ಅಂಕಣ

ಮಾದಕಜಾಲದ ಲೋಕ...

arunakunigal
2018ರ ಮೇ 9ರ ರಾತ್ರಿ ನೂನ್ಸಾ ಲೂಟಾಲೋ ಎನ್ನುವ ದಕ್ಷಿಣ ಆಫ್ರಿಕದ ಪ್ರಜೆ ತನ್ನ ದೇಶದ ಜೊಹಾನ್ಸ್​ಬರ್ಗ್​ಗೆ ಮರಳಲು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಳು. ಕೌಂಟರಿನಲ್ಲಿ ಸೂಟ್​ಕೇಸನ್ನು ಚೆಕ್​ಇನ್ ಮಾಡಿ ವಿಮಾನವೇರುವ ಪ್ರಕಟಣೆಗಾಗಿ ಕಾಯುತ್ತಿದ್ದಳು. ಅಷ್ಟರಲ್ಲಿ ಬಂದ ಪೊಲೀಸ್ ಅಧಿಕಾರಿಯೊಬ್ಬರು ಅವಳ ವಿವರಗಳನ್ನು ಕೇಳಿ ಅವಳನ್ನು ತನ್ನ ಜತೆಯಲ್ಲಿ ಭದ್ರತಾ ಕಚೇರಿಗೆ ಕರೆದೊಯ್ದರು. ಸೂಟ್​ಕೇಸನ್ನು ತೆರೆಯಲು ಸೂಚಿಸಿದರು. ಅದರಲ್ಲಿ ಬಟ್ಟೆಬರೆಗಳಲ್ಲದೆ ಕೆಲವು ಪುಸ್ತಕಗಳಿದ್ದವು. ಪುಸ್ತಕಗಳನ್ನು ತಿರುವಿದಾಗ, ಪುಟಗಳ ಮಧ್ಯದಲ್ಲಿ ಮಾಡಿದ್ದ ದೊಡ್ಡ ರಂಧ್ರದಲ್ಲಿ ಬಿಳಿಯ ಬಣ್ಣದ ಪುಡಿಯಿದ್ದ ಪ್ಲಾಸ್ಟಿಕ್ ಪ್ಯಾಕೆಟ್​ಗಳಿದ್ದವು. ಸೂಟ್​ಕೇಸ್​ನ ಲೈನಿಂಗ್​ನ ಮಧ್ಯೆ ಇನ್ನಷ್ಟು ಪ್ಯಾಕೆಟ್​ಗಳು ಸಿಕ್ಕವು. ಅವನ್ನು ಮೂಸಿನೋಡಿದ ಪೊಲೀಸ್ ನಾಯಿಗಳು ಬೊಗಳತೊಡಗಿದಾಗ ಮಾದಕದ್ರವ್ಯ ನಿಗ್ರಹ ದಳದ (ಎನ್​ಸಿಬಿ) ಅಧಿಕಾರಿಗಳಿಗೆ ಕರೆಹೋಯಿತು.

ಈ ಮಾದಕ ವಸ್ತುಗಳು ಹೇಗೆ ಬಂದವೆಂದು ಲೂಟಾಲೋಳನ್ನು ವಿಚಾರಿಸಿದಾಗ ‘ಸೂಟ್​ಕೇಸಿನ ಒಳಗೇನಿತ್ತೋ ನನಗೆ ತಿಳಿದಿರಲಿಲ್ಲ, ಪ್ಯಾಕ್ ಆಗಿದ್ದ ಸೂಟ್​ಕೇಸನ್ನು ಜೊಹಾನ್ಸ್​ಬರ್ಗ್​ಗೆ ಒಯ್ಯಲು ತಿಳಿಸಿದಂತೆ ನಾನು ಅದನ್ನು ಒಯ್ಯುತ್ತಿದ್ದೆ’ ಎಂದಳು. ಆ ಸೂಟ್​ಕೇಸ್​ನ್ನು ಕೊಂಡೊಯ್ಯಲು ತನಗೆ ಹೋಗಿ ಬರುವ ಟಿಕೆಟ್ ಕೊಟ್ಟದ್ದಲ್ಲದೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ ಎರಡೂವರೆ ಸಾವಿರ ಡಾಲರ್ ಕೊಡಲಾಗಿದೆ ಎಂದಳು. ಎನ್​ಸಿಬಿ ಅಧಿಕಾರಿಗಳು ಪ್ಲಾಸ್ಟಿಕ್ ಚೀಲದಲ್ಲಿದ್ದ ಪುಡಿ ಯಾವ ಬಗೆಯ ಮಾದಕ ವಸ್ತುವೆಂದು ತಿಳಿಯಲು ಸ್ಯಾಂಪಲನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಿದರು.

ತನಗೆ ಹೆನ್ರಿ ಎನ್ನುವ ನೈಜೀರಿಯಾದ ಪ್ರಜೆ ಸೂಟ್​ಕೇಸನ್ನು ಕೊಟ್ಟನೆಂದು ಲೂಟಾಲೋ ಹೇಳಿದಳು. ಆತನ ವಿಳಾಸ ತಿಳಿದಿಲ್ಲ. ಆದರೆ ಹೆನ್ರಿಯ ಮನೆ ದೆಹಲಿಯ ಹೊರವಲಯದಲ್ಲಿದ್ದು ಆ ಮನೆಗೆ ಒಂದು ಕಿಮೀ ದೂರದಲ್ಲಿ ಮೆಟ್ರೋ ರೈಲು ನಿಲ್ದಾಣವಿದ್ದು ತಾನು ಅಲ್ಲಿಂದ ಮೆಟ್ರೋ ಮೂಲಕವೇ ಬಂದಿದ್ದಾಗಿ ತಿಳಿಸಿದಳು. ಅಲ್ಲಿಂದ ಬರಲು ಸುಮಾರು 45 ನಿಮಿಷಗಳು ಹಿಡಿಯಿತೆಂದು ಆಕೆ ಹೇಳಿದಾಗ ಆ ಜಾಗವು ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾ ಇರಬಹುದೆಂದು ಪೊಲೀಸರು ಊಹಿಸಿದರು.

ಆಕೆಯನ್ನು ಗ್ರೇಟರ್ ನೋಯ್ಡಾದ ಮೆಟ್ರೋ ನಿಲ್ದಾಣಕ್ಕೆ ಕರೆದುಕೊಂಡು ಹೋದಾಗ ಆಕೆ ಆ ಜಾಗವನ್ನು ಗುರುತಿಸಿ ಪೊಲೀಸರನ್ನು ಸೆಕ್ಟರ್ ಪಿ4 ಎನ್ನುವ ಬಡಾವಣೆಗೆ ಕರೆದೊಯ್ದು ಅಲ್ಲಿದ್ದ ಬಂಗಲೆಯೊಂದನ್ನು ಹೆನ್ರಿಯ ಮನೆಯೆಂದು ತೋರಿಸಿದಳು. ಆ ಮನೆಗೆ ಎತ್ತರದ ಕಬ್ಬಿಣದ ಗೇಟುಗಳಿದ್ದು ಗೇಟಿಗೆ ಬೀಗ ಹಾಕಿತ್ತು. ಮನೆಯ ಕಾಂಪೌಂಡಿನ ಮೇಲೆ ದೇವೇಂದ್ರ ಪಾಂಡೆ, ಐಪಿಎಸ್ ಎಂಬ ನಾಮಫಲಕ ನೋಡಿ ಹೌಹಾರಿದ ಅಧಿಕಾರಿಗಳು ಲೋಟಾಲೋಳನ್ನು ಅದೇ ಹೆನ್ರಿಯ ಮನೆಯೇ ಎಂದು ಕೇಳಿದಾಗ ಆಕೆ ತಾನು ಅದೇ ಮನೆಯಲ್ಲಿಯೇ ಇದ್ದುದಾಗಿ ಖಚಿತಪಡಿಸಿದಳು.

ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಆ ಬಡಾವಣೆಯನ್ನು ಉತ್ತರ ಪ್ರದೇಶದ ಹಿರಿಯ ಸರ್ಕಾರಿ ಅಧಿಕಾರಿಗಳಿಗೆಂದೇ ನಿರ್ವಿುಸಲಾಗಿದ್ದು ಅಲ್ಲಿದ್ದ 250 ಬಂಗಲೆಗಳಲ್ಲಿ ಬಹುತೇಕವು ಖಾಲಿ ಉಳಿದಿದ್ದಾಗಿ ತಿಳಿಯಿತು. ಪೊಲೀಸರು ಹತ್ತಿರದ ಕಿರಾಣಿ ಅಂಗಡಿಯವನನ್ನು ಪ್ರಶ್ನಿಸಿದರು. ಆತ ಆ ಮನೆಯಲ್ಲಿ ಆಫ್ರಿಕನ್ ದೇಶದ ಒಬ್ಬ ವ್ಯಕ್ತಿ ಇರುವುದಾಗಿ ಹೇಳಿ ಆತ ಕೇವಲ ರಾತ್ರಿಯ ವೇಳೆ ಹೊರಗೆ ಬಂದು ತನ್ನ ಅಂಗಡಿಯಿಂದ ಮೊಟ್ಟೆ, ಬ್ರೆಡ್, ಮುಂತಾದವುಗಳನ್ನು ಖರೀದಿಸುತ್ತಿದ್ದುದಾಗಿ ತಿಳಿಸಿದ. ಅದೇ ಹೆನ್ರಿಯಿದ್ದ ಮನೆ ಎಂದು ಖಚಿತವಾದಾಗ ಪೊಲೀಸರು ಅಂಗಡಿಯವನನ್ನು ಕರೆಗಂಟೆಯನ್ನು ಬಾರಿಸಲು ಹೇಳಿ ತಾವು ಹಿಂದೆ ಅಡಗಿಕೊಂಡರು. ಕೆಲವು ನಿಮಿಷಗಳ ತರುವಾಯ ನಿಧಾನವಾಗಿ ಬಾಗಿಲುಗಳು ತೆರೆದಾಗ ಬಾಗಿಲ ಸಂದಿನಿಂದ ಒಬ್ಬ ಆಫ್ರಿಕನ್ ಇಣುಕಿ ನೋಡಿದ. ಕೂಡಲೇ ಮುನ್ನುಗ್ಗಿದ ಪೊಲೀಸ್ ತಂಡ ಬಲವಂತವಾಗಿ ಬಾಗಿಲನ್ನು ನೂಕಿ ಅವನನ್ನು ಹಿಡಿಯಿತು. ಆತ ತಾನೇ ಹೆನ್ರಿ ಎಂದು ತಿಳಿಸಿದಾಗ ಪೊಲೀಸರು ಲೋಟಾಲೋಳನ್ನು ಒಳಗೆ ಬರಹೇಳಿದರು. ಈತನೇ ತನಗೆ ಸೂಟ್​ಕೇಸನ್ನು ಕೊಟ್ಟಿದ್ದಾಗಿ ಆಕೆ ಗುರುತಿಸಿದಳು.

ಆ ಮನೆಯೊಳಗೆ ಒಬ್ಬ ಮಹಿಳೆಯಿದ್ದು ಆಕೆ ತನ್ನ ಹೆಸರನ್ನು ಚಿಮಾಂಡೋ ಎಂದು ಹೇಳಿ ತಾನೂ ನೈಜೀರಿಯದವಳಾಗಿದ್ದು ಹೆನ್ರಿಯ ಪತ್ನಿಯೆಂದಳು. ಮೂರು ವರ್ಷಗಳಿಂದ ಈ ಮನೆಯಲ್ಲಿ ಬಾಡಿಗೆದಾರರಾಗಿ ವಾಸವಾಗಿದ್ದೇವೆ ಎಂದ ಹೆನ್ರಿ. ನಾಲ್ಕು ಬೆಡ್​ರೂಂಗಳಿದ್ದ ಆ ಏಕಮಹಡಿಯ ಬಂಗಲೆಯನ್ನು ಶೋಧಿಸಿದಾಗ ಮೇಲ್ನೋಟಕ್ಕೆ ಸಂಶಯಾಸ್ಪದ ವಸ್ತುಗಳು ಕಾಣಲಿಲ್ಲ. ಪೊಲೀಸರು ಕಾರು ನಿಲ್ಲಿಸುವ ಬೇಸ್​ವೆುಂಟ್​ಗೆ ಹೋದಾಗ ಅಲ್ಲಿ ಒಂದು ಸಣ್ಣ ಪ್ರಯೋಗಾಲಯವಿದ್ದು ಮಾದಕ ವಸ್ತುಗಳನ್ನು ತಯಾರಿಸಲು ಬೇಕಾದ ಪರಿಕರಗಳು ಅಲ್ಲಿದ್ದವು. ಹೆನ್ರಿಯನ್ನು ವಿಚಾರಿಸಿದಾಗ, ಔಷಧಗಳಲ್ಲಿ ಬಳಸುವ ಸೂಡೋ ಎಫಿಡರಿನ್ ಎನ್ನುವ ರಾಸಾಯನಿಕವನ್ನು ದೇಶದ ಬೇರೆ ಬೇರೆ ಭಾಗಗಳಿಂದ ಖರೀದಿಸಿ ಅದಕ್ಕೆ ಇತರ ರಾಸಾಯನಿಕಗಳನ್ನು ಬೆರೆಸಿ ನಕಲಿ ಹೆರಾಯಿನ್ ಮತ್ತು ಕೆಲವು ಸಿಂಥೆಟಿಕ್ ಮಾದಕ ವಸ್ತುಗಳನ್ನು ತಾನು ತಯಾರಿಸುತ್ತಿರುವುದಾಗಿ ತಿಳಿಸಿದ.

ಬೇಸ್​ವೆುಂಟ್ ಪಕ್ಕದಲ್ಲಿದ್ದ ಎರಡು ಬಾತ್​ರೂಂಗಳಲ್ಲಿ 52 ದೊಡ್ಡ ಪ್ಲಾಸ್ಟಿಕ್ ಡ್ರಮ್ಮುಗಳಲ್ಲಿ ಮಾದಕ ವಸ್ತುಗಳನ್ನು ಶೇಖರಿಸಿಡಲಾಗಿತ್ತು. ಅವುಗಳ ತೂಕ 1818 ಕಿಲೋಗ್ರಾಂಗಳಷ್ಟಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಅಂದಾಜು ಬೆಲೆ 100 ಕೋಟಿ ರೂಗಳಿಗಿಂತ ಹೆಚ್ಚಿತ್ತು. ಅದರಲ್ಲಿ ಶೇಕಡಾ 80ರಷ್ಟನ್ನು ಆಫ್ರಿಕಾ ಖಂಡದ ದೇಶಗಳಿಗೆ ಕಳಿಸಲಾಗುತ್ತದೆಯೆಂದು ಹೇಳಿದ ಹೆನ್ರಿ ಉಳಿದವನ್ನು ಭಾರತದಲ್ಲಿ ಮಾರಲಾಗುತ್ತದೆಯೆಂದ. ನಾವು ತಯಾರಿಸುವ ವಸ್ತು ಸಿಂಥೆಟಿಕ್ ಡ್ರಗ್ ಆಗಿದ್ದು ಇವುಗಳನ್ನು ಪಾರ್ಟಿಗಳಲ್ಲಿ ಶ್ರೀಮಂತರು, ನಟನಟಿಯರು ಉಪಯೋಗಿಸುತ್ತಾರೆ. ಅವು ಸುಲಭದಲ್ಲಿ ಲಭ್ಯವಾಗದ ಕಾರಣ ಅವುಗಳ ಬೆಲೆ ಹೆಚ್ಚು ಎಂದ.

ಮನೆಯಲ್ಲಿ ಅಡಗಿಸಿದ್ದ ಹೆರಾಯಿನ್, ಎಂಡಿಎಂಎ ಮತ್ತು ಎಕ್ಸ್ಟಸಿ ಮಾತ್ರೆಗಳೂ ಸಿಕ್ಕವು. ತನ್ನ ಪತ್ನಿ ಮಾದಕವಸ್ತುಗಳನ್ನು ಸೂಟ್​ಕೇಸುಗಳಲ್ಲಿ ಅಡಗಿಸುವುದರಲ್ಲಿ ಪರಿಣಿತಳೆಂದು ಹೆನ್ರಿ ತಿಳಿಸಿದ.

ದೇಶದಲ್ಲಿ ಮೊದಲ ಬಾರಿಗೆ ಇಷ್ಟು ಭಾರೀ ಬೆಲೆಯ ಮಾದಕವಸ್ತುಗಳು ಪತ್ತೆಯಾದದ್ದು ಎನ್​ಸಿಬಿ ಅಧಿಕಾರಿಗಳನ್ನು ಚಕಿತಗೊಳಿಸಿತು. ಮನೆಯ ಮಾಲೀಕ ಪೊಲೀಸ್ ಅಧಿಕಾರಿಯಾದ್ದರಿಂದ ಯಾರಿಗೂ ಸಂಶಯ ಬರುವುದಿಲ್ಲವೆಂದು ಇಂತಹದೇ ಬಂಗಲೆ ಕಡಿಮೆ ಬಾಡಿಗೆಗೆ ದೊರೆತರೂ ಈ ಮನೆಯನ್ನು ಮಾಸಿಕ 24000ರೂ ನೀಡಿ ಬಾಡಿಗೆಗೆ ಪಡೆದಿದ್ದಾಗಿ ಹೆನ್ರಿ ತಿಳಿಸಿದ. ಡ್ರಗ್​ಗಳನ್ನು ಇತರ ದೇಶಗಳಿಗೆ ಸಾಗಿಸಲು ಲೋಟಾಲೋಳಂತಹ ಹಲವಾರು ಜನರಿದ್ದಾರೆ. ಪ್ರತಿ ವ್ಯಕ್ತಿಗೂ 25 ಕಿಲೋ ಮಾದಕ ವಸ್ತುವಿರುವ ಒಂದೇ ಸೂಟ್​ಕೇಸನ್ನು ನೀಡಲಾಗುತ್ತಿತ್ತು. ಸಾಗಣೆದಾರರ ಹೋಟೆಲ್​ಗೆ ನಾವೇ ಸೂಟ್​ಕೇಸುಗಳನ್ನು ಮುಟ್ಟಿಸುತ್ತಿದ್ದ ಕಾರಣ ನಮ್ಮ ಫ್ಯಾಕ್ಟರಿಯ ಬಗ್ಗೆ ಅವರಿಗೆ ಅರಿವಾಗುತ್ತಿರಲಿಲ್ಲ. ಆದರೆ ಲೋಟಾಲೋಳಿಗೆ ವಾಪಸಾಗುವ ಟಿಕೆಟ್ ದೊರಕದ ಕಾರಣ ಆಕೆ ಇಲ್ಲಿಯೇ ಒಂದು ತಿಂಗಳ ಕಾಲ ಇರಬೇಕಾಯಿತು. ಆಗ ಅನಿವಾರ್ಯವಾಗಿ ಅವಳನ್ನು ನಮ್ಮ ಮನೆಯಲ್ಲೇ ಉಳಿಸಿಕೊಂಡೆವು. ಆಕೆ ತನಗೆ ಬೋರ್ ಆಗುತ್ತದೆಂದು ಮನೆಯಿಂದ ಹೊರಗೆ ಹೋಗುತ್ತಿದ್ದ ಕಾರಣ ಮನೆಯನ್ನು ಗುರುತಿಸಿದಳು ಎಂದ. ಎಲ್ಲ ಸಾಮಗ್ರಿಗಳನ್ನು ಟ್ಯಾಕ್ಸಿಗಳಲ್ಲಿಯೇ ಸಾಗಾಟಮಾಡುತ್ತಿದ್ದು ಮನೆಯೊಳಗೆ ಟ್ಯಾಕ್ಸಿ ಬಂದ ನಂತರ ಅದರ ಕೀಲಿಕೈಯನ್ನು ನಮ್ಮಲಿಟ್ಟುಕೊಂಡು ಡ್ರೖೆವರನನ್ನು ಹೊರಗೆ ಕಳಿಸಿ ಲೋಡ್/ಅನ್ಲೋಡ್ ಆದನಂತರವೇ ಆತನನ್ನು ಒಳಗೆ ಬಿಡುತ್ತಿದ್ದೆವು. ಹೀಗಾಗಿ ಮೂರು ವರ್ಷಗಳ ಕಾಲ ಯಾರ ಸುಳಿವಿಗೂ ಬಾರದೆ ನಡೆಯುತ್ತಿದ್ದ ಈ ದಂಧೆ ಒಂದು ಅಚಾತುರ್ಯದಿಂದಾಗಿ ಬೆಳಕಿಗೆ ಬಂದಿತು ಎಂದು ಹೆನ್ರಿ ಪರಿತಪಿಸಿದ.

ನೆಗಡಿ ಬಂದಾಗ ಕಟ್ಟಿದ ಮೂಗನ್ನು ತೆರೆಯಲು ಉಪಯೋಗಿಸುವ ಔಷಧಿಯನ್ನು ಹೆನ್ರಿ ಕಚ್ಚಾವಸ್ತುವಾಗಿ ಬಳಸುತ್ತಿದ್ದ. ಈ ರಾಸಾಯನಿಕದ ತಯಾರಿಕೆ ಹಾಗೂ ಮಾರಾಟ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿದ್ದರೂ ವಿದೇಶೀ ಪ್ರಜೆಯೊಬ್ಬನಿಗೆ ಅದು ಲಭ್ಯವಾದದ್ದು ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿತು. ಬೇರೆ ಬೇರೆ ತಯಾರಕರಿಂದ ಸಣ್ಣ ಸಣ್ಣ ಪ್ರಮಾಣದಲ್ಲಿ ಅದನ್ನು ಖರೀದಿಸಲಾಗುತ್ತಿತ್ತೆಂದು ತನಿಖೆಯಲ್ಲಿ ತಿಳಿಯಿತು.

ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ಮಾಡಿದಾಗ ಈ ಜಾಲದ ರೂವಾರಿ ಸಿಯೆರಾ ಲೆಯೋನ್ ದೇಶದ ಬ್ರೂನೋ ಎಂದು ತಿಳಿಯಿತು. ಹೆನ್ರಿ ತಾನು ಕೇವಲ ಒಬ್ಬ ಕೆಮಿಸ್ಟ್ ಆಗಿದ್ದು ಡ್ರಗ್ ತಯಾರಿಕೆ ಮಾತ್ರ ತನಗೆ ಸಂಬಂಧಿಸಿತ್ತೆಂದ. ಈ ಜಾಲದಲ್ಲಿ ಶಾಮೀಲಾಗಿದ್ದ ಇತರರ ಹೆಸರುಗಳು ಬೆಳಕಿಗೆ ಬರಲಿಲ್ಲ. ಮನೆಯ ಮಾಲೀಕ ಐಪಿಎಸ್ ಅಧಿಕಾರಿ ಪಾಂಡೆಯನ್ನು ವಿಚಾರಿಸಿದಾಗ ತಾನು ರಿಯಲ್ ಎಸ್ಟೇಟ್ ಎಜೆಂಟನ ಮೂಲಕ ಮನೆಯನ್ನು ಬಾಡಿಗೆಗೆ ನೀಡಿದ್ದಾಗಿ ತಿಳಿಸಿ, ತಾನು ಯಾವಾಗಲಾದರೊಮ್ಮೆ ಮನೆಗೆ ಬಂದಾಗ ಹೆನ್ರಿ ದಂಪತಿ ಹಜಾರದಲ್ಲಿಯೇ ಕೂರಿಸಿ ಮಾತನಾಡುತ್ತಿದ್ದರೆಂದೂ ಬಾಡಿಗೆದಾರರ ಬಗ್ಗೆ ಯಾವುದೇ ಸಂಶಯ ಬರಲಿಲ್ಲವೆಂದೂ ಪಾಂಡೆ ತಿಳಿಸಿದರು.

ಈ ಜಾಲದ ಇತರ ಭಾಗಿದಾರರ ಹೆಸರುಗಳು ತಿಳಿಯದ್ದರಿಂದ ಬ್ರೂನೋನನ್ನು ಪರಾರಿಯೆಂದು ನಮೂದಿಸಿ ಇತರ ಮೂವರ ಮೇಲೆ ವಿದೇಶೀಯರ ಕಾಯ್ದೆ ಮತ್ತು ಮಾದಕವಸ್ತುಗಳ ಕಾಯ್ದೆಯ ಮೇರೆಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಲಾಯಿತು. ತನಗೆ ಏಡ್ಸ್ ರೋಗವಿದೆಯೆಂದು ಲೋಟಾಲೋ ಕೋರ್ಟಿನಲ್ಲಿ ಹೇಳಿದಳಾದರೂ ಅವಳಿಗೆ ಜಾಮೀನು ಸಿಗದೆ ನ್ಯಾಯಾಲಯದಲ್ಲಿ ಎಲ್ಲರಿಗೂ ಹತ್ತು ವರ್ಷಗಳ ಶಿಕ್ಷೆಯಾಯಿತು.

‘ಜೀವನವು ಚದುರಂಗದಾಟದಂತಲ್ಲ; (ರಾಜನಿಗೆ) ಚೆಕ್ ಕೊಟ್ಟು ಕಟ್ಟಿಹಾಕಿದ ನಂತರವೂ ಆಟ ಮುಂದುವರಿಯುತ್ತದೆ’ ಎಂದು ವಿಜ್ಞಾನ ಲೇಖಕ ಅಸಿಮೋವ್ ಹೇಳಿದಂತೆ ಮಾದಕ ವಸ್ತುಗಳ ಅಪರಾಧಿಗಳು ಮತ್ತು ಪೊಲೀಸರ ಮಧ್ಯೆ ಚದುರಂಗದಾಟವು ಮುಂದುವರಿಯುತ್ತಲೇ ಇದೆ.