ಜಗತ್ತು ಕರೊನಾ ಮಹಾಮಾರಿಯಿಂದ ತತ್ತರಿಸುತ್ತಿದೆ. ಈ ಸಾಂಕ್ರಾಮಿಕ ರೋಗವು ಮಾನವ ಕುಲಕೋಟಿಗೆ ಭಯದ ಜತೆಗೆ ಆರ್ಥಿಕ ಹಿಂಜರಿತವನ್ನು ಜಗತ್ತಿನೆಲ್ಲೆಡೆ ಪಸರಿಸಿದೆ. ಹಾಗಾಗಿ ಲಾಕ್ಡೌನ್ ಅವಧಿಯ ಘೊಷಣೆಯಿಂದ ಆಗುವ ಆರ್ಥಿಕ ಬಿಕ್ಕಟ್ಟನ್ನು ವೈಯಕ್ತಿಕವಾಗಿ, ಸಾಮೂಹಿಕವಾಗಿ ಎದುರಿಸುವುದು ಅನಿವಾರ್ಯ. ಈ ಕಾರಣಕ್ಕಾಗಿ, ನಾವು ಕೆಲವೊಂದು ಹಣಕಾಸು ನಿರ್ಧಾರಗಳನ್ನು ಕುಟುಂಬದ ಆದಾಯದ ಮೇಲೆ ಅವಲಂಬಿತವಾಗಿ ರೂಪಿಸಿಕೊಳ್ಳಬೇಕು.
* ಅನವಶ್ಯಕ ಖರ್ಚು-ವೆಚ್ಚಗಳನ್ನು ನಿಯಂತ್ರಿಸಿ, ದಿನನಿತ್ಯದ ಹಾಗೂ ಅವಶ್ಯವೆನಿಸಿದ ಖರ್ಚುಗಳನ್ನು ಸಾಧ್ಯವಾದಲ್ಲಿ ಹಂತಹಂತವಾಗಿ ನಿಭಾಯಿಸುವುದು.
* ದುಬಾರಿ ಬೆಲೆಯ, ವಿಲಾಸಿಜೀವನದ ಅಥವಾ ಪ್ರವಾಸ ಕೈಗೊಳ್ಳುವ ಯೋಜನೆಗಳನ್ನು ಕೆಲವು ತಿಂಗಳವರೆಗೆ ಅಥವಾ ಒಂದು ವರ್ಷದವರೆಗೆ ಮುಂದುಡೂವುದು ಉತ್ತಮ ನಿರ್ಧಾರ. ್ಝಡಿಮೆ ಬಡ್ಡಿ ದರ ಇರುವ ಸಾಲ ದೊರೆಯುತ್ತಿದ್ದರೆ ಅದನ್ನು ಪಡೆದು, ತುರ್ತು ಅವಶ್ಯಕತೆಗಳಿಗೆ ಬಳಸಿಕೊಳ್ಳುವುದು.
* ಕುಟುಂಬದ ಸದಸ್ಯರ ಜೊತೆಗೆ ಆರ್ಥಿಕ ವಿಷಯಗಳನ್ನು ವಿನಿಮಯ ಮಾಡಿಕೊಂಡು ಮಿತವ್ಯಯದ ಅಭ್ಯಾಸವನ್ನು ರೂಢಿಸಿಕೊಳ್ಳುವುದು.
* ತುರ್ತ ಆವರ್ತ ನಿಧಿ (ಕನಿಷ್ಠ ಮೂರು ತಿಂಗಳ ಆದಾಯ) ಎಂಬ ಉಳಿತಾಯವನ್ನು ಮಾಡಿಟ್ಟುಕೊಂಡಿದ್ದರೆ ಒಳ್ಳೆಯದು. ಈ ಸಮಯದಲ್ಲಿ ಇಂತಹ ಉಳಿತಾಯ ಸಹಕಾರಿಯಾಗುತ್ತದೆ.
* ಆಹಾರಧಾನ್ಯಗಳನ್ನು ವೃಥಾ ಪೋಲು ಮಾಡದೆ ಸದುಪಯೋಗವಾಗುವಂತೆ ನೋಡಿಕೊಳ್ಳುವುದು. ನಮ್ಮಲ್ಲಿ ಇರುವ ಆಹಾರ ಸಾಮಗ್ರಿಗಳನ್ನು ಬಳಸಿಕೊಳ್ಳುವುದು. ಮುಂದೆ ಸಿಗುವುದೋ ಅಥವಾ ಇಲ್ಲವೋ ಎಂದು ಅನವಶ್ಯಕ ದಾಸ್ತಾನು ಮಾಡಿಕೊಳ್ಳಬಾರದು.
* ಇಂಥ ಸಾಮಾಜಿಕ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಗಳು ಬಹಳಷ್ಟು ರಿಯಾಯಿತಿ, ವಿನಾಯಿತಿ ಹಾಗೂ ಹಣಕಾಸು ಸೌಲಭ್ಯಗಳನ್ನು ನೀಡಿದೆ. ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ಆರ್ಥಿಕ ಸಂಕಷ್ಟದಿಂದ ಪಾರಾಗಲು ಯತ್ನಿಸಬೇಕು.
* ಸರ್ಕಾರ ಕೊಟ್ಟಿರುವ ಮೊರಟೋರಿಯಮ್ಸಾಲ ಮರುಪಾವತಿ ಮಾಡಲು ಕಾನೂನಿನ ಮೇರೆಗೆ ಕೊಟ್ಟ ಅಧಿಕಾರ) ಸೌಲಭ್ಯವನ್ನು ಅವಶ್ಯ ಎನಿಸಿದಲ್ಲಿ ಬಳಸಿಕೊಳ್ಳಿ. ಈ ವಿಚಾರವಾಗಿ ತಾವು ಸಾಲ ಹೊಂದಿದ ಬ್ಯಾಂಕಿನಲ್ಲಿ ತಮ್ಮ ಇಚ್ಛೆಯನ್ನು ತಿಳಿಸಿ. ಇ.ಎಮ್ಐ. ಪಾವತಿಸಲು ಸಾಮರ್ಥ್ಯವಿದ್ದರೆ ಪಾವತಿಸುವುದು ಒಳ್ಳೆಯದು. ಈಗ ಆರ್ಥಿಕ ತೊಂದರೆ ಅನುಭವಿಸು ವವರು ಮಾತ್ರ ಈ ಸೌಲಭ್ಯವನ್ನು ಬಳಸಿಕೊಂಡರೆ ಒಳ್ಳೆಯದು.
* ಎಲ್ಲ ರೀತಿಯಿಂದ ಅನುಕೂಲ ಇರುವವರು ಹಾಗೂ ಹೂಡಿಕೆಗಾಗಿ ಹಣ ಇಟ್ಟುಕೊಂಡವರು ಈಗ ಉತ್ತಮ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಏಕೆಂದರೆ ಷೇರು ಮಾರುಕಟ್ಟೆ ಗಮನಾರ್ಹ ಇಳಿಕೆಯನ್ನು ಕಂಡಿದೆ. ಹಾಗಾಗಿ ಹಂತಹಂತವಾಗಿ ಹೂಡಿಕೆ ಮಾಡಿ ಮುಂದಿನ ದಿನಗಳಲ್ಲಿ ಉತ್ತಮ ಗಳಿಕೆಯನ್ನು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
| ಜೆ.ಸಿ.ಜಾಧವ್ ಗಂಗಾವತಿ