ಸಾಕ್ಷಿ ಆಧಾರಿತ ಔಷಧಿಯ ಪಿತಾಮಹ ಎಂದು ಗುರುತಿಸಿರುವ ಡಾ. ಡೇವಿಡ್ ಸಾಕೆಟ್ ಪ್ರಮುಖವಾಗಿ ಮೂರು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಉತ್ತಮ ಸಂಶೋಧನಾ ಆಧಾರದೊಂದಿಗೆ ಚಿಕಿತ್ಸಾ ಅನುಭವ ಹಾಗೂ ರೋಗಿಯ ಮೌಲ್ಯಗಳ ಸಮನ್ವಯವೇ ಸಾಕ್ಷಿ ಆಧಾರಿತ ಔಷಧಿ ಎಂದಿದ್ದಾರೆ. ಒಂದು ಬಾಹ್ಯ ವರದಿ, ಎರಡನೆಯದು ವೈದ್ಯರ ಅನುಭವ, ಮೂರನೆಯದು ರೋಗಿಯ ಅಭಿಪ್ರಾಯ. ಇವು ಮೂರಕ್ಕೂ ಗುಣಮಟ್ಟದಲ್ಲಿ ಅಜಗಜ ಅಂತರಗಳ ಸಾಧ್ಯತೆಯಿದೆ. ಉತ್ತಮ ಸಂಶೋಧನೆ ಎಂದರೆ ಯಾವುದು, ನಿರ್ಧಾರ ಮಾಡುವವರು ಯಾರು, ಹೇಗೆ, ಯಾವ ರೀತಿಯಲ್ಲಿ, ಎಷ್ಟು ಹೊತ್ತಿನಲ್ಲಿ ಎಂಬೆಲ್ಲಾ ಅಂಶಗಳು ಇದನ್ನು ಮತ್ತಷ್ಟು ಕ್ಲಿಷ್ಟಗೊಳಿಸಿದೆ. ವೈದ್ಯರ ಚಿಕಿತ್ಸಾ ಅನುಭವ ಎನ್ನುವಾಗಲೂ ನಿರ್ಣಯಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಇನ್ನು ರೋಗಿಯ ಆದ್ಯತೆಗಳಿಗೆ ಸಂಬಂಧಿಸಿದಂತೆ ಅವರ ಸಾಮಾಜಿಕ, ಭೌಗೋಳಿಕ, ಆರ್ಥಿಕ, ಕೌಟುಂಬಿಕ ಪರಿಸ್ಥಿತಿಗಳಲ್ಲಿ ಅದೆಷ್ಟೋ ವೈಪರೀತ್ಯಗಳಿರುತ್ತವೆ. ಜೊತೆಯಲ್ಲಿ ಮಾನಸಿಕ ಸ್ಥಿತಿಯಲ್ಲಿ ಇರುವ ಏಳುಬೀಳು, ವೈಯಕ್ತಿಕ ನೋವು ನಲಿವು - ಹೀಗೆ ಎಲ್ಲವೂ ಅವುಗಳದೇ ಆದ ಪ್ರಭಾವ ಹಾಗೂ ಪರಿಣಾಮಗಳನ್ನು ಹೊಂದಿವೆ. ಈ ಎಲ್ಲಾ ಕಾರಣಗಳಿಂದ ಸಾಕ್ಷಿ ಆಧಾರಿತ ಔಷಧಿ ಹಾಗೂ ಚಿಕಿತ್ಸೆ ಎಂದಾಕ್ಷಣ ನಾವು ಅಪೇಕ್ಷಿಸಿದಂತೆ ಎಲ್ಲವೂ ನೆಟ್ಟಗಾಗುವುದಿಲ್ಲ.
ಭೂಮಿಯ ಆಕಾರಕ್ಕೆ ಸಂಬಂಧಿಸಿದಂತೆ ಆಯಾ ಕಾಲಗಳಲ್ಲಿ ಇದ್ದ ನಿರ್ಣಯವೆಲ್ಲವೂ ವೈಜ್ಞಾನಿಕವೇ. ಭೂಮಿ ಚಪ್ಪಟೆಯಾಗಿದೆ, ಇಲ್ಲ ಗುಂಡಗಿದೆ, ದೀರ್ಘವೃತ್ತಾಕಾರದಲ್ಲಿದೆ ಎಂದೆಲ್ಲ ಹೇಳಿದಾಗ ಪ್ರತಿಯೊಂದೂ ವೈಜ್ಞಾನಿಕ ಸಂಶೋಧನೆಗಳ ಫಲಿತಾಂಶವೇ. ಮುಂದಿನ ಸಂಶೋಧನೆಯ ಫಲಿತಾಂಶದ ತನಕ ನೂರಾರು ವರ್ಷಗಳ ಸುದೀರ್ಘ ಅವಧಿಯಲ್ಲಿ ಮೊದಲು ಹೇಳಿದ್ದೇ ವಿಜ್ಞಾನ! ಆದರೆ ನಿಜ ಹಾಗಲ್ಲವಲ್ಲ. ಇವುಗಳು ಎಲ್ಲವೂ ವಿಜ್ಞಾನವಾಗಿರಲು ಸಾಧ್ಯವಿಲ್ಲ ಎಂಬುದು ತಿಳಿದಿರುವ ವಿಚಾರ. ಹೀಗೆ ಉತ್ತಮ ಸಂಶೋಧನೆ ಎಂಬುದಕ್ಕೆ ಇತಿಮಿತಿಗಳಿವೆ. ಸಾಕ್ಷಿ ಆಧಾರಿತ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರಶ್ನಿಸುವುದು, ಕಲೆಹಾಕುವುದು, ಮೌಲ್ಯಮಾಪನ ಮಾಡುವುದು, ಅನ್ವಯಿಸುವುದು ಹಾಗೂ ನಿರ್ಣಯಿಸುವುದು ಎಂಬ ಐದು ಮುಖ್ಯ ವಿಚಾರಗಳ ಮೂಲಕ ಸಾಕ್ಷಿ ಆಧಾರಿತ ಔಷಧಿಯ ಮಾನದಂಡಗಳ ಹಿನ್ನೆಲೆಯನ್ನು ಮತ್ತಷ್ಟು ಪ್ರಬಲಗೊಳಿಸಲಾಗಿದೆ. ಹಾಗಿದ್ದೂ ನ್ಯೂನತೆಗಳು ಮುಂದುವರಿಯುತ್ತಲೇ ಇವೆ.
ರೈತರು ಕೃಷಿಯಲ್ಲಿ್ಲ ಪ್ರಕೃತಿದತ್ತವಾದ ಗೊಬ್ಬರ, ಗೋವು ಹಾಗೂ ಸಸ್ಯ ಆಧಾರಿತ ಕೀಟನಾಶಕಗಳನ್ನು ಬಳಸುತ್ತಿದ್ದರು. ಯಾವಾಗ ವಿದೇಶೀ ಆಳ್ವಿಕೆಗಳು ಪ್ರಾರಂಭವಾದವೋ ಆಗ ರಾಸಾಯನಿಕ ಗೊಬ್ಬರ, ರಾಸಾಯನಿಕ ಕೀಟನಾಶಕಗಳ ಪ್ರವೇಶವಾಯಿತು. ವೇಗವಾಗಿ ಕೆಲಸಮಾಡುತ್ತವೆ, ಹೆಚ್ಚು ಪರಿಣಾಮಕಾರಿ, ಅಗ್ಗದ ದರದಲ್ಲಿ ಸಿಗುತ್ತದೆ, ಹೇರಳವಾಗಿ ಲಭ್ಯವಿದೆ ಎಂಬೆಲ್ಲಾ ಕಾರಣ ನೀಡಿ ರೈತರ ಮನಸ್ಸು ಪರಿವರ್ತನೆ ಮಾಡಲಾಯಿತು. ಎಲ್ಲರೂ ಪರಿಸ್ಥಿತಿಗೆ ತಕ್ಕಂತೆ ಬದಲಾದರು. ಏಕೆಂದರೆ ಎಲ್ಲವೂ ಸಾಕ್ಷಿ ಆಧಾರಿತ! ಇದೀಗ ಜಗತ್ತು ಸಾವಯವ ಕೃಷಿಯತ್ತ ಮತ್ತೆ ವಾಲುತ್ತಿದೆ. ಕೃಷಿಕರು ಮತ್ತೆ ಮರಳಿ ಗೂಡಿಗೆ ಹೊಗುತ್ತಿದ್ದಾರೆ. ಹೈನುಗಾರಿಕೆ ವಿಷಯದಲ್ಲೂ ಆಗಿರುವುದು ಇದೇ. ದೇಶೀ ತಳಿಯ ಹಸುಗಳನ್ನು ಮಾತ್ರ ಹೊಂದಿದ್ದ ಭಾರತಕ್ಕೆ ಜರ್ಸಿ, ಹಾಲ್ಸ್ಟಿನ್ ತಳಿಯ ಹಸುಗಳು ಬಂದವು. ಎಲ್ಲದಕ್ಕೂ ಸಂಶೋಧನೆ ಆಧಾರಿತ ಪುರಾವೆಗಳನ್ನು ನೀಡಲಾಯಿತು. ಆಗಿದ್ದೇನು? ದೇಶದ ಜನರ ಆರೋಗ್ಯ ಹದಗೆಡುವಲ್ಲಿ ಇದು ತನ್ನದೇ ಪಾತ್ರವಹಿಸಿತು. ಈಗ ಮತ್ತೆ ದೇಶೀ ತಳಿಗೆ ಬೇಡಿಕೆ ಬಂದಿದೆ. ಆರೋಗ್ಯಕ್ಷೇತ್ರದಲ್ಲೂ ಇಂತಹುದೇ ಬದಲಾವಣೆಗಳು ಸಂಭವಿಸುತ್ತಿವೆ. ಆಯುರ್ವೆದ ಮರಳಿ ಬಹುಮನ್ನಣೆಯತ್ತ ಸಾಗುತ್ತಿದೆ. ಹಾಗಿದ್ದರೆ ಆಯುರ್ವೆದ ಯಾವೆಲ್ಲಾ ರೀತಿಯ ಹಿನ್ನೆಲೆಗಳಿಂದಾಗಿ ಇಷ್ಟೊಂದು ಪರಿಣಾಮಕಾರಿಯಾಗಿ ಉಳಿದಿದೆ ಎಂಬುದನ್ನು ನಾವೆಲ್ಲ್ಲ ತಿಳಿದಿರಲೇಬೇಕು.