‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’, ‘ತಾಯಿಯೇ ಮೊದಲ ಗುರು’... ಹೀಗೆ ಮಹಿಳೆಯರಿಗೆ ಶಿಕ್ಷಣ ನೀಡುವುದರ ಮಹತ್ವ ಸಾರುವ ಹಲವಾರು ವಾಕ್ಯಗಳಿವೆ. ಆದರೆ ವಾಸ್ತವದ ಚಿತ್ರಣ ಮಾತ್ರ ಭಿನ್ನವಾಗಿದೆ. ಶಿಕ್ಷಣದ ಆಸೆ ಹೊತ್ತ ಅದೆಷ್ಟೋ ಹೆಣ್ಣುಮಕ್ಕಳಿಗೆ ಅಕ್ಷರ ಇನ್ನೂ ಗಗನಕುಸುಮವೇ ಆಗಿದೆ. ಅಂಥವರ ಬದುಕಿಗೆ ಆಶಾಕಿರಣವಾಗಿ ಬಂದಿದೆ ಈ ಯುವ ಸಮೂಹ. ಇದು ಇತರ ಊರಿನ ಯುವಕರಿಗೂ ಮಾದರಿ.
ಭಾರತ ಅಭಿವೃದ್ಧಿ ಹೊಂದಬೇಕು, ಹಳ್ಳಿಗರ ಉದ್ಧಾರವಾಗಬೇಕು, ಹೀಗಾಗಬೇಕಾದರೆ ಮಹಿಳೆಯರಿಗೂ ಶಿಕ್ಷಣ ದಕ್ಕಬೇಕು... ಇಂಥ ಮಾತುಗಳನ್ನು ದಿನನಿತ್ಯ ಕೇಳುತ್ತಲೇ ಇರುತ್ತೇವೆ. ಇವುಗಳನ್ನು ಕಾರ್ಯರೂಪಕ್ಕೆ ಬಳಸುವ ಮಾತು ಬಂದಾಗ ಮಾತ್ರ ಎಲ್ಲರ ಚಿತ್ತ ಹರಿಯುವುದು ಸರ್ಕಾರದತ್ತ.
ಆದರೆ, ಎಲ್ಲ ಕಾರ್ಯಗಳನ್ನೂ ಸರ್ಕಾರವೇ ಮಾಡಲಿ ಎನ್ನುವುದು ಎಷ್ಟರಮಟ್ಟಿಗೆ ಸರಿ? ಈ ದೇಶದ ಅಭಿವೃದ್ಧಿಗೆ ಪ್ರಜೆಗಳಾದ ನಮ್ಮ ಕರ್ತವ್ಯವೂ ಇರಬೇಕಲ್ಲವೆ, ಕೊನೆಯ ಪಕ್ಷ ಸರ್ಕಾರದಿಂದ ಇರುವ ವಿವಿಧ ಯೋಜನೆಗಳ ಕುರಿತಾಗಿಯಾದರೂ ಹಳ್ಳಿಯ ಜನರಿಗೆ ಅರಿವು ಮೂಡಿಸಬೇಕಲ್ಲವೆ ಎನ್ನುತ್ತಲೇ ಹುಬ್ಬಳ್ಳಿಯ ಯುವ ಗುಂಪೊಂದು ಮಹಿಳೆಯರ ಶಿಕ್ಷಣಕ್ಕಾಗಿ ಸನ್ನದ್ಧವಾಗಿ ನಿಂತಿದೆ.
ಇದೇ ‘ವಿಕಸನ ತಂಡ’. ಕೆ.ಎಲ್. ಇ. ತಾಂತ್ರಿಕ ಮಹಾವಿದ್ಯಾಲಯದ, ಸ್ಕೂಲ್ ಆಫ್ ಮ್ಯಾನೇಜ್ವೆುಂಟ್ ಸ್ಟಡೀಸ್ ಆಂಡ್ ರೀಸರ್ಚ್ ಸಂಸ್ಥೆಯ ಐವರು ವಿದ್ಯಾರ್ಥಿಗಳ ತಂಡ ಇದಾಗಿದ್ದು, ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ. ವಿದ್ಯಾರ್ಥಿಗಳ ಶಿಕ್ಷಣದ ಭಾಗವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ.
ಯುವಕರು ಮಾಡುತ್ತಿರುವುದೇನು?: ಅಕ್ಷಯ ಪ್ರಭು, ಆನಂದ ಮಗದುಮ್, ರಶ್ಮಿ ಸಜ್ಜನರ, ರವಿಕಿರಣ ಮಡಿಗೇರ್ ಹಾಗೂ ಸುಪ್ರಿಯಾ ಎಸ್. ‘ವಿಕಸನ ತಂಡ’ದ ರೂವಾರಿಗಳು. ತಮ್ಮ ಯೋಜನೆಯನ್ನು ಕಾರ್ಯರೂಪಗೊಳಿಸಲು ಅವರು ನಾಲ್ಕು ಹಂತಗಳಾಗಿ ವಿಂಗಡಿಸಿಕೊಂಡಿದ್ದಾರೆ.
ಮೊದಲ ಹಂತದಲ್ಲಿ ಹಳ್ಳಿಗಳ ಪ್ರತಿ ಮನೆಗೂ ಭೇಟಿ ನೀಡುವ ತಂಡ, ಅಲ್ಲಿರುವ ಮಹಿಳೆಯರು ಎಲ್ಲಿಯವರೆಗೆ ಓದಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತದೆ. ಅವರು ಶಿಕ್ಷಣದಿಂದ ವಂಚಿತರಾಗಿರುವುದು ತಿಳಿದರೆ, ಅವರಿಗೆ ಕಲಿಕಾ ಆಸಕ್ತಿ ಇದೆಯೇ ಎಂಬ ಬಗ್ಗೆ ಪ್ರಶ್ನಿಸುತ್ತಾರೆ. ಒಂದು ವೇಳೆ ಆಸಕ್ತಿ ಇದ್ದರೂ, ಕಲಿಯಲು ಏಕೆ ಸಾಧ್ಯವಾಗಲಿಲ್ಲ ಎಂದೋ ಅಥವಾ ಶಾಲೆಗೆ ಹೋಗಿ ಅರ್ಧದಲ್ಲಿಯೇ ಬಿಟ್ಟಿದ್ದರೆ ಅದಕ್ಕೆ ಕಾರಣವೇನು ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕುತ್ತಾರೆ.
ಅಲ್ಲಿಗೆ ಒಂದನೆಯ ಹಂತ ಮುಗಿದಂತೆ. ಎರಡನೆಯ ಹಂತದಲ್ಲಿ ತಾವು ಭೇಟಿ ನೀಡಿದ ಮನೆಗಳಲ್ಲಿರುವ ಮಹಿಳೆಯರ ಪೈಕಿ ನಿಜವಾಗಿಯೂ ಅಕ್ಷರಾಭ್ಯಾಸ ಮಾಡುವ ಇಚ್ಛೆ ಯಾರಿಗೆ ಇದೆ ಎಂಬ ಬಗ್ಗೆ ಲಿಸ್ಟ್ ರೆಡಿ ಮಾಡಿಕೊಂಡು ಅವರಿಗೆ ಪ್ರತಿ ರವಿವಾರ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಈ ಹಂತದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಓದಲು ಮತ್ತು ಬರೆಯಲು ಹೇಳಿಕೊಡುತ್ತಾರೆ. ಅಕ್ಷರದ ಜ್ಞಾನವೇ ಇಲ್ಲದ ಮಹಿಳೆಯರಿಗೆ ಮೊದಲು ಕನ್ನಡ ಭಾಷೆ ಕಲಿಸುತ್ತಾರೆೆ. ಅರ್ಧದಲ್ಲಿ ವಿದ್ಯಾಭ್ಯಾಸ ಕೊನೆಗೊಳಿಸಿದ ಮಹಿಳೆಯರಿಗೆ ಇಂಗ್ಲಿಷನ್ನೂ ಹೇಳಿಕೊಡುತ್ತಿದ್ದು, ಈ ಪೈಕಿ ಅನೇಕ ಮಂದಿ ಇಂಗ್ಲಿಷ್ ಅಕ್ಷರಗಳನ್ನು ಓದಲು ಶಕ್ಯರಾಗಿದ್ದಾರೆ.
ಈ ಯೋಜನೆಯ ಮೊದಲನೆಯ ಕಂತಿನ ಕೆಲಸವನ್ನು ಕೆಲ ತಿಂಗಳಿನಿಂದ ನಡೆಸುತ್ತಿದ್ದು, ಎರಡು ಹಂತಗಳನ್ನು ಈಗಾಗಲೇ ಪೂರೈಸಿದ್ದಾರೆ. ಈ ಹಂತಗಳನ್ನು ಪೂರೈಸಿರುವವರಿಗೆ ಪರೀಕ್ಷೆಗಳನ್ನೂ ನಡೆಸಲಾಗಿದೆ. ಮುಂದಿನ ಎರಡು ಎರಡು ಹಂತಗಳಲ್ಲಿ ಜಮಾ-ಖರ್ಚು , ಎ.ಟಿ.ಎಮ್ ಬ್ಯಾಂಕಿಂಗ್ , ಕಂಪ್ಯೂಟರ್ ಶಿಕ್ಷಣ, ಮೊಬೈಲ್ ಶಿಕ್ಷಣ ಹೀಗೆ ಹಲವಾರು ವಿಷಯಗಳ ಬಗ್ಗೆ ತಿಳಿವಳಿಕೆ ನೀಡುವ ಯೋಜನೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನ ನಡೆಸಿರುವ ವಿದ್ಯಾರ್ಥಿಗಳು ಯೋಜನೆಯನ್ನು ಸಂಪೂರ್ಣ ಯಶಸ್ವಿಗೊಳಿಸುವ ಉತ್ಸಾಹದಲ್ಲಿದ್ದಾರೆ.
ವೈವಿಧ್ಯ ಚಟುವಟಿಕೆ: ಹುಬ್ಬಳ್ಳಿಯ ಕಟ್ನೂರಿನ ಸರಕಾರಿ ಶಾಲೆಯಲ್ಲಿ ಪ್ರತಿ ರವಿವಾರ 12ರಿಂದ 2:30 ರವರೆಗೂ ತರಗತಿ ಜರುಗುತ್ತಿದೆ. ಕಲಿಸಬೇಕೆಂಬ ಆಸೆ ನಮಗಿದ್ದಷ್ಟೇ, ಕಲಿಯಬೇಕು ಎಂಬ ಆಸೆ ಈ ಮಹಿಳೆಯರಿಗೂ ಇದೆ ಎನ್ನುತ್ತಾರೆ ರಶ್ಮಿ ಸಜ್ಜನರ. ಮಹಿಳೆಯರಿಗೆ ಮನರಂಜನಾ ಕಾರ್ಯಕ್ರಮ, ಸ್ಪರ್ಧೆಗಳು, ಆಟ ಹೀಗೆ ವೈವಿಧ್ಯ ಚಟುವಟಿಕೆಗಳನ್ನೂ ನಡೆಸಲಾಗುತ್ತದೆ.
ವಿದ್ಯಾರ್ಥಿಗಳಿಗೂ ಉಜ್ವಲ ಭವಿಷ್ಯ
ಕಾಲೇಜುಗಳಲ್ಲಿ ಅಧ್ಯಯನದ ಭಾಗವಾಗಿ ಇಂಥದ್ದೊಂದು ಯೋಜನೆ ರೂಪಿಸುವ ಅಗತ್ಯವಿದೆ ಎನ್ನುತ್ತಾರೆ ಸ್ಕೂಲ್ ಆಫ್ ಮ್ಯಾನೇಜಮೆಂಟ್ ಸ್ಟಡಿಸ್ ಆಂಡ್ ರಿಸರ್ಚ್ನ ಶಿಕ್ಷಣ ತಂಡದ ಮುಖ್ಯಸ್ಥ ಪ್ರೊ. ಸಾಗರ್ ಪಾಟೀಲ್. ‘ಈಗ ಯುವಕರ ಪ್ರತಿಭಾ ಪಲಾಯನ ಹೆಚ್ಚುತ್ತಿದೆ. ಆದರೆ ನಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು, ಆಚಾರ- ವಿಚಾರಗಳನ್ನು ಅವರು ತಿಳಿದುಕೊಳ್ಳುವ ಅನಿವಾರ್ಯತೆ ಇಂದಿನದ್ದು.
ಯುವ ಸಮೂಹ ಹಳ್ಳಿಗೆ ಹೋಗಿ ಅಲ್ಲಿಯ ಸಮಸ್ಯೆಗಳನ್ನು ಹುಡುಕಿ ಬಗೆಹರಿಸಲು ಪ್ರಯತ್ನಿಸಿದರೆ ಇದು ಹಳ್ಳಿಗಳ ಅಭಿವೃದ್ಧಿಯ ಜತೆಜತೆಗೆ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಯುವಕರು ಸಿದ್ಧರಾಗಲೂ ಸಹಕಾರಿಯಾಗುತ್ತದೆ. ಅದರಲ್ಲಿಯೂ ಮ್ಯಾನೇಜಮೆಂಟ್ ವಿದ್ಯಾರ್ಥಿಗಳಿಗೆ ಸಮಾಜದ ನಿರ್ವಹಣೆಯ ಜ್ಞಾನ ಅತ್ಯಗತ್ಯ. ನಾಲ್ಕು ಗೋಡೆಗಳ ಒಳಗೆ ಕಾಲೇಜಿನಲ್ಲಿ ಕಲಿಯಲು ಸಾಧ್ಯವಾಗದ್ದನ್ನು ಹೊರ ಪ್ರಪಂಚ ಕಲಿಸುತ್ತದೆ’ ಎನ್ನುತ್ತಾರೆ ಅವರು.
ಶಾಲೆಯನ್ನು ಅರ್ಧಕ್ಕೆ ನಿಲ್ಲಿಸಿದ್ದೆ. ಈಗ ನಾನು ಕಲಿಯಲು ತುಂಬಾ ಉತ್ಸುಕಳಾಗಿದ್ದೇನೆ. ಅಕ್ಷರದ ಜ್ಞಾನ ಮಾತ್ರವಲ್ಲದೇ ಈಗ ಹೊರಗಿನ ವ್ಯವಹಾರಗಳನ್ನೂ ಕಲಿಯಲು ಸಹಕಾರಿಯಾಗಿದೆ. ಅನೇಕ ಮಹಿಳೆಯರು ಕನ್ನಡವನ್ನು ಸುಲಭವಾಗಿ ಓದುತ್ತಿದ್ದಾರೆ. ಮಕ್ಕಳು ಇಂಗ್ಲಿಷ್ ವಿಷಯದ ಬಗ್ಗೆ ಏನಾದರೂ ಪ್ರಶ್ನೆ ಕೇಳಿದಾಗ, ಉತ್ತರಿಸಬೇಕು ಎಂಬ ಹಂಬಲ ನನಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ವಿದ್ಯಾರ್ಥಿಗಳ ಮಾರ್ಗದರ್ಶನದಿಂದ ಇಂದು ನಾನು ಇಂಗ್ಲಿಷನ್ನು ಓದು, ಬರೆಯು ವುದು ಮಾತ್ರವಲ್ಲದೇ ಸ್ವಲ್ಪ ಸ್ವಲ್ಪ ಮಾತನಾಡಲೂ ಕಲಿತಿದ್ದೇನೆ. | ಶಮಶಾದ್ ಫಲಾನುಭವಿ