ಅಂಕಣ

ಮಕ್ಕಳ ದೈಹಿಕ, ಮಾನಸಿಕ ಸ್ವಾಸ್ಥ್ಯದತ್ತ ಗಮನ ಕೊಡಬೇಕಾದ ಕಾಲ; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ

ಕಳೆದ ಎರಡು ವರ್ಷದಿಂದ ಕರೊನಾ ಕೋಲಾಹಲದಿಂದ ದೊಡ್ಡವರ ಬದುಕು ಅಷ್ಟೇ ಅಲ್ಲ ಮಕ್ಕಳ ಭವಿಷ್ಯವೂ ಮೂರಾಬಟ್ಟೆಯಾಗಿದೆ. ಇದು ನಿಜವಾಗಿಯೂ ಚಿಂತಾಜನಕ ವಿಚಾರ. ಆದರೆ ನಾವು ಚಿಂತೆ ಬದಿಗಿಟ್ಟು ಚಿಂತನೆ ಮಾಡಿ ಮಕ್ಕಳ ಸಮಗ್ರ ಆರೋಗ್ಯ ಕಡೆಗೆ ಗಮನ ಕೊಡಬೇಕಾಗಿದೆ. ಇಂಥ ಸಮಯದಲ್ಲಿ ಸರ್ಕಾರ, ಸಮಾಜ, ಪಾಲಕರು ಸಕಾರಾತ್ಮಕವಾಗಿ ಚಿಂತನೆ ಮಾಡಿ ಮಕ್ಕಳ ಭವ್ಯ ಭವಿಷ್ಯ ಭದ್ರಪಡಿಸಲು ತಮ್ಮ ದೃಷ್ಟಿಕೋನ ಬದಲಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ನಮ್ಮಲ್ಲಿಯ ಜ್ಞಾನ, ವಿಜ್ಞಾನ, ತತ್ತ್ವಜ್ಞಾನ ವೃದ್ಧಿಯಾಗಬೇಕು.

ಕಾಯಿಲೆಯಿಂದ ರಕ್ಷಿಸಿ: ಚಳಿಗಾಲ ಮತ್ತು ಮಳೆಗಾಲದಲ್ಲಿ ವೈರಾಣು ಮತ್ತು ರೋಗಾಣುಗಳ ಸಂಖ್ಯೆ ಹೆಚ್ಚಾಗಿ ಮಕ್ಕಳಿಗೆ ನೆಗಡಿ, ಕೆಮ್ಮು, ಜ್ವರ, ಫ್ಲೂ, ಬ್ರಾಂಕೈಟಿಸ್ ನ್ಯುಮೊನಿಯಾ ಹೆಚ್ಚುತ್ತದೆ. ಇದಕ್ಕೆ ಕಾರಣ ಡ್ರಾಪ್​ಲೆಟ್ ಇನ್ಪೆಕ್ಷನ್ ಅಂದರೆ ಸೋಂಕಿತರ ಮೂಗು ಮತ್ತು ಬಾಯಿಯಿಂದ ಹೊರಹೊಮ್ಮುವ ದ್ರವದ ಹನಿಗಳು. ಆ ಹನಿಗಳಲ್ಲಿ ಕೋಟ್ಯಂತರ ವೈರಾಣುಗಳಿರುತ್ತವೆ (ವಿಜ್ಞಾನದ ಪ್ರಕಾರ ಯಾವುದೇ ವ್ಯಕ್ತಿ ಕೆಮ್ಮಿದಾಗ ಅವರಿಂದ ಸುಮಾರು 100 ಕಿ.ಮೀ. ಗಂಟೆ ವೇಗದಲ್ಲಿ ಹಾಗೂ ಸೀನಿದಾಗ 166 ಕಿ.ಮೀ/ಗಂಟೆಗೆ ವೇಗದಲ್ಲಿ ವೈರಾಣು ಹೊರಹೊಮ್ಮುತ್ತದೆ). ಹೀಗೆ ಸೋಂಕಿತರ ವ್ಯಕ್ತಿಯ ಮೂಗು ಮತ್ತು ಬಾಯಿಯಿಂದ ಹೊರಹೊಮ್ಮುವ ವೈರಾಣು ಎದುರಿನ ವ್ಯಕ್ತಿಯ ದೇಹ ಸೇರಿದರೆ ಅವರಿಗೂ ಸೋಂಕು ಹರಡುತ್ತದೆ. ಇದೇ ರೀತಿ ಕೋವಿಡ್ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿರುವುದರಿಂದ ನಾವಿಂದು ಮುಖಕ್ಕೆ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ.

ಹಿಂದೆಲ್ಲ ಯಾರಾದರೂ ಸೀನಿದರೆ ಒಮ್ಮೆಗೆ ‘ಶತಾಯುಷಿ’, ಎರಡು ಸಲ ಸೀನಿದರೆ ‘ಭದ್ರಾಯುಷಿ’ ಎಂದು ಹೇಳುತ್ತಿದ್ದರು. ಸೀನುವುದರಿಂದ ಮೂಗಿನಲ್ಲಿರುವ ಬೇಡದ ವೈರಾಣು, ರೋಗಾಣು, ಪರಾಗ ಕಣಗಳು ಹೊರಹೊಮ್ಮುತ್ತವೆ. ಆದರೆ ಹಾಗೆ ಹೊರಹೊಮ್ಮಿದ ವೈರಾಣು ಮತ್ತೊಬ್ಬರ ದೇಹ ಸೇರಿದರೆ ಅವರಿಗೂ ಸೋಂಕು ತಗಲುತ್ತದೆ. ಹಾಗಾಗಿ ಮಕ್ಕಳು ಮೊದಲು ಮಾಡಬೇಕಾದ ಉಪಾಯವೆಂದರೆ ಮಾಸ್ಕ್ ಧರಿಸುವ ಮೂಲಕ ವೈರಾಣು ದೇಹ ಸೇರದಂತೆ ಎಚ್ಚರವಹಿಸಬೇಕು. ಪರಸ್ಪರ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಈ ಬಗ್ಗೆ ಪಾಲಕರು ಮಕ್ಕಳಲ್ಲಿ ಅರಿವು ಮೂಡಿಸಬೇಕು.

ಸ್ವಚ್ಛತೆ ಕಡೆಗೆ ಇರಲಿ ಗಮನ: ಮಕ್ಕಳು ಆರೋಗ್ಯವಾಗಿರಲು ಕೈ ಮತ್ತು ಬಾಯಿ ಶುದ್ಧವಾಗಿಟ್ಟುಕೊಳ್ಳುವುದು ಮುಖ್ಯ. ಬಹಳಷ್ಟು ಮಕ್ಕಳಿಗೆ ಬೆರಳನ್ನು ಬಾಯಿ, ಮೂಗಿನಲ್ಲಿ ಹಾಕಿಕೊಳ್ಳುವ ಅಭ್ಯಾಸ ಇರುತ್ತದೆ. ಇದರಿಂದ ಕೈಗೆ ಅಂಟಿದ ವೈರಾಣು ಬಾಯಿ ಹಾಗೂ ಮೂಗಿನ ಮೂಲಕ ದೇಹ ಸೇರುತ್ತದೆ. ಇದರಿಂದ ಮಕ್ಕಳಿಗೆ ವಾಂತಿ, ಭೇದಿ, ಹೊಟ್ಟೆನೋವು, ಜ್ವರ ಇತ್ಯಾದಿ ಕಾಯಿಲೆಗಳು ಬಾಧಿಸುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಮಕ್ಕಳಿಗೆ ತಿಳಿ ಹೇಳುವ ಅಗತ್ಯವಿದೆ.

ಮಕ್ಕಳಿಗೆ ಬೆಳಗ್ಗೆ ಎದ್ದ ಕೂಡಲೇ ಹಾಗೂ ರಾತ್ರಿ ಮಲಗುವ ಮುನ್ನ ಹಲ್ಲು ಉಜ್ಜುವುದು, ಮುಖ ತೊಳೆದುಕೊಳ್ಳುವುದು, ವ್ಯಾಯಾಮ ಮಾಡುವುದು, ನಂತರ ಸ್ನಾನ, ಶುದ್ಧ ಹಾಗೂ ಆರೋಗ್ಯಕರ ಆಹಾರ ಸೇವನೆ, ಬೆರಳುಗಳಲ್ಲಿ ಉಗುರು ಬೆಳೆಯದಂತೆ ನೋಡಿಕೊಳ್ಳುವುದು, ಕೈಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳುವುದು, ಹೊರಗಿನಿಂದ ಮನೆಗೆ ಬಂದ ಕೂಡಲೇ ಕೈ ಕಾಲುಗಳನ್ನು ತೊಳೆಯುವುದು ಸೇರಿದಂತೆ ಆರೋಗ್ಯಕರ ಚಟುವಟಿಕೆಗಳನ್ನು ಬಾಲ್ಯದಿಂದಲೇ ಕಲಿಸಬೇಕು. ಇದರಿಂದ ಮಕ್ಕಳು ಆರೋಗ್ಯವಂತರಾಗಿರಲು ಸಾಧ್ಯ. ಸ್ನೇಹಿತರು ಯಾರೇ ಸಿಕ್ಕರು ಅವರಿಗೆ ಶೇಕ್​ಹ್ಯಾಂಡ್ ಮಾಡುವ ಇಲ್ಲವೆ ಹೈ-ಫೈ ಕೊಡುವ ಬದಲು ಎರಡು ಕೈಗಳಿಂದ ನಮಸ್ಕಾರ ಮಾಡುವುದುನ್ನು ಕಲಿಸಬೇಕು. ಕೋವಿಡ್ ನಂತರ ಈ ಸಂಸ್ಕೃತಿಯನ್ನು ಹಲವು ದೇಶಗಳು ಅನುಸರಿಸುತ್ತಿವೆ.

ಮಕ್ಕಳು ಪಾಲಿಸಬೇಕಾದ ಕ್ರಮಗಳೇನು?: ಶಾಲೆಯಲ್ಲಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಹಪಾಠಿಗಳೊಂದಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶಾಲೆಯಿಂದ ಮನೆಗೆ ಬಂದ ಕೂಡಲೇ ಕೈ-ಕಾಲು ಮುಖ ತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳು ಮಾತ್ರವಲ್ಲ ಮನೆಯ ಹಿರಿಯರು ಸಹ ಈ ನಿಯಮಗಳನ್ನು ಪಾಲಿಸಬೇಕು. ಗಂಟಲಿಗೆ ಸ್ಪ್ರೇ ಸಿಂಪಡಿಕೆ ಔಷಧ ಬಳಸುವುದರಿಂದ ವೈರಾಣು ನಿಯಂತ್ರಿಸಬಹುದಾಗಿದೆ. ಹಾಗಾಗಿ ಇದನ್ನು ಶಾಲೆಗೆ ಹೋಗುವಾಗ, ಶಾಲೆಯಿಂದ ಬಂದ ನಂತರ ಹಾಗೂ ರಾತ್ರಿ ಮಲಗುವಾಗ ಅಭ್ಯಾಸ ಮಾಡಬೇಕು. ಮನೆಗೆ ಸ್ನೇಹಿತರು, ನೆಂಟರು ಯಾರೇ ಬಂದರೂ ಅವರಿಗೆ ನೆಗಡಿ, ಕೆಮ್ಮು ಸೇರಿದಂತೆ ಸೋಂಕು ಲಕ್ಷಣಗಳು ಕಂಡು ಬಂದಲ್ಲಿ ಅವರಿಗೆ ಮಕ್ಕಳನ್ನು ಮುತ್ತಿಟ್ಟು ಮುದ್ದು ಮಾಡಲು ಬಿಡಬೇಡಿ.

‘ತಾಯಿಯೇ ಮೊದಲ ಗುರು’ ಎಂಬ ಮಾತಿದೆ. ಹಾಗಾಗಿ ಮನೆಯಲ್ಲಿ ತಾಯಿ ಮಕ್ಕಳಿಗೆ ಉತ್ತಮ ಅಭ್ಯಾಸಗಳನ್ನು ಮಾಡಿಸಬೇಕು. ಹಾಗೆಯೇ ಶಾಲೆಗಳಲ್ಲಿ ಗುರುಗಳು ಮಕ್ಕಳಲ್ಲಿ ಉತ್ತಮ ಅಭ್ಯಾಸಗಳ ಬಗ್ಗೆ ಅರಿವು ಮೂಡಿಸಬೇಕು. ಶುಚಿತ್ವದಲ್ಲಿ ದೈವತ್ವ ಕಾಣುವುದನ್ನು ಕಲಿಸಬೇಕು. ಆರೋಗ್ಯಕರ ಆಹಾರ ಸೇವನೆ ಅಭ್ಯಾಸ ಮಾಡಿಸುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು. ಸರ್ಕಾರ ಮಕ್ಕಳಿಗೆ ನೀಡುತ್ತಿರುವ ಉಚಿತ ಲಸಿಕೆಗಳನ್ನು ತಪ್ಪಿಸದೆ ಸಕಾಲದಲ್ಲಿ ಕೊಡಿಸಬೇಕು.

ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು: ಈ ನಾಣ್ಣುಡಿಯನ್ನು ಗಮನದಲ್ಲಿ ಇಟ್ಟುಕೊಂಡು ಮಕ್ಕಳು ಆಟದ ಜತೆಗೆ ಪಾಠ ಕಲಿಯಬೇಕು. ಇದಕ್ಕಾಗಿ ಶರೀರದ ಜತೆಗೆ ಬುದ್ಧಿಯನ್ನು ಬೆಳೆಸಿಕೊಳ್ಳಬೇಕು. ಉತ್ತಮ ಯೋಚನೆ, ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಕೋವಿಡ್​ನಿಂದಾಗಿ ಎರಡು ವರ್ಷಗಳಿಂದ ಶಾಲೆ ಇಲ್ಲದೆ, ಟಿವಿ, ಮೊಬೈಲ್​ಗಳ ಗೀಳಿಗೆ ಸಿಲುಕಿರುವ ಮಕ್ಕಳು ಅದರಿಂದ ಹೊರಬಂದು ಶಾಲೆಗಳಲ್ಲಿ ಸಹಪಾಠಿಗಳೊಂದಿಗೆ ಆಟ-ಪಾಠಗಳಲ್ಲಿ ನಿರತರಾಗಬೇಕು. ಮಕ್ಕಳೇ ಒಂದು ವಿಚಾರ ತಿಳಿಯಿರಿ- ‘ಮೊಬೈಲ್ ನೋಡುತ್ತ ತಲೆ ತಗ್ಗಿಸುವುದನ್ನು ಕಲಿಯದೆ, ಪಾಠ ಓದುತ್ತ ತಲೆ ಎತ್ತಿ ನಡೆಯುವುದನ್ನು ಕಲಿಯಬೇಕು.’ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಹೆಚ್ಚು ಅಧ್ಯಯನ ಮಾಡುವ ಮೂಲಕ ಬುದ್ಧಿಶಕ್ತಿ, ಜ್ಞಾನಭಂಡಾರ ವೃದ್ಧಿಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಉಜ್ವಲವಾದ ಭವಿಷ್ಯ ಹೊಂದಬಹುದಾಗಿದೆ. ಆಟ-ಪಾಠಗಳ ಜತೆಗೆ ಆರೋಗ್ಯಕರ ಊಟದ ಬಗ್ಗೆಯೂ ಎಚ್ಚರ ವಹಿಸಬೇಕು. ಬಾಯಿರುಚಿಗಾಗಿ ಹೊರಗೆ ಜಂಕ್​ಫುಡ್ ಸೇವಿಸುವ ಚಟ ಸರಿಯಲ್ಲ. ಬದಲಿಗೆ ಮನೆಯಲ್ಲಿ ಅಮ್ಮಂದಿರು ಮಾಡಿಕೊಡುವ ಆರೋಗ್ಯಕರ ಆಹಾರ ಸೇವಿಸಿ, ಯಥೇಚ್ಛವಾಗಿ ಹಾಲು, ಹಣ್ಣು, ತರಕಾರಿ, ಸೊಪ್ಪು ಸೇವಿಸಿದರೆ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಹೆಚ್ಚುತ್ತದೆ. ಒಣಹಣ್ಣುಗಳನ್ನು ಸೇವಿಸಿ ಬುದ್ಧಿ ಚುರುಕಾಗಿಸಿಕೊಳ್ಳಿ. ಆಟ, ಪಾಠ, ಊಟ ಯಾವುದನ್ನೂ ನಿರ್ಲಕ್ಷಿಸಬೇಡಿ. ಗುರಿಯೊಂದಿಗೆ ಅದರ ಸಾಧನೆಗೆ ಪೂರಕವಾಗಿ ನಿಮ್ಮ ದಾರಿ ಸಾಗಲಿ.

(ಲೇಖಕರು ಖ್ಯಾತ ವೈದ್ಯರು)