ ಮೇಲೆ ನಡೆಸಲಾಗುವ ನಿರ್ದಿಷ್ಟ ಪರೀಕ್ಷೆಯಾಗಿರುತ್ತದೆ. ಉದಾಹರಣೆಗೆ ನಮಗೆಲ್ಲೋ ಸಿಕ್ಕಿದ ಪಳೆಯುಳಿಕೆಯ ಮೂಲವನ್ನು ಹುಡುಕಲು ಡಿಎನ್ಎ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದರೆ ವಂಶವಾಹಿ ಪರೀಕ್ಷೆ ಮೂಲಕ ಪಳೆಯುಳಿಕೆಯ ವಯಸ್ಸು , ಆರೋಗ್ಯ ಮತ್ತು ಗುಣಲಕ್ಷಣಗಳನ್ನು ಕಂಡುಹಿಡಿಯಬಹುದು. ಇತ್ತೀಚಿನ ದಿನಗಳಲ್ಲಿ ತಾಂತ್ರಿಕತೆ ಅಭಿವೃದ್ಧಿಗೊಳ್ಳುತ್ತಿದ್ದಂತೆ ವಂಶವಾಹಿ ಪರೀಕ್ಷೆ ಮೂಲಕ ವ್ಯಕ್ತಿಯೊಬ್ಬರಲ್ಲಿ ಕ್ಯಾನ್ಸರ್, ಹೃದ್ರೋಗ, ನರಸಂಬಂಧಿ ಕಾಯಿಲೆಗಳು, ಮಧುಮೇಹ ಮತ್ತು ಮಾನಸಿಕ ಒತ್ತಡಗಳಂತಹ ಆರೋಗ್ಯ ಸಂಬಂಧಿ ಕಾಯಿಲೆಗಳು ಕಂಡುಬರುವ ಸಾಧ್ಯತೆ ಕುರಿತು ಒಂದು ಹಂತದವರೆಗೆ ಊಹಿಸಲು ಸಾಧ್ಯವಿದೆ.
ಮಾನವ ಜೀವಕೋಶಗಳಲ್ಲಿ ಸುಮಾರು ಇಪ್ಪತ್ತು ಸಾವಿರ ಜೀನ್ಸ್ ಅಂದರೆ ವಂಶವಾಹಿಗಳಿರುತ್ತವೆ. ವಂಶವಾಹಿ ಪರೀಕ್ಷೆಯಿಂದ ಅವುಗಳ ರೂಪಾಂತರವನ್ನು ಪತ್ತೆಹಚ್ಚಿ ಆ ಮೂಲಕ ವ್ಯಕ್ತಿಯೊಬ್ಬರಲ್ಲಿ ಕಾಯಿಲೆ ಬರುವ ಸಾಧ್ಯತೆಗಳನ್ನು ಊಹಿಸಲಾಗುತ್ತದೆ. ಜೊತೆಗೆ ಈ ಪರೀಕ್ಷೆ ನಡೆಸಲು ಹೆಚ್ಚು ಕಿರಿಕಿರಿಗಳೂ ಇಲ್ಲ. ಕೇವಲ ರಕ್ತ ಅಥವಾ ಉಗುಳಿನ ಮಾದರಿಯ ಪರೀಕ್ಷೆಯೇ ಸಾಕು. ಜೊತೆಗೆ ಇದು ಜೀವಮಾನದಲ್ಲೊಮ್ಮೆ ಮಾತ್ರ ನಡೆಸುವ ಪರೀಕ್ಷೆಯಾದುದರಿಂದ ಪದೇಪದೆ ಸ್ಯಾಂಪಲ್ ಕೊಟ್ಟು ಫಲಿತಾಂಶಕ್ಕಾಗಿ ಕಾಯುತ್ತ ಕೂರುವ ಪ್ರಮೇಯವಿಲ್ಲ. ವಂಶವಾಹಿ ಪರೀಕ್ಷೆಯ ದೊಡ್ಡ ಪ್ರಯೋಜನವಿರುವುದು ಪುಟ್ಟಮಕ್ಕಳ ವಿಷಯದಲ್ಲಿ. ಇವರಲ್ಲಿ ಮುಂದೆ ಕಂಡುಬರುವ ಕಾಯಿಲೆಗಳ ಸುಳಿವು ಮೊದಲೇ ಸಿಕ್ಕಲ್ಲಿ ಸೂಕ್ತ ಚಿಕಿತ್ಸೆಯನ್ನು ಒದಗಿಸಿ ಗುಣಪಡಿಸುವ ಸಾಧ್ಯತೆಗಳು ಹೆಚ್ಚುವುದರ ಜೊತೆಗೆ ಕುಟುಂಬದವರ ಆರ್ಥಿಕ, ದೈಹಿಕ ಮತ್ತು ಮಾನಸಿಕ ಯಾತನೆಗಳು ಕಡಿಮೆಯಾಗುತ್ತವೆ.
ಅಷ್ಟೆಲ್ಲ ಅನುಕೂಲತೆಗಳನ್ನು ಹೊಂದಿರುವ ವಂಶವಾಹಿ ಪರೀಕ್ಷೆಯನ್ನು ಪರಿಣತ ವೈದ್ಯರ ನಿಗರಾಣಿಯಲ್ಲಿ ಅವರ ಶಿಫಾರಸ್ಸಿನ ಮೇಲೆಯೇ ನಡೆಸಬೇಕಾದದ್ದು ಅಪೇಕ್ಷಣೀಯ. ಈ ಸೇವೆಯನ್ನು ಒದಗಿಸುವ ಸೇವಾದಾರರೇ ಹೇಳುವಂತೆ ಪರೀಕ್ಷೆಯ ಫಲಿತಾಂಶವನ್ನು ಅದನ್ನು ವಿವರಿಸಲೆಂದೇ ಇರುವ ಸಲಹೆಗಾರರಲ್ಲಿ ರ್ಚಚಿಸಿ ತಿಳಿದುಕೊಳ್ಳುವುದು ಉತ್ತಮ. ಇಲ್ಲವೆಂದಲ್ಲಿ ಇದರಿಂದ ಅನಪೇಕ್ಷಿತ ಒತ್ತಡಗಳಿಗೆ ಒಳಗಾಗುವುದು ಖಂಡಿತ. ಜೊತೆಗೆ ಈ ಪರೀಕ್ಷೆಗೆ ಒಳಗಾಗುವ ಮುನ್ನ ಇದರ ಕೆಲ ಮಿತಿಗಳನ್ನೂ ಅರಿತುಕೊಳ್ಳುವುದೂ ಉತ್ತಮ. ಉದಾಹರಣೆಗೆ ವ್ಯಕ್ತಿಯೋರ್ವ ಈ ಪರೀಕ್ಷೆಗೆ ಒಳಗಾದ ಮೇಲೆ ಕ್ಯಾನ್ಸರ್ ಸಾಧ್ಯತೆ ಇಲ್ಲವೆಂದಾದರೆ ಅದು ಕೇವಲ ಊಹೆಯಷ್ಟೇ. ಮುಂದೆ ಅದೇ ವ್ಯಕ್ತಿ ತಂಬಾಕು ಜಗಿಯುವಂತಹ ಚಟಕ್ಕೆ ಒಳಗಾಗಿ ಆ ಕಾರಣಕ್ಕೆ ಕ್ಯಾನ್ಸರ್ ಬಂದರೆ ಅದನ್ನು ಈ ಪರೀಕ್ಷೆ ಪತ್ತೆಹಚ್ಚಲಾರದು. ಹಾಗೆಯೇ ಚಿಕಿತ್ಸೆಯಿಲ್ಲದ ಅಪರೂಪದ ಕಾಯಿಲೆಗಳ ಸಂಭವನೀಯತೆ ಬಗ್ಗೆ ಈ ಪರೀಕ್ಷೆಯಿಂದ ಗೊತ್ತಾದರೆ ಅದರಿಂದ ಅನುಕೂಲತೆಗಿಂತ ಅನಾನಕೂಲತೆಯೇ ಹೆಚ್ಚು. ಹೀಗಾಗಿ ಈ ಪರೀಕ್ಷೆಗೆ ಒಳಗಾಗುವವರು ಇಂತಹ ಅಚ್ಚರಿಗಳಿಗೆ ಮಾನಸಿಕವಾಗಿ ತಯಾರಾಗಿರಬೇಕು.
ಕೋವಿಡ್ ನಂತರದಲ್ಲಿ ಆರೋಗ್ಯ ಸಂಬಂಧಿ ಅರಿವು ಮತ್ತು ಕಾಳಜಿ ಜನರಲ್ಲಿ ಹೆಚ್ಚಾಗಿರುವುದಂತೂ ದಿಟ. ವಂಶವಾಹಿ ಪರೀಕ್ಷೆಯ ಜನಪ್ರಿಯತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಲು ಇದೂ ಒಂದು ಪ್ರಮುಖ ಕಾರಣವೂ ಹೌದು. ಈ ಮೊದಲು ತುಸು ಜಟಿಲವಾಗಿದ್ದ ಈ ಪರೀಕ್ಷೆಗೆ ನಾವು ವಿದೇಶಿ ಸಂಸ್ಥೆಗಳನ್ನು ಆಶ್ರಯಿಸಬೇಕಾಗಿತ್ತು. ಆದರೆ ಇದೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ತಂತ್ರಜ್ಞಾನದ ಅಭಿವೃದ್ಧಿ ಈ ಪರೀಕ್ಷೆಯನ್ನು ಇನ್ನಷ್ಟು ಸರಳವಾಗಿಸುವುದರ ಜೊತೆಗೆ ಜೇಬಿಗೂ ಹಗುರವಾಗಿಸಿದೆ. ಎಲ್ಲ ಬಗೆಯ ವಂಶವಾಹಿ ಪರೀಕ್ಷೆಗಳನ್ನು ಇದೀಗ ಭಾರತದಲ್ಲಿಯೇ ನಡೆಸಬಹುದು. ಐದು ವರ್ಷಗಳ ಹಿಂದೆ ಮೂರು ಲಕ್ಷದ ಆಸುಪಾಸು ಖರ್ಚು ತಗಲುತ್ತಿದ್ದ ವಂಶವಾಹಿ ಪರೀಕ್ಷೆಯನ್ನು ಇದೀಗ ಐದು ಸಾವಿರದಿಂದ ಅರವತ್ತು ಸಾವಿರ ರೂಪಾಯಿಯಲ್ಲಿ ಮಾಡಬಹುದು. ಜೊತೆಗೆ ಫಲಿತಾಂಶವೂ ತಕ್ಷಣ ಅಪೇಕ್ಷಿತರ ಕೈಸೇರುತ್ತದೆ.
ವಂಶವಾಹಿ ಪರೀಕ್ಷೆ ಇದೀಗ ಜಾಗತೀಕವಾಗಿ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಸದ್ಯಕ್ಕೆ ಹನ್ನೆರಡು ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಈ ಮಾರುಕಟ್ಟೆ ಮುಂದಿನ ಹತ್ತು ವರ್ಷಗಳಲ್ಲಿ ಪ್ರತಿವರ್ಷ ಶೇಕಡ ಇಪ್ಪತ್ತೆರಡರ ವೃದ್ಧಿಯನ್ನು ಕಂಡು ಸಾಂಪ್ರದಾಯಿಕ ರೋಗನಿರ್ಣಯ ಪರೀಕ್ಷೆಗಳಲ್ಲಿ ಒಂದಾಗಲಿದೆ ಎಂಬುದು ಮಾರುಕಟ್ಟೆ ವಿಶ್ಲೇಷಕರ ಅಂಬೋಣ. ಅಮೆರಿಕವಂತೂ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೇ ಇದೆ. 2022ರ ಅಂಕಿಅಂಶಗಳ ಪ್ರಕಾರ ಇಲ್ಲಿನ ಶೇಕಡ 80ರಷ್ಟು ಜನರಿಗೆ ಈ ಪರೀಕ್ಷೆಯ ಕುರಿತು ಅರಿವಿದ್ದು ಶೇ.40ರಷ್ಟು ಜನ ಈಗಾಗಲೇ ವಂಶವಾಹಿ ಪರೀಕ್ಷೆಗೊಳಗಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ 2020ರ ಅಂಕಿಅಂಶಗಳಿಗೆ ಹೋಲಿಸಿದಲ್ಲಿ ಇದು ದ್ವಿಗುಣಗೊಂಡಿದ್ದು ಮಾರುಕಟ್ಟೆ ಯಾವ ವೇಗದಲ್ಲಿ ವಿಸ್ತರಿಸುತ್ತಿದೆ ಎಂಬುವುದನ್ನು ಸೂಚಿಸುತ್ತದೆ.
ವಂಶವಾಹಿ ಪರೀಕ್ಷೆಯನ್ನು ಒದಗಿಸುವ ಸೇವಾ ಸಂಸ್ಥೆಗಳು ಭಾರತದಲ್ಲಿ ಇದೀಗ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುತ್ತಿವೆ. ಕಳೆದ ಒಂದೆರಡು ವರ್ಷಗಳಲ್ಲಿ ಈ ಕ್ಷೇತ್ರ ತನ್ನ ಮೌಲ್ಯವನ್ನು ಶೇ.15ರ ಪ್ರಮಾಣದಲ್ಲಿ ಏರಿಸಿಕೊಳ್ಳುತ್ತ ಇದೀಗ -ಠಿ; 500 ಕೋಟಿಯಷ್ಟು ಬೆಲೆಬಾಳುತ್ತಿದೆ. ಸದ್ಯಕ್ಕೆ ಇದು ಭಾರತದ ಸಾಂಪ್ರದಾಯಿಕ ರೋಗನಿರ್ಣಯ ಮಾರುಕಟ್ಟೆಯ ಮೌಲ್ಯವಾದ 40 ಸಾವಿರ ಕೋಟಿ ರೂ.ಗೆ ಹೋಲಿಸಿದರೆ ತುಸು ಕಡಿಮೆಯೆನಿಸಿದರೂ ಈ ಕ್ಷೇತ್ರದ ಸಾಧ್ಯತೆ ಕುರಿತು ಭಾರತೀಯರಲ್ಲಿ ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಹೆಚ್ಚುತ್ತಿರುವ ಅರಿವು ಮತ್ತು ಒಲವು ಮುಂಬರುವ ದಿನಗಳಲ್ಲಿ ಈ ಕ್ಷೇತ್ರ ಮತ್ತಷ್ಟು ಹೆಚ್ಚಿನವರಿಗೆ ತಲುಪುವ ಆತ್ಮವಿಶ್ವಾಸ ಈ ಸೇವಾಸಂಸ್ಥೆಗಳದ್ದು.
ವಂಶವಾಹಿ ಪರೀಕ್ಷೆ ಭವಿಷ್ಯದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಇನ್ನಿಂಗ್ಸ್ ಆಡುವ ಆಟಗಾರನೆಂಬುವುದು ದಿಟ. ಆದರೆ ಇದೊಂದು ಅಭಿವೃದ್ಧಿ ಹೊಂದುತ್ತಿರುವ ವೈದ್ಯಕೀಯ ಕ್ಷೇತ್ರವಾದುದರಿಂದ ಸದ್ಯಕ್ಕೆ ಇದರ ಕರಾರುವಾಕ್ಕುತನದ ಕುರಿತು ಕೆಲವು ಪ್ರಶ್ನೆಗಳು ಸಹಜವಾಗಿಯೇ ಇವೆ. ಆದರೆ ಮುಂದಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಿ ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿ ಹೊಂದಿದಂತೆ ಹೆಚ್ಚಿನ ವಿಶ್ವಾಸಾರ್ಹತೆ ಗಳಿಸಿಕೊಳ್ಳುವುದಂತೂ ಪಕ್ಕಾ. ಆದರೆ ಎಲ್ಲ ನೂತನ ತಂತ್ರಜ್ಞಾನಗಳು ಹೊತ್ತು ತರುವ ಖಾಸಗೀತನದ ಭದ್ರತೆ ಕುರಿತಾದ ಪ್ರಶ್ನೆಗಳು ಇಲ್ಲೂ ಇವೆ. ಗ್ರಾಹಕರಿಗೆ ನೂತನ ತಂತ್ರಜ್ಞಾನದ ಸೌಲಭ್ಯವನ್ನು ನೀಡುತ್ತ ವಂಶವಾಹಿ ವಿವರಗಳ ಖಾಸಗಿತನ ಮತ್ತದರ ಗೌಪ್ಯತೆಯನ್ನು ಕಾಪಿಡುವ ಗುರುತರ ಜವಾಬ್ದಾರಿ ಆ ಸೇವೆಯನ್ನು ನೀಡುವ ಸೇವಾಸಂಸ್ಥೆಗಳ ಮೇಲಿದೆ. ಹಾಗಾದಲ್ಲಿ ಮಾತ್ರ ಈ ಭವಿಷ್ಯದ ಆರೋಗ್ಯ ಹೇಳುವ ಮಂತ್ರದಂಡವು ವೈದ್ಯಕೀಯ ರಂಗದ ಬತ್ತಳಿಕೆಯಲ್ಲಿನ ಹೊಸ ಬಾಣವಾಗಲಿದೆ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)