ಆಯುರ್ವೆದದ ವಿಶೇಷತೆಯ ಇನ್ನೊಂದು ಮಜಲನ್ನು ನೋಡೋಣ. ಆಹಾರ ದ್ರವ್ಯಗಳನ್ನು ನಿತ್ಯಸೇವನೆಗೆ ಯೋಗ್ಯವಾದ ಪೂರ್ಣಾಹಾರಗಳೆಂದು ಹೇಳಿರುವ ರೀತಿಯಲ್ಲೇ ಪ್ರತಿನಿತ್ಯವೂ ಸೇವಿಸುವುದರಿಂದ ಒಳಿತಿಗಿಂತ ಕೆಡುಕೇ ಉಂಟುಮಾಡುವ ಆಹಾರ ವಸ್ತುಗಳನ್ನೂ ಆಯುರ್ವೆದ ಹೇಳಿದೆ! ಪ್ರತ್ಯೇಕವಾಗಿ ಗುಣಧರ್ಮಗಳನ್ನು ಅವಲೋಕಿಸಿದರೆ ಇವುಗಳೂ ದೇಹಕ್ಕೆ ಒಳಿತನ್ನೇ ಮಾಡುವವು ಇರಬಹುದು. ಹಾಗೆಂದು ಅನುದಿನವೂ ಅವುಗಳ ಬಳಕೆ ಸಲ್ಲದು ಎಂಬುದೇ ಇಲ್ಲಿನ ವಿವೇಚನೆಯ ಸಾರ. ಒಣಗಿದ ತರಕಾರಿ, ತಾವರೆಗಡ್ಡೆ, ತಾವರೆದಂಟು, ಕುದಿಸಿದ ಮಜ್ಜಿಗೆ, ಹಾಲನ್ನು ಒಡೆದು ಮಾಡುವ ಪನ್ನೀರ್, ಮೊಸರು, ಉದ್ದು, ಉಷ್ಣವೀರ್ಯ ಹೊಂದಿದ ಯಮಕವೆಂಬ ಒಂದು ವಿಧವಾದ ಅಕ್ಕಿ, ಒಣಮಾಂಸ, ರೋಗದಿಂದ ಬಳಲುತ್ತಿರುವ ಪ್ರಾಣಿಯ ಮಾಂಸ, ಹಂದಿ ಮಾಂಸ, ದನದ ಮಾಂಸ, ಎಮ್ಮೆಯ ಮಾಂಸ ಹಾಗೂ ಮೀನು- ಇವುಗಳನ್ನು ದಿನವೂ ಬಳಸಿದ್ದೇ ಆದರೆ ರೋಗಗಳು ಕಟ್ಟಿಟ್ಟ ಬುತ್ತಿ ಎಂಬುದು ಚರಕಸಂಹಿತೆಯ ಮಾತ್ರಾಶಿತೀಯ ಅಧ್ಯಾಯದ ಸ್ಪಷ್ಟಾಭಿಪ್ರಾಯ. ದಿನಬೆಳಗಾದರೆ ಉದ್ದಿನ ದೋಸೆ ಮಾಡಿ ತಿನ್ನುವವರಿದ್ದಾರೆ. ಹೊಟ್ಟೆಗೆ ಹಿತವಾಗಲೆಂದು ಊಟದಲ್ಲಿ ಸಾಂಬಾರಿನ ಬದಲು ಮಜ್ಜಿಗೆಹುಳಿಯನ್ನು ದಿನಂಪ್ರತಿ ಬಳಸುವವರಿದ್ದಾರೆ. ಮಜ್ಜಿಗೆಹುಳಿಯನ್ನು ಉದಾಸೀನತೆಯಿಂದಾಗಿ ಮೊಸರಿನಿಂದ ತಯಾರಿಸಲೇಬಾರದು. ಯಾಕೆಂದರೆ ಮೊಸರನ್ನು ಪರೋಕ್ಷವಾಗಿಯೂ ಬಿಸಿಮಾಡುವಂತಿಲ್ಲ. ಮಜ್ಜಿಗೆ ಹಾಕಿ ಮಾಡುವುದರಿಂದ ಕುದಿಸಬಹುದು. ಆದರೆ ಪ್ರತಿನಿತ್ಯವೂ ಮಜ್ಜಿಗೆಹುಳಿಯನ್ನು ಸೇವಿಸಕೂಡದು. ನಿತ್ಯ ಊಟಕ್ಕೆ ಉಪಯೋಗಿಸಬೇಕಾದುದು ಮೊಸರಲ್ಲ, ಮಜ್ಜಿಗೆ ಎಂಬುದೂ ಮನದಟ್ಟಾಗುತ್ತದೆ. ಮಾಂಸಾಹಾರಿಗಳಿಗೆ ರೋಗಗಳು ಯಾಕೆ ಹೆಚ್ಚಾಗಿ ಭಾದಿಸುತ್ತವೆ ಎಂಬುದೂ ಮೇಲಿನ ನಿಷೇಧದಿಂದ ಗ್ರಾಹ್ಯವಾಗುತ್ತದೆ.
ಸುಶ್ರುತ ಸಂಹಿತೆಯಲ್ಲಿ ಹಿತಾಹಿತೀಯಮ್ ಎಂಬ ಹೆಸರಿನ ಪ್ರತ್ಯೇಕವಾದ ಅಧ್ಯಾಯವೊಂದಿದೆ. ಇದರಲ್ಲಿ ಹಿತ, ಅಹಿತ ಹಾಗೂ ವಿರುದ್ಧಾಹಾರಗಳ ವಿವರಣೆಯಿದೆ. ಸಿಹಿಯ ಜೊತೆಗೆ ಖಾರ ರುಚಿ, ಹುಳಿಯ ಜೊತೆಯಲ್ಲಿ ಒಗರು ರಸ, ಉಪ್ಪಿನೊಡನೆ ಒಗರು ರಸಗಳು ಸಾಮಾನ್ಯವಾಗಿ ಶರೀರಕ್ಕೆ ಹಿತ ಉಂಟುಮಾಡುವುದಿಲ್ಲ ಎಂಬುದನ್ನು ಸೂಚಿಸಲಾಗಿದೆ. ಎಮ್ಮೆಯ ಹಾಲು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದ್ದರೂ ಸ್ವಸ್ಥವ್ಯಕ್ತಿಗಳಿಗೆ ನಿತ್ಯೋಪಯೋಗಕ್ಕೆ ಒಳ್ಳೆಯದಲ್ಲ. ಹಾಗೆಂದು ಅಧಿಕವಾಗಿ ಹಸಿವನ್ನುಂಟುಮಾಡುವ ಅತಿಯಾದ ಜೀರ್ಣಶಕ್ತಿ ಇರುವವರಿಗೆ ಒಳಿತನ್ನು ಮಾಡುತ್ತದೆ. ಹಾಲಿನೊಂದಿಗೆ ಬಳ್ಳಿಯಲ್ಲಿ ಬೆಳೆಯುವ ಕುಂಬಳಕಾಯಿ ಮೊದಲಾದ ತರಕಾರಿ, ಮೊಳಕೆ ಬರಿಸಿದ ಧಾನ್ಯ, ಅಣಬೆ, ಎಳೆಬಿದಿರು, ಹುಳಿಯಾದ ಹಣ್ಣು, ಉಪ್ಪು, ಮೊಸರು, ಹುರಳಿಕಾಳು, ಎಣ್ಣೆ, ಅಕ್ಕಿಹಿಟ್ಟು, ಒಣತರಕಾರಿ, ನೇರಳೆಹಣ್ಣು, ಮದ್ಯ, ಆಡು, ಕುರಿ, ಹಂದಿಮಾಂಸ ಹಾಗೂ ಮೀನುಗಳನ್ನು ಸೇವಿಸಕೂಡದು ಎಂದಿದೆ. ಇವೆಲ್ಲ ವಿರುದ್ಧಾಹಾರವಾಗಿ ಕೆಲಸ ಮಾಡುತ್ತವೆ. ಹೀಗೆ ಅನೇಕ ಅಹಿತಕರ ಆಹಾರಗಳನ್ನು ವಿವರಿಸಲಾಗಿದ್ದರೂ ವಿವೇಚನೆ ಮಾಡಿ ಕೆಲವೊಂದು ಸಂದರ್ಭಗಳಲ್ಲಿ ಅನಿವಾರ್ಯವಾಗಿದ್ದರೆ ರೋಗಿಗಳಲ್ಲಿ ಬಳಸಬಹುದು ಎಂದು ಅನುಮತಿಸಲಾಗಿದೆ. ಸುದೀರ್ಘ ಕಾಲದಿಂದ ಸೇವನೆ ಮಾಡಿ ಅಭ್ಯಾಸವಾಗಿದ್ದರೆ ದೇಹಕ್ಕೆ ಹೆಚ್ಚಿನ ತೊಂದರೆ ಉಂಟುಮಾಡದೆ ಇರಬಹುದು ಎಂಬ ಅಭಿಪ್ರಾಯ ಅಷ್ಟಾಂಗಸಂಗ್ರಹವೆಂಬ ಗ್ರಂಥದಲ್ಲಿದೆ. ಆದರೆ ಆಹಾರ ಕ್ರಮವನ್ನು ಸರಿದಾರಿಗೆ ತರುವುದು ಎಲ್ಲಾ ದೃಷ್ಟಿಯಿಂದಲೂ ಸಮಂಜಸ.