ಅಂಕಣ

ದೆಹಲಿಯ ಬಾಗಿನವೂ, ಮಹಿಳೆಯರ ಕನಸೂ...

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು. ನಾಗರಹಾವಿನ ಬಾಯಿ ರಕ್ತಸಿಕ್ತವಾಗಿದ್ದನ್ನು ಕಂಡ ಮಹಿಳೆಯು, ತೊಟ್ಟಿಲಲ್ಲಿ ಮಲಗಿದ್ದ ತನ್ನ ಮಗುವನ್ನು ಈ ಹಾವು ಕಚ್ಚಿ ಕೊಂದಿತು ಎಂಬ ಎಣಿಕೆಯಲ್ಲಿ ಕೈಲಿದ್ದ ಕೊಡವನ್ನು ಎತ್ತಿಹಾಕಿ ಹಾವನ್ನು ಸಾಯಿಸಿ, ನಂತರ ಪರಾಂಬರಿಸಿದಾಗ, ಮುಂಗುಸಿಯ ಬಾಯಿಂದ ಮಗುವನ್ನು ರಕ್ಷಿಸಲು ಹಾವು ಸೆಣೆಸಿತೆಂಬುದು ಅರಿವಿಗೆ ಬರುತ್ತದೆ. ಆದರೇನು? ಕಾಲ ಮಿಂಚಿಹೋಗಿತ್ತು. ಇವತ್ತಿನ ಸೋಷಿಯಲ್ ಮೀಡಿಯಾ ಜಮಾನಾದಲ್ಲಿ, ವಿಷಯದ ಇನ್ನೊಂದು ಮುಖವನ್ನು ನೋಡಲಿಕ್ಕೂ ಆಸ್ಪದ ಇರದಂತೆ ಧಾವಂತ ಮಾಡುವಾಗ, ಇಂಥದ್ದು ಆಗುತ್ತಿರುತ್ತದೆ. ಕೆಲವೊಂದು ವಿಡಿಯೋ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್​ನಿಂದ ಅಂಥ ಹಾನಿಯೇನೂ ಆಗದು. ಆದರೆ ಕೆಲವೊಂದರಿಂದ ಸಮಾಜ ಹಾಗೂ ವ್ಯಕ್ತಿಯ ಮೇಲೆ ದುಷ್ಪರಿಣಾಮ ಆಗಿಬಿಟ್ಟಿರುತ್ತದೆ.

ದೆಹಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದ ದಿನದಂದು ಒಂದು ವಿಡಿಯೋ ಭರ್ಜರಿ ಓಡಾಡಿತು. ಮಹಿಳೆಯೊಬ್ಬಳು ನದಿತಟದಲ್ಲಿ ಕತ್ತಿ ಝುಳಪಿಸುವ ಆ ವಿಡಿಯೋ ರೇಖಾ ಗುಪ್ತಾ ಅವರ ಹಳೆಯ ವಿಡಿಯೋ ಎಂದು ಪೋಸ್ಟ್ ಹಂಚಿಕೊಳ್ಳಲಾಗುತ್ತಿತ್ತು. ನೋಡಿದವರು ಭೇಷ್ ಭೇಷ್ ಎಂದರು. ಆದರೆ ನಂತರ ಫ್ಯಾಕ್ಟ್ ಚೆಕ್​ನಲ್ಲಿ ವಾಸ್ತವ ಗೊತ್ತಾಯಿತು. ಆ ವಿಡಿಯೋ ಮರಾಠಿ ನಟಿ ಪಾಯಲ್ ಜಾಧವ್ ಅವರದು ಎಂದು. ಈ ವಿಡಿಯೋದಿಂದ ಹಾನಿಯೇನು ಆಗಲಿಲ್ಲ ಎಂಬುದು ಇದ್ದುದರಲ್ಲಿ ಸಮಾಧಾನಕರ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿಯ ಎಲ್ಲ ಕ್ಷೇತ್ರಗಳನ್ನು ಗೆದ್ದರೂ, ವಿಧಾನಸಭೆಯಲ್ಲಿ ಬೇರೆ ಪಕ್ಷದ ಸರ್ಕಾರ ಇರುವುದು ಮುಜುಗರದ ಸಂಗತಿಯಾಗಿತ್ತು. ಅಂತೂ, 2025ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ 27 ವರ್ಷಗಳ ಬರವನ್ನು ನೀಗಿಸಿಕೊಂಡಿತು.

ಕೇಜ್ರಿವಾಲ್ ಪಕ್ಷಕ್ಕೆ ಯಾಕೆ ಸೋಲಾಯಿತು? ಬಿಜೆಪಿಗೆ ಯಾಕೆ ಗೆಲುವಾಯಿತು? ಎಂಬೆಲ್ಲ ಕುರಿತು ಈಗಾಗಲೇ ಸಾಕಷ್ಟು ವಿಶ್ಲೇಷಣೆಗಳು ನಡೆದಿವೆ. ನಂತರದಲ್ಲಿ ಕುತೂಹಲವಿದ್ದುದು ಸಿಎಂ ಯಾರಾಗುತ್ತಾರೆ ಎಂದು. ಕೇಜ್ರಿವಾಲರನ್ನು ಮಣಿಸಿದ ಪರ್ವೆಶ್ ವರ್ವ, ಹಿರಿಯ ನಾಯಕ ವಿಜೇಂದ್ರ ಗುಪ್ತಾ ಸೇರಿ ಅನೇಕ ಹೆಸರುಗಳು ಓಡಾಡುತ್ತಿದ್ದವು. ಪ್ರಮುಖ ಹುದ್ದೆಗಳ ಆಯ್ಕೆಯಲ್ಲಿ ಅಚ್ಚರಿಯ ನಿರ್ಧಾರ ಕೈಗೊಳ್ಳುವಲ್ಲಿ ನಿಪುಣರಾದ ಬಿಜೆಪಿ ಉನ್ನತ ನಾಯಕರು ದೆಹಲಿಯಲ್ಲೂ ಆ ಸಂಪ್ರದಾಯ ಮುಂದುವರಿಸಿ ರೇಖಾ ಗುಪ್ತಾ ಅವರನ್ನು ಸಿಎಂ ಪಟ್ಟಕ್ಕೆ ತಂದರು. ರೇಖಾ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದವರು. ಶಾಲಿಮಾರ್ ಬೇಗ್ ಕ್ಷೇತ್ರದಲ್ಲಿ 2015 ಮತ್ತು 2020ರಲ್ಲಿ ಸೋಲಿನ ಕಹಿಯಂಡವರು. ಆದರೂ ಯಾಕೆ ಅವರಿಗೆ ಸಿಎಂ ಹುದ್ದೆ ಬಾಗಿನ ನೀಡಲಾಯಿತು? ದೇಶದಲ್ಲಿ ಸದ್ಯ ಮಹಿಳಾ ಸಿಎಂ ಅಂತ ಇರುವುದು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮಾತ್ರ. ಇದಲ್ಲದೆ, ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದು ಸಹ ರೇಖಾ ಗುಪ್ತಾ ಆಯ್ಕೆಗೆ ಕಾರಣ.

ಹಾಗೇ, ಪಕ್ಷದ ಯಾವುದೇ ಬಣದಲ್ಲೂ ಗುರುತಿಸಿಕೊಳ್ಳದೆ ತಟಸ್ಥ ನಿಲುವು ಕಾಯ್ದುಕೊಂಡಿದ್ದು ಸಹ ಅವರಿಗೆ ನೆರವಾಗಿದೆ. ಇದಲ್ಲದೆ, ಪಕ್ಷಕ್ಕೆ ಅವರ ಯೋಗದಾನ ಕಡಿಮೆಯೇನಲ್ಲ. 1974ರಲ್ಲಿ ಜನಿಸಿದ ಅವರು, 1992ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿಪಿವಿ) ಮೂಲಕ ಸಾರ್ವಜನಿಕ ಬದುಕನ್ನು ಆರಂಭಿಸಿದರು. 1996ರಲ್ಲಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದರು. ಆ ಸಮಯದಲ್ಲಿ ಅವರು ದೆಹಲಿ ಯುವಮೋರ್ಚಾದ ಉಸ್ತುವಾರಿಯಾಗಿದ್ದ ಹಾಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಈಗ ಕೇಂದ್ರ ಶಿಕ್ಷಣ ಸಚಿವರಾಗಿರುವ ಧಮೇಂದ್ರ ಪ್ರಧಾನ್ ಮುಂತಾದವರ ಜೊತೆ ನಿಕಟವಾಗಿ ಕಾರ್ಯನಿರ್ವಹಿಸಿದ್ದರಂತೆ. ಮಹಿಳಾ ಸಬಲೀಕರಣ, ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸುವಂತೆ ಪಾಲಕರ ಮನವೊಲಿಕೆ, ಪ್ರಥಮ ಬಾರಿ ಆಯ್ಕೆಯಾದ ಮಹಿಳಾ ಕೌನ್ಸಿಲರ್​ಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಇತ್ಯಾದಿ ಅವರ ಉಪಕ್ರಮಗಳು ಆಗಲೇ ಪಕ್ಷದ ವರಿಷ್ಠರ ಗಮನಸೆಳೆದಿತ್ತು.

2014ರಲ್ಲಿ ದೆಹಲಿ ಸರ್ಕಾರಿ ಬಸ್​ಗಳಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಸಿದ್ದು, ಅವರ ಹೊಸ ರೀತಿಯ ಆಲೋಚನೆಗೆ ಸಾಕ್ಷಿ. 2007ರಲ್ಲಿ ಮುನ್ಸಿಪಲ್ ಕೌನ್ಸಿಲರ್ ಆಗುವ ಮೂಲಕ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟ ರೇಖಾ, ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಕಾರ್ಯದರ್ಶಿಯೂ ಆಗಿದ್ದರು. 2012ರಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ನೇಮಿಸಿದ್ದು ಪಕ್ಷದಲ್ಲಿ ಹೆಚ್ಚಿದ ಅವರ ಪ್ರಭಾವಕ್ಕೆ ನಿದರ್ಶನ. 2020ರಲ್ಲಿ ಅವರು ಸೋತರೂ ಬಿಜೆಪಿಯ ತಳಹಂತದ ಕಾರ್ಯಕರ್ತರ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದು ಸಹ ಈಗ ಪ್ಲಸ್ ಪಾಯಿಂಟ್ ಆಯಿತು. ಒಟ್ಟಿನಲ್ಲಿ ಹೇಳುವುದಾದರೆ, ಪಕ್ಷನಿಷ್ಠೆ, ಹೊಸ ರೀತಿಯ ಆಲೋಚನೆ ಮುಂತಾದ ಅಂಶಗಳು ಕೈಹಿಡಿಯುತ್ತವೆ ಎಂಬುದಕ್ಕೆ ಈ ಪ್ರಸಂಗ ನಿದರ್ಶನ.

ದೆಹಲಿ ಶಾಸನಸಭೆ ರಚನೆಯಾದದ್ದು 1952ರಲ್ಲಿ. ರಾಜ್ಯಗಳ ಕಾಯ್ದೆ, 1951ರ ಭಾಗ-ಸಿ ಪ್ರಕಾರ ಇದು ರಚಿತವಾಗಿತ್ತು. ಆಗ ಅಸೆಂಬ್ಲಿ 48 ಮಂದಿ ಸದಸ್ಯರನ್ನು ಹೊಂದಿತ್ತು. ನಂತರ, ರಾಜ್ಯ ಪುನರ್ವಿಂಗಡಣಾ ಆಯೋಗದ ಶಿಫಾರಸಿನ ಪ್ರಕಾರ, ದೆಹಲಿ ‘ಸಿ’ ಭಾಗದಲ್ಲಿ ಉಳಿಯಲಿಲ್ಲ. ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿತು. ನಂತರ ಮುನ್ಸಿಪಲ್ ಕಾಪೋರೇಷನ್ ಅಸ್ತಿತ್ವಕ್ಕೆ ಬಂತು. 1966ರಲ್ಲಿ ದೆಹಲಿ ಮೆಟ್ರೋಪಾಲಿಟನ್ ಕೌನ್ಸಿಲ್ ರಚಿಸಲಾಯಿತು. ಲೆಫ್ಟಿನೆಂಟ್ ಗವರ್ನರ್ ಇದರ ಮುಖ್ಯಸ್ಥರಾಗಿದ್ದರು. ಆದರೆ ಈ ಮಂಡಳಿಗೆ ಶಾಸನಾತ್ಮಕ ಅಧಿಕಾರವಿರಲಿಲ್ಲ. ಸಂವಿಧಾನದ 69ನೇ ತಿದ್ದುಪಡಿಯನ್ವಯ, ದೆಹಲಿ ಕೇಂದ್ರಾಡಳಿತ ಪ್ರದೇಶವನ್ನು ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ದೆಹಲಿ ಎಂದು ಹೆಸರಿಸಲಾಯಿತು. ಅಂದರೆ ಶಾಸನಸಭೆ ಅಸ್ತಿತ್ವಕ್ಕೆ ಇದು ನಾಂದಿಹಾಡಿತು. 1993ರಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿತು. ಬಳಿಕ 1998, 2003 ಹಾಗೂ 2008ರಲ್ಲಿ ಕಾಂಗ್ರೆಸ್ ಹ್ಯಾಟ್ರಿಕ್ ಸಾಧನೆ ಮಾಡಿತು.

ಶೀಲಾ ದೀಕ್ಷಿತ್ ಅವರು ಸತತ 15 ವರ್ಷಗಳ ಕಾಲ ಸಿಎಂ ಆಗಿ ದಾಖಲೆ ನಿರ್ವಿುಸಿದರು. ನಂತರ ಶುರುವಾಯಿತು ನೋಡಿ ಆಮ್ ಆದ್ಮಿ ಪಕ್ಷ ಎಂಬ ‘ರಾಜಕೀಯ ಶಿಶು’ವಿನ ಸುನಾಮಿ. 2015ರಲ್ಲಿ ನಡೆದ ಚುನಾವಣೆಯಲ್ಲಿ 70ರ ಪೈಕಿ 67 ಸೀಟುಗಳನ್ನು ತೆಕ್ಕೆಗೆ ಹಾಕಿಕೊಂಡ ಆಪ್ ಬಿಜೆಪಿಗೆ ಬಿಟ್ಟುಕೊಟ್ಟಿದ್ದು 3 ಸ್ಥಾನ ಮಾತ್ರ. ಕಾಂಗ್ರೆಸ್ ಒಂದು ಸೀಟನ್ನೂ ಗೆಲ್ಲಲಾಗಲಿಲ್ಲ. 2020ರಲ್ಲಿ 70ರ ಪೈಕಿ 62 ಸೀಟುಗಳು ಆಪ್ ಪಾಲಾದರೆ, ಉಳಿದ ಎಂಟು ಕ್ಷೇತ್ರಗಳು ಮಾತ್ರ ಬಿಜೆಪಿಗೆ ದಕ್ಕಿದವು. ಕಾಂಗ್ರ್ರೆಸ್ ಯಥಾಪ್ರಕಾರ ಶೂನ್ಯ. ಅರವಿಂದ ಕೇಜ್ರಿವಾಲರ ಪಕ್ಷ ಇದೇ ಹುಮ್ಮಸ್ಸಿನಲ್ಲಿ ಮುಂದುವರಿದರೆ ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ಪಕ್ಷಗಳು ಏಳಿಗೆ ಕಾಣಲು ವರ್ಷಗಳೇ ಬೇಕಾದೀತು ಎಂಬ ಚರ್ಚೆ ಶುರುವಾಯಿತು. ಪಂಜಾಬಿನಲ್ಲೂ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಿ, ದೇಶದ ಇತರೆಡೆಯೂ ವಿಸ್ತರಣೆಗೆ ತಹತಹಿಸುತ್ತಿತ್ತು. ತಮಿಳುನಾಡು, ಪಶ್ಚಿಮ ಬಂಗಾಳ ಇತ್ಯಾದಿ ರಾಜ್ಯಗಳಂತೆ ದೆಹಲಿಯೂ ಪ್ರಾದೇಶಿಕ ಪಕ್ಷದ ವಸಾಹತಾಗಿಬಿಟ್ಟೀತು ಎಂಬ ಕಳವಳದ ಗೆರೆಯೂ ನಾಯಕರ ಮುಖದಲ್ಲಿ ಕಾಣಿಸಿದ್ದು ಸುಳ್ಳಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರಿಗೆ ದೆಹಲಿ ಗದ್ದುಗೆ ಹಿಡಿಯುವುದು ಸವಾಲಾಗಿ ಪರಿಣಮಿಸಿತ್ತು.

ದೆಹಲಿ ಸಿಎಂ ಆಗಿ ರೇಖಾ ಗುಪ್ತಾ ಪ್ರಮಾಣ ಸ್ವೀಕರಿಸುತ್ತಿದ್ದಂತೆ, ರಾಜಕೀಯ ಆಸಕ್ತಿಯುಳ್ಳ ಮಹಿಳೆಯರು, ಯುವತಿಯರಲ್ಲೂ ಒಂದು ರೀತಿಯ ಸಂಭ್ರಮ, ಆಕಾಂಕ್ಷೆ ಉದಯವಾಗಿದ್ದು ಗಮನಾರ್ಹ. ಅದೇ ಹೊತ್ತಿಗೆ, ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹಾಗೂ ಮಹಿಳಾ ಮೀಸಲಾತಿ ವಿಚಾರವೂ ಚರ್ಚೆಯ ಮುನ್ನೆಲೆಗೆ ಬಂದಿದೆ. 1993ರಲ್ಲಿ ಮಾಡಲಾದ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಅನುಸಾರ ಪಂಚಾಯಿತಿ ಮತ್ತು ಮುನ್ಸಿಪಾಲಿಟಿಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಒದಗಿಸಲಾಗಿದೆ. ಕೆಲ ರಾಜ್ಯಗಳಲ್ಲಿ ಈ ಪ್ರಮಾಣ ಶೇ.50ಕ್ಕೂ ತಲುಪಿದೆ. ಜನಸಂಖ್ಯೆ ಪ್ರಮಾಣಕ್ಕೆ ಅನುಸಾರವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮೀಸಲಾತಿಯನ್ನು ಸಂವಿಧಾನವೇ ಒದಗಿಸಿದೆ. ಆದರೆ ಮಹಿಳೆಯರಿಗೆ ಮೀಸಲಾತಿ ಒದಗಿಸಿಲ್ಲ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ಕೆಲ ಸದಸ್ಯರು ಆಗ್ರಹಿಸಿದ್ದರೆ, ಕೆಲವರು ವಿರೋಧಿಸಿದ್ದರು. ಮಹಿಳೆಯರಿಗೆ ಮೀಸಲಾತಿ ಒದಗಿಸಿದರೆ ಜನರಲ್ ಸೀಟುಗಳನ್ನು ನೀಡುವಾಗ ಅವರನ್ನು ನಿರ್ಲಕ್ಷಿಸಬಹುದು ಎಂದು ರಚನಾ ಸಮಿತಿ ಸದಸ್ಯರಾಗಿದ್ದ ರೇಣುಕಾ ರಾಯ್ ಅವರು ಸಂದೇಹಿಸಿದ್ದರು.

ಪ್ರಾಂತೀಯ ಸರ್ಕಾರಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆಯಾಗುತ್ತಿರುವ ಬಗ್ಗೆ 1949ರ ಹೊತ್ತಿಗೇ ಕಳವಳ ಶುರುವಾಗಿತ್ತು. ನಿರ್ಗಮಿತ ಮಹಿಳಾ ಸದಸ್ಯರ ಸ್ಥಾನಕ್ಕೆ ಪುರುಷರನ್ನು ಆರಿಸುವ ಬದಲು ಮಹಿಳೆಯರನ್ನೇ ಆಯ್ಕೆಮಾಡಬೇಕು ಎಂಬ ದನಿ ಕೇಳಿಬಂತು. ವ್ಯವಸ್ಥೆಯು ಸ್ವಯಂಚಾಲಿತ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ ಎಂಬ ವಿಶ್ವಾಸದ ಆಧಾರದ ಮೇಲೆ ‘ಅನೌಪಚಾರಿಕ ಒಪ್ಪಂದ’ದ ಅನ್ವಯ ಮಹಿಳಾ ಮೀಸಲಾತಿ ಬೇಡಿಕೆಯನ್ನು ಕೈಬಿಡಲಾಗಿತ್ತೆಂದು ಪಟ್ಟಾಭಿ ಸೀತಾರಾಮಯ್ಯ ಅವರು 1949ರ ನವೆಂಬರ್​ನಲ್ಲಿ ಅಸೆಂಬ್ಲಿ ಗಮನಕ್ಕೆ ತಂದಿದ್ದರು. ಲೋಕಸಭೆಯ 543 ಸದಸ್ಯರಲ್ಲಿ ಮಹಿಳೆಯರ ಸಂಖ್ಯೆ ಕೇವಲ ಶೇ. 6.5 ಇದೆ ಎಂದು 1996ರಲ್ಲಿ ಬಿಜೆಪಿಯ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ ಉಲ್ಲೇಖಿಸಿದ್ದರು. ಸದ್ಯ ಮಹಿಳಾ ಎಂಪಿಗಳ ಪ್ರಮಾಣ ಶೇ. 14 ಇದೆ. ಜಾಗತಿಕ ಸರಾಸರಿ ಶೇ. 26.5 ಇದೆ.

2015ರಲ್ಲಿ ಪ್ರಕಟವಾದ ‘ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ’ ವರದಿಯು, ರಾಜ್ಯ ಶಾಸನಸಭೆಗಳು ಹಾಗೂ ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ತುಂಬ ಕಡಿಮೆ ಇದೆ. ರಾಜಕೀಯ ಪಕ್ಷಗಳಲ್ಲಿ ನೀತಿನಿರ್ಧಾರದಲ್ಲಿಯೂ ಮಹಿಳೆಯರ ಪಾತ್ರ ವಿರಳ ಎಂದು ಹೇಳಿತ್ತು. ಲೋಕಸಭೆ ಮತ್ತು ರಾಜ್ಯ ಶಾಸನಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಬೇಕೆಂಬ ನಿಟ್ಟಿನಲ್ಲಿ ಏನೂ ಆಗಿಯೇ ಇಲ್ಲ ಎಂದಲ್ಲ. 1996, 1998, 1999 ಮತ್ತು 2008ರಲ್ಲಿ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿತ್ತು. ಆದರೆ ಮೊದಲ ಮೂರು ಸಲ ಮಂಡನೆಯಾದಾಗ ಲೋಕಸಭೆ ವಿಸರ್ಜನೆಯಾಗಿದ್ದರಿಂದ ಮಸೂದೆ ಮುಂದಕ್ಕೆ ಹೋಗಲಿಲ್ಲ. 2008ರಲ್ಲಿ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆಯಿತಾದರೂ ಲೋಕಸಭೆ ವಿಸರ್ಜನೆಯಾಗಿದ್ದರಿಂದ ಅಲ್ಲಿಯೂ ರ್ತಾಕ ಅಂತ್ಯ ದೊರೆಯಲಿಲ್ಲ.

ನಂತರ, ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆ (128ನೇ ತಿದ್ದುಪಡಿ) 2023ರ ಸೆಪ್ಟೆಂಬರ್ 19ರಂದು ಲೋಕಸಭೆಯಲ್ಲಿ ಮಂಡನೆಯಾಯಿತು. ಈ ಮಸೂದೆಯ ಪ್ರಕಾರ, ಲೋಕಸಭೆ ಮತ್ತು ರಾಜ್ಯ ಶಾಸನಸಭೆಯಲ್ಲಿ ಮಹಿಳೆಯರಿಗೆ ಶೇ.33 ಸೀಟುಗಳನ್ನು ಮೀಸಲಿಡಲಾಗುತ್ತದೆ. ಆದರೆ ಈ ಸೂತ್ರ ಜನಗಣತಿ ವರದಿ ಆಧಾರದ ಮೇಲೆ ಕ್ಷೇತ್ರಗಳ ಪುನರ್ವಿಂಗಡಣೆ ತರುವಾಯ ಜಾರಿಗೆ ಬರುತ್ತದೆ. ಕರೊನಾ ಕಾರಣಕ್ಕೆ 2021ರಲ್ಲಿ ದೇಶದಲ್ಲಿ ಜನಗಣತಿ ನಡೆದಿಲ್ಲ. ಯಾವಾಗ ನಡೆಯುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ. 2029ರ ಲೋಕಸಭಾ ಚುನಾವಣೆಯ ಹೊತ್ತಿಗೆ ಮಹಿಳಾ ಮೀಸಲಾತಿ ಜಾರಿಗೆ ಬರಬಹುದೆಂಬ ಅಂದಾಜಿದೆ. ಸ್ವೀಡನ್, ನಾರ್ವೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಯುಕೆ ಹೌಸ್ ಆಫ್ ಕಾಮನ್ಸ್, ಕೆನಡಾ ಮುಂತಾದ ದೇಶಗಳಲ್ಲಿ ಸಂಸತ್​ನಲ್ಲಿ ಮಹಿಳಾ ಪ್ರಾತಿನಿಧ್ಯ ಶೇ.31ರಿಂದ ಶೇ. 46ರವರೆಗೆ ಇದೆ. ಆದರೆ ಇಲ್ಲೆಲ್ಲ ಪಾರ್ಲಿಮೆಂಟಿನಲ್ಲಿ ಮಹಿಳಾ ಮೀಸಲಾತಿ ಇಲ್ಲ.

ಕೊನೇ ಮಾತು: ದೆಹಲಿ ರಾಜ್ಯವಾಗಿದ್ದರು ಸಹ, ಪೊಲೀಸ್ ಇತ್ಯಾದಿ ಕೆಲ ಅಧಿಕಾರಗಳು ಕೇಂದ್ರ ಸರ್ಕಾರದ ಕೈಲೇ ಇದೆ. ಹೀಗಾಗಿ ಕೇಂದ್ರ-ರಾಜ್ಯದಲ್ಲಿ ಪ್ರತ್ಯೇಕ ಪಕ್ಷಗಳ ಸರ್ಕಾರಗಳಿದ್ದಾಗ ಜಟಾಪಟಿಯಾಗುತ್ತದೆ. ಶೀಲಾ ದೀಕ್ಷಿತ್ ಸಿಎಂ ಆಗಿದ್ದಾಗ ಹೇಗೋ ಚಾಕಚಕ್ಯತೆಯಿಂದ ನಿಭಾಯಿಸಿದರು. ಅಲ್ಲದೆ ಆಗ ಕೆಲ ವರ್ಷ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದುದರಿಂದ, ಅನುಕೂಲವಾಯಿತು. ಆದರೆ ಆಪ್ ಅಧಿಕಾರಕ್ಕೆ ಬಂದ ತರುವಾಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ ನಿರಂತರವಾಗಿ ಘರ್ಷಣೆ ನಡೆಯುತ್ತಿತ್ತು. ಈಗ ಡಬಲ್ ಇಂಜಿನ್ ಸರ್ಕಾರ ಬಂದಿದೆ. ಆದರೆ, ಯಮುನಾ ನದಿ ಶುದ್ಧೀಕರಣ, ಮಹಿಳೆಯರಿಗೆ ಮಾಸಿಕ 2,500 ರೂ. ಹಾಗೂ ಇತರ ಉಚಿತ ಕೊಡುಗೆ ಭರವಸೆ ಈಡೇರಿಕೆ ಸೇರಿ ಹಲವು ದೊಡ್ಡ ಸವಾಲುಗಳಿವೆ. ರೇಖಾ ಗುಪ್ತಾ ಮತ್ತು ಟೀಂ ಇವನ್ನೆಲ್ಲ ಹೇಗೆ ನಿಭಾಯಿಸುತ್ತದೆ ಎಂಬುದು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಭವಿಷ್ಯವನ್ನು ನಿರ್ಧರಿಸಲಿದೆ. ಹಾಗೇ ಸಿಎಂ ಆಗಿ ರೇಖಾ ಗುಪ್ತಾ ಕಾರ್ಯಶೈಲಿ ರಾಜಕೀಯಾಕಾಂಕ್ಷೆಯ ಲಕ್ಷಾಂತರ ಮಹಿಳೆಯರ ಮೇಲೂ ಪರಿಣಾಮ ಬೀರಲಿದೆ.