ಅಂಕಣ

ಕೊನೆಗೂ ನ್ಯಾಯ ಸಿಕ್ಕಿತು: ಆ ಕ್ಷಣ ಅಂಕಣ..

Webdesk - Ravikanth
ಡಾ. ಸಾರಂಗಿ ಕೊಟ್ಟ ಮರಣೋತ್ತರ ಪರೀಕ್ಷಾ ವರದಿ ನೋಡಿ ಪೊಲೀಸರು ಆಘಾತಗೊಂಡರು. ಏಕೆಂದರೆ ಅಪರಾಧ ನಡೆದ ಸ್ಥಳದಲ್ಲಿ ಕಲೆಹಾಕಿದ್ದ ಸಾಕ್ಷ್ಯಗಳು ಮತ್ತು ಸುಶೀಲ್​ನ ಹೇಳಿಕೆಯಂತೆ ನೈನಾ ಸಾಹನಿ ಸತ್ತದ್ದು ಗುಂಡೇಟಿನಿಂದ. ಎರಡನೆಯದಾಗಿ ಅವಳ ದೇಹವನ್ನು ಕತ್ತರಿಸುವ ಯಾವುದೇ ಪ್ರಯತ್ನವನ್ನು ಅವನು ಮಾಡಿರಲಿಲ್ಲ. ಪೋಸ್ಟ್ ಮಾರ್ಟಂ ವರದಿಯಲ್ಲಿದ್ದ ಹಲವಾರು ವಿರೋಧಾಭಾಸಗಳಿಂದ ಗೊಂದಲಭರಿತರಾದ ತನಿಖಾಧಿಕಾರಿ ಡಾ. ಸಾರಂಗಿಯನ್ನು ಭೇಟಿ ಮಾಡಿ ದೇಹವನ್ನು ಯಾವಾಗ ಕತ್ತರಿಸಲಾಯಿತು, ಸಾಯುವ ಮೊದಲೋ, ನಂತರವೋ, ದೇಹದಲ್ಲಿ ಗುಂಡುಗಳಿತ್ತೋ ಇಲ್ಲವೋ ಎಂಬ ಸ್ಪಷ್ಟೀಕರಣ ಕೋರಿದಾಗ ಸಾರಂಗಿ ಬೇಜವಾಬ್ದಾರಿ ಉತ್ತರಗಳನ್ನು ಕೊಟ್ಟರು. ಅವರು ಆರೋಪಿಯ ಆಮಿಷಕ್ಕೆ ಬಲಿಯಾಗಿರಬಹುದೆಂಬ ಸಂಶಯ ತನಿಖಾಧಿಕಾರಿಗೆ ಬಂದಿತು. ಏಕೆಂದರೆ ಅದೇ ವರದಿ ಆಧಾರದ ಮೇಲೆ ಸುಶೀಲ್ ಆರೋಪದಿಂದ ಬಿಡುಗಡೆಯಾಗಬಹುದಿತ್ತು. ಹೀಗಾಗಿ ದೆಹಲಿ ಪೊಲೀಸಿನ ಹಿರಿಯ ಅಧಿಕಾರಿಗಳು ಎರಡನೆಯ ಬಾರಿಗೆ ನೈನಾಳ ದೇಹದ ಮರಣೋತ್ತರ ಪರೀಕ್ಷೆ ಮಾಡಿಸಲು ನಿರ್ಧರಿಸಿದರು.

ಮೂರು ಜನರಿದ್ದ ನುರಿತ ವೈದ್ಯರ ತಂಡ ಮರು-ಮರಣೋತ್ತರ ಪರೀಕ್ಷೆ ಮಾಡಿತು. ನೈನಾ ಗುಂಡೇಟಿನಿಂದ ಸತ್ತಿರಬಹುದೆಂದು ಪೊಲೀಸರು ಲಿಖಿತ ರೂಪದಲ್ಲಿ ವೈದ್ಯರಿಗೆ ತಿಳಿಸಿದ್ದರೂ ಡಾ. ಸಾರಂಗಿ ದೇಹದ ಮೇಲೆ ಎಕ್ಸ್​ರೇ ಮಾಡಿರಲಿಲ್ಲ. ಹೀಗಾಗಿ, ಆರಂಭದಲ್ಲಿಯೇ ವೈದ್ಯರ ತಂಡವು ದೇಹದ ಎಕ್ಸ್​ರೇ ಮಾಡಿಸಿತು. ಆಗ ಬೆನ್ನುಮೂಳೆಯ ಪಕ್ಕದಲ್ಲಿ ಹಾಗೂ ತಲೆಬುರುಡೆಯಲ್ಲಿ ಎರಡು ಗುಂಡುಗಳು ಕಂಡುಬಂದವು. ತಲೆಬುರುಡೆಗೆ ಹೊಕ್ಕಿದ್ದ ಬುಲೆಟ್ ಎರಡು ಹೋಳಾಗಿತ್ತು. ಎರಡೂ ಗುಂಡುಗಳನ್ನು ಹೊರತೆಗೆಯಲಾಯಿತು. ಆ ಗುಂಡುಗಳು ರಿವಾಲ್ವರಿನಿಂದಲೇ ಬಂದಿದ್ದು, ತಲೆಗೆ ತಗುಲಿದ ಗುಂಡೇಟಿನ ಫಲವಾಗಿಯೇ ಆಕೆ ಕೋಮಾ ಸ್ಥಿತಿಗೆ ತಲುಪಿ ತದನಂತರ ಸಾವನ್ನಪ್ಪಿದ್ದಾಳೆ ಎಂದು ತಂಡ ಹೇಳಿತು. ನೈನಾಳ ಕೈಕಾಲುಗಳನ್ನು ಸಾವಿಗೆ ಮುನ್ನ ಕತ್ತರಿಸಿಲ್ಲ, ಅವು ತಂದೂರಿಯ ಬೆಂಕಿಯ ಶಾಖದಿಂದಾಗಿ ಬೇರ್ಪಟ್ಟಿವೆ ಎಂದು ಅದು ಸ್ಪಷ್ಟೀಕರಿಸಿತು.

ಮೃತದೇಹವು ನೈನಾಳದ್ದೇ ಎಂದು ನಿಖರವಾಗಿ ಸಾಬೀತುಪಡಿಸಲು ದೆಹಲಿಯಲ್ಲಿ ಅದೇ ಮೊದಲ ಬಾರಿಗೆ ಡಿ.ಎನ್.ಎ ತಂತ್ರಜ್ಞಾನ ಉಪಯೋಗಿಸಲಾಯಿತು. ಹೈದರಾಬಾದಿನ ತಜ್ಞರು ನೈನಾಳ ಮಾತಾಪಿತರ ಡಿ.ಎನ್.ಎ ಮತ್ತು ಮೃತದೇಹದ ಡಿ.ಎನ್.ಎ ಸ್ಯಾಂಪಲ್ಲುಗಳನ್ನು ಹೋಲಿಸಿ ಮೃತದೇಹವು ನೈನಾಳದ್ದೇ ಎಂದು ವೈಜ್ಞಾನಿಕವಾಗಿ ಸಾಬೀತು ಮಾಡಿದರು. ಜತೆಗೆ ಮೃತಳ ತಲೆಬುರುಡೆಯನ್ನು ಫೋಟೋ ಸೂಪರ್ ಇಂಪೊಸಿಷನ್ ಎನ್ನುವ ತಂತ್ರದ ಮೂಲಕವೂ ನೈನಾಳದ್ದೆಂದು ಸಾಬೀತುಪಡಿಸಲಾಯಿತು. ಸುಶೀಲ್​ನ ರಿವಾಲ್ವರಿನಿಂದಲೇ ನೈನಾಳ ದೇಹದಿಂದ ತೆಗೆದಿದ್ದ ಗುಂಡು ಬಂದಿತ್ತೆಂದು ಪ್ರಯೋಗಾಲಯದಲ್ಲಿ ಸಾಬೀತಾಯಿತು.

ಎಲ್ಲ ಸಾಕ್ಷ್ಯಾಧಾರಗಳನ್ನೂ ಸಂಗ್ರಹಿಸಿದ ಪೊಲೀಸರು ಸುಶೀಲ್ ಶರ್ವನನ್ನು ಕೊಲೆ, ಸಾಕ್ಷ್ಯನಾಶ ಹಾಗೂ ಒಳಸಂಚು ಪ್ರಕರಣಗಳಲ್ಲಿ ಆರೋಪಿಯೆಂದು ನಮೂದಿಸಿ, ಕೇಶವ್ ಕುಮಾರ್​ನನ್ನು ಸಾಕ್ಷ್ಯನಾಶ ಮಾಡುವುದರಲ್ಲಿ ಸುಶೀಲ್​ಗೆ ಸಹಕಾರ ಮಾಡಿದ್ದ ಎಂದು ಆರೋಪಿಸಿ ಅವರಿಬ್ಬರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದರು. ಆನಂತರ ಸುಶೀಲ್ ಶರ್ವನಿಗೆ ಪರಾರಿಯಾಗಲು ಸಹಕರಿಸಿದ್ದ ಜೈಪ್ರಕಾಶ್ ಪೈಲ್ವಾನ್, ರಿಷಿರಾಜ್ ಮತ್ತು ರಾಮಪ್ರಕಾಶ್ ಸಚದೇವರನ್ನೂ ಆರೋಪಿಗಳ ಪಟ್ಟಿಗೆ ಸೇರಿಸಲಾಯಿತು. ಆರೋಪಪಟ್ಟಿಯ ಜೊತೆ 100ಕ್ಕೂ ಹೆಚ್ಚು ದಾಖಲೆಗಳನ್ನು ಸಲ್ಲಿಸಿದ್ದಲ್ಲದೆ, ಅವುಗಳ ಜೊತೆ ಪ್ರಾಸಿಕ್ಯೂಷನ್ ಪರ ಸಾಕ್ಷಿ ನುಡಿಯುವ 99 ಸಾಕ್ಷಿಗಳು ಮತ್ತು ಅವರ ಹೇಳಿಕೆಗಳನ್ನು ಲಗತ್ತಿಸಲಾಗಿತ್ತು. ಈ 99 ಸಾಕ್ಷಿಗಳ ಪೈಕಿ ಐಎಎಸ್ ಅಧಿಕಾರಿ ಡಿ.ಕೆ.ರಾವ್, ಮತ್ತು ಮತ್​ಲೂಬ್ ಕರೀಂ ಇವರ ಹೇಳಿಕೆಗಳನ್ನು ಕ್ರಿಮಿನಲ್ ಪ್ರೊಸಿಜರ್ ಕೋಡ್ 164ರ ಅನ್ವಯ ನ್ಯಾಯಾಧೀಶರ ಮುಂದೆ ದಾಖಲು ಮಾಡಿಸಲಾಗಿತ್ತು. ಆರಂಭದಲ್ಲಿ ರಾವ್​ರನ್ನೂ ಆರೋಪಿಯನ್ನಾಗಿ ಮಾಡಬೇಕೆಂದು ಯೋಚಿಸಿತ್ತಾದರೂ ಆನಂತರ ಸಾಕ್ಷಿಯನ್ನಾಗಿ ಪರಿಗಣಿಸಲಾಯಿತು. ಕೇಶವ್ ಕುಮಾರ್​ನನ್ನು ಮಾಫಿ ಸಾಕ್ಷಿ (ಅಪ್ರೂವರ್​) ಯನ್ನಾಗಿ ಮಾಡಿಕೊಂಡರೆ ಸುಶೀಲ್​ನ ಅಪರಾಧ ಸಾಬೀತು ಮಾಡುವುದು ಸುಲಭವೆನ್ನುವ ಉದ್ದೇಶದಿಂದ ಈ ಪ್ರಯತ್ನವೂ ನಡೆಯಿತು.

ಇದನ್ನು ಊಹಿಸಿದ್ದ ಚಾಲಾಕಿ ಸುಶೀಲ್ ಶರ್ಮಾ ತಿಹಾರ್ ಜೈಲಿನಲ್ಲೇ ಇದ್ದ ಕೇಶವ್​ಗೆ ಬೆದರಿಕೆ ಹಾಕತೊಡಗಿದ. ಅದೇ ಜೈಲಿನಲ್ಲಿದ್ದ ಅಪರಾಧಿಯೊಬ್ಬನ ಸಹಾಯದಿಂದ ಕೇಶವ ಕುಮಾರ್​ನ ಊಟಕ್ಕೆ ವಿಷ ಬೆರೆಸಿದ್ದ. ತುರ್ತು ಚಿಕಿತ್ಸೆಯ ಫಲವಾಗಿ ಕೇಶವ್ ಸಾವಿನಿಂದ ಬಚಾವಾದ. ಆತ ಈ ಘಟನೆಯಿಂದ ಎಷ್ಟು ಹೆದರಿದನೆಂದರೆ ತಾನು ಅಪೂ›ವರ್ ಆಗುವುದಿಲ್ಲವೆಂದು ಪೊಲೀಸರಿಗೆ ಸ್ಪಷ್ಟವಾಗಿ ತಿಳಿಸಿದ.

ಸುಶೀಲ್ ವಿರುದ್ಧ ನ್ಯಾಯಾಲಯದ ವಿಚಾರಣೆ ಸುಲಭವಾಗಿ ಮುಂದುವರಿಯುತ್ತದೆ ಎನ್ನುವ ನಂಬಿಕೆ ಯಾರಿಗೂ ಇರಲಿಲ್ಲ. ಆತ ಹಲವಾರು ಕಾರಣಗಳನ್ನು ನೀಡಿ ವಿಚಾರಣೆಯನ್ನು ಆದಷ್ಟು ಮುಂದೆ ತಳ್ಳಲು ಯತ್ನಿಸುತ್ತಾನೆ, ಖಂಡಿತವಾಗಿಯೂ ಪ್ರಥಮ ಮರಣೋತ್ತರ ಪರೀಕ್ಷೆಯ ವರದಿಯನ್ನು ತನ್ನ ರಕ್ಷಣೆಗೆ ಬಳಸುತ್ತಾನೆ ಎನ್ನುವುದು ಖಚಿತವಾಗಿತ್ತು. ಸುಶೀಲ್ ಶರ್ಮಾ ತನ್ನ ಪರವಾಗಿ ವಾದಿಸಲು ಹಿರಿಯ ವಕೀಲರ ದೊಡ್ಡ ತಂಡವನ್ನೇ ನೇಮಿಸಿಕೊಂಡ. ಈ ಎಲ್ಲ ವಕೀಲರು ವಿಚಾರಣೆಯ ಆರಂಭವನ್ನು ಎಷ್ಟು ವಿಳಂಬ ಮಾಡಬಹುದೋ ಅಷ್ಟೂ ವಿಳಂಬವಾಗುವಂತೆ ನೋಡಿಕೊಂಡರು. ಸುಶೀಲ್​ಗೆ ಜೈಲಿನಲ್ಲಿ ಕೊಡುತ್ತಿರುವ ಆಹಾರ ಸರಿಯಾಗಿಲ್ಲ, ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ, ಅವನಿಗೆ ಜೀವಭಯವಿದೆ ಮುಂತಾದ ಕಾರಣಗಳನ್ನು ಕೊಟ್ಟು ವಿಚಾರಣೆಯನ್ನು ಮುಂದೆ ಹಾಕಿಸತೊಡಗಿದರು.

ಸುಶೀಲ್ ಶರ್ಮಾ ರಾಜಕೀಯವಾಗಿ ಪ್ರಭಾವಿಯಾಗಿದ್ದು ಅವನಿಗೆ ತೋಳ್ಬಲ, ಧನಬಲ, ಜನಬಲ ಈ ಮೂರೂ ಇದ್ದ ಕಾರಣ ಆರೋಪಪಟ್ಟಿ ಸಲ್ಲಿಸಿ ಸುಮಾರು ಒಂದು ವರ್ಷದ ನಂತರವೂ ವಿಚಾರಣೆ ಮುಂದುವರಿಯಲಿಲ್ಲ. ಹಾಗೂ ಹೀಗೂ ಪ್ರಾಸಿಕ್ಯೂಷನ್ ಪರ ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಾಲಯವು ತೆಗೆದುಕೊಳ್ಳುವಷ್ಟರಲ್ಲಿ ಸುಶೀಲ್ ಶರ್ಮಾ ಇನ್ನೊಂದು ಅರ್ಜಿ ಸಲ್ಲಿಸಿ ತಾನು ಪಾಪರ್ ಆಗಿರುವ ಕಾರಣ ಸರ್ಕಾರದ ಖರ್ಚಿನಲ್ಲಿ ತನಗೆ ವಕೀಲರೊಬ್ಬರನ್ನು ಇಡಬೇಕು ಎಂದು ಕೋರಿದ. ಇದೂ ಮಂಜೂರಾಯಿತು.

ಸಾಕ್ಷಿಗಳ ಪೈಕಿ ಪ್ರಥಮ ವರ್ತಮಾನ ವರದಿ ದಾಖಲಿಸಿದ್ದ ಹೆಡ್ ಕಾನ್​ಸ್ಟೇಬಲ್ ಕುಂಜುವಿನ ಸಾಕ್ಷ್ಯ ಮಹತ್ವ ಗಳಿಸಿತ್ತು. ಅವನ ಸಾಕ್ಷ್ಯ ದಾಖಲು ಮಾಡಲು 45 ಬಾರಿ ನ್ಯಾಯಾಲಯದ ಕಟಕಟೆಗೆ ಕರೆಸಲಾಯಿತು. ಒಂದು ದಿನ ಆತನನ್ನು ನ್ಯಾಯಾಲಯದ ಆವರಣದಲ್ಲಿಯೇ ಎದುರಾದ ಸುಶೀಲ್, ತನ್ನ ಹೇಳಿಕೆಯನ್ನು ಬದಲಿಸಿದರೆ 10 ಲಕ್ಷ ರೂ. ಕೊಡುವ ಆಮಿಷ ಒಡ್ಡಿದ. ಕುಂಜು ನಿರಾಕರಿಸಿದಾಗ, ‘ನೀನು ಸುಶೀಲ್ ವಿರುದ್ಧ ಸಾಕ್ಷ್ಯ ಕೊಟ್ಟರೆ ನಿನ್ನ ಪತ್ನಿ ವಿಧವೆಯಾಗುತ್ತಾಳೆ’ ಎಂದು ಬೆದರಿಕೆಯ ಕರೆಗಳು ಬಂದವು. ಆತನಿಗೆ ರಕ್ಷಣೆ ಕೊಡಲಾಯಿತು. ನ್ಯಾಯಾಲಯದಲ್ಲಿ ಸುಶೀಲ್ ಪರ 8 ಜನ ವಕೀಲರು ಒಬ್ಬರ ನಂತರ ಒಬ್ಬರಾಗಿ ಕುಂಜುವನ್ನು ಪಾಟೀ ಸವಾಲು ಮಾಡಿ ಅವನನ್ನು ವಿಚಲಿತಗೊಳಿಸಲು ಪ್ರಯತ್ನಿಸಿದರು. ಎಂತಹ ಪ್ರಶ್ನೆಗಳನ್ನು ಕೇಳಿದರೂ ಕುಂಜು ಅಧೀರನಾಗದೆ ತಾನು ಎಫ್​ಐಆರ್​ನಲ್ಲಿ ಕೊಟ್ಟ ಹೇಳಿಕೆಯನ್ನು ಚಾಚೂ ತಪ್ಪದೆ ಪುಷ್ಟೀಕರಿಸಿದ. ನ್ಯಾಯಾಲಯದಲ್ಲಾತ ಹೇಳಿಕೆ ಕೊಡುತ್ತಿದ್ದಾಗ ಅಲ್ಲಿದ್ದ ಸುಶೀಲ್​ನ ರೌಡಿ ಮಿತ್ರರು ದುರುಗುಟ್ಟಿಕೊಂಡು ನೋಡುತ್ತಾ ಅವನನ್ನು ಕೊಲ್ಲುವೆವೆಂಬ ಸಂಕೇತಗಳನ್ನು ಕೊಟ್ಟರೂ ಕುಂಜುಹಿಮ್ಮೆಟ್ಟಲಿಲ್ಲ; ಎಷ್ಟೇ ಒತ್ತಡ ಬಂದರೂ ಮಣಿಯಲಿಲ್ಲ.

ಆದರೆ, ಬೇರೆ ಇತರ ಸಾಕ್ಷಿಗಳು ಕುಂಜುವಿನಂತೆ ಧೈರ್ಯ ತೋರಲಿಲ್ಲ. ಅವರಲ್ಲಿ ಕೆಲವರಂತೂ ಶರ್ವನ ಸಹಚರರ ಆಮಿಷಗಳು ಇಲ್ಲವೇ ಬೆದರಿಕೆಗಳ ಪ್ರಭಾವದಿಂದ ನ್ಯಾಯಾಲಯಕ್ಕೆ ಸಾಕ್ಷ್ಯ ಕೊಡಲು ಬರಲೇ ಇಲ್ಲ. ನ್ಯಾಯಾಲಯಕ್ಕೆ ಬಂದ ಹಲವಾರು ಪ್ರಾಸಿಕ್ಯೂಷನ್ ಪರ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾದರು. ಇಷ್ಟೇ ಸಾಲದೆಂಬಂತೆ ನೈನಾಳ ದೇಹದ ಮೇಲೆ ತೆಗೆದಿದ್ದ ಎಕ್ಸರೇ ಇದ್ದಕ್ಕಿದ್ದಂತೆ ನ್ಯಾಯಾಲಯದ ತಿಜೋರಿಯಿಂದ ಮಾಯವಾಗುವುದರಲ್ಲಿ ಸುಶೀಲ್​ನ ಪಾತ್ರವೂ ಇತ್ತು.

ಕಡೆಗೂ ಕುಂಟುತ್ತಾ ತೆವಳುತ್ತಾ ಈ ವಿಚಾರಣೆಯು 2003ರ ನವೆಂಬರ್​ನಲ್ಲಿ, ಕೊಲೆ ನಡೆದ 8 ವರ್ಷಗಳ ನಂತರ ಮುಗಿಯಿತು. ತನ್ನ ಅಂತಿಮ ಹೇಳಿಕೆಯಲ್ಲಿ ಸುಶೀಲ್ ಪ್ರತಿಯೊಂದು ಆರೋಪವನ್ನೂ ಅಲ್ಲಗಳೆದು 1995ರ ಜುಲೈ 1ರಿಂದ 6ರವರೆಗೆ ತಾನು ತಿರುಪತಿಯಲ್ಲಿದ್ದು, ಅಲ್ಲಿಂದ ಜುಲೈ 7ರಂದು ಚೆನ್ನೈಗೆ ಹೋದೆನೆಂದು ತಿಳಿಸಿ ತನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆಯೆಂದ. ಆತ ತಾನು ನೈನಾಳನ್ನು ಲಗ್ನವಾಗಿಲ್ಲ; 1995ರ ಜನವರಿಯ ನಂತರ ಆಕೆಯ ಮುಖವನ್ನೇ ನೋಡಿಲ್ಲ ಎಂದ. ‘ನಾನು ರಾಜಕೀಯ ಚಟುವಟಿಕೆಗಳಲ್ಲಿ ಮಗ್ನನಾಗಿದ್ದರಿಂದ ನಾವಿಬ್ಬರೂ ಭೇಟಿಯನ್ನೇ ಮಾಡಿಲ್ಲ’ ಎಂದ.

ಕೇವಲ ಸಾಂದರ್ಭಿಕ ಸಾಕ್ಷ್ಯದ ಮೇಲೆಯೇ ಅವಲಂಬಿತವಾಗಿದ್ದ ಈ ಪ್ರಕರಣದಲ್ಲಿ ಸುಶೀಲ್ ಖುಲಾಸೆಯಾಗುತ್ತಾನೆಂದೇ ಅವನ ವಕೀಲರು ಭಾವಿಸಿದ್ದರು. ವಿಚಾರಣೆ ಮುಗಿದ ನಂತರ ನ್ಯಾಯಾಧೀಶರು ಸುಶೀಲ್ ಶರ್ಮಾ ಮತ್ತು ಕೇಶವ್ ಕುಮಾರ್ ತಪ್ಪಿತಸ್ಥರೆಂದು ತೀರ್ವನಿಸಿದರು. ಸುಶೀಲ್ ಮಾಡಿದ ಘನಘೊರ ಅಪರಾಧಕ್ಕೆ ಗಲ್ಲು ಶಿಕ್ಷೆಯೇ ತಕ್ಕದ್ದೆಂದು ಹೇಳಿದ ಅವರು ಸಾಯುವವರೆಗೆ ಆತನನ್ನು ಗಲ್ಲುಗಂಬಕ್ಕೆ ಏರಿಸಬೇಕು ಎಂದು ತೀರ್ಪಿತ್ತರು. ಕೇಶವ್ ಕುಮಾರ್​ಗೆ ಏಳು ವರ್ಷ ಜೈಲು ಶಿಕ್ಷೆ ಮತ್ತು 10000 ರೂಪಾಯಿ ಜುಲ್ಮಾನೆ ವಿಧಿಸಿದರು. ಸುಶೀಲ್ ಶರ್ಮಾ ದೆಹಲಿ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ. ಅದನ್ನು ಆ ನ್ಯಾಯಾಲಯ ತಳ್ಳಿಹಾಕಿತು. ಆತ ಅದೇ ವರ್ಷ ಸವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ.

2013ರ ಅಕ್ಟೋಬರ್ 8ರಂದು ಸವೋಚ್ಚ ನ್ಯಾಯಾಲಯವು ಅವನ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿತು. 23 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಸುಶೀಲ್ 2018ರ ಡಿಸೆಂಬರಿನಲ್ಲಿ ಬಿಡುಗಡೆಯಾದ. ‘ಮಾ ಕುರು ಧನ, ಜನ, ಯೌವ್ವನ ಗರ್ವಂ, ಹರತಿ ನಿಮೇಷಾಂ ಕಾಲಃ ಸರ್ವಂ’ ಎಂದು ಆದಿಶಂಕರರು ಹೇಳಿದಂತೆ ಸುಶೀಲ್​ಗೆ ಹಣ, ಜನ ಮತ್ತು ಅಧಿಕಾರದ ಬೆಂಬಲವಿದ್ದರೂ ಕಾಲ ಬಂದಾಗ ಆತನ ನೆರವಿಗೆ ಇವು ಯಾವುವೂ ಬರಲಿಲ್ಲ.

(ನವೆಂಬರ್​ನಲ್ಲಿ ಬಿಡುಗಡೆಯಾಗುತ್ತಿರುವ ‘ತಂದೂರ್ ಮರ್ಡರ್’ ಕೃತಿಯ ಆಯ್ದ ಭಾಗ)