ಚೆನ್ನೈ: ಚೀನಾದಂತಹ ಮುಂದುವರಿದ ರಾಷ್ಟ್ರಗಳ ಮಹಾನಗರಗಳಲ್ಲಿ ಕಟ್ಟಡವೊಂದರ ಮೂಲಕ ಮೆಟ್ರೋ ಹಾದು ಹೋಗುವುದನ್ನು ನಾವೆಲ್ಲ ಕಂಡಿದ್ದೇವೆ. ಇಂತಹ ಪ್ರಯೋಗವನ್ನೇ ಭಾರತ ದೇಶದಲ್ಲೂ ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಚೆನ್ನೈನಲ್ಲಿ ಮೆಟ್ರೋ ರೈಲುಗಳು 12 ಅಂತಸ್ತಿನ ಕಟ್ಟಡದೊಳಗಿನಿಂದ ಮೆಟ್ರೋಗಳು ಸಂಚರಿಸಲಿವೆ. ನಿಲ್ದಾಣಗಳು ಮೂರನೇ ಮಹಡಿಯಲ್ಲಿದ್ದರೆ ಉಳಿದವು ವಾಣಿಜ್ಯ ಮತ್ತು ಕಚೇರಿ ಸ್ಥಳಗಳಾಗಿವೆ ಎಂದು ಮೂರು ಸ್ಥಳಗಳ ಬಗ್ಗೆ ಸಿಎಂಆರ್‌ಎಲ್ ಮಾಹಿತಿ ನೀಡಿದೆ.
ಚಾಲಕ ರಹಿತ ಮೆಟ್ರೋ ರೈಲುಗಳು ನಗರದ ತಿರುಮಂಗಲಂ, ಕೊಯಂಬೇಡು ಮತ್ತು ತಿರುಮಾಯಿಲೈನಲ್ಲಿ 12 ಅಂತಸ್ತಿನ ಕಟ್ಟಡದ ಮೂಲಕ ಹಾದು ಹೋಗಲಿದೆ. ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ ಮುಂಬರುವ ಎರಡನೇ ಹಂತ ಮೆಟ್ರೋದಲ್ಲಿ 3 ಸ್ಥಳಗಳಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿಗೆ ಯೋಜಿಸಿದೆ.
ತಿರುಮಂಗಲಂನಲ್ಲಿ 12 ಅಂತಸ್ತಿನ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ.
ಎರಡನೇ ಹಂತದ ಮೆಟ್ರೋ ಯೋಜನೆಯು ಮಾಧವರಂ-ಸಿರುಚೆರಿ, ಪೂನಮಲ್ಲೆ-ವಿವೇಕಾನಂದ ಇಲ್ಲಂ, ಮತ್ತು ಮಾಧವರಂನಿಂದ ಶೋಲಿಂಗನಲ್ಲೂರು ಎಂಬ ಮೂರು ಮಾರ್ಗಗಳನ್ನೊಳಗೊಂಡಿದ್ದು 119 ಕಿ.ಮೀ ದೂರ ಕ್ರಮಿಸಲಿದೆ. ಇದರ ವೆಚ್ಚ 69,000 ಕೋಟಿ ರೂ.ಗಳಾಗಿದೆ.
ಸಿಎಂಆರ್‌ಎಲ್ ನಿಲ್ದಾಣಗಳ ವಿನ್ಯಾಸ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಚೆನ್ನೈ ಮೆಟ್ರೋ ಎರಡನೇ ಹಂತಗಾಗಿ ಮೂರು ಬೋಗಿಗಳ ಚಾಲಕರಹಿತ ರೈಲುಗಳ ಮೊದಲ ಸೆಟ್ ಆಗಸ್ಟ್ 2024ರ ವೇಳೆಗೆ ನಗರಕ್ಕೆ ಆಗಮಿಸುವ ಸಾಧ್ಯತೆಯಿದೆ.