ಬಾಂಗ್ಲಾದೇಶದ ರಾಷ್ಟ್ರೀಯ ರಾಜಕಾರಣದಲ್ಲಿ ಮತೀಯವಾದಿಗಳೇ ಮುನ್ನೆಲೆಯಲ್ಲಿ ಇರುವುದರಿಂದ ಹಾಗೂ ಹಿಂದೂಗಳೆಂದರೆ ಶೇಖ್ ಹಸೀನಾ ಬೆಂಬಲಿಗರು ಎಂಬ ಅಭಿಪ್ರಾಯ ಉದ್ದೇಶ ಪೂರ್ವಕವಾಗಿ ಬಿತ್ತಲ್ಪಟ್ಟಿರುವುದರಿಂದ ಅವರ ಮೇಲೆ ದೌರ್ಜನ್ಯ ಯಾವುದೇ ತಡೆಯಿಲ್ಲದೆ ನಡೆಯುತ್ತಿದೆ. ದುರಂತವೆಂದರೆ ಮಹಮದ್ ಯೂನುಸ್ ಸರ್ಕಾರ ಅತ್ಯಾಚಾರಿಗಳ ಪರವಾಗಿಯೇ ನಿಂತಿದೆ!
ಪೂರ್ವ ಪಾಕಿಸ್ತಾನದ ವಿಮೋಚನೆ ಮತ್ತು ಸ್ವತಂತ್ರ ಬಾಂಗ್ಲಾದೇಶದ ಸ್ಥಾಪನೆಗಾಗಿ ಭಾರತ 1971ರಲ್ಲಿ ಪಾಕಿಸ್ತಾನದ ವಿರುದ್ಧ ಸಮರಗೈದು ಐತಿಹಾಸಿಕ ವಿಜಯ ಸಾಧಿಸಿ ಇದೇ ಸೋಮವಾರ, ಡಿಸೆಂಬರ್ 16ಕ್ಕೆ 53 ವರ್ಷಗಳಾದವು. ಅಂದು ದೇಶದಾದ್ಯಂತ ‘ವಿಜಯ್ ದಿವಸ್’ ಸಂಭ್ರಮಾಚರಣೆಗಳು ನಡೆದವು. ಇಂದು ಬಾಂಗ್ಲಾದೇಶದಲ್ಲಿ ಘಟಿಸುತ್ತಿರುವ ಅಹಿತಕಾರಿ ಬೆಳವಣಿಗೆಗಳು ಮತ್ತವುಗಳು ಭಾರತದ ಮುಂದೆ ಒಡ್ಡುತ್ತಿರುವ ಪ್ರಶ್ನೆಗಳಿಂದಾಗಿ ಈ ಸಲದ ವಿಜಯ ಸಂಭ್ರಮಾಚರಣೆ ವಿಶೇಷ ಅರ್ಥವನ್ನು ಪಡೆದುಕೊಂಡಿತ್ತು ಎನ್ನಬಹುದು. ಅದರ ಸಂದೇಶ ‘ಎಲ್ಲಿಗೆ’ ತಲುಪಬೇಕಾಗಿತ್ತೋ ಅಲ್ಲಿಗೆ ತಲುಪಿದ ಬಗ್ಗೆ ಸ್ಪಷ್ಟಮಾಹಿತಿ ಇಲ್ಲ. ಯಾಕೆಂದರೆ ಅದನ್ನು ಹೇಳಬಹುದಾಗಿದ್ದ ಐವತ್ತರಷ್ಟು ಪತ್ರಕರ್ತರ ವೃತ್ತಿ ಪರವಾನಗಿಯನ್ನು ಇಂದು ಢಾಕಾದಲ್ಲಿ ದರ್ಬಾರು ನಡೆಸುತ್ತಿರುವ ಸರ್ಕಾರ ರದ್ದುಮಾಡಿದೆ. ಅಂದರೆ ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ವಿರುದ್ಧ ಭಾರತ ಹೋರಾಡಿತು ಮತ್ತು ಅದಕ್ಕಾಗಿ ತನ್ನ ಸುಮಾರು ಮೂರು ಸಾವಿರ ಸೈನಿಕರನ್ನು ಬಲಿಗೊಟ್ಟಿತು, ಸುಮಾರು ಹನ್ನೆರಡು ಸಾವಿರ ಭಾರತೀಯ ಸೈನಿಕರು ಗಾಯಗೊಂಡರು ಮತ್ತು ಸುಮಾರು ಎರಡು ಸಾವಿರದ ನೂರು ಭಾರತೀಯ ಸೈನಿಕರು ಗುರುತೇ ಇಲ್ಲದಂತೆ ಕಾಣೆಯಾಗಿಹೋದರು ಎನ್ನುವುದನ್ನು ಬಾಂಗ್ಲಾದೇಶೀಯರು ನೆನಪಿಸಿಕೊಳ್ಳುವುದು ಮಹಮದ್ ಯೂನುಸ್ ಸರ್ಕಾರಕ್ಕೆ ಬೇಕಾಗಿಲ್ಲ.
ಇರಲಿ, ಇತಿಹಾಸವನ್ನು ನೆನಪಿಸಿಕೊಳ್ಳದಿರುವುದು, ವರ್ತಮಾನವನ್ನು ನೋಡದಿರುವುದು ಬಾಂಗ್ಲಾದೇಶೀ ಆಳರಸರಿಗೆ ಹೊಸದೇನಲ್ಲ ಬಿಡಿ. ಅದರ ಉದಾಹರಣೆಗಳು ಬಾಂಗ್ಲಾದೇಶ ಉದಯವಾದ ಕೆಲವೇ ವರ್ಷಗಳಿಂದಲೂ ಕಾಣುತ್ತಲೇ ಇವೆ. ಇದು ಯಾವತ್ತೂ ಇದ್ದದ್ದೇ ಬಿಡಿ ಎನಿಸುವಂಥ ದಿನನಿತ್ಯದ ಸಣ್ಣಪುಟ್ಟ ಆಟಗಳನ್ನು ಪಕ್ಕಕ್ಕಿರಿಸಿ, ಐತಿಹಾಸಿಕವಾಗಿ ದಾಖಲಿಸುವಷ್ಟು ದೊಡ್ಡವು ಎನಿಸುವಂತಹವುಗಳಲ್ಲಿ ಕೆಲವನ್ನಷ್ಟೇ ನೋಡುವುದಾದರೆ ಅವುಗಳ ಸರಣಿ 1981ರಲ್ಲಿ ಆರಂಭವಾಗುತ್ತದೆ. ಶೇಖ್ ಮುಜೀಬುರ್ ರಹಮಾನ್ರ ಕಾಲದಲ್ಲೂ ಭಾರತ-ಬಾಂಗ್ಲಾದೇಶ ಸಂಬಂಧಗಳು ಸ್ನೇಹ, ಸದ್ಭಾವನೆಗಳಿಂದ ಕೂಡಿರಲಿಲ್ಲ. ಪರಸ್ಪರ ಗಡಿಗಳನ್ನು ಹೊಂದಿದ ನೆರೆನಾಡುಗಳ ನಡುವೆ ಅಂತಹ ಸುಮಧುರ ಸಂಬಂಧಗಳು ಇರಲು ಸಾಧ್ಯವೂ ಇಲ್ಲ. ಸಣ್ಣಪುಟ್ಟ ಕಿರಿಕಿರಿಗಳು ತಲೆಯೆತ್ತುತ್ತಲೇ ಇರುತ್ತವೆ. ಆದರೆ ಅವುಗಳನ್ನು ಸರ್ಕಾರಗಳು ಹೇಗೆ ನಿಭಾಯಿಸಿಕೊಂಡು ಹೋಗುತ್ತವೆ ಎನ್ನುವುದು ಮುಖ್ಯ. ಅದರಲ್ಲಿ ಹೊಂದಾಣಿಕೆ ಹಾಗೂ ಕೊಡುಕೊಳ್ಳುವಿಕೆಯಂಥ ಪ್ರಬುದ್ಧ ನಡವಳಿಕೆಗಳು ಮತ್ತು ನಷ್ಟಕ್ಕಿಂತ ಲಾಭ ತುಸುವೇ ಹೆಚ್ಚಿಗೆ ಕಂಡರೆ ಆ ಹಾದಿಯಲ್ಲಿ ಸಾಗುವುದು ವಿಹಿತ ಎಂಬ ಜಾಣತನ ಸಂಬಂಧಗಳಲ್ಲಿ ಉಂಟಾಗುವ ತೊಡಕುಗಳ ನಿವಾರಣೆಗೆ ಅತ್ಯಗತ್ಯ.
ಅಂತಹ ಮನೋಭಾವ ಮುಜೀಬ್ ಅವರಲ್ಲಿತ್ತು. ಮತ್ತದಕ್ಕೆ ಇಂದಿರಾ ಗಾಂಧಿ ಸಕಾರಾತ್ಮವಾಗಿಯೇ ಸ್ಪಂದಿಸುತ್ತಿದ್ದ ಕಾರಣ ಸಮಸ್ಯೆಗಳು ಉಲ್ಬಣಗೊಳ್ಳದೆ ದಿನಗಳು ಸರಿಯುತ್ತಿದ್ದವು. ಆದರೆ, 1975ರ ಆಗಸ್ಟ್ 15ರಂದು ಮುಜೀಬ್ ಹತ್ಯೆಯಾದ ಮೇಲೆ ಪರಿಸ್ಥಿತಿ ಬದಲಾಗತೊಡಗಿತು. ಪ್ರಭಾವಶಾಲಿ ಅಲಿಪ್ತ ದೇಶವಾಗಿದ್ದ ಭಾರತ ಹಾಗೂ ಶೀತಲಸಮರದಲ್ಲಿ ತನ್ನ ವಿರೋಧಿಯಾಗಿದ್ದ ಸೋವಿಯತ್ ಯೂನಿಯನ್ನೊಂದಿಗೆ ಮುಜೀಬ್ ಒಳ್ಳೆಯ ಸಂಬಂಧಗಳನ್ನು ಹೊಂದಿದ್ದುದು ಅಮೆರಿಕದ ಕಣ್ಣಿಗೆ ಸಹಜವಾಗಿಯೇ ಕಿಸುರಾಗಿತ್ತು ಮತ್ತು ಮುಜೀಬ್ರನ್ನು ನಿವಾರಿಸಿಕೊಳ್ಳುವುದು ತನ್ನ ಶೀತಲಸಮರ ರಾಜಕಾರಣಕ್ಕೆ ಅಗತ್ಯ ಎಂದು ಆ ದೇಶ ತಿಳಿಯಿತು. ಆದರೆ ಅದರೊಂದಿಗೆ ಕೈಗೂಡಿಸಲು ಬಾಂಗ್ಲಾದೇಶೀ ಸೇನೆಯ ಪ್ರಮುಖರೇ ತಯಾರಾದದ್ದು ಮಾತ್ರ ಅಚ್ಚರಿಯ ಬೆಳವಣಿಗೆ. ಅಂದು ಬಾಂಗ್ಲಾದೇಶೀ ಸೇನೆಯೆಂದರೆ ಮುಜೀಬ್ರ ಅವಾಮಿ ಲೀಗ್ನ ಸೇನಾ ಅಂಗ ಮುಕ್ತಿಬಾಹಿನಿಯ ಮುಂದುರಿದ ರೂಪವೇ. 1971ರ ಯುದ್ಧದಲ್ಲಿ ಭಾರತೀಯ ಸೇನೆ ಮತ್ತು ಮುಕ್ತಿಬಾಹಿನಿ ಜಂಟಿಯಾಗಿ ಅಮೆರಿಕ ಮತ್ತು ಚೀನಾ ಸಮರ್ಥಿತ ಪಾಕ್ ಸೇನೆಯ ವಿರುದ್ಧ ಹೋರಾಡಿದ್ದವು. ಕುಪಿತಗೊಂಡ ಅಮೆರಿಕ ಬಂಗಾಲ ಕೊಲ್ಲಿಗೆ ತನ್ನ ಬೃಹತ್ ನೌಕಾಪಡೆ ‘ಸೆನೆನ್ತ್ ಫ್ಳೀಟ್’ ಕಳುಹಿಸಿ ಭಾರತವನ್ನು ಹೆದರಿಸಲು ನೋಡಿತ್ತು.
ಹೀಗೆ ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಭಾರತದ ಮೇಲೆ ದಾಳಿಯೆಸಗಲು, ಆ ಮೂಲಕ ತಮ್ಮ ದೇಶದ ಹುಟ್ಟನ್ನೇ ತಡೆಯಲು ಇದೇ ಅಮೆರಿಕ ಪ್ರಯತ್ನಿಸಿತ್ತು ಎನ್ನುವುದನ್ನು ಬಾಂಗ್ಲಾದೇಶೀ ಸೇನೆಯ ಅಂದರೆ ಮುಕ್ತಿಬಾಹಿನಿಯ ಪ್ರಮುಖರು ಅದು ಹೇಗೆ ತಾನೆ ಮರೆತು ಅಮೆರಿಕದ ಜತೆ ಕೈಜೋಡಿಸಿದರು! ಅಷ್ಟೇ ಅಲ್ಲ, ಮುಜೀಬ್ ಹತ್ಯೆಗೆ ಪ್ರತಿಯಾಗಿ ಭಾರತ ಆಕ್ರಮಣವೆಸಗುತ್ತದೆ ಎಂದು ನಿರೀಕ್ಷಿಸಿ ಅದನ್ನು ‘ಸಮರ್ಥವಾಗಿ’ ಎದುರಿಸಲು ಬಾಂಗ್ಲಾ ಸೇನಾಪ್ರಮುಖರು ತಯಾರಿಯನ್ನೂ ಮಾಡಿಕೊಂಡಿದ್ದರಂತೆ! ಇನ್ನೊಂದು ಅಚ್ಚರಿಯ ಅಷ್ಟೇ ತಮಾಷೆಯ ವಿಷಯ ಕೇಳಿ. ಬಾಂಗ್ಲಾದೇಶದ ಕಮ್ಯೂನಿಸ್ಟ್ ಪಕ್ಷವೂ ಅಂದು ಅಮೆರಿಕದ ಜಗತ್ಕಂಟಕ ಬೇಹುಗಾರಿಕಾ ಸಂಸ್ಥೆ ‘ಸಿಐಎ’ಯಿಂದ ಹಣ ತೆಗೆದುಕೊಳ್ಳುತ್ತಿತ್ತಂತೆ! ಅಮೆರಿಕದ ಮಗ್ಗುಲಿಗೆ ಸರಿದ ಬಾಂಗ್ಲಾದೇಶೀಯರು ಪಾಕಿಸ್ತಾನವನ್ನು ಮರೆತರೇ ಎಂದು ಕೇಳಬೇಡಿ. ಭೀಕರ ಹತ್ಯಾಕಾಂಡ, ಯುದ್ಧ ಎಲ್ಲವನ್ನೂ ಮರೆತು ಅದೇ ಪಾಕಿಸ್ತಾನವನ್ನು ಬಾಂಗ್ಲಾ ಸೇನಾಪ್ರಮುಖರು ಅಪ್ಪಿಕೊಂಡರು. ಅವರ ಭಾರತ-ಪ್ರೀತಿ ಕ್ಷಣಿಕವಾಗಿತ್ತು, ಸ್ವಾರ್ಥಕ್ಕಾಗಿ ಹಿಡಿದ ಅನುಕೂಲಸಿಂಧು ಮಾರ್ಗವಾಗಿತ್ತು.
ಮುಜೀಬ್ ಹತ್ಯೆಯ ತರುವಾಯ ಢಾಕಾದಲ್ಲಿ ಕ್ಷಿಪ್ರಕಾಲಾವಧಿಯಲ್ಲಿ ಬಂದುಹೋದ ಮೂರು ಸರ್ಕಾರಗಳ ಬಗ್ಗೆ ಹೆಚ್ಚೇನೂ ಹೇಳುವುದು ಬೇಡ. ಅವುಗಳ ನಂತರ ಬಂದ ಜನರಲ್ ಜಿಯಾ-ಉರ್-ರಹಮಾನ್ ಸೇನಾಸರ್ಕಾರ ತನ್ನ ವಿರುದ್ಧದ ಜನವಿರೋಧವನ್ನು ಭಾರತ-ದ್ವೇಷವನ್ನಾಗಿ ಪರಿವರ್ತಿಸಿ ಆ ಮೂಲಕ ತನ್ನ ಅಧಿಕಾರವನ್ನು ಬಲಪಡಿಸಿಕೊಳ್ಳಲು ಮತ್ತೆಮತ್ತೆ ಹೆಣಗಿತು. ಜನರಲ್ ಜಿಯಾ ತಮ್ಮ ಬದುಕಿನ ಅಂತ್ಯದವರೆಗೂ ಅದರಲ್ಲೇ ತೊಡಗಿದ್ದರು. ಅವರ ಕೊನೆಯ ‘ಆಟ’ವನ್ನಷ್ಟೇ ಇಲ್ಲಿ ಹೇಳುತ್ತೇನೆ. ಮುಜೀಬ್ ಹತ್ಯೆಯಾದಾಗ ದೆಹಲಿಯಲ್ಲಿದ್ದು ಬದುಕಿಕೊಂಡ ಅವರ ಹಿರಿಯ ಮಗಳು ಶೇಖ್ ಹಸೀನಾ ಆರುವರ್ಷಗಳ ನಂತರ 1981ರಲ್ಲಿ ಸ್ವದೇಶಕ್ಕೆ ಹಿಂತಿರುಗಲು ಮನಸ್ಸುಮಾಡಿದಾಗ ಆಕೆಯ ಜನಪ್ರಿಯತೆಗೆ ಹೆದರಿದ ಜಿಯಾ ಸಾಹೇಬರು ಹೂಡಿದ ಹೂಟ ಸ್ವಾರಸ್ಯಕರ. ಗಡಿನದಿಯಾದ ಹರಿಯೂಬಂಗಾ ಬಂಗಾಳ ಕೊಲ್ಲಿ ಸೇರುವೆಡೆ 1970ರ ದಶಕದ ಆದಿಯಲ್ಲಿ ಪುಟಾಣಿ ದ್ವೀಪವೊಂದು ಉದ್ಭವಿಸಿತ್ತು.
ನ್ಯೂ ಮೂರ್ ಎಂದು ಹೆಸರಿಸಲಾದ ಆ ದ್ವೀಪ ಭಾರತದ ತೀರಕ್ಕೆ ಹತ್ತಿರವಾಗಿತ್ತು. ಜತೆಗೆ ಅದನ್ನು ಮೊದಲು ಕಂಡು ಭಾರತೀಯ ನೌಕಾದಳ ಅಲ್ಲಿ ತ್ರಿವರ್ಣವನ್ನೂ ನೆಟ್ಟಿತ್ತು. ಹೊಸ ನೆಲ ಮೊದಲು ಕಂಡು ಬಾವುಟ ಹಾರಿಸಿದವರದ್ದೇ ಎಂಬ ಅಂತಾರಾಷ್ಟ್ರೀಯ ಕಾನೂನು ಹಾಗೂ ಭೌಗೋಳಿಕ ಆಧಾರಗಳೆರಡೂ ನ್ಯೂ ಮೂರ್ ದ್ವೀಪವನ್ನು ಭಾರತದ್ದಾಗಿಸಿದ್ದವು. ಆದರೆ ಜಿಯಾ ಸಾಹೇಬರು ಅದಕ್ಕೆ ‘ಸೌತ್ ತಾಲ್ಪಟ್ಟಿ’ ಎಂಬ ಹೆಸರಿಟ್ಟು, ಅದು ಬಾಂಗ್ಲಾದೇಶದ ಭಾಗವೆಂದೂ, ಭಾರತ ಅದನ್ನು ಆಕ್ರಮಿಸಿಕೊಂಡಿದೆಯೆಂದೂ ಹೇಳತೊಡಗಿದರು. ಮುಂದುವರಿದು ಅವರು, ಬಾಂಗ್ಲಾದೇಶೀ ನೆಲವನ್ನು ಆಕ್ರಮಿಸಿಕೊಂಡಿರುವ ಭಾರತದಲ್ಲಿರುವ ಶೇಖ್ ಹಸೀನಾ ‘ಭಾರತದ ಮಿತ್ರೆ, ಬಾಂಗ್ಲಾದೇಶದ ಶತ್ರು’ ಎಂದು ಹುಯಿಲೆಬ್ಬಿಸಿದರು ಮತ್ತು ಆ ಕಾರಣಕ್ಕಾಗಿ ಅವರನ್ನು ವಿರೋಧಿಸಿ ಎಂದು ಬಾಂಗ್ಲಾದೇಶೀಯರನ್ನು ಪ್ರಚೋದಿಸಿದರು! ಹಸೀನಾರನ್ನು ದೂರದಲ್ಲೇ ಇಡಲು ಜಿಯಾರಿಗೆ ಭಾರತ-ದ್ವೇಷ ಹೀಗೆ ಒಂದು ಹೆಣೆಯಾಯಿತು.
1981ರ ಮೇನಲ್ಲಿ ಜಿಯಾ ಹತ್ಯೆಯಾಗಿ ಏಳೆಂಟು ತಿಂಗಳ ಗೊಂದಲಮಯ ಸ್ಥಿತಿಯ ನಂತರ ಅಧಿಕಾರ ಹಿಡಿದ ಜನರಲ್ ಮಹಮದ್ ಎರ್ಷಾದ್ರ ಭಾರತ-ದ್ವೇಷ ಇನ್ನೊಂದು ಮಜಲಿನದು. ಅಂದು ಹೀನಾಯ ಆರ್ಥಿಕ ಸ್ಥಿತಿ ಹಾಗೂ ವೇಗವಾಗಿ ಏರುತ್ತಿದ್ದ ಜನಸಂಖ್ಯೆಯಿಂದಾಗಿ ಭಾರತಕ್ಕೆ ಬಾಂಗ್ಲಾದೇಶೀಯರ ಅಕ್ರಮ ವಲಸೆಯಲ್ಲಿ ತೀವ್ರತರವಾಗಿ ಹೆಚ್ಚಳವಾಗಿತ್ತು. ಆ ಬಗೆಗಿನ ಸುದ್ದಿವಿವರಗಳನ್ನು ತಳ್ಳಿಹಾಕಿ ಎರ್ಷಾದ್ ಹೇಳಿದ್ದು ಹೀಗೆ- ‘ಸಂಪದ್ಭರಿತ ಬಾಂಗ್ಲಾದೇಶದಲ್ಲಿನ ಸುಖಮಯ ಬದುಕನ್ನು ಬಿಟ್ಟು ಯಾವ ಬಾಂಗ್ಲಾದೇಶೀಯ ಬಡ ಭಾರತಕ್ಕೆ ಹೋಗುತ್ತಾನೆ?’ ಇದನ್ನೊಂದು ನಗೆಚಟಾಕಿಯಾಗಿ ತೆಗೆದುಕೊಂಡ ಇಂದಿರಾ ಸರ್ಕಾರ ಅಕ್ರಮ ವಲಸೆಯನ್ನು ತಡೆಯಲು ಗಡಿಯಲ್ಲಿ ಮುಳ್ಳುತಂತಿಬೇಲಿ ನಿರ್ವಿುಸಲು ಆರಂಭಿಸಿತು. ಆಗ ಎರ್ಷಾದ್ರು ಹೀಗೆ ಕನವರಿಸಿದರು- ‘ಬಾಂಗ್ಲಾದೇಶವನ್ನು ಯಾರೂ ಹೀಗೆ ಮುಳ್ಳುಬೇಲಿಯಿಂದ ಸುತ್ತುವರಿಯಲು ಸಾಧ್ಯವಿಲ್ಲ. ಬಾಂಗ್ಲಾದೇಶ ಒಂದು ಸಾರ್ವಭೌಮ ಸ್ವತಂತ್ರ ರಾಷ್ಟ್ರ’. ಬಾಂಗ್ಲಾದೇಶವನ್ನು ಒಂದು ಸಾರ್ವಭೌಮ ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಿದ್ದು ಯಾರು ಎಂದು ಆ ಮಾಜಿ ಮುಕ್ತಿಬಾಹಿನಿಗನಿಗೆ ಮರೆತುಹೋಗಿದ್ದಿರಬೇಕು.
ಎರ್ಷಾದ್ 1991ರಲ್ಲಿ ಅಧಿಕಾರದಿಂದ ಇಳಿದ ನಂತರ ಚುನಾವಣೆ ಮೂಲಕ ಪ್ರಧಾನಮಂತ್ರಿಯಾದ ಜಿಯಾ-ಉರ್-ರಹಮಾನ್ರ ಪತ್ನಿ ಖಲೀದಾ ಜಿಯಾ 1991-96ರ ತಮ್ಮ ಮೊದಲ ಅವಧಿಯಲ್ಲಿ ಬಾಂಗ್ಲಾದೇಶವನ್ನು ಭಾರತದಿಂದ ದೂರ ಒಯ್ದು ಪಾಕಿಸ್ತಾನಕ್ಕೆ ಹತ್ತಿರವಾಗಿಸಿದರು, 2001-06ರ ಎರಡನೆಯ ಅವಧಿಯಲ್ಲಿ ಅಲ್-ಖೈದಾಗೆ ಬಾಂಗ್ಲಾದೇಶದಲ್ಲಿ ರಹಸ್ಯವಾಗಿ ನೆಲೆಯೊದಗಿಸಿದರು. ಈ ಅನರ್ಥಕಾರಿ ನಡೆಗಳ ಅತಿರೇಕದ ಪರಿಣಾಮಗಳಲ್ಲಿ ಎರಡನ್ನು ಹೇಳಬೇಕು. ಒಂದು- 2001ರಲ್ಲಿ ಬಾಂಗ್ಲಾದೇಶಿ ಸೈನಿಕರು ಮೇಘಾಲಯ ಗಡಿಯ ಫಿರ್ದಿವಾದಲ್ಲಿ ಭಾರತೀಯ ಸೈನಿಕ ರಾಮ್ ನಾಯಕ್ರನ್ನು ಕೊಂದು, ಅವರ ಮೃತಶರೀರವನ್ನು ಕೋಲಿಗೆ ಕಟ್ಟಿ ಹೊತ್ತು ನಡೆದರು, ಎರಡು- 2006ರ ಆಗಸ್ಟ್ 15ರಂದು ಬಾಂಗ್ಲಾದೇಶದ 64 ಜಿಲ್ಲೆಗಳಲ್ಲಿ ಒಂದರ ಹೊರತಾಗಿ ಉಳಿದೆಲ್ಲೆಡೆ ಬಾಂಬ್ಗಳು ಸಿಡಿದವು.
ಖಲೀದಾ ಜಿಯಾರ ಎರಡು ಅವಧಿಗಳ ನಡುವೆ ಬಂದ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಶೇಖ್ ಹಸೀನಾ ಭಾರತದೊಂದಿಗೆ ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಲು ಕ್ರಮ ಕೈಗೊಂಡರು. ದೇವೇಗೌಡ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಗಂಗಾನದಿನೀರು ವಿವಾದವನ್ನು ಬಗೆಹರಿಸಿದ್ದು ಅವುಗಳಲ್ಲೊಂದು. ನಂತರ 2009ರಿಂದ ಈ ವರ್ಷದವರೆಗೆ ತಮ್ಮ ಮೂರು ಅವಧಿಗಳಲ್ಲಿ ಹಸೀನಾ ಭಾರತ ಹಾಗೂ ಚೀನಾಗಳೆರಡರ ಜತೆಗಿನ ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಂಡು ಅದು ಬಾಂಗ್ಲಾದೇಶಕ್ಕೆ ಒಳಿತಾಗುವಂತೆ ಮಾಡಿದರು. ಪರಿಣಾಮವಾಗಿ ಬಾಂಗ್ಲಾದೇಶ ಜಾಗತಿಕವಾಗಿ ಸಿದ್ಧ ಉಡುಪುಗಳ ಎರಡನೆಯ ಅತಿದೊಡ್ಡ ನಿರ್ಯಾತಕ ದೇಶವಾಗಿ ಬೆಳೆದುನಿಂತಿತು. ಅದರ ವಾರ್ಷಿಕ ಜಿಡಿಪಿ ಪಾಕಿಸ್ತಾನವನ್ನು ಹಿಂದೆ ಹಾಕಿ 400 ಬಿಲಿಯನ್ ಡಾಲರ್ಗಳನ್ನೂ ದಾಟಿದರೆ, ಬಾಂಗ್ಲಾದೇಶೀಯರ ತಲಾ ವರಮಾನ ಭಾರತೀಯರದನ್ನೂ ದಾಟಿತು! ಬಾಂಗ್ಲಾದೇಶ 1971ರ ಕನಸು ‘ಸೋನಾರ್ ಬಾಂಗ್ಲಾ’ ಆಗುವ ಹಾದಿಯಲ್ಲಿ ಕೊನಗೂ ದೃಢ ಹೆಜ್ಜೆಗಳನ್ನಿಟ್ಟಿತು.
ಜತೆಗೆ ದೇಶದಲ್ಲಿ ಕೋಮು ಸೌಹಾರ್ದತೆಗಾಗಿಯೂ ಹಸೀನಾ ಶಕ್ತಿಮೀರಿ ಶ್ರಮಿಸಿದರು. ವ್ಯಾಪಕ ಹಿಂದೂ-ದ್ವೇಷ, ಕೋಮು ಹಿಂಸಾಚಾರವಿದ್ದು ಪಾಕಿಸ್ತಾನಕ್ಕಾಗಿ ಬೇಡಿಕೆ ಉಗ್ರವಾಗಿದ್ದರೂ 1947ರಲ್ಲಿ ಪೂರ್ವ ಪಾಕಿಸ್ತಾನದ ಜನಸಂಖ್ಯೆಯಲ್ಲಿ 28% ಹಿಂದೂಗಳಿದ್ದರು. ನಂತರ ಪೂರ್ವ ಪಾಕಿಸ್ತಾನೀಯರ ಆಕ್ರೋಶ ಪಶ್ಚಿಮ ಪಾಕಿಸ್ತಾನೀಯರತ್ತ ತಿರುಗಿದ್ದರಿಂದ ಹಿಂದೂಗಳು ಹೆಚ್ಚುಕಡಿಮೆ ನೆಮ್ಮದಿಯಾಗಿಯೇ ಇರುವಂಥ ಸ್ಥಿತಿ ನಿರ್ವಣವಾಯಿತು. 1964ರಲ್ಲಿ ಹಿಂದೂ-ವಿರೋಧಿ ಹಿಂಸಾಚಾರ ದೊಡ್ಡ ಪ್ರಮಾಣದಲ್ಲಿ ಘಟಿಸಿದರೂ ಹಿಂದೂಗಳು ಅಧಿಕ ಸಂಖ್ಯೆಯಲ್ಲಿ ದೇಶ ತೊರೆಯುವ ಸ್ಥಿತಿ ಉಂಟಾಗಲಿಲ್ಲ. ಪರಿಣಾಮವಾಗಿ 1971ರಲ್ಲಿ ಬಾಂಗ್ಲಾದೇಶ ನಿರ್ವಣವಾದಾಗ ಅಲ್ಲಿನ ಜನಸಂಖ್ಯೆಯ 22% ಹಿಂದೂಗಳಾಗಿದ್ದರು. ಆದರೆ ಒಮ್ಮೆ ಸ್ವತಂತ್ರಗೊಂಡು ಪಶ್ಚಿಮ ಪಾಕಿಸ್ತಾನೀಯರ ತಂಟೆ ತಪ್ಪಿದೊಡನೇ ಬಂಗಾಳಿ ಮುಸ್ಲಿಮರ ದ್ವೇಷ ‘ಮತ್ತೆ’ ಹಿಂದೂಗಳತ್ತ ತಿರುಗಿತು.
ಹಿಂದೂಗಳ ಜಮೀನುಗಳನ್ನು ಕಬಳಿಸುವಂಥ ಕೃತ್ಯಗಳು ವ್ಯಾಪಕವಾಗತೊಡಗಿ ಅವರ ಆರ್ಥಿಕ ಸ್ಥಿತಿ ಕುಸಿಯತೊಡಗಿತು. ಪರಿಣಾಮವಾಗಿ ಇಂದು ಅಲ್ಲಿ ಹಿಂದೂಗಳು 7.95%ಗಿಳಿದಿದ್ದಾರೆ, ಒಟ್ಟಾರೆ 17 ಕೋಟಿ ಜನಸಂಖ್ಯೆಯಲ್ಲಿ ಒಂದು ಕೋಟಿ ಮೂವತ್ತೊಂದು ಲಕ್ಷದಷ್ಟು ಹಿಂದೂಗಳಿದ್ದಾರೆ. ಅವರ ಮೇಲೆ ದೌರ್ಜನ್ಯ, ಮತಾಂತರ, ಆಸ್ತಿಪಾಸ್ತಿಗಳ ಲೂಟಿ ಆಗುತ್ತಲೇ ಇರುತ್ತವೆ. ತಮ್ಮ ಅಧಿಕಾರಾವಧಿಯಲ್ಲಿ ಹಸೀನಾ ಹಿಂದೂಗಳ ಸುರಕ್ಷೆಗೆ ಹೆಚ್ಚಿನ ಗಮನ ನೀಡಿದ್ದರು. 2021ರ ದುರ್ಗಾಪೂಜೆ ಸಂದರ್ಭದಲ್ಲಿ ಹಿಂದೂಗಳ ಮೇಲೆ ವ್ಯಾಪಕ ಹಿಂಸಾಚಾರ ಜರುಗಿದಾಗ ಹಸೀನಾ ಸಿಡಿದೆದ್ದರು. ನೊಂದ ಹಿಂದೂಗಳ ಪರವಾಗಿ ಮಾತಾಡುತ್ತ, ‘ಇದು ನಿಮ್ಮ ನೆಲ, ನೀವು ಇಲ್ಲಿಂದ ಹೋಗುವ ಪ್ರಶ್ನೆಯೇ ಇಲ್ಲ’ ಎಂದು ಘೊಷಿಸಿದರು. ಅವರು ಹಿಂದೂಗಳಿಗೆ ಆಶ್ವಾಸನೆ ನೀಡುವ ಉದ್ದೇಶದಿಂದ ಹಿಂದೂ ಶಕ್ತಿಪೀಠಗಳಲ್ಲೊಂದಾದ, ರಾಜಧಾನಿ ಢಾಕಾ ನಗರಕ್ಕೆ ಹೆಸರು ನೀಡಿದ ಢಾಕೇಶ್ವರಿ ಮಂದಿರದಲ್ಲಿ ದುರ್ಗಾಪೂಜೆಯಲ್ಲಿ ಖುದ್ದಾಗಿ ಭಾಗವಹಿಸಿದರು. ಅವರ ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ ಹಿಂಸಾಚಾರ ತಹಬಂದಿಗೆ ಬಂದು ಪರಿಸ್ಥಿತಿ ಶಾಂತವಾಯಿತು.
ಆದರೀಗ ರಾಷ್ಟ್ರೀಯ ರಾಜಕಾರಣದಲ್ಲಿ ಮತೀಯವಾದಿಗಳೇ ಮುನ್ನೆಲೆಯಲ್ಲಿ ಇರುವುದರಿಂದ ಹಾಗೂ ಹಿಂದೂಗಳೆಂದರೆ ಶೇಖ್ ಹಸೀನಾ ಬೆಂಬಲಿಗರು ಎಂಬ ಅಭಿಪ್ರಾಯ ಉದ್ದೇಶಪೂರ್ವಕವಾಗಿ ಬಿತ್ತಲ್ಪಟ್ಟಿರುವುದರಿಂದ ಅವರ ಮೇಲೆ ದೌರ್ಜನ್ಯ ಯಾವುದೇ ತಡೆಯಿಲ್ಲದೆ ನಡೆಯುತ್ತಿದೆ. ದುರಂತವೆಂದರೆ ಮಹಮದ್ ಯೂನುಸ್ ಸರ್ಕಾರ ಅತ್ಯಾಚಾರಿಗಳ ಪರವಾಗಿಯೇ ನಿಂತಿದೆ! ಇದೆಲ್ಲದರ ಒಟ್ಟು ಪರಿಣಾಮ ಒಂದು ಋಣಾತ್ಮಕ ಸರಪಳಿ ಕ್ರಿಯೆಯಂತೆ ಸಾಗುತ್ತಿದೆ. ದೇಶಾದ್ಯಂತ ಅಶಾಂತಿ, ಆರ್ಥಿಕ ಚಟುವಟಿಗಳಿಗೆ ತಡೆ, ನಿರುದ್ಯೋಗ ದಿಂದಾಗಿ ಜನರ ವರಮಾನ ಕುಸಿತ ಮತ್ತು ಉತ್ಪಾದನೆಯಲ್ಲಿ ಕುಸಿತದಿಂದಾಗಿ ರಫ್ತು ತಗ್ಗಿ ವಿದೇಶಿ ವಿನಿಮಯದಲ್ಲೂ ದಾಖಲೆಯ ಕುಸಿತ, ಪರಿಣಾಮವಾಗಿ ಯೂನುಸ್ ಸರ್ಕಾರದತ್ತ ತಿರುಗಿದ ಜನಾಕ್ರೋಶ, ಅದರಿಂದ ಪಾರಾಗಲು ಭಾರತದತ್ತ ಸರ್ಕಾರದ ಕೆಸರೆರಚಾಟ! ಐದು ತಿಂಗಳುಗಳಿಗೂ ಕಡಿಮೆ ಅವಧಿಯಲ್ಲಿ ಬಾಂಗ್ಲಾದೇಶ ಇಳಿದ ಪ್ರಪಾತ ಇದು. ಸಾಲದೆಂಬಂತೆ ಅತ್ತ ಆಗ್ನೇಯ ಗಡಿಯಲ್ಲಿ ಒಳನುಗ್ಗುತ್ತಿರುವ ಬೌದ್ಧ ಅರಕಾನ್ ಸೇನೆ! ಇದೆಲ್ಲದರ ಪರಿಣಾಮ ಭಾರತದ ಮೇಲೆ ಸಹಜವಾಗಿಯೇ ಅಪಾರ, ನವದೆಹಲಿಗೆ ತಲೆಬೇನೆಗಳ ಜತೆ ಬಾಯಲ್ಲಿ ನೀರೂರಿಸುವ ಅವಕಾಶಗಳೂ ಸಹ. ಇದನ್ನು ಮುಂದಿನವಾರ ವಿಶ್ಲೇಷಿಸೋಣ.