ಅಂಕಣ

ಸಹಕಾರ ಕ್ಷೇತ್ರದಿಂದ ಜನರ ಆರ್ಥಿಕ, ಸಾಮಾಜಿಕ ಏಳ್ಗೆ

(ಲೇಖಕರು ಸಹಕಾರ ಸಂಘಗಳ ಅಪರ ನಿಬಂಧಕರು ಹಾಗೂ ರಾಜ್ಯ ಸಹಕಾರ ಮಹಾಮಂಡಳದ ಕಾರ್ಯದರ್ಶಿ)

ಪ್ರತಿ ವರ್ಷ ನವೆಂಬರ್ 14ರಿಂದ 20ರವರೆಗೆ ದೇಶದಾದ್ಯಂತ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಜನರ ಜೀವನ ಹಸನುಗೊಳಿಸುವ ಉದ್ದೇಶದಿಂದ ಆರಂಭಿಸಲಾದ ಈ ಸಪ್ತಾಹದ ಈ ವರ್ಷದ ಆಚರಣೆ ಇಂದು (ನ.20) ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಹಕಾರ ರಂಗ ಬೆಳೆದುಬಂದ ಬಗೆಯನ್ನು ಇಲ್ಲಿ ಸ್ಮರಿಸಲಾಗಿದೆ.

ಭಾರತದ ಸಹಕಾರ ಚಳವಳಿ ಆರಂಭವಾಗಿ 118 ವರ್ಷಗಳು ಕಳೆದಿವೆ. ಜನತೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಚಳವಳಿ ಶ್ರಮಿಸುತ್ತ ಬಂದಿದೆ. ಗಾತ್ರದಲ್ಲಿ, ವ್ಯಾಪ್ತಿಯಲ್ಲಿ, ಸಾಧನೆಯಲ್ಲಿ ವಿಶ್ವದಲ್ಲೇ ಬೃಹತ್ತಾದುದೂ, ಮಹತ್ತಾದುದೂ ಆಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಬಡವರ, ಮಹಿಳೆಯರ ಆಧಾರಸ್ತಂಭವಾಗಿದೆ.

ಭಾರತದ ಸಹಕಾರ ಚಳವಳಿಯ ಆರೋಗ್ಯಕರ ಬೆಳವಣಿಗೆಗೆ ಹಲವಾರು ನಾಯಕರು ಶ್ರಮಿಸಿದ್ದಾರೆ. ತಮ್ಮ ತನು, ಮನವನ್ನು ಸಮರ್ಪಿಸಿದ್ದಾರೆ. ಅಂಥವರಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಕೂಡ ಒಬ್ಬರು. ಸಹಕಾರ ತತ್ವ, ಆಚರಣೆಯಲ್ಲಿ ಅವರಿಗೆ ನಂಬಿಕೆ, ನಿಷ್ಠೆ ಇತ್ತು. ಆದ್ದರಿಂದ ಅವರು ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಹಕಾರ ತತ್ವದ ಮೊರೆ ಹೋದರು. ರಾಷ್ಟ್ರದಲ್ಲಿ ಸಹಕಾರ ಚಳವಳಿ ಪ್ರಗತಿಪಥದಲ್ಲಿ ಸಾಗಲು ಕ್ರಮಗಳನ್ನು ಕೈಗೊಂಡರು. ಅವರ ದೂರದೃಷ್ಟಿಯ ಫಲದಿಂದ ಇಂದು ಸಹಕಾರ ಚಳವಳಿ ವೈಶಿಷ್ಟ್ಯಪೂರ್ಣವಾಗಿ ಬೆಳೆದಿದೆ.

‘ಸಹಕಾರ ಕ್ಷೇತ್ರದ ಮಹತ್ವ, ದೇಶದ ರೈತರ ಸಮಸ್ಯೆಗಳು, ಅವರ ಮೇಲಿನ ಶೋಷಣೆ ಕುರಿತು ಹಾಗೂ ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣ ಪ್ರದೇಶದ ರೈತರ, ಮಹಿಳೆಯರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ಸಾಧ್ಯ’ ಎಂದು 1952ರಲ್ಲಿಯೇ ಸಂಸದ ಎಂ.ವಿ. ಕೃಷ್ಣಪ್ಪ ಲೋಕಸಭೆಯಲ್ಲಿ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದ್ದರು. ಆ ಭಾಷಣ ಆಲಿಸಿದ ನೆಹರು ಸಭೆ ಮುಗಿದ ನಂತರ ಕೃಷ್ಣಪ್ಪ ಅವರನ್ನು ತಮ್ಮ ಕಚೇರಿಗೆ ಕರೆಸಿ, ಸಹಕಾರ ಕ್ಷೇತ್ರದ ಬಗ್ಗೆ ಅವರಿಗಿರುವ ಜ್ಞಾನ, ಕಳಕಳಿ ತಿಳಿದು ಮರುದಿನವೇ ಅವರನ್ನು ಕೃಷಿ ಖಾತೆ ಸಚಿವರನ್ನಾಗಿ ನೇಮಕ ಮಾಡಿದ್ದರು. ನಂತರ ಕೃಷ್ಣಪ್ಪ ಹಾಲೆಂಡ್, ನೆದರ್ಲೆಂಡ್ ದೇಶಗಳಿಗೆ ಅಧ್ಯಯನ ಪ್ರವಾಸ ಮಾಡಿ, ಅಲ್ಲಿರುವ ಹಸುಗಳನ್ನು ಭಾರತಕ್ಕೆ ತಂದು, ಹೈನುಗಾರಿಕೆಗೆ ಹೊಸ ಆಯಾಮ ನೀಡಿದರು. ಅದರ ಫಲವಾಗಿಯೇ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) 1965ರಲ್ಲಿ ಸ್ಥಾಪನೆಯಾಯಿತು. ಕೃಷ್ಣಪ್ಪ ಅವರ ಪ್ರೇರಣೆಯಿಂದಾಗಿ ನೆಹರು ಪಂಚವಾರ್ಷಿಕ ಯೋಜನೆಗಳಲ್ಲಿ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಿದರು. ನವೆಂಬರ್ 14 ನೆಹರು ಜನ್ಮದಿನ. ಅವರು ಸಹಕಾರ ಚಳವಳಿಯ ಬೆಳವಣಿಗೆಗೆ ನೀಡಿದ ಕೊಡುಗೆ ಹಿನ್ನೆಲೆಯಲ್ಲಿ ಪ್ರತಿ ವರ್ಷ ಅವರ ಜನ್ಮದಿನದಂದು ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ, ನ. 20ರವರೆಗೆ ಆಚರಣೆ ಮಾಡಲಾಗುತ್ತಿದೆ.

ಏಳು ದಿನಗಳ ಕಾಲ ಸಹಕಾರ ಕ್ಷೇತ್ರದಲ್ಲಿ ಇರುವವರೆಲ್ಲರೂ ಒಂದೆಡೆ ಸೇರಿ ಚಳವಳಿಯ ಸಾಧನೆ, ಪ್ರಗತಿಯ ಅವಲೋಕನ ನಡೆಸುತ್ತಾರೆ. ಸಾಧನೆ ಬಗ್ಗೆ ಹೆಮ್ಮೆ ಪಟ್ಟುಕೊಂಡು ಮುಂದಿನ ಬೆಳವಣಿಗೆ ಬಗ್ಗೆ ಚಿಂತನೆ ನಡೆಸುತ್ತಾರೆ. ಹಾಗೆಯೇ, ವೈಫಲ್ಯಗಳಿದ್ದಲ್ಲಿ ಅದನ್ನು ಸರಿಪಡಿಸುವ ಬಗ್ಗೆಯೂ ಚರ್ಚೆ ನಡೆಯುತ್ತದೆ. ಹಿಂದಿನಿಂದಲೂ ರಾಜ್ಯದಾದ್ಯಂತ ಅಖಿಲ ಭಾರತ ಸಹಕಾರ ಸಪ್ತಾಹದಾಚರಣೆ ನಡೆಯುತ್ತಿತ್ತು. ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಬಹುತೇಕ ಪಟ್ಟಣ ಪ್ರದೇಶಗಳಲ್ಲಿ ವ್ಯವಸ್ಥೆಯಾಗುತ್ತಿದ್ದವು. ಕೆಲವೇ ಕೆಲವು ಜನರು ಪಾಲ್ಗೊಳ್ಳುತ್ತಿದ್ದರು. ಸಹಕಾರಿ ಕ್ಷೇತ್ರದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಿ.ಟಿ. ದೇವೇಗೌಡ ಸಂಪೂರ್ಣ ಬದಲಿಸಿದರು. ಸಹಕಾರ ಸಪ್ತಾಹಕ್ಕೆ ಹೆಚ್ಚಿನ ಮಹತ್ವ ಸಿಗಬೇಕು, ಸಾವಿರಾರು ಜನರು ಪಾಲ್ಗೊಳ್ಳಬೇಕು, ಸಪ್ತಾಹದ ವ್ಯವಸ್ಥೆ ಗ್ರಾಮಾಂತರ ಪ್ರದೇಶಗಳಲ್ಲಿ ಆಗಬೇಕು, ಅದಕ್ಕೆ ಮೌಲ್ಯ ತುಂಬಬೇಕಾದರೆ ರಾಜ್ಯದ ಮುಖ್ಯಮಂತ್ರಿಯೇ ಸಪ್ತಾಹವನ್ನು ಉದ್ಘಾಟಿಸಬೇಕು ಎಂಬ ಕಲ್ಪನೆಗೆ ಸಾಕಾರ ರೂಪ ಕೊಟ್ಟರು.

ರಾಮನಗರ ಸಮೀಪದ ಅಂಕನಹಳ್ಳಿಯಲ್ಲಿ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ವ್ಯವಸ್ಥೆ ಮಾಡಿದರು. ಗ್ರಾಮೀಣ ಭಾಗದ ಸಾವಿರಾರು ಜನ ಸೇರುವಂತೆ ಮಾಡಿದರು. ಅಂದಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರಿಂದ ‘ಸಹಕಾರ ಸಪ್ತಾಹ’ದ ಉದ್ಘಾಟನೆ ಮಾಡಿಸಿದರು. ಅಂದಿನಿಂದ ಪ್ರತಿ ವರ್ಷ ನ. 14ರಿಂದ 20ರವರೆಗೆ ಅಖಿಲ ಭಾರತ ಸಹಕಾರ ಸಪ್ತಾಹವನ್ನು ರಾಜ್ಯದ ಮುಖ್ಯಮಂತ್ರಿಯವರೇ ಉದ್ಘಾಟಿಸುತ್ತ ಬಂದಿದ್ದಾರೆ. ಅದರಿಂದ ಸಪ್ತಾಹದ ಮಹತ್ವ, ಉದ್ದೇಶ, ಭಾಗವಹಿಸುವಿಕೆ ಪ್ರತಿಯೊಬ್ಬ ಸಹಕಾರಿಗಳಿಗೂ ದೊರಕಿದಂತಾಗುತ್ತದೆ. ಈ ಬಾರಿ ನ. 17ರಂದು ಬಾಗಲಕೋಟೆಯಲ್ಲಿ ಸಹಕಾರ ಸಪ್ತಾಹವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ, ಸಾಧಕ ಸಹಕಾರಿಗಳಿಗೆ ‘ಸಹಕಾರ ರತ್ನ’ ಪ್ರಶಸ್ತಿ ವಿತರಣೆ ಮಾಡಿದ್ದಾರೆ.

ಈ ಸಲ ಸಪ್ತಾಹದ ಧ್ಯೇಯ ‘ವಿಕಸಿತ ಭಾರತ ನಿರ್ವಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬುದಾಗಿತ್ತು. ಪ್ರತಿ ದಿನ ಒಂದೊಂದು ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದೆ. ನ. 14ರಂದು ‘ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿಯನ್ನು ಬಲಪಡಿಸುವುದು’ ಎಂಬ ವಿಷಯದ ಬಗ್ಗೆ ರ್ಚಚಿಸಲಾಗಿದೆ. ನ. 15ರಂದು ‘ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ’, ನ. 16ರಂದು ‘ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’, ನ. 17ರಂದು ‘ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ’, ನ. 18ರಂದು ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು’, ನ. 19ರಂದು ‘ಮಹಿಳೆಯರು, ಯುವಕರು ಮತ್ತು ಅಬಲ ವರ್ಗಗಳಿಗಾಗಿ ಸಹಕಾರ ಸಂಸ್ಥೆಗಳು’ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿದೆ. ನ. 20ರಂದು ‘ಉತ್ತಮ ವಿಶ್ವ ನಿರ್ಮಾಣ ಹಾದಿಗಾಗಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಸಪ್ತಾಹದ ಅವಧಿಯಲ್ಲಿ ಧ್ಯೇಯದ ಬಗ್ಗೆ ಚಿಂತನೆ, ಸಮಾಲೋಚನೆ ಅರ್ಥಪೂರ್ಣವಾಗಿ, ಪರಿಣಾಮಕಾರಿಯಾಗಿ ನಡೆದಿದೆ. ಆ ಮೂಲಕ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪ್ರೇರಣಾ ಶಕ್ತಿಯಾಗಿದೆ.