ಶ್ರೇಷ್ಠ ಜ್ಞಾನಿಗಳಾದ ದಯಾನಂದ ಸರಸ್ವತಿಯವರ ಹೆಸರು ಕೇಳದವರಿಲ್ಲ. ಅವರು ಧರ್ಮಗಂಗೆಯನ್ನು ಮುಕ್ತವಾಗಿ ಹರಿಸಿದವರು. ಶಾಸ್ತ್ರಾರ್ಥದಲ್ಲಿ ಅವರನ್ನು ಎದುರಿಸುವವರೇ ಇರಲಿಲ್ಲ. ಅಂಥ ಪರಮ ಜ್ಞಾನಿಗಳು ಅವರು. ಕೆಲವರು ದಯಾನಂದ ಸರಸ್ವತಿಯವರನ್ನು ದ್ವೇಷಿಸತೊಡಗಿದರು. ಹೇಗಾದರೂ ಮಾಡಿ ಅವರನ್ನು ಮುಗಿಸಬೇಕೆಂದು ಹೊಂಚು ಹಾಕಿದರು. ಹಲವಾರು ವರುಷಗಳವರೆಗೆ ಶ್ರದ್ಧೆಯಿಂದ ಸೇವೆ ಮಾಡಿದ ಶಿಷ್ಯನನ್ನು ಹಿಡಿದು, ಆತನಿಗೆ ಸಿರಿಸಂಪತ್ತಿನ ಆಸೆ ಒಡ್ಡಿದರು. ಶಿಷ್ಯನು ಅವರೊಡ್ಡಿದ ಆಮಿಷಕ್ಕೊಳಗಾದ. ಗುರುಗಳಿಗೇ ವಿಷವನ್ನು ಉಣಿಸಿದ. ದಯಾನಂದರು ಮೂರ್ಛೆ ಹೋದರು. ಗಾಬರಿಗೊಂಡ ಉಳಿದ ಶಿಷ್ಯಂದಿರು ಹತ್ತು ಹಲವು ರೀತಿಯಿಂದ ಗುರುಗಳನ್ನು ಉಪಚರಿಸಿದರು. ಸುದೈವದಿಂದ ಸ್ವಲ್ಪ ಸಮಯದ ನಂತರ ಗುರುಗಳಿಗೆ ಪ್ರಜ್ಞೆ ಬಂತು. ಅಷ್ಟರಲ್ಲಿ ವಿಷವನ್ನಿತ್ತ ಶಿಷ್ಯನನ್ನು ಹಿಡಿದು ತಂದು ಕಂಬಕ್ಕೆ ಕಟ್ಟಿ ಹಾಕಿದ್ದರು. ಆತನನ್ನು ನೋಡಿದ ದಯಾನಂದ ಸರಸ್ವತಿಯವರು ಆಶ್ಚರ್ಯಚಕಿತರಾಗಿ- ‘ಆತನನ್ನು ಏಕೆ ಕಟ್ಟಿ ಹಾಕಿರುವಿರಿ?’ ಎಂದು ಕೇಳಿದರು. ಶಿಷ್ಯರು ಹೇಳಿದರು, ‘ಗುರುಗಳೇ ಈತನೇ ನಿಮಗೆ ವಿಷವನ್ನಿತ್ತವನು.’ ಆಗ ಗುರುಗಳು ‘ಆತನನ್ನು ಮೊದಲು ಬಿಚ್ಚಿಬಿಡಿ!’ ಎಂದರು. ’ಏಕೆ ಗುರುಗಳೇ, ಗುರುಹತ್ಯೆ ಮಾಡಲು ಪ್ರಯತ್ನಿಸಿದವನನ್ನು ಶಿಕ್ಷಿಸುವುದು ಬೇಡವೇ?’ ಎಂದಾಗ ದಯಾನಂದರು ನೀಡಿದ ಉತ್ತರ ಅವರ ಕ್ಷಮಾಗುಣಕ್ಕೆ ಸಾಕ್ಷಿ! ‘ನಾನು ಈ ಜಗತ್ತಿಗೆ ಬಂದುದು ಜನರನ್ನು ಬಂಧಿಸಲು ಅಲ್ಲ ಮುಕ್ತಗೊಳಿಸಲು!’
ಜ್ಞಾನಿಗಳು ತಮ್ಮ ಪ್ರಾಣಕ್ಕೆ ಸಂಕಟ ಬಂದಾಗಲೂ ಕ್ಷಮಿಸಲು ಹಿಂದೇಟು ಹಾಕುವುದಿಲ್ಲ. ಮಹಾಪುರುಷರು ಯಾರೊಂದಿಗೂ ದ್ವೇಷ ಸಾಧಿಸುವುದಿಲ್ಲ. ಎಂಥ ದುಸ್ಥಿತಿ ಬಂದರೂ ವಿಚಲಿತರಾಗುವುದಿಲ್ಲ. ಕೇಡು ಬಯಸಿದವರಿಗೆ ಕೆಡುಕು ಮಾಡುವುದಿಲ್ಲ. ಬದಲಾಗಿ ಕೇಡು ಬಯಸಿದವರಿಗೂ ಒಳಿತನ್ನು ಬಯಸುತ್ತಾರೆ. ಒಳಿತನ್ನೇ ಮಾಡುತ್ತಾರೆ. ಮಾಡಿದ ತಪ್ಪಿಗೆ ಶಿಕ್ಷಿಸುವುದಿಲ್ಲ. ಬದಲಾಗಿ ಕ್ಷಮಿಸಿ ಮರುಜೀವನ ನೀಡುತ್ತಾರೆ. ಮಹಾತ್ಮರಿಗೆ ತಿಳಿದಿರುವುದು ಕ್ಷಮೆಯೆಂಬ ದಾರಿ. ತನ್ನನ್ನು ಕೆಟ್ಟದಾಗಿ ನಡೆಸಿಕೊಂಡವರ ಬಗೆಗೂ ಕಹಿ ಭಾವನೆ ಇಲ್ಲ. ನಾವೆಲ್ಲ ಸುಖಾ ಸುಮ್ಮನೆ ಬೇರೆಯವರ ಮೇಲೆ ಹರಿಹಾಯುತ್ತೇವೆ. ಇತರರು ನಮ್ಮ ಮೂಗಿನ ನೇರಕ್ಕೆ ನಡೆಯಲಿಲ್ಲವೆಂದು ಅವರ ಮನಸ್ಸು ನೋಯಿಸುತ್ತೇವೆ. ವಿನಾಕಾರಣ ದ್ವೇಷ ಸಾಧಿಸುತ್ತೇವೆ. ಇದೆಲ್ಲ ಎಷ್ಟು ಸರಿಯೆಂದು ನಮಗೆ ನಾವೇ ಪ್ರಶ್ನಿಸಿಕೊಳ್ಳವುದೂ ಇಲ್ಲ. ಸಿಟ್ಟು, ದ್ವೇಷ ಯಾರು ಬೇಕಾದರೂ ಮಾಡಬಲ್ಲರು. ಆದರೆ ದೊಡ್ಡ ಗುಣವಿದ್ದವರು ಮಾತ್ರ ಕ್ಷಮಿಸಬಲ್ಲರೆಂಬುದು ಗಮನಾರ್ಹ.
ದಿನನಿತ್ಯ ಬಹಳ ಜನರೊಂದಿಗೆ ನಾವು ಒಂದಿಲ್ಲೊಂದು ರೀತಿಯಲ್ಲಿ ವ್ಯವಹರಿಸುತ್ತೇವೆ. ಪ್ರತಿಯೊಬ್ಬರೊಂದಿಗೆ ಶಾಂತವಾಗಿ ವ್ಯವಹರಿಸದಿದ್ದರೆ ಮನಸ್ಸೆಂಬ ಪ್ರಶಾಂತ ಕೊಳ ಕೆದಕಿ ಹೋದ ರಾಡಿ ನೀರಿನಂತಾಗುತ್ತದೆ. ಆ ರಾಡಿಯೆಲ್ಲ ಮೆಲ್ಲನೆ ತಳದಲ್ಲಿ ಸ್ಥಿರವಾಗಿ ಮತ್ತೆ ತಿಳಿನೀರು ಮೇಲೆ ಕಾಣಲು ಸಮಯ ಹಿಡಿಯುತ್ತದೆ. ಮನಸ್ಸಿನ ನೆಮ್ಮದಿ ಹಾಳಾದರೆ ಆರೋಗ್ಯದ ಸ್ಥಿತಿಯೂ ಹದಗೆಡುವುದು. ತಪು್ಪ ಮಾಡಿದವರನ್ನು ಶಿಕ್ಷಿಸಲು ಮುಂದಾಗುವುದಕ್ಕಿಂತ ಕ್ಷಮಿಸುವುದೇ ಮನಃಪರಿವರ್ತನೆಗೆ ರಾಜಮಾರ್ಗ. ಕ್ಷಮಾಶೀಲರಾಗೋಣ. ನೆಮ್ಮದಿಯ ಬದುಕಿಗೆ ಮುನ್ನುಡಿ ಬರೆಯೋಣ.
(ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)