ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.
ಆಗ ತಾನೆ ತಾಯಿಯ ಗರ್ಭದಿಂದ ಆಚೆ ಬಂದು ಚೀರಾಡುತ್ತಿದ್ದ ನನ್ನನ್ನು ದಾದಿಯರು ಸಂತೈಸಿ, ವಸ್ತ್ರದಲ್ಲಿ ಸುತ್ತಿದ್ದರು. ಹೊರಗಡೆ ಇದ್ದ ಅಪ್ಪ ನನ್ನಾಗಮನದ ಕನವರಿಕೆಯ ತೊಳಲಾಟದಲ್ಲಿ ಓಡಾಡುತ್ತಿದ್ದ. ಆತನ ಕೈನಲ್ಲಿ ನನ್ನನ್ನಿಟ್ಟಾಗ ನನ್ನಪ್ಪನ ಸಾಮಾಜಿಕ ಜಾಲತಾಣದ Bio statusನಲ್ಲಿ ಕಂಡು ಬಂದಿದ್ದು ನಾನು ಅಪ್ಪನ ಪುಟ್ಟ ಪ್ರಪಂಚದ ಹೀರೋಯಿನ್ ಎಂದು! ಕಾಲಗಳುರುಳಿ ನನಗೆ ಜ್ಞಾನದ ಅರಿವು ಆಗುವಾಗ ಅನಿಸಿದ್ದು ನನ್ನ ವಿಶಾಲ ಪ್ರಪಂಚದ ಸೂಪರ್ ಹೀರೋ ನನ್ನಪ್ಪ ಎಂದು. ♠ ಪ್ರಣತಿ ಎಸ್.ಭಾರದ್ವಾಜ್ ಬೆಂಗಳೂರು