ಅಂಕಣ

ಕರೊನಾ ಕಾಲದಲ್ಲಿ ಊಟದ ಆಟ...

ಕರೊನಾ ಕರಿ ಛಾಯೆ ಮಕ್ಕಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಒಂದು ವರ್ಷದಿಂದ ಶಾಲೆಗೂ ಹೋಗಲಾಗದೆ ಮನೆಯಲ್ಲೇ ಇರುವ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವುದೇ ಪಾಲಕರಿಗೆ ಬಹುದೊಡ್ಡ ಜವಾಬ್ದಾರಿ ಆಗಿಬಿಟ್ಟಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳ ಆಹಾರ ಕ್ರಮ ಹೇಗಿರಬೇಕು ಎಂಬುದರ ಉಪಯುಕ್ತ ಮಾಹಿತಿ ಇಲ್ಲಿದೆ.

| ಪಂಕಜ ಕೆ.ಎಂ.

ಒಂದು ಎರಡು

ಬಾಳೆಲೆ ಹರಡು

ಮೂರು ನಾಲ್ಕು

ಅನ್ನವ ಹಾಕು

ಐದು ಆರು

ಬೇಳೆ ಸಾರು

ಏಳು ಎಂಟು

ಪಲ್ಯಕೆ ದಂಟು

ಒಂಬತ್ತು ಹತ್ತು

ಎಲೆ ಮುದುರೆತ್ತು

ಒಂದರಿಂದ ಹತ್ತು

ಹೀಗಿತ್ತು

ಊಟದ ಆಟವು

ಮುಗಿದಿತ್ತು...

ಕನ್ನಡದ ಹೆಮ್ಮೆಯ ಕವಿ ಜಿ.ಪಿ. ರಾಜರತ್ನಂ ಬರೆದ ಈ ಕವಿತೆಯನ್ನು ಕೇಳದ ಕನ್ನಡಿಗರು ಯಾರಿದ್ದಾರೆ? ಅಂಕಿಗಳನ್ನು ಕಲಿಸುವ ನೆಪದಲ್ಲಿ ಊಟದ ಶಿಸ್ತನ್ನೂ ಹೇಳಿಕೊಡುವ ಈ ಪದ್ಯವನ್ನು ಮರೆಯುವಂತೆಯೇ ಇಲ್ಲ. ಕರೊನಾ ಸೋಂಕು ಮಕ್ಕಳನ್ನೂ ಆವರಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳ ಆಹಾರ ಕ್ರಮ ಅತ್ಯಂತ ಮಹತ್ವ ಪಡೆದುಕೊಳ್ಳುತ್ತಿದೆ. ಕರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆಯೇ ಅಗತ್ಯ ಆರೋಗ್ಯ ಸೇವೆಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಕೋವಿಡ್ ನಂತರ ಪಾಲಕರ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಹೆಚ್ಚಾಗಿದ್ದು, ಇದು ಮಕ್ಕಳ ಪೋಷಣೆ ಮತ್ತು ಬೆಳವಣಿಗೆ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ಬಡ ಮಕ್ಕಳು ಪೌಷ್ಟಿಕ ಆಹಾರ ಹಾಗೂ ಉತ್ತಮ ಆರೈಕೆ ಇಲ್ಲದೆ ಅಪಾಯದಲ್ಲಿದ್ದಾರೆ. ಇಂತಹ ಮಕ್ಕಳಿಗೆ ಕೋವಿಡ್ ತಗುಲಿದರೆ ಗುಣಮುಖರಾಗುವುದು ಅಷ್ಟು ಸುಲಭವಲ್ಲ.

ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನದ ಪ್ರಕಾರ 11 ದಶಲಕ್ಷ ಸಾವುಗಳು ಜಾಗತಿಕವಾಗಿ ಕಳಪೆ ಆಹಾರದಿಂದ ಸಂಭವಿಸುತ್ತಿವೆ. ಅಂದರೆ ಪ್ರತಿ 5 ಸಾವುಗಳಲ್ಲಿ ಒಂದು ಸಾವಿಗೆ ಕಳಪೆ ಆಹಾರ ಕಾರಣ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ. 8.5 ಜನರು ಕರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಸೋಂಕು ತಗುಲಿದ ಮಕ್ಕಳ ಸಾವಿನ ಪ್ರಮಾಣ ಕಡಿಮೆ ಇದೆ. ಅಂದರೆ ಪ್ರತಿ 1000 ಕೋವಿಡ್ ಸೋಂಕಿತ ಮಕ್ಕಳಲ್ಲಿ ಒಬ್ಬರ ಸಾವು ಸಂಭವಿಸುತ್ತಿದೆ. ವೈರಸ್​ಗೆ ನಿರ್ದಿಷ್ಟವಾದ ವಿಭಿನ್ನ ಪ್ರತಿಕಾಯಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುವ ರೋಗನಿರೋಧಕ ವ್ಯವಸ್ಥೆಯಿಂದಾಗಿ ಮಕ್ಕಳ ಸಾವಿನ ಪ್ರಮಾಣ ಕಡಿಮೆ ಇದೆ ಎನ್ನುತ್ತಾರೆ ವೈದ್ಯರು. ಅಪೌಷ್ಟಿಕತೆ, ಮಧುಮೇಹ, ಆನುವಂಶಿಕ ಅಸ್ವಸ್ಥತೆ ಮತ್ತು ಸ್ಥೂಲಕಾಯವುಳ್ಳ ಮಕ್ಕಳು ಬಹುಬೇಗ ಅನಾರೋಗ್ಯಕ್ಕೀಡಾಗುತ್ತಾರೆ. ಜತೆಗೆ ಕಳಪೆ ಆಹಾರ, ಅನಿಯಮಿತ ಆಹಾರ ಸೇವಿಸುವ, ಚಟುವಟಿಕೆರಹಿತ ಮಕ್ಕಳು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಈ ಎಲ್ಲ ಸಮಸ್ಯೆಯಿಂದ ಮಕ್ಕಳನ್ನು ರಕ್ಷಿಸಲು ಆರೋಗ್ಯಕರ ಆಹಾರದೊಂದಿಗೆ ಉತ್ತಮ ಚಟುವಟಿಕೆಯನ್ನು ರೂಢಿಸಬೇಕಿದೆ. ಸದ್ಯ ಮಕ್ಕಳಿಗೆ ಕರೊನಾ ಲಸಿಕೆ ಲಭ್ಯವಿಲ್ಲದ ಕಾರಣ ಪ್ರತಿಯೊಬ್ಬರೂ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಅನಿವಾರ್ಯ.

ರೋಗನಿರೋಧಕ ಶಕ್ತಿ ಹೆಚ್ಚಿಸಿ

ವಿಟಮಿನ್ ಸಿ, ಡಿ ಮತ್ತು ಇ ಸಮೃದ್ಧವಾಗಿರುವ ಆಹಾರ ಸೋಂಕು ನಿರೋಧಕ ಕೋಶಗಳನ್ನು ಹೆಚ್ಚಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತವೆ. ವಿಟಮಿನ್ ಸಿ ಮತ್ತು ಇ ಸೋಂಕು ನಿಯಂತ್ರಿಸುವಲ್ಲಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಳಪೆ ಆಹಾರವು ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಿಟ್ರಸ್ ಹಣ್ಣು, ಹಳದಿ ಹಣ್ಣು, ತರಕಾರಿ, ಪಾಲಕ್ ಮತ್ತಿತರ ಹಸಿರು ಸೊಪ್ಪು, ಬೆಳ್ಳುಳ್ಳಿ, ಶುಂಠಿ, ಮೊಸರು, ಬಾದಾಮಿ, ಅರಿಶಿಣವನ್ನು ಮಗುವಿನ ಆಹಾರದಲ್ಲಿ ಸೇರಿಸಿದರೆ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಆಗದಂತೆ ನೋಡಿಕೊಳ್ಳುವುದು ಮತ್ತು ದೇಹಕ್ಕೆ ಅಗತ್ಯವಿರುವಷ್ಟು ನಿದ್ರೆ ಮಾಡುವುದು ಒಳ್ಳೆಯದು. ಇದರಿಂದ ಸ್ನಾಯುಗಳಲ್ಲಿ ಪ್ರೊಟೀನ್ ಸಂಶ್ಲೇಷಣೆಯ ಪ್ರಮಾಣ ಹೆಚ್ಚಾಗಿ ಸೋಂಕಿನ ಪ್ರಭಾವ ಕಡಿಮೆಯಾಗುತ್ತದೆ.

ಆಹಾರದಲ್ಲಿ ಸಮತೋಲನ ಇರಲಿ

ಸಮತೋಲಿತ ಮತ್ತು ಆರೋಗ್ಯಕರ ಆಹಾರವು ರೋಗನಿರೋಧಕ ಶಕ್ತಿ ಹೆಚ್ಚಿಸುವ ಜತೆಗೆ ದೀರ್ಘಕಾಲದ ಕಾಯಿಲೆ ಮತ್ತು ಸೋಂಕುಗಳ ಪ್ರಮಾಣ ಕಡಿಮೆ ಮಾಡುತ್ತದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ಬಹಳ ಮುಖ್ಯ. 6 ತಿಂಗಳವರೆಗಿನ ಶಿಶುಗಳಿಗೆ ಪ್ರತ್ಯೇಕವಾಗಿ ಹಾಲುಣಿಸಬೇಕು. 6 ತಿಂಗಳ ಮೇಲ್ಪಟ್ಟ ಮಕ್ಕಳಿಗೆ ಧಾನ್ಯ, ಬೇಳೆಕಾಳು, ಹಣ್ಣು, ತರಕಾರಿ, ಹಾಲಿನ ಉತ್ಪನ್ನ, ಬೀಜಗಳು ಸೇರಿದಂತೆ ಕನಿಷ್ಠ 4 ಗುಂಪುಗಳಾಗಿ ಆಹಾರ ಒದಗಿಸಬೇಕು. ರೋಗನಿರೋಧಕ ಶಕ್ತಿಯನ್ನು ಕ್ರೋಡೀಕರಿಸಲು ಮತ್ತು ಸೋಂಕಿನ ಅಪಾಯ ಕಡಿಮೆ ಮಾಡಲು ವಿಟಮಿನ್ ಮತ್ತು ಫೈಬರ್ ಅಂಶಗಳು (ಸತು, ತಾಮ್ರ, ಸೆಲೆನಿಯಮ್ ಕಬ್ಬಿಣ) ಸಮೃದ್ಧವಾಗಿರುವ ಆಹಾರವನ್ನು ನೀಡಬೇಕು. ಸಕ್ಕರೆ, ಉಪ್ಪು, ಕೊಬ್ಬಿನ ಪದಾರ್ಥಗಳ ಅತಿಯಾದ ಬಳಕೆ ಬೇಡ.

ಕೋವಿಡ್ ಸಂದರ್ಭದಲ್ಲಿ ಚಟುವಟಿಕೆ ಕಡಿಮೆ ಇರುವುದರಿಂದ ಆರೋಗ್ಯಕರ ಹಾಗೂ ಸಮತೋಲಿತ ಆಹಾರ ಸೇವನೆಯ ಜತೆಗೆ ನಿತ್ಯ ವ್ಯಾಯಾಮ, ಯೋಗಾಭ್ಯಾಸ ಮಾಡಬೇಕು. ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಿಸುವ ಆಹಾರದಿಂದ ದೂರವಿರಬೇಕು. ಮನೆಯಲ್ಲೇ ಇದ್ದರೂ ಮಕ್ಕಳು ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು.

| ಶ್ರೀಮತಿ ವೆಂಕಟರಮಣ ಕ್ಲಿನಿಕಲ್ ಡಯಟೀಷಿಯನ್, ಆಹಾರ ತಜ್ಞೆ

ಹೀಗಿರಲಿ ಆಹಾರ ಕ್ರಮ

  • ಅಡುಗೆ ಮಾಡುವ ಮುನ್ನ, ಊಟ ಬಡಿಸುವಾಗ ಮತ್ತು ತಿನ್ನುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
  • ಅಕ್ಕಿ, ರಾಗಿ, ಗೋಧಿ, ಜೋಳ ದೇಹಕ್ಕೆ ಹೆಚ್ಚು ಶಕ್ತಿ ನೀಡುವ ಆಹಾರಧಾನ್ಯಗಳು.
  • ರೋಗನಿರೋಧಕ ಶಕ್ತಿ ಹೆಚ್ಚಿಸಲು ಕಾಬೋಹೈಡ್ರೇಟ್, ಪ್ರೊಟೀನ್, ಜೀವಸತ್ವ, ಖನಿಜಗಳಿಂದ ಸಮೃದ್ಧವಾಗಿರುವ ಹಣ್ಣು-ತರಕಾರಿಯಂತಹ ಸಮತೋಲಿತ ಆಹಾರ ಸೇವಿಸಬೇಕು.
  • ಎಲ್ಲ ರೀತಿಯ ಬೇಳೆ, ಕಾಳು, ಕಡಲೆಕಾಳು, ರಾಜ್ಮಾ, ನೆಲಗಡಲೆಯು ಪ್ರೊಟೀನ್, ಫೈಬರ್ ಮತ್ತು ಕಬ್ಬಿಣದ ಸಮೃದ್ಧ ಅಂಶ ಹೊಂದಿದ್ದು, ಆಹಾರದಲ್ಲಿ ನಿತ್ಯ ಬಳಸಬೇಕು.
  • ಸೊಪ್ಪು, ಹುರುಳಿಕಾಯಿ, ಹೀರೇಕಾಯಿ, ಸೋರೆಕಾಯಿ, ಬೆಂಡೆಕಾಯಿ, ನುಗ್ಗೆಕಾಯಿ, ಮೂಲಂಗಿ ಮತ್ತು ಕ್ಯಾರಟ್ ಹಾಗೂ ಅದರ ಎಲೆಗಳ ಸೇವನೆಯಿಂದ ದೇಹಕ್ಕೆ ಕಬ್ಬಿಣ, ಖನಿಜಾಂಶ ದೊರೆಯುತ್ತವೆ. ಎಲೆಕೋಸು, ಹೂ ಕೋಸು ಸೇವನೆಯೂ ಒಳ್ಳೆಯದು.
  • ಕಲ್ಲಂಗಡಿ, ಕಸ್ತೂರಿ ಕಲ್ಲಂಗಡಿ, ದ್ರಾಕ್ಷಿ, ಕಿತ್ತಳೆ, ಪೇರಲ, ಸೇಬು, ಪಪ್ಪಾಯ ಮುಂತಾದ ತಾಜಾ ಹಣ್ಣುಗಳನ್ನು ನಿತ್ಯ ಕನಿಷ್ಠ 400 ಗ್ರಾಂ ಸೇವಿಸಬೇಕು.
  • ಮೊಟ್ಟೆ, ಕೋಳಿ ಮತ್ತು ಮೀನನ್ನು ವಾರಕ್ಕೆ 3 ಬಾರಿ ಸೇವಿಸಬಹುದು. ಆದರೆ, ಅವುಗಳನ್ನು ಖರೀದಿಸುವಾಗ ಮತ್ತು ಅಡುಗೆ ಮಾಡುವಾಗ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಬೇಕು. ಮೊಟ್ಟೆಯನ್ನು ಪ್ರತಿದಿನ ಸೇವಿಸಿದರೂ ಒಳ್ಳೆಯದು.
  • ಎಳನೀರು, ಮಜ್ಜಿಗೆ, ಹಣ್ಣಿನ ರಸ, ಗಂಜಿ, ಕುದಿಸಿ ಆರಿಸಿದ ನೀರು ಸೇವನೆ ಉತ್ತಮ.
  • ಹುರಿದ ನೆಲಗಡಲೆ, ಬೆಲ್ಲದೊಂದಿಗೆ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿ, ಬಾದಾಮಿ, ವಾಲ್​ನಟ್ಸ್, ಒಣದ್ರಾಕ್ಷಿಯನ್ನು ಆಗಾಗ ಸೇವಿಸಬೇಕು.
  • ಸಕ್ಕರೆ, ಕೆಫೀನ್, ಟೆಟ್ರಾ ಪ್ಯಾಕ್ ಜ್ಯೂಸ್, ಎನರ್ಜಿ ಡ್ರಿಂಕ್ಸ್ ಮತ್ತು ಏರೇಟೆಡ್ ಪಾನೀಯ, ಕರಿದ ತಿನಿಸು, ಬೇಕರಿ ಉತ್ಪನ್ನಗಳ ಸೇವನೆ ಸದ್ಯಕ್ಕೆ ಬೇಡ.