ಅಂಕಣ

ಇದು ಎಂಥಾ ಲೋಕವಯ್ಯಾ...!: ‘ಆತ್ಮ’ವಿರುವ ಬೈಕ್​ಗೆ ನಿತ್ಯ ಪೂಜೆ

ಯುಗಾದಿ, ದೀಪಾವಳಿ ಮತ್ತಿತರ ಕೆಲವು ಹಬ್ಬಗಳಂದು ವಾಹನಗಳಿಗೆ ಪೂಜೆ ಮಾಡುವ ಸಂಪ್ರದಾಯ ನಮ್ಮಲ್ಲಿ ಮೊದಲಿನಿಂದಲೂ ಇದೆ. ಆದರೆ ಬೈಕ್ ಒಂದನ್ನು ದೇವರಂತೆ ಇಡೀ ಗ್ರಾಮಸ್ಥರು ಪೂಜಿಸುವುದನ್ನು ನೋಡಬೇಕೆಂದರೆ ರಾಜಸ್ಥಾನದ ಜೋಧಪುರ ಜಿಲ್ಲೆಯ ಪಾಳಿ ತಾಲ್ಲೂಕಿನ ಚೋಟಿಲ ಎಂಬ ಗ್ರಾಮಕ್ಕೆ ಹೋಗಬೇಕು. ಇಲ್ಲಿ ‘ರಾಯಲ್ ಎನ್​ಫೀಲ್ಡ್’ ಬೈಕ್​ಗೆ ದಿನವೂ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಅದಕ್ಕಾಗಿಯೇ ಗುಡಿಯನ್ನೂ ನಿರ್ವಿುಸಲಾಗಿದೆ. ಯಾವುದೇ ಶುಭ ಕಾರ್ಯಕ್ಕೆ ಹೋಗಬೇಕು ಎಂದರೂ ಮೊದಲ ಪೂಜೆ ಈ ಬೈಕ್​ಗೆ! ಈ ‘ದೇವರಿಗೆ’ ಕಾಣಿಕೆಯ ರೂಪದಲ್ಲಿ ಹೂವು, ಹಣ್ಣು, ದುಡ್ಡು ಮಾತ್ರವಲ್ಲದೇ ಮದ್ಯವನ್ನೂ ನೀಡಲಾಗುತ್ತದೆ.

ಇದು ಗ್ರಾಮದ ಮುಖಂಡನ ಮಗ ಓಂ ಸಿಂಗ್​ನ ಬೈಕ್ ಆಗಿತ್ತು. 1991ರಲ್ಲಿ ಇದೇ ಬೈಕ್ ಅಪಘಾತದಲ್ಲಿ ಓಂ ಸಿಂಗ್ ಮೃತನಾದ. ನಂತರ ಬೈಕ್ ಪೊಲೀಸರ ವಶದಲ್ಲಿತ್ತು. ಆದರೆ ಅಚ್ಚರಿಯೆಂಬಂತೆ ಅದು ಮಾರನೆ ದಿನ ಅಪಘಾತವಾದ ಜಾಗದಲ್ಲಿಯೇ ಬಂದು ನಿಂತಿತ್ತಂತೆ! ಇದು ಕಿಡಿಗೇಡಿಗಳ ಕೃತ್ಯ ಎಂದುಕೊಂಡಿದ್ದ ಪೊಲೀಸರು ಪುನಃ ಬೈಕನ್ನು ಠಾಣೆಗೆ ಒಯ್ದು ಸರಪಳಿಯಿಂದ ಬಿಗಿದರು. ಆದರೆ ಬೈಕ್ ಮಾತ್ರ ಮತ್ತೆ ಇದೇ ಜಾಗದಲ್ಲಿ ಪ್ರತ್ಯಕ್ಷ! ಹೀಗೆ ಆರು ತಿಂಗಳು ನಡೆದು, ಪೊಲೀಸರಿಗೂ ರಹಸ್ಯ ಭೇದಿಸಲಾಗದೆ ಕೈಚೆಲ್ಲಿ ಕೂತರಂತೆ. ಆದ್ದರಿಂದ ಈ ಬೈಕ್​ನಲ್ಲಿ ಓಂ ಸಿಂಗ್​ನ ಆತ್ಮವಿದೆ ಎಂದು ಗ್ರಾಮಸ್ಥರು ಅಲ್ಲಿ ಗುಡಿ ನಿರ್ವಿುಸಿ, ಪೂಜೆ ಸಲ್ಲಿಸುತ್ತಿದ್ದಾರೆ.

| ಸಚೇತನಾ