ಅಂಕಣ

ಹನ್ನೊಂದು ಹೆಂಡಿರ ಮೋಸದ ಗಂಡ; ಆ ಕ್ಷಣ...

Webdesk - Ravikanth
ಬಡಕುಟುಂಬಕ್ಕೆ ಸೇರಿದ್ದ ರಮೇಶ್ ಪಿಯುಸಿ ನಂತರ ಮಹಾನಗರವೊಂದರ ಮೆಡಿಕಲ್ ಕಾಲೇಜಿನಲ್ಲಿ ಅಟೆಂಡರ್ ಕೆಲಸಕ್ಕೆ ಸೇರಿದ. ವೈದ್ಯಕೀಯ ವಿಷಯಗಳ ಬಗೆಗೆ ತಿಳಿದುಕೊಳ್ಳುವ ಅಪಾರ ಕುತೂಹಲದ ಕಾರಣ ಕೆಲವೇ ವರ್ಷಗಳಲ್ಲಿ ಆತ ಎಂಬಿಬಿಎಸ್ ಪದವೀಧರರಷ್ಟೇ ಜ್ಞಾನವನ್ನು ಸಂಪಾದಿಸಿದ್ದ. ಇದಲ್ಲದೇ ಇಂಗ್ಲಿಷ್ ಸೇರಿ ಹಲವಾರು ಭಾಷೆಗಳನ್ನು ಸುಲಲಿತವಾಗಿ ಮಾತನಾಡಲು ಕಲಿತು ಸಾಕಷ್ಟು ಸ್ನೇಹಿತರನ್ನು ಗಳಿಸಿದ. 1979ರಲ್ಲಿ ತನ್ನ 35ನೆಯ ವಯಸ್ಸಿನಲ್ಲಿ ತನ್ನ ಹುಟ್ಟೂರಿನವಳೇ ಆದ ಇಂದಿರಾಳ ಜೊತೆ ಲಗ್ನವಾದ. ಆದರೆ ಅವಳನ್ನು ಪಟ್ಟಣಕ್ಕೆ ಕರೆತರದೇ ತನ್ನ ಮಾತಾಪಿತರ ಮನೆಯಲ್ಲಿಯೇ ಇರಿಸಿದ.

ಪೊ›ಫೆಸರ್ ಒಬ್ಬರ ಸಲಹೆಯಂತೆ ರಮೇಶ್ ಷೇರುಪೇಟೆಯಲ್ಲಿ ಆನ್​ಲೈನಿನಲ್ಲಿ ಹಣ ತೊಡಗಿಸಲು ತೊಡಗಿದ. ಆರೇಳು ತಿಂಗಳಲ್ಲಿ ಸಾಕಷ್ಟು ಹಣವನ್ನೂ ಗಳಿಸಿದ. ಆದರೆ ಒಂದು ದಿನ ಷೇರುಪೇಟೆ ಇದ್ದಕ್ಕಿದ್ದಂತೆ ಕುಸಿದಾಗ ರಮೇಶ್ ಬಹುತೇಕ ಹಣವನ್ನು ಕಳೆದುಕೊಂಡ. ಹಣವನ್ನು ಮರಳಿ ಗಳಿಸಲು ಸಾಲಮಾಡಿ ಆ ಹಣವನ್ನು ಷೇರುಪೇಟೆಯಲ್ಲಿ ಹಾಕಿದ. ಅದೂ ನಷ್ಟವಾಯಿತು. ಇದೂ ಸಾಲದೆಂಬಂತೆ ಅದೇ ಸಮಯಕ್ಕೆ ಇಂದಿರಾ ಅವನನ್ನು ತೊರೆದು ತವರಿಗೆ ಹೊರಟುಹೋದಳು.

2006ರ ಒಂದು ದಿನ ರಮೇಶ್ ಕಾಲೇಜಿನ ಕೆಲಸದ ಮೇಲೆ ರಾಜ್ಯ ರಾಜಧಾನಿಗೆ ರೈಲಿನಲ್ಲಿ ಹೋಗುತ್ತಿದ್ದಾಗ ಅವನಿಗೆ ಕೇರಳ ಮೂಲದ ಒಬ್ಬ ವ್ಯಕ್ತಿ ಪರಿಚಯವಾದ. ರಮೇಶ್ ಪ್ರಖ್ಯಾತ ಖಾಸಗಿ ಮೆಡಿಕಲ್ ಕಾಲೇಜ್​ನಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿದ ಆತ ನರ್ಸಿಂಗ್ ಪದವಿ ಪಡೆದಿದ್ದ ತನ್ನ ಸೋದರಿಗೆ ನೌಕರಿ ಕೊಡಿಸಲು ಕೋರಿದ. ಇದಕ್ಕೊಪ್ಪಿದ ರಮೇಶ್ ಸಂಬಂಧಪಟ್ಟವರಿಗೆ ಲಂಚ ಕೊಡಬೇಕೆಂದು ಐದು ಲಕ್ಷ ರೂ ಪಡೆದು ಆ ಹಣದಿಂದ ತನ್ನ ಬಹುತೇಕ ಸಾಲವನ್ನು ತೀರಿಸಿದ. ಎರಡು ತಿಂಗಳಾದರೂ ನೌಕರಿ ಕೊಡಿಸದಿದ್ದಾಗ ಕೇರಳದ ಆ ಯುವಕ ಪದೇಪದೆ ಅವನನ್ನು ಸಂರ್ಪಸಿದ. ರಮೇಶ್ ಹಣವನ್ನೂ ವಾಪಸು ಮಾಡದೆ ನೌಕರಿಯನ್ನೂ ಕೊಡಿಸದಿದ್ದಾಗ ಆ ಯುವಕ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ಮೋಸದ ದೂರು ದಾಖಲಿಸಿದ. ಪೊಲೀಸರು ರಮೇಶನಿದ್ದ ಊರಿಗೆ ಬಂದು ಅವನನ್ನು ಬಂಧಿಸಿದರು. ಕೆಲಕಾಲ ನ್ಯಾಯಾಂಗ ಬಂಧನದಲ್ಲಿದ್ದ ರಮೇಶ್ ಜಾಮೀನು ಪಡೆದು ಊರಿಗೆ ವಾಪಸ್ಸಾದ.

ತಾನು ಅದೇ ಊರಿನಲ್ಲಿದ್ದರೆ ಪೊಲೀಸರು ಬೆನ್ನಟ್ಟುತ್ತಾರೆಂದು ಹೆದರಿದ ರಮೇಶ್, ಹೆಸರನ್ನು ರಾಜ್​ಕುಮಾರ್ ಎಂದು ಬದಲಿಸಿಕೊಂಡು ಬೇರೆ ಊರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿಕೊಂಡ. ಇತರರಿಗೆ ಮೋಸ ಮಾಡಿ ಸುಲಭವಾಗಿ ಹಣ ಗಳಿಸಬಹುದೆಂದು ಅರಿತಿದ್ದ ರಮೇಶ್, ಒಂದು ನಕಲಿ ಆಧಾರ್ ಕಾರ್ಡ್ ಮತ್ತಿತರ ಖೊಟ್ಟಿ ದಾಖಲೆಗಳನ್ನು ಮಾಡಿಸಿಕೊಂಡ. 2010ರಲ್ಲಿ ಹೈದರಾಬಾದ್​ಗೆ ಹೋಗಿ ದೇಶದ ವಿವಿಧ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮ್ಯಾನೇಜ್​ವೆುಂಟ್ ಸೀಟ್ ಕೊಡಿಸುವುದಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಚಾರ ಮಾಡಿದ. ಹಲವಾರು ಜನರು ಅವನನ್ನು ಸಂರ್ಪಸಿದರು. 10 ಅಭ್ಯರ್ಥಿಗಳಿಂದ ಕಾಲೇಜಿನ ಡೊನೇಷನ್ ಎಂದು ತಲಾ 40 ಲಕ್ಷ ರೂಪಾಯಿಗಳಂತೆ ನಗದನ್ನು ವಸೂಲಿ ಮಾಡಿದ. ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಕಾಲೇಜಿನ ಲೆಟರ್​ಹೆಡ್​ಗಳಲ್ಲಿ ಅವರಿಗೆ ಪ್ರವೇಶಪತ್ರ ನೀಡಿ ಕಾಲೇಜಿಗೆ ಹೋಗಿ ಪ್ರಿನ್ಸಿಪಾಲರಿಗೆ ಆ ಪತ್ರ ತೋರಿಸಿ ಅಡ್ಮಿಷನ್ ಪಡೆಯಲು ಸೂಚಿಸಿದ. ಅವರುಗಳು ಕಾಲೇಜಿಗೆ ಹೋದಾಗ ತಾವು ಮೋಸಹೋದ ವಿಷಯ ತಿಳಿದು, ಹೈದರಾಬಾದಿನ ಪೊಲೀಸರಿಗೆ ದೂರು ನೀಡಿದರು. ಅಲ್ಲಿನ ನಗರ ಪೊಲೀಸ್ ಠಾಣೆಯೊಂದರಲ್ಲಿ ರಮೇಶ್​ನ ವಿರುದ್ಧ ಐದು ಪ್ರಕರಣಗಳು ದಾಖಲಾದವು. ಆದರೆ ಆತ ಹೆಸರು ಹಾಗೂ ಊರನ್ನು ಬದಲಾಯಿಸಿದ್ದರಿಂದ ಪೊಲೀಸರಿಗೆ ಸಿಕ್ಕಿ ಬೀಳಲಿಲ್ಲ. ತಾನು ಗಳಿಸಿದ ಭಾರೀ ಹಣದಿಂದ ಸುಖೀಜೀವನ ನಡೆಸತೊಡಗಿದ.

ರಮೇಶ ಎರಡನೆಯ ಮದುವೆ ಮಾಡಿಕೊಳ್ಳಲು ಸೂಕ್ತ ವಧುವನ್ನು ಹುಡುಕಲು ವಧೂವರರ ಸಂಪರ್ಕ ಕಲ್ಪಿಸುವ ವೆಬ್​ಸೈಟುಗಳನ್ನು ನೋಡತೊಡಗಿದ. ಚೆನ್ನೆ ೖನ ಕಾಲೇಜು ಶಿಕ್ಷಕಿಯೊಬ್ಬಳ ಸಂಪರ್ಕ ದೊರಕಿತು. 38 ವರ್ಷ ವಯಸ್ಸಿನ, ಮಕ್ಕಳಿಲ್ಲದ ವಿಧವೆಯಾಗಿದ್ದ ಆಕೆ ಎರಡನೆಯ ಮದುವೆಗಾಗಿ ಹೆಸರನ್ನು ದಾಖಲಿಸಿದ್ದಳು. ತಾನು ಡಾಕ್ಟರ್ ಎಂದು ಪರಿಚಯಿಸಿಕೊಂಡ ರಮೇಶ್ ಅವಳನ್ನು ನೋಡಲು ಚೆನ್ನೈಗೆ ಹೋದ. ಆಕೆ ಅನುಕೂಲಸ್ಥೆಯೆಂದು ಕಂಡಕೂಡಲೇ ಲಗ್ನಕ್ಕೊಪ್ಪಿದ. ಮದುವೆಯ ಸಮಯದಲ್ಲಿ ಯಾರೋ ಬಾಡಿಗೆ ತಂದೆ-ತಾಯಿಯನ್ನು ಕರೆದುಕೊಂಡು ಹೋಗಿದ್ದ. ತಾನು ಚೆನ್ನೆ ೖನಲ್ಲಿ ನೌಕರಿ ಹುಡುಕುವುದಾಗಿ ತಿಳಿಸಿ ಆರು ತಿಂಗಳ ಕಾಲ ಅವಳ ಮನೆಯಲ್ಲಿಯೇ ವಾಸವಿದ್ದು ಆನಂತರ ತನ್ನ ಮಾತಾಪಿತರನ್ನು ನೋಡಿಕೊಂಡು ಬರುವೆನೆಂದು ಹೇಳಿ ಅವಳು ಮನೆಯಲ್ಲಿಟ್ಟಿದ್ದ 10 ಲಕ್ಷ ರೂ.ಗಳನ್ನು ಕದ್ದು ತನ್ನ ಊರಿಗೆ ವಾಪಸಾದ.

ಆನಂತರ ರಮೇಶ್ ವಿವಾಹದ ವೆಬ್​ಸೈಟಿನ ಮೂಲಕ ಕೇಂದ್ರ ಅರೆಸೈನಿಕ ದಳವೊಂದರ ಮಹಿಳಾ ಬೆಟಾಲಿಯನ್​ನಲ್ಲಿ ಹಿರಿಯ ಇನ್​ಸ್ಪೆಕ್ಟರ್ ಆಗಿದ್ದ ಹರಿಯಾಣಾದ ಒಬ್ಬಳನ್ನು ಸಂರ್ಪಸಿದ. ತನಗೆ 40 ವರ್ಷ ವಯಸ್ಸಾಗಿದ್ದರೂ ಲಗ್ನವಾಗಿರದಿದ್ದ ಕಾರಣ ಕುಟುಂಬದವರ ಒತ್ತಡದ ಮೇರೆಗೆ ಯಾವುದೇ ಭಾಷೆ, ರಾಜ್ಯ ಅಥವಾ ಜಾತಿಯ ವರನನ್ನು ಮದುವೆಯಾಗಲು ಆಕೆ ತಯಾರಾಗಿದ್ದಳು. ತಾನು ಬೆಂಗಳೂರಿನ ಕಿದ್ವಾಯಿ ಕಾನ್ಸರ್ ಆಸ್ಪತ್ರೆಯ ಆಡಳಿತಾಧಿಕಾರಿ ಎಂದು ಹೇಳಿಕೊಂಡು ನಕಲಿ ಪರಿಚಯ ಪತ್ರ ಹಾಗೂ ವಿಸಿಟಿಂಗ್ ಕಾರ್ಡ್ ತೋರಿಸಿ ಅವಳನ್ನು ಲಗ್ನವಾದ. ‘ನಿನಗೆ ಬೆಂಗಳೂರಿಗೆ ವರ್ಗವಾಗಲು ಸಾಧ್ಯವಿರದ ಕಾರಣ ನಾನೇ ರಜೆಹಾಕಿ ನಿನ್ನ ಜತೆಯಲ್ಲಿರುವೆ’ ಎಂದು ಹೇಳಿ ಅವಳೊಡನೆ ಮೂರು ತಿಂಗಳ ಕಾಲ ವಾಸ ಮಾಡಿದ. ಆ ಊರಿನ ಗುರುದ್ವಾರದ ಸಂಚಾಲಕರಿಗೆ ಮೆಡಿಕಲ್ ಕಾಲೇಜು ಸ್ಥಾಪಿಸಲು ಸರ್ಕಾರದ ಪರವಾನಗಿ ಕೊಡಿಸುವೆನೆಂದು ಹೇಳಿ ಅವರಿಂದ 11 ಲಕ್ಷ ರೂ ಪಡೆದ. ಅವರು ಪರವಾನಗಿ ಬಗ್ಗೆ ವಿಚಾರಿಸತೊಡಗಿದಾಗ ಆ ಊರಿನಿಂದ ಪರಾರಿಯಾದ. ಅದಕ್ಕೂ ಮುನ್ನ ತಾನು ದೆಹಲಿಯ ಆಸ್ಪತ್ರೆಯೊಂದಕ್ಕೆ ವರ್ಗ ಮಾಡಿಸಿಕೊಳ್ಳಲು ಹಣಬೇಕೆಂದು ಹೆಂಡತಿಯಿಂದ 25 ಲಕ್ಷ ರೂ. ಸಾಲವೆಂದು ಪಡೆದ.

ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ, ವಯಸ್ಸಾದ ಅವಿವಾಹಿತ ಹೆಣ್ಣುಮಕ್ಕಳು ಇಲ್ಲವೇ ವಿವಾಹ ವಿಚ್ಛೇದನವಾಗಿರುವ ಅಥವಾ ವಿಧವೆಯರಾಗಿ ಮರುಲಗ್ನ ಮಾಡಿಕೊಳ್ಳಲು ತಯಾರಿರುವಂತಹವರಿಗಾಗಿಯೇ ರಮೇಶ್ ಬಲೆ ಬೀಸುತ್ತಿದ್ದ. ಇಂತಹವರು ತಮ್ಮನ್ನು ಲಗ್ನವಾಗಬಯಸುವರ ಬಗ್ಗೆ ಹೆಚ್ಚಿನ ಪರಿಶೀಲನೆ ಮಾಡುವುದಿಲ್ಲವೆಂದು ಆತ ರ್ತಸಿದ್ದ. ರಮೇಶ್ ಕುಳ್ಳಗೆ ದಪ್ಪಗಿದ್ದು 55 ವರ್ಷ ದಾಟಿದ್ದರೂ ನಯವಾದ ಮಾತುಗಳಿಂದ ಎಂತಹವರನ್ನೂ ಮರುಳುಮಾಡಬಲ್ಲವನಾಗಿದ್ದ. ಹೀಗಾಗಿ 2015ರಿಂದ 2020ರ ನಡುವೆ ಆತ ದೆಹಲಿ, ಕೊಲ್ಕತ್ತ, ವಿಶಾಖಪಟ್ಟಣ, ಲಖನೌ, ಮುಂಬೈ ಈ ಐದು ಪಟ್ಟಣಗಳಲ್ಲಿ ವೈದೈ, ನರ್ಸ್, ಚಾರ್ಟಡ್ ಅಕೌಂಟೆಂಟ್, ಬ್ಯಾಂಕ್ ಅಧಿಕಾರಿಣಿ ಹೀಗೆ ಎಂಟು ಜನರನ್ನು ಲಗ್ನವಾದ. ರಮೇಶ್ ಕುಮಾರ್, ರಾಮಚಂದ್ರ, ರಂಜನ್ ರಾಯ್ ಇತ್ಯಾದಿ ಹೆಸರುಗಳನ್ನಿಟ್ಟುಕೊಂಡು ಅವರಿಗೆ ವಂಚಿಸಿದ್ದ. ಇಬ್ಬರ ಹೊರತಾಗಿ ಉಳಿದವರನ್ನು ಅವರುಗಳಿದ್ದ ಊರಲ್ಲೇ ಇಟ್ಟಿದ್ದ. ಇಬ್ಬರನ್ನು ತಾನಿದ್ದ ಊರಿನಲ್ಲಿಯೇ ಬೇರೆ ಬೇರೆ ಮನೆಗಳಲ್ಲಿಟ್ಟು ಸಂಸಾರ ಮಾಡುತ್ತಿದ್ದ.

ಇಂತಹ ಇಬ್ಬರಲ್ಲಿ ಒಬ್ಬಾಕೆ ಮಧ್ಯಪ್ರದೇಶದವಳಾಗಿದ್ದಳು. 2019ರಲ್ಲಿ ಆಕೆಯನ್ನಾತ ತನ್ನ ಊರಿಗೇ ಕರೆಸಿ ದೇವಸ್ಥಾನದಲ್ಲಿ ವಿವಾಹವಾಗಿದ್ದ. ಆದರೆ ಆಕೆಗೆ ತನ್ನ ಊರಿನಲ್ಲಿ ಹಿರಿಯರೆದುರು ಶಾಸ್ತ್ರೋಕ್ತವಾಗಿ ಲಗ್ನ ಮಾಡಿಕೊಳ್ಳಬೇಕೆಂಬ ಬಯಕೆಯಿತ್ತು. ಈ ವಿಷಯದಲ್ಲಿ ಅವರಿಬ್ಬರ ಮಧ್ಯೆ ಮನಸ್ತಾಪವೇರ್ಪಟ್ಟಿತು. ಒಂದು ದಿನ ಆಕೆ ರಮೇಶ್​ಗೆ ತಿಳಿಯದಂತೆ ಅವನ ಸೆಲ್​ಫೋನ್ ನೋಡಿದಾಗ ಅದರ ಫೋನ್​ಬುಕ್​ನಲ್ಲಿ ಬೆಂಗಳೂರಿನ ಪತ್ನಿ, ಕೊಲ್ಕತ್ತದ ಪತ್ನಿ, ಶಿಕ್ಷಕಿ ಪತ್ನಿ, ಅಕೌಂಟೆಂಟ್ ಪತ್ನಿ ಎಂದು ನಮೂದಿಸಿದ್ದನ್ನು ಕಂಡು ಗಾಬರಿಗೊಂಡಳು. ಈ ಬಗ್ಗೆ ವಿಚಾರಿಸಿದಾಗ ರಮೇಶ್ ಅವಳಿಗೆ ಮನಬಂದಂತೆ ಥಳಿಸಿ ಹೆಚ್ಚು ಪ್ರಶ್ನಿಸಿದರೆ ಡಿವೋರ್ಸ್ ಮಾಡುವುದಾಗಿ ಬೆದರಿಸಿದ.

ಮಾರನೆಯ ದಿನ ಮನೆಯ ಸೇವಕ ಆಕೆಗೆ ರಮೇಶನ ವ್ಯವಹಾರಗಳನ್ನು ತಿಳಿಸಿ, ಇತರ ಪತ್ನಿಯರ ವಿವರಗಳನ್ನಿತ್ತ. ಆಕೆ ರಮೇಶನಿಂದ ಮೋಸಹೋಗಿದ್ದ ಅದೇ ಊರಿನಲ್ಲಿದ್ದ ಪತ್ನಿ ಹಾಗೂ ಅರೆಸೈನಿಕ ದಳದ ಅಧಿಕಾರಿಣಿಯನ್ನು ಸಂರ್ಪಸಿದಳು. ಅವರ ಸೂಚನೆಯಂತೆ ಪೊಲೀಸ್ ದೂರು ನೀಡಿದಳು. ರಮೇಶ್ ಆ ಊರಿನಿಂದ ಪರಾರಿಯಾದ. ರಮೇಶನ ಭಾವಮೈದ ಅವಳಿಗೆ ಫೋನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ. ಆದರೂ ಧೃತಿಗೆಡದ ಆಕೆ ರಮೇಶನ ಇತರ ಪತ್ನಿಯರನ್ನು ಒಟ್ಟುಗೂಡಿಸಿಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾದಳು. ವಿಶೇಷ ದಳ ರಚಿಸಿದ ಪೊಲೀಸರು ಕಡೆಗೂ ಕೊಲ್ಕತ್ತದಲ್ಲಿ ರಮೇಶನನ್ನು ಬಂಧಿಸಿದರು. ಆತನ ಬಳಿ ಬೇರೆ ಬೇರೆ ಹೆಸರಿನ ಹಲವಾರು ಗುರುತಿನ ಪತ್ರಗಳು ಸಿಕ್ಕವು. ಒಂದು ವಿಸಿಟಿಂಗ್ ಕಾರ್ಡಿನಲ್ಲಿ ಆತ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ವಿಶೇಷಾಧಿಕಾರಿ ಎಂದು ನಮೂದಿಸಿ ಕೆಂಪು ದೀಪವಿರುವ ಕಾರಿನ ಚಿತ್ರ ಹಾಕಿಕೊಂಡಿದ್ದ.

ಒಟ್ಟಾರೆ 11 ಜನರನ್ನು ಮದುವೆಯಾಗಿದ್ದ ರಮೇಶ ವರದಕ್ಷಿಣೆಯೆಂದೇ ಒಂದು ಕೋಟಿ ರೂ. ಸ್ವೀಕರಿಸಿದ್ದ. ಅವನನ್ನು ವಿವಿಧ ಮೋಸದ ಪ್ರಕರಣದಲ್ಲಿ ಬಂಧಿಸಲಾಗಿದ್ದು ನ್ಯಾಯಾಲಯದಲ್ಲಿ ಮೊಕದ್ದಮೆಗಳು ನಡೆಯುತ್ತಿದೆ. ‘ಸಿರಿಮಾತ್ರಕೇನಲ್ಲ, ಪೆಣ್ ಮಾತ್ರಕೇನಲ್ಲ, ಕರುಬಿ ಜನ ಕೆಸರುದಾರಿಯಲಿ ಸಾಗುವುದು, ಬಿರುದಗಳಿಸಲಿ ಕೆಸಪ, ಹೆಸರಪಸರಿಸಲೆಸಪ, ದುರಿತಗಳ್ಗೆಣೆಯುಂಟೆ? ಮಂಕುತಿಮ್ಮ’ ಎಂಬಂತೆ ರಮೇಶ್ ಹನ್ನೊಂದು ಹೆಂಡಿರ ಮೋಸದ ಗಂಡನಾಗಿ ಕುಖ್ಯಾತಿ ಗಳಿಸಿದ್ದಾನೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)