ತಮಿಳುನಾಡಿನ ತೂತುಕುಡಿ ಜಿಲ್ಲೆಯ ಬಡ ರೈತ ಕುಟುಂಬದಲ್ಲಿ ಜನಿಸಿದ ರಾಜಗೋಪಾಲ್ಗೆ ಬಾಲ್ಯದಿಂದಲೂ ತಾನು ಹೆಸರಾಂತ ಹಾಗೂ ಶ್ರೀಮಂತ ವ್ಯಕ್ತಿಯಾಗಬೇಕೆಂಬ ಮಹದಾಸೆಯಿತ್ತು. ಆತ ಹತ್ತನೆಯ ವಯಸ್ಸಿನಲ್ಲಿಯೇ ಗ್ರಾಮವನ್ನು ಬಿಟ್ಟು ಚೆನ್ನೈಗೆ ಓಡಿಬಂದು ಬಸ್ಗಳನ್ನು ತೊಳೆಯುತ್ತಾ ಜೀವನ ನಡೆಸತೊಡಗಿದ. ಆನಂತರ ಹೋಟೆಲ್ನಲ್ಲಿ ಕ್ಲೀನರ್ ಕೆಲಸಕ್ಕೆ ಸೇರಿ ಶ್ರದ್ಧೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿ ಎಲ್ಲರ ಪ್ರೀತಿ ಗಳಿಸಿದ. ದುಂದುವೆಚ್ಚಕ್ಕೆ ಕ್ಯೆಹಾಕದೆ ತಾನು ಗಳಿಸುತ್ತಿದ್ದ ಬಹುತೇಕ ಹಣವನ್ನು ಉಳಿತಾಯ ಮಾಡಿದ. ಕಾಲಕ್ರಮೇಣ ಕೈಯಲ್ಲಿ ಸಾಕಷ್ಟು ಹಣ ಕೂಡಿದಾಗ ಚೆನ್ನೈನ ಕೆ.ಕೆ.ನಗರ್ ಬಡಾವಣೆಯಲ್ಲಿ ರಾಜಗೋಪಾಲ್ ಸಣ್ಣ ಕಿರಾಣಿ ಅಂಗಡಿಯನ್ನು ಪ್ರಾರಂಭಿಸಿದ. ವ್ಯಾಪಾರವನ್ನು ವೃದ್ಧಿಸಿ 1972ರಲ್ಲಿ ತನ್ನ ಜಿಲ್ಲೆಯವಳೇ ಆದ ವಳ್ಳಿ ಎನ್ನುವವಳನ್ನು ಲಗ್ನವಾದ.
ಜ್ಯೋತಿಷಶಾಸ್ತ್ರದಲ್ಲಿ ರಾಜಗೋಪಾಲ್ಗೆ ಬಹಳ ನಂಬಿಕೆ. ಆತ ಯಾವುದೇ ಕೆಲಸಕ್ಕೆ ಕ್ಯೆಹಾಕಬೇಕಾದರೂ ಜ್ಯೋತಿಷಿಗಳನ್ನು ಕೇಳುತ್ತಿದ್ದ. 1980ರಲ್ಲಿ ಬೇರೆ ಯಾವುದಾದರೂ ವೃತ್ತಿ ಮಾಡಬೇಕೆಂಬ ಮನಸ್ಸಾದಾಗ ಆತ ತನ್ನ ಜ್ಯೋತಿಷಿಯನ್ನು ಸಂರ್ಪಸಿದ. ‘ನೀನು ಬೆಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಿದರೆ ಹೆಸರು ಮತ್ತು ಹಣ ಗಳಿಸುವೆ’ ಎಂಬ ಸಲಹೆಯನ್ನಿತ್ತ್ತ ಆ ಜ್ಯೋತಿಷಿ. ಅಷ್ಟರಲ್ಲಿ ಅದೇ ಬಡಾವಣೆಯಲ್ಲಿ ಇದ್ದ ಕಾಮಾಕ್ಷಿ ಭವನ್ ಎನ್ನುವ ರೆಸ್ಟೋರೆಂಟ್ ಮಾರಾಟಕ್ಕೆ ಬಂದಿತ್ತು. ರೆಸ್ಟೋರೆಂಟ್ ಎಂದರೆ ಬೆಂಕಿಗೆ ಸಂಬಂಧಿಸಿದ ವ್ಯವಹಾರವಲ್ಲವೇ ಎಂದು ರ್ತಸಿದ ರಾಜಗೋಪಾಲ್, ಗಣಪತಿ ಅಯ್ಯರ್ ಎನ್ನುವವನ ಜತೆಗೂಡಿ 1981ರ ಆರಂಭದಲ್ಲಿ ಅದನ್ನು ಖರೀದಿಸಿ ಅದಕ್ಕೆ ‘ಶರವಣ ಭವನ’ ಎಂದು ಮರುನಾಮಕರಣ ಮಾಡಿದ. ತಾನು ಮಾಂಸಾಹಾರಿಯಾಗಿದ್ದರೂ ತನ್ನ ಹೋಟೆಲ್ನಲ್ಲಿ ಮಾಂಸಾಹಾರ ತಯಾರಿಸದಿರಲು ನಿರ್ಧರಿಸಿದ. ಚೆನ್ನೈನ ಮಧ್ಯಮ ವರ್ಗದವರನ್ನೇ ಗುರಿಯಾಗಿಟ್ಟು ತನ್ನ ಹೋಟೆಲ್ನಲ್ಲಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ತಿಂಡಿ ತಿನಿಸುಗಳನ್ನು ಕೊಡಬೇಕು ಎಂದು ತೀರ್ಮಾನಿಸಿದ.
ಆರಂಭದಲ್ಲಿ ಇಡ್ಲಿ, ವಡೆ, ದೋಸೆಗಳನ್ನು ಮಾತ್ರ ತಯಾರಿಸಿ ಅವನ್ನು ಪ್ಲೇಟಿಗೆ ಕೇವಲ ಐದು ರೂಪಾಯಿ ದರದಲ್ಲಿ ಮಾರತೊಡಗಿದ. ಇದರಿಂದ ಅವನಿಗೆ ಸಾಕಷ್ಟು ನಷ್ಟವಾದರೂ ಕೆಲವೇ ದಿನಗಳಲ್ಲಿ ಶರವಣ ಭವನ ಕಡಿಮೆ ದರದಲ್ಲಿ ಶುಚಿರುಚಿಯಾದ ತಿಂಡಿ ತಿನಿಸುಗಳು ಸಿಗುವ ರೆಸ್ಟೋರೆಂಟ್ ಎಂದು ಖ್ಯಾತಿಯಾಯಿತು. ಅಲ್ಲದೇ ರಾಜಗೋಪಾಲ್ ಸ್ತ್ರೀಯರು ಮತ್ತು ಮಕ್ಕಳನ್ನು ರೆಸ್ಟೋರೆಂಟಿಗೆ ಆಕರ್ಷಿಸುವ ಹಲವಾರು ಯೋಜನೆಗಳನ್ನು ಹಾಕಿಕೊಂಡ ಕಾರಣ ಗ್ರಾಹಕರು ಮುಗಿಬೀಳತೊಡಗಿದರು. ಗ್ರಾಹಕರ ಸಂಖ್ಯೆ ಹೆಚ್ಚಾದಾಗ ರಾಜಗೋಪಾಲ್ ತಿಂಡಿತಿನಿಸುಗಳ ಬೆಲೆಗಳನ್ನು ಏರಿಸಿದ. ಆದರೂ ಗ್ರಾಹಕರೇನೂ ದೂರವಾಗದೆ ವ್ಯಾಪಾರವು ಲಾಭದಲ್ಲಿಯೇ ಮುಂದುವರಿಯಿತು. ಆತ ಚೆನ್ನೈ ನಗರದಲ್ಲಿಯೇ ಶರವಣ ಭವನದ ಹಲವಾರು ಶಾಖೆಗಳನ್ನು ತೆರೆಯುತ್ತಾ ಬಂದ. ಕಾರ್ವಿುಕರನ್ನು ತಂದೆಯಂತೆ ನೋಡಿಕೊಂಡು ಅವರಿಗೆ ಸಾಕಷ್ಟು ಸವಲತ್ತುಗಳನ್ನು ಕೊಡತೊಡಗಿದ್ದ ಕಾರಣ ಅವರೆಲ್ಲರೂ ಅವನಿಗೆ ಅತೀವ ಸ್ವಾಮಿನಿಷ್ಠೆ ತೋರಿಸುತ್ತಿದ್ದರು. ಅವನನ್ನು ಅಣ್ಣಾಚಿ (ಅಣ್ಣ) ಎಂದೇ ಸಂಬೋಧಿಸುತ್ತಾ ಅವನ ಸಲಹೆಸೂಚನೆಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು.
1994ರಲ್ಲಿ ಆತ ವ್ಯವಹಾರವನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ಹೇಗೆ ಎಂದು ಜ್ಯೋತಿಷಿಯ ಸಲಹೆ ಕೇಳಿದ. ‘ನೀನು ಎರಡನೆಯ ಮದುವೆಯಾದರೆ ಅದೃಷ್ಟ ಕುದುರುತ್ತದೆ’ ಎಂದ ಆ ಜ್ಯೋತಿಷಿ. ತನಗಾಗಲೇ ಇಬ್ಬರು ಗಂಡುಮಕ್ಕಳಾಗಿದ್ದರೂ ಮತ್ತೊಮ್ಮೆ ಲಗ್ನವೇಕೆ ಎಂದು ರಾಜಗೋಪಾಲ್ ಚಿಂತಿಸದೆ ಹೆಣ್ಣುಗಳಿಗಾಗಿ ಹುಡುಕಲಾರಂಭಿಸಿದ. ಅವನ ಹೋಟೆಲ್ನಲ್ಲಿಯೇ ಅಡುಗೆ ಕೆಲಸ ಮಾಡುತ್ತಿದ್ದ ಗಣೇಶನ್ ಎನ್ನುವವನ ಪತ್ನಿ 27 ವರ್ಷದ ಕೃತ್ತಿಕಾ ಅವನ ಕಣ್ಣಿಗೆ ಬಿದ್ದಳು. ಗಣೇಶನ್ನಿಗೆ ಭಾರೀ ಮೊತ್ತದ ಹಣ ನೀಡಿದ ರಾಜಗೋಪಾಲ್ ಗಂಡಹೆಂಡಿರ ವಿವಾಹ ವಿಚ್ಛೇದನ ಮಾಡಿಸಿದ. ಕೃತ್ತಿಕಾಳನ್ನು ಲಗ್ನವಾಗಿ ಚೆನ್ನೈನಲ್ಲಿಯೇ ಭವ್ಯ ಬಂಗಲೆ ಕಟ್ಟಿಸಿ ಅವಳೊಡನೆ ವಾಸಿಸತೊಡಗಿದ. ಜ್ಯೋತಿಷಿ ಹೇಳಿದಂತೆಯೇ ವ್ಯವಹಾರ ಇನ್ನಷ್ಟು ವೃದ್ಧಿಸಿ ರಾಜಗೋಪಾಲ್ ‘ದೋಸೆ ರಾಜ’ ಎಂದೇ ಪ್ರಖ್ಯಾತನಾದ.
ಇದಾದ ಐದು ವರ್ಷಗಳ ನಂತರ, 1999ರಲ್ಲಿ, ಅದೇ ಜ್ಯೋತಿಷಿ ರಾಜಗೋಪಾಲ್ಗೆ ‘ನೀನು ಮೂರನೆಯ ಲಗ್ನ ಮಾಡಿಕೊಂಡರೆ ನಿನ್ನ ವ್ಯವಹಾರ ಇನ್ನಷ್ಟು ಅಭಿವೃದ್ಧಿಯಾಗುತ್ತದೆ’ ಎಂದು ಸಲಹೆಯಿತ್ತ. ರಾಜಗೋಪಾಲ್ ಸೂಕ್ತ ವಧುವಿಗಾಗಿ ಕೂಡಲೇ ಹುಡುಕಾಟ ಆರಂಭಿಸಿದ. ಆಗ ಅವನ ಸಹಾಯಕನೊಬ್ಬ ಶರವಣ ಭವನದ ಶಾಖೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಸಿಸ್ಟೆಂಟ್ ಮ್ಯಾನೇಜರ್ ರಾಮಸ್ವಾಮಿಯ ಮಗಳು ಜೀವನಜ್ಯೋತಿ ನೋಡಲು ಅತಿ ಸುಂದರಳಾಗಿದ್ದಾಳೆ ಎಂದು ತಿಳಿಸಿದ. ಕೂಡಲೇ ರಾಜಗೋಪಾಲ್ ರಾಮಸ್ವಾಮಿಯನ್ನು ಕರೆಸಿ ಜ್ಯೋತಿಯನ್ನು ಕರೆತರಲು ಹೇಳಿದ. ಆಕೆಯನ್ನು ನೋಡಿದ ಕೂಡಲೇ ರಾಜಗೋಪಾಲ್ ಅನುರಕ್ತನಾಗಿ ಮದುವೆಯ ಪ್ರಸ್ತಾವ ಮುಂದಿಟ್ಟ.
ಆಗ ಕೇವಲ 20 ವರ್ಷ ವಯಸ್ಸಿನವಳಾಗಿದ್ದ ಜ್ಯೋತಿ ತಾನು ಅದೇ ತಾನೇ ಪದವಿ ಪರೀಕ್ಷೆ ಪಾಸು ಮಾಡಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸಕ್ಕೆ ಸೇರಿದ್ದೇನೆಂದು ತಿಳಿಸಿ, ‘ನೀವು ನನಗಿಂತ 42 ವರ್ಷ ಹಿರಿಯರು, ನಾನು ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ ಮತ್ತು ನಾವಿಬ್ಬರೂ ಲಗ್ನವಾಗಲು ನಿರ್ಧರಿಸಿದ್ದೇವೆ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ನಯವಾಗಿಯೇ ತಿರಸ್ಕರಿಸಿದಳು.
ಜೀವನಜ್ಯೋತಿಯ ರೂಪಿಗೆ ಮನಸೋತಿದ್ದ ರಾಜಗೋಪಾಲ್ ಸುಮ್ಮನಾಗಲಿಲ್ಲ. ಆತ ಆಕೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಿದ. ಆಕೆ ಪ್ರಿನ್ಸ್ ಶಾಂತಕುಮಾರ್ ಎಂಬ ಕ್ರಿಶ್ಚಿಯನ್ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದರಿತ ರಾಜಗೋಪಾಲ್, ರಾಮಸ್ವಾಮಿಯನ್ನು ಕರೆಸಿ ಇನ್ನು ಮುಂದೆ ‘ಶಾಂತಕುಮಾರ್ನನ್ನು ನಿನ್ನ ಮನೆಗೆ ಸೇರಿಸಕೂಡದು’ ಎಂದು ತಾಕೀತು ಮಾಡಿದ. ‘ಸರ್, ಆತ ನನ್ನ ಮಗನಿಗೆ ಗಣಿತದ ಪಾಠ ಹೇಳಿಕೊಡುತ್ತಿದ್ದಾನೆ, ಅವನನ್ನು ಮನೆಗೆ ಬರಬೇಡ ಎಂದು ಹೇಗೆ ಹೇಳಲಿ?’ ಎಂದು ರಾಮಸ್ವಾಮಿ ಉತ್ತರಿಸಿದಾಗ, ಕೋಪಗೊಂಡ ರಾಜಗೋಪಾಲ್ ರಾಮಸ್ವಾಮಿಯ ಕುಟುಂಬವನ್ನು ತನ್ನ ಸಂಸ್ಥೆಯ ವಸತಿಗೃಹದಿಂದ ಆಗಿಂದಾಗಲೇ ಹೊರಹಾಕಿಸಿದ.
ಏತನ್ಮಧ್ಯೆ 1999ರ ಏಪ್ರಿಲ್ನಲ್ಲಿ ಜ್ಯೋತಿ ಹಾಗೂ ಶಾಂತಕುಮಾರ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾದರು. ಅದೇ ವರ್ಷದ ಅಂತ್ಯದಲ್ಲಿ ಆಕೆಗೆ ತನ್ನದೇ ಆದ ಟ್ರಾವೆಲ್ ಏಜೆನ್ಸಿ ತೆರೆಯಬೇಕೆಂಬ ಬಯಕೆಯಾಯಿತು. ಅದಕ್ಕೆ ಬೇಕಾದ ಹಣವನ್ನು ಸಾಲವಾಗಿ ಪಡೆಯಲು ರಾಜಗೋಪಾಲ್ನನ್ನು ಸಂರ್ಪಸಿದಳು. ‘ನೀನಂತೂ ನಿನ್ನ ಲಗ್ನಕ್ಕೆ ನನ್ನನ್ನು ಕರೆಯಲಿಲ್ಲ, ಆದರೂ ನಾನೇನೂ ಬೇಸರ ಮಾಡಿಕೊಂಡಿಲ್ಲ, ನೀನು ನಗುನಗುತ್ತಾ ಇರಬೇಕು ಎನ್ನುವುದೇ ನನ್ನ ಆಸೆ’ ಎಂದ ರಾಜಗೋಪಾಲ್ ಅವಳಿಗೆ ಆಶೀರ್ವಾದ ಮಾಡಿ ಸಾಲದ ರೂಪದಲ್ಲಿ ಹಣ ನೀಡಿದ್ದಲ್ಲದೇ ಮದುವೆಯ ಉಡುಗೊರೆಯೆಂದು ರೇಷ್ಮೆ ಸೀರೆಗಳು ಹಾಗೂ ಬಂಗಾರದ ಆಭರಣಗಳನ್ನೂ ನೀಡಿದ. ಜ್ಯೋತಿಗೆ ಮಾತೇ ಹೊರಡದಂತಾಗಿ ಆತನ ಬಗ್ಗೆ ಗೌರವದ ಭಾವನೆ ಮೂಡಿತು.
2001ರ ಸೆಪ್ಟೆಂಬರ್ನಲ್ಲಿ ತನಗಿನ್ನೂ ಮಕ್ಕಳಾಗಲಿಲ್ಲವೆಂದು ಜ್ಯೋತಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾದಳು. ಆಗ ಅಲ್ಲಿಗೆ ಆಗಮಿಸಿದ ರಾಜಗೋಪಾಲ್, ‘ನಿನ್ನ ಸಮಸ್ಯೆಗೆ ಉತ್ತಮ ಪರಿಹಾರ ನೀಡುವ ವೈದ್ಯರೊಬ್ಬರು ನನಗೆ ಪರಿಚಯವಿದ್ದಾರೆ, ನೀನು ಅವರ ನರ್ಸಿಂಗ್ ಹೋಂಗೆ ದಾಖಲಾಗು’ ಎಂದು ಅವಳಿಗೆ ಬಲವಂತ ಮಾಡಿ ಬೇರೊಂದು ಆಸ್ಪತ್ರೆಗೆ ಸೇರಿಸಿದ. ಅಲ್ಲಿನ ವೈದ್ಯರು ಶಾಂತಕುಮಾರ್ನ ಪರೀಕ್ಷೆಯನ್ನೂ ಮಾಡಬೇಕೆಂದು ಹೇಳಿದಾಗ ಆತ ನಿರಾಕರಿಸಿದ. ‘ನಿನಗೆ ಯಾವುದೇ ದೈಹಿಕ ತೊಂದರೆಯಿಲ್ಲ. ಆದರೆ ಶಾಂತಕುಮಾರ್ನಿಗೆ ಏನೋ ತೊಂದರೆಯಿರುವ ಕಾರಣವೇ ಆತ ಪರೀಕ್ಷೆಗೆ ಒಪ್ಪುತ್ತಿಲ್ಲ. ನಿನಗೆ ಅವನಿಂದ ಮಕ್ಕಳಾಗುವುದಿಲ್ಲ, ನೀನು ಅವನಿಂದ ವಿಚ್ಛೇದನ ಪಡೆದು ನನ್ನನ್ನು ಲಗ್ನವಾಗು’ ಎಂದ ರಾಜಗೋಪಾಲ್. ಜ್ಯೋತಿ ಒಪ್ಪದಿದ್ದಾಗ, ‘ನಿನ್ನ ಹಾಗೆಯೇ ನನ್ನ ಎರಡನೆಯ ಪತ್ನಿ ಕೃತಿಕಾಳೂ ನನ್ನನ್ನು ಮದುವೆಯಾಗಲು ಮೊದಲಿಗೆ ತಯಾರಿರಲಿಲ್ಲ, ಆಕೆ ತನ್ನ ಪತಿಯಿಂದ ಡಿವೋರ್ಸ್ ಪಡೆದು ನನ್ನನ್ನು ಲಗ್ನವಾದ ನಂತರ ಎಷ್ಟು ಸುಖದಿಂದಿದ್ದಾಳೆ ನೋಡು, ನೀನೂ ಶಾಂತಕುಮಾರನಿಗೆ ಡಿವೋರ್ಸ್ ಕೊಟ್ಟು ನನ್ನನ್ನು ಲಗ್ನವಾದರೆ ರಾಣಿಯಂತಿರಬಹುದು’ ಎಂದ. ಜ್ಯೋತಿ ಸಾರಾಸಗಟಾಗಿ ತಿರಸ್ಕರಿಸಿದಳು. ಆದರೂ ಅವಳ ಆಸ್ಪತ್ರೆಯ ಖರ್ಚನ್ನು ರಾಜಗೋಪಾಲ್ನೇ ಭರಿಸಿದ.
ಇದಾದ ತಿಂಗಳ ಬಳಿಕ, ಅಕ್ಟೋಬರ್ 1 ರಂದು ಶಾಂತಕುಮಾರ್ ಮತ್ತು ಜ್ಯೋತಿಯನ್ನು ಕರೆಸಿಕೊಂಡ ರಾಜಗೋಪಾಲ್, ಪತ್ನಿಗೆ ತಕ್ಷಣವೇ ವಿಚ್ಛೇದನ ಕೊಡಬೇಕೆಂದು ಶಾಂತಕುಮಾರನಿಗೆ ತಾಕೀತು ಮಾಡಿ ವಿಚ್ಛೇದನ ಕೊಡದಿದ್ದರೆ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ. ಆತ ಒಪ್ಪದಿದ್ದಾಗ ರಾಜಗೋಪಾಲ್ನ ಅನುಯಾಯಿಗಳು ಶರವಣ ಭವನಕ್ಕೆ ಸೇರಿದ್ದ ಗೋಡೌನ್ ಒಂದರಲ್ಲಿ ಶಾಂತಕುಮಾರನಿಗೆ ಮನಬಂದಂತೆ ಥಳಿಸಿದರು. ಗಂಡನ ಮೇಲೆ ನಡೆದ ಹಲ್ಲೆಯನ್ನು ಕಂಡು ಜ್ಯೋತಿ ಭಯಭೀತಳಾದಳು.
ಮಾರನೆಯ ದಿನ ರಾಜಗೋಪಾಲ್ನ ಖಾಸಾ ಬಂಟ ಡೇನಿಯಲ್ ಜ್ಯೋತಿಯನ್ನು ಸಂರ್ಪಸಿ ‘ನಿನ್ನ ಗಂಡನನ್ನು ಥಳಿಸಿದ ಬಗ್ಗೆ ಚೆನ್ನೈನ ಪೊಲೀಸ್ ಕಮಿಷನರ್ಗೆ ದೂರನ್ನು ಕೊಡು’ ಎಂದು ಸಲಹೆ ನೀಡಿದ. ಅವನ ಮಾತುಗಳಿಂದ ಪತಿ ಪತ್ನಿಯರಿಗೆ ಅನುಮಾನ ಬಂದರೂ ಅಕ್ಟೋಬರ್ 12 ರಂದು, ಅಂದರೆ ಘಟನೆ ನಡೆದ 11 ದಿನಗಳ ನಂತರ, ಕಮೀಷನರ್ ಕಚೇರಿಗೆ ಹೋಗಿ ರಾಜಗೋಪಾಲ್ ಮತ್ತು ಅವನ ಅನುಯಾಯಿಗಳು ಥಳಿಸಿದರೆಂದು ದೂರನ್ನಿತ್ತರು. ಅಲ್ಲಿಂದ ವಾಪಸಾಗುವಾಗ ರಾಜಗೋಪಾಲ್ ಕಡೆಯ ಗೂಂಡಾಗಳು ತಮ್ಮ ಮನೆಯನ್ನು ಸುತ್ತುವರಿದಿದ್ದನ್ನು ಕಂಡು ಗಾಬರಿಗೊಂಡು ಹೋಟೆಲ್ ಒಂದಕ್ಕೆ ಹೋಗಿ ಅಲ್ಲಿ ಕೋಣೆಯನ್ನು ಪಡೆದರು. ಎರಡು ದಿನ ಯಾರನ್ನೂ ಸಂರ್ಪಸಲಿಲ್ಲ. ಮಗಳು-ಅಳಿಯ ಮನೆಗೆ ವಾಪಸಾಗದಿದ್ದಾಗ ರಾಮಸ್ವಾಮಿ ಅವರು ಕಾಣೆಯಾಗಿದ್ದರೆಂದು ಪೊಲೀಸ್ ಠಾಣೆಯಲ್ಲಿ ದೂರನ್ನಿತ್ತ. ಆನಂತರ ಮನೆಗೆ ವಾಪಸಾದ ಜ್ಯೋತಿ ಮತ್ತು ಶಾಂತಕುಮಾರ್ ರಾಜಗೋಪಾಲ್ನ ಕುಕೃತ್ಯದ ಬಗ್ಗೆ ಪತ್ರಿಕಾ ಹೇಳಿಕೆ ನೀಡಲು ನಿರ್ಧರಿಸಿದರು.
(ಮುಂದುವರಿಯುವುದು) (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)