ಅಂಕಣ

ಬಹುಜನರ ವಿಮೋಚಕ ಬಾಬಾಸಾಹೇಬರ ಕನಸುಗಳು

ಬಾಬಾಸಾಹೇಬರು ಪರಿನಿಬ್ಬಾಣ ಹೊಂದಿ ಇಂದಿಗೆ 68 ವರ್ಷಗಳು ಸಂದವು. ಆದರೂ ಅವರು ಶೋಷಿತರ ಎಲ್ಲ ಮನೆಮನಗಳಲ್ಲಿ ಬೆಳೆಯುವುದರ ಜೊತೆಗೆ ಜಗತ್ತಿನ ಮನ್ನಣೆಗೆ ಒಳಗಾಗುತ್ತಿದ್ದಾರೆ. ಇಂದಿಗೂ ಶೋಷಿತ ಸಮುದಾಯಗಳು ತಮ್ಮ ವಿಮೋಚನೆಯ ಹೊಸ ಮಾದರಿಗಳನ್ನು ಬಾಬಾಸಾಹೇಬರಲ್ಲಿ ಕಂಡುಕೊಳ್ಳುತ್ತಿದ್ದಾರೆ. ಅವರು ಜಗತ್ತಿನ ನೊಂದವರ ವಿಮೋಚಕರಾಗುತ್ತಿದ್ದಾರೆ.

ಸಹಸ್ರಾರು ವರ್ಷಗಳಿಂದ ಅಪರಿಮಿತ ಅವಮಾನ, ಕಷ್ಟಕೋಟಲೆಗಳಿಗೆ ಬಲಿಯಾಗಿ ಅಮಾನವೀಯವಾಗಿ ಬದುಕುತ್ತಿದ್ದ ಈ ದೇಶದ ಕೋಟ್ಯಂತರ ಶೋಷಿತರ ವಿಮೋಚನೆಗೆ ದಾರಿ ತೋರಿದ ಏಕೈಕ ಮಹಾನಾಯಕ ಬಾಬಾಸಾಹೇಬ್ ಅಂಬೇಡ್ಕರ್. ಅವರು ಅಸೀಮ ಮಾನವ ಪ್ರೇಮ ಮತ್ತು ನೈತಿಕ ಸಿಟ್ಟಿನ ಸಾಕಾರ ರೂಪವಾಗಿದ್ದರು. ಅವರ ಅಪಾರ ಓದು, ಅಧ್ಯಯನಶೀಲತೆ, ದೂರದೃಷ್ಟಿ, ಸಮಾನತೆಯ ಕನಸು ಇವೆಲ್ಲವೂ ಆಧುನಿಕ ಭಾರತವನ್ನು ಶೋಷಣಾರಹಿತ ನೆಲೆಗಟ್ಟಿನಲ್ಲಿ ಕಟ್ಟಲು ಪ್ರೇರೇಪಿಸಿದ್ದವು.

ಈಚಿನ ದಿನಗಳಲ್ಲಿ ಬಾಬಾಸಾಹೇಬರನ್ನು ಪೂಜೆಯೆಂಬ ಆಚರಣಾತ್ಮಕ ಚೌಕಟ್ಟಿನಲ್ಲಿ ಬಂಧಿಸುವ ಕೆಲಸ ಹೆಚ್ಚೆಚ್ಚು ನಡೆಯುತ್ತಿದೆ. ಇದೊಂದು ರೀತಿಯ ರಾಜಕಾರಣವೂ ಹೌದು. ಅಂಬೇಡ್ಕರ್ ಅವರನ್ನು ಹೀಗೆ ಪೂಜನೀಯಗೊಳಿಸುವುದರ ಮೂಲಕ ಅವರ ತತ್ವಸಿದ್ಧಾಂತಗಳನ್ನು ಮರೆಮಾಚುವ ಹುನ್ನಾರವೂ ನಡೆಯುತ್ತಿದೆ. ಇದು ನಿಜಕ್ಕೂ ಬಾಬಾಸಾಹೇಬರಿಗೆ ಸಲ್ಲಿಸುವ ಗೌರವವಲ್ಲ. ಅವರು ತನ್ನ ಸಮುದಾಯ ಈ ರೀತಿಯಲ್ಲಿ ಆಗಬೇಕೆಂದು ಕನಸು ಕಂಡಿರಲಿಲ್ಲ. 1953ರ ಮಾರ್ಚ್ 4ರಂದು ಮುಂಬೈನಲ್ಲಿ ನಡೆದ ಅಸ್ಪೃಶ್ಯರ ಸಭೆಯೊಂದರಲ್ಲಿ, ಜನರು ತನ್ನನ್ನು ಆರಾಧಿಸುತ್ತಾರೆ ಎನ್ನುವುದನ್ನು ಮನಗಂಡು, ‘ನಾನೂ ನಿಮ್ಮಂತೆ ಒಬ್ಬ ಸಾಧಾರಣ ಮನುಷ್ಯ, ಆದರೆ ನೀವು ನನ್ನನ್ನು ದೈವೀಕರಿಸುತ್ತಿದ್ದೀರಿ. ಇದು ತಪ್ಪು. ಈ ರೀತಿ ವ್ಯಕ್ತಿಪೂಜೆ ಮಾಡುವುದನ್ನು ನೀವು ಮೊಳಕೆಯಲ್ಲಿಯೇ ಚಿವುಟದಿದ್ದರೆ ಸರ್ವನಾಶವಾಗುತ್ತೀರಿ’ ಎಂದು ಎಚ್ಚರಿಸಿದ್ದರು. ತನ್ನ ಜನರ ಮುಗ್ಧತೆಯನ್ನು ಕಂಡು ‘ನೀವು ಹೀಗಿರುವುದರಿಂದಲೇ ಶತಶತಮಾನಗಳಿಂದ ಅವಮಾನಿತರಾಗಿದ್ದೀರಿ, ನೀವೆಲ್ಲರೂ ಶಿಕ್ಷಣವನ್ನು ಪಡೆಯುವುದರ ಮೂಲಕ ನಿಮ್ಮ ಗುಲಾಮಗಿರಿಯನ್ನು ನೀವೇ ತೊಡೆದುಹಾಕಬೇಕು. ರಾಜಕೀಯ ಅಧಿಕಾರಗಳನ್ನು ಪಡೆದುಕೊಳ್ಳುವುದರಲ್ಲಿ ನಿಮ್ಮ ಬಿಡುಗಡೆ ಇದೆಯೇ ಹೊರತು ತೀರ್ಥಯಾತ್ರೆ, ಉಪವಾಸ ಮಾಡುವುದರಲ್ಲಿ ಅಲ್ಲ. ಅದು ಮಾತ್ರವೇ ನಿಮಗೆ ಮೋಕ್ಷದ ದಾರಿಯನ್ನು ತೋರಿಸಬಲ್ಲದು’ ಎಂದು ಬಹಳ ಮಾರ್ವಿುಕವಾಗಿ ಹೇಳಿದ್ದರು.

ಈ ಮಾತುಗಳನ್ನು ಆಡುವಾಗ ಅವರಲ್ಲೊಂದು ದಿಟ್ಟತೆಯಿತ್ತು, ಖಚಿತತೆಯಿತ್ತು. ನನ್ನ ಜನರು ಎಲ್ಲ ಸಂಕೋಲೆಗಳಿಂದ ಬಿಡುಗಡೆ ಪಡೆದು ಎಲ್ಲರಂತೆ ಸಮಾಜದ ಮುಖ್ಯವಾಹಿನಿಯ ಪ್ರಜೆಗಳಾಗಿ ಘನತೆಯಿಂದ ಸ್ವಾಭಿಮಾನದ ಬದುಕು ನಡೆಸಲಿ ಎಂಬ ಹಂಬಲವಿತ್ತು. ಇದಕ್ಕೆ ಇಂಬುಕೊಟ್ಟಂತೆ ಎರಡು ಮುಖ್ಯ ಸಂದರ್ಭದಲ್ಲಿನ ಅವರ ಮಾತುಗಳನ್ನು ಗಮನಿಸಬಹುದು. ಒಂದು, 1956ರ ನವೆಂಬರ್ 26ರಂದು ಈ ದೇಶಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡುತ್ತ, ‘ನಾವು ಇಂದು ಅನೇಕ ವೈರುಧ್ಯಗಳ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ರಾಜಕೀಯವಾಗಿ ನಾವು ಸಮಾನತೆಯನ್ನು ಸಾಧಿಸಿದ್ದೇವೆ. ಆದರೆ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇನ್ನೂ ಹಾಗೇ ಉಳಿದಿದೆ. ರಾಜಕೀಯವಾಗಿ ನಾವು ಒಬ್ಬ ವ್ಯಕ್ತಿ ಒಂದು ಓಟು, ಒಂದು ಓಟು ಒಂದು ಮೌಲ್ಯ ಸಿದ್ಧಾಂತವನ್ನು ಸಾಧಿಸಿದ್ದೇವೆ. ಆದರೆ ಒಬ್ಬ ವ್ಯಕ್ತಿ ಒಂದು ಮೌಲ್ಯ ಸಿದ್ಧಾಂತವನ್ನು ಸಾಧಿಸಲಾಗಿಲ್ಲ. ನಾವು ಈ ಅಸಮಾನತೆಯನ್ನು ಆದಷ್ಟು ಬೇಗ ತೊಡೆದು ಹಾಕಬೇಕು. ಇಲ್ಲದಿದ್ದರೆ ಈ ಅಸಮಾನತೆಯಿಂದ ಪರಿತಪಿಸುತ್ತಿರುವ ಜನರು ನಾವು ಕಷ್ಟಪಟ್ಟು ಕಟ್ಟಿರುವ ಈ ರಾಜಕೀಯ ಪ್ರಜಾಪ್ರಭುತ್ವದ ಕಟ್ಟಡವನ್ನು ಧ್ವಂಸ ಮಾಡುತ್ತಾರೆ’ ಎಂದಿದ್ದರು.

ಇನ್ನೊಂದು, ನೇರವಾಗಿ ತನ್ನ ಜನರಿಗೆ ನೀಡುವ ಸಂದೇಶವಾಗಿದೆ. ‘ನಾನು ಅಪಾರ ಕಷ್ಟಗಳ ನಡುವೆ ಈ ವಿಮೋಚನಾ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ಇನ್ನು ಮುಂದೆ ಎಷ್ಟೇ ಅಡೆತಡೆಗಳು ಎದುರಾದರೂ ಈ ವಿಮೋಚನಾ ರಥ ಮುಂದೆ ಸಾಗಲಿ. ಒಂದು ವೇಳೆ ಈ ವಿಮೋಚನಾ ರಥವನ್ನು ಮುಂದೆ ಎಳೆಯಲು ಸಾಧ್ಯವಾಗದಿದ್ದರೆ ಅದನ್ನು ಈಗ ಇರುವಲ್ಲಿಯೇ ಬಿಟ್ಟುಬಿಡಲಿ. ಆದರೆ ಯಾವುದೇ ಕಾರಣಕ್ಕೂ ಈ ವಿಮೋಚನಾ ರಥವನ್ನು ಹಿಂದಕ್ಕೆ ತಳ್ಳಲು ಬಿಡಬಾರದು’ ಎಂದು ನಾನಕ್​ಚಂದ್ ರತ್ತುಗೆ ಹೇಳಿದ್ದರು.

ಈ ಎರಡು ಸಂದೇಶಗಳು ಬಾಬಾಸಾಹೇಬರ ಕಡೆಯ ದಿನಗಳಲ್ಲಿ ಹೇಳಿದವುಗಳಾಗಿವೆ. ಒಂದು ರಾಜಕೀಯ ಸಂದೇಶವಾಗಿದ್ದರೆ, ಮತ್ತೊಂದು ಸಾಮಾಜಿಕ ಸಂದೇಶವಾಗಿದೆ. ವಾಸ್ತವವಾಗಿ ಇಂದು ಈ ಎರಡು ಸಂದೇಶಗಳು ಬಾಬಾಸಾಹೇಬರು ಅಂದು ಹೇಳಿದ ಸ್ಥಿತಿಯಲ್ಲಿಯೇ ಇವೆ. ಇದು ನಿಜಕ್ಕೂ ವಿಷಾದನೀಯ. ಹೆಚ್ಚೆಂದರೆ ಈ ದೇಶದ ಅಸ್ಪೃಶ್ಯರು ಶಿಕ್ಷಣ ಪಡೆದು, ನೌಕರಿ ಗಿಟ್ಟಿಸಿಕೊಂಡು ಬದುಕಿನಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಾಗಿರಬಹುದು. ಆದರೆ ಸಾಮಾಜಿಕವಾಗಿ ಮೂಲಭೂತ ಬದಲಾವಣೆ ಇನ್ನೂ ಸಾಧ್ಯವಾಗಿಲ್ಲ. ಇಂದಿಗೂ ಪ್ರತಿ ಹಳ್ಳಿಯಲ್ಲಿಯೂ ದೇವಸ್ಥಾನ, ಹೋಟೆಲ್, ಕ್ಷೌರದ ಅಂಗಡಿ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಅವಮಾನ, ಘರ್ಷಣೆಗಳು ನಡೆಯುತ್ತಲೇ ಇವೆ. ಈ ಕಾರಣಕ್ಕಾಗಿಯೇ ಅಂದು ಬಾಬಾಸಾಹೇಬರು ‘ನನಗೆ ನನ್ನದು ಎಂಬ ತಾಯ್ನಾಡಾಗಲೀ ಧರ್ಮವಾಗಲೀ ಇಲ್ಲ’ ಎಂದು ಬಹಳ ನೋವಿನಿಂದ ಹೇಳಿದ್ದರು. ಇಂದಿಗೂ ನೀರು ಕೊಡದ, ಪ್ರಾಣಿಗಳಿಗಿಂತ ಕಡೆಯಾಗಿ ಕಾಣುವ ಈ ಧರ್ಮವನ್ನು, ಈ ದೇಶವನ್ನು ಯಾವ ಸ್ವಾಭಿಮಾನಿ ಅಸ್ಪೃಶ್ಯನೂ ತನ್ನದೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಪ್ರಶ್ನಿಸಿದರೆ ಈಗಲೂ ಸವರ್ಣೀಯರಿಂದ ಶೋಷಣೆ, ದೌರ್ಜನ್ಯಗಳು ಖಚಿತ.

ಬಾಬಾಸಾಹೇಬರು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿಯೇ ಈ ಪ್ರಶ್ನೆಗಳನ್ನು ಎತ್ತಿದ್ದರು. ಅವರ ಸ್ವಾತಂತ್ರ್ಯ ಹೋರಾಟ ಭಿನ್ನವಾಗಿತ್ತು. ಅವರಿಗೆ ಈ ದೇಶ ವಸಹಾತುಶಾಹಿ ಹಿಡಿತದಿಂದ ಬಿಡುಗಡೆಗೊಳ್ಳುವುದು ಮಾತ್ರವಾಗಿರಲಿಲ್ಲ. ಅದರ ಜೊತೆಗೆ ಭಾರತೀಯ ಸಮಾಜದ ತುಳಿತಕ್ಕೊಳಗಾದ ಕೋಟ್ಯಂತರ ಜನರ ವಿಮೋಚನೆಯೂ ಅವರ ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗವಾಗಿತ್ತು. ಈ ಕಾರಣಕ್ಕಾಗಿ ಗಾಂಧೀಜಿಯ ಜೊತೆಗೆ ನಿರಂತರ ವಾಗ್ವಾದಗಳನ್ನು ನಡೆಸಿದ್ದರು. ಗ್ರಾಮಭಾರತ ಅಸ್ಪೃಶ್ಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ ನೋಡಿ ಅವರು ಅದರಿಂದ ಸಂಪೂರ್ಣ ಮುಕ್ತಿಗೊಳ್ಳಲು ಹಾತೊರೆಯುತ್ತಿದ್ದರು. ಅದಕ್ಕಾಗಿಯೇ ಅವರು ಹಳ್ಳಿಗಳನ್ನು ಶೋಷಣೆಯ ಕೂಪಗಳೆಂದು ಕರೆದರು. ಜೊತೆಗೆ ಅವುಗಳಿಂದ ಬಿಡುಗಡೆಗೊಂಡು ತಮ್ಮದೇ ಪ್ರತ್ಯೇಕ ಹಳ್ಳಿಗಳನ್ನು ನಿರ್ಮಾಣ ಮಾಡಿಕೊಂಡು ಬದುಕಬೇಕು. ಇದಕ್ಕೆ ಸರ್ಕಾರ ಸಂವಿಧಾನಿಕ ಕಾರ್ಯಯೋಜನೆ ರೂಪಿಸಿ ಜವಾಬಾರಿಯನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.

ತಾವು ಎಷ್ಟೇ ಹೋರಾಟ ಮಾಡಿದರೂ ಈ ಎಲ್ಲ ಶೋಷಣೆ, ನೋವು, ಅವಮಾನ ಕೊನೆಯಾಗದಿದ್ದುದನ್ನು ಅರಿತ ಬಾಬಾಸಾಹೇಬರು ಕಡೆಯದಾಗಿ ಒಂದು ಮಹತ್ವದ ನಿರ್ಧಾರಕ್ಕೆ ಬಂದರು. ‘ಈ ಎಲ್ಲ ಶೋಷಣೆಗಳಿಂದ ನನ್ನ ಜನರು ಮುಕ್ತರಾಗಬೇಕಾದರೆ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧಧರ್ಮದ ಕಡೆ ನಡೆಯಬೇಕು’ ಎಂದು ನಿರ್ಧರಿಸಿದರು. ಅದಕ್ಕಾಗಿ ಜಗತ್ತಿನ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿ ಕಡೆಗೆ ತನ್ನದೇ ನೆಲದಲ್ಲಿ ಹುಟ್ಟಿದ ಬೌದ್ಧಧರ್ಮವನ್ನು ಆಯ್ಕೆ ಮಾಡಿಕೊಂಡರು. ಬೌದ್ಧ ಧರ್ಮ ಮಾತ್ರ ಈ ದೇಶದ ಸಮಸ್ತ ದಲಿತರನ್ನು ವಿಮೋಚನೆಗೊಳಿಸಬಲ್ಲದು ಎಂಬ ನಂಬಿಕೆ ಅವರಲ್ಲಿ ದಿನದಿಂದ ದಿನಕ್ಕೆ ಹರಳುಗಟ್ಟುತ್ತಿತ್ತು. ಆ ಮೂಲಕ ಭಾರತೀಯ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಸಂಕೋಲೆಗಳಿಂದ ಕಳಚಿಕೊಳ್ಳುವುದಾಗಿತ್ತು. ಬೌದ್ಧಧರ್ಮವು ನೈತಿಕತೆ, ವೈಚಾರಿಕತೆ ಮತ್ತು ವೈಜ್ಞಾನಿಕತೆ ಆಧಾರದಲ್ಲಿ ರೂಪುಗೊಂಡ ಧರ್ಮ. ಸಮಾನತೆ, ಕರುಣೆ, ಮೈತ್ರಿ- ಬುದ್ಧನ ಬೋಧನೆಯ ಜೀವಾಳವಾಗಿದ್ದವು. ಇದು ದಲಿತರ ಪಾಲಿಗೆ ಸಮುಚಿತ ಧರ್ಮ ಎಂದು ತೀರ್ವನಿಸಿದರು. ಅಂತಿಮವಾಗಿ 1956ರ ಅಕ್ಟೋಬರ್ 14ರಂದು ಲಕ್ಷಾಂತರ ಅನುಯಾಯಿಗಳೊಂದಿಗೆ ತಮ್ಮ ಪೂರ್ವಿಕರ ಧರ್ಮವಾಗಿದ್ದ ಬೌದ್ಧಧರ್ಮಕ್ಕೆ ಮರಳಿದರು.

ದಲಿತರು ಆಚರಣಾತ್ಮಕ ನೆಲೆಯಲ್ಲಾದರೂ ಬಾಬಾಸಾಹೇಬರನ್ನು ಅನುಕರಿಸಲಿಲ್ಲ ಎನ್ನುವುದಕ್ಕೆ ಇದು ಕೂಡ ಸ್ಪಷ್ಟ ಉದಾಹರಣೆ. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ಸಂದರ್ಭದಲ್ಲಿ ಹೇಳಿದಂತೆ ‘ಇನ್ನು ಮುಂದಿನ 15 ವರ್ಷಗಳಲ್ಲಿ ಭಾರತದ ಬಹುಜನರೆಲ್ಲರೂ ಬುದ್ಧಧರ್ಮಕ್ಕೆ ಮರಳಿ, ಭಾರತ ಬುದ್ಧಭಾರತ ಆಗುತ್ತದೆ’ ಎಂದು ಕನಸು ಕಂಡಿದ್ದರು. ಆದರೆ ಅದು ಕೂಡ ಸಾಕಾರವಾಗಲಿಲ್ಲ. ಅಂದರೆ ಪ್ರಜ್ಞಾಪೂರ್ವಕ ಆಚರಣಾತ್ಮಕ ನೆಲೆಯಲ್ಲಿಯೂ ಬಾಬಾಸಾಹೇಬರನ್ನು ಅನುಕರಿಸಲಾಗಿಲ್ಲ. ಇಂದಿಗೂ ಈ ದಲಿತ ಬಹುಜನ ಸಮುದಾಯಕ್ಕೆ ಬಿಡುಗಡೆ ದಾರಿಯಾಗಿ ಕಾಣುವುದು ಬಾಬಾಸಾಹೇಬರ ತತ್ವ ಸಿದ್ಧಾಂತಗಳು ಮಾತ್ರ. ಆ ದಿಕ್ಕಿನಲ್ಲಿ ಮುನ್ನಡೆದು ಬಾಬಾಸಾಹೇಬರ ಕನಸುಗಳನ್ನು ಬೆಂಬತ್ತಿದರೆ, ಅಲ್ಲಿ ಎಲ್ಲ ಶೋಷಿತರಿಗೆ ಬಿಡುಗಡೆಯ ದಾರಿ ಕಾಣಿಸುತ್ತದೆ ಮತ್ತು ಅದೇ ಬಾಬಾಸಾಹೇಬರಿಗೆ ಕೊಡುವ ಶ್ರೇಷ್ಠ ಗೌರವ ಕೂಡ.

(ಲೇಖಕರು ಕನ್ನಡ ಪ್ರಾಧ್ಯಾಪಕರು, ನ್ಯಾಷನಲ್ ಕಾಲೇಜು, ಬೆಂಗಳೂರು)