ಅಂಕಣ

ಪಾಕಿಸ್ತಾನ ರಾಜಕೀಯದಲ್ಲಿ ಶರೀಫ್ ಪುತ್ರಿ ಸಂಚಲನ

| ನಾಗರಾಜ ಇಳೆಗುಂಡಿ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಇಮ್ರಾನ್ ಖಾನ್ ಒಂದು ಕಾಲದಲ್ಲಿ ತಮ್ಮ ಆಟ ಮತ್ತು ನಾಯಕತ್ವದ ಮೂಲಕ ವಿಶ್ವದ ಬೇರೆ ಬೇರೆ ತಂಡಗಳಿಗೆ ಬೆವರಿಳಿಸಿದ್ದರು. ಪಾಕ್​ನ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್​ಗಳಲ್ಲಿ ಒಬ್ಬರೆಂಬ ಹೆಗ್ಗಳಿಕೆಯೂ ಅವರದು. 1992ರಲ್ಲಿ ವಿಶ್ವಕಪ್ ಕೂಡ ಅವರ ನಾಯಕತ್ವದಲ್ಲೇ ಪಾಕ್​ಗೆ ಒಲಿಯಿತು. ವೃತ್ತಿಜೀವನದಂತೆ ವೈಯಕ್ತಿಕ ಬದುಕಿನಲ್ಲೂ ವರ್ಣರಂಜಿತ ಜೀವನಶೈಲಿ ಹೊಂದಿದ ಇಮ್ರಾನ್ ನಂತರದಲ್ಲಿ ರಾಜಕೀಯ ಪ್ರವೇಶಿಸಿದರು. 1996ರಲ್ಲಿ ಪಾಕಿಸ್ತಾನ ತೆಹ್ರಿಕ್-ಇ-ಇನ್ಸಾಫ್ ಪಕ್ಷವನ್ನು ಸ್ಥಾಪಿಸಿದರು. ಮಾಜಿ ಪ್ರಧಾನಿ ನವಾಜ್ ಶರೀಫ್ ರಾಜಕೀಯ ಹಾದಿ ಇಳಿಮುಖವಾಗಿದ್ದರಿಂದ 2018ರ ಚುನಾವಣೆಯಲ್ಲಿ ಇಮ್ರಾನ್​ಗೆ ಅದೃಷ್ಟ ಖುಲಾಯಿಸಿತು; ಪ್ರಧಾನಿ ಪಟ್ಟವನ್ನೂ ಏರಿದರು. ಶರೀಫ್​ಗೂ ಸೇನೆಗೂ ಸಂಬಂಧ ಹಳಸಿದ್ದರಿಂದಾಗಿ ಸೇನೆ ಇಮ್ರಾನ್​ಗೆ ಬೆಂಬಲ ನೀಡಿತು. ಹೀಗಾಗಿ ಅವರು ಪ್ರಧಾನಿ ಹುದ್ದೆಗೇರುವಂತಾಯಿತು. ಆದರೆ ದೇಶದ ಚುಕ್ಕಾಣಿ ಎಂದರೆ ಕ್ರಿಕೆಟ್ ತಂಡದ ನಾಯಕನಂಥಲ್ಲ ಮತ್ತು ರಾಜಕೀಯ ಚದುರಂಗದಾಟ ಎಂದರೆ ಕ್ರಿಕೆಟ್ ಆಟದಂತಲ್ಲ ಎಂಬುದು ಬಹುಬೇಗನೆ ಅವರ ಅನುಭವಕ್ಕೆ ಬಂತು. ಅದರಲ್ಲೂ ಪಾತಾಳಕ್ಕೆ ಕುಸಿದ ಅರ್ಥವ್ಯವಸ್ಥೆ ಇಮ್ರಾನ್ ಆಡಳಿತವನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿತು. ಅದರೊಟ್ಟಿಗೆ, ಆಡಳಿತಾತ್ಮಕ ವಿಚಾರದಲ್ಲಿ ಸೇನೆಯ ಹುಕುಂ ಅನ್ನು ಮೀರಲಾಗದ ಅಸಹಾಯಕ ಸ್ಥಿತಿ ಇನ್ನೊಂದೆಡೆ. ಒಟ್ಟಿನಲ್ಲಿ ಒಂದು ಓವರ್​ನಲ್ಲಿ ಆರು ಸಿಕ್ಸರ್ ಹೊಡೆಸಿಕೊಂಡ ಬೌಲರ್​ನಂತಾಗಿದೆ ಇಮ್ರಾನ್ ಪರಿಸ್ಥಿತಿ!

ಇಷ್ಟು ಸಂಕಟಗಳು ಸಾಲದು ಎಂಬಂತೆ, ಮರಯಂ ನವಾಜ್ ಎಂಬ ಹೆಣ್ಣುಮಗಳ ರೂಪದಲ್ಲಿ ಇಮ್ರಾನ್​ಗೆ ಇನ್ನಷ್ಟು ತೊಂದರೆ ಎದುರಾಗಿದೆ. ದೇಶದ ವಿವಿಧೆಡೆ ರ್ಯಾಲಿಗಳನ್ನು ನಡೆಸುತ್ತಿರುವ ಮರಯಂ, ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ತಕ್ಕಮಟ್ಟಿನ ಯಶಸ್ಸು ಕಾಣುತ್ತಿದ್ದಾರೆ. ಅವರ ಸಭೆಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುತ್ತಿರುವುದು ಸರ್ಕಾರ ಮತ್ತು ಸೇನೆಯ ನಿದ್ದೆಗೆಡಿಸಿದೆ.

ಮಾಜಿ ಪ್ರಧಾನಿ ನವಾಜ್ ಶರೀಫ್ ಅನಾರೋಗ್ಯದಿಂದಾಗಿ ಈಗ ಲಂಡನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪತ್ನಿ ಕುಲ್ಸುಂ 2018ರಲ್ಲಿ ಲಂಡನ್​ನಲ್ಲಿಯೇ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದಾರೆ. 2013ರ ಸಾರ್ವತ್ರಿಕ ಚುನಾವಣೆಯಲ್ಲಿ ನವಾಜ್ ಷರೀಫರ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷ ನ್ಯಾಷನಲ್ ಅಸೆಂಬ್ಲಿಯ 342 ಸ್ಥಾನಗಳ ಪೈಕಿ 166ರಲ್ಲಿ ಗೆದ್ದು, ಸರ್ಕಾರ ರಚಿಸಿತ್ತು; ನವಾಜ್ ಮೂರನೇ ಬಾರಿಗೆ ಪ್ರಧಾನಿಯಾದರು. ಪಾಕ್ ಇತಿಹಾಸದಲ್ಲಿ ಹೆಚ್ಚು ಅವಧಿಗೆ (ಒಂಬತ್ತು ವರ್ಷ) ಈ ಹುದ್ದೆಗೇರಿದ ಹೆಗ್ಗಳಿಕೆ ಕೂಡಾ ಅವರದು. ಆದರೆ ಯಾವಾಗ 2018ರಲ್ಲಿ ಪನಾಮಾ ಪೇಪರ್ಸ್ ದಾಖಲೆ ಬಹಿರಂಗವಾಯಿತೋ, ನವಾಜ್ ಷರೀಫರ ನಸೀಬು ಖರಾಬ್ ಆಯಿತು. ಭ್ರಷ್ಟಾಚಾರದ ಆರೋಪ ಹೆಗಲೇರಿತು. ಪನಾಮಾ ಪೇಪರ್ಸ್ ದಾಖಲೆ ಮುಂದಿಟ್ಟುಕೊಂಡು ಇಮ್ರಾನ್ ಖಾನ್ ಮತ್ತು ಶೇಖ್ ರಷೀದ್ ಅವರು ಕೋರ್ಟ್ ಮೆಟ್ಟಿಲೇರಿದರು. ಪನಾಮಾ ದಾಖಲೆ ಹಿನ್ನೆಲೆಯಲ್ಲಿ ಶರೀಫರನ್ನು ಪಾಕ್ ಸುಪ್ರೀಂ ಕೋರ್ಟ್ ಹುದ್ದೆಯಿಂದ ತೆಗೆದುಹಾಕಿತು. ಅವರು ಇನ್ನುಮುಂದೆ ಯಾವುದೇ ಸಾರ್ವಜನಿಕ ಹುದ್ದೆ ಹಿಡಿಯಬಾರದೆಂದು 2018ರಲ್ಲಿ ಸುಪ್ರೀಂಕೋರ್ಟ್ ಆದೇಶಿಸುವ ಮೂಲಕ, ಶರೀಫ್ ರಾಜಕೀಯ ಜೀವನ ಅಕ್ಷರಶಃ ಅಂತ್ಯಗೊಂಡಿತು. ಗಾಯದ ಮೇಲೆ ಬರೆ ಎಂಬಂತೆ, ಪಾಕಿಸ್ತಾನದ ಅಕೌಂಟೆಬಿಲಿಟಿ ಕೋರ್ಟು ಶರೀಫರಿಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಅಲ್ಲದೆ, ಅವರ ಪುತ್ರಿ ಮರಯಂಗೆ ಏಳು ವರ್ಷ ಹಾಗೂ ಅಳಿಯ ಸಫ್ದರ್ ಅವಾನ್​ಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ಬಂತು. 2018ರ ಸೆ. 11ರಂದು ಕುಲ್ಸುಂ ನವಾಜ್ ಅವರು ಲಂಡನ್ ಆಸ್ಪತ್ರೆಯಲ್ಲಿ ನಿಧನರಾದರು. ಈ ಹಿನ್ನೆಲೆಯಲ್ಲಿ ನವಾಜ್ ಶರೀಫ್, ಮರಯಂರನ್ನು ರಾವಲ್ಪಿಂಡಿಯ ಅಡಿಯಾಲಾ ಕಾರಾಗೃಹದಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಅವರು ಲಾಹೋರಿಗೆ ಬಂದರು. ಅದೇ ಸೆ.19ರಂದು ಜಾಮೀನು ಅರ್ಜಿ ಮೇಲೆ ತೀರ್ಪು ನೀಡಿದ ಇಸ್ಲಾಮಾಬಾದ್ ಹೈಕೋರ್ಟ್, ನವಾಜ್ ಶರೀಫ್, ಮಗಳು ಮತ್ತು ಅಳಿಯನಿಗೆ ವಿಧಿಸಲಾದ ಕಾರಾಗೃಹ ಶಿಕ್ಷೆಯನ್ನು ರದ್ದುಪಡಿಸಿತು ಮತ್ತು ಅವರ ಬಿಡುಗಡೆಗೆ ಆದೇಶಿಸಿತು. ಪಾಕಿಸ್ತಾನದ ಪ್ರಮುಖ ರಾಜಕಾರಣಿಗಳಲ್ಲೊಬ್ಬರಾದ ಶರೀಫ್ ಅನುಪಸ್ಥಿತಿಯಲ್ಲಿ ಪಕ್ಷದ ಜವಾಬ್ದಾರಿಯನ್ನು ಮರಯಂ ಹೆಗಲಿಗೇರಿಸಲು ಕುಟುಂಬದಲ್ಲಿ ಸಹಮತವಿದೆ. ‘ನನ್ನನ್ನು ಎರಡು ಬಾರಿ ಜೈಲಿಗೆ ಕಳಿಸಲಾಗಿತ್ತು. ಅಲ್ಲಿ ನನ್ನ ಚಲನವಲನ ತಿಳಿಯಲೆಂದು ಕ್ಯಾಮರಾಗಳನ್ನು ಅಳವಡಿಸಲಾಗಿತ್ತು’ ಎಂದು ಮರಯಂ ಆಪಾದಿಸಿದ್ದರು. ‘ಈ ವಿಷಯ ಎಷ್ಟು ನಿಜವೋ ಗೊತ್ತಿಲ್ಲ, ಆದರೆ ಆಕೆ ಭಾವನಾತ್ಮಕವಾಗಿ ಜನರನ್ನು ಸೆಳೆಯುತ್ತಿರುವುದಂತೂ ಖರೆ’ ಎಂದು ಪಾಕಿಸ್ತಾನದ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ದೇಶದ ಬೇರೆ ಬೇರೆ ಕಡೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿರುವ ಮರಯಂ ತನ್ನ ತಂದೆ ನವಾಜ್ ಷರೀಫರ ಅನಾರೋಗ್ಯ ಪರಿಸ್ಥಿತಿಯನ್ನು ಜನರೆದುರು ತೆರೆದಿಡುತ್ತ, ಇಮ್ರಾನ್ ಸರ್ಕಾರ ತಮ್ಮ ಕುಟುಂಬದ ಮೇಲೆ ರಾಜಕೀಯ ಜಿದ್ದು ಸಾಧಿಸುತ್ತಿದೆ ಎಂದು ಆಪಾದಿಸುತ್ತಿದ್ದಾರೆ. ಈ ಕಾರಣಕ್ಕಾಗೇ ಭ್ರಷ್ಟಾಚಾರ ಪ್ರಕರಣದಲ್ಲಿ ಕುಟುಂಬವನ್ನು ಸಿಲುಕಿಸಲಾಗಿದೆ ಎಂಬುದು ಅವರ ಪ್ರತಿಪಾದನೆ. ಜತೆಗೆ, ಹದಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿ, ಕರೊನಾ ನಿರ್ವಹಣೆಯಲ್ಲಿ ವೈಫಲ್ಯ, ಆಡಳಿತ ವ್ಯವಸ್ಥೆಯ ಬಗ್ಗೆಯೂ ಉಲ್ಲೇಖಿಸುತ್ತ ಸರ್ಕಾರದ ವಿರುದ್ಧ ಪ್ರಬಲ ಜನಾಭಿಪ್ರಾಯ ರೂಪಿಸುವತ್ತ ಎಲ್ಲ ಬಾಣಗಳನ್ನೂ ಪ್ರಯೋಗಿಸುತ್ತಿದ್ದಾರೆ. ಅವರ ಸಭೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿರುವುದು ಇಮ್ರಾನ್ ಸರ್ಕಾರಕ್ಕೆ ತಲೆನೋವು ತಂದಿರುವುದು ಸುಳ್ಳಲ್ಲ. ಹಿಂದೆ ಬೆನಝೀರ್ ಭುಟ್ಟೊ ಅವರು ಪಾಕ್ ರಾಜಕೀಯದಲ್ಲಿ ಇದೇ ರೀತಿ ಹವಾ ಎಬ್ಬಿಸಿದ್ದರು. ಕೆಲವರು ಆ ಸನ್ನಿವೇಶವನ್ನು ಈಗ ಮೆಲುಕು ಹಾಕುತ್ತಿದ್ದಾರೆ. ಮತ್ತೊಂದೆಡೆ, ಮರಯಂ ರೀತಿಯಲ್ಲಿಯೇ ಇತರ ವಿಪಕ್ಷಗಳು ಕೂಡ ಸರ್ಕಾರದ ವಿರುದ್ಧ ಸಮರ ಸಾರಿರುವುದರಿಂದ ಪಾಕ್​ನಲ್ಲಿನ ರಾಜಕೀಯ ಕಾವೇರಿದೆ. ಆದರೆ, ಆಡಳಿತದಲ್ಲಿ ಸೇನೆಯ ಹಸ್ತಕ್ಷೇಪ ಸದಾ ಇರುವ ಆ ದೇಶದಲ್ಲಿ ಜನನಾಯಕರು ಏಗುವುದು ಸುಲಭವಲ್ಲ. ಅದರಲ್ಲೂ ಒಬ್ಬ ಹೆಣ್ಣುಮಗಳಿಗೆ ಇನ್ನೂ ಕಷ್ಟ. ಬೆನಝೀರ್ ಭುಟ್ಟೊ ಅಲ್ಲಿನ ರಾಜಕೀಯ ಒಳಸುಳಿಯಲ್ಲಿ ಕೊನೆಗೆ ಹತ್ಯೆಗೀಡಾಗಿದ್ದು ಜನರ ನೆನಪಿನಿಂದ ಇನ್ನೂ ಮಾಸಿಲ್ಲ.

1973ರ ಅಕ್ಟೋಬರ್ 28ರಂದು ಜನಿಸಿದ ಮರಯಂ ಲಾಹೋರಿನಲ್ಲಿ ಆರಂಭಿಕ ಶಿಕ್ಷಣ ಪಡೆದರು. ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಆವರು ಲಾಹೋರಿನ ಕಿಂಗ್ ಎಡ್ವರ್ಡ್ ವೈದ್ಯಕೀಯ ಕಾಲೇಜಿಗೆ ಸೇರಿದ್ದರು. ಆದರೆ ಅವರ ಪ್ರವೇಶ ಅಕ್ರಮ ಎಂಬ ವಿವಾದ ಉಂಟಾಗಿದ್ದರಿಂದ ಪದವಿ ಪೂರೈಸದೆ ಅಲ್ಲಿಂದ ಹೊರಬೀಳಬೇಕಾಯಿತು. 2018ರಲ್ಲಿ ಅವರು ಪಾಕಿಸ್ತಾನ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದಾಖಲೆಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಗಿ ಮಾತ್ರ ಉಲ್ಲೇಖಿಸಿದ್ದಾರೆ. 1999ರಲ್ಲಿ ಸೇನಾಧಿಕಾರಿ ಜನರಲ್ ಪರ್ವೆಜ್ ಮುಷರಫ್ ಅವರು ಕ್ಷಿಪ್ರಕಾಂತಿ ನಡೆಸಿ, ನವಾಜ್ ಶರೀಫ್​ರನ್ನು ಅಧಿಕಾರಚ್ಯುತರನ್ನಾಗಿಸಿದಾಗ, ಮರಯಂರನ್ನು ನಾಲ್ಕು ತಿಂಗಳ ಕಾಲ ಗೃಹಬಂಧನಕ್ಕೆ ಒಳಪಡಿಸಲಾಗಿತ್ತು. ನಂತರದಲ್ಲಿ ಕುಟುಂಬಸಮೇತ ಸೌದಿ ಅರೇಬಿಯಾಕ್ಕೆ ಗಡಿಪಾರು ಮಾಡಲಾಗಿತ್ತು. ಕ್ರಮೇಣ ಸಾರ್ವಜನಿಕ ಜೀವನಕ್ಕೆ ಬರಲು ಆಸಕ್ತಿ ತೋರ್ಪಡಿಸಿದ ಮರಯಂ, ಶುರುವಿನಲ್ಲಿ ಕುಟುಂಬದ ಟ್ರಸ್ಟ್​ಗಳಲ್ಲಿ ಜವಾಬ್ದಾರಿ ತೆಗೆದುಕೊಂಡರು. 2010ರ ವೇಳೆಗೆ ಸಕ್ರಿಯ ರಾಜಕೀಯಕ್ಕೆ ಬಂದರು. 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ನವಾಜ್ ಶರೀಫರ ಚುನಾವಣಾ ಪ್ರಚಾರದ ಉಸ್ತುವಾರಿಯಾಗಿದ್ದರು.

ಅಂದಹಾಗೆ, ಇಲ್ಲಿ ಒಂದು ಸಂಗತಿ ಉಲ್ಲೇಖಿಸಬೇಕು. 2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಷ್ಯಾ, ಅಫ್ಘಾನಿಸ್ತಾನ ಪ್ರವಾಸದಿಂದ ವಾಪಸ್ ಬರುವಾಗ ದಾರಿಯಲ್ಲಿ ಲಾಹೋರಿನಲ್ಲಿ ದಿಢೀರನೆ ಇಳಿದಿದ್ದರು. ಆ ವಿಚಾರ ಮಾಧ್ಯಮಗಳಲ್ಲಿ ಭಾರಿ ಪ್ರಚಾರವಾಗಿತ್ತು. ಆಗ, ಲಾಹೋರ್ ಹೊರವಲಯದ ನವಾಜ್ ಶರೀಫ್ ನಿವಾಸದಲ್ಲಿ ಮರಯಂ ಮಗಳ ಮದುವೆ ನಡೆದಿತ್ತು. ಮೋದಿ ಅಲ್ಲಿಗೆ ತೆರಳಿ ಶುಭಹಾರೈಸಿದ್ದರು. 19ನೇ ವಯಸ್ಸಿನಲ್ಲಿ ವಿವಾಹವಾದ ಮರಯಂ ವ್ಯಕ್ತಿಗತ ಬದುಕಿನಲ್ಲಿ ಈಗ ಅಜ್ಜಿ. ಇತ್ತ, ರಾಜಕೀಯ ಜೀವನದಲ್ಲಿ ಅವರ ಮಹತ್ವದ ಹೋರಾಟ ಈಗ ಶುರುವಾಗಿದ್ದು, ಎಲ್ಲಿಗೆ ತಲುಪುತ್ತದೆಂದು ಕಾದುನೋಡಬೇಕು.