ಚಿರಂಜೀವಿ ಬಗ್ಗೆ ಹೇಳ ಹೊರಟರೆ, ಅದು ಮುಗಿಯದ ಪುಸ್ತಕ. ಎಷ್ಟು ಹೇಳಿದರೂ ಸಾಕಾಗುವುದಿಲ್ಲ, ಮುಗಿಯುವುದಿಲ್ಲ. ಆಗ ನಾವಿನ್ನೂ ಹೈಸ್ಕೂಲ್ ಅಂತ ಕಾಣತ್ತೆ. ನಾನು, ಪ್ರಜ್ವಲ್ ದೇವರಾಜ್ ಮತ್ತು ಚಿರು ಒಟ್ಟಿಗೆ ಇಮ್ರಾನ್ ಸರ್ದಾರಿಯಾ ಅವರ ಡಾನ್ಸ್ ಕ್ಲಾಸ್ಗೆ ಸೇರಿದ್ವಿ. ಅಲ್ಲಿಂದ ನಮ್ಮ ಸ್ನೇಹ ಶುರು. ಏನೇ ಮಾಡಿದರೂ ನಮ್ಮದೇ ಆದ ಒಂದು ಪಟಾಲಂ ಇದೆ. ಒಂಬತ್ತು ಮಂದಿ ಹುಡುಗರ ಗುಂಪು. ಒಟ್ಟಿಗೆ ಸಿನಿಮಾ ನೋಡೋದು, ಸಿನಿಮಾ ಕಾರ್ಯಕ್ರಮ ಇದ್ದರೂ ಒಟ್ಟಿಗೆ ಹೋಗೋದು ವಾಡಿಕೆ. ನಮ್ಮ ಗುಂಪಿನ ಯಾರದೇ ಮನೆಯಲ್ಲಿ ಏನೇ ಕಾರ್ಯಕ್ರಮ ಇದ್ದರೂ ಎಲ್ಲರ ಹಾಜರಿ ಅಲ್ಲಿ ಕಡ್ಡಾಯ. ಅದರಲ್ಲೂ ಚಿರು ಎಲ್ಲಕ್ಕಿಂತ ಸ್ಪೆಷಲ್. ಆತನ ಮೊದಲ ಸಿನಿಮಾ ಹೋಮ್ ಬ್ಯಾನರ್ನಲ್ಲಿ ಆಗಿತ್ತು. ಎರಡನೇ ಸಿನಿಮಾ ‘ಗಂಡೆದೆ’ಗೆ ಸಂಭಾವನೆ ಸಿಕ್ಕಿತ್ತು. ಆ ಖುಷಿಯನ್ನು ಹಂಚಿಕೊಳ್ಳಲು ನಮ್ಮ ಇಡೀ ಬಳಗಕ್ಕೆ ಏನಾದರೊಂದು ನೀಡಬೇಕೆಂದು ಹಠ ಹಿಡಿದಿದ್ದ. ಅದರಂತೆ ಎಲ್ಲರಿಗೂ ಚೆಕ್ ನೀಡಿದ್ದ. ಈಗಲೂ ಆ ಚೆಕ್ ನಮ್ಮ ಕೆಲ ಸ್ನೇಹಿತರ ಬಳಿ ಇದೆ. ಸಿನಿಮಾ ಶೂಟಿಂಗ್ಗೆಂದು ವಿದೇಶಕ್ಕೆ ಹೋದರೆ ಮುಗೀತು, ನಮ್ಮ ಗ್ಯಾಂಗ್ಗೆ ಏನಾದರೊಂದು ತರುತ್ತಿದ್ದ. ಏನೇ ತಂದರೂ ಎಲ್ಲರಿಗೂ ತರುತ್ತಿದ್ದ. ‘ಅಂಗಡಿಯನ್ನೇ ಹೊತ್ಕೊಂಡ್ ಬರಬೇಡ ಮಾರಾಯಾ ...’ ಎಂದು ನಾವು ಕಾಡಿಸಿದ್ದು ಉಂಟು. ಹಾಗಾಗಿ ಚಿರುಗೆ ಗೆಳೆತನ ಅಂದರೆ ಅಷ್ಟೊಂದು ಪ್ರೀತಿ ಮತ್ತು ಅದನ್ನು ಸದಾ ಕಾಯ್ದುಕೊಳ್ಳಬೇಕೆನ್ನುವ ಗುಣ ಅವನಲ್ಲಿ ಚೂರು ಹೆಚ್ಚೇ ಇತ್ತು. ಇತ್ತೀಚೆಗೆ ಕೋವಿಡ್ ಲಾಕ್ಡೌನ್ ಶುರುವಾದಾಗ ಸ್ಯಾನಿಟೈಸರ್ ಸಹ ಬರೋಬ್ಬರಿ 20 ಖರೀದಿ ಮಾಡಿ ತಂದಿದ್ದ. ಎಲ್ಲರಿಗೂ ಒಂದೊಂದು ಎಂದು ನೀಡಿದ್ದ. ನಿಜಕ್ಕೂ ಈಗ ಅದೆಲ್ಲವನ್ನು ನೆನಪಿಸಿಕೊಂಡರೆ, ಮಾತು ಹೊರಡುವುದಿಲ್ಲ. ಕರಿಯರ್ನ ಒಂದೊಳ್ಳೆ ಪೀಕ್ನಲ್ಲಿದ್ದಾಗಲೇ ನಮ್ಮನ್ನು ಅಗಲಿದ. ನಮ್ಮ ಇಡೀ ಸ್ನೇಹ ಬಳಗದ ಸಂಕೇತವಾಗಿದ್ದ ಚಿರು. ರಿಯಲಿ ಮಿಸ್ ಯೂ ಮ್ಯಾನ್.
| ಪನ್ನಗಾಭರಣ ಚಿರು ಬಾಲ್ಯ ಸ್ನೇಹಿತ, ನಿರ್ದೇಶಕ