| ಭವ್ಯ ಬೊಳ್ಳೂರು
ಅಪರಾಧಗಳಿಗಿಂತ ಹೆಚ್ಚಾಗಿ ವರದಿಯಾಗುತ್ತಿರುವುದು ಸೈಬರ್ ಕ್ರೖೆಂ. ನಿಮ್ಮ ಹಣಕಾಸಿನ ಮಾಹಿತಿಯನ್ನಷ್ಟೇ ಹ್ಯಾಕರ್ಗಳು ಕದಿಯುತ್ತಾರೆ ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಒಮ್ಮೆ ಸೈಬರ್ ಕಳ್ಳರ ಬಲೆಗೆ ಬಿದ್ದಿರೋ, ಪ್ರತಿ ವರ್ಷವೂ ಅವರ ಹೊಸ ಹೊಸ ಬೆದರಿಕೆಯನ್ನು ನೀವು ಎದುರಿಸುತ್ತಲೇ ಇರಬೇಕಾಗುತ್ತದೆ. ಸೈಬರ್ ಕ್ರೖೆಂನ ಅವಾಂತರಗಳ ಬಗ್ಗೆ ತಿಳಿದಿರಾದರೆ, ಅಂತರ್ಜಾಲವನ್ನು ಬಳಸುವ ಬಗ್ಗೆ ಖಂಡಿತವಾಗಲೂ ಹಿಂದೆಮುಂದೆ ನೋಡೇ ನೋಡುತ್ತೀರಿ. ಅಷ್ಟೊಂದು ಭಯಾನಕ ಜಾಲವದು!
ಇಂಥ ಪರಿಸ್ಥಿತಿಯಲ್ಲಿ ಸೈಬರ್ ಕ್ರೖೆಂನ ವಂಚನೆಗೆ ಬಲಿಯಾಗುತ್ತಿದ್ದೀರಿ ಎನ್ನುವ ಸೂಚನೆಯನ್ನು ಅರಿಯುವುದು ನಿಮ್ಮನ್ನು ಮತ್ತು ನಿಮ್ಮ ಮಾಹಿತಿಯನ್ನು ಸಂರಕ್ಷಿಸಲು ಇರುವ ಏಕೈಕ ಮಾರ್ಗ. ಜತೆಗೆ ಯಾರಾದರೂ ಆನ್ಲೈನ್ನ ದುಷ್ಕೃತ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಾಗ, ಯಾರನ್ನು ಈ ಸಂದರ್ಭದಲ್ಲಿ ಸಂರ್ಪಸಬೇಕು ಅನ್ನುವುದು ಈ ಜಾಲದೊಳಗೆ ಬೀಳದಂತೆ ತಪ್ಪಿಸಿಕೊಳ್ಳುವ ಮಹತ್ವದ ಹೆಜ್ಜೆ. ಸೈಬರ್ ಅಪರಾಧವನ್ನು ತಡೆಯುವುದು ಅಸಾಧ್ಯ. ಆದರೆ ನಿಮ್ಮನ್ನು ನೀವು ಇದರಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬಹುದು.
ಬಲವಾದ ಪಾಸ್ವರ್ಡ್: ಮರೆತು ಹೋಗುತ್ತದೆ ಎನ್ನುವ ಕಾರಣಕ್ಕೆ ಈ ಮೇಲ್, ವೆಬ್ಸೈಟ್ಗಳಿಗೆ ಒಂದೇ ಪಾಸ್ವರ್ಡ್ ಬಳಸುವುದು ಮಾಮೂಲು. ಇದು ಸೈಬರ್ ಅಪರಾಧಕ್ಕೆ ಆಹ್ವಾನ ಕೊಟ್ಟಂತೆ. ಎಲ್ಲೂ ನಿಮ್ಮ ಪಾಸ್ವರ್ಡ್ ಗಳನ್ನು ಪುನರಾವರ್ತಿಸಬೇಡಿ. ಆಗಾಗ ಬದಲಾಯಿಸುತ್ತಾ ಇರಿ. ಸಾಧ್ಯವಾದಷ್ಟೂ ಅದನ್ನು ಸಂಕೀರ್ಣಗೊಳಿಸಿ. ಅಂದರೆ ಕನಿಷ್ಟ 10 ಅಕ್ಷರಗಳು, ಸಂಖ್ಯೆಗಳು ಮತ್ತು ಚಿಹ್ನೆಗಳನ್ನು ಪಾಸ್ವರ್ಡ್ ಹೊಂದಿರಲಿ. ಪಾಸ್ವರ್ಡ್ ನಿರ್ವಹಿಸುವ ಅಪ್ಲಿಕೇಶನ್ ನಮ್ಮ ಪಾಸ್ವರ್ಡ್ಗಳನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ.
ಸ್ವಯಂ ರಕ್ಷಣೆ ಹೇಗೆ?: ಸಮಸ್ಯೆಗೆ ಬೆನ್ನು ಹಾಕಿ ಓಡುವ ಬದಲು, ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಅದನ್ನು ಎದುರಿಸುವುದು ಅಥವಾ ಅದರ ಜತೆಗೆ ಬದುಕುವುದು ಲೇಸು. ಸೈಬರ್ ಅಪರಾಧದಲ್ಲಿ ಬಲಿಪಶು ಆಗದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕೆಲವೊಂದು ಸಲಹೆಗಳು ಇಲ್ಲಿದೆ.
ಸಾಫ್ಟ್ವೇರ್ ಅಪ್ಡೇಟ್: ಇಂಟರ್ನೆಟ್ನ ಸೆಕ್ಯೂರಿಟಿ ಸಾಫ್ಟ್ವೇರ್, ಬಳಕೆಯ ವ್ಯವಸ್ಥೆಯ ಜತೆಗೆ ನಾವು ಉಪಯೋಗಿಸುವ ಸಾಫ್ಟ್ವೇರ್ನ್ನು ಅಪ್ಡೇಟ್ ಮಾಡಿಕೊಳ್ಳುವುದು ಒಳ್ಳೆಯದು. ಸೈಬರ್ ಅಪರಾಧಿಗಳು ಸಾಫ್ಟ್ವೇರ್ ನ್ಯೂನ್ಯತೆ ಹಾಗೂ ಈಗಾಗಲೇ ನಡೆದಿರುವ ಕಿರುಕುಳ ಗಮನಿಸುತ್ತಿರುತ್ತಾರೆ. ಅದನ್ನೇ ಬಳಸಿ ಸುಲಭವಾಗಿ ಬಲೆಯೊಳಗೆ ಕೆಡವುತ್ತಾರೆ.
ಸೋಶಿಯಲ್ ಮೀಡಿಯಾದ ಸೆಟಿಂಗ್ಸ್ ನಿರ್ವಹಣೆ: ಮಾಹಿತಿಯ ಸೋರಿಕೆ ಹೆಚ್ಚಾಗಿ ನಡೆಯುತ್ತಿರುವುದೇ ಸಾಮಾ ಜಿಕ ಜಾಲತಾಣಗಳಲ್ಲಿ. ಪ್ರತಿಯೊಂದು ವೈಯಕ್ತಿಕ ಮಾಹಿತಿ ಹಾಗೂ ವಿಚಾರಗಳನ್ನು ಅಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ಬದುಕಿನ ಆಗು ಹೋಗುಗಳು ಜಗತ್ತಿನ ಯಾವುದೇ ಭಾಗದಲ್ಲಿ ಇರುವವರಿಗೆ ತಿಳಿಯುವಂತೆ ಎಲ್ಲವನ್ನೂ ತೆರೆದಿಟ್ಟರೆ, ಸುಲಭವಾಗಿ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಅಕೌಂಟನ್ನ್ನು ಹ್ಯಾಕ್ ಮಾಡಿ, ಅದರ ಮೂಲಕ ಅಸಭ್ಯ ಮೆಸೇಜ್ಗಳನ್ನು ಕಳುಹಿಸುವವರು ಇದ್ದಾರೆ. ಇನ್ನು ವೃತ್ತಿಪರ ಸೈಬರ್ ಕಳ್ಳರು ದುಡ್ಡನ್ನು ದೋಚಲು ಇದನ್ನೇ ಮಾರ್ಗವನ್ನಾಗಿಸಿಕೊಳ್ಳುತ್ತಾರೆ. ಈ ತೊಂದರೆಯಿಂದ ಬಚಾವಾಗಲು ಮೊದಲು ಸೋಶಿಯಲ್ ಮೀಡಿಯಾದ ಸೆಟಿಂಗ್ಸ್ ಬದಲಾಯಿಸಿ ಕೊಳ್ಳಬೇಕು. ನಿಮ್ಮ ಪೊ›ಫೈಲ್ ಒಳಗೆ ಸಾರ್ವಜನಿಕರ ಪ್ರವೇಶ ನಿಷಿದ್ಧಗೊಳಿಸಿ. ಪಬ್ಲಿಕ್ ಜತೆ ಮಾಹಿತಿ ಹಂಚಿಕೊಳ್ಳುವುದನ್ನು ಕಡಿಮೆ ಮಾಡಿಕೊಂಡಷ್ಟು ಒಳಿತು.
ಮಕ್ಕಳೊಂದಿಗೆ ಇಂಟರ್ನೆಟ್ ಬಗ್ಗೆ ಮಾತುಕತೆ: ಮಕ್ಕಳ ಸೋಶಿಯಲ್ ಸೆಕ್ಯೂರಿಟಿ ನಂಬರ್ ಮತ್ತು ಅವರ ಕ್ರೆಡಿಟ್ ಹಿಸ್ಟರಿ ಸೈಬರ್ ಕಳ್ಳರಿಗೆ ಸುಲಭವಾಗಿ ಸಿಗುತ್ತದೆ. ಮಕ್ಕಳು ಇಂಟರ್ನೆಟ್ ಬಳಸು ವಾಗ ಅವರ ಮೇಲೆ ನಿಗಾ ವಹಿಸಿ. ತಮ್ಮ ಮಿತಿಯೊಳಗೆ ಇಂಟರ್ನೆಟ್ ಬಳಕೆ ಹಾಗೂ ಅದರ ಸಾಧಕ-ಬಾಧಕಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಬೇಕು. ಆನ್ಲೈನ್ ಕಿರುಕುಳ, ಬೆದರಿಕೆಯನ್ನು ಎದುರಿಸಬೇಕಾದ ಸಂದರ್ಭ ಬಂದಾಗ ಅವರು ನಿಮ್ಮ ಬಳಿ ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ಅವರಿಗೆ ತಿಳಿಸಿ.
ಖಾಸಗಿ ನೆಟ್ವರ್ಕ್ ಬಳಕೆ: ಬಲವಾದ ಎನ್ಕ್ರಿಪ್ಶನ್ ಪಾಸ್ವರ್ಡ್ ಮತ್ತು ವರ್ಚುವಲ್ ಖಾಸಗಿ ನೆಟ್ವರ್ಕ್ ಗಳನ್ನು ಬಳಸುವುದು ಒಳ್ಳೆಯದು. ನಿಮ್ಮ ಮಾಹಿತಿ, ಗಮ್ಯ ತಲುಪುವವರೆಗೆ ವಿಪಿಎನ್ ಅದನ್ನು ರಹಸ್ಯವಾಗಿಡುತ್ತದೆ. ಗ್ರಂಥಾಲಯ, ಕೆಫೆ, ಹೊಟೇಲ್ ಅಥವಾ ವಿಮಾನ ನಿಲ್ದಾಣಗಳಲ್ಲಿ ಸಾರ್ವಜನಿಕ ವೈಫೈ ನೆಟ್ವರ್ಕ್ ಬಳಸುವಾಗ ವಿಪಿಎನ್ ಬಳಸುವುದು ಸೂಕ್ತ. ಸೈಬರ್ ಕ್ರಿಮಿನಲ್ಗಳು ನಿಮ್ಮ ಸಂವಹನ ಮಾರ್ಗವನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದರೂ, ನಿಮ್ಮ ಡಾಟಾ ಮಾತ್ರ ಸುರಕ್ಷಿತವಾಗಿರುತ್ತದೆ.
ಅಂತರ್ಜಾಲದೊಳಗಿನ ಅಪರಾಧ ಜಾಲ: ಸೈಬರ್ ಕ್ರೖೆಂ ಅನ್ನುವುದು ಅಂತರ್ಜಾಲದೊಳಗೆ ನಡೆಯುವ ಅಪರಾಧ. ಈ ಅಪರಾಧಿಗಳು ಕಂಪ್ಯೂಟರ್ನ ನೆಟ್ವರ್ಕ್ ಅಥವಾ ಡಿವೈಸ್ನ್ನೇ ಗುರಿಯಾಗಿಟ್ಟುಕೊಂಡು ಮೋಸದ ಬಲೆಯನ್ನು ಬೀಸುತ್ತಾರೆ. ನಿಮ್ಮ ಸುತ್ತಲಿರುವ ಭದ್ರತಾ ಕೋಟೆಯನ್ನು ಭೇದಿಸಿ, ಮಾಹಿತಿ ಸೋರಿಸುತ್ತಾರೆ. ಹಾಗೆಯೇ ಅಶ್ಲೀಲ ರೀತಿಯಲ್ಲಿ ಸೇಡು ತೀರಿಸಿಕೊಳ್ಳುವುದು, ವ್ಯಕ್ತಿಯನ್ನು ಹಿಂಬಾಲಿಸುವುದು, ಕಿರುಕುಳ, ಬೆದರಿಕೆ ಮತ್ತು ಮಕ್ಕಳ ಮೇಲೆ ಲೈಂಗಿಕ ಶೋಷಣೆ ಸಹ ಈ ಅಪರಾಧ ಜಗತ್ತಿನ ಕರಾಳ ಮುಖಗಳು. ಮತ್ತಷ್ಟು ಕಂಗೆಡಿಸುವ ಸಂಗತಿಯೆಂದರೆ ಭಯೋತ್ಪಾದಕ ಚಟುವಟಿಕೆಗಳು ಇಲ್ಲಿ ಎಗ್ಗಿಲ್ಲದೆ ನಡೆಯುವುದು!
ಬಲೆಗೆ ಸಿಕ್ಕರೆ ಹೆದರದೆ ಎದುರಿಸಿ: ಸೈಬರ್ ಅಪರಾಧಕ್ಕೆ ನಾನು ಬಲಿಯಾಗಿದ್ದೇನೆ ಎಂದು ತಿಳಿದ ತಕ್ಷಣ ಸ್ಥಳೀಯ ಪೊಲೀಸರಿಗೆ, ಸೈಬರ್ ಅಪರಾಧ ವಿಭಾಗಕ್ಕೆ ತಿಳಿಸಬೇಕು. ಇದು ಸಣ್ಣ ಅಪರಾಧವಷ್ಟೇ ಎಂದುಕೊಂಡು ಸುಮ್ಮನಾಗಿಬಿಟ್ಟರೆ ಮುಂದಿನ ಅನಾಹುತಕ್ಕೆ ನೀವೇ ಜವಾಬ್ದಾರರಾಗುತ್ತೀರಿ. ನೀವು ನೀಡಿದ ಮಾಹಿತಿ ಮುಂದೆ ಸೈಬರ್ ಕ್ರಿಮಿನಲ್ಗಳ ಜಾಲಕ್ಕೆ ಇನ್ನಿತರರು ಸಿಲುಕದಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೈಬರ್ ಕ್ರೖೆಂನ ವಿರುದ್ದ ಹೋರಾಟ ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ವಂಚನೆಗೆ ಒಳಗಾದರೂ ಇಷ್ಟು ಸಣ್ಣ ಪುಟ್ಟದಕ್ಕೆ ತಲೆಕೆಡಿಸುವುದು ಏಕೆಂದು ಸುಮ್ಮನೆ ಕೂರದೆ ಸೈಬರ್ ಅಪರಾಧದ ವಿರುದ್ಧ ಹೋರಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಯಬೇಕು. ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸುವತ್ತ ಇದೊಂದು ಹೆಜ್ಜೆಯೂ ಹೌದು.