ಬಂಡವಾಳ ಹೂಡಿಕೆಗೆ ಹಲವಾರು ರಾಜ್ಯಗಳು ಪೈಪೋಟಿ ನಡೆಸುತ್ತವೆ. ಹಲವು ವಿನಾಯ್ತಿ, ಸೌಲಭ್ಯಗಳನ್ನು ನೀಡಿ ಕೈಗಾರಿಕೆಗಳನ್ನು ಆಕರ್ಷಿಸಲು ಯತ್ನಿಸುತ್ತವೆ. ಇದೇ ಕಾರಣಕ್ಕೆ ಮೂಲಸೌಕರ್ಯವನ್ನೂ ಹೆಚ್ಚಿಸುತ್ತವೆ. ಭೌಗೋಳಿಕ ಪರಿಸರ, ಮೂಲಸೌಕರ್ಯ, ಕೌಶಲ, ಮಾನವ ಸಂಪನ್ಮೂಲ ಹೀಗೆ ವಿವಿಧ ಕಾರಣಗಳಿಂದ ಕರ್ನಾಟಕ ಬಂಡವಾಳ ಹೂಡಿಕೆಗೆ ಪ್ರಶಸ್ತವಾಗಿದೆ. ಹಾಗಾಗಿಯೇ, ರಾಜಧಾನಿ ಬೆಂಗಳೂರು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಮುಖ್ಯಕೇಂದ್ರವಾಗಿ ಬೆಳೆದಿದೆ. ಆದರೆ, ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ, ನಡೆಯುತ್ತಿರುವ ಕೆಲ ಬೆಳವಣಿಗೆಗಳು ಕೈಗಾರಿಕಾ ಬೆಳವಣಿಗೆ ದೃಷ್ಟಿಯಿಂದ ಪೂರಕವಾಗಿಲ್ಲ. ಬಿಡದಿಯ ಟೊಯೋಟಾ ಕಿಲೋಸ್ಕರ್ ಕಾರ್ವಿುಕರು ಮುಷ್ಕರ ಆರಂಭಿಸಿ ಎರಡು ತಿಂಗಳು ಕಳೆದರೂ, ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕಾರ್ವಿುಕರು ಮತ್ತು ಸಂಸ್ಥೆ ಮುಖ್ಯಸ್ಥರ ನಡುವಿನ ಭಿನ್ನಾಭಿಪ್ರಾಯ ಈ ಬಿಕ್ಕಟ್ಟಿಗೆ ಕಾರಣ ಎಂದು ಹೇಳಲಾಗಿದ್ದರೂ, ಈ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂಬುದು ಪ್ರತಿಪಕ್ಷಗಳ ಆರೋಪ.
ಮತ್ತೊಂದು ಘಟನೆ ವಿಸ್ಟ್ರಾನ್ ಕಾರ್ಖಾನೆಗೆ ಸಂಬಂಧಿಸಿದ್ದು. ಹಲವು ತಿಂಗಳಿಂದ ಸಂಬಳ ಪಾವತಿಸಿಲ್ಲವೆಂದು ರೊಚ್ಚಿಗೆದ್ದ ಕಾರ್ವಿುಕರು ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆಸಿದ್ದರಿಂದ ಕೋಟ್ಯಂತರ ರೂಪಾಯಿಯ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಆಪಲ್ ಸಂಸ್ಥೆ ಘಟನೆಯ ಆಂತರಿಕ ತನಿಖೆಗೆ ಆದೇಶಿಸಿದೆ. ವಿಸ್ಟ್ರಾನ್ ಕಾರ್ಖಾನೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಮತ್ತೊಂದೆಡೆ, ಈ ಕೃತ್ಯದ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದ್ದು, ಜಾಗತಿಕವಾಗಿ ಉದ್ಯಮವಲಯಕ್ಕೆ ದೇಶ, ರಾಜ್ಯದ ಬಗ್ಗೆ ತಪ್ಪುಸಂದೇಶ ರವಾನಿಸುವ ಪ್ರಯತ್ನ ಮಾಡಲಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಅದೇನಿದ್ದರೂ, ಇಂಥ ಹಿಂಸಾಕೃತ್ಯಗಳು ಅಥವಾ ಅಹಿತಕರ ಘಟನೆಗಳು ದುರದೃಷ್ಟಕರ ಮಾತ್ರವಲ್ಲ ಉದ್ಯಮವಲಯದ ಬೆಳವಣಿಗೆಗೂ ಅಡ್ಡಿಯಾಗಿ ಪರಿಣಮಿಸಬಹುದು.
ಕಾರ್ವಿುಕರ ಹಿತ ರಕ್ಷಣೆ ಆಗಬೇಕು. ಅವರಿಗೆ ಸಕಾಲದಲ್ಲಿ ವೇತನ ಪಾವತಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಮಾತುಕತೆ, ಸಂಧಾನದ ಮೂಲಕ ಬಗೆಹರಿಸಬಹುದಾದಂಥ ಇಂಥ ವಿವಾದಗಳು ಹಿಂಸಾಚಾರಕ್ಕೆ ಕಾರಣವಾಗಿದ್ದು ಹೇಗೆ? ಇತ್ತೀಚಿನ ಘಟನೆಯ ಹಿಂದೆ ಬರೀ ಕಾರ್ವಿುಕರು ಇದ್ದರೆ? ಎಂಬ ಪ್ರಶ್ನೆಗಳಿಗೆ ತನಿಖೆಯಿಂದಲೇ ಸೂಕ್ತ ಉತ್ತರ ದೊರೆಯಬೇಕಿದೆ. ಕರೊನಾದ ಹಾವಳಿ ಉದ್ಯಮವಲಯವನ್ನು ಅಲುಗಾಡಿಸಿರುವುದು ಹೌದು. ಕರೊನೋತ್ತರ ದಿನಗಳಲ್ಲಿ ಉತ್ಪಾದಕತೆ ಹೆಚ್ಚಿಸಲು, ಉದ್ಯಮಗಳನ್ನು ಆಕರ್ಷಿಸಲು ಎಲ್ಲ ಸರ್ಕಾರಗಳು ಹರಸಾಹಸ ಪಡುತ್ತಿವೆ. ಚೀನಾದಿಂದ ಕಾಲ್ತೆಗೆಯುವ ಕಂಪನಿಗಳು ಕರ್ನಾಟಕಕ್ಕೆ ಬರುವಂತೆ ಮಾಡಲು ರಾಜ್ಯ ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ. ಉದ್ಯೋಗಸೃಷ್ಟಿಯ ವೇಗ, ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚದಿದ್ದಲ್ಲಿ ಮತ್ತಷ್ಟು ಹೊಸ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಹಾಗಾಗಿ, ಸರ್ಕಾರ ಈ ನಿಟ್ಟಿನಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸಬೇಕಿದೆ. ರಾಜ್ಯದಲ್ಲಿನ ಕೈಗಾರಿಕಾಸ್ನೇಹಿ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಬೇಕೆ ಹೊರತು ಅದು ಬಿಗಡಾಯಿಸುವಂತಾಗಬಾರದು.