ಅಂಕಣ

Gen Z ನೇಮಕಾತಿ 30% ಅಷ್ಟೇ..; ನೇಮಕಾತಿ ಟ್ರೆಂಡ್​

ಕೋವಿಡ್ ಎರಡನೇ ಅಲೆ ಅವಧಿಯಲ್ಲಿ ‘Gen Z’ ನೇಮಕಾತಿ ಟ್ರೆಂಡ್ 30% ಅಷ್ಟೇ ಇತ್ತು. ‘Gen Z’ ಎಂದರೆ ಈಗ 18 ರಿಂದ 24ರ ವಯೋಮಾನದಲ್ಲಿರುವವರು. ಲಿಂಕ್ಡ್​ಇನ್ ಎಂಬ ವೃತ್ತಿಪರ ವೇದಿಕೆ ಆಯೋಜಿಸಿದ ನೇಮಕಾತಿ ಟ್ರೆಂಡ್ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಭಾರತದಲ್ಲಿ ಯುವ ಸಮೂಹದ ಕರಿಯರ್ ಮತ್ತು ಶಿಕ್ಷಣ ಯೋಜನೆಗಳ ಟ್ರೆಂಡ್ ಅರಿಯವ ಉದ್ದೇಶದಿಂದ ಜೂನ್ ತಿಂಗಳಲ್ಲಿ ನಡೆಸಿದ ಸಮೀಕ್ಷೆ ಇದಾಗಿತ್ತು. 1,000 ‘Gen Z’ ಯುವಜನ ಇದರಲ್ಲಿ ಭಾಗವಹಿಸಿದ್ದರು. ಇವರು ನೀಡಿದ ಮಾಹಿತಿ ಪ್ರಕಾರ, ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದವರ ಪೈಕಿ 10ರಲ್ಲಿ 7 ಜನರ ಅರ್ಜಿ ತಿರಸ್ಕೃತವಾಗಿದೆ.

ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಶೇಕಡ 72 ವಿದ್ಯಾರ್ಥಿಗಳು ಮತ್ತು ಶೇಕಡ 65 ‘Gen Z’ ಭಾರತೀಯರು ವೃತ್ತಿಪರವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶೇಕಡ 90 ಉದ್ಯೋಗ ನೇಮಕಾತಿ ಆಗದೆ ಡಿಮೋಟಿವೇಟ್ ಆಗಿದ್ದಾರೆ. ಶೇಕಡ 70 ಯುವಜನರಿಗೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಬಹುಕಾಲವಾದರೂ ಸಕಾರಾತ್ಮಕ ಉತ್ತರ ಸಿಗದೆ ಉದ್ವೇಗಕ್ಕೆ ಒಳಗಾಗಿ, ಕೆಲವರು ಖಿನ್ನತೆಗೂ ಜಾರಿದ್ದಾರೆ. ಕೆಲವರಿಗೆ ಉದ್ಯೋಗ ನೇಮಕ ಪ್ರಕ್ರಿಯೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ ಅಥವಾ ರದ್ದಾಗಿದೆೆ ಎಂಬ ಉತ್ತರವನ್ನು ಕಂಪನಿಯವರು ಕೊಟ್ಟಿದ್ದಾರೆ. ನಿಧಾನಗತಿಯ ನೇಮಕಾತಿ, ಗರಿಷ್ಠ ಸ್ಪರ್ಧೆ, ಕೆಲವೇ ಕೆಲವು ಉದ್ಯೋಗಾವಕಾಶ ಎಂಬ 3 ಕಾರಣಗಳನ್ನು ಈ ಹಿನ್ನಡೆಗೆ ಯುವಜನರು ಬೆಟ್ಟು ಮಾಡಿ ತೋರಿಸಿದ್ದಾಗಿ ವರದಿ ಹೇಳಿದೆ.