ಅಂಕಣ

ಉದಯ್ ಜಾದೂಗಾರ್​ ಅಂಕಣ| ಹಣ ಗಳಿಸೋ ಸುಲಭ ಉಪಾಯಗಳು...

chandru

ನಂಗೆ ಗೊತ್ತಿರೋ ಹಣಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ನೆನಪಾದಂತೆ ಹೇಳ್ತಾ ಹೋಗ್ತೀನಿ. ನಿಮಗೆ ಬೇಕಾದ್ದನ್ನು ತೆಗೆದುಕೊಳ್ಳಿ, ಬೇಡವಾದ್ದನ್ನು ಬಿಟ್ಟು ಬಿಡಿ. ನೆನಪಾದಂಗೆ ಬರೀತಾ ಹೋಗ್ತೀನಿ. ಹಣ ಮಾಡೋದು ಹೇಗೆ ಅಂತ ಪುಸ್ತಕ ಬರೆದು ತುಂಬಾ ಜನರು ಹಣ ಮಾಡ್ಕೊಂಡಿದ್ದಾರೆ. ಕನ್ನಡದಲ್ಲಿ ಯಂಡಮೂರಿಯವರ ದುಡ್ಡು, ದುಡ್ಡು, ಇಂಗ್ಲೀಷ್​ನಲ್ಲಿ ನೆಪೋಲಿಯನ್ ಹಿಲ್​ರವರ ಥಿಂಕ್ ಎಂಡ್ ಗ್ರೋ ರಿಚ್, ಶಿವಖೇರ ಅವರ ಯು ಕ್ಯಾನ್ ವಿನ್ ಪುಸ್ತಕಗಳು ಚೆನ್ನಾಗಿವೆ. ಖಂಡಿತಾ ಓದಿ. ಇವರೆಲ್ಲಾ ಹೇಳೋದು, ನಾ ಹೇಳೋದು ಒಂದೇ. ಯಶಸ್ಸಿಗೆ ಹಲವು ದಾರಿಗಳು ಇವೆಯಾದರೂ ಅವೆಲ್ಲಾ ಏರು ದಾರಿಗಳೇ. ಕಷ್ಟಪಟ್ಟು ಹತ್ತಬೇಕು. ಸುಲಭ ದಾರಿ ಆರಿಸಿಕೊಂಡಿರೋ, ಒಂದಲ್ಲ ಒಂದು ದಿನ ಜೈಲು ಸೇರಿಯೋ, ಪ್ರಾಣ ಕಳೆದುಕೊಂಡೋ ಪಶ್ಚಾತ್ತಾಪ ಪಡುತ್ತೀರಿ. ಇಂಗ್ಲಿಷ್​ನಲ್ಲಿ ಹಲವಾರು ಗಾದೆಗಳಿವೆ. There is no short cut to make money” “Easy come easy go” ಈ ಜಗತ್ತಲ್ಲಿ ಯಾವುದೂ ಸುಲಭವಾಗಿ ಸಿಗದು. ಸುಲಭವಾಗಿ ಬಂದಿದ್ದನ್ನು ಸುಲಭವಾಗಿ ಕಳೆದುಕೊಳ್ತೇವೆ.

ಹಣ ಮಾಡಲು ಮೊದಲು ನಿಮ್ಮ ವ್ಯಕ್ತಿತ್ವ ಮುಖ್ಯ. ಯಾವಾಗಲೂ ನಿಮ್ಮನ್ನು ಯಾರೋ ಗಮನಿಸುತ್ತಿದ್ದಾರೆಂದೇ ಭಾವಿಸಿ. ನಿಮ್ಮ ವ್ಯಕ್ತಿತ್ವದ ಬಗ್ಗೆ ಎಲ್ಲರಲ್ಲೂ ಒಳ್ಳೇ ಅಭಿಪ್ರಾಯ ಬರೋ ಹಾಗಿರ್ಲಿ. ಹಾಗಿದ್ದಾಗ ಮಾತ್ರ ನಿಮ್ಮ ಹೆಸರು ಯಾರ ಮೂಲಕವೋ ಇನ್ಯಾವುದೋ ಪ್ರಭಾವಶಾಲಿ ವ್ಯಕ್ತಿಯ/ಸಂಸ್ಥೆಯ ಕಿವಿಗೆ ಬಿದ್ದು ನಿಮಗೆ ಹೊಸ, ಇನ್ನೂ ಉತ್ತಮವಾದ ಅವಕಾಶ ದೊರೆಯೋ ಸಾಧ್ಯತೆ ಹೆಚ್ಚು.

ನಿಮ್ಮ ಗಮನವೆಲ್ಲಾ ಒಂದೇ ಕಡೆ ಇರ್ಬೇಕು- ಅಂದರೆ-ಯಶಸ್ಸಿನ ಕಡೆಗೇ ಇರ್ಬೇಕು. ಕುದುರೆಯ ಕಣ್ಣಿಗೆ ಕಣ್ಕಾಪು ಕಟ್ತಾರಲ್ಲಾ ಅದೇ ತರಹ. ನಾವು ಒಂದೇ ದಿಕ್ಕಲ್ಲಿ ಮನಸ್ಸನ್ನು ಕೇಂದ್ರೀಕರಿಸ್ಬೇಕು. ಹಾಗೆ ಮಾಡಿದ್ರೆ ಮಾತ್ರ ಗುರಿ ಮುಟ್ಟೋಕೆ ಸಾಧ್ಯ. ಹಾಗೆಲ್ಲಾ ಯಾಕ್ರೀ ಮಾಡ್ಬೇಕು, ನಾಳೆ ಇರ್ತೀವೋ ಇಲ್ವೋ, ಇರೋವಷ್ಟು ದಿನ ಮಜಾ ಮಾಡೋಣ - ಎಂಬ ಧೋರಣೆಯನ್ನು ತಾಳಬಾರ್ದು. ನಾಳೆ ಇರ್ತೀವೋ ಇಲ್ವೋ, ಅಂತ ಯಾವಾಗ ಅನ್ಕೋಬೇಕು ಅಂದ್ರೆ ನಮ್ಗೆ ಯಾವುದೋ ವಾಸಿಯಾಗದ ಕಾಯಿಲೆ ಇದ್ರೆ ಮಾತ್ರ ಅಂದ್ಕೊಳ್ಬೇಕು. ಹಣ ಮಾಡಿಟ್ಟು ಸತ್ರೆ ಅದರಿಂದ ನಮಗೇನೂ ತೊಂದರೆ ಇಲ್ಲ. ಅದೇ ಹಣವಿಲ್ಲದೆ ಬದುಕುವುದು ಬಹಳ ಕಷ್ಟ. ಹಣವಿಲ್ಲದವನು ಹೆಣಕ್ಕೆ ಸಮಾನ ಅನ್ನೊ ಗಾದೆ ಮಾತೇ ಇದೆ. ಬಹಳ ಜನ ದುಡ್ಡು ಮಾಡೋಕೆ ಆಗದವ್ರು ಹೇಳ್ತಾ ಇರ್ತಾರೆ - ‘ಅಯ್ಯೋ ಬಿಡ್ರಿ, ದುಡ್ಡು ದುಡ್ಡು ಅಂತ ಯಾಕೆ ಸಾಯ್ತೀರಾ? ಹೋಗ್ತಾ ತೊಗೊಂಡು ಹೋಗ್ತೀರಾ, ನಾ ಮನಸ್ಸು ಮಾಡಿದ್ರೆ ಎಷ್ಟೋ ಮಾಡಬಹುದಿತ್ತು’ ಎಂದು. ಅವರ ತಪ್ಪುಗಳನ್ನು, ಸೋಲನ್ನು ಮುಚ್ಚಿಕೊಳ್ಳೋದಕ್ಕೆ ಇದು ಅವರ ಪ್ರಯತ್ನ ಅಷ್ಟೇ. ಇನ್ನು ಕೆಲವರು ಸೋಮಾರಿಗಳು, ಕಷ್ಟಪಡಲು ತಯಾರಿರುವುದಿಲ್ಲ. ಎಲ್ಲದಕ್ಕೂ ಏನಾದರೂ ಸಬೂಬು ಕೊಡುತ್ತಲೇ ಇರುತ್ತಾರೆ. ಅಂಥವರನ್ನು ದೂರವಿಡಿ. ಇಲ್ಲಿ ಒಂದು ಜೋಕ್ ನೆನಪಾಯ್ತು, ಹೇಳ್ತೀನಿ ಕೇಳಿ: ಸೋಮಾರಿ ಯುವಕನೊಬ್ಬ ಸಮುದ್ರ ದಂಡೆಯ ಮೇಲೆ ಹಾಯಾಗಿ ಮಲಗಿ ಕಾಲಹರಣ ಮಾಡುತ್ತಾ ಇದ್ದ. ಈತನ ಸೋಮಾರಿತನ ಕಂಡ ದಾರಿಹೋಕನೊಬ್ಬ ಆತನನ್ನುದ್ದೇಶಿಸಿ - ‘ಯಾಕಯ್ಯ ಸಮಯ ವ್ಯರ್ಥ ಮಾಡುತ್ತಿದ್ದೀಯಾ? ಹೋಗು, ದಿನಕ್ಕೆ 12 ಗಂಟೆ ಮೈಮುರಿದು ದುಡಿ, ಆಗ ನೀನು ಶ್ರೀಮಂತನಾಗಿ, ಯಾವುದೇ ಯೋಚನೆಗಳಿಲ್ಲದೆ ಹಾಯಾಗಿ ನಿದ್ರೆಯನ್ನು ಮಾಡಬಹುದು’ ಎಂಬುದಾಗಿ ಉಪದೇಶ ಮಾಡಿದ. ಮಲಗಿದಾತ ಮಗ್ಗುಲು ಬದಲಾಯಿಸುತ್ತ - ‘ಸ್ವಾಮಿ, ಹಾಯಾಗಿ ನಿದ್ರೆ ಮಾಡಲು ಅಷ್ಟೆಲ್ಲ ಕಷ್ಟಪಡಬೇಕಾ? ನಾನೀಗ ಮಾಡ್ತಾ ಇರೋದು ಏನು? ಅದನ್ನೇ ತಾನೆ?’ ಎಂದು ಹೇಳಿ ಪುನಃ ನಿದ್ರೆಗೆ ಜಾರಿದ!

ಇದು ಜೋಕ್ ಬಿಡಿ. ಸೀರಿಯಸ್ ವಿಷಯ ಹೇಳುವಾಗ ಸ್ವಲ್ಪ ರಿಲೀಫ್ ಇರಲಿ ಅಂತ ಹೇಳಿದೆ ಅಷ್ಟೇ. ನಾವೀಗ ಪುನಃ ನಿಮ್ಮ ಯಶಸ್ಸಿನ ಬಗ್ಗೆ ಯೋಚಿಸೋಣ.

ನಿಮ್ಮ ಸಂಜೆಯ ವಾಕಿಂಗನ್ನು ನಿಮ್ಮ ಉದ್ದೇಶ ಸಾಧನೆಗೆ ಸಹಾಯಕವಾಗುವ ಯಾರಾದರೊಬ್ಬರ ಭೇಟಿಯೊಂದಿಗೆ ಹೊಂದಿಸಿಕೊಳ್ಳಿ. ಹೀಗೆ ಇಬ್ಬರ, ಮೂವರ ಆಲೋಚನೆಗಳು ಒಟ್ಟಿಗೆ ಸೇರಿದಾಗ ಅದಕ್ಕೆ ಪ್ರಚಂಡ ಶಕ್ತಿ ಬರುತ್ತೆ. ಇದಕ್ಕೆ ಇಂಗ್ಲಿಷ್​ನಲ್ಲಿ ‘ಥಿಂಕ್ ಟ್ಯಾಂಕ್’ ಅನ್ನುತ್ತಾರೆ. ಹಲವಾರು ಜನರು ಸೇರಿ ಅವರವರಿಗೆ ತೋಚಿದಂತೆ ಅವರವರು ಹೇಳುತ್ತಾರೆ. ಉಳಿದವರು ಅವರ ಹೇಳಿಕೆ ಬಗ್ಗೆ, ಸಾಧಕ ಬಾಧಕಗಳ ಬಗ್ಗೆ ಮಾತಾಡುತ್ತಾರೆ. ಕೊನೆಯಲ್ಲಿ ಎಲ್ಲರೂ ಸೇರಿ ಒಂದು ತೀರ್ವನಕ್ಕೆ ಬರುತ್ತಾರೆ. ಆದ್ದರಿಂದ ನಿಮ್ಮ ಜೀವನ ಧ್ಯೇಯ ಸಾಧನೆಗೆ ಸಮಾನ ಮನಸ್ಕರನ್ನು ಆದಷ್ಟೂ ಸೇರಿಸ್ಕೊಳ್ಳಿ. ಒಂದು ನೆನಪಿಟ್ಟು ಕೊಳ್ಳಿ, ಯಾವುದೇ ಕಾರಣಕ್ಕೆ ನಿಮ್ಮ ರಹಸ್ಯಗಳನ್ನು ಬಿಟ್ಟುಕೊಡಬೇಡಿ. ಏಕೆಂದರೆ ಎಂಥ ಒಳ್ಳೆ ಸ್ನೇಹಿತ ಕೂಡ ಮುಂದೊಂದು ದಿನ ಶತ್ರು ಆಗೋ ಸಾಧ್ಯತೆಗಳಿವೆ. ಹಾಗೆ ಇನ್ನೊಬ್ಬರ ಬಗ್ಗೆ ಗಾಸಿಪ್ ಮಾಡಬೇಡಿ ಹಾಗೂ ಮಾಡುವವರನ್ನೂ ಹತ್ತಿರ ಸೇರಿಸಿಕೊಳ್ಳದಿರಿ. ಇಂದು ಬೇರೆಯವರ ಬಗ್ಗೆ ಮಾತಾಡುವ ಅವರು ನಾಳೆ ನಿಮ್ಮ ಬಗ್ಗೆ ಇತರರ ಬಳಿ ಮಾತಾಡುವ ಸಾಧ್ಯತೆಗಳಿವೆ. ನಿಮ್ಮ ಬೆಳವಣಿಗೆಗೆ ಸಂಬಂಧಪಡದ ವಿಷಯದ ಬಗ್ಗೆ ಚರ್ಚೆ ಬೇಡವೇ ಬೇಡ. ನಿಮ್ಮ ಒಳಿತಿಗಾಗಿ ಚಿಂತನ-ಮಂಥನ ಇಲ್ಲಿ ಮುಖ್ಯವಾದದ್ದು.

ದುಡ್ಡನ್ನು ಹೇಗೆ ಖರ್ಚು ಮಾಡಬೇಕೆನ್ನುವುದೇ ಕಷ್ಟ. ಹೆಚ್ಚು ಖರ್ಚು ಮಾಡಿದರೆ ದುಂದುಗಾರ, ಕಡಿಮೆ ಮಾಡಿದರೆ ಜಿಪುಣ ಅನ್ನೋ ಬಿರುದನ್ನು ಗಳಿಸುತ್ತೀರಿ. ಜನರ ಮಾತಿಗೆ ಬೆಲೆ ಕೊಡಬೇಡಿ, ಹಣವನ್ನು ಪೋಲು ಮಾಡಬೇಡಿ, ಅಗತ್ಯಕ್ಕೆ ಬೇಕಾದಷ್ಟು ಖರ್ಚು ಮಾಡಿ ಉಳಿದದ್ದನ್ನು ಒಟ್ಟು ಮಾಡಿ ಸುರಕ್ಷಿತವಾಗಿ ಇಡಿ (ಸುರಕ್ಷಿತವಾಗಿ ಇಡುವುದನ್ನು ಮುಂದೆ ಹೇಳಿಕೊಡುತ್ತೇನೆ). ಪ್ರಚಾರಕ್ಕಾಗಿ ದಾನ, ಧರ್ಮ ಮಾಡಬೇಡಿ. ಹೆಸರು ಮಾಡಬೇಕೆಂದಿದ್ದರೆ ನಿಜವಾದ ಸಾಧನೆ ಮಾಡಿ ಹೆಸರು ಗಳಿಸಿ. ನೀವು ದುಡ್ಡು ಕೊಡುತ್ತೀರೆಂದು ಗೊತ್ತಾದ್ರೆ ನಿಮ್ಮ ಮನೆ ಬಾಗಿಲಲ್ಲಿ ಜನರ ಹಿಂಡೇ ಸಾಲು ಕಟ್ಟಿ ಬೇಡಲು ಬರುತ್ತದೆ. ಜೀವನದಲ್ಲಿ ಯಾವುದೇ ಕಾರಣಕ್ಕೆ ನೀವು ಸೋತರೆ ಅವರು ಯಾರೂ ನಿಮಗೆ ನಯಾ ಪೈಸೆ ಕೊಡೊಲ್ಲ. ದಾನ-ಧರ್ಮ ಮಾಡಲೇಬೇಕೆಂದು ಇದ್ದರೆ ನಿಮ್ಮ ಕೈಯಲ್ಲಿ ಸಾಕಷ್ಟು ದುಡ್ಡು ಸೇರಿದ ನಂತರ ಗುಟ್ಟಾಗಿ ಮಾಡಿ. ನೀವು ಸತ್ತ ನಂತರ ಎಲ್ಲಾ ಹಣ ದಾನ ಮಾಡುವಂತೆ ವಿಲ್ ಬರೆದಿಡಿ. ನಿಮ್ಮ ಹಣವನ್ನು ಹೇಗೆ ಖರ್ಚು ಮಾಡಬೇಕೆಂದು ಹೇಳುವ ಬಹಳಷ್ಟು ಜನ ನಿಮಗೆ ಜೀವನದಲ್ಲಿ ಸಿಗುತ್ತಾರೆ, ಅವರು ಹೇಳಿದ್ದಕ್ಕೆಲ್ಲಾ ಹೂಂಗುಟ್ಟಿ. ನಿಮಗೆ ಬೇಕಾದಂತೆ ಯೋಚಿಸಿ ಹಣವನ್ನು ಮಿತವಾಗಿ ಬಳಸಿ. ಅಗತ್ಯವಿದ್ದರೆ ಮಾತ್ರ ವಸ್ತುಗಳನ್ನು ಕೊಂಡುಕೊಳ್ಳಿ, ಕಡಿಮೆಗೆ ಸಿಕ್ತು, ಒಂದು ತೆಗೊಂಡ್ರೆ ಇನ್ನೊಂದು ಫ್ರೀ ಅಂತೆಲ್ಲಾ ಖರೀದಿಸಬೇಡಿ.

ದುಡ್ಡಿದ್ರೆ ನಿಮಗೆ ಯಾವುದೇ ಕೆಲಸ ಮಾಡಲು ಧೈರ್ಯ ಬರುತ್ತೆ. ಸತ್ರೆ ಪರ್ವಾಗಿಲ್ಲ. ನೀವು ಕಟ್ಕೊಂಡು ಹೋಗೊಲ್ಲ ನಿಜ. ನಿಮ್ಹತ್ರ ದುಡ್ಡಿದ್ರೆ ಶೇ. 99 ಸಮಸ್ಯೆಗಳು ಪರಿಹಾರವಾಗ್ತವೆ. ಶೇ. 1 ಮಾತ್ರ ನಿವಾರಿಸಲಾಗದ ಸಮಸ್ಯೆಗಳು. ಹೆಚ್ಚಿನ ಸಮಸ್ಯೆಗಳು ದುಡ್ಡಿಲ್ಲದ ಕಾರಣದಿಂದಲೇ ಹಾಗೇ ಉಳಿದಿರ್ತವೆ. ಉದಾಹರಣೆಗೆ, ಯಾವುದೋ ಕಾಯಿಲೆ ಇರುತ್ತದೆ. ವಾಸಿಯಾಗೋ ಕಾಯಿಲೆ ಆದ್ರೂ ದುಡ್ಡಿಲ್ಲದ ಕಾರಣ ಚಿಕಿತ್ಸೆ ಮಾಡೋದಕ್ಕೆ ಆಗಿರಲ್ಲ. ಯಾರಿಗೋ ಸಾಲ ಕೊಟ್ಟಿರ್ತೀರಾ, ಅದು ವಸೂಲಿ ಆಗಿಲ್ಲ, ಆದ್ರೂ ಚಿಂತೆ ಇಲ್ಲ. ಯಾರೋ ಒಬ್ಬ ದೂರದಲ್ಲಿದ್ದ ನಿಮ್ಮ ಸೈಟನ್ನು ಆಕ್ರಮಣ ಮಾಡಿದ್ರೂ, ನಿಮ್ಗೆ ಬೇಜಾರಿಲ್ಲ. ಯಾಕಂದ್ರೆ ಕೋರ್ಟು, ಕಚೇರಿ ಅಲೆಯುವುದು ನಿಮಗೆ ತಲೆನೋವಿನ ಕೆಲಸ. ಹೇಗಿದ್ರೂ ದುಡ್ಡಿದೆಯಲ್ಲಾ, ಬೇರೆ ಕೊಂಡರಾಯ್ತು.

ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದಿ. ನಿಮಗೆ ಅಗತ್ಯ ಇರೋ ಸುದ್ದಿಗಳನ್ನೆಲ್ಲಾ ಒಂದು ಸ್ಕ್ರಾ್ಯಪ್ ಬುಕ್ ಮಾಡಿಕೊಂಡು ಅಂಟಿಸಿಡಿ. ಸಮಯಕ್ಕೆ ಬೇಕಾಗುತ್ತೆ. ರಾತ್ರಿ ಮಲಗುವ ಮುನ್ನ ಪ್ರತಿದಿನವೂ ಒಂದೆರಡು ಗಂಟೆಗಳ ಕಾಲ, ನಿಮ್ಮ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅಧ್ಯಯನ ಮಾಡಿ. ಇದೆಲ್ಲವೂ ಒಂದು ದೀರ್ಘ ಪ್ರಯಾಣ ಮಾಡುವಾಗ ನಿಮ್ಮ ಕಾರನ್ನು ಇಡಿಯಾಗಿ ಟ್ಯೂನಪ್ ಮಾಡಿದ ಹಾಗೆ. ನೀವು ಹಾಗೆ ಮಾಡುತ್ತಿದ್ದಂತೆ ವಿಶ್ವದ ಅಗೋಚರ ಶಕ್ತಿಯೊಂದು ತಾನಾಗಿಯೇ ನಿಮ್ಮ ನೆರವಿಗೆ ಬರುತ್ತೆ. ಅ್ಝ ಠಿಜಛಿ ಚಿಛಿಠಠಿ.

ಲೇಖಕರ ಕುರಿತು

ಜಾದೂ ಕಲಾಪ್ರಪಂಚದಲ್ಲಿ ಎತ್ತರದ ಸಾಧನೆ ಮಾಡಿದ ಬಹುಮುಖ ಪ್ರತಿಭೆಯ ಕಲಾವಿದ ಉದಯ್ ಜಾದೂಗಾರ್. ದೇಶವಿದೇಶಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಜಾದೂ ಪ್ರದರ್ಶನಗಳನ್ನು ನೀಡಿದ್ದಾರೆ. ಜಾದೂ ಜತೆಗೆ ಮಾತನಾಡುವ ಗೊಂಬೆ ಮತ್ತು ಶ್ಯಾಡೋ ಪ್ಲೇಯನ್ನು ಕರಗತ ಮಾಡಿಕೊಂಡಿದ್ದು, ಟಿವಿ ಕಾರ್ಯಕ್ರಮಗಳಲ್ಲೂ ಜನಪ್ರಿಯರು. ಬೆಂಗಳೂರಿನಲ್ಲಿ ‘ಉದಯ್್ಸ ಮ್ಯಾಜಿಕ್ ವರ್ಲ್ಡ್’ ಎಂಬ ಸಂಸ್ಥೆಯ ಮೂಲಕ ಜಾದೂ ಉಪಕರಣಗಳನ್ನು ತಯಾರಿಸಿ ದೇಶವಿದೇಶಗಳ ಜಾದೂ ಕಲಾವಿದರಿಗೆ ವಿತರಿಸುವ ಉದ್ಯಮವನ್ನು ನಡೆಸುತ್ತಿದ್ದಾರೆ. ನಟ, ನಿರ್ದೇಶಕ, ಲೇಖಕ, ಛಾಯಾಗ್ರಾಹಕ, ಚಿತ್ರಕಲಾವಿದ, ಚೆಸ್ ಆಟಗಾರ ಕೂಡ. ಜಾದೂ, ಜೋಕ್ಸ್, ಸುಡೊಕು ಕುರಿತು ಅವರ ಪುಸ್ತಕಗಳು ಪ್ರಕಟವಾಗಿದೆ. ‘ಹಣ, ಯಶಸ್ಸು, ಆರೋಗ್ಯ, ಮನಃಶಾಂತಿ ಗಳಿಸುವುದು ಹೇಗೆ?’ ಎಂಬುದು ಅವರ ಜನಪ್ರಿಯ ಪುಸ್ತಕ. ಈ ಅಂಕಣ ಪ್ರತಿ 15 ದಿನಗಳಿಗೊಮ್ಮೆ ಪ್ರಕಟವಾಗುತ್ತದೆ.